ನಮ್ಮ ನಂಬಿಕೆಯನ್ನು ಸಮರ್ಥಿಸುವುದು
“ಕ್ರಿಸ್ತನನ್ನು ಕರ್ತನೆಂದು ನಿಮ್ಮ ಹೃದಯಗಳಲ್ಲಿ ಪ್ರತಿಷ್ಠೆಪಡಿಸಿರಿ. ನಿಮ್ಮಲ್ಲಿರುವ ನಿರೀಕ್ಷೆಗೆ ಆಧಾರವೇನೆಂದು ಕೇಳುವವರೆಲ್ಲರಿಗೆ ಉತ್ತರ ಹೇಳುವದಕ್ಕೆ ಯಾವಾಗಲೂ ಸಿದ್ಧವಾಗಿರಿ.”—1 ಪೇತ್ರ 3:15.
1, 2. ಯೆಹೋವನ ಸಾಕ್ಷಿಗಳು ವಿರೋಧದಿಂದ ಆಶ್ಚರ್ಯಚಕಿತರಾಗುವುದಿಲ್ಲ ಏಕೆ, ಆದರೆ ಅವರು ಏನನ್ನು ಅಪೇಕ್ಷಿಸುತ್ತಾರೆ?
ಲೋಕದಾದ್ಯಂತ ಹೆಚ್ಚಿನ ದೇಶಗಳಲ್ಲಿ, ಯೆಹೋವನ ಸಾಕ್ಷಿಗಳು ಪ್ರಾಮಾಣಿಕರೂ ಶುದ್ಧವಾದ ನೈತಿಕ ಜೀವಿತಗಳನ್ನು ನಡೆಸುವವರೂ ಆಗಿದ್ದಾರೆಂದು ಸಾಮಾನ್ಯವಾಗಿ ಗುರುತಿಸಲ್ಪಡುತ್ತಾರೆ. ಅನೇಕರು ಅವರನ್ನು ಯಾರಿಗೂ ತೊಂದರೆ ಉಂಟುಮಾಡದ ಒಳ್ಳೆಯ ನೆರೆಯವರಂತೆಯೂ ಕಂಡುಕೊಂಡಿದ್ದಾರೆ. ಆದರೂ, ಹಾಸ್ಯವ್ಯಂಗ್ಯವಾಗಿ, ಈ ಶಾಂತಿಪ್ರಿಯ ಕ್ರೈಸ್ತರು, ಯುದ್ಧ ಹಾಗೂ ಶಾಂತಿಯ ಸಮಯಗಳಲ್ಲಿ ಅನ್ಯಾಯವಾಗಿ ಹಿಂಸೆಯನ್ನು ಅನುಭವಿಸಿದ್ದಾರೆ. ಇಂತಹ ವಿರೋಧವು ಅವರಿಗೆ ಆಶ್ಚರ್ಯವನ್ನು ಉಂಟುಮಾಡುವುದಿಲ್ಲ. ಬದಲಿಗೆ ಅವರು ಅದನ್ನು ನಿರೀಕ್ಷಿಸುತ್ತಾರೆ. ಯಾಕೆಂದರೆ, ಸಾ.ಶ. ಮೊದಲನೆಯ ಶತಮಾನದ ನಂಬಿಗಸ್ತ ಕ್ರೈಸ್ತರು ‘ಹಗೆಮಾಡಲ್ಪಟ್ಟ’ರೆಂದು ಅವರಿಗೆ ಗೊತ್ತಿರುವಾಗ, ಇಂದು ಕ್ರಿಸ್ತನ ನಿಜ ಹಿಂಬಾಲಕರಾಗಿರಲು ಪ್ರಯತ್ನಿಸುವವರು, ತಾವು ಭಿನ್ನವಾಗಿ ಉಪಚರಿಸಲ್ಪಡುವೆವು ಎಂಬುದಾಗಿ ಏಕೆ ಅಪೇಕ್ಷಿಸಬೇಕು? (ಮತ್ತಾಯ 10:22) ಅಲ್ಲದೆ, ಬೈಬಲು ಹೇಳುವುದು: “ಕ್ರಿಸ್ತ ಯೇಸುವಿನಲ್ಲಿ ಸದ್ಭಕ್ತರಾಗಿ ಜೀವಿಸುವದಕ್ಕೆ ಮನಸ್ಸು ಮಾಡುವವರೆಲ್ಲರೂ ಹಿಂಸೆಗೊಳಗಾಗುವರು.”—2 ತಿಮೊಥೆಯ 3:12.
2 ಯೆಹೋವನ ಸಾಕ್ಷಿಗಳು ಹಿಂಸೆಯನ್ನು ಬಯಸುವುದಿಲ್ಲ, ಇಲ್ಲವೆ ಅದು ತರಬಹುದಾದ ತೊಂದರೆಗಳನ್ನು, ಅಂದರೆ, ದಂಡಗಳು, ಸೆರೆವಾಸಗಳು, ಇಲ್ಲವೆ ಕಠೋರವಾದ ಉಪಚಾರದಲ್ಲಿ ಅವರು ಆನಂದಿಸುವುದಿಲ್ಲ. ಯಾವುದೇ ತಡೆಯಿಲ್ಲದೆ ದೇವರ ರಾಜ್ಯದ ಸುವಾರ್ತೆಯನ್ನು ಅವರು ಸಾರಸಾಧ್ಯವಾಗುವಂತೆ, ‘ಶಾಂತ ಹಾಗೂ ನೆಮ್ಮದಿಯ ಜೀವಿತ’ವನ್ನು ನಡೆಸಲು ಬಯಸುತ್ತಾರೆ. (1 ತಿಮೊಥೆಯ 2:1, 2) ತಮ್ಮ ಆರಾಧನೆಯನ್ನು ಮುಂದುವರಿಸಿಕೊಂಡು ಹೋಗಲು ಅನೇಕ ದೇಶಗಳಲ್ಲಿ ತಮಗಿರುವ ಧಾರ್ಮಿಕ ಸ್ವಾತಂತ್ರ್ಯವನ್ನು ಅವರು ಗಣ್ಯಮಾಡುತ್ತಾರೆ, ಮತ್ತು ಸರಕಾರಗಳನ್ನು ಸೇರಿಸಿ ‘ಎಲ್ಲ ಮನುಷ್ಯರೊಂದಿಗೆ ಸಮಾಧಾನ’ದಿಂದಿರಲು ತಮ್ಮಿಂದ ಸಾಧ್ಯವಾಗುವಂತಹದ್ದನ್ನು ಅವರು ಶುದ್ಧಾಂತಃಕರಣದಿಂದ ಮಾಡುತ್ತಾರೆ. (ರೋಮಾಪುರ 12:18; 13:1-7) ಹಾಗಾದರೆ, ಅವರು ‘ಹಗೆಮಾಡಲ್ಪಡುವುದು’ ಏಕೆ?
3. ಯೆಹೋವನ ಸಾಕ್ಷಿಗಳು ಅನ್ಯಾಯವಾಗಿ ದ್ವೇಷಿಸಲ್ಪಟ್ಟಿರುವುದರ ಒಂದು ಕಾರಣವು ಏನಾಗಿದೆ?
