ಯುಕ್ತವಾದ ಧರ್ಮವನ್ನು ನೀವು ಕಂಡುಕೊಂಡಿರುವಿರೊ?
“ನಮ್ಮ ದೇವರ ಮತ್ತು ತಂದೆಯ ದೃಷ್ಟಿಯಲ್ಲಿ ಶುದ್ಧವೂ ಅಮಲಿನ್ಯವೂ ಆದ ಆರಾಧನಾ ರೂಪವು ಇದು.”—ಯಾಕೋಬ 1:27,
1, 2. (ಎ) ಅನೇಕ ಜನರ ಆಲೋಚನೆಯಲ್ಲಿ, ಅವರದ್ದು ಯುಕ್ತವಾದ ಧರ್ಮವೆಂದು ನಿರ್ಧರಿಸುವುದು ಯಾವುದು? (ಬಿ) ಧರ್ಮವನ್ನು ತೀರ್ಮಾನಿಸುವಲ್ಲಿ ಯಾವುದನ್ನು ಗಂಭೀರವಾಗಿ ಗಮನಿಸಲೇ ಬೇಕು?
ಅನೇಕ ಜನರು ಧರ್ಮಕ್ಕೆ ಅವರ ಜೀವಿತದ ಸಾಪೇಕ್ಷವಾಗಿ ಸಣ್ಣ ಭಾಗವನ್ನು ಕೊಡಲು ತೃಪ್ತರಾಗಿರುವ ಒಂದು ಯುಗದಲ್ಲಿ ನಾವು ಜೀವಿಸುತ್ತೇವೆ. ಅವರು ಕೆಲವು ಧಾರ್ಮಿಕ ಆರಾಧನೆಗಳಿಗೆ ಹಾಜರಾಗಬಹುದು, ಆದರೆ ಹಾಗೆ ಕ್ರಮವಾಗಿ ಮಾಡುವವರು ಕೊಂಚವೆ. ಹೆಚ್ಚಿನ ಜನರು ಎಲ್ಲ ಇತರ ಧರ್ಮಗಳು ತಪ್ಪಾದವುಗಳೆಂದು ಮತ್ತು ಅವರದ್ದು ಯುಕ್ತವೆಂದು ನಂಬುವುದಿಲ್ಲ. ತಮ್ಮ ಧರ್ಮವು ತಮಗಾಗಿ ಯುಕ್ತವೆಂದು ಅವರು ಸರಳವಾಗಿ ಭಾವಿಸಬಹುದು.
2 ಇದರ ನೋಟದಲ್ಲಿ, ಯುಕ್ತವಾದ ಧರ್ಮವನ್ನು ನೀವು ಕಂಡುಕೊಂಡಿರುವಿರೊ? ಎಂಬ ಪ್ರಶ್ನೆಯು ಕೇವಲ, ನಿಮಗೆ ಇಷ್ಟವಿರುವ ಒಂದು ಧರ್ಮವನ್ನು ನೀವು ಕಂಡುಕೊಂಡಿರುವಿರೊ ಎಂದಾಗಿ ಅರ್ಥೈಸುತ್ತದೊ? ನಿಮ್ಮ ಇಷ್ಟವನ್ನು ಯಾವುದು ನಿರ್ಧರಿಸುತ್ತದೆ? ನಿಮ್ಮ ಕುಟುಂಬವೊ? ನಿಮ್ಮ ಸಹವಾಸಿಗಳೊ? ನಿಮ್ಮ ಸ್ವಂತ ಭಾವನೆಗಳೊ? ವಿಷಯದ ಕುರಿತು ದೇವರ ನೋಟವನ್ನು ನೀವು ಎಷ್ಟು ಗಂಭೀರವಾಗಿ ಗಮನಿಸಿರುವಿರಿ?
ದೇವರ ದೃಷ್ಟಿಕೋನವನ್ನು ನಾವು ತಿಳಿಯುವುದು ಹೇಗೆ?
3. (ಎ) ನಾವು ದೇವರ ದೃಷ್ಟಿಕೋನವನ್ನು ತಿಳಿಯಬೇಕಾದಲ್ಲಿ, ನಮಗೆ ಏನು ಲಭ್ಯವಿರಬೇಕು? (ಬಿ) ಬೈಬಲು ದೇವರಿಂದ ಬಂದಿದೆಯೆಂದು ನಾವು ವೈಯಕ್ತಿಕವಾಗಿ ನಂಬುವುದೇಕೆಂಬ ವಿಷಯದಲ್ಲಿ ನಾವು ಯಾವ ಪ್ರಶ್ನೆಗಳನ್ನು ಕೇಳಬೇಕು?
3 ದೇವರು ತಾನೇ ಏನನ್ನು ಆಲೋಚಿಸುತ್ತಾನೆ ಎಂದು ನಾವು ತಿಳಿಯಬೇಕಾದಲ್ಲಿ, ಅವನಿಂದ ಯಾವುದಾದರೂ ಪ್ರಕಟನೆಯು ಇರಲೇಬೇಕು. ದೇವರಿಂದ ಪ್ರೇರಿತವೆಂದು ಹೇಳಿಕೊಳ್ಳುವ ಅತಿ ಪ್ರಾಚೀನ ಪುಸ್ತಕವು ಬೈಬಲ್ ಆಗಿದೆ. (2 ತಿಮೊಥೆಯ 3:16, 17) ಆದರೆ ಎಲ್ಲ ಇತರ ಪುಸ್ತಕಗಳಿಗೆ ವೈದೃಶ್ಯವಾಗಿ, ಈ ಪುಸ್ತಕವು ಎಲ್ಲ ಮಾನವಕುಲಕ್ಕಾಗಿ ದೇವರ ಸಂದೇಶವನ್ನು ಪಡೆದಿರುತ್ತದೆ ಎಂದು ಸತ್ಯವಾಗಿ ಹೇಳಬಹುದೊ? ಆ ಪ್ರಶ್ನೆಯನ್ನು ನೀವು ಹೇಗೆ ಉತ್ತರಿಸುವಿರಿ, ಮತ್ತು ಯಾಕೆ? ಅದು ನಿಮ್ಮ ಹೆತ್ತವರು ಆ ನೋಟವನ್ನು ಹೊಂದಿದ್ದರೆಂಬ ಕಾರಣದಿಂದಾಗಿಯೊ? ನಿಮ್ಮ ಸಹವಾಸಿಗಳ ಮನೋಭಾವದ ಕಾರಣದಿಂದಲೊ? ನೀವು ಸ್ವತಃ ರುಜುವಾತನ್ನು ಪರಿಶೀಲಿಸಿರುವಿರೊ? ಮುಂದಿನ ನಾಲ್ಕು ರುಜುವಾತುಗಳ ಸಾಲುಗಳನ್ನು ಬಳಸಿ ಈಗ ನೀವದನ್ನು ಯಾಕೆ ಮಾಡಬಾರದು?
4. ಲಭ್ಯತೆಯ ವಿಷಯದಲ್ಲಿ, ಇತರ ಯಾವುದೇ ಪುಸ್ತಕಕ್ಕಿಂತ ಬೈಬಲೇ ದೇವರಿಂದ ಬಂದಿದೆಯೆಂದು ಯಾವುದು ತೋರಿಸುತ್ತದೆ?
