ಸಾಕ್ಷಿಗಳು ಸಂದರ್ಶಿಸುತ್ತಾ ಇರುವುದೇಕೆ?
‘ಅಲ್ಲಿ ನೋಡಿ, ಪುನಃ ಬಂದಿದ್ದಾರೆ! ಕೆಲವೇ ವಾರಗಳ ಹಿಂದೆ ಅವರಿಲ್ಲಿಗೆ ಬಂದಿದರ್ದಲ್ಲಾ!’ ಯೆಹೋವನ ಸಾಕ್ಷಿಗಳಲ್ಲೊಬ್ಬರು ನಿಮ್ಮನ್ನು ಸಂದರ್ಶಿಸುವಾಗ ನಿಮ್ಮ ಮನಸ್ಸಿನಲ್ಲಿ ಇದೇ ವಿಚಾರ ಬರುತ್ತದೊ? ಇಂದು ಲಕ್ಷಾಂತರ ಜನರು ಯೆಹೋವನ ಸಾಕ್ಷಿಗಳಿಂದ ಕ್ರಮವಾಗಿ ಸಂದರ್ಶಿಸಲ್ಪಡುತ್ತಾರೆ. ಹೆಚ್ಚಿನ ಜನರಿಗೆ ಅವರ ಸ್ವಂತ ಧರ್ಮ ಇದೆಯೆಂದೂ ಅಥವಾ ಅವರಿಗೆ ಆಸಕ್ತಿ ಇಲ್ಲವೆಂದೂ ಅವರಿಗೆ ತಿಳಿದಿರುವಾಗ ಅವರು ಪಟ್ಟುಹಿಡಿಯುವುದೇಕೆ? ಆ ಪ್ರಶ್ನೆಯು ಒಂದು ಉತ್ತರಕ್ಕೆ ಅರ್ಹವಾಗಿದೆ.
ದೇವರ ಮುಂದೆ ಜವಾಬ್ದಾರಿ
ಯೆಹೋವನ ಸಾಕ್ಷಿಗಳು ಶಾಸ್ತ್ರಗ್ರಂಥದಿಂದ ಏನು ತಿಳಿದಿದ್ದಾರೆಂದರೆ ಒಂದನೆಯ ಲೋಕ ಯುದ್ಧವು ಪ್ರಾರಂಭಿಸಿದ 1914 ನೆಯ ವರ್ಷದಿಂದ, ಲೋಕ ಘಟನೆಗಳು ಸದ್ಯದ ಲೋಕ ವ್ಯವಸ್ಥೆಯ ಅಂತ್ಯದ ಮತ್ತು ಈ ಭೂಮಿಯ ಮೇಲೆ ದೇವರ ರಾಜ್ಯದ ಬರಲಿರುವ ಆಳಿಕೆಯ ಸಂಬಂಧದ ಬೈಬಲ್ ಪ್ರವಾದನೆಗಳನ್ನು ನೆರವೇರಿಸುತ್ತಾ ಇವೆ. ಬಹುಮಟ್ಟಿಗೆ ಒಂದು ಶತಮಾನದ ಹಿಂಸಾಚಾರ, ರಕ್ತಪಾತ, ಮತ್ತು ಹಗೆತನವು ಮಾನವಕುಲವನ್ನು ಅವರ ಸಮಸ್ಯೆಗಳಿಗೆ ಒಂದು ರಾಜಕೀಯ ಪರಿಹಾರದಿಂದ ಎಂದಿಗಿಂತಲೂ ಹೆಚ್ಚು ದೂರ ಹಾಕಿರುವಂತೆ ತೋರುತ್ತದೆ. ಮಾನವ ಕುಟುಂಬವನ್ನು ಇನ್ನೂ ಬಾಧಿಸುವ ಯುದ್ಧಗಳು ಮತ್ತು ಭಯೋತ್ಪಾದಕತೆಯು, ಮಾನವ ಆಡಳಿತವು ಜನರ ಹೃದಯಗಳನ್ನು, ಮನಸ್ಸುಗಳನ್ನು ಮತ್ತು ಮನೋಭಾವನೆಗಳನ್ನು ಬದಲಾಯಿಸಲು ತಪ್ಪಿದೆ ಎಂಬುದಕ್ಕೆ ರುಜುವಾತಾಗಿವೆ. ಪೂರ್ವ ಇತಿಹಾಸದಲ್ಲಿ ಸಂಭವಿಸಿದ ಘಟನೆಗಳ ಮೇಲೆ ಆಳವಾಗಿ ಬೇರೂರಿದ ರೋಷವು ವರ್ಣೀಯ, ಜಾತೀಯ ಮತ್ತು ಧಾರ್ಮಿಕ ಗುಂಪುಗಳ ನಡುವಣ ಸಂಬಂಧಗಳಿಗೆ ಇನ್ನೂ ನಂಜಿಡುತ್ತದೆ. ಅಫ್ಘಾನಿಸ್ತಾನ, ಉತ್ತರ ಅಯರ್ಲೆಂಡ್, ದಕ್ಷಿಣ ಆಫ್ರಿಕ, ಭಾರತ, ಮಧ್ಯಪೂರ್ವ, ಮತ್ತು ಮುಂಚಿನ ಯುಗೊಸ್ಲಾವಿಯದಷ್ಟು ಪ್ರತ್ಯೇಕಿತವಾದ ಕ್ಷೇತ್ರಗಳಲ್ಲೂ ಅದು ಸತ್ಯವಾಗಿದೆ. ಹಾಗಾದರೆ ಇರುವ ಏಕಮಾತ್ರ ಬಾಳುವ ಪರಿಹಾರವು ಅದ್ಯಾವುದು?
