ಸುವಾರ್ತೆಗೆ ಕಣ್ಣುಗಳನ್ನು ತೆರೆಯುವುದು
“ಕುರುಡನಿಗೆ ಕಾಣದ ಕಾರಣ ಆಕಾಶ ಕಡಿಮೆ ನೀಲವಾಗಿರುವುದಿಲ್ಲ,” ಎನ್ನುತ್ತದೆ ಒಂದು ಡೇನಿಷ್ ನಾಣ್ಣುಡಿ. ಆದರೆ ನಮ್ಮ ಕಾರ್ಯನಿರತ ದೈನಂದಿನ ಜೀವನದಲ್ಲಿ, ನಾವು ಆಕಾಶವನ್ನು ಅದು ನೀಲವಿದೆ ಎಂಬಂತೆ ನೋಡುತ್ತೇವೊ? ಭವಿಷ್ಯವನ್ನು ನಾವು ಭರವಸೆಯಿಂದ ವೀಕ್ಷಿಸುತ್ತೇವೊ? ದೇವರ ವಾಕ್ಯವಾದ ಬೈಬಲ್ ಸಾದರಪಡಿಸುವ ಸುವಾರ್ತೆಯನ್ನು ನಾವು ನಿಜವಾಗಿಯೂ ನಂಬುತ್ತೇವೊ?
ಹಿಂದಿನ ಲೇಖನದಲ್ಲಿ ಶಾರೀರಿಕ ಅಂಧತೆಯ ವೈಶಿಷ್ಟ್ಯಗಳನ್ನು ನಾವು ಚರ್ಚಿಸಿದೆವು. ನಾವೀಗ ಎಷ್ಟೊ ಹೆಚ್ಚು ಮಹತ್ವದ ದೃಷ್ಟಿಯ ಒಂದು ಸ್ವರೂಪವನ್ನು ಪರೀಕ್ಷಿಸೋಣ. ಅದು ನಮ್ಮ ಬಾಳುವ ಸಂತೋಷವನ್ನು ಹಾಗೂ ನಮ್ಮ ಪ್ರಿಯ ಜನರಿಗಾಗಿ ಭವಿಷ್ಯದ ಪ್ರತೀಕ್ಷೆಗಳನ್ನು ಒಳಗೊಳ್ಳುತ್ತದೆ.
“ವ್ಯವಹರಿಸಲು ಕಷ್ಟವಾದ ಕಠಿಣಕಾಲಗಳನ್ನು” ನಾವು ಎದುರಿಸುತ್ತೇವೆಂಬದು ನಿಸ್ಸಂಶಯ. (2 ತಿಮೊಥೆಯ 3:1, NW) ಜನರು ಜೀವನೋಪಾಯವನ್ನು ಸಂಪಾದಿಸಲು ಕಷ್ಟಪಡುವಾಗ, ಆರೋಗ್ಯ ತೊಂದರೆಗಳನ್ನು ಮತ್ತು ಕುಟುಂಬ ಸಮಸ್ಯೆಗಳನ್ನು ಸಹಿಸಿಕೊಳ್ಳುವಾಗ, ಮತ್ತು ಸಾಮಾಜಿಕ ಅನ್ಯಾಯ ಮತ್ತು ಪ್ರೀತಿಯ ಅಭಾವವನ್ನು ಎದುರಿಸುವಾಗ ಏನಾಗುತ್ತದೆ? ವಿಷಾದಕರವಾಗಿ ಅನೇಕರು, ಜೊತೆಮಾನವರಲ್ಲಿ, ಧರ್ಮದಲ್ಲಿ, ಮತ್ತು ಸರಕಾರದಲ್ಲಿ ಅವರ ಭರವಸೆಯು ಶಿಥಿಲಗೊಳ್ಳುವುದನ್ನು ಕಾಣುತ್ತಾರೆ. ಯಾವ ಪರಿಹಾರವೂ ಇಲ್ಲವೆಂದು ಗ್ರಹಿಸುತ್ತಾ, ಒಂದು