3 ಮೂಲಭೂತವಾಗಿ, ಆದಿ ಕ್ರೈಸ್ತರು ಹಿಂಸಿಸಲ್ಪಟ್ಟಂತಹದ್ದೇ ಕಾರಣಗಳಿಗಾಗಿ ಇಂದು, ಯೆಹೋವನ ಸಾಕ್ಷಿಗಳು ಅನ್ಯಾಯವಾಗಿ ದ್ವೇಷಿಸಲ್ಪಟ್ಟಿದ್ದಾರೆ. ಪ್ರಥಮವಾಗಿ, ಯೆಹೋವನ ಸಾಕ್ಷಿಗಳು ತಮ್ಮ ಧಾರ್ಮಿಕ ನಂಬಿಕೆಗಳಿಗನುಸಾರ ಜೀವಿಸುವ ರೀತಿಯಿಂದ ಕೆಲವರಿಗೆ ಅಪ್ರಿಯರಾಗಿದ್ದಾರೆ. ಉದಾಹರಣೆಗೆ, ಅವರು ಹುರುಪಿನಿಂದ ದೇವರ ರಾಜ್ಯದ ಸುವಾರ್ತೆಯನ್ನು ಸಾರುತ್ತಾರೆ. ಅವರ ಈ ಹುರುಪನ್ನು ಜನರು ಅಪಾರ್ಥಮಾಡಿಕೊಂಡು, ಅವರ ಸಾರುವಿಕೆಯನ್ನು “ಆಕ್ರಮಣಶೀಲ ಮತಪ್ರಚಾರ”ವಾಗಿ ವೀಕ್ಷಿಸುತ್ತಾರೆ. (ಹೋಲಿಸಿ ಅ. ಕೃತ್ಯಗಳು 4:19, 20.) ಅವರು ರಾಜಕೀಯ ವಿಷಯಗಳಲ್ಲಿ ಹಾಗೂ ಜನಾಂಗಗಳ ಯುದ್ಧಗಳಲ್ಲಿ ತಟಸ್ಥರಾಗಿಯೂ ಉಳಿಯುತ್ತಾರೆ. ಹೀಗೆ ಮಾಡುವುದರಿಂದ, ಅವರು ಕೆಲವೊಮ್ಮೆ ಅಪನಂಬಿಗಸ್ತ ಪ್ರಜೆಗಳೆಂದು ತಪ್ಪಾಗಿ ಗುರುತಿಸಲ್ಪಟ್ಟಿದ್ದಾರೆ.—ಮೀಕ 4:3, 4.
4, 5. (ಎ) ಯಾವ ರೀತಿಯಲ್ಲಿ ಯೆಹೋವನ ಸಾಕ್ಷಿಗಳು ಸುಳ್ಳು ಆಪಾದನೆಗಳಿಗೆ ಗುರಿಯಾಗಿದ್ದಾರೆ? (ಬಿ) ಯೆಹೋವನ ಸೇವಕರ ಮೇಲೆ ಹಿಂಸೆಯನ್ನು ಕೆರಳಿಸುವವರಲ್ಲಿ ಪ್ರಮುಖರು ಯಾರಾಗಿದ್ದಾರೆ?
4 ಎರಡನೆಯದಾಗಿ, ಯೆಹೋವನ ಸಾಕ್ಷಿಗಳು ಸುಳ್ಳಾರೋಪಗಳಿಗೂ ಗುರಿಯಾಗಿದ್ದಾರೆ. ಅಂದರೆ, ಅವರ ವಿಷಯವಾಗಿ ಶುದ್ಧ ಸುಳ್ಳುಗಳು ಹಬ್ಬಿಸಲ್ಪಟ್ಟಿವೆ ಹಾಗೂ ಅವರ ನಂಬಿಕೆಗಳು ತಪ್ಪಾಗಿ ಅರ್ಥೈಸಲ್ಪಟ್ಟಿವೆ ಆದಕಾರಣ, ಅವರು ಕೆಲವು ದೇಶಗಳಲ್ಲಿ ಒಂದು ಅಪಾಯಕರ ಪಂಥವಾಗಿದ್ದಾರೆಂದು ಹೆಸರಿಸಲ್ಪಟ್ಟಿದ್ದಾರೆ. ಅಲ್ಲದೆ, ‘ರಕ್ತವನ್ನು ವಿಸರ್ಜಿಸಿರಿ’ ಎಂಬ ಬೈಬಲ್ ಆಜ್ಞೆಗೆ ವಿಧೇಯರಾಗಲು ಅವರು ಬಯಸುವ ಕಾರಣ, ರಕ್ತರಹಿತ ಚಿಕಿತ್ಸೆಯನ್ನು ಕೋರುವುದರಿಂದ, ಅವರನ್ನು “ಶಿಶು ಕೊಲೆಗಡುಕರು” ಮತ್ತು “ಆತ್ಮಹತ್ಯೆ ಪಂಥ”ದವರೆಂದು ತಪ್ಪಾಗಿ ಹೆಸರಿಸಲಾಗಿದೆ. (ಅ. ಕೃತ್ಯಗಳು 15:29) ನಿಜತ್ವವೇನೆಂದರೆ, ಯೆಹೋವನ ಸಾಕ್ಷಿಗಳು ಜೀವವನ್ನು ಬಹಳ ಅಮೂಲ್ಯವಾಗಿ ಪರಿಗಣಿಸುತ್ತಾರೆ, ಮತ್ತು ತಮಗಾಗಿ ಹಾಗೂ ತಮ್ಮ ಮಕ್ಕಳಿಗಾಗಿ ಲಭ್ಯವಿರುವ ಅತ್ಯುತ್ತಮ ವೈದ್ಯಕೀಯ ಆರೈಕೆಯ ಉಪಯೋಗವನ್ನೇ ಅವರು ಪಡೆದುಕೊಳ್ಳುತ್ತಾರೆ. ಯೆಹೋವನ ಸಾಕ್ಷಿಗಳು ರಕ್ತಪೂರಣಗಳನ್ನು ನಿರಾಕರಿಸುವ ಕಾರಣ, ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಅವರ ಮಕ್ಕಳು ಸಾಯುತ್ತಾರೆಂಬ ಆಪಾದನೆಯು ನಿರಾಧಾರಿತವಾಗಿದೆ. ಇದನ್ನು ಯಾವ ಅಂಕಿಅಂಶಗಳೂ ಸಮರ್ಥಿಸುವುದಿಲ್ಲ. ಬೈಬಲ್ ಸತ್ಯವು ಕುಟುಂಬದ ಎಲ್ಲಾ ಸದಸ್ಯರ ಮೇಲೆ ಒಂದೇ ರೀತಿಯ ಪ್ರಭಾವವನ್ನು ಬೀರದಿರುವ ಕಾರಣ, ಸಾಕ್ಷಿಗಳು ಕುಟುಂಬದಲ್ಲಿ ಒಡಕುಗಳನ್ನು ಉಂಟುಮಾಡುವವರೆಂದೂ ಜ್ಞಾತರಾಗಿದ್ದಾರೆ. ಆದರೂ, ಯೆಹೋವನ ಸಾಕ್ಷಿಗಳು ಕುಟುಂಬ ಜೀವಿತವನ್ನು ಉನ್ನತ ಸ್ಥಾನದಲ್ಲಿಡುತ್ತಾರೆಂದು ಮತ್ತು ಪತಿಪತ್ನಿಯರು ಒಬ್ಬರನ್ನೊಬ್ಬರು ಪ್ರೀತಿಸಿ, ಗೌರವಿಸಬೇಕು ಮತ್ತು ಹೆತ್ತವರು ಸಾಕ್ಷಿಗಳಾಗಿರಲಿ ಇಲ್ಲದಿರಲಿ, ಮಕ್ಕಳು ತಮ್ಮ ಹೆತ್ತವರಿಗೆ ವಿಧೇಯರಾಗಿರಬೇಕೆಂಬ ಬೈಬಲ್ ಆಜ್ಞೆಗಳನ್ನು ಅನುಸರಿಸಲು ಪ್ರಯತ್ನಿಸುತ್ತಾರೆಂದು ಅವರ ಪರಿಚಯವಿರುವವರಿಗೆ ಗೊತ್ತಿದೆ.—ಎಫೆಸ 5:21–6:3.
