ನಾಸ್ತಿಕತೆಯ ಬೇರುಗಳು
ಬಿಕ್ಕಟ್ಟು ತುಂಬಿರುವ ಭೂಗ್ರಹವೊಂದರಲ್ಲಿ ನಾವು ಜೀವಿಸುತ್ತಿದ್ದೇವೆ; ವಾರ್ತಾಪತ್ರದ ತಲೆಪಂಕ್ತಿಗಳೆಡೆಗೆ ಒಂದು ಕಣ್ಷಿಕ ನೋಟವು ಆ ವಾಸ್ತವಾಂಶವನ್ನು ದೃಢೀಕರಿಸುತ್ತದೆ. ನಮ್ಮ ಲೋಕದ ವಿಷಮ ಸ್ಧಿತಿಯು ಅನೇಕರಿಗೆ ದೇವರ ಅಸ್ತಿತ್ವವನ್ನು ಸಂದೇಹಿಸಲು ಕಾರಣವಾಗಿದೆ. ಕೆಲವರು, ನಾಸ್ತಿಕರಾಗಿರುವದಾಗಿ ವಾದಿಸುತ್ತಾ, ಆತನ ಅಸ್ತಿತ್ವವನ್ನೂ ನಿರಾಕರಿಸುತ್ತಾರೆ. ಅದು ನಿಮ್ಮ ವಿಷಯದಲ್ಲಿ ಸತ್ಯವಾಗಿದೆಯೋ?
ದೇವರಲ್ಲಿ ನಂಬಿಕೆ ಯಾ ಅಪನಂಬಿಕೆ ಭವಿಷ್ಯದ ಮೇಲಿನ ನಿಮ್ಮ ಹೊರನೋಟವನ್ನು ಗಾಢವಾಗಿ ಪ್ರಭಾವಿಸಬಲ್ಲದು. ದೇವರಿಲ್ಲದೆ, ಮಾನವ ಕುಲದ ಪಾರಾಗುವಿಕೆಯು ಸಂಪೂರ್ಣವಾಗಿ ಮಾನವನ ಕೈಯಲ್ಲಿದೆ—ಮನುಷ್ಯನ ವಿನಾಶಕಾರಿ ಸಾಮರ್ಥ್ಯವನ್ನು ಪರಿಗಣಿಸುವಾಗ, ಇದು ಒಂದು ನಿರಾಶಾದಾಯಕ ಯೋಚನೆ. ದೇವರು ಅಸ್ತಿತ್ವದಲ್ಲಿದ್ದಾನೆ ಎಂದು ನೀವು ನಂಬುತ್ತಿರುವುದಾದರೆ, ಈ ಭೂಗ್ರಹದ ಮೇಲೆ ಜೀವಿತಕ್ಕೆ ಒಂದು ಉದ್ದೇಶ—ಕಟ್ಟಕಡೆಗೆ ವಾಸ್ತವವಾಗಲಿರುವ ಒಂದು ಉದ್ದೇಶ—ವಿದೆ ಎಂದು ನೀವು ಪ್ರಾಯಶಃ ಸ್ವೀಕರಿಸುತ್ತೀರಿ.
ಇತಿಹಾಸದಲ್ಲೆಲ್ಲಾ ದೇವರ ಅಸ್ತಿತ್ವದ ಕುರಿತಾಗಿ ನಿರಾಕರಣೆಗಳು ವಿರಳವಾಗಿದ್ದವಾದರೂ, ನಾಸ್ತಿಕತೆಯ ಜನಪ್ರಿಯತೆಯು ಕೇವಲ ಇತ್ತೀಚೆಗಿನ ಶತಮಾನಗಳಲ್ಲಿ ಹರಡಿದೆ. ಏಕೆಂದು ನಿಮಗೆ ತಿಳಿದಿದೆಯೇ?