ಸಹಜವಾದ ರೀತಿಯಲ್ಲಿ ತಮ್ಮ ಸಮಸ್ಯೆಗಳೆಂದೂ ನಿಭಾಯಿಸಲ್ಪಡವೆಂದು ಕೆಲವರು ತೀರ್ಮಾನಿಸುತ್ತಾರೆ. ಬ್ರೆಜಿಲ್ ದೇಶದ ವಾರ್ತಾಪತ್ರ ಜಾರ್ನಲ್ ಡ ಟಾರ್ಡ ದಲ್ಲಿ ಜಾಕಬ್ ಪಿನ್ಯಾರು ಗೋಲ್ಡ್ಬರ್ಗ್ ಇವರು ಅವಲೋಕಿಸುವುದು: “ಜನರು, ಕ್ರೂರ ವಾಸ್ತವಿಕತೆಯ ಎದುರಿನಲ್ಲಿ, ಪ್ರಮಾದಗಳಿಂದಾಗಿ ಎಷ್ಟು ರೇಗುತ್ತಾರೆಂದರೆ ನ್ಯಾಯಸಮ್ಮತವಾಗಿ ವಿವೇಚನೆಯನ್ನು ಮಾಡುವುದಿಲ್ಲ, ಮತ್ತು ಅವರು ಹತಾಶೆಗೊಳಿಸುವ ರಹಸ್ಯವಾದದಲ್ಲಿ ಆತುಕೊಳ್ಳುತ್ತಾರೆ.” ಆದರೆ ವಿಷಯಗಳು ಕೆಟ್ಟುಹೋಗುವಾಗಲೂ ನಾವು ಸುಜ್ಞಾನವನ್ನು ಬಳಸಲು ಬಯಸಬೇಕು, ಅಲ್ಲವೆ?
ನಿಮ್ಮ ಕುಟುಂಬಕ್ಕಾಗಿ ಒಂದು ಮನೆಯು ನಿಮಗೆ ಬೇಕೆಂಬದಾಗಿ ಒಂದು ಕ್ಷಣ ಊಹಿಸಿಕೊಳ್ಳಿರಿ, ಮತ್ತು ಅದರ ಬೆಲೆಯ ಕುರಿತು ನಿಮಗೆ ಚಿಂತಿಸುವ ಅಗತ್ಯವಿಲ್ಲ. ಪ್ರಾಯಶಃ ವಿವಿಧ ನೆರೆಹೊರೆಗಳಲ್ಲಿ ವಿವಿಧ ಮನೆಗಳನ್ನು ನೀವು ನೋಡುತ್ತಿರಬಹುದು ಮತ್ತು ಸಂದರ್ಶಿಸುತ್ತಿರಬಹುದು. ಸ್ಥಿರಾಸ್ತಿ ಮಾರಾಟಗಾರನು ನಿಮ್ಮ ಇಷ್ಟಗಳನ್ನು ಒದಗಿಸಿಕೊಡಲು ಪ್ರಯತ್ನಪಟ್ಟರೂ, ನಿಮ್ಮ ಮನಸ್ಸಿಗೆ ಒಪ್ಪುವ ಮನೆಯನ್ನು ಕಂಡುಕೊಳ್ಳಲು ನೀವು ಶಕ್ತರಾಗುವುದಿಲ್ಲ. ಆದರೂ, ನಿಮ್ಮ ಕುಟುಂಬದ ಸಂತೃಪ್ತಿ ಮತ್ತು ಸುಕ್ಷೇಮವು ಒಳಗೂಡಿರುವುದರಿಂದ, ನೀವು ಬಿಟ್ಟುಕೊಡುವುದಿಲ್ಲ, ಅಲ್ಲವೆ? ಈಗ ಕಟ್ಟಕಡೆಗೆ ನಿಮ್ಮ ಕನಸಿನ ಮನೆಯು ನಿಮಗೆ ಲಭಿಸಿದಾಗ ಆಗುವ ಸಂತೋಷವನ್ನು ಕಲ್ಪಿಸಿಕೊಳ್ಳಿರಿ.