5 ಅನೇಕ ಸಂದರ್ಭಗಳಲ್ಲಿ, ಯೆಹೋವನ ಸೇವಕರ ವಿರುದ್ಧ ಹಿಂಸೆಯನ್ನು ಕೆರಳಿಸಿರುವ ಪ್ರಮುಖ ಜನರು ಧಾರ್ಮಿಕ ವಿರೋಧಿಗಳಾಗಿದ್ದಾರೆ. ಇವರು, ರಾಜಕೀಯ ಅಧಿಕಾರಿಗಳು ಹಾಗೂ ಪ್ರಸಾರಮಾಧ್ಯಮದ ಮೇಲೆ ತಮಗಿರುವ ಪ್ರಭಾವವನ್ನು ಉಪಯೋಗಿಸಿ, ಸಾಕ್ಷಿಗಳ ಚಟುವಟಿಕೆಗಳನ್ನು ನಿಗ್ರಹಿಸಲು ಪ್ರಯತ್ನಿಸಿದ್ದಾರೆ. ವಿರೋಧವು ನಮ್ಮ ಆಚಾರವಿಚಾರಗಳ ಕಾರಣದಿಂದಾಗಿರಲಿ, ಇಲ್ಲವೆ ಸುಳ್ಳಾರೋಪಗಳ ಕಾರಣದಿಂದಾಗಿರಲಿ, ಯೆಹೋವನ ಸಾಕ್ಷಿಗಳಾದ ನಾವು ಇಂತಹ ವಿರೋಧಕ್ಕೆ ಹೇಗೆ ಪ್ರತಿಕ್ರಿಯಿಸಬೇಕು?
“ನಿಮ್ಮ ವಿವೇಚನೆಯು ಎಲ್ಲ ಮನುಷ್ಯರಿಗೆ ತಿಳಿದುಬರಲಿ”
6. ಕ್ರೈಸ್ತ ಸಭೆಯ ಹೊರಗಿರುವ ಜನರ ಕುರಿತು ಒಂದು ಸಮತೂಕದ ನೋಟವಿರುವುದು ಏಕೆ ಪ್ರಾಮುಖ್ಯವಾಗಿದೆ?
6 ನಮ್ಮ ಧಾರ್ಮಿಕ ನಂಬಿಕೆಗಳಲ್ಲಿ ಪಾಲಿಗರಾಗದಿರುವವರ ವಿಷಯದಲ್ಲಿ ನಮಗೆ ಸರಿಯಾದ ನೋಟ, ಅಂದರೆ, ಯೆಹೋವನ ನೋಟವಿರಬೇಕು. ಇಲ್ಲದಿದ್ದರೆ, ನಾವು ಅನಾವಶ್ಯಕವಾಗಿ ಇತರರ ವೈರತ್ವ ಇಲ್ಲವೆ ನಿಂದೆಯನ್ನು ನಮ್ಮ ಮೇಲೆ ಬರಮಾಡಿಕೊಳ್ಳುವೆವು. “ನಿಮ್ಮ ವಿವೇಚನೆಯು ಎಲ್ಲ ಮನುಷ್ಯರಿಗೆ ತಿಳಿದುಬರಲಿ” ಎಂಬುದಾಗಿ ಅಪೊಸ್ತಲ ಪೌಲನು ಬರೆದನು. (ಫಿಲಿಪ್ಪಿ 4:5, NW) ಆದಕಾರಣ, ಕ್ರೈಸ್ತ ಸಭೆಯ ಹೊರಗಿರುವ ಜನರ ವಿಷಯದಲ್ಲಿ ನಾವು ಸಮತೂಕದ ದೃಷ್ಟಿಕೋನವನ್ನು ಪಡೆದಿರಬೇಕೆಂದು ಬೈಬಲು ನಮ್ಮನ್ನು ಉತ್ತೇಜಿಸುತ್ತದೆ.
7. “ಪ್ರಪಂಚದ ದೋಷವು ಹತ್ತದಂತೆ” ನಮ್ಮನ್ನು ಕಾಪಾಡಿಕೊಳ್ಳುವುದರಲ್ಲಿ ಏನು ಒಳಗೂಡಿದೆ?
7 “[ನಾವು] ಪ್ರಪಂಚದ ದೋಷವು ಹತ್ತದಂತೆ ನೋಡಿ”ಕೊಳ್ಳಬೇಕೆಂದು ಶಾಸ್ತ್ರಗಳು ನಮಗೆ ಸುಸ್ಪಷ್ಟ ಬುದ್ಧಿವಾದ ನೀಡುತ್ತವೆ. (ಯಾಕೋಬ 1:27; 4:4) “ಪ್ರಪಂಚ” ಎಂಬುದಾಗಿ ಇಲ್ಲಿ ಬಳಸಲ್ಪಟ್ಟಿರುವ ಪದವು, ಸತ್ಯ ಕ್ರೈಸ್ತರಿಂದ ದೂರವಾಗಿರುವ ಜನರನ್ನು ಸೂಚಿಸುತ್ತದೆ. ನಾವು ಇಂತಹ ಜನರ ಮಧ್ಯೆ ಜೀವಿಸುತ್ತೇವೆ. ಕೆಲಸದ ಸ್ಥಳದಲ್ಲಿ, ಶಾಲೆಯಲ್ಲಿ, ಮತ್ತು ನೆರೆಹೊರೆಯಲ್ಲಿ ನಾವು ಅವರೊಂದಿಗೆ ಬೆರೆಯುತ್ತೇವೆ. (ಯೋಹಾನ 17:11, 15; 1 ಕೊರಿಂಥ 5:9, 10) ಆದರೂ, ದೇವರ ನೀತಿಯ ಮಾರ್ಗಗಳಿಗೆ ವಿರುದ್ಧವಾಗಿರುವ ಮನೋಭಾವಗಳು, ಮಾತುಕತೆ, ಮತ್ತು ನಡತೆಯನ್ನು ದೂರವಿರಿಸುವ ಮೂಲಕ, ನಾವು ಪ್ರಪಂಚದ ದೋಷವು ಹತ್ತದಂತೆ ಜಾಗರೂಕರಾಗಿರುತ್ತೇವೆ. ಮತ್ತು ಯೆಹೋವನ ಮಟ್ಟಗಳನ್ನು ಬಹಳವಾಗಿ ಕಡೆಗಣಿಸುವ ಜನರೊಂದಿಗೆ ಆಪ್ತ ಸಂಬಂಧವನ್ನು ಇಟ್ಟುಕೊಳ್ಳುವ ಅಪಾಯವನ್ನೂ ನಾವು ಗ್ರಹಿಸುವುದು ಅತ್ಯಾವಶ್ಯಕವು.—ಜ್ಞಾನೋಕ್ತಿ 13:20.
8. ಪ್ರಪಂಚದ ದೋಷವು ಹತ್ತದಂತೆ ನೋಡಿಕೊಳ್ಳುವ ಸಲಹೆಯು, ಇತರರನ್ನು ತುಚ್ಛವಾಗಿ ಕಾಣುವ ಯಾವ ಆಧಾರವನ್ನೂ ನಮಗೆ ಕೊಡುವುದಿಲ್ಲ ಏಕೆ?