4 ದೊರೆಯುವಿಕೆ: ನಿಜವಾಗಿಯೂ ದೇವರಿಂದ, ಮತ್ತು ಇಡೀ ಮಾನವ ಕುಟುಂಬಕ್ಕಾಗಿ ಇರುವ ಸಂದೇಶವು ಅವರಿಗೆ ದೊರೆಯಬೇಕು. ಅದು ಬೈಬಲಿನ ವಿಷಯದಲ್ಲಿ ಸತ್ಯವೊ? ಇದನ್ನು ಗಮನಿಸಿ: ಪೂರ್ಣ ಬೈಬಲು ಯಾ ಅದರ ಕೆಲವಂಶ, 2000 ಕ್ಕಿಂತಲೂ ಹೆಚ್ಚು ಭಾಷೆಗಳಲ್ಲಿ ಈಗ ಪ್ರಕಾಶಿಸಲ್ಪಟ್ಟಿದೆ. ಅಮೆರಿಕನ್ ಬೈಬಲ್ ಸೊಸೈಟಿಗನುಸಾರ, ಒಂದು ದಶಕದಷ್ಟು ಹಿಂದೆ ಬೈಬಲ್ ಮುದ್ರಿತವಾಗಿರುವ ಭಾಷೆಗಳು ಅದನ್ನು ಲೋಕದ ಜನಸಂಖ್ಯೆಯ 98 ಸೇಕಡದಷ್ಟು ಜನಸಂಖ್ಯೆಗೆ ದೊರೆಯುವಂತೆ ಮಾಡಿದವು. ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಮೂಲಕ ತೋರಿಸಿರುವಂತೆ, ಬೈಬಲು ನಿಸ್ಸಂದಿಗ್ಧವಾಗಿ “ಲೋಕದ ಅತಿ ವಿಸ್ತಾರವಾಗಿ ವಿತರಿಸಲ್ಪಟ್ಟ ಪುಸ್ತಕ.” ಎಲ್ಲಾ ಕುಲಗಳ ಮತ್ತು ದೇಶಗಳ ಮತ್ತು ಭಾಷಾ ಗುಂಪುಗಳ ಜನರಿಗೋಸ್ಕರ ಉದ್ದೇಶಿಸಿರುವ ದೇವರಿಂದ ಬರುವ ಸಂದೇಶದ ಕುರಿತು ನಾವು ಇದನ್ನೇ ಬಯಸುವೆವು. (ಹೋಲಿಸಿ ಪ್ರಕಟನೆ 14:6.) ಅದರಂತೆ ದಾಖಲೆಯನ್ನು ಹೊಂದಿರುವ ಇತರ ಯಾವುದೇ ಪುಸ್ತಕವು ಲೋಕದಲ್ಲಿ ಇಲ್ಲ.
5. ಬೈಬಲಿನ ಐತಿಹಾಸಿಕ ಆಸ್ತಿವಾರವು ಗಮನಾರ್ಹವೇಕೆ?
5 ಐತಿಹಾಸಿಕತೆ: ಬೈಬಲಿನ ಕಥನಗಳ ಜಾಗರೂಕ ಪರಿಶೀಲನೆಯು ಪವಿತ್ರವೆಂದು ಹೇಳಿಕೊಳ್ಳುವ ಇತರ ಪುಸ್ತಕಗಳಿಂದ ಬೈಬಲು ಭಿನ್ನವಾಗಿರುವ ಇನ್ನೊಂದು ಮಾರ್ಗವನ್ನು ಬೆಳಕಿಗೆ ತರುತ್ತದೆ. ಬೈಬಲಿನಲ್ಲಿ ಐತಿಹಾಸಿಕ ನಿಜತ್ವಗಳಿವೆ, ರುಜುಪಡಿಸಲಾಗದ ಪುರಾಣ ಕಥೆಗಳಲ್ಲ. ವಕೀಲನಾಗಿ ನ್ಯಾಯ ಸಭೆಯಲ್ಲಿ ರುಜುವಾತಾಗಿ ಬೇಕಾಗಿರುವುದನ್ನು ವಿಶೇಷ್ಲಿಸುವಲ್ಲಿ ಪಳಗಿದ್ದ ಅರ್ವನ್ ಲಿಂಟನನು ಬರೆದದ್ದು: “ರಂಜನ ಕಾವ್ಯಗಳು, ಪುರಾಣ ಕಥೆಗಳು ಮತ್ತು ಸುಳ್ಳು ಸಾಕ್ಷಿಯು ವಿವರಿಸಿದ ಘಟನೆಗಳನ್ನು ಯಾವುದೋ ದೂರದ ಸ್ಥಳ ಮತ್ತು ಅನಿಶ್ಚಿತ ಕಾಲದಲ್ಲಿ ಹಾಕಲು ಜಾಗರೂಕವಾಗಿವೆ, . . . ಅತ್ಯಂತ ನಿಷ್ಕೃಷ್ಟತೆಯೊಂದಿಗೆ ವಿವರಿಸಲಾದ ವಿಷಯಗಳ ದಿನಾಂಕ ಮತ್ತು ಸ್ಥಳವನ್ನು ಬೈಬಲ್ ಕಥನಗಳು ನಮಗೆ ಕೊಡುತ್ತವೆ.” (ಉದಾಹರಣೆಗಳಿಗಾಗಿ, 1 ಅರಸುಗಳು 14:25; ಯೆಶಾಯ 36:1; ಲೂಕ 3:1, 2 ನೋಡಿರಿ.) ನಿಜತ್ವದಿಂದ ತಪ್ಪಿಸಿಕೊಳ್ಳಲು ಅಲ್ಲ ಬದಲಾಗಿ ಸತ್ಯಕ್ಕಾಗಿ ಧರ್ಮದ ಕಡೆಗೆ ತಿರುಗುವ ಜನರಿಗಾಗಿ, ಇದೊಂದು ಪ್ರಾಮುಖ್ಯ ಪರಿಗಣನೆಯಾಗಿದೆ.
6. (ಎ) ಜೀವಿತದ ಸಮಸ್ಯೆಗಳಲ್ಲಿ ವ್ಯಕ್ತಿಯೊಬ್ಬನಿಗೆ ಬೈಬಲು ನಿಜಕ್ಕೂ ಹೇಗೆ ಸಹಾಯ ಮಾಡುತ್ತದೆ? (ಬಿ) ಯಾವ ಮೂರು ವಿಧಾನಗಳಲ್ಲಿ ಬೈಬಲು ಒಬ್ಬ ವ್ಯಕ್ತಿಯನ್ನು ಜೀವಿತದ ಕಠಿನ ನಿಜತ್ವಗಳನ್ನು ನಿಭಾಯಿಸಲು ಸಹಾಯಿಸುತ್ತದೆ?
6 ಪ್ರಾಯೋಗಿಕತೆ: ಬೈಬಲನ್ನು ಗಂಭೀರವಾಗಿ ಪರಿಶೀಲಿಸುವವರು ಅದರ ಆಜ್ಞೆಗಳು ಮತ್ತು ಸೂತ್ರಗಳು, ಅವುಗಳನ್ನು ಸ್ವಪ್ರಯೇಜನಕ್ಕಾಗಿ ಉಪಯೋಗಿಸಿಕೊಳ್ಳಲು ರಚಿಸಿಲ್ಲವೆಂಬುದನ್ನು ಬೇಗನೆ ಅರಿಯುತ್ತಾರೆ. ಅದರ ಬದಲು, ಈ ಆಜ್ಞೆಗಳು ಮತ್ತು ಸೂತ್ರಗಳು ಅವುಗಳಿಗೆ ನಿಕಟವಾಗಿ ಅಂಟಿಕೊಳ್ಳುವವರಿಗೆ ಪ್ರಯೋಜನವನ್ನು ತರುವ ಜೀವನದ ಮಾರ್ಗವನ್ನು ರೇಖಿಸುತ್ತವೆ. (ಯೆಶಾಯ 48:17, 18) ಖಿನ್ನರಾಗಿರುವವರಿಗೆ ಅದು ನಿವೇದಿಸುವ ಆದರಣೆಯು, ಬರಿದಾದ ತತ್ವಜ್ಞಾನಗಳ ಮೇಲೆ ಆಧಾರಿಸಿರುವಂತೆ, ಟೊಳ್ಳಲ್ಲ. ಅದಕ್ಕಿಂತಲೂ, ಜನರನ್ನು ಅದು ಜೀವಿತದ ಕಠಿನ ನಿಜತ್ವಗಳೊಂದಿಗೆ ಸಹಕರಿಸಲು ಸಹಾಯಿಸುತ್ತದೆ. ಹೇಗೆ? ಮೂರು ವಿಧಾನಗಳಲ್ಲಿ: (1) ತೊಂದರೆಗಳೊಂದಿಗೆ ವ್ಯವಹರಿಸುವುದು ಹೇಗೆ ಎಂಬ ಸ್ವಸ್ಥ ಸಲಹೆಗಳನ್ನು ನೀಡುವುದರ ಮೂಲಕ, (2) ದೇವರು ತನ್ನ ಸೇವಕರಿಗೆ ಈಗ ಕೊಡುವ ಪ್ರೀತಿಯ ಬೆಂಬಲವನ್ನು ಹೇಗೆ ಪಡೆದುಕೊಳ್ಳುವುದೆಂದು ವಿವರಿಸುವುದರ ಮೂಲಕ, ಮತ್ತು (3) ತನ್ನನ್ನು ಸೇವಿಸುವವರಿಗೆ ದೇವರು ಇಟ್ಟಿರುವ ಅದ್ಭುತಕರವಾದ ಭವಿಷ್ಯತ್ತನ್ನು ಪ್ರಕಟಿಸುವ ಮೂಲಕ ಅವರಿಗೆ ಆತನ ವಾಗ್ದಾನಗಳಲ್ಲಿ ಭರವಸೆಗಾಗಿ ಸ್ವಸ್ಥವಾದ ಕಾರಣಗಳನ್ನು ಕೊಡುತ್ತದೆ.
