ಸಾರ್ವಜನಿಕ ಅಪಮಾನವನ್ನು ಕ್ರೈಸ್ತರು ನಿಭಾಯಿಸುವ ವಿಧ
ಯಾರಾದರೊಬ್ಬರು ನಿಮಗೆ ಅಪಮಾನ ಮಾಡುವಾಗ ಅಥವಾ ನಿಮ್ಮ ಕುರಿತು ಸುಳ್ಳುಗಳನ್ನು ಹರಡುವಾಗ ನಿಮಗೆ ಹೇಗನಿಸುತ್ತದೆ? ಸಹಜವಾಗಿಯೆ ನೀವು ತೀವ್ರವಾಗಿ ನೋಯಿಸಲ್ಪಡುತ್ತೀರಿ. ವಾರ್ತಾ ಮಾಧ್ಯಮದಲ್ಲಿ ಯೆಹೋವನ ಸಾಕ್ಷಿಗಳು ತಪ್ಪಾದ ಅಥವಾ ವಿಕೃತ ಸಮಾಚಾರದ ಗುರಿಯಾಗಿ ಪರಿಣಮಿಸುವಾಗೆಲ್ಲಾ, ಅವರು ತದ್ರೀತಿಯ ನೋವನ್ನು ಅನುಭವಿಸುತ್ತಾರೆ. ಆದರೆ, ಮತ್ತಾಯ 5:11, 12 ರಲ್ಲಿ ಯೇಸು ಹೇಳಿದಂತೆ, ಹರ್ಷಭರಿತರಾಗಿರಲು ಅವರಿಗೆ ಇನ್ನೂ ಕಾರಣವಿದೆ.
ಉದಾಹರಣೆಗಾಗಿ, “ಪ್ರತಿಯೊಬ್ಬ ಸಾಕ್ಷಿಯು ಪಂಥದ ಮುಖ್ಯ ಕಾರ್ಯಾಲಯಕ್ಕೆ ತನ್ನ ಆದಾಯದ 17 ರಿಂದ 28 ಪ್ರತಿಶತವನ್ನು ದಾನ ಮಾಡುವಂತೆ ಬದ್ಧನಾಗಿದ್ದಾನೆ” ಎಂದು ಜರ್ಮನಿಯಲ್ಲಿ ಒಂದು ಕ್ಯಾತೊಲಿಕ್ ಪ್ರಕಾಶನವು ಪ್ರತಿಪಾದಿಸಿತು. ಯೆಹೋವನ ಸಾಕ್ಷಿಗಳಾದರೊ, ಒಂದು ಪಂಥವನ್ನು ರಚಿಸುವುದಿಲ್ಲ, ಮತ್ತು ಅವರ ಕೆಲಸಕ್ಕೆ ಸಂಪೂರ್ಣವಾಗಿ ಸ್ವಯಂ ಕಾಣಿಕೆಗಳ ಮೂಲಕ ಹಣಕಾಸು ಒದಗಿಸಲ್ಪಡುತ್ತದೆ. ತಪ್ಪಾದ ಈ ವರ್ತಮಾನದಿಂದ ಅನೇಕ ವಾಚಕರು ದಾರಿ ತಪ್ಪಿಸಲ್ಪಟ್ಟರು, ಅದನ್ನು ಯೆಹೋವನ ಸಾಕ್ಷಿಗಳು ವಿಷಾದಕರವಾದದ್ದಾಗಿ ಕಂಡುಕೊಳ್ಳುತ್ತಾರೆ. ಆದರೆ ವಾರ್ತಾ ಮಾಧ್ಯಮದಲ್ಲಿ ಬರುವ ಅಪಮಾನಕ್ಕೆ ನಿಜ ಕ್ರೈಸ್ತರು ಹೇಗೆ ಪ್ರತಿಕ್ರಿಯೆ ತೋರಿಸಬೇಕು?
ಕ್ರೈಸ್ತರಿಗೆ ಅನುಸರಿಸಲಿಕ್ಕಾಗಿರುವ ಒಂದು ಮಾದರಿ
ಆತನ ಧಾರ್ಮಿಕ ವಿರೋಧಿಗಳ ಕಪಟಾಚರಣೆ ಮತ್ತು ವಂಚನೆಗಾಗಿ ಯೇಸು ಅವರನ್ನು ಹೇಗೆ ಬಹಿರಂಗವಾಗಿ ಖಂಡಿಸಿದನೆಂಬುದನ್ನು ಮತ್ತಾಯ 23 ನೆಯ ಅಧ್ಯಾಯವು ಸುವ್ಯಕ್ತವಾಗಿ ವಿವರಿಸುತ್ತದೆ. ಟೀಕೆಗಾರರೊಂದಿಗೆ ಹೇಗೆ ವ್ಯವಹರಿಸಬೇಕು ಎಂಬುದರ ಕುರಿತು, ಇಂದು ಕ್ರೈಸ್ತರಿಗಾಗಿ ಇದು ಒಂದು ಮಾದರಿಯನ್ನು ಒದಗಿಸುತ್ತದೊ? ನಿಜವಾಗಿಯೂ ಇಲ್ಲ. ಕಿವಿಗೊಡುತ್ತಿದ್ದ ಗುಂಪುಗಳ ಪ್ರಯೋಜನಕ್ಕಾಗಿ ಹಾಗೆ ಮಾಡುತ್ತಾ, ಆತನಿಗಿದ್ದ ಅಪೂರ್ವವಾದ ಅಧಿಕಾರ ಮತ್ತು ಸೂಕ್ಷ್ಮ ಪರಿಜ್ಞಾನದ ಕಾರಣದಿಂದ, ದೇವಕುಮಾರನು ತನ್ನ ಧಾರ್ಮಿಕ ವಿರೋಧಿಗಳನ್ನು ಬಹಿರಂಗವಾಗಿ ಖಂಡಿಸಿದನು.
