ವಿಜ್ಞಾನ, ಧರ್ಮ, ಮತ್ತು ಸತ್ಯಕ್ಕಾಗಿ ಅನ್ವೇಷಣೆ
“ಅನೇಕ ಸುಳ್ಳು ಧರ್ಮಗಳು ಹರಡಿವೆ ಎಂಬ ನಿಜತ್ವವು . . . ನನ್ನ ಮೇಲೆ ಸ್ವಲ್ಪ ಪ್ರಭಾವವನ್ನು ಬೀರಿತು.”—ಚಾರ್ಲ್ಸ್ ಡಾರ್ವಿನ್
ಹತ್ತೊಂಬತ್ತನೆಯ ಶತಮಾನದ ಆದಿ ಭಾಗದಲ್ಲಿ, ವಿಜ್ಞಾನ ಮತ್ತು ಧರ್ಮವು ಅನುರೂಪವಾದೊಂದು ಸಂಬಂಧವನ್ನು ಅನುಭವಿಸಿದವು. “ವೈಜ್ಞಾನಿಕ ಬರಹಗಳಲ್ಲಿ ಸಹ,” ಡಾರ್ವಿನ್: ಪೂರ್ವ ಮತ್ತು ಅನಂತರ ಎಂಬ ಇಂಗ್ಲಿಷ್ ಪುಸ್ತಕವು ಹೇಳುವುದು, “ದೇವರ ಕುರಿತು ಸ್ಪಷ್ಟವಾಗಿಗಿ ಸ್ವಾಭಾವಿಕವೂ ಯಥಾರ್ಥವೂ ಆದ ರೀತಿಯಲ್ಲಿ ಮಾತಾಡಲು ಲೇಖಕರಿಗೆ ಯಾವ ಅನಿಶಿತ್ವತೆಯೂ ಅನಿಸಲಿಲ್ಲ.”
ಡಾರ್ವಿನ್ನ ಆರಿಜಿನ್ ಆಫ್ ಸ್ಪೀಷೀಜ್ ಅದನ್ನು ಬದಲಾಯಿಸಲು ಸಹಾಯ ಮಾಡಿತು. ಧರ್ಮವನ್ನು—ಮತ್ತು ದೇವರನ್ನು—ಅಸಂಗತವಾಗಿ ಮಾಡಿದ ಅನುಚಿತ ಸಂಬಂಧವನ್ನು ವಿಜ್ಞಾನ ಮತ್ತು ವಿಕಾಸವು ರಚಿಸಿದವು. “ವಿಕಾಸ ವಾದದ ಯೋಚನಾ ನಮೂನೆಯಲ್ಲಿ,” ಸರ್ ಜೂಲ್ಯನ್ ಹಕ್ಸ್ಲಿ ಹೇಳುವುದು, “ಒಬ್ಬ ದೈವಿಕ ಸೃಷ್ಟಿಕರ್ತನ ಇರುವಿಕೆಯು ಅನಿವಾರ್ಯವೂ ಅಲ್ಲ ಸೂಕ್ತವೂ ಅಲ್ಲ.”