ಬೇರುಗಳನ್ನು ಗ್ರಹಿಸುವುದು
ಬಹಳ ಎತ್ತರವಾದ ಮರವೊಂದು ಭಾವೋತ್ಪಾದಕ ದೃಶ್ಯವಾಗಿದೆ. ಆದರೂ, ಕಣ್ಣು ಕೇವಲ ಎಲೆಗಳನ್ನು, ಕೊಂಬೆಗಳನ್ನು, ಮತ್ತು ಕಾಂಡವನ್ನು ಗ್ರಹಿಸುತ್ತದೆ. ಬೇರುಗಳು—ಮರದ ಜೀವದ ಮೂಲ—ನೆಲದಲ್ಲಿ ಆಳವಾಗಿ ಅಡಗಿರುತ್ತವೆ.
ನಾಸ್ತಿಕತೆಯೂ ಇದಕ್ಕೆ ಸರಿಸಮಾನವಾಗಿದೆ. ಒಂದು ಎತ್ತರವಾದ ಮರದಂತೆ, ದೇವರ ಅಸ್ತಿತ್ವದ ನಿರಾಕರಣೆಯು 19 ನೆಯ ಶತಮಾನದಷ್ಟಕ್ಕೆ ಒಂದು ಭಾವೋತ್ಪಾದಕ ಎತ್ತರಕ್ಕೆ ಬೆಳೆಯಿತು. ಜೀವ ಮತ್ತು ವಿಶ್ವ ಒಂದು ಅಲೌಕಿಕ ಮೂಲಶಕ್ತಿಯಿಲ್ಲದೆ ಅಸ್ತಿತ್ವದಲ್ಲಿರಬಲ್ಲದೋ? ಅಂತಹ ಸೃಷ್ಟಿಕರ್ತನೊಬ್ಬನ ಆರಾಧನೆಯು ಸಮಯದ ಹಾಳುಮಾಡುವಿಕೆಯಾಗಿದೆಯೇ? 19 ನೇ ಶತಮಾನದ ಪ್ರಮುಖ ತತ್ವಜ್ಞಾನಿಗಳಿಂದ ಉತ್ತರಗಳು ಪ್ರಬಲ ಮತ್ತು ಸ್ಪಷ್ಟವಾಗಿಗಿದ್ದವು. “ನಮಗೆ ಇನ್ನು ಮುಂದೆ ಒಂದು ನೈತಿಕ ನಿಯಮಾವಳಿಯ ಅಗತ್ಯವಿಲ್ಲದಿರುವಂತೆಯೇ, ನಮಗೆ ಧರ್ಮದ ಅಗತ್ಯವೂ ಇಲ್ಲ,” ಎಂದು ಫ್ರೀಡ್ರಿಕ್ ನೀಟ್ಚ ಘೋಷಿಸಿದರು. “ಧರ್ಮ ಮಾನವನ ಮನಸ್ಸಿನ ಸ್ಪಪ್ನವಾಗಿದೆ,” ಎಂದು ಲೂಟ್‌ವಿಕ್ ಫಾಯರ್‌ಬಾಕ್ ಪ್ರತಿಪಾದಿಸಿದರು. ಮತ್ತು ಯಾರ ಬರಹಗಳು ಮುಂದಿನ ದಶಕಗಳಲ್ಲಿ ತೀವ್ರ ಪ್ರಭಾವವನ್ನು ಬೀರಲಿದ್ದವೋ, ಆ ಕಾರ್ಲ್ ಮಾರ್ಕ್ಸ್, ಧೈರ್ಯದಿಂದ ಹೇಳಿದ್ದು: “ನಾನು ಮನಸ್ಸನ್ನು ಧರ್ಮದ ಬಂಧನಗಳಿಂದ ಹೆಚ್ಚು ಸ್ವತಂತ್ರಗೊಳಿಸಲು ಬಯಸುತ್ತೇನೆ.”