ಸಾಕ್ಷಿಗಳನ್ನು ಪ್ರಚೋದಿಸುವುದು ಯಾವುದು?
ಯೆಹೋವನ ಸಾಕ್ಷಿಗಳು ಏನನ್ನು ಅಂಗೀಕರಿಸುತ್ತಾರೆಂದರೆ ದೇವರ ಪರಿಹಾರವು—ಕ್ರಿಸ್ತ ಯೇಸುವಿನ ಮೂಲಕವಾದ ಆತನ ವಾಗ್ದತ್ತ ರಾಜ್ಯದಾಳಿಕೆಯು—ಏಕಮಾತ್ರ ಶಕ್ಯವಾದ ಉತ್ತರವಾಗಿದೆ. ತನ್ನ ಪ್ರಖ್ಯಾತ ಮಾದರಿ ಪ್ರಾರ್ಥನೆಯಲ್ಲಿ ಯೇಸು ಆ ರಾಜ್ಯದಾಳಿಕೆಗಾಗಿ ಒಂದು ವಿಜ್ಞಾಪನೆಯನ್ನು ಸಹ ಸೇರಿಸಿದ್ದನು: “ಆದದರಿಂದ ನೀವು ಹೀಗೆ ಪ್ರಾರ್ಥನೆ ಮಾಡತಕ್ಕದ್ದು—ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ. ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ.” ಮಾನವಕುಲದ ಕಾರ್ಯಾದಿಗಳಲ್ಲಿ ದೇವರ ಹಸ್ತಕ್ಷೇಪಕ್ಕಾಗಿ ಈ ಪ್ರಾರ್ಥನೆ ನಿಜವಾಗಿ ಕೇಳಿಕೊಳ್ಳುತ್ತದೆ ಎಂದು ಯೆಹೋವನ ಸಾಕ್ಷಿಗಳು ನಂಬುತ್ತಾರೆ.—ಮತ್ತಾಯ 6:9, 10.
ಹೀಗೆ ಆ ಸಂದೇಶವನ್ನು ನೀಡಲು ಪ್ರಯತ್ನಿಸುವುದಕ್ಕಾಗಿ ಸದಾ ಮನೆಯಿಂದ ಮನೆಗೆ ಹೋಗುವ ಅಗತ್ಯವಿದೆಯೆಂದು ಯೆಹೋವನ ಸಾಕ್ಷಿಗಳು ಭಾವಿಸುವುದೇಕೆ? ಯೇಸು ಎತ್ತಿಹೇಳಿದ ಎರಡು ಆಜ್ಞೆಗಳ ಕಾರಣದಿಂದಾಗಿ: “ನಿನ್ನ ದೇವರಾಗಿರುವ ಕರ್ತನನ್ನು [ಯೆಹೋವನನ್ನು, NW] ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಪ್ರಾಣದಿಂದಲೂ ನಿನ್ನ ಪೂರ್ಣ ಬುದ್ಧಿಯಿಂದಲೂ ಪ್ರೀತಿಸಬೇಕು ಎಂಬ ಆಜ್ಞೆಯೇ ಮುಖ್ಯವಾದದ್ದು ಮತ್ತು ಮೊದಲನೆಯದು. ಇದಕ್ಕೆ ಸಮಾನವಾದ ಎರಡನೆಯ ಆಜ್ಞೆ ಒಂದು ಉಂಟು, ಅದು ಯಾವದಂದರೆ—ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು ಎಂಬದೇ.”—ಮತ್ತಾಯ 22:37-39.