ಇಂದು ವಿಕಾಸ ವಾದವು ವಿಜ್ಞಾನದ ಅತ್ಯವಶ್ಯ ಆಧಾರವೆಂದು ವಾದಿಸಲಾಗಿದೆ. ಈ ಸಂಬಂಧಕ್ಕಾಗಿರುವ ಮುಖ್ಯ ಕಾರಣವು ಭೌತವಿಜ್ಞಾನಿ ಫ್ರೆಡ್ ಹೈಲ್ ಅವರಿಂದ ಗುರುತಿಸಲ್ಪಟ್ಟಿದೆ: “ಸಾಂಪ್ರದಾಯಿಕ ವಿಜ್ಞಾನಿಗಳು ಸತ್ಯದ ಕಡೆಗೆ ಎದುರುನೋಡುವುದಕ್ಕಿಂತ ಹೆಚ್ಚು ಪೂರ್ವದ ಅತಿರೇಕ ಧಾರ್ಮಿಕ ದೃಷ್ಟಿಕೋನಗಳಿಗೆ ಹಿಂದಿರುಗುವುದನ್ನು ತಡೆಯುವುದರ ಕುರಿತು ಅಧಿಕ ಚಿಂತಿತರಾಗಿದ್ದಾರೆ.” ಯಾವ ರೀತಿಯ ಅತಿರೇಕ ದೃಷ್ಟಿಕೋನಗಳು ಧರ್ಮವನ್ನು ವಿಜ್ಞಾನದ ಸಂಬಂಧದಲ್ಲಿ ಅಷ್ಟು ಅಸಹ್ಯಕರವಾಗಿ ಮಾಡಿವೆ?
ಧರ್ಮವು ಸೃಷ್ಟಿಗೆ ಒಂದು ಕೆಟ್ಟ ಹೆಸರನ್ನು ಕೊಡುತ್ತದೆ
ಬೈಬಲನ್ನು ಎತ್ತಿಹಿಡಿಯುವ ಒಂದು ಊಹಿತ ಪ್ರಯತ್ನದಲ್ಲಿ, “ಸೃಷ್ಟಿವಾದಿಗಳು”—ಹೆಚ್ಚಾಗಿ ಪ್ರಾಮಾಣ್ಯವಾದಿ ಪ್ರಾಟೆಸ್ಟಂಟರೊಂದಿಗೆ ಜೊತೆಗೂಡಿರುವವರು—ಭೂಮಿ ಮತ್ತು ವಿಶ್ವವು 10,000 ವರ್ಷಕ್ಕಿಂತಲೂ ಕಡಿಮೆ ವಯಸ್ಸಿನದ್ದಾಗಿವೆ ಎಂದು ಒತ್ತಿ ಹೇಳಿದ್ದಾರೆ. ಈ ಅತಿರೇಕದ ದೃಷ್ಟಿಕೋನವು ಭೂಗರ್ಭಶಾಸ್ತ್ರಜ್ಞರ, ಖಗೋಲಶಾಸ್ತ್ರಜ್ಞರ, ಮತ್ತು ಭೌತವಿಜ್ಞಾನಿಗಳ ಅಪಹಾಸ್ಯವನ್ನು ತಂದಿದೆ, ಯಾಕೆಂದರೆ ಇದು ಅವರ ಕಂಡುಹಿಡಿತಗಳನ್ನು ವಿರೋಧಿಸುತ್ತದೆ.
ಆದರೆ ಬೈಬಲ್ ನಿಜವಾಗಿಯೂ ಏನನ್ನು ಹೇಳುತ್ತದೆ? “ಆದಿಯಲ್ಲಿ ದೇವರು ಆಕಾಶವನ್ನೂ ಭೂಮಿಯನ್ನೂ ಉಂಟುಮಾಡಿದನು.” (ಆದಿಕಾಂಡ 1:1) ಒಳಗೊಂಡಿರುವ ಸಮಯವು ನಮೂದಿಸಲ್ಪಟ್ಟಿಲ್ಲ. ಸೃಷ್ಟಿಯ “ಮೊದಲನೆಯ ದಿನ”ವು ಆದಿಕಾಂಡ 1:3-5ರ ತನಕವೂ ಉಲ್ಲೇಖಿಸಲ್ಪಟ್ಟಿಲ್ಲ. ಈ ಪ್ರಥಮ “ದಿನ”ವು ಆರಂಭವಾದಾಗ, ‘ಆಕಾಶವೂ ಭೂಮಿಯೂ’ ಈಗಾಗಲೇ ಅಸ್ತಿತ್ವದಲ್ಲಿದ್ದವು. ಆದುದರಿಂದ, ಆಕಾಶ ಮತ್ತು ಭೂಮಿಯು, ವಿಜ್ಞಾನಿಗಳು ಹೇಳುವಂತೆ, ಬಿಲ್ಯಾಂತರ ವರ್ಷಗಳು ಹಳೆಯದಾಗಿರಬಹುದಿತ್ತೊ? ಅವು ಹಾಗೆ ಇರಲೂ ಬಹುದು. ಆವರಿಸಲ್ಪಟ್ಟ ಸಮಯವನ್ನು ಬೈಬಲ್ ನಮೂದಿಸುವುದಿಲ್ಲ.