7. (ಎ) ಪಾದಟಿಪ್ಪಣಿಯಲ್ಲಿ ಸೂಚಿಸಿರುವ ಶಾಸ್ತ್ರವಚನಗಳನ್ನು ಉಪಯೋಗಿಸಿ, ಇಂದು ಜನರಿಗೆ ಸಂಬಂಧಿಸಿದ ಮಹತ್ತಾದ ವಿವಾದಗಳಲ್ಲೊಂದಕ್ಕೆ ಬೈಬಲ್ ಉತ್ತರವನ್ನು ವಿವರಿಸಿರಿ. (ಬಿ) ಒತ್ತಡಪೂರ್ಣ ಪರಿಸ್ಥಿತಿಯಿಂದ ನಮ್ಮನ್ನು ಸಂರಕ್ಷಿಸಲು ಯಾ ಅದನ್ನು ನಿಭಾಯಿಸಲು ಬೈಬಲಿನ ಸಲಹೆಯು ನಮಗೆ ಸಹಾಯ ಮಾಡುವುದು ಹೇಗೆ ಎಂಬುದನ್ನು ತೋರಿಸಿರಿ.
7 ಅಧಿಕಾರವನ್ನು ತಿರಸ್ಕರಿಸಿ, ಲೋಲುಪತೆಯ ಜೀವನವನ್ನು ಬೆನ್ನಟ್ಟುವವರೊಳಗೆ ಬೈಬಲಿನ ಸಲಹೆಯು ವಾಡಿಕೆಯಲ್ಲಿ ಜನಪ್ರಿಯವಲ್ಲದಾಗಿರುವುದಾದರೂ, ಆ ರೀತಿಯ ಜೀವನವು ಅವರಿಗೆ ನಿಜ ಸಂತೋಷವನ್ನು ತಂದಿರುವುದಿಲ್ಲವೆಂದು ಅನೇಕರು ಅರಿತುಕೊಳ್ಳಲಾರಂಭಿಸಿದ್ದಾರೆ. (ಗಲಾತ್ಯ 6:7, 8) ಬೈಬಲು ಗರ್ಭಪಾತ, ವಿವಾಹ ವಿಚ್ಛೇದ, ಮತ್ತು ಸಲಿಂಗೀ ಕಾಮದ ಬಗ್ಗೆ ಪ್ರಶ್ನೆಗಳಿಗೆ ನೇರವಾದ ಉತ್ತರಗಳನ್ನು ಕೊಡುತ್ತದೆ. ಅಮಲೌಷಧ ಮತ್ತು ಮದ್ಯಪಾನದ ದುರುಪಯೋಗ ಮತ್ತು ಕಲುಷಿತ ರಕ್ತದಿಂದ ಯಾ ಲೈಂಗಿಕ ಸ್ವೇಚ್ಛಾಚಾರದಿಂದ ಏಯ್ಡ್ಸನ್ನು ಸಂಪಾದಿಸುವುದರ ವಿರುದ್ಧ ಅದರ ಸಲಹೆಯು ಸಂರಕ್ಷಣೆಯಾಗಿದೆ. ಸಂತೋಷದ ಕುಟುಂಬಗಳನ್ನು ಪಡೆದುಕೊಳ್ಳುವ ವಿಧಾನವನ್ನು ಅದು ತೋರಿಸುತ್ತದೆ. ಸಮೀಪ ಕುಟುಂಬ ಸದಸ್ಯರುಗಳಿಂದ ತಿರಸ್ಕೃತರಾಗುವುದು, ದುರಂತಮಯ ಅನಾರೋಗ್ಯ, ಮತ್ತು ಪ್ರಿಯರಾದವರೊಬ್ಬರ ಮರಣ ಇವುಗಳನ್ನು ಸೇರಿಸಿ, ಜೀವಿತದಲ್ಲಿ ಅತಿ ಒತ್ತಡಪೂರ್ಣ ಪರಿಸ್ಥಿತಿಗಳೊಂದಿಗೆ ಸಹಕರಿಸಲು ವ್ಯಕ್ತಿಗೆ ಸಾಧ್ಯವಾಗುವಂತೆ ಮಾಡುವ ಉತ್ತರಗಳನ್ನು ಅದು ಒದಗಿಸುತ್ತದೆ. ಪಶ್ಚಾತ್ತಾಪದ ಬದಲಿಗೆ ನಮ್ಮ ಜೀವಿತಗಳು ಅರ್ಥಭರಿತವಾಗುವಂತೆ ನಮ್ಮ ಆದ್ಯತೆಗಳನ್ನು ವಿವೇಚಿಸುವಂತೆ ಅದು ಸಹಾಯಿಸುತ್ತದೆ.a
8, 9. (ಎ) ಬೈಬಲು ಪ್ರೇರಿತವೆಂಬುದರ ರುಜುವಾತಾಗಿ ಯಾವ ಪ್ರವಾದನೆಯು ನಿಮಗೆ ವೈಯಕ್ತಿಕವಾಗಿ ಮನಸ್ಸಿಗೆ ಹಿಡಿಸುತ್ತದೆ? (ಬಿ) ಬೈಬಲಿನಲ್ಲಿನ ಪ್ರವಾದನೆಗಳು ತಮ್ಮ ಮೂಲದ ಸಂಬಂಧದಲ್ಲಿ ಏನನ್ನು ರುಜುಪಡಿಸುತ್ತವೆ?
8 ಪ್ರವಾದನೆ: ಬೈಬಲ್ ಪ್ರವಾದನೆಯ ಪುಸ್ತಕವಾಗಿ ಅದ್ವಿತೀಯವಾಗಿದೆ. ಅವುಗಳ ವಿವರಣೆಯನ್ನು ಕೊಡುತ್ತಾ ಭವಿಷ್ಯದಲ್ಲಿ ಸಂಭವಿಸುವುದನ್ನು ಹೇಳುವ ಪುಸ್ತಕವು ಅದಾಗಿದೆ. ಪ್ರಾಚೀನ ತೂರ್ ದೇಶದ ನಾಶನವನ್ನು, ಬಾಬೆಲಿನ ಪತನವನ್ನು, ಯೆರೂಸಲೇಮಿನ ಪುನರ್ಕಟ್ಟುವಿಕೆಯನ್ನು, ಮೇದ್ಯ ಪಾರಸಿಯ ಮತ್ತು ಗ್ರೀಸಿನ ಅರಸರ ಏಳುವಿಕೆ ಮತ್ತು ಬೀಳುವಿಕೆಯನ್ನು, ಮತ್ತು ಯೇಸು ಕ್ರಿಸ್ತನ ಜೀವಿತದಲ್ಲಿನ ಅನೇಕ ಘಟನೆಗಳನ್ನು ಅದು ಮುಂತಿಳಿಸಿತು. ಈ ಶತಮಾನದಲ್ಲಿ ವಿಕಸಿತವಾದ ಲೋಕ ಪರಿಸ್ಥಿತಿಗಳನ್ನು ಕೂಡ ಅದು ಮುಂತಿಳಿಸಿತು, ಮತ್ತು ಅವುಗಳ ಮಹತ್ವವನ್ನು ಅದು ವಿವರಿಸುತ್ತದೆ. ಮಾನವ ಪ್ರಭುಗಳನ್ನು ಜಜ್ಜುವ ಸಮಸ್ಯೆಗಳು ಬಗೆಹರಿಸಲ್ಪಡುವವೆಂದು ಅದು ತೋರಿಸುತ್ತದೆ, ಮತ್ತದು ಮಾನವಕುಲಕ್ಕೆ ಬಾಳುವ ಶಾಂತಿ ಮತ್ತು ನಿಜ ಭದ್ರತೆಯನ್ನು ತರುವ ಪ್ರಭುವನ್ನು ಗುರುತಿಸುತ್ತದೆ.b—ಯೆಶಾಯ 9:6, 7; 11:1-5, 9; 53:4-6.