ಜನಸಮುದಾಯಗಳು ಪ್ರಭಾವಿತವಾದವು. ಆದಾಗ್ಯೂ, ಅವರು ಗ್ರಹಿಸಿದಂಥದ್ದು, ಕೇವಲ ನಾಸ್ತಿಕತ್ವದ ಎಲೆಗಳು, ಕೊಂಬೆಗಳು ಮತ್ತು ಕಾಂಡವಾಗಿತ್ತು. ಬೇರುಗಳು ತಕ್ಕ ಸ್ಥಳದಲ್ಲಿದ್ದು, 19 ನೆಯ ಶತಮಾನವು ಆರಂಭಿಸುವ ಬಹಳ ಸಮಯದ ಮುಂಚೆ ಚಿಗುರಿದ್ದವು. ಆಶ್ಚರ್ಯಕರವಾಗಿ, ನಾಸ್ತಿಕತೆಯ ಆಧುನಿಕ ಬೆಳವಣಿಗೆಯು ಕ್ರೈಸ್ತಪ್ರಪಂಚದ ಧರ್ಮಗಳಿಂದ ಪೋಷಿಸಲ್ಪಟ್ಟಿತ್ತು! ಅದು ಹೇಗೆ? ಅವರ ಭ್ರಷ್ಟತೆಯ ಕಾರಣ, ಈ ಧಾರ್ಮಿಕ ಸಂಸ್ಥೆಗಳು ತುಂಬಾ ಭ್ರಮನಿರಸನ ಮತ್ತು ಪ್ರತಿಭಟನೆಯನ್ನು ಕೆರಳಿಸಿದವು.
ಬೀಜಗಳು ಬಿತ್ತಲ್ಪಡುತ್ತವೆ
ಮಧ್ಯ ಯುಗಗಳಲ್ಲಿ, ಕ್ಯಾತೊಲಿಕ್ ಚರ್ಚಿಗೆ ತನ್ನ ಪ್ರಜೆಗಳ ಮೇಲೆ ಒಂದು ಬಿಗಿಹಿಡಿತವಿತ್ತು. “ಜನರ ಆತ್ಮಿಕ ಅಗತ್ಯತೆಗಳೊಂದಿಗೆ ವ್ಯವಹರಿಸಲು ಪುರೋಹಿತ ಪ್ರಭುತ್ವವು ಚೆನ್ನಾಗಿ ಸಜ್ಜಿತವಾಗಿರಲಿಲ್ಲವೆಂದು ತೋರಿತು” ಎಂಬದಾಗಿ ದಿ ಎನ್‌ಸೈಕ್ಲೊಪೀಡಿಯಾ ಅಮೆರಿಕಾನಾ ಗಮನಿಸಿತು. “ಉಚ್ಚ ಪದವಿಯ ಪಾದ್ರಿವರ್ಗದವರು, ವಿಶೇಷವಾಗಿ ಬಿಷಪರುಗಳು, ಶ್ರೀಮಂತ ಅಂತಸ್ತಿನಿಂದ ಸೇರಿಸಲ್ಪಟ್ಟಿದ್ದರು ಮತ್ತು ತಮ್ಮ ಪದವಿಯನ್ನು ಮುಖ್ಯವಾಗಿ ಪ್ರತಿಷ್ಠೆ ಮತ್ತು ಅಧಿಕಾರದ ಮೂಲವಾಗಿ ಎಣಿಸಿದರು.”