ಸೃಷ್ಟಿಯ ಆರು ‘ದಿನಗಳನ್ನು’ ಕೆಲವರು ಅರ್ಥವಿವರಣೆ ಮಾಡುವ ರೀತಿಯು, ಧರ್ಮದ ಇನ್ನೊಂದು ಅತಿರೇಕ ದೃಷ್ಟಿಕೋನವಾಗಿದೆ. ಭೂ ಸೃಷ್ಟಿಯನ್ನು 144 ಗಂಟೆಗಳ ಅವಧಿಗೆ ನಿರ್ಬಂಧಿಸುತ್ತಾ, ಕೆಲವು ಕ್ರೈಸ್ತವೇದ ಪ್ರಾಮಾಣ್ಯವಾದಿಗಳು ಈ ದಿನಗಳು ಅಕ್ಷರಾರ್ಥಕವಾಗಿವೆ ಎಂದು ಒತ್ತಿ ಹೇಳುತ್ತಾರೆ. ಈ ವಾದವು ಸ್ಪಷ್ಟವಾಗಿದ ವೈಜ್ಞಾನಿಕ ಅವಲೋಕನಗಳೊಂದಿಗೆ ವಿರುದ್ಧವಾಗಿದೆ ಎಂದು ವಿಜ್ಞಾನಿಗಳಿಗೆ ಅನಿಸುವ ಕಾರಣ, ಇದು ಅವರಲ್ಲಿ ಅನಿಶ್ಚಿತತೆಯನ್ನು ಕೆರಳಿಸುತ್ತದೆ.
ಹಾಗಿದ್ದರೂ, ವಿಜ್ಞಾನದೊಂದಿಗೆ ಪ್ರತಿಕೂಲವಾಗಿರುವುದು—ಸ್ವತಃ ಬೈಬಲೇ ಅಲ್ಲ—ಬೈಬಲಿನ ಕ್ರೈಸ್ತವೇದ ಪ್ರಾಮಾಣ್ಯವಾದಿಗಳ ಅರ್ಥವಿವರಣೆಯಾಗಿದೆ. ಸೃಷ್ಟಿಯ ಪ್ರತಿಯೊಂದು “ದಿನ”ವು 24 ತಾಸುಗಳಷ್ಟು ಉದ್ದವಾಗಿತ್ತೆಂದು ಬೈಬಲ್ ಹೇಳುವುದಿಲ್ಲ; ನಿಶ್ಚಯವಾಗಿ, ‘ಯೆಹೋವನು ಭೂಮಿ ಮತ್ತು ಆಕಾಶವನ್ನು ಮಾಡಿದ’ ಅತಿ ಹೆಚ್ಚು ದೀರ್ಘವಾದ ‘ದಿನ’ ದೊಳಗೆ ಅದು ಈ ಎಲ್ಲ ‘ದಿನಗಳನ್ನು’ ಒಳಸೇರಿಸುತ್ತದೆ. ಬೈಬಲಿನ ಎಲ್ಲ ‘ದಿನಗಳು’ ಕೇವಲ 24 ತಾಸುಗಳನ್ನು ಹೊಂದಿರಲಿಲ್ಲವೆಂದು ಇದು ತೋರಿಸುತ್ತದೆ. (ಆದಿಕಾಂಡ 2:4, NW) ಕೆಲವು ದಿನಗಳು ಅನೇಕ ಸಾವಿರಾರು ವರ್ಷಗಳಷ್ಟು ಉದ್ದವಾಗಿದ್ದಿರಬಹುದಿತ್ತು.a
