ಯೆಹೂದಿ ಕ್ಯಾಲೆಂಡರ್ ಎಷ್ಟು ನಿಷ್ಕೃಷ್ಟವಾಗಿದೆ?
ಯೆಹೂದಿ ಕ್ಯಾಲೆಂಡರಿಗನುಸಾರ, 1993, ಸಪ್ಟಂಬರ 16ರ, ಗುರುವಾರವು ರಾಶ್ ಹಶನ್ಹ ಹಬ್ಬದ ದಿನವಾಗಿತ್ತು. ಸಂಪ್ರದಾಯಕ್ಕನುಸಾರವಾಗಿ ಕೊಂಬು, ಅಥವಾ ಟಗರು ಕೊಂಬಿನ ತುತೂರಿಯು ಆಗ ಹೊಸ ವರ್ಷದ ಆಗಮನವನ್ನು ಘೋಷಿಸಲಿಕ್ಕಾಗಿ ಊದಲ್ಪಡುತಿತ್ತು. ಆ ವರ್ಷವು 5754 (ಯೆಹೂದಿ ಕ್ಯಾಲೆಂಡರ್), ಮತ್ತು ಅದು 1993, ಸಪ್ಟಂಬರ 16 ರಿಂದ 1994, ಸಪ್ಟಂಬರ 5ರ ವರೆಗಿನ ವ್ಯಾಪ್ತಿಯನ್ನು ಹೊಂದಿತ್ತು.
ಕೂಡಲೇ, ಯೆಹೂದಿ ಕಾಲಗಣನೆ ಮತ್ತು ಈಗ ಸಾಮಾನ್ಯವಾಗಿ ಬಳಕೆಯಲ್ಲಿರುವ ಪಾಶ್ಚಾತ್ಯ, ಅಥವಾ ಗ್ರಿಗೋರಿಯನ್ ಕ್ಯಾಲೆಂಡರ್ನ ನಡುವೆ 3,760 ವರ್ಷಗಳ ಒಂದು ವ್ಯತ್ಯಾಸವಿದೆಯೆಂಬುದನ್ನು ನಾವು ಗಮನಿಸುತ್ತೇವೆ. ಈ ವ್ಯತ್ಯಾಸವು ಏಕೆ ಇದೆ? ಮತ್ತು ಯೆಹೂದಿ ಕ್ಯಾಲೆಂಡರ್ ಎಷ್ಟು ನಿಷ್ಕೃಷ್ಟವಾಗಿದೆ?
ಆರಂಭ ಬಿಂದುವನ್ನು ಸ್ಥಾಪಿಸುವುದು
ಕಾಲವನ್ನು ಎಣಿಸುವ ಯಾವುದೇ ವ್ಯವಸ್ಥೆಗೆ ಒಂದು ನಿರ್ದಿಷ್ಟವಾದ ಆರಂಭ ಅಥವಾ ನಿರ್ದೇಶ ಬಿಂದುವಿರಲೇಬೇಕು. ಉದಾಹರಣೆಗೆ, ಯೇಸು ಕ್ರಿಸ್ತನು ಜನಿಸಲ್ಪಟ್ಟಿದ್ದನೆಂದು ಭಾವಿಸಬಹುದಾದ ವರ್ಷದಿಂದ ಕ್ರೈಸ್ತ ಪ್ರಪಂಚವು ಕಾಲವನ್ನು ಎಣಿಕೆ ಮಾಡುತ್ತದೆ. ಅಂದಿನಿಂದ ತಾರೀಖುಗಳು ಕ್ರಿಸ್ತ ಶಕದಲ್ಲಿ ಹೇಳಲ್ಪಡುತ್ತವೆ. ಅನೇಕವೇಳೆ ಅವುಗಳು, “ಕರ್ತನ ವರುಷದಲ್ಲಿ” ಎಂಬರ್ಥವಿರುವ ಲ್ಯಾಟಿನ್ನ ಆನ್ನೊ ಡಾಮಿನೊ ದಿಂದ ಬಂದಿರುವ A.D. ಎಂಬ ಅಂಕನದಿಂದ ನಿರ್ದೇಶಿಸಲ್ಪಡುತ್ತವೆ. ಆ ಕಾಲಾವಧಿಯ ಹಿಂದಿನ ತಾರೀಖುಗಳು B.C., “ಕ್ರಿಸ್ತ ಪೂರ್ವ” ವನ್ನು ಗುರುತಿಸುತ್ತವೆ.a ತದ್ರೀತಿಯಲ್ಲಿ, ಐತಿಹ್ಯವಾದ ಪೀತ ಸಮ್ರಾಟ ಹ್ವಾಂಗ್-ಡೀಯ ಆಳಿಕೆಯ ಆರಂಭವಾದ ಕ್ರಿ.ಶ.ಪೂ. 2698 ರಿಂದ ಸಾಂಪ್ರದಾಯಿಕ ಚೀನೀಯರು ಕಾಲವನ್ನು ಗಣಿಸುತ್ತಾರೆ. ಹೀಗೆ, ಚೀನೀ ಚಾಂದ್ರಮಾನ ವರ್ಷವಾದ 4692ರ ಆರಂಭವನ್ನು, 1994ರ ಫೆಬ್ರವರಿ 10, ಗುರುತಿಸಿತು. ಹಾಗಾದರೆ, ಯೆಹೂದಿ ಕ್ಯಾಲೆಂಡರ್ನ ಕುರಿತೇನು?