8 ಹಾಗಿದ್ದರೂ, ಪ್ರಪಂಚದ ದೋಷವು ಹತ್ತದಂತೆ ಇರಬೇಕೆಂಬ ಸಲಹೆಯು, ಯೆಹೋವನ ಸಾಕ್ಷಿಗಳಾಗಿರದ ಜನರನ್ನು ತುಚ್ಛವಾಗಿ ಕಾಣುವುದಕ್ಕೆ ನಮಗೆ ಯಾವ ಆಧಾರವನ್ನೂ ನೀಡುವುದಿಲ್ಲ. (ಜ್ಞಾನೋಕ್ತಿ 8:13) ಹಿಂದಿನ ಲೇಖನದಲ್ಲಿ ಚರ್ಚಿಸಲ್ಪಟ್ಟ ಯೆಹೂದಿ ಧಾರ್ಮಿಕ ನಾಯಕರ ಉದಾಹರಣೆಯನ್ನು ಜ್ಞಾಪಿಸಿಕೊಳ್ಳಿರಿ. ಅವರು ರಚಿಸಿದಂತಹ ಧರ್ಮವು ಯೆಹೋವನ ಅನುಗ್ರಹವನ್ನು ಪಡೆಯಲಿಲ್ಲ; ಇಲ್ಲವೆ ಯೆಹೂದ್ಯರಲ್ಲದವರೊಂದಿಗೆ ಒಳ್ಳೆಯ ಸಂಬಂಧಗಳನ್ನು ಪ್ರವರ್ಧಿಸಲಿಲ್ಲ. (ಮತ್ತಾಯ 21:43, 45) ತಮ್ಮನ್ನು ನೀತಿವಂತರೆಂದು ಭಾವಿಸಿಕೊಂಡ ಆ ಮತಭ್ರಾಂತ ಜನರು, ಅನ್ಯರನ್ನು ಕೀಳಾಗಿ ಕಂಡರು. ನಾವು ಇಂತಹ ಸಂಕುಚಿತ ಮನೋಭಾವವುಳ್ಳವರಾಗಿ, ಸಾಕ್ಷಿಗಳಲ್ಲದವರನ್ನು ಅಸಡ್ಡೆಯಿಂದ ನೋಡುವವರೂ ಉಪಚರಿಸುವವರೂ ಆಗಿರಬಾರದು. ಅಪೊಸ್ತಲ ಪೌಲನಂತೆ, ಸತ್ಯದ ಕುರಿತಾದ ಬೈಬಲಿನ ಸಂದೇಶಕ್ಕೆ ಕಿವಿಗೊಡುವವರೆಲ್ಲರೂ ದೇವರ ಅನುಗ್ರಹವನ್ನು ಪಡೆಯಬೇಕೆಂಬುದೇ ನಮ್ಮ ಬಯಕೆ ಆಗಿರತಕ್ಕದ್ದು.—ಅ. ಕೃತ್ಯಗಳು 26:29; 1 ತಿಮೊಥೆಯ 2:3, 4.
9. ನಮ್ಮ ನಂಬಿಕೆಗಳಲ್ಲಿ ಪಾಲಿಗರಾಗದವರ ಕುರಿತು ನಾವು ಮಾತಾಡುವ ರೀತಿಯ ಮೇಲೆ, ಒಂದು ಸಮತೂಕದ ಹಾಗೂ ಶಾಸ್ತ್ರೀಯ ನೋಟವು ಯಾವ ಪ್ರಭಾವವನ್ನು ಬೀರಬೇಕು?
9 ನಾವು ಸಾಕ್ಷಿಗಳಲ್ಲದವರ ಕುರಿತು ಮಾತನಾಡುವ ರೀತಿಯನ್ನು, ಒಂದು ಸಮತೂಕದ ಹಾಗೂ ಶಾಸ್ತ್ರೀಯ ನೋಟವು ಪ್ರಭಾವಿಸಬೇಕು. ಕ್ರೇತದಲ್ಲಿದ್ದ ಕ್ರೈಸ್ತರು, “ಯಾರನ್ನೂ ದೂಷಿಸದೆ ಕುತರ್ಕಮಾಡದೆ ಎಲ್ಲಾ ಮನುಷ್ಯರಿಗೆ ಪೂರ್ಣಸಾಧುಗುಣವನ್ನು ತೋರಿಸುತ್ತಾ ಸಾತ್ವಿಕರಾಗಿರಬೇಕೆಂತಲೂ” ಜ್ಞಾಪಿಸುವಂತೆ, ಪೌಲನು ತೀತನಿಗೆ ಉಪದೇಶ ನೀಡಿದನು. (ತೀತ 3:2) ಕ್ರೈಸ್ತರು “ಯಾರನ್ನೂ” ಅಂದರೆ, ಸುಳ್ಳುಗಾರರೂ, ಸೋಮಾರಿಗಳೂ ಮತ್ತು ಹೊಟ್ಟೇಬಾಕರೂ ಎಂಬ ಪ್ರಸಿದ್ಧಿಯನ್ನು ಪಡೆದಿದ್ದ ಕ್ರೇತದ ಕ್ರೈಸ್ತರಲ್ಲದವರನ್ನೂ ದೂಷಿಸಬಾರದು ಎಂಬುದನ್ನು ಗಮನಿಸಿರಿ. (ತೀತ 1:12) ಆದುದರಿಂದ ನಮ್ಮ ನಂಬಿಕೆಗಳಲ್ಲಿ ಪಾಲಿಗರಾಗದ ಜನರ ಕುರಿತು ಮಾತಾಡುವಾಗ, ಹೀನಾಯವಾದ ಪದಗಳನ್ನು ಉಪಯೋಗಿಸುವುದು ಅಶಾಸ್ತ್ರೀಯವಾಗಿದೆ. ನಾವು ಶ್ರೇಷ್ಠರೆಂಬ ಮನೋಭಾವವು ಇತರರನ್ನು ಯೆಹೋವನ ಆರಾಧನೆಯ ಕಡೆಗೆ ಸೆಳೆಯುವುದಿಲ್ಲ. ಬದಲಿಗೆ ಯೆಹೋವನ ವಾಕ್ಯದ ನ್ಯಾಯೋಚಿತ ತತ್ವಗಳಿಗನುಸಾರವಾಗಿ ನಾವು ಇತರರನ್ನು ಉಪಚರಿಸುವಾಗ, ದೇವರ “ಉಪದೇಶಕ್ಕೆ . . . ಅಲಂಕಾರವಾಗಿ” ಇರುತ್ತೇವೆ.—ತೀತ 2:10.
ಸುಮ್ಮನಿರಬೇಕಾದ ಸಮಯ, ಮಾತಾಡಬೇಕಾದ ಸಮಯ
10, 11. ಯಾವುದು (ಎ) ‘ಸುಮ್ಮನಿರಬೇಕಾದ ಸಮಯ’ (ಬಿ) ‘ಮಾತಾಡಬೇಕಾದ ಸಮಯ’ ಆಗಿದೆ ಎಂಬುದು ತನಗೆ ತಿಳಿದಿದೆಯೆಂಬುದನ್ನು ಯೇಸು ಹೇಗೆ ಪ್ರದರ್ಶಿಸಿದನು?