9 ಗುರುತರವಾಗಿ, ದೇವತ್ವದ ಪರೀಕೆಯ್ಷಾಗಿ ಭವಿಷ್ಯವನ್ನು ನಿಷ್ಕೃಷ್ಟವಾಗಿ ಮುಂತಿಳಿಸುವ ಸಾಮರ್ಥ್ಯವನ್ನು ಬೈಬಲು ಕೊಡುತ್ತದೆ. (ಯೆಶಾಯ 41:1–46:13) ಅದನ್ನು ಮಾಡಶಕ್ತನು ಯಾ ಅದನ್ನು ಮಾಡಲು ಇತರರಿಗೆ ಪ್ರೇರಿಸಶಕ್ತನು ಕೇವಲ ಒಂದು ನಿರ್ಜೀವ ಮೂರ್ತಿಯಲ್ಲ. ಆತನು ಬರೀಯ ಧರ್ಮ ನಿಷ್ಠ ಮಾನವನಲ್ಲ. ಆತನು ಸತ್ಯ ದೇವರಾಗಿದ್ದಾನೆ, ಮತ್ತು ಅಂಥಾ ಪ್ರವಾದನೆಯನ್ನು ತುಂಬಿರುವ ಪುಸ್ತಕವು ಆತನ ವಾಕ್ಯವಾಗಿದೆ.—1 ಥೆಸಲೊನೀಕ 2:13.
ಬೈಬಲನ್ನು ಉಪಯೋಗಿಸುವವರೆಲ್ಲರು ಯುಕ್ತವಾದ ಧರ್ಮವನ್ನು ಬೋಧಿಸುತ್ತಿದ್ದಾರೊ?
10, 11. ಯೇಸುವು ತೋರಿಸಿದಂತೆ, ಒಬ್ಬ ವೈದಿಕನು ಬೈಬಲನ್ನು ಬಳಸಬಹುದಾದರೂ, ಅವನು ಸಮರ್ಥಿಸುವ ಧರ್ಮವನ್ನು ಅಯೋಗ್ಯವಾದದ್ದಾಗಿ ಯಾವುದು ಮಾಡೀತು?
10 ಹಾಗಾದರೆ ಬೈಬಲನ್ನು ಉಪಯೋಗಿಸುತ್ತಿದ್ದೇವೆಂದು ಹೇಳುವ ಸಕಲ ಧರ್ಮ ಗುಂಪುಗಳು ಸತ್ಯಧರ್ಮವನ್ನು ಬೋಧಿಸುತ್ತವೆಂದು ತೀರ್ಮಾನಿಸುವುದು ತರ್ಕಸಮ್ಮತವೊ—ಹೆಚ್ಚು ಪ್ರಾಮುಖ್ಯವಾಗಿ ಅದು ಶಾಸ್ತ್ರೀಯವೊ? ಬೈಬಲಿರುವ ಅಥವಾ ಅದರಿಂದ ಉದ್ಧರಿಸುವ ಪ್ರತಿಯೊಬ್ಬನೂ ಸತ್ಯಧರ್ಮವನ್ನು ಆಚರಿಸುತ್ತಿದ್ದಾನೊ?
11 ಅನೇಕ ವೈದಿಕರಲ್ಲಿ ಬೈಬಲ್ ಇರುವುದಾದರೂ, ಅವರು ಧರ್ಮವನ್ನು ತಮ್ಮನ್ನೇ ಮಹಿಮೆಪಡಿಸುವ ಸಾಧನವನ್ನಾಗಿ ಬಳಸುತ್ತಾರೆ. ಅವರು ಶುದ್ಧ ಸತ್ಯಗಳನ್ನು ಸಂಪ್ರದಾಯಗಳಿಂದ ಮತ್ತು ಮಾನವ ತತ್ವಜ್ಞಾನಗಳಿಂದ ಬೆರಸುತ್ತಾರೆ. ಅವರ ಆರಾಧನೆಯು ದೇವರಿಗೆ ಸ್ವೀಕರಣೀಯವೊ? ಅದನ್ನೇ ಮಾಡುತ್ತಿದ್ದ ಪ್ರಥಮ ಶತಮಾನದ ಯೆರೂಸಲೇಮಿನಲ್ಲಿನ ಧಾರ್ಮಿಕ ಮುಖಂಡರಿಗೆ, ಯೇಸು ಕ್ರಿಸ್ತನು ತಕ್ಕದ್ದಾಗಿಯೆ ಪ್ರವಾದಿ ಯೆಶಾಯನ ಮೂಲಕ ದೇವರ ಘೋಷಣೆಯನ್ನು ಅನ್ವಯಿಸಿ ಅಂದದ್ದು: “ಈ ಜನರು ಮಾತಿನಿಂದ ನನ್ನನ್ನು ಸನ್ಮಾನಿಸುತ್ತಾರೆ, ಆದರೆ ಅವರ ಮನಸ್ಸು ನನಗೆ ದೂರವಾಗಿದೆ. ಮನುಷ್ಯರು ಕಲ್ಪಿಸಿದ ಕಟ್ಟಳೆಗಳನ್ನೇ ಅವರು ಬೋಧಿಸುವದರಿಂದ ನನಗೆ ಭಕ್ತಿ ತೋರಿಸುವದು ವ್ಯರ್ಥ.” (ಮತ್ತಾಯ 15:8, 9; 23:5-10) ಸ್ಪಷ್ಟವಾಗಿಗಿ, ಆ ತರಹದ ಧರ್ಮವು ಸತ್ಯ ಧರ್ಮವಲ್ಲ.
12, 13. (ಎ) ಚರ್ಚು ಸದಸ್ಯರ ನಡತೆಯು ಅವರ ಧರ್ಮವು ಯುಕ್ತವಾದದ್ದೊ ಎಂದು ನಿರ್ಧರಿಸಲು ಒಬ್ಬ ವ್ಯಕ್ತಿಗೆ ಹೇಗೆ ಸಹಾಯಿಸಬಲ್ಲದು? (ಬಿ) ದೇವರು ತಿರಸ್ಕರಿಸುವವರನ್ನು ಸಹವಾಸಿಗಳಂತೆ ನಾವು ಆರಿಸುವಲ್ಲಿ ನಮ್ಮ ಆರಾಧನೆಯನ್ನು ಆತನು ಹೇಗೆ ವೀಕ್ಷಿಸುವನು? (2 ಪೂರ್ವಕಾಲವೃತ್ತಾಂತ 19:2)
12 ನಿರ್ದಿಷ್ಟ ಧರ್ಮಗಳ ಬೋಧನೆಗಳ ಮೂಲಕ ಉತ್ಪಾದಿಸಲಾದ, ಉತ್ತಮ ನಿಲುವುಳ್ಳ ಅವುಗಳ ಸದಸ್ಯರುಗಳ ಜೀವಿತದಲ್ಲಿ ಪ್ರದರ್ಶಿಸಲ್ಪಡುವ, ಫಲವು ಹುಳುಕಾಗಿರುವಲ್ಲಿ ಆಗೇನು? ತನ್ನ ಪರ್ವತ ಪ್ರಸಂಗದಲ್ಲಿ, ಯೇಸುವು ಎಚ್ಚರಿಸಿದ್ದು: “ಸುಳ್ಳು ಪ್ರವಾದಿಗಳ ವಿಷಯದಲ್ಲಿ ಎಚ್ಚರವಾಗಿರ್ರಿ . . . ಅವರ ಫಲಗಳಿಂದ ಅವರನ್ನು ತಿಳುಕೊಳ್ಳುವಿರಿ. . . . ಹಾಗೆಯೇ ಒಳ್ಳೇ ಮರಗಳೆಲ್ಲಾ ಒಳ್ಳೇ ಫಲವನ್ನು ಕೊಡುವವು; ಹುಳುಕು ಮರವು ಕೆಟ್ಟ ಫಲವನ್ನು ಕೊಡುವದು.” (ಮತ್ತಾಯ 7:15-17) ವ್ಯಕ್ತಿಗಳು ತಪ್ಪನ್ನು ಮಾಡಬಹುದು ಮತ್ತು ಕ್ರಮಪಡಿಸುವಿಕೆಯ ಅಗತ್ಯವಿದೆ ಎಂಬುದು ಸತ್ಯ. ಆದರೆ ಚರ್ಚಿನ ಸದಸ್ಯರು, ಮತ್ತು ವೈದಿಕರು