ಜಾನ್ ಕ್ಯಾಲ್‌ವಿನ್ ಮತ್ತು ಮಾರ್ಟಿನ್ ಲೂತರ್‌ರಂತಹ ಕೆಲವರು, ಚರ್ಚನ್ನು ಸುಧಾರಿಸಲು ಪ್ರಯತ್ನಿಸಿದರು. ಹಾಗಿದ್ದರೂ, ಅವರ ವಿಧಾನಗಳು ಕ್ರೈಸ್ತಸದೃಶವಾಗಿರಲಿಲ್ಲ; ಅಸಹಿಷ್ಣುತೆ ಮತ್ತು ರಕ್ತಪಾತವು ಸುಧಾರಣೆಯನ್ನು ಗುರುತಿಸಿತು. (ಮತ್ತಾಯ 26:52ನ್ನು ಹೋಲಿಸಿರಿ.) ಕೆಲವು ಆಕ್ರಮಣಗಳು ಎಷ್ಟು ಕೆಡುಕಿನದ್ದಾಗಿದ್ದವು ಅಂದರೆ, ಮೂರು ಶತಮಾನಗಳ ನಂತರ, ಅಮೆರಿಕದ ಮೂರನೆಯ ರಾಷ್ಟ್ರಾಧ್ಯಕ್ಷರಾದ ತಾಮಸ್ ಜೆಫರ್‌ಸನ್ ಹೀಗೆ ಬರೆದರು: “ಕ್ಯಾಲ್‌ವಿನ್‌ರ ಅತ್ಯಸಹ್ಯಕರ ಗುಣಲಕ್ಷಣಗಳಿಂದ ದೇವರನ್ನು ನಿಂದಿಸುವದಕ್ಕಿಂತ, ಯಾವ ದೇವರಲ್ಲೂ ನಂಬದೆ ಇರುವುದು ಕ್ಷಮಿಸಲ್ಪಡಲು ಹೆಚ್ಚು ಅರ್ಹವಾಗಿರುವದು.”a
ಸ್ಪಷ್ಟವಾಗಿಗಿ, ಸುಧಾರಣೆಯು ಶುದ್ಧಾರಾಧನೆಯನ್ನು ಪುನಃಸ್ಥಾಪಿಸಲಿಲ್ಲ. ಆದರೆ, ಅದು ಕ್ಯಾತೊಲಿಕ್ ಚರ್ಚಿನ ಶಕ್ತಿಯನ್ನು ಕಡಿಮೆಗೊಳಿಸಿತು. ಇನ್ನು ಮುಂದೆ ಧಾರ್ಮಿಕ ನಂಬಿಕೆಯ ಮೇಲೆ ವ್ಯಾಟಿಕನ್ನಿಗೆ ಪೂರ್ಣಾಧಿಕಾರವಿರಲಿಲ್ಲ. ಹೊಸತಾಗಿ ರಚಿಸಲ್ಪಟ್ಟ ಪ್ರಾಟೆಸ್ಟಂಟ್ ಪಂಗಡಗಳನ್ನು ಅನೇಕರು ಸೇರಿಕೊಂಡರು. ಇತರರು, ಧರ್ಮದಿಂದ ಭ್ರಮನಿರಸನಗೊಂಡು, ಮಾನವ ಮನಸ್ಸನ್ನು ಅವರ ಆರಾಧನೆಯ ವಸ್ತುವನ್ನಾಗಿ ಮಾಡಿದ್ದರು. ದೇವರ ಕುರಿತಾದ ನಾನಾವಿಧದ ಅಭಿಪ್ರಾಯಗಳಿಗೆ ಅವಕಾಶ ನೀಡುತ್ತಾ, ಒಂದು ಉದಾರ ದೃಷ್ಟಿಯ ಮನೋಭಾವವು ಪರಿಣಮಿಸಿತು.