ಒಂದು ಹೊಸ ಮನೆಗಾಗಿ ಹುಡುಕುವುದಕ್ಕೆ ನೀವು ಸಮಯವನ್ನು ಕಳೆಯುವಂತೆಯೆ, ನಿಮ್ಮ ಸಮಸ್ಯೆಗಳಿಗೆ ಒಂದು ಪರಿಹಾರವನ್ನು ಕಾಣಲು ಬೈಬಲನ್ನು ಏಕೆ ಪರೀಕ್ಷಿಸಬಾರದು? ಒಂದು ಮನೆಯ ಕುರಿತು ನಿರ್ಣಯಗಳನ್ನು ಮಾಡುವಾಗ, ನಿಜತ್ವಗಳನ್ನು ನಮಗೆ ತೂಗಿನೋಡಬೇಕಾಗುವಂತೆಯೆ, ದೇವರ ವಾಕ್ಯದಲ್ಲಿ ನಾವು ಏನನ್ನು ಓದುತ್ತೇವೊ ಅದನ್ನು ಆಳವಾಗಿ ವಿವೇಚಿಸುವ ಅಗತ್ಯ ನಮಗಿದೆ. ಮತ್ತು ಯೆಹೋವ ದೇವರ ಮತ್ತು ಯೇಸು ಕ್ರಿಸ್ತನ ಕುರಿತ ಸತ್ಯವನ್ನು ನಾವು ಕಾಣುವುದು ಮತ್ತು ಸ್ವೀಕರಿಸುವುದು, ಒಂದು ಮನೆಯನ್ನು ಕಂಡುಕೊಳ್ಳುವುದಕ್ಕಿಂತಲೂ ಹೆಚ್ಚು ಪ್ರಯೋಜನಕರವಾಗಿದೆ. ಯೇಸುವಂದದ್ದು: “ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ ನಿತ್ಯಜೀವವು.”—ಯೋಹಾನ 17:3.
ಆದರೆ ಬೈಬಲಿನ ಸಂದೇಶವು ಅಷ್ಟು ಬೆಲೆಯುಳ್ಳದ್ದಾದರೆ, ಅದರ ಸುವಾರ್ತೆಗೆ ಅಷ್ಟು ಜನರು ಕುರುಡರಾಗಿ ಉಳಿದಿರುವುದೇಕೆ? ಒಂದು ಕಾರಣ, “ಲೋಕವೆಲ್ಲವು ಕೆಡುಕನ ವಶದಲ್ಲಿ” ಬಿದ್ದಿರುವುದೇ, ಮತ್ತು ಇದು ಅನೇಕರನ್ನು ಆಶ್ಚರ್ಯಗೊಳಿಸಬಹುದು. (1 ಯೋಹಾನ 5:19) ಫಲಿತಾಂಶವಾಗಿ, ಪಿಶಾಚನಾದ ಸೈತಾನನು “ದೇವರ ಪ್ರತಿರೂಪವಾಗಿರುವ ಕ್ರಿಸ್ತನ ಪ್ರಭಾವವನ್ನು ತೋರಿಸುವ ಸುವಾರ್ತೆಯ ಪ್ರಕಾಶವು ಉದಯವಾಗಬಾರದೆಂದು ನಂಬಿಕೆಯಿಲ್ಲದವರ ಮನಸ್ಸನ್ನು ಮಂಕು [ಕುರುಡು, NW]” ಮಾಡಿದ್ದಾನೆ. (2 ಕೊರಿಂಥ 4:4) ನಾವು ನಮ್ಮ ಕಣ್ಣುಗಳಿಂದ ನೋಡುತ್ತೇವಾದರೂ, ಕಣ್ಣನ್ನು ಪ್ರವೇಶಿಸುವ ಬೆಳಕನ್ನು ಅನುವಾದಿಸುವಂಥದ್ದು ಮಿದುಳಾಗಿದೆ. ಆದುದರಿಂದ ಕುರುಡನಾಗಿರುವುದು ಎಂದರೆ “ವಿವೇಚನೆಮಾಡಲು ಅಥವಾ ತೀರ್ಮಾನಿಸಲು ಅಶಕ್ತನಾಗಿರುವುದು ಅಥವಾ ಒಲ್ಲದೆ ಇರುವುದು” ಎಂದೂ ಅರ್ಥಮಾಡಲಾಗುತ್ತದೆ. ಇದು ನಮಗೆ ಒಂದು ಜನಪ್ರಿಯ ನಾಣ್ಣುಡಿಯನ್ನು ನೆನಪಿಗೆ ತರುತ್ತದೆ: “ನೋಡಬಯಸದವರಷ್ಟು ಕುರುಡರು ಬೇರೊಬ್ಬರಿಲ್ಲ.”