ದ ಜೂಯಿಷ್ ಎನ್ಸೈಕ್ಲೊಪೀಡಿಯ ಹೇಳುವುದು: “ಯೆಹೂದ್ಯರಲ್ಲಿ ಒಂದು ಘಟನೆಯ ತಾರೀಖನ್ನು ದಾಖಲಿಸುವುದರ ಕುರಿತ ಪ್ರಚಲಿತ ಸಾಮಾನ್ಯ ವಿಧಾನವು, ಲೋಕದ ಸೃಷ್ಟಿಯಂದಿನಿಂದ ಸರಿದುಹೋಗಿರುವ ವರ್ಷಗಳ ಸಂಖ್ಯೆಯನ್ನು ಕ್ರಮವಾಗಿ ನಿರೂಪಿಸುವುದೇ ಆಗಿದೆ.” ಯೆಹೂದ್ಯರಲ್ಲಿ ಸೃಷ್ಟಿಯ ಶಕದೋಪಾದಿ ಸಾಮಾನ್ಯವಾಗಿ ಗ್ರಹಿಸಲ್ಪಟ್ಟಿರುವ ಈ ಪದ್ಧತಿಯು, ಸುಮಾರು ಸಾ.ಶ. ಒಂಬತ್ತನೆಯ ಶತಮಾನದಲ್ಲಿ ಸಾಮಾನ್ಯ ಉಪಯೋಗಕ್ಕೆ ಬಂತು. ಹೀಗೆ, ಯೆಹೂದಿ ಕ್ಯಾಲೆಂಡರಿನಲ್ಲಿರುವ ತಾರೀಖುಗಳಿಗೆ ಸಾಮಾನ್ಯವಾಗಿ A.M. ಎಂಬ ಅಂಕಿತವು ಮುಂಚೆ ಬರುತ್ತದೆ. ಅದು ಆನೋ ಮುಂಡೀಯ ಸಂಕೇತವಾಗಿದ್ದು, “ಲೋಕದ ಸೃಷ್ಟಿಯ ಆರಂಭದಿಂದ” ಎಂಬರ್ಥವಿರುವ, ಆಬ್ ಕ್ರಿಯಾಟ್ಯೋನ್ ಮುಂಡೀಯ ಸಂಕ್ಷಿಪ್ತ ರೂಪವಾಗಿದೆ. ಈ ಕಾಲಗಣನೆಯ ಪದ್ಧತಿಗನುಸಾರ, ಪ್ರಸ್ತುತ ವರ್ಷವು A.M. 5754 ಆಗಿರುವುದರಿಂದ, “ಲೋಕದ ಸೃಷ್ಟಿಯು” 5,753 ವರುಷಗಳ ಹಿಂದೆ ಸಂಭವಿಸಿತ್ತೆಂದು ಭಾವಿಸಲ್ಪಡುತ್ತದೆ. ಆ ಸಮಯವು ಹೇಗೆ ನಿರ್ಧರಿಸಲ್ಪಟ್ಟಿತೆಂಬುದನ್ನು ನಾವು ನೋಡೋಣ.
“ಸೃಷ್ಟಿಯ ಶಕ”
ಎನ್ಸೈಕ್ಲೊಪೀಡಿಯ ಜೂಡೇಯಿಕ (1971) ಈ ವಿವರಣೆಯನ್ನು ಒದಗಿಸುತ್ತದೆ: “ಅನೇಕ ರಬ್ಬಿಯ ಸಂಬಂಧಿತ ಗಣನೆಗಳಲ್ಲಿ ‘ಸೃಷ್ಟಿಯ ಶಕ’ವು, ಸಾ.ಶ.ಪೂ. 3762 ಮತ್ತು 3758ರ ನಡುವಿನ ವರ್ಷಗಳಲ್ಲಿ ಒಂದರ ಶರತ್ಕಾಲದಲ್ಲಿ ಆರಂಭವಾಯಿತು. ಹಾಗಿದ್ದರೂ, ‘ಸೃಷ್ಟಿಯ ಶಕ’ವು ಸಾ.ಶ.ಪೂ. 3761 ರಲ್ಲಿ (ನಿರ್ದಿಷ್ಟವಾಗಿ, ಆ ವರ್ಷದ ಅಕ್ಟೋಬರ 7 ರಂದು) ಆರಂಭವಾಯಿತೆಂದು ಅಂಗೀಕೃತವಾಯಿತು. ಆರಂಭದ ಬೈಬಲಿನ ತರುವಾಯದ ಯೆಹೂದಿ ಸಾಹಿತ್ಯದಲ್ಲಿ ಕಂಡುಬರುವ ಗಣನೆಗಳು ಮತ್ತು ಬೈಬಲಿನಲ್ಲಿ ವ್ಯಕ್ತಪಡಿಸಲ್ಪಟ್ಟಿರುವ ಕಾಲಗಣನ ಶಾಸ್ತ್ರದ ಅಂಶಗಳ ಕುರಿತಾದ ಕಾಲಗಣನ ಏರ್ಪಾಡುಗಳಲ್ಲಿ ಈ ಎಣಿಕೆಯು ಆಧಾರಗೊಂಡಿದೆ.”