10 “ಸುಮ್ಮನಿರುವ ಸಮಯ, ಮಾತಾಡುವ ಸಮಯ”ವಿದೆ ಎಂದು ಪ್ರಸಂಗಿ 3:7 ಹೇಳುತ್ತದೆ. ಹಾಗಾದರೆ, ವಿರೋಧಿಗಳನ್ನು ಯಾವಾಗ ಅಲಕ್ಷಿಸಬೇಕು ಮತ್ತು ನಮ್ಮ ನಂಬಿಕೆಯನ್ನು ಸಮರ್ಥಿಸಲು ಯಾವಾಗ ಮಾತಾಡಬೇಕೆಂದು ನಿರ್ಧರಿಸುವುದೇ ಒಂದು ಸಮಸ್ಯೆಯಾಗಿದೆ. ವಿವೇಚನೆಯಲ್ಲಿ ಸದಾ ಪರಿಪೂರ್ಣನಾಗಿದ್ದ ಯೇಸುವಿನ ಮಾದರಿಯಿಂದ ನಾವು ಬಹಳಷ್ಟನ್ನು ಕಲಿಯಸಾಧ್ಯವಿದೆ. (1 ಪೇತ್ರ 2:21) “ಸುಮ್ಮನಿರುವ ಸಮಯ” ಯಾವಾಗ ಎಂದು ಅವನಿಗೆ ಗೊತ್ತಿತ್ತು. ದೃಷ್ಟಾಂತಕ್ಕೆ, ಮಹಾಯಾಜಕರು ಮತ್ತು ಹಿರಿಯರು ಅವನನ್ನು ಪಿಲಾತನ ಮುಂದೆ ಸುಳ್ಳಾಗಿ ಆರೋಪಿಸಿದಾಗ, ಯೇಸು “ಏನೂ ಉತ್ತರಕೊಡಲಿಲ್ಲ.” (ಮತ್ತಾಯ 27:11-14) ದೇವರ ಚಿತ್ತದ ನೆರವೇರಿಕೆಗೆ ಅಡ್ಡವಾಗಿ ಬರಬಹುದಾದ ಯಾವ ವಿಷಯವನ್ನೂ ಅವನು ಹೇಳಲು ಬಯಸಲಿಲ್ಲ. ಬದಲಿಗೆ ತನ್ನ ಕ್ರಿಯೆಗಳು ತನ್ನ ಪರವಾಗಿ ಮಾತಾಡುವಂತೆ ಅವನು ಬಿಟ್ಟನು. ಸತ್ಯವು ಸಹ ಅವರ ಅಹಂಕಾರಭರಿತ ಹೃದಮನಗಳನ್ನು ಬದಲಾಯಿಸಸಾಧ್ಯವಿಲ್ಲ ಎಂದು ಅವನಿಗೆ ಗೊತ್ತಿತ್ತು. ಆದಕಾರಣ, ತನ್ನ ಉದ್ದೇಶಪೂರ್ವಕ ಮೌನವನ್ನು ಮುರಿಯಲು ನಿರಾಕರಿಸುತ್ತಾ, ಅವನು ಅವರ ಆರೋಪವನ್ನು ಅಲಕ್ಷಿಸಿದನು.—ಯೆಶಾಯ 53:7.
11 ಹಾಗಿದ್ದರೂ, “ಮಾತಾಡುವ ಸಮಯ” ಯಾವಾಗ ಎಂಬುದೂ ಯೇಸುವಿಗೆ ತಿಳಿದಿತ್ತು. ಒಮ್ಮೆ, ಅವನು ತನ್ನ ಟೀಕಾಕಾರರ ಸುಳ್ಳು ಆಪಾದನೆಗಳನ್ನು ತಪ್ಪೆಂದು ರುಜುಪಡಿಸುತ್ತಾ ಖಡಾಖಂಡಿತವಾಗಿ ಮಾತಾಡಿದನು. ಉದಾಹರಣೆಗೆ, ಯೇಸು ಬೆಲ್ಜೆಬೂಲನ ಸಹಾಯದಿಂದ ದೆವ್ವಗಳನ್ನು ಬಿಡಿಸುತ್ತಾನೆಂದು ಜನಸಮೂಹದ ಮುಂದೆ ಅವನನ್ನು ತಪ್ಪಾಗಿ ನಿರೂಪಿಸಲು ಶಾಸ್ತ್ರಿಗಳು ಮತ್ತು ಫರಿಸಾಯರು ಪ್ರಯತ್ನಿಸಿದಾಗ, ಆ ಸುಳ್ಳು ಆಪಾದನೆಯ ವಿರುದ್ಧ ಅವನು ಮಾತನಾಡಿದನು. ತಲೆಕೆಳಗೆ ಮಾಡುವ ತರ್ಕ ಹಾಗೂ ದೃಷ್ಟಾಂತದೊಂದಿಗೆ, ಅವನು ಅವರ ಸುಳ್ಳಾರೋಪವನ್ನು ತಪ್ಪೆಂದು ರುಜುಪಡಿಸಿದನು. (ಮಾರ್ಕ 3:20-30; ಮತ್ತಾಯ 15:1-11ನ್ನೂ ನೋಡಿರಿ; 22:17-21; ಯೋಹಾನ 18:37) ತದ್ರೀತಿಯಲ್ಲಿ, ಯೇಸು ಹಿಡಿದುಕೊಡಲ್ಪಟ್ಟು, ಬಂಧಿಸಲ್ಪಟ್ಟ ಬಳಿಕ, ಮಹಾಸಭೆಯ ಮುಂದೆ ನಿಲ್ಲಿಸಲ್ಪಟ್ಟಾಗ, ಮಹಾಯಾಜಕನಾದ ಕಾಯಫನು ಕುತಂತ್ರದಿಂದ ಹೇಳಿದ್ದು: “ನಿನಗೆ ಜೀವಸ್ವರೂಪನಾದ ದೇವರ ಆಣೆಯನ್ನು ಇಡುತ್ತೇನೆ; ನೀನು ದೇವಕುಮಾರನಾದ ಕ್ರಿಸ್ತನು ಹೌದೋ ಅಲ್ಲವೋ ಎಂಬದನ್ನು ನಮಗೆ ಹೇಳಬೇಕು” ಅಂದನು. ಇದು ಕೂಡ “ಮಾತಾಡುವ ಸಮಯ”ವಾಗಿತ್ತು. ಏಕೆಂದರೆ ಯೇಸು ಸುಮ್ಮನಿರುತ್ತಿದ್ದರೆ, ಅವನು ಕ್ರಿಸ್ತನಲ್ಲವೆಂದು ಅವರು ಭಾವಿಸುತ್ತಿದ್ದರು. ಆದಕಾರಣ ಯೇಸು “ನಾನೇ” ಎಂದು ಉತ್ತರಿಸಿದನು.—ಮತ್ತಾಯ 26:63, 64; ಮಾರ್ಕ 14:61, 62.
12. ಪೌಲ ಬಾರ್ನಬರು ಧೈರ್ಯದಿಂದ ಇಕೋನ್ಯದಲ್ಲಿ ಮಾತಾಡುವಂತೆ ಯಾವ ಪರಿಸ್ಥಿತಿಗಳು ಅವರನ್ನು ಪ್ರೇರಿಸಿದವು?