ಕುರುಡನಾದ ಒಬ್ಬ ವ್ಯಕ್ತಿಯು ತನ್ನ ಎದುರಲ್ಲಿ ಏನಿದೆಯೊ ಅದನ್ನು ಕಾಣಲಾರನು, ಆದುದರಿಂದ ಅವನಿಗೆ ಕೇಡಾಗುವ ಅಪಾಯವಿರಬಹುದು. ಅನೇಕರ ಶಾರೀರಿಕ ಅಂಧತೆಯನ್ನು ಈಗ ವಿಪರ್ಯಸ್ತಮಾಡಲು ಸಾಧ್ಯವಿಲ್ಲ, ಆದರೆ ಆತ್ಮಿಕವಾಗಿ ಅಂಧರಾಗಿ ಉಳಿಯಲು ಯಾರಿಗೂ ನಿರ್ಬಂಧವಿಲ್ಲ.
ಆತ್ಮಿಕ ಅಂಧತೆಯನ್ನು ಜಯಿಸುವುದು
ಸಾಕಷ್ಟು ನೈರ್ಮಲ್ಯವಿಲ್ಲದ ಪರಿಸ್ಥಿತಿಗಳು ಕಣ್ಣದೃಷ್ಟಿಯನ್ನು ನಿರ್ಬಲಗೊಳಿಸುವಂತೆಯೆ, ಒಂದು ನೈತಿಕವಾಗಿ ಭ್ರಷ್ಟಗೊಂಡ ವಾತಾವರಣವು ನೈತಿಕ ಅಂಧತೆಗೆ ನೆರವಾಗಬಲ್ಲದು. ಅದಲ್ಲದೆ, ಮನುಷ್ಯ ನಿರ್ಮಿತ ಬೋಧನೆ ಮತ್ತು ಸಂಪ್ರದಾಯಗಳ ವಿರುದ್ಧವಾಗಿ ಯೇಸು ಕ್ರಿಸ್ತನು ಎಚ್ಚರಿಸಿದನು. ಆಗಿನ ಧಾರ್ಮಿಕ ಪುಡಾರಿಗಳು ತಮ್ಮ ಮಂದೆಯನ್ನು ತಪ್ಪುದಾರಿಗೆ ಎಳೆಯುತ್ತಿದ್ದರೆಂದು ಆತನು ಸ್ಪಷ್ಟ ಪಡಿಸಿದನು: “ತಾವೇ ಕುರುಡರು, ಮತ್ತೊಬ್ಬರಿಗೆ ದಾರಿತೋರಿಸುವದಕ್ಕೆ ಹೋಗುತ್ತಾರೆ; ಕುರುಡನು ಕುರುಡನಿಗೆ ದಾರಿತೋರಿಸಿದರೆ ಅವರಿಬ್ಬರೂ ಕುಣಿಯಲ್ಲಿ ಬೀಳುವರು.”—ಮತ್ತಾಯ 15:14.
ಕುರುಡರಾದ ಮುಖಂಡರಿಂದ ಮೋಸಗೊಳಿಸಲ್ಪಡುವ ಬದಲಿಗೆ, ದೇವರ ರಾಜ್ಯದ ಕುರಿತ ಸುವಾರ್ತೆಗೆ ತಮ್ಮ ಕಣ್ಣುಗಳನ್ನು ತೆರೆಯುವವರೆಷ್ಟು ಧನ್ಯರು! ಯೇಸು ಘೋಷಿಸಿದ್ದು: “ನಾನು ನ್ಯಾಯತೀರ್ಪಿಗಾಗಿ ಈ ಲೋಕಕ್ಕೆ ಬಂದಿದ್ದೇನೆ; ಆ ತೀರ್ಪು ಏನಂದರೆ, ಕಣ್ಣಿಲ್ಲದವರಿಗೆ ಕಣ್ಣುಗಳು ಬರುವವು.” (ಯೋಹಾನ 9:39) ಆದರೆ ಆತ್ಮಿಕವಾಗಿ ಕುರುಡರಾಗಿರುವವರು ನೋಡಶಕ್ತರಾಗುವುದು ಹೇಗೆ ಸಾಧ್ಯ? ಒಳ್ಳೇದು, ಶಾರೀರಿಕ ಅಂಧತೆಯ ಕುರಿತ ನಮ್ಮ ಚರ್ಚೆಯನ್ನು ನಾವು ಮುಂದರಿಸೋಣ.