“ಲೋಕದ ಸೃಷ್ಟಿ” ಯಿಂದ ಕಾಲಗಣನೆ ಮಾಡುವ ಪದ್ಧತಿಯು, ಬೈಬಲಿನ ದಾಖಲೆಯ ಕುರಿತಾದ ರಬ್ಬಿ ಸಂಬಂಧಿತ ಅರ್ಥವಿವರಣೆಯ ಮೇಲೆ ಅಗತ್ಯವಾಗಿ ಅವಲಂಬಿಸಿದೆ. ರಬ್ಬಿ ಸಂಬಂಧಿತ ಪಂಡಿತರು ಹಾಗೂ ಕ್ರೈಸ್ತ ಪ್ರಪಂಚದವರು, 24 ತಾಸುಗಳ ಅಕ್ಷರಶಃ ಆರು ದಿನಗಳಲ್ಲಿ ಲೋಕ ಮತ್ತು ಅದರಲ್ಲಿರುವುದೆಲ್ಲವೂ ಸೃಷ್ಟಿಸಲ್ಪಟ್ಟಿತೆಂಬ ತಮ್ಮ ನಂಬಿಕೆಯ ಕಾರಣದಿಂದ, ಲೋಕವು ಸೃಷ್ಟಿಸಲ್ಪಟ್ಟ ಅದೇ ವರ್ಷದಲ್ಲಿ ಪ್ರಥಮ ಮಾನವನಾದ ಆದಾಮನ ಸೃಷ್ಟಿಯು ಸಂಭವಿಸಿತೆಂದು ಊಹಿಸುತ್ತಾರೆ. ಆದಾಗ್ಯೂ, ಖಂಡಿತವಾಗಿಯೂ ಇದು ನಿಷ್ಕೃಷ್ಟವಾಗಿಲ್ಲ.
“ಆದಿಯಲ್ಲಿ ದೇವರು ಆಕಾಶವನ್ನೂ ಭೂಮಿಯನ್ನೂ ಉಂಟುಮಾಡಿದನು” ಎಂದು ಹೇಳುವ ಮೂಲಕ ಆದಿಕಾಂಡದ ಪ್ರಥಮ ಅಧ್ಯಾಯವು ಆರಂಭವಾಗುತ್ತದೆ. ಬಳಿಕ ಭೂಮಿಯನ್ನು “ಕ್ರಮವಿಲ್ಲದೆಯೂ ಬರಿದಾಗಿಯೂ” ಇದ್ದ ಸ್ಥಿತಿಯಿಂದ, ಮಾನವರಿಗಾಗಿ ಒಂದು ಯೋಗ್ಯವಾದ ನೆಲೆಯನ್ನಾಗಿ ಪರಿವರ್ತಿಸಲಿಕ್ಕಾಗಿ, ಆರು ಅನುಕ್ರಮಿಕ “ದಿನಗಳ”ಲ್ಲಿ ದೇವರು ಏನು ಮಾಡಿದನೆಂಬುದನ್ನು ಅದು ವಿವರಿಸಲು ಮುಂದುವರಿಯುತ್ತದೆ. (ಆದಿಕಾಂಡ 1:1, 2) ಈ ಎರಡು ಹಂತಗಳಲ್ಲಿ ಕೋಟಿಗಟ್ಟಲೆ ವರ್ಷಗಳು ಕಳೆದುಹೋಗಿದ್ದಿರಬಹುದು. ಇನ್ನೂ ಹೆಚ್ಚಾಗಿ, ಸೃಷ್ಟಿಕರ್ತನ ಚಟುವಟಿಕೆಗಳು ಅಂತಹ ಒಂದು ಮಿತಿಯಿಂದ ಪರಿಮಿತಿಗೊಳಪಟ್ಟಿವೆಯೋ ಎಂಬಂತೆ, ಸೃಷ್ಟಿಯ ದಿನಗಳು 24-ಗಂಟೆಯ ಕಾಲಾವಧಿಗಳಾಗಿರಲಿಲ್ಲ. ಸೃಷ್ಟಿಯ ಎಲ್ಲಾ ಕಾಲಾವಧಿಗಳನ್ನು ಒಂದು “ದಿನ” ದೋಪಾದಿ ಉಲ್ಲೇಖಿಸುವ ಆದಿಕಾಂಡ 2:4 ರಿಂದ ಸೂಚಿಸಲ್ಪಟ್ಟಂತೆ, ಈ ಸಂದರ್ಭದಲ್ಲಿ ಆ ಒಂದು “ದಿನ”ವು 24 ತಾಸುಗಳಿಗಿಂತಲೂ ದೀರ್ಘವಾಗಿರಸಾಧ್ಯವಿದೆ. ಪ್ರಥಮ ಸೃಷ್ಟಿಯ ದಿನ ಮತ್ತು ಆದಾಮನು ಸೃಷ್ಟಿ ಮಾಡಲ್ಪಟ್ಟ ಆರನೆಯ ದಿನದ ನಡುವೆ ಅನೇಕ ಸಾವಿರಗಟ್ಟಲೆ ವರ್ಷಗಳು ಗತಿಸಿದ್ದವು. ಭೌತಿಕ ಆಕಾಶ ಮತ್ತು ಭೂಮಿಯ ಸೃಷ್ಟಿಯಾದ ಅದೇ ಸಮಯದಿಂದ ಆದಾಮನ ಸೃಷ್ಟಿಯ ಕಾಲಗಣನೆ ಮಾಡುವುದು ಶಾಸ್ತ್ರಾಧಾರವುಳ್ಳದ್ದಾಗಲಿ ವೈಜ್ಞಾನಿಕವಾದದ್ದಾಗಲಿ ಆಗಿರುವುದಿಲ್ಲ. ಆದರೂ, “ಸೃಷ್ಟಿಯ ಶಕ”ವು ಸಾ.ಶ.ಪೂ. 3761 ರಲ್ಲಿ ಆರಂಭವಾಯಿತೆಂದು ಹೇಗೆ ನಿರ್ಧರಿಸಲ್ಪಟ್ಟಿತು?