12 ಪೌಲ ಬಾರ್ನಬರ ಉದಾಹರಣೆಯನ್ನೂ ಪರಿಗಣಿಸಿರಿ. ಅ. ಕೃತ್ಯಗಳು 14:1, 2 ಹೇಳುವುದು: “ಇಕೋನ್ಯದಲ್ಲಿ ಪೌಲ ಬಾರ್ನಬರು ಅದೇ ಪ್ರಕಾರವಾಗಿ ಯೆಹೂದ್ಯರ ಸಭಾಮಂದಿರದೊಳಗೆ ಹೋಗಿ ಬಲವಾಗಿ ಮಾತಾಡಿದ್ದರಿಂದ ಯೆಹೂದ್ಯರಲ್ಲಿಯೂ ಗ್ರೀಕರಲ್ಲಿಯೂ ಬಹುಮಂದಿ ನಂಬುವವರಾದರು. ಆದರೆ ನಂಬದೆ ಹೋದ ಯೆಹೂದ್ಯರು ಅನ್ಯಜನರ ಮನಸ್ಸನ್ನು ಸಹೋದರರಿಗೆ ವಿರುದ್ಧವಾಗಿ ರೇಗಿಸಿ ಕೆಡಿಸಿದರು.” ದ ನ್ಯೂ ಇಂಗ್ಲಿಷ್ ಬೈಬಲ್ ಓದುವುದು: “ಆದರೆ ಮತಾಂತರಗೊಳ್ಳದ ಯೆಹೂದ್ಯರು ಅನ್ಯಜನರನ್ನು ಕೆರಳಿಸಿ, ಕ್ರೈಸ್ತರ ವಿರುದ್ಧ ಅವರ ಮನಸ್ಸುಗಳನ್ನು ಕೆಡಿಸಿದರು.” ಯೆಹೂದಿ ವಿರೋಧಿಗಳು ಸಂದೇಶವನ್ನು ಸ್ವತಃ ನಿರಾಕರಿಸಿದ್ದಲ್ಲದೆ, ಕ್ರೈಸ್ತರ ವಿರುದ್ಧ ಅನ್ಯಜನರಲ್ಲಿ ಅವಿಚಾರಾಭಿಪ್ರಾಯವನ್ನು ಮೂಡಿಸಲು ಪ್ರಯತ್ನಿಸುತ್ತಾ, ನಿರಾಧಾರಿತ ಆಪಾದನೆಗಳ ಸುರಿಮಳೆಯನ್ನು ಸುರಿಸಿದರು.a ಯೋಚಿಸಿ ನೋಡಿ, ಕ್ರೈಸ್ತತ್ವದ ವಿಷಯದಲ್ಲಿ ಅವರ ದ್ವೇಷವು ಎಷ್ಟೊಂದು ಗಾಢವಾಗಿದ್ದಿರಬೇಕು! (ಹೋಲಿಸಿ ಅ. ಕೃತ್ಯಗಳು 10:28.) ಇದು “ಮಾತಾಡುವ ಸಮಯ”ವಾಗಿತ್ತೆಂದು ಪೌಲ ಬಾರ್ನಬರಿಗೆ ಅನಿಸಿತು. ಇಲ್ಲದಿದ್ದರೆ, ಹೊಸ ಶಿಷ್ಯರು ಈ ಬಹಿರಂಗ ನಿಂದೆಯಿಂದ ಎದೆಗುಂದಸಾಧ್ಯವಿತ್ತು. ‘ಹೀಗಿರಲಾಗಿ ಪೌಲ ಬಾರ್ನಬರು ಬಹುಕಾಲ ಅಲ್ಲಿದ್ದು ಯೆಹೋವನು . . . ಕೊಟ್ಟಿದ್ದ ಧೈರ್ಯದಿಂದ ಮಾತಾಡುತ್ತಿದ್ದರು.’ ಅದ್ಭುತಕಾರ್ಯಗಳನ್ನು ಮಾಡುವಂತೆ ಅವರನ್ನು ಶಕ್ತಗೊಳಿಸುವ ಮೂಲಕ ಯೆಹೋವನು ತನ್ನ ಸಮ್ಮತಿಯನ್ನು ಸೂಚಿಸಿದನು. ಆಗ, ಕೆಲವರು “ಯೆಹೂದ್ಯರ ಪಕ್ಷದವರಾದರು, ಕೆಲವರು ಅಪೊಸ್ತಲರ ಪಕ್ಷದವರಾದರು.”—ಅ. ಕೃತ್ಯಗಳು 14:3, 4.
13. ಸಾಮಾನ್ಯವಾಗಿ ನಿಂದೆಯ ವಿಷಯದಲ್ಲಿ “ಸುಮ್ಮನಿರುವ ಸಮಯ” ಯಾವುದಾಗಿರುತ್ತದೆ?
13 ಹಾಗಾದರೆ, ನಾವು ನಿಂದಿಸಲ್ಪಡುವಾಗ ಹೇಗೆ ಪ್ರತಿಕ್ರಿಯಿಸಬೇಕು? ಅದು ಪರಿಸ್ಥಿತಿಯ ಮೇಲೆ ಅವಲಂಬಿಸಿದೆ. ‘ಸುಮ್ಮನಿರಬೇಕಾದ ಸಮಯ’ ಎಂಬ ತತ್ವವನ್ನು ಅನುಸರಿಸುವಂತೆ ಕೆಲವು ಸನ್ನಿವೇಶಗಳು ಕೇಳಿಕೊಳ್ಳುತ್ತವೆ. ವಿರೋಧಿಗಳು ನಮ್ಮನ್ನು ಅರ್ಥಹೀನ ವಾಗ್ವಾದಗಳಲ್ಲಿ ಸೆಳೆಯಲು ಪ್ರಯತ್ನಿಸುವಾಗ ನಾವು ಸುಮ್ಮನಿರಬೇಕು. ಕೆಲವರು ಸತ್ಯವನ್ನು ತಿಳಿದುಕೊಳ್ಳಲು ಬಯಸುವುದೇ ಇಲ್ಲವೆಂಬುದನ್ನು ನಾವು ಎಂದಿಗೂ ಮರೆಯಬಾರದು. (2 ಥೆಸಲೊನೀಕ 2:9-12) ಯಾರ ಹಠಮಾರಿ ಹೃದಯಗಳು ಅವಿಶ್ವಾಸದಲ್ಲಿ ಬೇರೂರಿವೆಯೊ ಅಂತಹವರೊಂದಿಗೆ ತರ್ಕಿಸಲು ಪ್ರಯತ್ನಿಸುವುದು ವ್ಯರ್ಥವಾಗಿದೆ. ಅದಕ್ಕಿಂತಲೂ ಹೆಚ್ಚಾಗಿ, ನಮ್ಮನ್ನು ಆಕ್ರಮಿಸುವ ಪ್ರತಿಯೊಬ್ಬ ಸುಳ್ಳು ಆಪಾದಕನನ್ನು ಎದುರಿಸುವುದರಲ್ಲಿ ನಾವು ಮಗ್ನರಾಗುವುದಾದರೆ, ಬೈಬಲ್ ಸತ್ಯವನ್ನು ನಿಜವಾಗಿಯೂ ಕಲಿಯಲು ಬಯಸುವ ಪ್ರಾಮಾಣಿಕ ಹೃದಯದ ಜನರಿಗೆ ಸಹಾಯ ಮಾಡುವಂತಹ ಪ್ರಮುಖ ಹಾಗೂ ಪ್ರತಿಫಲದಾಯಕ ಕೆಲಸದಿಂದ ನಾವು ದೂರಸರಿಯಸಾಧ್ಯವಿದೆ. ಆದುದರಿಂದ, ನಮ್ಮ ಕುರಿತು ಸುಳ್ಳಾರೋಪಗಳನ್ನು ಹಬ್ಬಿಸುವ ವಿಷಯದಲ್ಲಿ ಪಟ್ಟುಹಿಡಿದಿರುವ ವೈರಿಗಳನ್ನು ನಾವು ಎದುರಿಸುವಾಗ, ಪ್ರೇರಿತ ಬುದ್ಧಿವಾದವು, “ಅವರನ್ನು ಬಿಟ್ಟು ತೊಲಗಿ ಹೋಗಿ” ಎಂದಾಗಿದೆ.—ರೋಮಾಪುರ 16:17, 18; ಮತ್ತಾಯ 7:6.