ಕೂಡ, ಹಾದರ ಮತ್ತು ವ್ಯಭಿಚಾರ, ಹೋರಾಟ, ಕುಡಿಕತನ, ಲೋಭತ್ವ, ಸುಳ್ಳಾಡುವಿಕೆ, ಮಾಟಮಂತ್ರ, ವಿಗ್ರಹಾರಾಧನೆಯಲ್ಲಿ—ಇವುಗಳಲ್ಲಿ ಯಾವುದನ್ನೇ ಯಾ ಎಲ್ಲದರಲ್ಲಿ—ತೊಡಗುವಾಗ ಪರಿಸ್ಥಿತಿಯು ವಿಭಿನ್ನವಾಗಿದೆ, ಆದರೂ, ಶಿಕ್ಷೆಯು ಕೊಡಲ್ಪಡುವುದಿಲ್ಲ, ಮತ್ತು ಈ ಕಾರ್ಯಗತಿಯಲ್ಲಿ ಮುಂದುವರಿಯುವವರು ಸಭೆಯಿಂದ ಬಹಿಷ್ಕರಿಸಲ್ಪಡುವುದಿಲ್ಲ. ಅಂಥ ವಿಷಯಗಳನ್ನು ಆಚರಿಸುವವರನ್ನು ಸಭೆಯಿಂದ ಹೊರ ಹಾಕಬೇಕೆಂದು ಬೈಬಲು ಸ್ಪಷ್ಟವಾಗಿಗಿ ತಿಳಿಸುತ್ತದೆ; ದೇವರ ರಾಜ್ಯದಲ್ಲಿ ಅವರಿಗೆ ಯಾವುದೇ ಸ್ಥಾನವಿರುವುದಿಲ್ಲ. (ಗಲಾತ್ಯ 5:19-21) ಅವರ ಆರಾಧನೆಯು ದೇವರಿಗೆ ಮೆಚ್ಚಿಕೆಯದ್ದಾಗಿಲ್ಲ, ಮತ್ತು ಆತನು ತಿರಸ್ಕರಿಸುವವರನ್ನು ನಾವು ನಮ್ಮ ಸಹವಾಸಿಗಳನ್ನಾಗಿ ಆರಿಸುವಲ್ಲಿ ನಮ್ಮ ಆರಾಧನೆಯೂ ದೇವರಿಗೆ ಮೆಚ್ಚಿಕೆಯಾಗುವುದಿಲ್ಲ.—1 ಕೊರಿಂಥ 5:11-13; 6:9, 10; ಪ್ರಕಟನೆ 21:8.
13 ಬೈಬಲನ್ನು ಉಪಯೋಗಿಸುತ್ತೇವೆಂದು ಹೇಳಿಕೊಳ್ಳುವ ಎಲ್ಲ ಗುಂಪುಗಳು ಅದು ವಿವರಿಸುವ ಸತ್ಯ ಧರ್ಮವನ್ನು ಆಚರಿಸುವುದಿಲವ್ಲೆಂಬುದು ಸ್ಪಷ್ಟ. ಹಾಗಾದರೆ, ಸತ್ಯ ಧರ್ಮದ ಗುರುತಿಸುವ ಚಿಹ್ನೆಗಳಾಗಿ ಬೈಬಲು ಏನನ್ನು ಪ್ರತಿಪಾದಿಸುತ್ತದೆ?
ಸತ್ಯ ಧರ್ಮದ ಗುರುತಿಸುವ ಚಿಹ್ನೆಗಳು
14. (ಎ) ಸತ್ಯ ಧರ್ಮದ ಬೋಧನೆಗಳೆಲ್ಲವು ಯಾವುದರ ಮೇಲೆ ಆಧಾರಿಸಿವೆ? (ಬಿ) ದೇವರ ಮತ್ತು ಆತ್ಮದ ಕುರಿತ ಕ್ರೈಸ್ತಪ್ರಪಂಚದ ಬೋಧನೆಗಳು ಈ ಪರೀಕ್ಷೆಯ ಎದುರು ಹೇಗೆ ನಿಲ್ಲುತ್ತವೆ?
14 ಅದರ ಬೋಧನೆಗಳು ಪ್ರೇರಿತ ಶಾಸ್ತ್ರವಚನಗಳ ಮೇಲೆ ದೃಢವಾಗಿ ಆಧಾರಿಸಿವೆ. “ದೈವ ಪ್ರೇರಿತವಾದ ಪ್ರತಿಯೊಂದು ಶಾಸ್ತ್ರವು ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಶಿಕ್ಷೆಗೂ ಉಪಯುಕ್ತವಾಗಿದೆ.” (2 ತಿಮೊಥೆಯ 3:16) ಆದರೆ ಕ್ರೆಸ್ತ ಧರ್ಮದ ತ್ರಯೈಕ್ಯದ ಕುರಿತು ಪವಿತ್ರ ಬೈಬಲ್ ಎಲ್ಲಿ ಮಾತಾಡುತ್ತದೆ? ಮತ್ತು ಮಾನವರಿಗೆ ಶಾರೀರಿಕ ದೇಹದ ಮರಣವನ್ನು ಪಾರಾಗುವ ಆತ್ಮವೊಂದಿದೆ ಎಂದು ವೈದಿಕರು ಕಲಿಸುವಂತೆ, ಬೈಬಲು ಎಲ್ಲಿ ಕಲಿಸುತ್ತದೆ? ನಿಮ್ಮ ಬೈಬಲಿನಲ್ಲಿ ಆ ಬೋಧನೆಗಳನ್ನು ತೋರಿಸುವಂತೆ ನೀವೆಂದಾದರೂ ವೈದಿಕರನ್ನು ಕೇಳಿರುವಿರೊ? ದ ನ್ಯೂ ಎನ್ಸೈಕ್ಲೊಪೀಡಿಯ ಬ್ರಿಟ್ಯಾನಿಕ ಹೇಳುವುದು: “ತ್ರಯೈಕ್ಯ ಎಂಬ ಪದವಾಗಲಿ, ಸ್ಪಷ್ಟವಾಗಿದ ತತ್ವವಾಗಲಿ ಹೊಸ ಒಡಂಬಡಿಕೆಯಲ್ಲಿ ಕಂಡುಬರುವುದಿಲ್ಲ.” (1992, Micropædia, Volume II, page 928) ನ್ಯೂ ಕ್ಯಾತೊಲಿಕ್ ಎನ್ಸೈಕ್ಲೊಪೀಡಿಯ ಒಪ್ಪುವುದು: “ಅಪೊಸ್ತಲಿಕ ಪ್ರಮುಖರ ಮಧ್ಯೆ ಈ ಮಾನಸಿಕತೆ ಅಥವಾ ವೀಕ್ಷಣಕ್ಕೆ ಎಳ್ಳಷ್ಟೂ ಸಂಬಂಧವಿರುವ ಯಾವುದೂ ಕಂಡುಬಂದಿಲ್ಲ.” (1967, Volume XIV, page 299) ಮರಣದಲ್ಲಿ ಆತ್ಮವು ದೇಹದಿಂದ ಪ್ರತ್ಯೇಕವಾಗುವುದೆಂಬ ಕ್ರೈಸ್ತ ಪ್ರಪಂಚದ ಕಲ್ಪನೆಯ ವಿಷಯದಲ್ಲಿಯಾದರೊ, ಆ ವಿಚಾರವನ್ನು ಗ್ರೀಕ್ ತತ್ವಜ್ಞಾನದಿಂದ ಅವರು ಬಳಸಿಕೊಂಡರೆಂದು ಚರ್ಚ್ ಪಂಡಿತರು ಒಪ್ಪಿಕೊಳ್ಳುತ್ತಾರೆ. ಹಾಗಿದ್ದರೂ, ಸತ್ಯ ಧರ್ಮವು ಮಾನವ ತತ್ವಜ್ಞಾನಕ್ಕಾಗಿ ಬೈಬಲ್ ಸತ್ಯವನ್ನು ಬದಿಗೊತ್ತುವುದಿಲ್ಲ.—ಆದಿಕಾಂಡ 2:7; ಧರ್ಮೋಪದೇಶಕಾಂಡ 6:4; ಯೆಹೆಜ್ಕೇಲ 18:4; ಯೋಹಾನ 14:28.