ಯೇಸುವಿನ ಶಿಷ್ಯರು ಯೆಹೂದಿ ಸಂಪ್ರದಾಯವನ್ನು ಅತಿಕ್ರಮಿಸಿದರೆಂದು ಹೇಳಲ್ಪಟ್ಟಿದ್ದ ಕಾರಣದಿಂದ ಯೇಸು ಟೀಕಿಸಲ್ಪಟ್ಟನೆಂದು ಮತ್ತಾಯ 15:1-11 ವಿವರಿಸುತ್ತದೆ. ಯೇಸು ಹೇಗೆ ಪ್ರತಿಕ್ರಿಯಿಸಿದನು? ಯೇಸು ನಿಶ್ಚಲನಾಗಿ, ಮಣಿಯದೆ ಉಳಿದನು. ಅವರ ತಪ್ಪು ದೃಷ್ಟಿಕೋನಗಳನ್ನು ತಪ್ಪೆಂದು ಸಿದ್ಧಮಾಡಿಕೊಡುತ್ತಾ, ಕೆಲವೊಂದು ಸಂದರ್ಭಗಳಲ್ಲಿ ಯೇಸು ತನ್ನ ಟೀಕೆಗಾರರೊಂದಿಗೆ ಮುಚ್ಚುಮರೆಯಿಲ್ಲದೆ ವಾದಿಸಿದನು. ಸಾಮಾನ್ಯವಾಗಿ ಮಾತಾಡುವಾಗ, ಇಂದು ಕ್ರೈಸ್ತರು, ಸನ್ನಿವೇಶವನ್ನು ಒಂದು ವಾಸ್ತವಿಕವಾದ ಮತ್ತು ತರ್ಕಬದ್ಧವಾದ ವಿಧಾನದಲ್ಲಿ ವಿಶದಗೊಳಿಸಲು ಯತ್ನಿಸುತ್ತಾ, ತಮ್ಮ ಕೆಲಸ ಅಥವಾ ಬೋಧನೆಗಳ ಕುರಿತಾದ ತಪ್ಪು ನಿರೂಪಣೆಗಳನ್ನು ಸರಿಪಡಿಸಲು ಪ್ರಯತ್ನಿಸುವುದು ತಪ್ಪಾಗಿರುವುದಿಲ್ಲ. ಯೆಹೋವನ ಸಾಕ್ಷಿಗಳ ಕುರಿತಾದ ಟೀಕೆಯು ನಿರಾಧಾರವಾದದ್ದೂ ಅಪಖ್ಯಾತಿಕರವೂ ಆಗಿದೆ ಎಂಬುದನ್ನು ಪ್ರಾಮಾಣಿಕ ಜನರು ಗ್ರಹಿಸುವಂತೆ ಸಹಾಯ ಮಾಡಲಿಕ್ಕಾಗಿ ಅವರು ಇದನ್ನು ಮಾಡುತ್ತಾರೆ.
ಆದರೆ ತನ್ನ ಶಿಷ್ಯರು ಹೇಳಿದ ವಿಷಯಕ್ಕೆ ಯೇಸು ಸ್ವಲ್ಪ ಸಮಯದ ಬಳಿಕ ಹೇಗೆ ಪ್ರತಿಕ್ರಿಯಿಸಿದನೆಂಬುದನ್ನು ಗಮನಿಸಿ: “ಫರಿಸಾಯರು ಈ ಮಾತನ್ನು ಕೇಳಿ ಬೇಸರಗೊಂಡರೆಂದು [“ಎಡವಿದರು,” NW] ನಿನಗೆ ಗೊತ್ತಾಯಿತೋ.” ಈ ಫರಿಸಾಯರು “ಎಡವಿದರು,” ಅವರು ಕೇವಲ ಕ್ಷೋಭೆಗೊಂಡದ್ದು ಮಾತ್ರವಲ್ಲ, ಯೇಸು ಯಾರನ್ನು ತಿರಸ್ಕರಿಸಿದನೋ ಆ ತಿದ್ದಲಾಗದ ವಿರೋಧಿಗಳಾಗಿಯೂ ಪರಿಣಮಿಸಿದರು. ಆದುದರಿಂದ ಆತನು ಉತ್ತರಿಸಿದ್ದು: “ಅವರ ಮಾತನ್ನು ಬಿಡಿರಿ; ತಾವೇ ಕುರುಡರು.” ಅಂತಹ ವಿರೋಧಿಸುವ ವೈರಿಗಳೊಂದಿಗೆ ಇನ್ನೂ ಹೆಚ್ಚಿನ ಚರ್ಚೆಯು ಅರ್ಥವಿಲ್ಲದ್ದಾಗಿತ್ತು, ಇದರಿಂದ ಯಾರೊಬ್ಬರಿಗೂ ಪ್ರಯೋಜನವಿರಲಿಲ್ಲ, ಮತ್ತು ಅದು ಕೇವಲ ಫಲರಹಿತ ವಾಗ್ವಾದವೊಂದಕ್ಕೆ ನಡಿಸಸಾಧ್ಯವಿತ್ತು. (ಮತ್ತಾಯ 7:6; 15:12-14; ಹೋಲಿಸಿ 27:11-14.) “ಸುಮ್ಮನಿರುವ ಸಮಯ, ಮಾತಾಡುವ ಸಮಯ” ಇದೆ ಎಂಬುದನ್ನು ಯೇಸು ಕೊಟ್ಟ ಉತ್ತರಗಳು ತೋರಿಸುತ್ತವೆ.—ಪ್ರಸಂಗಿ 3:7.