ಸಾಕ್ಷಿಗಳು ದೇವರ ಆಶೀರ್ವಾದವನ್ನು ತಮಗಾಗಿ ಬಯಸುತ್ತಾರೆ, ಮತ್ತು ಅವರು ತಮ್ಮ ನೆರೆಯವರನ್ನು ಪ್ರೀತಿಸುತ್ತಾರಾದ್ದರಿಂದ, ಅವರಿಗಾಗಿಯೂ ಅದೇ ಆಶೀರ್ವಾದವನ್ನು ಅವರು ಅಪೇಕ್ಷಿಸುತ್ತಾರೆ. ಹೀಗೆ ಯೇಸುವಿನ ಮಾದರಿಯನ್ನು ಅನುಸರಿಸುತ್ತಾ, ತಮ್ಮ ನೆರೆಯವರನ್ನು ಸಂದರ್ಶಿಸಲು ಅವರು ನಿಸ್ವಾರ್ಥ ಪ್ರೀತಿಯಿಂದ ಒತ್ತಾಯಿಸಲ್ಪಡುತ್ತಾರೆ. “ಸಂತೋಷವುಳ್ಳ ದೇವರು” ವಿಧೇಯ ಮಾನವಜಾತಿಗಾಗಿ ಒಂದು ಶುದ್ಧೀಕರಿಸಲ್ಪಟ್ಟ ಭೂಮಿಯಲ್ಲಿ ಏನನ್ನು ವಾಗ್ದಾನಿಸಿದ್ದಾನೆಂದು ತಿಳಿಯುವ ಸಂದರ್ಭವನ್ನು ಕಡಿಮೆಪಕ್ಷ ಅವರಿಗೆ ನೀಡಲು ಅವರು ಬಯಸುತ್ತಾರೆ.—1 ತಿಮೊಥೆಯ 1:11, NW; 2 ಪೇತ್ರ 3:13.
ಕ್ರೈಸ್ತ ಮಿಷನೆರಿ ಪೌಲನು ದೇವರ ವಾಗ್ದಾನಗಳನ್ನು ನಂಬಿದ್ದನು ಮತ್ತು ಹೀಗೆ ಬರೆಯಶಕ್ತನಾದನು: “ಸುಳ್ಳಾಡಲಾರದ ದೇವರು ಅನಾದಿಕಾಲಕ್ಕೆ ಮುಂಚೆ ವಾಗ್ದಾನಮಾಡಿದ ನಿತ್ಯಜೀವದ ಒಂದು ನಿರೀಕ್ಷೆಯ ಮೇಲೆ ಆಧಾರಿಸಿದ ದಿವ್ಯಭಕ್ತಿಗೆ ಹೊಂದಿಕೆಯುಳ್ಳ ಸತ್ಯದ ನಿಷ್ಕೃಷ್ಟ ಜ್ಞಾನಕ್ಕೆ ಮತ್ತು ದೇವರಾದುಕೊಂಡವರ ನಂಬಿಕೆಗೆ ಅನುಸಾರವಾಗಿ ದೇವರ ದಾಸನೂ ಯೇಸು ಕ್ರಿಸ್ತನ ಅಪೊಸ್ತಲನೂ ಆಗಿರುವ ಪೌಲನು . . . ” ಹೌದು, “ಸುಳ್ಳಾಡಲಾರದ” ದೇವರು, ಯಾರು ಆತನನ್ನು ತಿಳಿಯಲು ಮತ್ತು ಸೇವಿಸಲು ದೀನತೆಯಿಂದ ಹುಡುಕುತ್ತಾರೊ ಅವರಿಗೆ ನಿತ್ಯಜೀವವನ್ನು “ವಾಗ್ದಾನ” ಮಾಡಿದ್ದಾನೆ.—ತೀತ 1:1, 2, NW; ಚೆಫನ್ಯ 2:3.