15. (ಎ) ಆರಾಧಿಸಲ್ಪಡಬೇಕಾದ ಆ ಒಬ್ಬನನ್ನು ಬೈಬಲು ಹೇಗೆ ಗುರುತಿಸುತ್ತದೆ? (ಬಿ) ಯೆಹೋವನ ಸಮೀಪ ಸರಿಯುವುದರ ಕುರಿತು ಸತ್ಯಾರಾಧಕರಿಗೆ ಹೇಗನಿಸುತ್ತದೆ?
15 ಸತ್ಯ ಧರ್ಮವು ಒಬ್ಬನೇ ಸತ್ಯದೇವರಾದ ಯೆಹೋವನ ಆರಾಧನೆಯನ್ನು ಸಮರ್ಥಿಸುತ್ತದೆ. (ಧರ್ಮೋಪದೇಶಕಾಂಡ 4:35; ಯೋಹಾನ 17:3) ಧರ್ಮೋಪದೇಶಕಾಂಡ 5:9 ಮತ್ತು 6:13ನ್ನು ಸರಳಾನುವಾದ ಮಾಡುತ್ತಾ ಯೇಸು ಕ್ರಿಸ್ತನು ದೃಢವಾಗಿ ಹೇಳಿದ್ದು: “ನಿನ್ನ ದೇವರಾದ ಕರ್ತನಿಗೆ [ಯೆಹೋವನಿಗೆ, NW] ಅಡಬ್ಡಿದ್ದು ಆತನೊಬ್ಬನನ್ನೇ ಆರಾಧಿಸಬೇಕು.” (ಮತ್ತಾಯ 4:10) ಅದಕ್ಕೆ ಸುಸಂಗತವಾಗಿ, ಯೇಸುವು ತನ್ನ ತಂದೆಯ ಹೆಸರನ್ನು ತನ್ನ ಶಿಷ್ಯರಿಗೆ ತಿಳಿಯಪಡಿಸಿದನು. (ಯೋಹಾನ 17:26) ನಿಮ್ಮ ಧರ್ಮವು ಯೆಹೋವನನ್ನು ಆರಾಧಿಸಲು ನಿಮಗೆ ಕಲಿಸಿರುವುದೊ? ನೀವು ಆತನ ಬಳಿಗೆ ಭರವಸೆಯಿಂದ ಸರಿಯಬಲ್ಲಿರಿ ಎಂದು ನಿಮಗನ್ನಿಸುವಂತೆ, ಆ ಹೆಸರಿನ ಮೂಲಕ ಗುರುತಿಸಲ್ಪಡುವ ವ್ಯಕ್ತಿಯನ್ನು—ಆತನ ಉದ್ದೇಶಗಳನ್ನು, ಆತನ ಚಟುವಟಿಕೆಗಳನ್ನು, ಅತನ ಗುಣಗಳನ್ನು—ನೀವು ತಿಳಿದಿರುವಿರೊ? ನಿಮ್ಮ ಧರ್ಮವು ಸತ್ಯವಾಗಿರುವಲ್ಲಿ, ಉತ್ತರವು ಹೌದೆಂದಾಗಿರುವುದು.—ಲೂಕ 10:22; 1 ಯೋಹಾನ 5:14.
16. ಸತ್ಯ ಧರ್ಮವನ್ನು ಆಚರಿಸುವವರಿಗೆ ಕ್ರಿಸ್ತನಲ್ಲಿ ನಂಬಿಕೆ ಎಂಬುದರ ಅರ್ಥವೇನಾಗಿರುತ್ತದೆ?
16 ದೇವರು ಮೆಚ್ಚುವ ಆರಾಧನೆಯ ಒಂದು ಪ್ರಾಮುಖ್ಯ ಭಾಗವು ಆತನ ಮಗ, ಯೇಸು ಕ್ರಿಸ್ತನಲ್ಲಿ ನಂಬಿಕೆ. (ಯೋಹಾನ 3:36; ಅ. ಕೃತ್ಯಗಳು 4:12) ಅವನು ಜೀವಿಸಿದ್ದನು ಮತ್ತು ಅವನು ಪ್ರಮುಖನಾದ ಒಬ್ಬ ವ್ಯಕ್ತಿಯಾಗಿದ್ದನು ಎಂದು ಕೇವಲ ನಂಬುವುದೆಂದು ಇದರ ಅರ್ಥವಲ್ಲ. ಇದರಲ್ಲಿ ಯೇಸುವಿನ ಪರಿಪೂರ್ಣ ಮಾನವ ಜೀವದ ಯಜ್ಞದ ಮೌಲ್ಯದ ಕುರಿತು ಬೈಬಲು ಏನನ್ನು ಕಲಿಸುತ್ತದೊ ಅದನ್ನು ಗಣ್ಯಮಾಡುವುದೂ ಮತ್ತು ಸ್ವರ್ಗೀಯ ರಾಜನಾಗಿ ಇಂದಿನ ಅವನ ಸ್ಥಾನವನ್ನು ಒಪ್ಪಿಕೊಳ್ಳುವುದೂ ಒಳಗೂಡಿರುತ್ತದೆ. (ಕೀರ್ತನೆ 2:6-8; ಯೋಹಾನ 3:16; ಪ್ರಕಟನೆ 12:10) ಸತ್ಯ ಧರ್ಮವನ್ನು ಆಚರಿಸುತ್ತಿರುವವರೊಂದಿಗೆ ನೀವು ಸೇರಿರುತ್ತಿರುವಲ್ಲಿ, ಯೇಸುವಿಗೆ ವಿಧೇಯರಾಗಲು, ಅವನ ಮಾದರಿಯನ್ನು ಅನುಕರಿಸಲು, ಮತ್ತು ಅವನು ತನ್ನ ಶಿಷ್ಯರಿಗೆ ನೇಮಿಸಿದ ಕೆಲಸದಲ್ಲಿ ವೈಯಕ್ತಿಕವಾಗಿ ಮತ್ತು ಆಸಕ್ತಿಯಿಂದ ಭಾಗವಹಿಸಲು ಪ್ರತಿನಿತ್ಯದ ಜೀವಿತದಲ್ಲಿ ಅವರು ಶುದ್ಧಾಂತಕರಣದ ಪ್ರಯತ್ನವನ್ನು ಮಾಡುತ್ತಾರೆಂದು ನೀವು ಬಲ್ಲಿರಿ. (ಮತ್ತಾಯ 28:19, 20; ಯೋಹಾನ 15:14; 1 ಪೇತ್ರ 2:21) ನೀವು ಆರಾಧಿಸುವವರಲ್ಲಿ ಅದು ಸತ್ಯವಾಗಿಲ್ಲವಾದಲ್ಲಿ, ನೀವು ಬೇರೆ ಕಡೆ ನೋಡುವ ಅಗತ್ಯವಿದೆ.
17. ಸತ್ಯ ಆರಾಧಕರು ಲೋಕದಿಂದ ನಿಷ್ಕಳಂಕರಾಗಿರಲು ಯಾಕೆ ಜಾಗರೂಕರಾಗಿರುತ್ತಾರೆ, ಮತ್ತು ಅದರಲ್ಲಿ ಏನು ಒಳಗೊಂಡಿದೆ?
17 ಸತ್ಯ ಆರಾಧನೆಯು ರಾಜಕೀಯ ಮತ್ತು ಲೌಕಿಕ ಹೋರಾಟಗಳಲ್ಲಿ ಒಳಗೂಡುವುದರ ಮೂಲಕ ಕಳಂಕಿತವಾಗಿಲ್ಲ. (ಯಾಕೋಬ 1:27) ಯಾಕಿಲ್ಲ? ಯಾಕಂದರೆ ಯೇಸು ತನ್ನ ಶಿಷ್ಯರ ಕುರಿತು ಅಂದದ್ದು: “ನಾನು ಲೋಕದವನಲ್ಲದೆ ಇರುವ ಪ್ರಕಾರ ಇವರು ಲೋಕದವರಲ್ಲ.” (ಯೋಹಾನ 17:16) ಯೇಸುವು ರಾಜಕೀಯದಲ್ಲಿ ತಲೆ ಹಾಕಲಿಲ್ಲ, ಮತ್ತು ಐಹಿಕ ಶಸ್ತ್ರಗಳನ್ನವಲಂಬಿಸುವುದರಿಂದ ತನ್ನ ಹಿಂಬಾಲಕರನ್ನು ಆತನು ತಡೆದನು. (ಮತ್ತಾಯ 26:52) ದೇವರ ವಾಕ್ಯ ಹೇಳಿರುವುದನ್ನು ಹೃದಯಕ್ಕೆ ತೆಗೆದುಕೊಳ್ಳುವವರು, ‘ಇನ್ನು ಮುಂದೆ ಯುದ್ಧವನ್ನು ಕಲಿಯುವುದಿಲ್ಲ.’ (ಯೆಶಾಯ 2:2-4) ನೀವು ಹೆಸರಿಗೆ ಮಾತ್ರ ಸದಸ್ಯರಾಗಿರುವ ಯಾವುದೇ ಧರ್ಮವು ಕೂಡ ಆ ವಿವರಣೆಗೆ ಸರಿಬೀಳುವುದಿಲ್ಲವಾದಲ್ಲಿ, ಅದರೊಂದಿಗಿನ ಸಹವಾಸವನ್ನು ಮುರಿಯುವ ಸಮಯವು ಇದಾಗಿದೆ.—ಯಾಕೋಬ 4:4; ಪ್ರಕಟನೆ 18:4, 5.