ಕಾಲಗಣನಶಾಸ್ತ್ರಕ್ಕೆ ಆಧಾರ
ಅಸಂತೋಷಕರವಾಗಿಯೇ, ಪರಿಗಣನೆಯಲ್ಲಿದ್ದ ಗಣನೆಗಳ ಮೇಲೆ ಆಧಾರಿತವಾಗಿದ್ದ ಅಧಿಕಾಂಶ ಯೆಹೂದಿ ಸಾಹಿತ್ಯವು ಹಿಂದಿನಂತೆ ಅಸ್ತಿತ್ವದಲ್ಲಿಲ್ಲ. ಮೂಲತಃ ಸೇಡರ್ ‘ಆಲಾಮ್ (ಪ್ರಪಂಚದ ರೀತಿ) ಎಂದು ಕರೆಯಲ್ಪಟ್ಟ ಒಂದು ಕಾಲಗಣನಾ ಶಾಸ್ತ್ರದ ಕೃತಿಯು ಉಳಿದಿದೆ. ಅದು ಸಾ.ಶ. ಎರಡನೆಯ ಶತಮಾನದ ಯೆಹೂದ್ಯರ ಧರ್ಮಶಾಸ್ತ್ರದ ಪಂಡಿತನಾದ ಯಾಸೆ ಬೆನ್ ಹಾಲಾಫನ್ಟಿಗೆ ಸೇರಿದ್ದೆನ್ನಲಾಗಿದೆ. ಈ ಕೃತಿಯು (ಸೇಡರ್ ‘ಆಲಾಮ್ ಜೂಟ ಎಂಬ ಶಿರೋನಾಮವುಳ್ಳ ಮಧ್ಯ ಯುಗದ ಒಂದು ವೃತ್ತಾಂತದಿಂದ ಇದನ್ನು ಪ್ರತ್ಯೇಕಿಸಲಿಕ್ಕಾಗಿ ತದನಂತರ ಇದು ಸೇಡರ್ ‘ಆಲಾಮ್ ರಾಬಾ ಎಂದು ಕರೆಯಲ್ಪಟ್ಟಿತು), ಆದಾಮನಿಂದ ಹಿಡಿದು ಸಾ.ಶ. ಎರಡನೆಯ ಶತಮಾನದ—ಸುಳ್ಳು ಮೆಸ್ಸೀಯನಾದ ಬಾರ್-ಕಾಕ್ಬಾನ ಕೆಳಗೆ ರೋಮ್ನ ವಿರುದ್ಧ ಯೆಹೂದಿ ದಂಗೆ—ವರೆಗಿನ ಒಂದು ಕಾಲಗಣನ ಶಾಸ್ತ್ರದ ಇತಿಹಾಸವನ್ನು ಒದಗಿಸುತ್ತದೆ. ಅಂತಹ ಸಮಾಚಾರವನ್ನು ಬರಹಗಾರನು ಹೇಗೆ ಅರ್ಜಿಸಿಕೊಂಡನು?
ಯಾಸೆ ಬೆನ್ ಹಾಲಾಫನ್ಟು ಬೈಬಲಿನ ವೃತ್ತಾಂತವನ್ನು ಅನುಸರಿಸಲು ಪ್ರಯತ್ನಿಸಿದರೂ, ಒಳಗೊಂಡಿರುವ ತಾರೀಖುಗಳ ಸಂಬಂಧದಲ್ಲಿ ಗ್ರಂಥಪಾಠವು ಅಸ್ಪಷ್ಟವಾಗಿಗಿದ್ದಾಗ ಅವನು ತನ್ನ ಸ್ವಂತ ಅರ್ಥವಿವರಣೆಗಳನ್ನು ಕೂಡಿಸಿದನು. “ಅನೇಕ ಸಂದರ್ಭಗಳಲ್ಲಿ, ಮುಂಚಿನ ರಬ್ಬಿಗಳ ಮತ್ತು ಅವನ ಸಮಕಾಲೀನರ ಹೇಳಿಕೆಗಳು ಮತ್ತು ಹಾಲಾಕಾಟ್ [ಸಂಪ್ರದಾಯಗಳು]ನ ಜೊತೆಗೆ, ಸಂಪ್ರದಾಯಕ್ಕನುಸಾರವಾಗಿ ಅವನು ತಾರೀಖುಗಳನ್ನು ಗೊತ್ತುಮಾಡಿದನು, ಮತ್ತು ಒಳಸೇರಿಸಿದನು,” ಎಂದು ಜೂಯಿಷ್ ಎನ್ಸೈಕ್ಲೊಪೀಡಿಯ ಹೇಳುತ್ತದೆ. ದ ಬುಕ್ ಆಫ್ ಜೂಯಿಷ್ ನಾಲೆಡ್ಜ್ ಪ್ರತಿಪಾದಿಸುವುದು: “ಅವನು ಸೃಷ್ಟಿಯ ಶಕದಿಂದ ಎಣಿಕೆಮಾಡಿದ್ದಾನೆ ಮತ್ತು, ಸಂದರ್ಭಕ್ಕೆ ಅನುಸಾರವಾಗಿ, ಪ್ರಥಮ ಮಾನವನಾದ ಆದಾಮನಿಂದ, ಮಹಾ ಅಲೆಕ್ಸಾಂಡರನ ವರೆಗೆ ಸಂಭವಿಸಿರಬೇಕೆಂದು ಎಣಿಸಲ್ಪಟ್ಟಿರುವ ಅನೇಕ ಯೆಹೂದಿ ಘಟನೆಗಳಿಗೆ ಸ್ಥಾಪಿತ ಪುರಾವೆಗಳಿಲ್ಲದ ತಾರೀಖುಗಳನ್ನು ಸೇರಿಸಿದ್ದಾನೆ.” ಆದರೆ ಯೆಹೂದಿ ಕಾಲಗಣನ ಶಾಸ್ತ್ರದ ನಿಷ್ಕೃಷ್ಟತೆ ಮತ್ತು ವಿಶ್ವಾಸಾರ್ಹತೆಯ ಮೇಲೆ ಅಂತಹ ಅರ್ಥವಿವರಣೆಗಳು ಮತ್ತು ಜೋಡಣೆಗಳು ಹೇಗೆ ಪರಿಣಾಮವನ್ನು ಬೀರಿದವು? ನೋಡೋಣ.