ಸಂದೇಹವಾದ ಚಿಗುರುತ್ತದೆ
18 ನೆಯ ಶತಮಾನದೊಳಗೆ, ವಿಚಾರ ವಾದದ ಆಲೋಚನೆಯು ಲೋಕದ ಸಮಸ್ಯೆಗಳಿಗೆ ಸರ್ವರೋಗಾಪಹಾರಿಯಾಗಿ ಅತಿಶಯವಾಗಿ ಹೊಗಳಲ್ಪಟ್ಟಿತ್ತು. ಜರ್ಮನ್ ತತ್ವಜ್ಞಾನಿ ಇಮ್ಮಾನುವೆಲ್ ಕಾಂಟ್ ಪ್ರತಿಪಾದಿಸಿದ್ದೇನಂದರೆ, ಮಾರ್ಗದರ್ಶನೆಗಾಗಿ ರಾಜಕೀಯ ಮತ್ತು ಧರ್ಮದ ಮೇಲಿನ ಅವನ ಅವಲಂಬನೆಯಿಂದಾಗಿ ಮಾನವನ ಪ್ರಗತಿಯು ಪ್ರತಿಬಂಧಿಸಲ್ಪಟ್ಟಿದೆ. “ಬಹು ಶ್ರುತರಾಗಿರಲು ಸಾಕಷ್ಟು ಧೈರ್ಯವುಳ್ಳವರಾಗಿರ್ರಿ!” ಎಂದು ಅವನು ಪ್ರಚೋದಿಸಿದನು. “ನಿಮ್ಮ ಸ್ವಂತ ಬುದ್ಧಿಶಕ್ತಿಯನ್ನು ಉಪಯೋಗಿಸಲು ಧೈರ್ಯವುಳ್ಳವರಾಗಿರಿ!”
ಈ ಮನೋಭಾವನೆಯು ಜ್ಞಾನೋದಯದ (ಎನ್‌ಲೈಟನ್‌ಮೆಂಟ್)—ವಿವೇಚನೆಯ ಯುಗವೆಂದೂ ಪ್ರಸಿದ್ಧವಾಗಿರುವ—ಯುಗವನ್ನು ವಿಶಿಷ್ಟೀಕರಿಸಿತು. 18 ನೆಯ ಶತಮಾನದ ಉದ್ದಕ್ಕೂ ಬಾಳುತ್ತಾ, ಈ ಅವಧಿಯು ಜ್ಞಾನಕ್ಕಾಗಿ ಒಂದು ಎಡೆಬಿಡದ ಅನ್ವೇಷಣೆಯಿಂದ ಗುರುತಿಸಲ್ಪಟ್ಟಿತು. ಮೈಲ್‌ಸ್ಟೋನ್ಸ್ ಆಫ್ ಹಿಸ್ಟರಿ ಎಂಬ ಪುಸ್ತಕವು, “ಕುರುಡು ನಂಬಿಕೆಯ ಸ್ಥಾನದಲ್ಲಿ ಸಂದೇಹವಾದವು ಬಂತು,” ಎಂದು ಹೇಳುತ್ತದೆ. “ಎಲ್ಲಾ ಹಳೆಯ ಸಾಂಪ್ರದಾಯಿಕ ನಂಬಿಕೆಗಳು ಮತ್ತು ಆಚರಣೆಗಳು ಪ್ರಶ್ನಿಸಲ್ಪಟ್ಟವು.”