18. (ಎ) ಸತ್ಯ ಧರ್ಮದ ಒಂದು ಪ್ರಮುಖ ಗುಣವು ಯಾವುದಾಗಿರುವುದೆಂದು ಯೋಹಾನ 13:35 ಗುರುತಿಸುತ್ತದೆ? (ಬಿ) ಯೋಹಾನ 13:35ಕ್ಕೆ ಒಪ್ಪುವ ಗುಂಪು ಯಾವುದೆಂದು ನಿರ್ಧರಿಸಲು ಯಾರಿಗಾದರೂ ನೀವು ಹೇಗೆ ಸಹಾಯ ಮಾಡೀರಿ?
18 ಸತ್ಯ ಧರ್ಮವು ನಿಸ್ವಾರ್ಥ ಪ್ರೀತಿಯನ್ನು ಬೋಧಿಸುತ್ತದೆ ಮತ್ತು ಆಚರಿಸುತ್ತದೆ. (ಯೋಹಾನ 13:35; 1 ಯೋಹಾನ 3:10-12) ಅಂಥ ಪ್ರೀತಿಯು ಕೇವಲ ಪ್ರಸಂಗಗಳಲ್ಲಿ ಮಾತಾಡುವುದಿಲ್ಲ. ಅದು ವಾಸ್ತವವಾಗಿ ಎಲ್ಲ ಕುಲ, ಎಲ್ಲ ಆರ್ಥಿಕ ಗುಂಪು, ಎಲ್ಲ ಭಾಷೆ, ಎಲ್ಲ ಜನಾಂಗಗಳ ಜನರನ್ನು ನಿಜ ಸಹೋದರತ್ವದಲ್ಲಿ ಒಟ್ಟಾಗಿ ಸೆಳೆಯುತ್ತದೆ. (ಪ್ರಕಟನೆ 7:9, 10) ಅದು ನಿಜ ಕ್ರೈಸ್ತರನ್ನು ಅವರ ಸುತ್ತಲಿನ ಲೋಕದಿಂದ ಪ್ರತ್ಯೇಕಿಸುತ್ತದೆ. ನೀವು ಈಗಾಗಲೆ ಹಾಗೆ ಮಾಡಿರದಿರುವಲ್ಲಿ, ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹದಲ್ಲಿನ ಕೂಟಗಳನ್ನು, ಹಾಗೂ ಅವರ ದೊಡ್ಡ ಅಧಿವೇಶನಗಳನ್ನು ಹಾಜರಾಗಿರಿ. ತಮ್ಮ ರಾಜ್ಯ ಸಭಾಗೃಹಗಳಲ್ಲೊಂದನ್ನು ಕಟ್ಟಲು ಅವರು ಒಟ್ಟಾಗಿ ಕೆಲಸ ಮಾಡುವಾಗ ಅವರನ್ನು ಗಮನಿಸಿರಿ. (ವಿಧವೆಯರನ್ನು ಸೇರಿಸಿ) ವೃದ್ಧರ ಮತ್ತು (ಕೇವಲ ಏಕ ಹೆತ್ತವರಿರುವ ಯಾ ಹೆತ್ತವರೇ ಇಲ್ಲದಿರುವ) ಯುವ ಜನರ ಕಡೆಗೆ ಅವರ ಮಾತು ಮತ್ತು ಚಟುವಟಿಕೆಗಳನ್ನು ವೀಕ್ಷಿಸಿರಿ. (ಯಾಕೋಬ 1:27) ನೀವೇನನ್ನು ವೀಕ್ಷಿಸುತ್ತೀರೊ ಅದನ್ನು ಯಾವುದೇ ಇತರ ಧರ್ಮದಲ್ಲಿ ನೀವು ನೋಡಿರುವದರೊಂದಿಗೆ ಹೋಲಿಸಿರಿ. ಅನಂತರ ನಿಮ್ಮನ್ನೇ ಕೇಳಿಕೊಳ್ಳಿರಿ, ‘ಸತ್ಯ ಧರ್ಮವನ್ನು ಯಾರು ಆಚರಿಸುತ್ತಾರೆ?’
19. (ಎ) ಮಾನವ ಕುಲದ ಸಮಸ್ಯೆಗಳಿಗೆ ಯಾವ ಪರಿಹಾರವನ್ನು ಸತ್ಯ ಧರ್ಮವು ಸಮರ್ಥಿಸುತ್ತದೆ? (ಬಿ) ಸತ್ಯ ಧರ್ಮವನ್ನು ಪಾಲಿಸುವ ಗುಂಪಿನ ಸದಸ್ಯರು ಏನನ್ನು ಮಾಡುತ್ತಿರುವವರಾಗಿರಬೇಕು?
19 ಸತ್ಯ ಧರ್ಮವು ಮಾನವಕುಲದ ಸಮಸ್ಯೆಗಳಿಗೆ ಬಾಳುವ ಪರಿಹಾರವಾಗಿ ದೇವರ ರಾಜ್ಯವನ್ನು ಸಮರ್ಥಿಸುತ್ತದೆ. (ದಾನಿಯೇಲ 2:44; 7:13, 14; 2 ಪೇತ್ರ 3:13; ಪ್ರಕಟನೆ 21:4, 5) ಕ್ರೈಸ್ತ ಪ್ರಪಂಚದ ಯಾವುದೇ ಚರ್ಚುಗಳು ಅದನ್ನು ಮಾಡುತ್ತವೆಯೊ? ದೇವರ ರಾಜ್ಯವನ್ನು ಮತ್ತು ಅದು ಏನನ್ನು ಪೂರೈಸುವುದೆಂದು ಯಾವ ಶಾಸ್ತ್ರವಚನಗಳು ತೋರಿಸುತ್ತವೆ ಎಂದು ಒಬ್ಬ ವೈದಿಕನು ವಿವರಿಸುವುದನ್ನು ನೀವು ಕೊನೆಯ ಸಲ ಕೇಳಿದ್ದು ಯಾವಾಗ? ನೀವು ಸೇರಿರುವ ಸಂಸ್ಥೆಯು ದೇವರ ರಾಜ್ಯದ ಕುರಿತು ಇತರರೊಂದಿಗೆ ಮಾತಾಡಲು ನಿಮ್ಮನ್ನು ಉತ್ತೇಜಿಸುತ್ತದೊ, ಮತ್ತು ಹಾಗೆ ಮಾಡುವಲ್ಲಿ, ಸದಸ್ಯತನವು ಇಡೀಯಾಗಿ ಅದನ್ನು ಮಾಡುವುದರಲ್ಲಿ ಭಾಗವಹಿಸುತ್ತದೊ? ಯೇಸುವು ಅಂಥಾ ಸಾಕ್ಷಿ ನೀಡುವಿಕೆಯನ್ನು ಮಾಡಿದನು; ಆವನ ಪ್ರಥಮ ಶಿಷ್ಯರು ಅದನ್ನು ಮಾಡಿದರು. ಈ ಚಟುವಟಿಕೆಯಲ್ಲಿ ಭಾಗವಹಿಸುವ ಸುಯೋಗವು ನಿಮ್ಮದೂ ಆಗಬಲ್ಲದು. ಇಂದು ಭೂಮಿಯಲ್ಲೆಲ್ಲಾ ಮಾಡಲ್ಪಡುತ್ತಿರುವ ಅತೀ ಪ್ರಾಮುಖ್ಯ ಕೆಲಸವು ಅದಾಗಿದೆ.—ಮತ್ತಾಯ 24:14.