ಸಂಪ್ರದಾಯಗಳು ಮತ್ತು ಅರ್ಥವಿವರಣೆಗಳು
ರಬ್ಬಿ ಸಂಬಂಧಿತ ಸಂಪ್ರದಾಯಕ್ಕನುಗುಣವಾಗಿ, ಯೆರೂಸಲೇಮಿನ ಎರಡನೆಯ ದೇವಾಲಯವು ಒಟ್ಟು 420 ವರುಷಗಳ ಕಾಲ ಉಳಿಯಿತೆಂದು ಯಾಸೆ ಬೆನ್ ಹಾಲಾಫನ್ಟು ನಿಷ್ಕರ್ಷಿಸಿದನು. ದಾನಿಯೇಲ ಪ್ರವಾದನೆಯ “ಎಪ್ಪತ್ತು ವಾರಗಳು” ಅಥವಾ 490 ವರ್ಷಗಳ ಕುರಿತ ರಬ್ಬಿ ಸಂಬಂಧಿತ ಅರ್ಥವಿವರಣೆಯ ಮೇಲೆ ಇದು ಆಧಾರಿಸಿತ್ತು. (ದಾನಿಯೇಲ 9:24) ಪ್ರಥಮ ದೇವಾಲಯದ ನಾಶನ ಮತ್ತು ಎರಡನೆಯ ದೇವಾಲಯದ ಹಾಳುಗೆಡಹುವಿಕೆಯ ನಡುವಣ ಕಾಲಕ್ಕೆ ಈ ಕಾಲಾವಧಿಯು ಅನ್ವಯಿಸಲ್ಪಟ್ಟಿತು. ಬಾಬೆಲಿನ ದೇಶಭ್ರಷ್ಟತೆಗಾಗಿ 70 ವರ್ಷಗಳನ್ನು ಅನುಮತಿಸುತ್ತಾ, ಎರಡನೆಯ ದೇವಾಲಯವು 420 ವರ್ಷಗಳ ಕಾಲ ಉಳಿಯಿತೆಂದು ಯಾಸೆ ಬೆನ್ ಹಾಲಾಫ್ಟ ನಿರ್ಧರಿಸಿದನು.
ಆದಾಗ್ಯೂ, ಈ ಅರ್ಥವಿವರಣೆಯು, ಒಂದು ಗಂಭೀರವಾದ ಸಮಸ್ಯೆಗೆ ಗುರಿಯಾಗುತ್ತದೆ. ಬಾಬೆಲಿನ ಪತನದ ವರ್ಷ (ಸಾ.ಶ.ಪೂ. 539) ಮತ್ತು ಎರಡನೆಯ ದೇವಾಲಯದ ವಿನಾಶದ ವರ್ಷ (ಸಾ.ಶ. 70) ಎರಡೂ ಪ್ರಸಿದ್ಧ ಐತಿಹಾಸಿಕ ತಾರೀಖುಗಳಾಗಿವೆ. ಆದುದರಿಂದ, ಎರಡನೆಯ ದೇವಾಲಯದ ಕಾಲಾವಧಿಯು 420 ವರ್ಷಗಳಿಗೆ ಬದಲಾಗಿ 606 ವರ್ಷಗಳಾಗಿರಬೇಕು. ಈ ಕಾಲಾವಧಿಗೆ ಕೇವಲ 420 ವರ್ಷಗಳನ್ನು ನಿಷ್ಕರ್ಷಿಸುವ ಮೂಲಕ, ಯೆಹೂದಿ ಕಾಲಗಣನಾ ಶಾಸ್ತ್ರವು 186 ವರ್ಷಗಳನ್ನು ಲೆಕ್ಕಿಸಲು ತಪ್ಪಿದೆ.