ಪರಿಶೀಲನೆಗೊಳಗಾದ ಒಂದು ‘ಹಳೆಯ ಸಂಪ್ರದಾಯಬದ್ಧತೆ’ಯು ಧರ್ಮವಾಗಿತ್ತು. “ಜನರು ಧರ್ಮದ ಮೇಲಿನ ತಮ್ಮ ಹೊರನೋಟವನ್ನು ಬದಲಾಯಿಸಿದರು,” ಎಂದು ದಿ ಯೂನಿವರ್ಸಲ್ ಹಿಸ್ಟರಿ ಆಫ್ ದ ವರ್ಲ್ಡ್ ಎಂಬ ಪುಸ್ತಕ ಹೇಳುತ್ತದೆ. “ಅವರು ಸ್ವರ್ಗದಲ್ಲಿ ಬಹುಮಾನಗಳ ಕುರಿತಾದ ವಾಗ್ದಾನಗಳೊಂದಿಗೆ ಇನ್ನು ಮುಂದೆ ತೃಪ್ತರಾಗಿರಲಿಲ್ಲ; ಅವರು ಭೂಮಿಯ ಮೇಲೆ ಒಂದು ಉತ್ತಮ ಜೀವನವನ್ನು ಒತ್ತಾಯಮಾಡಿ ಕೇಳಿಕೊಳ್ಳುತ್ತಿದ್ದರು. ಅವರು ಅಲೌಕಿಕತೆಯಲ್ಲಿ ತಮ್ಮ ವಿಶ್ವಾಸವನ್ನು ಕಳೆದುಕೊಳ್ಳಲಾರಂಭಿಸಿದರು.” ನಿಜವಾಗಿಯೂ, ಹೆಚ್ಚಿನ ಜ್ಞಾನೋದಯ ತತ್ವಜ್ಞಾನಿಗಳು ಧರ್ಮವನ್ನು ತುಚ್ಛವಾಗಿ ದೃಷ್ಟಿಸುತ್ತಿದ್ದರು. ಜನರನ್ನು ಅಜ್ಞಾನದಲ್ಲಿ ಇಟ್ಟದ್ದಕ್ಕಾಗಿ ನಿರ್ದಿಷ್ಟವಾಗಿ ಕ್ಯಾತೊಲಿಕ್ ಚರ್ಚಿನ, ಅಧಿಕಾರಕ್ಕಾಗಿ ಹಸಿದಿರುವ, ಮುಖಂಡರನ್ನು ಅವರು ದೂಷಿಸಿದರು.
ಧರ್ಮದೊಂದಿಗೆ ಅತೃಪ್ತರಾಗಿ, ಈ ತತ್ವಜ್ಞಾನಿಗಳಲ್ಲಿ ಅನೇಕರು ತಾರ್ಕಿಕ ದೈವವಾದಿಗಳಾದರು; ಅವರು ದೇವರಲ್ಲಿ ನಂಬಿದ್ದರು ಆದರೆ ಅವನಿಗೆ ಮನುಷ್ಯನಲ್ಲಿ ಯಾವುದೇ ಆಸಕ್ತಿಯಿರಲಿಲ್ಲವೆಂದು ಪ್ರತಿಪಾದಿಸಿದರು.b ತತ್ವಜ್ಞಾನಿ ಪೌಲ್ ಹೆನ್ರಿ ಮತ್ತು ಧರ್ಮವು “ವಿಭಜನೆಗಳ, ಹುಚ್ಚುತನ, ಮತ್ತು ದುಷ್ಕೃತ್ಯಗಳ ಮೂಲವಾಗಿದೆ” ಎಂದು ವಾದಿಸಿದ ಟೀರಿ ಹೊಲ್‌ಬಾಕ್‌ರಂತಹ ಕೆಲವರು ಮುಚ್ಚುಮರೆಯಿಲ್ಲದೆ ಮಾತಾಡುವ ನಾಸ್ತಿಕರಾದರು. ವರ್ಷಗಳು ಗತಿಸಿದಂತೆ, ಇನ್ನೂ ಹೆಚ್ಚಿನವರು ಕ್ರೈಸ್ತಪ್ರಪಂಚದೊಂದಿಗೆ ಬೇಸರಗೊಂಡರು ಮತ್ತು ಹೊಲ್‌ಬಾಕ್‌ರ ರಸಭಾವಗಳೊಂದಿಗೆ ಸಮ್ಮತಿಸಿದರು.