ಪ್ರತಿಯೊಬ್ಬರು ತಮ್ಮ ಕುರಿತು ಸಮ್ಮತಿ ಸೂಚಕವಾಗಿ ಮಾತಾಡುವಂತೆ ಯೆಹೋವನ ಸಾಕ್ಷಿಗಳು ನಿರೀಕ್ಷಿಸುವುದಿಲ್ಲ. ಯೇಸುವಿನ ಮಾತುಗಳನ್ನು ಅವರು ಮನಸ್ಸಿನಲ್ಲಿಡುತ್ತಾರೆ: “ಜನರೆಲ್ಲಾ ನಿಮ್ಮನ್ನು ಹೊಗಳಿದರೆ ನಿಮ್ಮ ಗತಿಯನ್ನು ಏನು ಹೇಳಲಿ! ಅವರ ಪಿತೃಗಳು ಸುಳ್ಳುಪ್ರವಾದಿಗಳನ್ನು ಹಾಗೆಯೇ ಹೊಗಳಿದರು.” (ಲೂಕ 6:26) ವಾಚ್ ಟವರ್ ಸೊಸೈಟಿಯ ಪ್ರಥಮ ಅಧ್ಯಕ್ಷರಾದ ಸಿ. ಟಿ. ರಸಲ್ರನ್ನು, ಅಪಮಾನದ ವಿರುದ್ಧವಾಗಿ ತಮ್ಮನ್ನು ಏಕೆ ಅವರನ್ನು ರಕ್ಷಿಸಿಕೊಳ್ಳಲಿಲ್ಲ ಎಂದು ಒಮ್ಮೆ ಕೇಳಲಾಯಿತು. ಅವರು ಉತ್ತರಿಸಿದ್ದು: “ನಿಮ್ಮನ್ನು ನೋಡಿ ಬೊಗಳುವ ಪ್ರತಿಯೊಂದು ನಾಯಿಯನ್ನು ಒದೆಯಲು ನೀವು ನಿಲ್ಲುವುದಾದರೆ, ನೀವು ಬಹಳ ದೂರ ಹೋಗಿ ಮುಟ್ಟುವುದೇ ಇಲ್ಲ.”
ಆದುದರಿಂದ ನಿಶ್ಚಿತ ವಿರೋಧಿಗಳಿಂದ ಮಾಡಲ್ಪಡುವ ಟೀಕೆಗಳು, ದೇವರಿಗೆ ನಾವು ಸಲ್ಲಿಸುವ ಸೇವೆಯಿಂದ ನಮ್ಮನ್ನು ಅಪಕರ್ಷಿಸುವಂತೆ ನಾವು ಅನುಮತಿಸಬಾರದು. (ಕೀರ್ತನೆ 119:16) ನಾವು ನಿಜ ಕ್ರೈಸ್ತರ ಕೆಲಸ, ಅಂದರೆ ಸುವಾರ್ತೆಯನ್ನು ಬೋಧಿಸುವ ಕೆಲಸದ ಮೇಲೆ ಗಮನವನ್ನು ಕೇಂದ್ರೀಕರಿಸೋಣ. ಆಗ ಒಂದು ಸಹಜ ಪರಿಣಾಮದೋಪಾದಿ, ಪ್ರಶ್ನೆಗಳನ್ನು ಉತ್ತರಿಸಲು ಮತ್ತು ವ್ಯಕ್ತಿಯೊಬ್ಬನ ನಡತೆಗಳನ್ನು ವರ್ಧಿಸುತ್ತಾ, ದೇವರ ವಾಕ್ಯದಲ್ಲಿ ಆತನಿಗೆ ಉಪದೇಶಿಸುವವರೋಪಾದಿ ನಮ್ಮ ಕಾರ್ಯದ ಸಾರಾಂಶವನ್ನು ವಿವರಿಸಲು ಅವಕಾಶಗಳನ್ನು ನಾವು ಪಡೆಯುವೆವು.—ಮತ್ತಾಯ 24:14; 28:19, 20.
ಟೀಕೆಗೆ ಪ್ರತಿಕ್ರಿಯೆ ತೋರಿಸಬೇಕೊ?