ದಾನಿಯೇಲ ಪ್ರವಾದನೆಯು, ಯೆರೂಸಲೇಮಿನಲ್ಲಿ ದೇವಾಲಯವು ಎಷ್ಟು ದೀರ್ಘಕಾಲದ ವರೆಗೆ ಸ್ಥಿರವಾಗಿ ನಿಲ್ಲುತ್ತದೆ ಎಂಬುದರ ಕುರಿತಾಗಿಲ್ಲ. ಬದಲಾಗಿ, ಮೆಸ್ಸೀಯನು ಬರಬಹುದಾದ ಕಾಲವನ್ನು ಅದು ಮುಂತಿಳಿಸಿತು. “ಯೆರೂಸಲೇಮು ಜೀರ್ಣೋದ್ಧಾರವಾಗಿ ಕಟ್ಟಲ್ಪಡಲಿ ಎಂಬ ದೈವೋಕ್ತಿಯು ಹೊರಡುವಂದಿನಿಂದ ಅಭಿಷಿಕ್ತನಾದ ಪ್ರಭುವು ಬರುವದರೊಳಗೆ ಏಳು ವಾರಗಳು ಕಳೆಯಬೇಕು! ಅದು ಪುನಃ ಕಟ್ಟಲ್ಪಟ್ಟು ಅರುವತ್ತೆರಡು ವಾರ ಇರುವದು,” ಎಂಬುದಾಗಿ ಪ್ರವಾದನೆಯು ಸ್ಪಷ್ಟವಾಗಿಗಿ ಸೂಚಿಸುತ್ತದೆ. (ದಾನಿಯೇಲ 9:25, 26) ದೇಶಭ್ರಷ್ಟತೆಯಿಂದ ಯೆಹೂದ್ಯರ ಹಿಂದಿರುಗುವಿಕೆಯ ಎರಡನೆಯ ವರ್ಷದಲ್ಲಿ (ಸಾ.ಶ.ಪೂ. 536) ದೇವಾಲಯದ ಅಸ್ತಿವಾರವು ಹಾಕಲ್ಪಟ್ಟಿದ್ದಾಗ್ಯೂ, “ಅರಸನಾದ ಅರ್ತಷಸ್ತನ ಇಪ್ಪತ್ತನೆಯ ವರುಷ”ದ ವರೆಗೆ ಯೆರೂಸಲೇಮ್ ಪಟ್ಟಣವನ್ನು ಪುನಃಸ್ಥಾಪಿಸುವ “ದೈವೋಕ್ತಿ”ಯು ಹೊರಡಲಿಲ್ಲ. (ನೆಹೆಮೀಯ 2:1-8) ನಿಷ್ಕೃಷ್ಟವಾದ ಐಹಿಕ ಇತಿಹಾಸವು ಆ ವರ್ಷವನ್ನು ಸಾ.ಶ.ಪೂ. 455 ಎಂದು ಸ್ಥಿರಪಡಿಸುತ್ತದೆ. ಮುಂದಕ್ಕೆ 69 “ವಾರಗಳ”ನ್ನು ಅಥವಾ 483 ವರ್ಷಗಳನ್ನು ಲೆಕ್ಕಿಸುವಾಗ, ಅದು ನಮ್ಮನ್ನು ಸಾ.ಶ. 29ಕ್ಕೆ ತರುತ್ತದೆ. ಮೆಸ್ಸೀಯನ ಗೋಚರಿಸುವಿಕೆಯ—ಯೇಸುವಿನ ದೀಕ್ಷಾಸ್ನಾನದ—ಸಮಯವು ಅದೇ.b
ಯೆಹೂದಿ ಕಾಲಗಣನ ಶಾಸ್ತ್ರದಲ್ಲಿ ಅಧಿಕ ಅಸಾಂಗತ್ಯದಲ್ಲಿ ಫಲಿಸಿರುವ ರಬ್ಬಿ ಸಂಬಂಧಿತ ಅರ್ಥವಿವರಣೆಯಲ್ಲಿ ಇನ್ನೊಂದು ಅಂಶವು, ಅಬ್ರಹಾಮನ ಜನನದ ಸಮಯಕ್ಕೆ ಅನ್ವಯಿಸುತ್ತದೆ. ಆದಿಕಾಂಡ 11:10-26 ರಲ್ಲಿ ದಾಖಲಿಸಲ್ಪಟ್ಟಿರುವ ಅನುಕ್ರಮಿಕ ಸಂತತಿಗಳ ವರ್ಷಗಳನ್ನು ರಬ್ಬಿಗಳು ಕೂಡಿಸಿದ್ದಾರೆ ಮತ್ತು ಜಲಪ್ರಳಯದಿಂದ ಅಬ್ರಹಾಮನ (ಅಬ್ರಾಮ) ಜನನದ ವರೆಗಿನ ಕಾಲಾವಧಿಯು 292 ವರ್ಷಗಳೆಂದು ಸೂಚಿಸಿದ್ದಾರೆ. ಆದಾಗ್ಯೂ ವಚನ 26ರ ಕುರಿತಾದ ರಬ್ಬಿ ಸಂಬಂಧಿತ ಅರ್ಥವಿವರಣೆಯಲ್ಲಿ ಸಮಸ್ಯೆಯು ಅಡಕವಾಗಿದೆ, ಅದನ್ನುವುದು: “ತೆರಹನು ಎಪ್ಪತ್ತು ವರುಷದವನಾಗಿ ಅಬ್ರಾಮ, ನಾಹೋರ, ಹಾರಾನ ಎಂಬ ಮಕ್ಕಳನ್ನು ಪಡೆದನು.” ಇದರಿಂದಾಗಿ, ಅಬ್ರಾಮನು ಹುಟ್ಟಿದಾಗ ತೆರಹನು 70 ವರುಷದವನಾಗಿದ್ದನೆಂದು ಯೆಹೂದಿ ಸಂಪ್ರದಾಯವು ಊಹಿಸುತ್ತದೆ. ಆದರೆ, 70ರ ಪ್ರಾಯದಲ್ಲಿ ತೆರಹನು ಅಬ್ರಹಾಮನ ತಂದೆಯಾದನು ಎಂದು ವಚನವು ನಿರ್ದಿಷ್ಟವಾಗಿ ಹೇಳುವುದಿಲ್ಲ. ಬದಲಾಗಿ, ಅದು ಕೇವಲ ಅವನು 70 ವರುಷದವನಾಗಿದ್ದಾಗ ಮೂರು ಗಂಡು ಮಕ್ಕಳ ತಂದೆಯಾದನೆಂದು ಹೇಳುತ್ತದೆ.