20. ಯುಕ್ತವಾದ ಧರ್ಮವನ್ನು ಗುರುತಿಸುವುದಕ್ಕೆ ಕೂಡಿಸಿ, ನಾವೇನನ್ನು ಮಾಡಬೇಕು?
20 ಸಾವಿರಾರು ಧರ್ಮಗಳು ಇರುವುದಾದರೂ, ಸತ್ಯವಾದದ್ದನ್ನು ಗುರುತಿಸುವಲ್ಲಿ ಗೊಂದಲವನ್ನು ತೊಲಗಿಸಲು ಬೈಬಲು ಥಟ್ಟನೆ ಸಹಾಯಿಸುತ್ತದೆ. ಆದರೆ ಅದನ್ನು ಗುರುತಿಸುವುದಕ್ಕಿಂತ ಹೆಚ್ಚಿನದನ್ನು ನಾವು ಮಾಡುವ ಅಗತ್ಯವಿದೆ. ನಾವದನ್ನು ಆಚರಿಸುವುದು ಪ್ರಾಮುಖ್ಯವಾಗಿದೆ. ಇದು ಏನನ್ನು ಒಳಗೂಡಿಸುತ್ತದೆಂದು ನಮ್ಮ ಮುಂದಿನ ಲೇಖನದಲ್ಲಿ ಸವಿವರವಾಗಿ ಗಮನಿಸಲಾಗುವುದು.
[ಅಧ್ಯಯನ ಪ್ರಶ್ನೆಗಳು]
a ಗರ್ಭಪಾತ: ಅ. ಕೃತ್ಯಗಳು 17:28; ಕೀರ್ತನೆ 139:1, 16; ವಿಮೋಚನಕಾಂಡ 21:22, 23. ವಿವಾಹ ವಿಚ್ಛೇದ: ಮತ್ತಾಯ 19:8, 9; ರೋಮಾಪುರ 7:2, 3. ಸಲಿಂಗೀ ಕಾಮ: ರೋಮಾಪುರ 1:24-27; 1 ಕೊರಿಂಥ 6:9-11. ಅಮಲೌಷಧ ಮತ್ತು ಮದ್ಯಪಾನದ ದುರುಪಯೋಗ: 2 ಕೊರಿಂಥ 7:1; ಲೂಕ 10:25-27; ಜ್ಞಾನೋಕ್ತಿ 23:20, 21; ಗಲಾತ್ಯ 5:19-21. ರಕ್ತ ಮತ್ತು ಸ್ವೇಚ್ಛಾಚಾರ: ಅ. ಕೃತ್ಯಗಳು 15:28, 29; ಜ್ಞಾನೋಕ್ತಿ 5:15-23; ಯೆರೆಮೀಯ 5:7-9; ಕುಟುಂಬ: ಎಫೆಸ 5:22–6:4; ಕೊಲೊಸ್ಸೆ 3:18-21. ನಿರಾಕರಿಸಲ್ಪಡುವಿಕೆ: ಕೀರ್ತನೆ 27:10; ಮಲಾಕಿಯ 2:13-16; ರೋಮಾಪುರ 8:35-39. ಅನಾರೋಗ್ಯ: ಪ್ರಕಟನೆ 21:4, 5; 22:1, 2; ತೀತ 1:2; ಕೀರ್ತನೆ 23:1-4. ಮರಣ: ಯೆಶಾಯ 25:8; ಅ. ಕೃತ್ಯಗಳು 24:15. ಆದ್ಯತೆಗಳು: ಮತ್ತಾಯ 6:19-34; ಲೂಕ 12:16-21; 1 ತಿಮೊಥೆಯ 6:6-12.
b ಇಂಥ ಪ್ರವಾದನೆಗಳ ಮತ್ತು ಅವುಗಳ ನೆರವೇರಿಕೆಯ ಮಾದರಿಗಾಗಿ ಈ ಮುಂದಿನ (ಇಂಗ್ಲಿಷ್) ಪುಸ್ತಕಗಳಲ್ಲಿ ನೋಡಿರಿ: ಬೈಬಲು—ದೇವರ ವಾಕ್ಯವೊ ಅಥವಾ ಮನುಷ್ಯನದ್ದೊ?, 117-61 ಪುಟಗಳಲ್ಲಿ; ಮತ್ತು ಶಾಸ್ತ್ರವಚನಗಳಿಂದ ವಿವೇಚಿಸುವುದು, 60-2, 225-32, 234-40 ಪುಟಗಳಲ್ಲಿ. ಇವೆರಡೂ ವಾಚ್ ಟವರ್ ಬೈಬಲ್ ಆ್ಯಂಡ್ ಟ್ರಾಕ್ಟ್ ಸೊಸೈಟಿ ಆಫ್ ನ್ಯೂ ಯಾರ್ಕ್, ಇನ್ಕ್. ಮೂಲಕ ಪ್ರಕಾಶಿಸಲ್ಪಟ್ಟಿವೆ.
ನೀವು ಹೇಗೆ ಉತ್ತರಿಸುವಿರಿ?
▫ ಯುಕ್ತವಾದ ಧರ್ಮವನ್ನು ಗುರುತಿಸುವುದರಲ್ಲಿ, ಯಾರ ದೃಷ್ಟಿಕೋನವು ಪ್ರಾಮುಖ್ಯವಾಗಿದೆ?
▫ ಬೈಬಲು ದೇವರ ವಾಕ್ಯವೆಂದು ಯಾವ ನಾಲ್ಕು ಸಾಲುಗಳ ರುಜುವಾತು ತೋರಿಸುತ್ತದೆ?
▫ ಬೈಬಲನ್ನು ಉಪಯೋಗಿಸುವ ಎಲ್ಲಾ ಧರ್ಮಗಳು ದೇವರಿಗೆ ಸ್ವೀಕಾರಾರ್ಹವಾಗಿರುವುದಿಲ್ಲ ಯಾಕೆ?
ಯುಕ್ತವಾದ ಒಂದು ಧರ್ಮವನ್ನು ಗುರುತಿಸುವ ಆರು ಚಿಹ್ನೆಗಳಾವುವು?
[ಪುಟ 10 ರಲ್ಲಿರುವ ಚೌಕ]
ಯೆಹೋವನ ಸಾಕ್ಷಿಗಳು . . .
◆ಅವರ ಎಲ್ಲ ಬೋಧನೆಗಳನ್ನು ಬೈಬಲಿನ ಮೇಲೆ ಆಧಾರಿಸುತ್ತಾರೆ.
◆ಅವರು ಒಬ್ಬನೇ ಸತ್ಯ ದೇವರಾದ ಯೆಹೋವನನ್ನು ಆರಾಧಿಸುತ್ತಾರೆ.
◆ಯೇಸು ಕ್ರಿಸ್ತನಲ್ಲಿ ಅವರ ನಂಬಿಕೆಯ ಹೊಂದಿಕೆಯಲ್ಲಿ ಜೀವಿಸುತ್ತಾರೆ.
◆ರಾಜಕೀಯ ಮತ್ತು ಲೌಕಿಕ ಹೋರಾಟಗಳಲ್ಲಿ ಒಳಗೂಡಿರುವುದಿಲ್ಲ.
◆ಪ್ರತಿನಿತ್ಯದ ಜೀವಿತದಲ್ಲಿ ನಿಸ್ವಾರ್ಥ ಪ್ರೀತಿಯನ್ನು ಪ್ರದರ್ಶಿಸಲು ಬಯಸುತ್ತಾರೆ.
◆ಮಾನವಕುಲದ ಸಮಸ್ಯೆಗಳಿಗೆ ಬಾಳುವ ಪರಿಹಾರವಾಗಿ ದೇವರ ರಾಜ್ಯವನ್ನು ಸಮರ್ಥಿಸುತ್ತಾರೆ.
[ಪುಟ 9 ರಲ್ಲಿರುವ ಚಿತ್ರ]
ಬೈಬಲು—ಎಲ್ಲಾ ಮಾನವಕುಲಕ್ಕೆ ದೇವರ ಸಂದೇಶವು ಅದರಲ್ಲಿದೆ ಎಂದು ಯಾವುದು ತೋರಿಸುತ್ತದೆ?