ಹೀಗೆ, ಸೃಷ್ಟಿವಾದಿಗಳ ಮತ್ತು ಕ್ರೈಸ್ತವೇದ ಪ್ರಾಮಾಣ್ಯವಾದಿಗಳ ಮೂಲಕ ಸೃಷ್ಟಿಯ ವಿಚಾರಕ್ಕೆ ಒಂದು ಕೆಟ್ಟ ಹೆಸರು ಕೊಡಲ್ಪಟ್ಟಿದೆ. ವಿಶ್ವದ ವಯಸ್ಸು ಮತ್ತು ಸೃಷ್ಟಿಯ ‘ದಿನಗಳ’ ವ್ಯಾಪ್ತಿಯ ಕುರಿತಾದ ಅವರ ಬೋಧನೆಗಳು ಯುಕ್ತವಾದ ವಿಜ್ಞಾನದೊಂದಿಗೆ ಆಗಲಿ ಬೈಬಲಿನೊಂದಿಗೆ ಆಗಲಿ ಹೊಂದಿಕೆಯಲ್ಲಿಲ್ಲ. ಹಾಗಿದ್ದರೂ, ವಿಜ್ಞಾನಿಗಳಿಗೆ ಧರ್ಮವನ್ನು ಅಸಹ್ಯವಾಗಿ ಮಾಡಿರುವ ಇತರ ಅತಿರೇಕ ದೃಷ್ಟಿಕೋನಗಳೂ ಇವೆ.
ಅಧಿಕಾರದ ದುರುಪಯೋಗ
ಇತಿಹಾಸದ ಉದ್ದಕ್ಕೂ, ಧರ್ಮವು ಬಹಳಷ್ಟು ಅನ್ಯಾಯಕ್ಕೆ ಹೊಣೆಯಾಗಿದೆ. ಮಧ್ಯ ಯುಗಗಳಲ್ಲಿ, ಉದಾಹರಣೆಗೆ, ಯೂರೋಪಿನ ನಿರಂಕುಶ ಪ್ರಭುತ್ವದ ಚರ್ಚಿನ ಬೆಂಬಲವನ್ನು ಸಮರ್ಥಿಸಲು, ಸೃಷ್ಟಿಯ ತತ್ವವನ್ನು ವಿರೂಪಗೊಳಿಸಲಾಯಿತು. ಮಾನವರು ತಮ್ಮ ಅಂತಸ್ತಿನಲ್ಲಿ, ಶ್ರೀಮಂತರಾಗಿ ಯಾ ಬಡವರಾಗಿ, ದೈವಿಕ ತೀರ್ಪಿನ ಮೂಲಕ ಇರಿಸಲ್ಪಟ್ಟಿದ್ದಾರೆ ಎಂಬುದು ಅದರ ಅರ್ಥವಾಗಿತ್ತು. ಜ್ಞಾನವುಳ್ಳ ವಿಶ್ವ (ದ ಇಂಟೆಲಿಜೆಂಟ್ ಯುನಿವರ್ಸ್) ಎಂಬ ಪುಸ್ತಕವು ವಿವರಿಸುವುದು: “ಶ್ರೀಮಂತರ ಕಿರಿಯ ಗಂಡುಮಕ್ಕಳು ಕುಟುಂಬದ ಆಸ್ತಿಯಿಂದ ಸ್ವಲ್ಪವನ್ನು ಅಥವಾ ಏನನ್ನೂ ಪಡೆಯದೆ ಇರುವುದು, ಅವರಿಗಾಗಿರುವ ‘ದೇವರ ವ್ಯವಸ್ಥೆ’ ಆಗಿದೆ ಎಂಬುದಾಗಿ ಹೇಳಲಾಗುತ್ತಿತ್ತು, ಮತ್ತು ಕೂಲಿ ಕೆಲಸಮಾಡುವವನು ‘ದೇವರು ಅವನಿಗಾಗಿ ಗೊತ್ತುಮಾಡಿದ ಸ್ಥಾನ’ ದಿಂದ ತೃಪ್ತನಾಗಿ ಉಳಿಯುವಂತೆ ಸಂತತವಾಗಿ ಒತ್ತೊತ್ತಿ ಹೇಳಲ್ಪಡುತ್ತಿದ್ದನು.”