ಕ್ರೈಸ್ತಪ್ರಪಂಚವು ನಾಸ್ತಿಕತ್ವದ ಬೆಳವಣಿಗೆಯನ್ನು ಪ್ರೇರಿಸಿತ್ತಾ ಇತ್ತು ಎಂಬದು ಎಷ್ಟು ಹಾಸ್ಯವ್ಯಂಗ್ಯ! ದೇವತಾಶಾಸ್ತ್ರದ ಪ್ರೊಫೆಸರ್ ಮೈಕಲ್ ಜೆ. ಬಕ್ಲೀ “ಚರ್ಚುಗಳು ನಾಸ್ತಿಕತೆಯ ಬೆಳವಣಿಗೆಯ ಮಾಧ್ಯಮವಾಗಿದ್ದವು” ಎಂದು ಬರೆಯುತ್ತಾನೆ. “ಯೂರೋಪ್ ಮತ್ತು ಅಮೆರಿಕದಲ್ಲಿರುವ ಜನರ ನೈತಿಕ ಸಂವೇದನಾ ಶಕ್ತಿಗಳು ಪಾಪನಿವೇದನೆಯ ಧರ್ಮಗಳಿಂದ ಆಳವಾಗಿ ಜುಗುಪ್ಸೆಗೊಂಡವು. ಚರ್ಚುಗಳು ಮತ್ತು ಪಂಗಡಗಳು ಯೂರೋಪನ್ನು ಭಗ್ನಗೊಳಿಸಿದ್ದವು, ಕಗ್ಗೊಲೆಗಳ ಹೂಟಹೂಡಿದ್ದವು, ಧಾರ್ಮಿಕ ಪ್ರತಿಭಟನೆ ಅಥವಾ ಕ್ರಾಂತಿಯನ್ನು ಒತ್ತಾಯಿಸಿದವು, ಚಕ್ರವರ್ತಿಗಳನ್ನು ಬಹಿಷ್ಕರಿಸಲು ಅಥವಾ ಪದಚ್ಯುತಗೊಳಿಸಲು ಪ್ರಯತ್ನಿಸಿದವು.”
ನಾಸ್ತಿಕತ್ವವು ಅದರ ಪೂರ್ಣ ಎತ್ತರವನ್ನು ಮುಟ್ಟುತ್ತದೆ
19 ನೆಯ ಶತಮಾನದೊಳಗೆ, ದೇವರ ನಿರಾಕರಣೆ ಬಹಿರಂಗವಾಗಿ ವರ್ಧಿಸುತ್ತಿತ್ತು. ತತ್ವಜ್ಞಾನಿಗಳು ಮತ್ತು ವಿಜ್ಞಾನಿಗಳಿಗೆ ತಮ್ಮ ಅಭಿಪ್ರಾಯಗಳನ್ನು ಧೈರ್ಯದಿಂದ ಘೋಷಿಸಲು ಯಾವ ಅಳುಕುಗಳೂ ಇರಲಿಲ್ಲ. ಒಬ್ಬ ಮುಚ್ಚುಮರೆಯಿಲ್ಲದೆ ಮಾತಾಡುವ ನಾಸ್ತಿಕನು “ದೇವರು ನಮ್ಮ ಶತ್ರುವಾಗಿದ್ದಾನೆ,” ಎಂದು ಘೋಷಿಸಿದನು. “ದೇವರ ದ್ವೇಷವು ತಿಳಿವಳಿಕೆಯ ಮೂಲ. ಮಾನವಕುಲವು ನಿಜ ಪ್ರಗತಿಯನ್ನು ಮಾಡಬೇಕಾದರೆ, ಅದು ನಾಸ್ತಿಕತೆಯ ಆಧಾರದ ಮೇಲೆ ಆಗಬೇಕು.”
ಆದಾಗ್ಯೂ, 20 ನೆಯ ಶತಮಾನದಲ್ಲಿ ಒಂದು ಸೂಕ್ಷ್ಮ ರೂಪಾಂತರವು ಸಂಭವಿಸಿತು. ದೇವರ ನಿರಾಕರಣೆ ಕಡಿಮೆ ಆಕ್ರಮಣಕಾರಿಯಾಯಿತು; ದೇವರಲ್ಲಿ ನಂಬುತ್ತೇವೆಂದು ಹೇಳಿಕೊಳ್ಳುವವರನ್ನು ಸಹ ಬಾಧಿಸಿದ, ಒಂದು ಬೇರೆ ವಿಧದ ನಾಸ್ತಿಕತೆಯು ಹರಡಲು ಪ್ರಾರಂಭವಾಯಿತು.