ಸಾಕ್ಷಿಗಳಿಗೆ ಸಂಬಳ ಸಿಕ್ಕುತ್ತದೊ?
ಸಾಕ್ಷಿಗಳಿಗೆ ಅವರ ಶುಶ್ರೂಷೆಗಾಗಿ ಸಂಬಳ ಸಿಗುತ್ತದೆ ಎಂದು ಕೆಲವರು ಆಗಿಂದಾಗ್ಗೆ ಆರೋಪಿಸಿದ್ದಾರೆ. ಇದು ಖಂಡಿತವಾಗಿಯೂ ಒಂದು ತಪ್ಪು ಭಾವನೆ! ಅವರು ಕೊರಿಂಥದಲ್ಲಿನ ಸಭೆಗೆ ಪೌಲನ ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ: “ಆದರೆ ನಾವು ದೇವರ ವಾಕ್ಯವನ್ನು ಕಲಬೆರಿಕೆಮಾಡುವವರಾದ [ಮಾರುವವರಾದ, NW] ಹೆಚ್ಚು ಪಾಲಿನ ಜನರ ಹಾಗಿರದೆ ನಿಷ್ಕಪಟಿಗಳಾಗಿ ದೇವರಿಂದ ಉಪದೇಶಹೊಂದಿದವರಿಗೆ ತಕ್ಕ ಹಾಗೆ ಕ್ರಿಸ್ತನ ಅನ್ಯೋನ್ಯತೆಯಲ್ಲಿದ್ದುಕೊಂಡು ದೇವರ ಸಮಕ್ಷಮದಲ್ಲಿಯೇ ಮಾತಾಡುತ್ತೇವೆ.”—2 ಕೊರಿಂಥ 2:17.
ಕೆಲವು ಧಾರ್ಮಿಕ ಮುಖಂಡರು, ಅದು ಧಾರ್ಮಿಕ ಸೇವೆಗಳಿಗಾಗಿ ವೇತನವಾಗಿರಲಿ ಯಾ ಅವರ ಟೀವೀ ಶುಶ್ರೂಷೆಗಳಲ್ಲಿ ವ್ಯಾಪಾರೋದ್ಯಮಗಳ ವರ್ಧನೆಗಾಗಿರಲಿ, ಹಣಕ್ಕಾಗಿ ಸಾರುತ್ತಾರೆ ನಿಜ. ಹೆಚ್ಚಿನ ಧರ್ಮಗಳು ಒಬ್ಬ ಪಾದ್ರಿಯನ್ನು ಸಂಬಳಕ್ಕಿಡುತ್ತವೆ.
ಇದಕ್ಕೆ ಪ್ರತಿಹೋಲಿಕೆಯಲ್ಲಿ, ಸಾಕ್ಷಿಗಳಲ್ಲಿ ಯಾವ ವೈದಿಕನೂ ಸಂಬಳಕ್ಕಿಲ್ಲ, ಮತ್ತು ಅನೇಕ ವೇಳೆ ಅವರ ಬೈಬಲ್ ಸಾಹಿತ್ಯವು ಪ್ರಾಮಾಣಿಕರಾದ ಸತ್ಯಾನ್ವೇಷಿಗಳಿಗೆ ಬೆಲೆರಹಿತವಾಗಿ ನೀಡಲಾಗುತ್ತದೆ, ಅದರೂ ಅವರಲ್ಲನೇಕರು ಸ್ವಇಚ್ಛೆಯ ದಾನವನ್ನು ಮಾಡುವಂತೆ ಪ್ರೇರಿಸಲ್ಪಡುತ್ತಾರೆ. ಅವನ್ನು ಈ ಲೋಕವ್ಯಾಪಕ ಸಾರುವ ಕಾರ್ಯದ ವೆಚ್ಚವನ್ನು ನಿರ್ವಹಿಸಲು ಬಳಸಲಾಗುತ್ತದೆ. “ಉಚಿತವಾಗಿ ಹೊಂದಿದ್ದೀರಿ, ಉಚಿತವಾಗಿ ಕೊಡಿರಿ,” ಎಂಬ ಯೇಸುವಿನ ಹಿತೋಪದೇಶಕ್ಕೆ ಹೊಂದಿಕೆಯಲ್ಲಿ, ಸಾಕ್ಷಿಗಳು ದೇವರ ಸೇವೆಗೆ ಪ್ರತಿ ವರ್ಷ ಲಕ್ಷಾಂತರ ತಾಸುಗಳನ್ನು ಮೀಸಲಾಗಿಡುವುದರಲ್ಲಿ ತಮ್ಮ ಸಾಧನ ಸಂಪತ್ತುಗಳನ್ನು, ಸಮಯ ಮತ್ತು ಶಕ್ತಿಯ ಸಮೇತ ಉದಾರವಾಗಿ ವ್ಯಯಿಸುತ್ತಾರೆ. ಹೀಗೆ ಅವರು ಮನೆ ಮನೆಗೆ ಹೋಗಿ ಮತ್ತು ಮನೆ ಬೈಬಲಭ್ಯಾಸಗಳ ಮೂಲಕವಾಗಿ ಆಸಕ್ತ ಜನರಿಗೆ ಕಲಿಸುತ್ತಾರೆ.—ಮತ್ತಾಯ 10:8; 28:19, 20; ಅ. ಕೃತ್ಯಗಳು 20:19, 20.