ಯೇಸು ತನ್ನ ಹಿಂಬಾಲಕರ ಕುರಿತು ಹೇಳಿದ್ದು: “ನೀವು ಲೋಕದ ಭಾಗವಾಗಿರುವುದಿಲ್ಲ . . . ಈ ಕಾರಣದಿಂದ ಲೋಕವು ನಿಮ್ಮನ್ನು ದ್ವೇಷಿಸುತ್ತದೆ.” (ಯೋಹಾನ 15:19, NW) ಯೆಹೋವನ ಸಾಕ್ಷಿಗಳ ಮೇಲೆ ಅಪಮಾನವನ್ನು ಹೇರುವ ಅನೇಕ ಪ್ರೆಸ್ ವರದಿಗಳು, ಈ ದ್ವೇಷದ ಅಭಿವ್ಯಕ್ತಿಯಾಗಿವೆ, ಮತ್ತು ಅಂತಹ ವರದಿಗಳನ್ನು ಅಲಕ್ಷ್ಯಮಾಡಬೇಕು. ಆದರೂ, ಸಾಕ್ಷಿಗಳ ಕುರಿತಾದ ಜ್ಞಾನದ ಕೊರತೆಯನ್ನು ಅಥವಾ ಕೆಲವು ಸತ್ಯಾಂಶಗಳನ್ನು ವಿಕೃತಗೊಳಿಸಿ, ಅಪಾರ್ಥ ಮಾಡುವುದನ್ನು ಪ್ರತಿಬಿಂಬಿಸುವ ವರ್ತಮಾನವನ್ನು ಆಗಾಗ ವಾರ್ತಾ ಮಾಧ್ಯಮವು ಪ್ರದರ್ಶಿಸಬಹುದು. ಕೆಲವು ಪತ್ರಿಕೋದ್ಯೋಗಿಗಳು ಪಕ್ಷಪಾತಿ ಮೂಲಗಳಿಂದ ವಿಷಯವನ್ನು ಪಡೆದುಕೊಂಡಿರಬಹುದು. ವಾರ್ತಾ ಮಾಧ್ಯಮದಲ್ಲಿ ಬಂದಿರುವ ತಪ್ಪು ವರ್ತಮಾನವನ್ನು ನಾವು ಅಲಕ್ಷ್ಯಮಾಡಬೇಕೊ ಅಥವಾ ಸೂಕ್ತವಾದ ಸಾಧನಗಳ ಮೂಲಕವಾಗಿ ಸತ್ಯದ ಪರವಾಗಿ ವಾದಿಸಬೇಕೊ ಎಂಬ ವಿಷಯವು ಸನ್ನಿವೇಶಗಳು, ಟೀಕೆಯ ಪ್ರೇರೇಪಕ, ಮತ್ತು ಅವನ ಗುರಿಯ ಮೇಲೆ ಹೊಂದಿಕೊಂಡಿದೆ.
ಕೆಲವೊಮ್ಮೆ ಪತ್ರವು ಸಂಪೂರ್ಣವಾಗಿ ಪ್ರಕಾಶಿಸಲ್ಪಡುವಲ್ಲಿ, ಸಂಪಾದಕರಿಗೆ ಯುಕ್ತವಾದ ಪತ್ರವೊಂದನ್ನು ಬರೆಯುವ ಮೂಲಕ ಆ ಸತ್ಯಾಂಶಗಳನ್ನು ಸರಿಪಡಿಸಸಾಧ್ಯವಿದೆ. ಆದರೆ ಅಂತಹ ಒಂದು ಪತ್ರವು ಉದ್ದೇಶಿಸಲ್ಪಡುವ ವಿಷಯಕ್ಕಿಂತ ಸಂಪೂರ್ಣವಾಗಿ ವಿರುದ್ಧವಾದ ವಿಷಯವನ್ನು ಸಾಧಿಸಬಹುದು. ಹೇಗೆ? ಹೀಗೆ ಮೂಲ ಅಸತ್ಯವು ಇನ್ನೂ ಹೆಚ್ಚಿನ ಪ್ರಸಿದ್ಧಿಯನ್ನು ಪಡೆಯಬಹುದು, ಅಥವಾ ವಿರೋಧಿಗಳು ಸುಳ್ಳುಗಳನ್ನು ಅಥವಾ ಕಳಂಕಗಳನ್ನು ಮುದ್ರಿಸುವಂತೆ ಇನ್ನೂ ಅಧಿಕವಾದ ಅವಕಾಶವು ಕೊಡಲ್ಪಡಬಹುದು. ಅನೇಕ ವಿದ್ಯಮಾನಗಳಲ್ಲಿ, ಸಂಪಾದಕರಿಗೆ ಪತ್ರಬರೆಯುವ ಪ್ರಶ್ನೆಯನ್ನು ಹಿರಿಯರ ನಿರ್ಣಯಕ್ಕೆ ಬಿಡುವುದು ವಿವೇಚನೆಯುಳ್ಳದ್ದಾಗಿದೆ. ಪ್ರೆಸ್ನ ನಕಾರಾತ್ಮಕ ವರದಿಯು ಅವಿಚಾರಾಭಿಪ್ರಾಯವನ್ನು ಎಬ್ಬಿಸುವಲ್ಲಿ, ವಿಚಾರಕರಿಗೆ ಸಂತೃಪ್ತಿಕರವಾದ ವಿವರಣೆಯನ್ನು ಎಲ್ಲ ಪ್ರಚಾರಕರು ಕೊಡುವಂತೆ ಶಕ್ತರನ್ನಾಗಿ ಮಾಡುತ್ತಾ, ಈ ಸತ್ಯಾಂಶಗಳ ಕುರಿತು ವಾಚ್ ಟವರ್ ಸೊಸೈಟಿಯ ಶಾಖಾ ಆಫೀಸು ಆ ದೇಶದಲ್ಲಿರುವ ಸಭೆಗಳಿಗೆ ತಿಳಿಸಬಲ್ಲದು.
ಅಂತಹ ವಿಚಿತ್ರ ಪ್ರವೃತ್ತಿಯ ಆರೋಪಗಳೊಂದಿಗೆ ನೀವು ವೈಯಕ್ತಿಕವಾಗಿ ಒಳಗೂಡುವ ಅಗತ್ಯವಿದೆಯೊ? “ಅವರ ಮಾತನ್ನು ಬಿಡಿರಿ” ಅವರನ್ನು ಅಲಕ್ಷಿಸಿರಿ ಎಂಬ ಯೇಸುವಿನ ಸಲಹೆಯು, ಸ್ಪಷ್ಟವಾಗಿಗಿ ವಿರೋಧಿಗಳ ಈ ಗುಂಪಿಗೆ ಅನ್ವಯಿಸುತ್ತದೆ. ನಿಷ್ಠಾವಂತ ಕ್ರೈಸ್ತರಿಗೆ, ಧರ್ಮಭ್ರಷ್ಟರನ್ನು ಮತ್ತು ಅವರ ದೃಷ್ಟಿಕೋನಗಳನ್ನು ದೂರವಿಡಲು ಬೈಬಲ್ ಸಂಬಂಧಿತ ಕಾರಣಗಳಿವೆ. (1 ಕೊರಿಂಥ 5:11-13; ತೀತ 3:10, 11; 1 ಯೋಹಾನ 2:19; 2 ಯೋಹಾನ 10, 11) ಸಾಕ್ಷಿಗಳ ಮೇಲಿನ ಟೀಕೆಯು ಸತ್ಯಾಂಶದ ಮೇಲೆ ಆಧರಿತವಾಗಿದೆಯೊ ಅಥವಾ ಕಲ್ಪನೆಯ ಮೇಲೆ ಆಧರಿತವಾಗಿದೆಯೊ ಎಂಬುದನ್ನು ತಿಳಿಯುವುದರಲ್ಲಿ ಯಾರಾದರೊಬ್ಬರು ಪ್ರಾಮಾಣಿಕವಾಗಿ ಆಸಕ್ತರಾಗಿರುವಲ್ಲಿ, ಉತ್ತರವನ್ನು ಒದಗಿಸಲು ನಿಮ್ಮ ಸ್ವಂತ ಸಾಧಾರವಾದ ಜ್ಞಾನವು ಸಾಮಾನ್ಯವಾಗಿ ಸಾಕು.—1986, ಮಾರ್ಚ್ 15ರ ವಾಚ್ಟವರ್ 13 ಮತ್ತು 14ನೇ ಪುಟಗಳನ್ನು ನೋಡಿರಿ.
ಪ್ರೆಸ್ನ ವಿಕೃತ ವರ್ತಮಾನವನ್ನು ನೀವು ಎದುರಿಸುವಾಗ, ಜ್ಞಾನೋಕ್ತಿ 14:15ರ ಸಲಹೆಯನ್ನು ಹೃದಯಕ್ಕೆ ತೆಗೆದುಕೊಳ್ಳಿರಿ: “ಮೂಢನು ಯಾವ ಮಾತನ್ನಾದರೂ ನಂಬುವನು; ಜಾಣನು ತನ್ನ ನಡತೆಯನ್ನು ಚೆನ್ನಾಗಿ ಗಮನಿಸುವನು.” ಸ್ವಿಟ್ಸರ್ಲೆಂಡ್ನಲ್ಲಿ, ರಕ್ತ ಪೂರಣವೊಂದನ್ನು ಕೊಡಲು ವೈದ್ಯಕೀಯ ಸಿಬ್ಬಂದಿಗೆ ಅನುಮತಿ ಕೊಡಲು ಒಬ್ಬ ಎಳೆಯ ಸಾಕ್ಷಿಯ ಸಂಬಂಧಿಕರು ನಿರಾಕರಿಸಿದ ಕಾರಣದಿಂದ ಅವಳು ಸತ್ತಳೆಂದು ಭಾವನಾತ್ಮಕವಾದ ಪ್ರೆಸ್ ವರದಿಯು ವ್ಯಕ್ತಪಡಿಸಿದಾಗ, ಅನೇಕ ಜನರು ಕೋಪಗೊಂಡಿದ್ದರು. ಆದರೂ ಅವುಗಳು ಸತ್ಯಾಂಶಗಳಾಗಿದ್ದವೊ? ಇಲ್ಲ. ಧಾರ್ಮಿಕ ಆಧಾರದ ಮೇಲೆ ಆ ರೋಗಿಯು ಒಂದು ರಕ್ತ ಪೂರಣವನ್ನು ನಿರಾಕರಿಸಿದ್ದಳು, ಆದರೆ ಅರಕ್ತ ವೈದ್ಯಕೀಯ ಚಿಕಿತ್ಸೆಯನ್ನು ಅವಳು ಒಪ್ಪಿಕೊಂಡಿದಳ್ದು. ಹೆಚ್ಚಿನ ಗೊಂದಲವಿಲ್ಲದೆ ಇದನ್ನು ಪ್ರಾರಂಭಿಸಬಹುದಾಗಿತ್ತು ಮತ್ತು ಅವಳ ಜೀವವನ್ನು ರಕ್ಷಿಸಬಹುದಾದ ಸಂಭವನೀಯತೆಯಿತ್ತು. ಆದರೂ, ಆಸ್ಪತ್ರೆಯು ಚಿಕಿತ್ಸೆಗಳನ್ನು ಅನಗತ್ಯವಾಗಿ ವಿಳಂಬಿಸಿತು, ಅಷ್ಟರಲ್ಲಿ ರೋಗಿಯು ಸತ್ತಳು. ಪ್ರೆಸ್ ವರದಿಯು ಈ ಸತ್ಯಾಂಶಗಳನ್ನು ಪ್ರಸ್ತುತಪಡಿಸಲಿಲ್ಲ.