ಅಬ್ರಹಾಮನು ಹುಟ್ಟಿದಾಗ ತೆರಹನ ಸರಿಯಾದ ಪ್ರಾಯವನ್ನು ಕಂಡುಹಿಡಿಯಲು, ನಾವು ಬೈಬಲ್ ಕಥನವನ್ನು ಓದುವುದರ ಅಗತ್ಯವಿದೆ. ತೆರಹನು 205 ವರುಷದವನಾಗಿ ಮರಣಹೊಂದಿದ ಬಳಿಕ, ಅಬ್ರಹಾಮನು ಮತ್ತು ಅವನ ಕುಟುಂಬವು ಯೆಹೋವನ ಅಪ್ಪಣೆಯ ಮೇರೆಗೆ ಖಾರಾನ್ ಪಟ್ಟಣವನ್ನು ಬಿಟ್ಟಿತೆಂದು, ಆದಿಕಾಂಡ 11:32–12:4, ರಿಂದ ನಾವು ಕಲಿಯುತ್ತೇವೆ. ಆ ಸಮಯದಲ್ಲಿ ಅಬ್ರಹಾಮನು 75 ವರ್ಷ ಪ್ರಾಯದವನಾಗಿದ್ದನು. ಆದುದರಿಂದ, ತೆರಹನು 70 ವರುಷದವನಿದ್ದಾಗ ಅಲ್ಲ, ಬದಲಾಗಿ 130 ವರುಷದವನಾಗಿದ್ದಾಗ ಅಬ್ರಹಾಮನು ಹುಟ್ಟಿರಬೇಕು. ಹೀಗೆ, ಜಲಪ್ರಳಯದಿಂದ ಅಬ್ರಹಾಮನ ಜನನದ ನಡುವಿನ ಕಾಲಾವಧಿಯು 292 ವರ್ಷಗಳಿಗೆ ಬದಲಾಗಿ 352 ವರ್ಷಗಳಾಗಿದ್ದವು. ಇಲ್ಲಿ ಯೆಹೂದಿ ಕಾಲಗಣನಾ ಶಾಸ್ತ್ರವು 60 ವರ್ಷ ತಪ್ಪಿದೆ.
ಒಂದು ಧಾರ್ಮಿಕ ಪ್ರಾಚೀನಾವಶೇಷ
ಸೇಡರ್ ‘ಆಲಾಮ್ ರಾಬಾ ದಲ್ಲಿರುವ ಅಂತಹ ದೋಷಗಳು ಮತ್ತು ಅಸಾಂಗತ್ಯಗಳು ಮತ್ತು ಇನ್ನಿತರ ಯೆಹೂದ್ಯರ ಧರ್ಮಶಾಸ್ತ್ರದ ಕಾಲಗಣನ ಶಾಸ್ತ್ರದ ಕೃತಿಗಳು, ಯೆಹೂದಿ ಪಂಡಿತರ ನಡುವೆ ಅಧಿಕ ಪೇಚಾಟವನ್ನು ಮತ್ತು ಪರಿಗಣನೀಯ ಚರ್ಚೆಯನ್ನು ಉಂಟುಮಾಡಿವೆ. ಈ ಕಾಲಗಣನ ಶಾಸ್ತ್ರವನ್ನು ಪ್ರಸಿದ್ಧವಾದ ಐತಿಹಾಸಿಕ ಅಂಶಗಳೊಂದಿಗೆ ಸರಿಹೊಂದಿಸಲು ಅನೇಕ ಪ್ರಯತ್ನಗಳು ಮಾಡಲ್ಪಟ್ಟಾಗ್ಯೂ, ಅವು ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ. ಏಕಿಲ್ಲ? “ಅವರ ಆಸಕ್ತಿಯು ಧಾರ್ಮಿಕತೆಯಷ್ಟು ಹೆಚ್ಚು ಶೈಕ್ಷಣಿಕವಾಗಿರಲಿಲ್ಲ,” ಎಂದು ಎನ್ಸೈಕ್ಲೊಪೀಡಿಯ ಜೂಡೇಯಿಕ ಗಮನಿಸುತ್ತದೆ. “ಎಲ್ಲಾ ಸಂದರ್ಭಗಳಲ್ಲಿ, ವಿಶೇಷವಾಗಿ ಭಿನ್ನಮತೀಯ ಪಂಥಾಭಿಮಾನಿಗಳ ಎದುರಲ್ಲಿ ಸಂಪ್ರದಾಯವು ಎತ್ತಿಹಿಡಿಯಲ್ಪಡಲೇಬೇಕು.” ತಮ್ಮ ಸಂಪ್ರದಾಯಗಳಿಂದ ಉಂಟುಮಾಡಲ್ಪಟ್ಟಿರುವ ಗೊಂದಲವನ್ನು ತೆಗೆದುಹಾಕುವುದಕ್ಕೆ ಬದಲಾಗಿ, ಕೆಲವು ಯೆಹೂದಿ ಪಂಡಿತರು ಬೈಬಲಿನ ವೃತ್ತಾಂತಗಳನ್ನು ಕಳಂಕಿಸಲು ಪ್ರಯತ್ನಿಸಿದ್ದಾರೆ. ಇತರರು ಬ್ಯಾಬಿಲೋನಿಯ, ಈಜಿಪ್ಟ್, ಮತ್ತು ಹಿಂದೂ ದಂತಕಥೆಗಳು ಮತ್ತು ಸಂಪ್ರದಾಯಗಳಲ್ಲಿ ಆಧಾರವನ್ನು ಕಂಡುಕೊಳ್ಳಲು ಪ್ರಯತ್ನಿಸಿದ್ದಾರೆ.