ವ್ಯಕ್ತಿಗಳೋಪಾದಿ ಯೆಹೋವನ ಸಾಕ್ಷಿಗಳಿಗೆ, ಅವರ ಸ್ಥಳಿಕ ಸಭೆಗಳಿಗೆ ಅಥವಾ ವಾಚ್ ಟವರ್ ಸೊಸೈಟಿಗೆ ಯಾವ ಆರ್ಥಿಕ ಪ್ರಚೋದನೆಯೂ ಇಲ್ಲವೆಂದು ನಿಜತ್ವಗಳು ರುಜುಪಡಿಸುತ್ತವೆ. ಮನೆಯಿಂದ ಮನೆಗೆ ಹೋಗುವುದಕ್ಕಾಗಿ ಯಾರಿಗೂ ಯಾವ ಸಂಬಳವೂ ಸಿಗುವುದಿಲ್ಲ. ಹಾಗಾದರೆ ಕೆಲಸದ ವೆಚ್ಚವು ನಿರ್ವಹಿಸಲ್ಪಡುವುದು ಹೇಗೆ? ಲೋಕದ ಸುತ್ತಲಿರುವ ಗಣ್ಯತೆಯುಳ್ಳ ಜನರಿಂದ ಬರುವ ಸ್ವಇಚ್ಛೆಯ ಕಾಣಿಕೆಗಳಿಂದಲೆ. ಹಣವೆತ್ತುವಿಕೆಗಳೆಂದೂ ಇರುವುದಿಲ್ಲ.
ಅವರ ಸಾಕ್ಷಿಕೊಡುವಿಕೆಯ ಪರಿಣಾಮ
ಸಾಕ್ಷಿಗಳ ಮನೆ ಮನೆಯ ಶುಶ್ರೂಷೆ ಮತ್ತು ಅನೌಪಚಾರಿಕ ಸಾರುವಿಕೆಯು ಸಾರ್ವಜನಿಕರಿಗೆ ಅರುಹನ್ನು ಹುಟ್ಟಿಸಿದೆಯೆ? ವಾರ್ತಾ ಮಾಧ್ಯಮ ಪುರಾವೆಯು ಆ ಪ್ರಶ್ನೆಗೆ ವಿಶ್ರುತವಾಗಿ ಹೌದೆಂದು ಉತ್ತರಕೊಡುತ್ತದೆ. ಟೀವೀ ಕಾರ್ಯಕ್ರಮಗಳ ಮತ್ತು ಚಲನ ಚಿತ್ರಗಳ ಸಮಯದಲ್ಲಿ, ಯಾರಾದರೊಬ್ಬರು ಮನೆಬಾಗಲೊಂದನ್ನು ತಟ್ಟುವುದನ್ನು ತೋರಿಸುವಾಗ ಯೆಹೋವನ ಸಾಕ್ಷಿಗಳು ಹೆಸರಿಸಲ್ಪಟ್ಟಿದ್ದಾರೆ. ಹಾಸ್ಯಚಿತ್ರಾವಳಿಗಳು ಸಾಕ್ಷಿಗಳನ್ನು ಉಲ್ಲೇಖಿಸಿರುತ್ತವೆ. ಅವರ ಹುರುಪಿನ ಚಟುವಟಿಕೆಯು ಎಷ್ಟು ಪ್ರಖ್ಯಾತವಾಗಿದೆಯೆಂದರೆ ಭೂಸುತ್ತಲಿನ ಹಾಸ್ಯಚಿತ್ರಕಾರರು ಯೆಹೋವನ ಸಾಕ್ಷಿಗಳಿಗೆ ನಿರ್ದೇಶನಗಳನ್ನು ಮಾಡಿರುತ್ತಾರೆ. ಇವು ವಿಡಂಬನೀಯವಾಗಿ ತೋರಬಹುದು, ಆದರೆ ಸಾಮಾನ್ಯವಾಗಿ ಸಾಕ್ಷಿಗಳು ಅವರ ಮನೆ ಮನೆಯ ಪಟ್ಟುಹಿಡಿದು ಸಾರುವಿಕೆಗೆ ಖ್ಯಾತರೆಂಬ ಸಕಾರಾತ್ಮಕವಾದ ಮೂಲಭೂತ ನಿಜತ್ವದ ಮೇಲೆ ಇವು ಆಧಾರಿಸಿವೆ.—ಅ. ಕೃತ್ಯಗಳು 20:20.