ಆದಕಾರಣ, ಅಂತಹ ವರದಿಗಳು ಎಷ್ಟು ಸತ್ಯವನ್ನು ಒಳಗೊಂಡಿವೆ ಎಂಬುದನ್ನು ಜಾಗರೂಕತೆಯಿಂದ ತೂಗಿನೋಡಿರಿ. ಸ್ಥಳಿಕ ಹಿರಿಯರು ಅಂತಹ ವಿದ್ಯಮಾನಗಳನ್ನು ಪ್ರೀತಿಪೂರ್ವಕವಾದ ವಿಧಾನದಿಂದ ಮತ್ತು ಬೈಬಲ್ ಸಂಬಂಧಿತ ನಿರ್ದೇಶನಗಳಿಗೆ ಅನುಗುಣವಾಗಿ ನೋಡಿಕೊಳ್ಳುತ್ತಾರೆ ಎಂದು ನಾವು ವಿಚಾರಕರಿಗೆ ವಿವರಿಸಬಲ್ಲೆವು. ಉತ್ತರವನ್ನು ಕೊಡುವಾಗ ಮೂಲತತ್ವಗಳಿಗೆ ಅಂಟಿಕೊಂಡಿರುವುದು, ನಿರ್ಣಯಗಳನ್ನು ಮಾಡಲು ಅವಸರಿಸುವುದರಿಂದ ನಮ್ಮನ್ನು ತಡೆಯುತ್ತದೆ.—ಜ್ಞಾನೋಕ್ತಿ 18:13.
ನೇರವಾದ ವರ್ತಮಾನವು ಅತ್ಯಾವಶ್ಯಕ
ಪ್ರಥಮ ಶತಮಾನದಲ್ಲಿ, ಯೇಸು ಕ್ರಿಸ್ತನ ಪ್ರಖ್ಯಾತಿಯನ್ನು ಹಾನಿಗೊಳಿಸಲಿಕ್ಕಾಗಿ ಜನರು ಆತನ ಕುರಿತು ಸುಳ್ಳುಗಳನ್ನು ಹಬ್ಬಿಸಿದರು, ಕೆಲವರು ಆತನನ್ನು ದ್ರೋಹಿಯೋಪಾದಿ ಸಹ ನಿರೂಪಿಸಿದರು. (ಲೂಕ 7:34; 23:2; ಹೋಲಿಸಿ ಮತ್ತಾಯ 22:21.) ತದನಂತರ, ಎಳೆಯ ಕ್ರೈಸ್ತ ಸಭೆಯು, ಧಾರ್ಮಿಕವಾದ ಮತ್ತು ಲೌಕಿಕವಾದ ಎರಡೂ ಮೂಲಾಂಶಗಳಿಂದ ವ್ಯಾಪಕ ವಿರೋಧವನ್ನು ಎದುರಿಸಿತು. “ದೇವರು . . . ಈ ಲೋಕದ ಬುದ್ಧಿಹೀನರನ್ನು ಆರಿಸಿಕೊಂಡಿ” ರುವುದರಿಂದ, ಅನೇಕರು ಆತನ ಸೇವಕರನ್ನು ಕೀಳಾಗಿ ಕಂಡರು. (1 ಕೊರಿಂಥ 1:22-29) ನಿಜ ಕ್ರೈಸ್ತರು ಇಂದು, ಹಿಂಸೆಯ ಒಂದು ರೂಪವಾಗಿರುವ ಅಪಮಾನವನ್ನು ಗಣನೆಗೆ ತೆಗೆದುಕೊಳ್ಳಬೇಕು.—ಯೋಹಾನ 15:20.
ಆದರೂ, ತಾವು ಸಂಭಾಷಿಸುತ್ತಿರುವ ವ್ಯಕ್ತಿಯು ನ್ಯಾಯಪರನಾಗಿದ್ದು, “ನಿನ್ನ ಅಭಿಪ್ರಾಯವನ್ನು ನಿನ್ನಿಂದಲೇ ಕೇಳುವದು ನಮಗೆ ಯುಕ್ತವೆಂದು ತೋರುತ್ತದೆ. ಆ ಮತದ ವಿಷಯದಲ್ಲಿ ಜನರು ಎಲ್ಲೆಲ್ಲಿಯೂ ವಿರುದ್ಧವಾಗಿ ಮಾತಾಡುತ್ತಾರೆಂಬದೊಂದೇ ನಮಗೆ ಗೊತ್ತದೆ” ಎಂದು ಘೋಷಿಸಿದ, ರೋಮ್ನ ಪೌಲನ ಸಂದರ್ಶಕರಲ್ಲಿ ಕೆಲವರು ತೋರಿಸಿದಂತಹ ತದ್ರೀತಿಯ ಮನೋಭಾವವನ್ನು ಪ್ರದರ್ಶಿಸುವಾಗ, ಯೆಹೋವನ ಸಾಕ್ಷಿಗಳು ಇದನ್ನು ಗಣ್ಯ ಮಾಡುತ್ತಾರೆ.—ಅ. ಕೃತ್ಯಗಳು 28:22.