14. ಇತರರ ಮುಂದೆ ನಾವು ಯಾವ ವಿಧಗಳಲ್ಲಿ ನಮ್ಮ ನಂಬಿಕೆಯನ್ನು ಸಮರ್ಥಿಸಬಹುದು?
14 ಇದರ ಅರ್ಥ, ನಾವು ನಮ್ಮ ನಂಬಿಕೆಯನ್ನು ಸಮರ್ಥಿಸಬಾರದೆಂದಲ್ಲ. ಎಷ್ಟೆಂದರೂ, “ಮಾತಾಡುವ ಸಮಯ” ಒಂದಿದೆ. ನಮ್ಮ ವಿಷಯದಲ್ಲಿ ಹಬ್ಬಿಸಲ್ಪಟ್ಟಿರುವ ಅವಮಾನಕರ ಟೀಕೆಗೆ ಕಿವಿಗೊಡುವ ಪ್ರಾಮಾಣಿಕ ಜನರ ಕುರಿತು ನಾವು ನಿಜವಾಗಿಯೂ ಚಿಂತಿತರಾಗಿದ್ದೇವೆ. ನಮ್ಮ ಪೂರ್ಣಹೃದಯದಿಂದ ನಾವು ಮನಗಂಡಿರುವ ನಂಬಿಕೆಗಳ ಕುರಿತು ಇತರರಿಗೆ ಸ್ಪಷ್ಟವಾದ ವಿವರಣೆಯನ್ನು ನೀಡಲು ನಾವು ಸಿದ್ಧರಾಗಿದ್ದೇವೆ, ಮತ್ತು ಆ ಅವಕಾಶಕ್ಕಾಗಿ ನಾವು ನಿಶ್ಚಯವಾಗಿಯೂ ಎದುರುನೋಡುತ್ತೇವೆ. ಪೇತ್ರನು ಬರೆದುದು: “ಕ್ರಿಸ್ತನನ್ನು ಕರ್ತನೆಂದು ನಿಮ್ಮ ಹೃದಯಗಳಲ್ಲಿ ಪ್ರತಿಷ್ಠೆಪಡಿಸಿರಿ. ನಿಮ್ಮಲ್ಲಿರುವ ನಿರೀಕ್ಷೆಗೆ ಆಧಾರವೇನೆಂದು ಕೇಳುವವರೆಲ್ಲರಿಗೆ ಉತ್ತರ ಹೇಳುವದಕ್ಕೆ ಯಾವಾಗಲೂ ಸಿದ್ಧವಾಗಿರಿ.” (1 ಪೇತ್ರ 3:15) ನಿಜವಾಗಿಯೂ ಆಸಕ್ತರಾಗಿರುವ ಜನರು ನಮ್ಮ ನಂಬಿಕೆಗಳ ಕುರಿತು ಪ್ರಶ್ನಿಸುವಾಗ, ಮತ್ತು ವಿರೋಧಿಗಳು ಹೊರಿಸಿರುವ ಸುಳ್ಳು ಆಪಾದನೆಗಳ ಕುರಿತು ನಮ್ಮನ್ನು ಕೇಳುವಾಗ, ಸರಿಯಾದ ಬೈಬಲ್ ಉತ್ತರಗಳನ್ನು ನೀಡುತ್ತಾ ನಮ್ಮ ನಂಬಿಕೆಯನ್ನು ಸಮರ್ಥಿಸುವುದು ನಮ್ಮ ಹೊಣೆಯಾಗಿದೆ. ಇದರೊಂದಿಗೆ ನಮ್ಮ ಉತ್ತಮ ನಡತೆಯೂ ಬಹಳಷ್ಟನ್ನು ತಿಳಿಸಬಲ್ಲದು. ನಾವು ದೇವರ ನೀತಿಯ ಮಟ್ಟಗಳಿಗನುಸಾರ ಜೀವಿಸಲು ನಿಜವಾಗಿಯೂ ಪ್ರಯತ್ನಿಸುತ್ತಿರುವುದನ್ನು ನಿಷ್ಪಕ್ಷಪಾತ ವೀಕ್ಷಕರು ಗಮನಿಸುವಾಗ, ನಮ್ಮ ಮೇಲೆ ಹೊರಿಸಲ್ಪಟ್ಟಿರುವ ಆಪಾದನೆಗಳು ಸುಳ್ಳೆಂದು ಅವರು ಸುಲಭವಾಗಿ ಗ್ರಹಿಸಬಲ್ಲರು.—1 ಪೇತ್ರ 2:12-15.
ನಿಂದಾತ್ಮಕ ಪ್ರಕಟನೆಯ ಕುರಿತೇನು?
15. ಮಾಧ್ಯಮದಲ್ಲಿ ಪ್ರಸಾರವಾದ ತಪ್ಪಾದ ಮಾಹಿತಿಗೆ ಯೆಹೋವನ ಸಾಕ್ಷಿಗಳು ಗುರಿಯಾದುದರ ಒಂದು ಉದಾಹರಣೆಯು ಯಾವುದಾಗಿದೆ?
15 ಕೆಲವೊಮ್ಮೆ ಯೆಹೋವನ ಸಾಕ್ಷಿಗಳ ಕುರಿತು ಪ್ರಸಾರಮಾಧ್ಯಮದಲ್ಲಿ ತಪ್ಪಾದ ಮಾಹಿತಿಯು ನೀಡಲ್ಪಟ್ಟಿದೆ. ಉದಾಹರಣೆಗೆ, ಆಗಸ್ಟ್ 1, 1997ರಂದು ಒಂದು ರಷ್ಯನ್ ವಾರ್ತಾಪತ್ರಿಕೆಯು, ಸಾಕ್ಷಿಗಳ ಕುರಿತು ನಿಂದಾತ್ಮಕವಾದೊಂದು ಲೇಖನವನ್ನು ಪ್ರಕಟಿಸಿತು. ಹಲವಾರು ವಿಷಯಗಳ ಜೊತೆಗೆ ಆ ಲೇಖನವು ಹೇಳಿದ್ದೇನೆಂದರೆ, “ತಮ್ಮ ನಂಬಿಕೆಯನ್ನು ಅರ್ಥಮಾಡಿಕೊಳ್ಳದ ಮತ್ತು ಅದರಲ್ಲಿ ಪಾಲಿಗರಾಗದ ಪತ್ನಿಯರನ್ನು, ಪತಿಯರನ್ನು, ಮತ್ತು ಹೆತ್ತವರನ್ನು ಬಿಟ್ಟುಬಿಡಬೇಕೆಂದು’ ಅವರ ಸದಸ್ಯರಿಂದ ಕೇಳಿಕೊಳ್ಳಲಾಗುತ್ತದೆ. ಆ ಆಪಾದನೆಯು ಸುಳ್ಳೆಂದು ಯೆಹೋವನ ಸಾಕ್ಷಿಗಳ ಒಳ್ಳೆಯ ಪರಿಚಯವಿರುವವರು ಬಲ್ಲರು. ಕ್ರೈಸ್ತರು ಅವಿಶ್ವಾಸಿ ಕುಟುಂಬ ಸದಸ್ಯರನ್ನು ಪ್ರೀತಿವಿಶ್ವಾಸಗಳಿಂದ ಉಪಚರಿಸಬೇಕೆಂದು ಬೈಬಲು ಸೂಚಿಸುತ್ತದೆ, ಮತ್ತು ಸಾಕ್ಷಿಗಳು ಆ ನಿರ್ದೇಶನಕ್ಕನುಸಾರ ಜೀವಿಸಲು ಪ್ರಯತ್ನಿಸುತ್ತಾರೆ. (1 ಕೊರಿಂಥ 7:12-16; 1 ಪೇತ್ರ 3:1-4) ಹಾಗಿದ್ದರೂ, ಆ ಲೇಖನವು ಮುದ್ರಿಸಲ್ಪಟ್ಟ ಕಾರಣ, ಅನೇಕ ಓದುಗರಿಗೆ ತಪ್ಪು ತಿಳುವಳಿಕೆ ಉಂಟಾಯಿತು. ನಮ್ಮ ಮೇಲೆ ಸುಳ್ಳು ಆರೋಪ ಹೊರಿಸಲ್ಪಡುವಾಗ ನಾವು ನಮ್ಮ ನಂಬಿಕೆಯನ್ನು ಹೇಗೆ ಸಮರ್ಥಿಸಸಾಧ್ಯವಿದೆ?