ಇತ್ತೀಚಿನ ಒಂದು ಹಾಸ್ಯಚಿತ್ರವು ಒಬ್ಬ “ಗುರು” ವನ್ನು ಸಂಪರ್ಕಿಸಲು ಒಬ್ಬ ಮನುಷ್ಯನು ಬೆಟ್ಟವನ್ನು ಹತ್ತುವುದನ್ನು ತೋರಿಸಿತು. ಅವನಂದದ್ದು: “ಬರಲಿರುವ ಆಶ್ಚರ್ಯಕರ ವಿಷಯಗಳ ಕುರಿತು ನನಗೆ ತಿಳಿಸಿರಿ!” “ಗುರು” ಗಳು ಹೇಗೆ ಉತ್ತರಿಸಿದರು? “ಒಳ್ಳೇದು . . . ಬರಗಳೂ ಅಂಟುರೋಗಗಳೂ ಭೂಕಂಪಗಳೂ ಬರುವುವು. ಸೂರ್ಯನು ಕತ್ತಲಾಗುವನು. ಚಂದ್ರನು ರಕ್ತವಾಗುವನು.” ಅನ್ವೇಷಕನು ಕೇಳಿದ್ದು: “ಶುಭವರ್ತಮಾನವೇನು?” ಅದಕ್ಕೆ “ಗುರು” ಪ್ರತಿಕ್ರಿಯಿಸಿದ್ದು: “ದೇವರು ಕಣ್ಣೀರನ್ನೆಲ್ಲಾ ಒರಸಿಬಿಡುವನು. . . . ಇನ್ನು ಮೇಲೆ ಮರಣವಾಗಲಿ ದುಃಖವಾಗಲಿ ಬೇನೆಯಾಗಲಿ ಇರಲಾರದು!” ಸಂದರ್ಶಕನು ಕೇಳಿದ್ದು: “ನಿಮಗೆ ಇಂಥ ವಿಷಯಗಳ ಕುರಿತು ತಿಳಿದಿರುವುದು ಹೇಗೆ?” ಉತ್ತರ? “ಯೆಹೋವನ ಸಾಕ್ಷಿಗಳನ್ನು ಯಾರೂ ಪಾರಾಗುವಂತಿಲ್ಲ!” ಮತ್ತು ಅದು ಸ್ವತಃ ಹಾಸ್ಯಚಿತ್ರದ ಕಲಾಕಾರನ ವಿಷಯದಲ್ಲೂ ಸತ್ಯವಾಗಿದ್ದಿರಲೇ ಬೇಕು!
ಈ ಚಿತ್ರಾವಳಿಯ ಮತ್ತು ಅದರಂತಿರುವ ಬೇರೆಯವುಗಳ ಪ್ರಾಮುಖ್ಯ ವಿಷಯವು ಏನಂದರೆ ಅದು ಸಾಕ್ಷಿಗಳ ಸಂದರ್ಶನಗಳ ನಿಶ್ಚಲತೆಯನ್ನು ಮಾತ್ರವಲ್ಲ ಅವರ ಸಂದೇಶದ ಹೊಂದಿಕೆಯನ್ನು ಸಹ ಪ್ರಕಟಪಡಿಸುತ್ತದೆ. ಕೇವಲ ಕೆಲವೇ ಮಾತುಗಳಲ್ಲಿ, ಕಲಾಕಾರನು ಅವರ ಮನೆ ಮನೆಯ ಸಾಕ್ಷಿಯ ಮತ್ತು ಉಲ್ಲೇಖಿತ ಶಾಸ್ತ್ರವಚನಗಳ ಮುಖ್ಯ ಭಾಗವನ್ನು ಕೊಟ್ಟಿದ್ದಾನೆ.—ಮತ್ತಾಯ 24:7, 29; ಪ್ರಕಟನೆ 21:3, 4.