ಅನೇಕರು “ಪೂರ್ವದ ಅತಿರೇಕ ಧಾರ್ಮಿಕ ದೃಷ್ಟಿಕೋನಗಳಿಗೆ” ಹಿಂದಿರುಗುವುದರ ಕುರಿತು ಹೆದರುವುದರಲ್ಲಿ ಆಶ್ಚರ್ಯವೇನೂ ಇಲ್ಲ! ಮನುಷ್ಯನ ಆತ್ಮಿಕ ಅಗತ್ಯವನ್ನು ತುಂಬುವುದರ ಬದಲಿಗೆ, ಧರ್ಮವು ಅದನ್ನು ಅನೇಕ ವೇಳೆ ಸ್ವಪ್ರಯೇಜನಕ್ಕಾಗಿ ಉಪಯೋಗಿಸಿಕೊಂಡಿದೆ. (ಯೆಹೆಜ್ಕೇಲ 34:2) ಇಂಡಿಯ ಟುಡೆ ಎಂಬ ಪತ್ರಿಕೆಯಲ್ಲಿರುವ ಒಂದು ಸಂಪಾದಕೀಯವು ಹೇಳುವುದು: “ಯುಗಗಳ ಉದ್ದಕ್ಕೂ ಅದು ಸ್ಥಾಪಿಸಿರುವ ರೀತಿಯ ದಾಖಲೆಯಿಂದ, ಧರ್ಮವು ಯಾವುದೇ ವಿಶ್ವಾಸ ಯೋಗ್ಯತೆಯನ್ನು ಉಳಿಸಿಕೊಂಡಿರುವುದು ಆಶ್ಚರ್ಯದ ಸಂಗತಿಯಾಗಿದೆ. . . . ಶ್ರೇಷ್ಠ ಸೃಷ್ಟಿಕರ್ತನ ಹೆಸರಿನಲ್ಲಿ, . . . ಮನುಷ್ಯರು ತಮ್ಮ ಜೊತೆ ಜೀವಿಗಳ ವಿರುದ್ಧ ಅತ್ಯಂತ ಅಸಹ್ಯಕರವಾದ ಘೋರ ಕೃತ್ಯಗಳನ್ನು ನಡೆಸಿದ್ದಾರೆ.”
ಸುಳ್ಳು ಧರ್ಮದ ಎದೆಗುಂದಿಸುವ ದಾಖಲೆಯು ಡಾರ್ವಿನ್ನ ಯೋಚನೆಯ ಮೇಲೆ ಗಣನೀಯವಾದ ಪ್ರಭಾವವನ್ನು ಬೀರಿತ್ತು. “ನಾನು ಕ್ರಮೇಣ ಕ್ರೈಸ್ತತ್ವವನ್ನು ಒಂದು ದೈವಿಕ ಪ್ರಕಟನೆಯಂತೆ ಸಂದೇಹಿಸಲು ತೊಡಗಿದೆ,” ಎಂದು ಅವನು ಬರೆದನು. “ಅನೇಕ ಸುಳ್ಳು ಧರ್ಮಗಳು ಭೂಮಿಯ ದೊಡ್ಡ ಭಾಗಗಳಲ್ಲಿ ಕಾಡುಕಿಚ್ಚಿನಂತೆ ಹರಡಿರುವ ನಿಜತ್ವವು ನನ್ನ ಮೇಲೆ ಸ್ವಲ್ಪ ಪ್ರಭಾವವನ್ನು ಬೀರಿತು.”