ದುರ್ಬಲ ದೃಷ್ಟಿಯುಳ್ಳವರಿಗೆ ಈಗ ವಿವಿಧ ಒದಗಿಸುವಿಕೆಗಳು ದೊರಕುತ್ತಿವೆ. ವಿಷಯವು ಯಾವಾಗಲೂ ಹೀಗಿರಲಿಲ್ಲ. ವ್ಯಾಲಾಂಟನ್ ಆವ್ಯಿ 1784 ರಲ್ಲಿ ಕುರುಡರಿಗಾಗಿ ಒಂದು ವಿಶೇಷ ಶಾಲೆಯನ್ನು ಸ್ಥಾಪಿಸುವುದಕ್ಕೆ ಮುಂಚೆ, ಅಂಧರಿಗೆ ನೆರವಾಗಲು ಯಾವ ನಿಜವಾದ ಗಂಭೀರ ಪ್ರಯತ್ನಗಳೂ ಮಾಡಲ್ಪಟ್ಟಿರಲಿಲ್ಲ. ತರುವಾಯ ಲುವಿ ಬ್ರೇಲ್, ತನ್ನ ಹೆಸರನ್ನು ಧರಿಸಿರುವ ಆ ವ್ಯವಸ್ಥೆಯನ್ನು ಕಂಡುಹಿಡಿದನು; ದುರ್ಬಲ ದೃಷ್ಟಿಯವರು ಓದುವಂತೆ ನೆರವಾಗಲು ಅವನು ಹಾಗೆ ಮಾಡಿದನು.
ಆತ್ಮಿಕವಾಗಿ ಕುರುಡರಾಗಿರುವವರ ಕುರಿತೇನು? ಇತ್ತೀಚಿನ ವರ್ಷಗಳಲ್ಲಿ ಭೂಮಿಯ ಅತ್ಯಂತ ಕಟ್ಟಕಡೆಯ ಭಾಗಗಳಲ್ಲಿ ಸಹ ಸುವಾರ್ತೆಯನ್ನು ಸಾರಲು ಪ್ರಯತ್ನಗಳು ಮಾಡಲ್ಪಟ್ಟಿವೆ. (ಮತ್ತಾಯ 24:14) ಸಾಂಕೇತಿಕವಾಗಿ ಮತ್ತು ಶಾರೀರಿಕವಾಗಿ ಕುರುಡರಾಗಿರುವ ಇಬ್ಬರಿಗೂ ನಿರೀಕ್ಷೆಯನ್ನು ತರಲು ಯೆಹೋವನ ಸಾಕ್ಷಿಗಳು ಸಂತೋಷಪಡುತ್ತಾರೆ.
ಬ್ರೆಜಿಲ್ ದೇಶದ ಒಬ್ಬ ಸ್ತ್ರೀಯು ಬರೆದದ್ದು: “ನನ್ನ ಶಾರೀರಿಕ ನ್ಯೂನತೆಯ ಮಧ್ಯೆಯೂ, ನಾನು ಆತ್ಮಿಕವಾಗಿ—ಕಾಣಬಲ್ಲೆನು ಎಂದು ನಾನು ಹೇಳಬಯಸುತ್ತೇನೆ. ಎಂತಹ ಆಶ್ಚರ್ಯಕರ ದೇವರು! ‘ಯೆಹೋವನು ಕೈದೆರೆದು ಎಲ್ಲಾ ಜೀವಿಗಳ ಇಷ್ಟವನ್ನು ನೆರವೇರಿಸುತ್ತಾನೆ’ ಎಂದು ತಿಳಿಯಲು ನಾವು ಸಂತೋಷಿಸುತ್ತೇವೆ.” (ಕೀರ್ತನೆ 145:16) ಮತ್ತು ಶಾರೀರಿಕವಾಗಿ ಅಂಧನಾಗಿರುವ ಜಾರ್ಜ ನೆನಪಿಸಿಕೊಳ್ಳುವುದು: “ನನ್ನ ಜೀವನವನ್ನು ವಾಸ್ತವವಾಗಿ ಎರಡು ಭಾಗಗಳನ್ನಾಗಿ ಮಾಡಸಾಧ್ಯವಿದೆ: ಸಾಕ್ಷಿಗಳ ಮುಂಚಿನ ಮತ್ತು ಅನಂತರದ ಭಾಗ. . . . ಅವರ ಮುಖಾಂತರವಾಗಿ ನಾನು ಲೋಕವನ್ನು ಮಾನಸಿಕವಾಗಿ ಸ್ಪಷ್ಟತೆ ಮತ್ತು ಶುಭ್ರತೆಯಿಂದ ಕಾಣತೊಡಗಿದೆನು. ಸಭೆಯ ಎಲ್ಲರೊಂದಿಗೆ ನಾನು ಒಂದು ಅತ್ಯುತ್ತಮವಾದ ಸಂಬಂಧದಲ್ಲಿ ಆನಂದಿಸುತ್ತೇನೆ.” ಅದರಂತೆ ಉಲ್ಲಾಸಕರವಾಗಿ, ಬೈಬಲ್ ಆಶ್ವಾಸನೆ ಕೊಡುತ್ತದೆ ಏನಂದರೆ ಶೀಘ್ರದಲ್ಲಿ ಭೂಮಿಯ ಮೇಲೆ—ಶಾರೀರಿಕವಾಗಿ ಯಾ ಆತ್ಮಿಕವಾಗಿ ಯಾರೊಬ್ಬನೂ ಕುರುಡನಾಗಿರನು. ಅದು ಹೇಗಾಗುವುದು? “ಯೆಹೋವನು ಕುರುಡರಿಗೆ ಕಣ್ಣುಕೊಡುತ್ತಾನೆ” ಎಂಬದು ಭೂವ್ಯಾಪಕವಾಗಿ ಹೇಗೆ ಸತ್ಯವಾಗಿ ಪರಿಣಮಿಸಲಿದೆ?—ಕೀರ್ತನೆ 146:8.
ಏಕಮಾತ್ರ ಖಾಯಂ ವಾಸಿ—ದೇವರ ರಾಜ್ಯ
ವೈದ್ಯಕೀಯ ತಿಳಿವಳಿಕೆಯ ಅಭಿವೃದ್ಧಿಯ ಮಧ್ಯೆಯೂ, ರೋಗಗಳ ಸಮೂಹವು ಕುರುಡುತನ, ನೋವು ಮತ್ತು ಮರಣವನ್ನು ಉಂಟುಮಾಡುವುದನ್ನು ಮುಂದರಿಸಿವೆ. ಹಾಗಾದರೆ, ದೃಷ್ಟಿಯನ್ನು ಮತ್ತು ಜೀವನದ ಆನಂದವನ್ನು ಎರಡನ್ನೂ ಅಪಹರಿಸುವ ನ್ಯೂನ ಪೋಷಣೆ, ಸಾಕಷ್ಟು ನೈರ್ಮಲ್ಯವಿಲ್ಲದ ಪರಿಸ್ಥಿತಿಗಳು ಮತ್ತು ಸಂಕಷ್ಟವನ್ನು ನಿರ್ಮೂಲಗೊಳಿಸಲು ಯಾವುದರ ಅಗತ್ಯವಿದೆ? ಕುರುಡರನ್ನು ಮತ್ತು ಇತರರನ್ನು ಯೇಸು ವಾಸಿಮಾಡಿದ್ದು, ಭವಿಷ್ಯತ್ತಿಗಾಗಿ ಒಂದು ಚಿಕ್ಕ-ಪ್ರಮಾಣದ ನಮೂನೆಯಾಗಿತ್ತು. ಸಂತೋಷಕರವಾಗಿ ಅವನ ಬೋಧನೆ ಮತ್ತು ರೋಗವಾಸಿ ಕಾರ್ಯವು, ದೇವರ ರಾಜ್ಯ ಸರಕಾರದ ಕೆಳಗೆ ಭೂಮಿಗೆ ವಿಸ್ತರಿಸಲ್ಪಡಲಿರುವ ಆಶೀರ್ವಾದಗಳನ್ನು ಮುನ್ಸೂಚಿಸಿದವು.