ತಪ್ಪು ಸಮಾಚಾರ ಕೊಡಲ್ಪಟ್ಟ ಜನರಿಗೆ ವಿವರಿಸಿರಿ, ಸೌಮ್ಯತೆಯಿಂದ ಹಾಗೆ ಮಾಡಿರಿ. (ರೋಮಾಪುರ 12:14; ಹೋಲಿಸಿ 2 ತಿಮೊಥೆಯ 2:25.) ತಪ್ಪು ಆಪಾದನೆಗಳನ್ನು ಆದ್ಯಂತವಾಗಿ ಅವಲೋಕಿಸಲು ಅವರಿಗೆ ಶಕ್ತರನ್ನಾಗಿ ಮಾಡುವ, ಯೆಹೋವನ ಸಾಕ್ಷಿಗಳ ಕುರಿತಾದ ನೇರವಾದ ವರ್ತಮಾನವನ್ನು ಪಡೆದುಕೊಳ್ಳುವಂತೆ ಅವರನ್ನು ಆಮಂತ್ರಿಸಿರಿ. ಸಂಸ್ಥೆ, ಅದರ ಇತಿಹಾಸ, ಮತ್ತು ಅದರ ಬೋಧನೆಗಳ ಕುರಿತಾದ ವಿವರವನ್ನು ಕೊಡುವ, ವಾಚ್ ಟವರ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟ ವಿವರಣೆಗಳನ್ನು ಸಹ ನೀವು ಉಪಯೋಗಿಸಸಾಧ್ಯವಿದೆ.a ಫಿಲಿಪ್ಪನು ಒಮ್ಮೆ ಸರಳವಾಗಿ “ಬಂದು ನೋಡು” ಎಂದು ಹೇಳುವ ಮೂಲಕ ನತಾನಯೇಲನಿಗೆ ಉತ್ತರಿಸಿದನು. (ಯೋಹಾನ 1:46) ನಾವು ತದ್ರೀತಿ ಮಾಡಬಲ್ಲೆವು. ಯೆಹೋವನ ಸಾಕ್ಷಿಗಳು ಎಂತಹ ರೀತಿಯ ವ್ಯಕ್ತಿಗಳಾಗಿದ್ದಾರೆ ಮತ್ತು ಅವರು ಏನನ್ನು ನಂಬುತ್ತಾರೆ ಎಂಬುದನ್ನು ಸ್ವತಃ ಗಮನಿಸಲಿಕ್ಕಾಗಿ ಬಯಸುವ ಯಾರಿಗಾದರೂ, ಸ್ಥಳಿಕ ರಾಜ್ಯ ಸಭಾಗೃಹವನ್ನು ಸಂದರ್ಶಿಸಲು ಹೃತ್ಪೂರ್ವಕವಾದ ಸ್ವಾಗತವಿದೆ.
ವಿರೋಧಿಗಳಿಗೆ ಬೆದರಬೇಡಿರಿ
ಅಪಮಾನವು ಜನರನ್ನು ಸಾಕ್ಷಿಗಳಾಗುವುದರಿಂದ ತಡೆಯುವುದಿಲ್ಲವೆಂಬುದನ್ನು ತಿಳಿಯುವುದು ಎಷ್ಟು ಉತ್ತೇಜನಕರ! ಜರ್ಮನಿಯ ಟಿವಿ ಸಂಭಾಷಣಾ ಪ್ರದರ್ಶನದಲ್ಲಿ, ಸಾಕ್ಷಿಗಳ ಕುರಿತಾಗಿ ಧರ್ಮಭ್ರಷ್ಟರು ಸುಳ್ಳುಗಳ ನೆಯೆಯ್ಗನ್ನು ನೇಯ್ದರು. ವೀಕ್ಷಕನೊಬ್ಬನು ಧರ್ಮಭ್ರಷ್ಟ ಅಲಂಕರಿಸುವಿಕೆಗಳನ್ನು ಭ್ರಮೆಯೆಂದು ಗ್ರಹಿಸಿದನು ಮತ್ತು ಸಾಕ್ಷಿಗಳೊಂದಿಗಿನ ತನ್ನ ಬೈಬಲ್ ಅಧ್ಯಯನವನ್ನು ಮತ್ತೆ ಆರಂಭಿಸುವಂತೆ ಪ್ರಚೋದಿಸಲ್ಪಟ್ಟನು. ಹೌದು, ಕೆಲವೊಮ್ಮೆ ಸಾರ್ವಜನಿಕ ಅಪಮಾನವು ಸಕಾರಾತ್ಮಕವಾದ ಫಲಿತಾಂಶಗಳಿಗೆ ನಡಿಸುತ್ತದೆ!—ಹೋಲಿಸಿ ಫಿಲಿಪ್ಪಿ 1:12, 13.