ಸತ್ಯ ಧರ್ಮದ ಜಯ
ಧಾರ್ಮಿಕ ಕಪಟಾಚರಣೆಯು ಈ ಲೋಕಕ್ಕೆ ಹೊಸದೇನೂ ಅಲ್ಲ. ತನ್ನ ದಿನದ ಅಧಿಕಾರ ಲಾಲಸೆಯ ಧಾರ್ಮಿಕ ನಾಯಕರಿಗೆ ಯೇಸು ಹೇಳಿದ್ದು: “ನೀವು ಹೊರಗೆ ಜನರಿಗೆ ಸತ್ಪುರುಷರಂತೆ ಕಾಣಿಸಿಕೊಳ್ಳುತ್ತೀರಿ, ಆದರೆ ಒಳಗೆ ಕಪಟದಿಂದಲೂ ದುಷ್ಟತನದಿಂದಲೂ ತುಂಬಿದವರಾಗಿದ್ದೀರಿ.”—ಮತ್ತಾಯ 23:28, ಫಿಲಿಪ್ಸ್.
ಯಥಾರ್ಥವಾದ ಕ್ರೈಸ್ತತ್ವವಾದರೊ, “ಲೋಕದ ಭಾಗವಾಗಿರುವುದಿಲ್ಲ.” (ಯೋಹಾನ 17:16, NW) ಅದರ ಹಿಂಬಾಲಕರು ಭ್ರಷ್ಟ ಧರ್ಮ ಹಾಗೂ ರಾಜಕೀಯದಲ್ಲಿ ಭಾಗವಹಿಸುವುದಿಲ್ಲ; ಅಷ್ಟೇ ಅಲ್ಲದೆ ಒಬ್ಬ ಸೃಷ್ಟಿಕರ್ತನ ಅಸ್ತಿತ್ವವನ್ನು ಅಲ್ಲಗಳೆಯುವ ತತ್ವಜ್ಞಾನಗಳ ಮೂಲಕ ಅವರು ತಪ್ಪು ದಾರಿಗೆ ಎಳೆಯಲ್ಪಡುವುದಿಲ್ಲ. “ಇಹಲೋಕ ಜ್ಞಾನವು ದೇವರ ಮುಂದೆ ಹುಚ್ಚುತನವಾಗಿದೆ,” ಎಂದು ಅಪೊಸ್ತಲ ಪೌಲನು ಬರೆದನು.—1 ಕೊರಿಂಥ 3:19.
ಆದರೂ, ನಿಜ ಕ್ರೈಸ್ತರು ವೈಜ್ಞಾನಿಕವಾಗಿ ಅಸಂಸ್ಕೃತರಾಗಿದ್ದಾರೆ ಎಂಬುದನ್ನು ಇದು ಅರ್ಥೈಸುವುದಿಲ್ಲ. ಅದಕ್ಕೆ ವಿರುದ್ಧವಾಗಿ, ಸತ್ಯ ಧರ್ಮದ ಹಿಂಬಾಲಕರು ವಿಜ್ಞಾನದ ಮೂಲಕ ಪ್ರಭಾವಿಸಲ್ಪಡುತ್ತಾರೆ. “ನಿನ್ನ ಕಣ್ಣುಗಳನ್ನು ಮೇಲಕ್ಕೆತ್ತಿಕೊಂಡು ನೋಡು,” ಎಂಬುದಾಗಿ ಪ್ರಾಚೀನ ಪ್ರವಾದಿಯಾದ ಯೆಶಾಯನಿಗೆ ಹೇಳಲಾಯಿತು. “ಇವುಗಳನ್ನು ಸೃಷ್ಟಿಸಿದಾತನು ಯಾರು?” (ಯೆಶಾಯ 40:26, NW) ತದ್ರೀತಿ, ಸೃಷ್ಟಿಕರ್ತನನ್ನು ಹೆಚ್ಚು ಉತ್ತಮವಾಗಿ ತಿಳಿಯಲು, ಪ್ರಕೃತಿಯ ಮತ್ತು ವಿಶ್ವದ ಅದ್ಭುತಗಳನ್ನು ಸಂಶೋಧಿಸುವಂತೆ ಯೋಬನನ್ನು ಆಮಂತ್ರಿಸಲಾಯಿತು.—ಯೋಬ ಅಧ್ಯಾಯಗಳು 38-41.