ಒಂದು ಲೋಕವ್ಯಾಪಕ ಪ್ರಮಾಣದ ವಾಸಿಮಾಡುವಿಕೆಯು ಸಮೀಪವಿದೆ.a ಈ ದೈವಿಕ ರೋಗವಾಸಿ ಕಾರ್ಯಕ್ರಮವು ಅಪೊಸ್ತಲ ಯೋಹಾನನಿಂದ ಸುಂದರವಾಗಿ ಚಿತ್ರಿಸಲ್ಪಟ್ಟಿರುತ್ತದೆ: “ಆ ಮೇಲೆ ಅವನು ಸ್ಫಟಿಕದಂತೆ ಪ್ರಕಾಶಮಾನವಾಗಿದ್ದ ಜೀವಜಲದ ನದಿಯನ್ನು ನನಗೆ ತೋರಿಸಿದನು. ಅದು ದೇವರ ಮತ್ತು ಯಜ್ಞದ ಕುರಿಯಾದಾತನ ಸಿಂಹಾಸನದಿಂದ ಹೊರಟು ಪಟ್ಟಣದ ಬೀದಿಯ ಮಧ್ಯದಲ್ಲಿ ಹರಿಯುತ್ತಿತ್ತು. ಆ ನದಿಯ ಉಭಯ ಪಾರ್ಶ್ವಗಳಲ್ಲಿ ಜೀವವೃಕ್ಷವಿತ್ತು. ಅದು ತಿಂಗಳು ತಿಂಗಳಿಗೆ ಫಲವನ್ನು ಫಲಿಸುತ್ತಾ ಹನ್ನೆರಡು ತರದ ಫಲಗಳನ್ನು ಕೊಡುತ್ತದೆ. ಆ ಮರದ ಎಲೆಗಳು ಜನಾಂಗದವರನ್ನು ವಾಸಿಮಾಡುವದಕ್ಕೆ ಪ್ರಯೋಜನವಾಗಿವೆ.”—ಪ್ರಕಟನೆ 22:1, 2.
“ಜೀವಜಲ” ಮತ್ತು “ಜೀವವೃಕ್ಷ” ಮುಂತಾದ ವಾಕ್ಸರಣಿಗಳು ಚಿತ್ರಿಸುವುದೇನಂದರೆ ಇಂದಿನ ದುಷ್ಟ ವ್ಯವಸ್ಥೆಯ ಅಂತ್ಯಗೊಂಡಾದ ಮೇಲೆ ದೇವರ ರಾಜ್ಯದ ವಾಸಿಕಾರಕ ಒದಗಿಸುವಿಕೆಗಳು ಮಾನವಕುಲವನ್ನು ಕ್ರಮೇಣ ಪರಿಪೂರ್ಣತೆಗೆ ಎತ್ತುವುವು. ವಾಸ್ತವದಲ್ಲಿ, ಯೇಸು ಕ್ರಿಸ್ತನ ಮತ್ತು ಆತನ ತಂದೆಯ ಜ್ಞಾನದೊಂದಿಗೆ, ಯೇಸುವಿನ ವಿಮೋಚನ ಯಜ್ಞದ ಪ್ರಯೋಜನಗಳು (ಪಾಪಗಳ ಪೂರ್ಣ ಕ್ಷಮೆಯೂ ಸೇರಿ), ಪರಿಪೂರ್ಣ ಆರೋಗ್ಯವನ್ನು ಮತ್ತು ನಿತ್ಯಜೀವವನ್ನು ಬರಮಾಡಲಿವೆ.—ಯೋಹಾನ 3:16.
ದೇವರ ಹೊಸ ಲೋಕದಲ್ಲಿ ಸಂತೋಷ
ಹಾಗಾದರೆ ಪಾತಕ, ಮಾಲಿನ್ಯ ಅಥವಾ ದಾರಿದ್ರ್ಯರಹಿತವಾದ ಒಂದು ಭೂಮಿಯನ್ನು ಕಲ್ಪಿಸಿಕೊಳ್ಳಿರಿ. ಪುನಃ ಸ್ಥಾಪಿತವಾದ ಪ್ರಮೋದವನದಲ್ಲಿ ನಿಮ್ಮ ಕುಟುಂಬವು ಶಾಂತಿಭರಿತವಾಗಿ ಜೀವಿಸುವುದನ್ನು ದೃಷ್ಟಿಗೆ ತನ್ನಿರಿ. (ಯೆಶಾಯ 32:17, 18) ವಿವಿಧ ಬಣ್ಣಗಳನ್ನು ಪರಿಪೂರ್ಣ ಮನಸ್ಸಿನಿಂದ ಮತ್ತು ಭಾವನೆಗಳಿಂದ ಅವಲೋಕಿಸುವುದು ಅದೆಷ್ಟು ಉಲ್ಲಾಸಕರವಾಗಲಿದೆ!