ಹೆಚ್ಚಿನ ಜನರು ಅವರ ಸಂದೇಶವನ್ನು ತಿರಸ್ಕರಿಸುವ ನಿಜತ್ವವು ಸಾಕ್ಷಿಗಳನ್ನು ನಿರುತ್ಸಾಹಗೊಳಿಸುವುದಿಲ್ಲ ಅಥವಾ ಅವರ ಹುರುಪನ್ನು ಕುಂದಿಸುವುದಿಲ್ಲ. ಅಪೊಸ್ತಲ ಪೇತ್ರನು ಎಚ್ಚರಿಸಿದ್ದು: “ಕಡೇ ದಿವಸಗಳಲ್ಲಿ ತಮ್ಮ ದುರಾಶೆಗಳ ಪ್ರಕಾರ ನಡೆಯುವ ಕುಚೋದ್ಯಗಾರರು ಬಂದು ಕುಚೋದ್ಯಮಾಡುತ್ತಾ—ಆತನ ಪ್ರತ್ಯಕ್ಷತೆಯ ವಿಷಯವಾದ ವಾಗ್ದಾನವು ಏನಾಯಿತು? ನಮ್ಮ ಪಿತೃಗಳು ನಿದ್ರೆಹೊಂದಿದ ದಿನ ಮೊದಲುಗೊಂಡು ಸಮಸ್ತವೂ ಲೋಕಾದಿಯಿಂದಿದ್ದ ಹಾಗೆಯೇ ಇರುತ್ತದಲ್ಲಾ ಎಂದು ಹೇಳುವರೆಂಬದಾಗಿ ನೀವು ಮೊದಲು ತಿಳುಕೊಳ್ಳಬೇಕು.” ಇದರ ಮಧ್ಯೆಯೂ, ಪ್ರೀತಿಯಿಂದ ಪ್ರೇರೇಪಿತರಾಗಿ ಸಾಕ್ಷಿಗಳು ತಮ್ಮ ನೆರೆಯವರನ್ನು ಸಂದರ್ಶಿಸುವುದನ್ನು ಮುಂದರಿಸುತ್ತಾರೆ ಮತ್ತು ಸದ್ಯದ ಭ್ರಷ್ಟ ವ್ಯವಸ್ಥೆಗೆ ದೇವರು ಅಂತ್ಯವನ್ನು ತರುವ ವರೆಗೆ ಹಾಗೆ ಮಾಡುವರು.—2 ಪೇತ್ರ 3:3, 4.
ಕಡೇ ದಿವಸಗಳಲ್ಲಿ, ಮೊದಲು ಸುವಾರ್ತೆಯು ಸಾರಲ್ಪಡಬೇಕಾಗಿದೆ ಎಂದು ಯೇಸು ಹೇಳಿದನು. ಸುವಾರ್ತೆಯು ಏಕೆ ಮತ್ತು ಹೇಗೆ ಸಾರಲ್ಪಡುತ್ತದೆ ಎಂಬದರ ಒಂದು ಅಧಿಕ ಪರೀಕ್ಷಣೆಗಾಗಿ ಹಿಂಬಾಲಿಸುವ ಎರಡು ಲೇಖನಗಳನ್ನು ನೋಡಿರಿ.—ಮಾರ್ಕ 13:10.
[ಪುಟ 9 ರಲ್ಲಿರುವ ಚಿತ್ರಗಳು]
ಯೆಹೋವನ ಸಾಕ್ಷಿಗಳಲ್ಲಿ ಸಂಬಳದಾರರಾದ ಒಂದು ವೈದಿಕ ವರ್ಗವಿಲ್ಲ—ಎಲ್ಲರೂ ಸ್ವಯಂ ಪ್ರವೃತ್ತ ಶುಶ್ರೂಷಕರು