ಕೆಲವರು ಸತ್ಯಕ್ಕಿಂತಲೂ “ಕಲ್ಪನಾಕಥೆ” ಗಳಿಗೆ ಹೆಚ್ಚು ಗಮನವನ್ನು ಕೊಡುವರೆಂದು ಅಪೊಸ್ತಲ ಪೌಲನಿಗೆ ತಿಳಿದಿತ್ತು. ಆದುದರಿಂದ ಆತನು ಬರೆದದ್ದು: “ಸ್ವಸ್ಥಚಿತ್ತನಾಗಿರು, ಶ್ರಮೆಯನ್ನು ತಾಳಿಕೋ, ಸೌವಾರ್ತಿಕನ ಕೆಲಸವನ್ನು ಮಾಡು, ನಿನಗೆ ನೇಮಿಸಿರುವ ಸೇವೆಯನ್ನು ಲೋಪವಿಲ್ಲದೆ ನಡಿಸು.” (2 ತಿಮೊಥೆಯ 4:3-5) ಆದುದರಿಂದ ನೀವು ಅಪಕರ್ಷಿಸಲ್ಪಡುವಂತೆ ಅನುಮತಿಸದಿರಿ, ಮತ್ತು ನಿಮ್ಮ ವಿರೋಧಿಗಳಿಂದ ‘ಯಾವ ವಿಷಯದಲ್ಲಿಯೂ ಬೆದರಬೇಡಿರಿ.’ (ಫಿಲಿಪ್ಪಿ 1:28, NW) ಶಾಂತರೂ ಸ್ಥಿರಚಿತ್ತರೂ ಆಗಿದ್ದು, ಸುವಾರ್ತೆಯನ್ನು ಹರ್ಷಭರಿತರಾಗಿ ಸಾರಿರಿ, ಮತ್ತು ಸಾರ್ವಜನಿಕ ಅಪಮಾನವನ್ನು ನೀವು ನಿಶ್ಚಲರಾಗಿ ನಿಭಾಯಿಸುವಿರಿ. ಹೌದು, ಯೇಸುವಿನ ವಾಗ್ದಾನವನ್ನು ಜ್ಞಾಪಿಸಿಕೊಳ್ಳಿರಿ: “ನನ್ನ ನಿಮಿತ್ತವಾಗಿ ಜನರು ನಿಮ್ಮನ್ನು ನಿಂದಿಸಿ [“ಅಪಮಾನಪಡಿಸಿ,” NW] ಹಿಂಸೆಪಡಿಸಿ ನಿಮ್ಮ ಮೇಲೆ ಕೆಟ್ಟ ಕೆಟ್ಟ ಮಾತುಗಳನ್ನು ಸುಳ್ಳಾಗಿ ಹೊರಿಸಿದರೆ ನೀವು ಧನ್ಯರು [“ಸಂತೋಷಿತರು,” NW]. ಸಂತೋಷಪಡಿರಿ, ಉಲ್ಲಾಸಪಡಿರಿ; ಪರಲೋಕದಲ್ಲಿ ನಿಮಗೆ ಬಹಳ ಫಲ ಸಿಕ್ಕುವದು; ನಿಮಗಿಂತ ಮುಂಚೆ ಇದ್ದ ಪ್ರವಾದಿಗಳನ್ನೂ ಹೀಗೆಯೇ ಹಿಂಸೆಪಡಿಸಿದರಲ್ಲಾ.”—ಮತ್ತಾಯ 5:11, 12.
[ಅಧ್ಯಯನ ಪ್ರಶ್ನೆಗಳು]
a ಯೆಹೋವನ ಸಾಕ್ಷಿಗಳು—ಲೋಕವ್ಯಾಪಕವಾಗಿ ಐಕ್ಯದಿಂದ ದೇವರ ಚಿತ್ತವನ್ನು ಮಾಡುತ್ತಿದ್ದಾರೆ (ಇಂಗ್ಲಿಷ್), ಇಪ್ಪತ್ತನೆಯ ಶತಮಾನದಲ್ಲಿ ಯೆಹೋವನ ಸಾಕ್ಷಿಗಳು, ಮತ್ತು ಯೆಹೋವನ ಸಾಕ್ಷಿಗಳು—ದೇವರ ರಾಜ್ಯದ ಘೋಷಕರು (ಇಂಗ್ಲಿಷ್) ಎಂಬ ಪ್ರಕಾಶನಗಳನ್ನು ನೋಡಿರಿ.
[ಪುಟ 27 ರಲ್ಲಿರುವ ಸಂಕ್ಷಿಪ್ತ ವಿವರಣೆ]
ವಿರೋಧಿಗಳಿಂದ ಎದುರಿಸಲ್ಪಟ್ಟಾಗ, ಯೇಸು ತನ್ನ ಶಿಷ್ಯರಿಗೆ ಹೇಳಿದ್ದು: “ಅವರ ಮಾತನ್ನು ಬಿಡಿರಿ.” ಆತನು ಏನನ್ನು ಅರ್ಥೈಸಿದನು?
[ಪುಟ 29 ರಲ್ಲಿರುವ ಸಂಕ್ಷಿಪ್ತ ವಿವರಣೆ]
“ನನ್ನ ನಿಮಿತ್ತವಾಗಿ ಜನರು ನಿಮ್ಮನ್ನು ಅಪಮಾನಪಡಿಸಿ ಹಿಂಸೆಪಡಿಸಿ ನಿಮ್ಮ ಮೇಲೆ ಕೆಟ್ಟ ಕೆಟ್ಟ ಮಾತುಗಳನ್ನು ಸುಳ್ಳಾಗಿ ಹೊರಿಸಿದರೆ ನೀವು ಸಂತೋಷಿತರು.”—ಮತ್ತಾಯ 5:11, NW