“ಮನುಷ್ಯ ಜೀವಿಗೆ ಸಹಜವಾದ ಪರಿಸ್ಥಿತಿಯು—ಬೆಳಕು, ಬಣ್ಣ, ರೂಪಗಳ ಸದಾ ಬದಲಾಗುತ್ತಿರುವ ಒಂದು ಪರಿಸರದಲ್ಲಿ ಜೀವಿಸುವುದಾಗಿದೆ. ನಿಸರ್ಗದಲ್ಲಿ ಏಕರೀತಿಯಾದ ಪರಿಸರವೆಂಬಂಥ ಒಂದು ವಿಷಯವು ಇಲ್ಲ” ಎಂಬುದಾಗಿ ಫೇಬರ್ ಬಿರನ್ ಹೇಳುತ್ತಾರೆ. “ಬಣ್ಣವು ಈ ಜಗತ್ತಿನ ನೈಸರ್ಗಿಕ ಉಲ್ಲಾಸಗಳಲ್ಲಿ ಒಂದಾಗಿದೆ. ನಿಸರ್ಗದಲ್ಲಿ ಬಣ್ಣವು ಕಾಣಸಿಗುವುದು ಕೇವಲ ಕೆಲವೇ ಸಂದರ್ಭಗಳಲ್ಲಿ ಅಲ್ಲ, ಮತ್ತು ಹೆಚ್ಚಿನ ಆನಂದಕರ ಜೀವನವು ಅದರ ಮೇಲೆ ಆತುಕೊಳ್ಳುತ್ತದೆ.”
ದೃಷ್ಟಿಯ ಕೊಡುಗೆಯು ಅದೆಷ್ಟು ಅಮೂಲ್ಯವಾಗಿದೆ! ಶಾರೀರಿಕವಾಗಿಯಾಗಲಿ ಆತ್ಮಿಕವಾಗಿಯಾಗಲಿ—ಒಮ್ಮೆ ಕುರುಡಾಗಿದ್ದ ಕಣ್ಣುಗಳು ಕಾಣಿಸುವಾಗ ಎಂತಹ ಸಂತೋಷವು ಆಗಲಿದೆ!
ಹೌದು, ಬರಲಿರುವ ಪುನಃ ಸ್ಥಾಪಿತ ಪ್ರಮೋದವನದಲ್ಲಿ, ಕುರುಡುತನ ಮತ್ತು ಬೇರೆ ದೌರ್ಬಲ್ಯಗಳು ಇನ್ನು ಮುಂದೆ ಅಸಂತೋಷವನ್ನು ಉಂಟುಮಾಡವು! ಯಾರೊಬ್ಬನೂ ಇನ್ನು ಮೇಲೆ ತಪ್ಪುದಾರಿಗೆಳೆಯಲ್ಪಡನು. ನಿಜ ಪ್ರೀತಿಯು ನೆಲೆಸುವುದರಿಂದ, ಎಲ್ಲರೂ ಆತ್ಮಿಕವಾಗಿ ಜ್ಞಾನೋದಯವನ್ನು ಹೊಂದಲಿರುವರು. ಅದು ಮತ್ತು ಇನ್ನು ಎಷ್ಟೋ ಹೆಚ್ಚು ಸಂಗತಿಗಳು ಮುಂದೆ ಭವಿಷ್ಯದಲ್ಲಿ ಬೇಗನೆ ಸಂಭವಿಸಲಿವೆ, ಆದರೆ “ಆಗ ಕುರುಡರ ಕಣ್ಣು ಕಾಣುವದು” ಎಂಬ ತನ್ನ ಪ್ರವಾದನಾ ವಚನವನ್ನು ನೆರವೇರಿಸುವವನಾದ ಯೆಹೋವನಿಂದ ಒಪ್ಪಲ್ಪಡುವವರಂತೆ ಕಂಡುಬರಬೇಕಾದ ಸಮಯವು ಇದೇ ಆಗಿದೆ.—ಯೆಶಾಯ 35:5.
[ಅಧ್ಯಯನ ಪ್ರಶ್ನೆಗಳು]
a ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟ, ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಪುಸ್ತಕದ 18 ನೆಯ ಅಧ್ಯಾಯದಲ್ಲಿ ನೀಡಲ್ಪಟ್ಟ ಪುರಾವೆಯನ್ನು ದಯವಿಟ್ಟು ಪರೀಕ್ಷಿಸಿರಿ.
[ಪುಟ 7 ರಲ್ಲಿರುವ ಚಿತ್ರ]
ಆಗ ಕುರುಡರ ಕಣ್ಣು ಕಾಣುವದು!