[ಅಧ್ಯಯನ ಪ್ರಶ್ನೆಗಳು]
a ಸುಧಾರಣೆಯಿಂದ ಪರಿಣಮಿಸಿದ ಪ್ರಾಟೆಸ್ಟಂಟ್ ಪಂಗಡಗಳು ಹಲವಾರು ಅಶಾಸ್ತ್ರೀಯ ಬೋಧನೆಗಳನ್ನು ಇಟ್ಟುಕೊಂಡವು. ಎಚ್ಚರ!ದ ಸಂಚಿಕೆ ಆಗಸ್ಟ್ 22, 1989, ಪುಟಗಳು 16-20, ಮತ್ತು ಸಪ್ಟಂಬರ 8, 1989, ಪುಟಗಳು 23-7 ನ್ನು ನೋಡಿರಿ.
b ತಾರ್ಕಿಕ ದೈವವಾದಿಗಳು ವಾದಿಸಿದ್ದೇನಂದರೆ, ಒಬ್ಬ ಗಡಿಯಾರಗಾರನಂತೆ, ದೇವರು ಆತನ ಸೃಷ್ಟಿಯನ್ನು ಕಾರ್ಯರೂಪಕ್ಕೆ ಹಾಕಿ ಅನಂತರ ಅದರಿಂದ ತನ್ನ ಗಮನವನ್ನು ಸಂಪೂರ್ಣವಾಗಿ ತೆಗೆದುಹಾಕಿ, ಉದಾಸೀನಭಾವದವನಾಗಿ ಉಳಿದನು. ದ ಮಾಡರ್‌ನ್ ಹೆರಿಟೆಜ್ ಪುಸ್ತಕಕ್ಕನುಸಾರ, ದೈವವಾದಿಗಳು “ನಾಸ್ತಿಕತ್ವವು ನಿರಾಶರಾಗಿದ್ದ ಜನರಿಂದ ಮಾಡಲ್ಪಟ್ಟ ಒಂದು ತಪ್ಪು ಆಗಿತ್ತೆಂದೂ ಆದರೆ ಕ್ಯಾತೊಲಿಕ್ ಚರ್ಚಿನ ಸರ್ವಾಧಿಕಾರದ ರಚನೆ ಮತ್ತು ಅದರ ಭೋದನೆಗಳ ನಿಷ್ಠುರತೆ ಹಾಗೂ ಅಸಹಿಷ್ಣುತೆ ಇನ್ನೂ ಹೆಚ್ಚು ವ್ಯಸನಕರವಾಗಿದವ್ದೆಂದು ನಂಬಿದರು.”
[ಪುಟ 3 ರಲ್ಲಿರುವ ಚಿತ್ರ]
ಕಾರ್ಲ್ ಮಾರ್ಕ್ಸ್
[ಪುಟ 3 ರಲ್ಲಿರುವ ಚಿತ್ರ]
ಲೂಟ್‌ವಿಕ್ ಫಾಯರ್‌ಬಾಕ್
[ಪುಟ 3 ರಲ್ಲಿರುವ ಚಿತ್ರ]
ಫ್ರೀಡ್ರಿಕ್ ನೀಟ್ಚ
[ಪುಟ 2 ರಲ್ಲಿರುವ ಚಿತ್ರ ಕೃಪೆ]
COVER: Earth: By permission of the British Library; Nietzsche: Copyright British Museum (see also page 3); Calvin: Musée Historique de la Réformation, Genève (Photo F. Martin); Marx: U.S. National Archives photo (see also page 3); Planets, instruments, crusaders, locomotive: The Complete Encyclopedia of Illustration/J. G. Heck; Feuerbach: The Bettmann Archive (see also page 3)