ಪರಿಣಾಮವಾಗಿ, ಇತಿಹಾಸಕಾರರು ಇನ್ನು ಮುಂದೆ “ಸೃಷ್ಟಿಯ ಶಕ” ವನ್ನು, ನಂಬಲರ್ಹವಾದ ಕಾಲಗಣನ ಶಾಸ್ತ್ರದ ಒಂದು ಕೆಲಸದೋಪಾದಿ ವೀಕ್ಷಿಸುವುದಿಲ್ಲ. ಕೆಲವು ಯೆಹೂದಿ ಪಂಡಿತರು ಅದನ್ನು ಸಮರ್ಥಿಸಲು ಪ್ರಯತ್ನಿಸುತ್ತಾರೆ, ಮತ್ತು ದ ಜೂಯಿಷ್ ಎನ್ಸೈಕ್ಲೊಪೀಡಿಯ ಮತ್ತು ಎನ್ಸೈಕ್ಲೊಪೀಡಿಯ ಜೂಡೇಯಿಕ ಗಳಂತಹ ಅಧಿಕೃತ ನಿರ್ದೇಶ ಕೃತಿಗಳು ಸಹ ಅದರ ಕುರಿತು ಸಾಮಾನ್ಯವಾಗಿ ನಕಾರಾತ್ಮಕವಾದ ವೀಕ್ಷಣವನ್ನು ತೆಗೆದುಕೊಳ್ಳುತ್ತವೆ. ಆದುದರಿಂದ, ಬೈಬಲಿನ ಕಾಲಗಣನ ಶಾಸ್ತ್ರದ—ಯೆಹೋವ ದೇವರ ಪ್ರಕಾಶಗೊಳಿಸಲ್ಪಟ್ಟ ಪ್ರವಾದನ ಕಾಲತಖ್ತೆ—ದೃಷ್ಟಿಕೋನದಿಂದ, ಲೋಕದ ಸೃಷ್ಟಿಯಂದಿನಿಂದ ಕಾಲವನ್ನು ಲೆಕ್ಕಿಸುವ ಯೆಹೂದಿ ಸಾಂಪ್ರದಾಯಿಕ ವಿಧಾನವು ನಿಷ್ಕೃಷ್ಟವೆಂದು ವೀಕ್ಷಿಸಸಾಧ್ಯವಿಲ್ಲ.
[ಅಧ್ಯಯನ ಪ್ರಶ್ನೆಗಳು]
a ಬೈಬಲಿನ ಮತ್ತು ಐತಿಹಾಸಿಕ ಪುರಾವೆಗಳೆರಡೂ ಕ್ರಿಸ್ತ ಪೂರ್ವ 2ನೇ ವರ್ಷದಲ್ಲಿ ಯೇಸು ಕ್ರಿಸ್ತನ ಜನನಕ್ಕೆ ನಿರ್ದೇಶಿಸುತ್ತವೆ. ಆದುದರಿಂದ, ನಿಷ್ಕೃಷ್ಟತೆಗಾಗಿ ಅನೇಕರು ಸಾ.ಶ. (ಸಾಮಾನ್ಯ ಶಕ) ಮತ್ತು ಸಾ.ಶ.ಪೂ. (ಸಾಮಾನ್ಯ ಶಕ ಪೂರ್ವ) ಎಂಬ ಅಂಕಿತಗಳನ್ನು ಉಪಯೋಗಿಸಲು ಇಷ್ಟಪಡುತ್ತಾರೆ, ಮತ್ತು ವಾಚ್ ಟವರ್ ಸೊಸೈಟಿಯ ಪ್ರಕಾಶನಗಳಲ್ಲಿ ತಾರೀಖುಗಳು ಸೂಚಿಸಲ್ಪಡುವ ವಿಧಾನವು ಇದೇ ಆಗಿದೆ.
b ವಿವರಣೆಗಳಿಗಾಗಿ, ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟ ಇನ್ಸೈಟ್ ಆನ್ ದ ಸ್ಕ್ರಿಪ್ಚರ್ಸ್, ಸಂಪುಟ 2, ಪುಟಗಳು 614-16, 900-902ನ್ನು ನೋಡಿರಿ.