ಹೌದು, ಸೃಷ್ಟಿಕರ್ತನಲ್ಲಿ ನಂಬಿಕೆಯಿಡುವವರು ಸೃಷ್ಟಿಯನ್ನು ಗೌರವಾನಿತ್ವವಾದ ಭಕ್ತಿ ಹುಟ್ಟಿಸುವ ರೀತಿಯಲ್ಲಿ ವೀಕ್ಷಿಸುತ್ತಾರೆ. (ಕೀರ್ತನೆ 139:14) ಇದಲ್ಲದೆ, ಸೃಷ್ಟಿಕರ್ತನಾದ ಯೆಹೋವ ದೇವರು ಭವಿಷ್ಯದ ಆಶ್ಚರ್ಯಕರವಾದ ಒಂದು ನಿರೀಕ್ಷೆಯ ಕುರಿತು ಏನು ಹೇಳುತ್ತಾನೋ ಅದರಲ್ಲಿ ಅವರು ಭರವಸೆ ಇಡುತ್ತಾರೆ. (ಪ್ರಕಟನೆ 21:1-4) ಮನುಷ್ಯನ ಉಗಮವಾಗಲಿ ಯಾ ಅವನ ಭವಿಷ್ಯವಾಗಲಿ ವಿವೇಚನೆಯಿಲ್ಲದ ಅವಕಾಶದ ಮೇಲೆ ಅವಲಂಬಿಸಿಲ್ಲವೆಂದು, ಬೈಬಲಿನ ಅಭ್ಯಾಸದ ಮುಖಾಂತರ ಲಕ್ಷಾಂತರ ಜನರು ಕಲಿಯುತ್ತಿದ್ದಾರೆ. ಮನುಷ್ಯನನ್ನು ಉಂಟುಮಾಡುವುದರಲ್ಲಿ ಯೆಹೋವನಿಗೆ ಒಂದು ಉದ್ದೇಶವಿತ್ತು ಮತ್ತು—ಎಲ್ಲ ವಿಧೇಯ ಮಾನವರಿಗೆ ಆಶೀರ್ವಾದದಲ್ಲಿ—ಆ ಉದ್ದೇಶವು ನೆರವೇರುವುದು. ಸ್ವತಃ ನೀವೇ ವಿಷಯವನ್ನು ಪರೀಕ್ಷಿಸುವಂತೆ ನಾವು ನಿಮ್ಮನ್ನು ಆಮಂತ್ರಿಸುತ್ತೇವೆ.
[ಅಧ್ಯಯನ ಪ್ರಶ್ನೆಗಳು]
a ದ ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯ ಮೂಲಕ ಪ್ರಕಾಶಿಸಲಾದ ಅವೇಕ್! ನವಂಬರ 8, 1982, ಪುಟಗಳು 6-9, ಮತ್ತು ಇನ್ಸೈಟ್ ಆನ್ ದ ಸ್ಕ್ರಿಪ್ಚರ್ಸ್, ಸಂಪುಟ 1, ಪುಟ 545 ನೋಡಿರಿ. ಸೃಷ್ಟಿವಾದ ಮತ್ತು ಬೈಬಲ್ ಹಾಗೂ ವಿಜ್ಞಾನದೊಂದಿಗೆ ಅದರ ಘರ್ಷಣೆಗಳ ಕುರಿತು ಅಧಿಕ ಮಾಹಿತಿಗಾಗಿ, ಅವೇಕ್! ಸಂಚಿಕೆಗಳು, ಮಾರ್ಚ್ 8, 1983, ಪುಟಗಳು 12-15, ಮತ್ತು ಮಾರ್ಚ್ 22, 1983, ಪುಟಗಳು 12-15 ನೋಡಿರಿ.
[ಪುಟ 6 ರಲ್ಲಿರುವ ಚೌಕ]
ಪ್ರಮಾಣದ ಅರಿವಿಲ್ಲದವರೊ?
“ಯೆಹೋವನ ಸಾಕ್ಷಿಗಳು ಕೂಡ ಜೀವವಿಜ್ಞಾನದ ಬಗ್ಗೆ ಬಹಳಷ್ಟನ್ನು ಕಲಿತಿದ್ದಾರೆ,” ಎಂದು ಡಾರ್ವಿನ್ ಪುನಃಪರೀಕ್ಷಿಸಲ್ಪಟ್ಟದ್ದು—ವಿವೇಚನೆಗೆ ಒಂದು ಮನವೆ (ಇಂಗ್ಲಿಷ್) ಎಂಬ ತನ್ನ 1971ರ ಪುಸ್ತಕದಲ್ಲಿ ವಕೀಲನಾದ ನಾರ್ಮನ್ ಮ್ಯಾಕ್ಬತ್ ಬರೆದನು. ವಿಕಾಸದ ವಿಷಯದ ಮೇಲೆ ಒಂದು ಎಚ್ಚರ! ಲೇಖನವನ್ನು ಓದಿಯಾದ ಬಳಿಕ, ಮ್ಯಾಕ್ಬತ್ ಗಮನಿಸುವುದು: “ಅದು ಡಾರ್ವಿನ್ ತತ್ವದ ಬಗ್ಗೆ ಕೆಲವು ಬುದ್ಧಿವಂತಿಕೆಯ ಟೀಕೆಗಳನ್ನು ಹೊಂದಿರುವುದನ್ನು ಕಂಡು ನಾನು ವಿಸ್ಮಯಗೊಂಡೆ.” ವಿಸ್ತಾರವಾದ ಸಂಶೋಧನೆ ಮತ್ತು ವಿಷಯದ ಮೇಲಿರುವ ಪ್ರಮಾಣ ಗ್ರಂಥಗಳಿಂದ ತೆಗೆಯಲಾದ ವಿವೇಕವುಳ್ಳ ಉದ್ಧರಣೆಗಳನ್ನು ಗಮನಿಸುತ್ತಾ, ಗ್ರಂಥಕರ್ತನು ಮುಕ್ತಾಯಗೊಳಿಸಿದ್ದು: “‘. . . ಅದರಲ್ಲಿ [ವಿಕಾಸ] ನಂಬಿಕೆ ಇಡದವರು, ಬಹುತರ ಪ್ರತಿಯೊಬ್ಬ ಮನುಷ್ಯನು, ಸ್ಪಷ್ಟವಾಗಿಗಿ ವೈಜ್ಞಾನಿಕ ಪ್ರಮಾಣದ ಅರಿವಿಲ್ಲದೆ ಇದ್ದಾನೆ,’ ಎಂದು ಸಿಂಪ್ಸನ್ ಹೇಳುವುದು ಇನ್ನು ಮುಂದೆ ಸರಿಯಾಗಿರುವುದಿಲ್ಲ.”
[ಪುಟ 7 ರಲ್ಲಿರುವ ಚಿತ್ರ]
ಮಾನವಜಾತಿಯ ಭವಿಷ್ಯವು ವಿವೇಚನೆಯಿಲ್ಲದ ಅನಿರೀಕ್ಷಿತ ಘಟನೆಗೆ ಬಿಡಲ್ಪಟ್ಟಿರುವುದಿಲ್ಲ