16, 17, ಮತ್ತು ಹದಿನಾರನೆಯ ಪುಟದಲ್ಲಿರುವ ರೇಖಾಚೌಕ. (ಎ) ಮಾಧ್ಯಮದಲ್ಲಿ ಪ್ರಸಾರವಾಗುವ ಸುಳ್ಳು ಮಾಹಿತಿಗೆ ಪ್ರತಿಕ್ರಿಯಿಸುವುದರ ಕುರಿತು ಕಾವಲಿನಬುರುಜು ಪತ್ರಿಕೆಯು ಒಮ್ಮೆ ಏನು ಹೇಳಿತು? (ಬಿ) ಯಾವ ಸನ್ನಿವೇಶಗಳಲ್ಲಿ ಯೆಹೋವನ ಸಾಕ್ಷಿಗಳು ಮಾಧ್ಯಮದ ನಕಾರಾತ್ಮಕ ವರದಿಗಳಿಗೆ ಪ್ರತಿಕ್ರಿಯಿಸಬಲ್ಲರು?
16 ಇಲ್ಲಿಯೂ “ಸುಮ್ಮನಿರುವ ಸಮಯ, ಮಾತಾಡುವ ಸಮಯ”ವಿದೆ. ಕಾವಲಿನಬುರುಜು ಪತ್ರಿಕೆಯು ಇದನ್ನು ಈ ರೀತಿಯಲ್ಲಿ ವಿವರಿಸಿತು: “ಪ್ರಸಾರಮಾಧ್ಯಮದ ಮೂಲಕ ಹರಡಿರುವ ಸುಳ್ಳು ಮಾಹಿತಿಯನ್ನು ನಾವು ಅಲಕ್ಷಿಸುತ್ತೇವೊ, ಇಲ್ಲವೆ ಯೋಗ್ಯವಾದ ವಿಧಾನದ ಮೂಲಕ ಸತ್ಯವನ್ನು ಸಮರ್ಥಿಸುತ್ತೇವೊ ಎಂಬುದು, ಪರಿಸ್ಥಿತಿಗಳು ಹಾಗೂ ಟೀಕೆಯನ್ನು ಪ್ರಚೋದಿಸಿದ ವ್ಯಕ್ತಿ ಮತ್ತು ಅವನ ಉದ್ದೇಶದ ಮೇಲೆ ಅವಲಂಬಿಸಿರುತ್ತದೆ.” ಕೆಲವೊಂದು ಸಂದರ್ಭಗಳಲ್ಲಿ ನಕಾರಾತ್ಮಕ ವರದಿಗಳನ್ನು ಅಲಕ್ಷಿಸುವುದು ಅತ್ಯುತ್ತಮವಾಗಿದೆ. ಹೀಗೆ ಮಾಡುವುದರ ಮೂಲಕ ನಾವು ಸುಳ್ಳಾರೋಪಗಳಿಗೆ ಹೆಚ್ಚಿನ ಪ್ರಚಾರವನ್ನು ನೀಡಲಾರೆವು.
17 ಬೇರೆ ಸಂದರ್ಭಗಳಲ್ಲಿ, ಅದು “ಮಾತಾಡುವ ಸಮಯ”ವಾಗಿರಬಹುದು. ಯೆಹೋವನ ಸಾಕ್ಷಿಗಳ ಕುರಿತು ಒಬ್ಬ ವಿಶ್ವಾಸಯೋಗ್ಯ ಪತ್ರಕರ್ತನು ಇಲ್ಲವೆ ವರದಿಗಾರನಿಗೆ ತಪ್ಪಾದ ಮಾಹಿತಿಯು ನೀಡಲ್ಪಟ್ಟಿದ್ದು, ಅವನು ನಮ್ಮ ಕುರಿತು ಸತ್ಯವನ್ನು ತಿಳಿದುಕೊಳ್ಳಲು ಬಯಸಬಹುದು. (“ಒಂದು ತಪ್ಪಾದ ಪ್ರತಿನಿಧಿತ್ವವನ್ನು ಸರಿಪಡಿಸುವುದು” ಎಂಬ ರೇಖಾಚೌಕವನ್ನು ನೋಡಿರಿ.) ಮಾಧ್ಯಮದ ನಕಾರಾತ್ಮಕ ವರದಿಗಳು ನಮ್ಮ ಸಾರುವ ಕಾರ್ಯಕ್ಕೆ ತಡೆಯನ್ನು ಉಂಟುಮಾಡುವ ಅವಿಚಾರಾಭಿಪ್ರಾಯವನ್ನು ಕೆರಳಿಸುವುದಾದರೆ, ವಾಚ್ ಟವರ್ ಸೊಸೈಟಿಯ ಬ್ರಾಂಚ್ ಆಫೀಸಿನ ಪ್ರತಿನಿಧಿಗಳು, ಯಾವುದಾದರೂ ಸೂಕ್ತವಾದ ವಿಧಾನದ ಮೂಲಕ ಸತ್ಯವನ್ನು ಸಮರ್ಥಿಸಲು ಪ್ರಥಮ ಹೆಜ್ಜೆಯನ್ನು ತೆಗೆದುಕೊಳ್ಳಬಹುದು.b ಉದಾಹರಣೆಗೆ, ನಿಜಾಂಶಗಳನ್ನು ಒಂದು ಟಿವಿ ಕಾರ್ಯಕ್ರಮದಲ್ಲಿ ಸಾದರಪಡಿಸುವಂತೆ ಅರ್ಹ ಹಿರಿಯರು ನೇಮಿಸಲ್ಪಡಬಹುದು. ನೇಮಿಸಲ್ಪಟ್ಟ ಹಿರಿಯರು ಅಲ್ಲಿಗೆ ಹೋಗಲು ತಪ್ಪುವುದಾದರೆ, ಯೆಹೋವನ ಸಾಕ್ಷಿಗಳಲ್ಲಿ ಉತ್ತರವಿಲ್ಲ ಎಂಬುದನ್ನು ಅದು ಸೂಚಿಸಬಹುದು. ವ್ಯಕ್ತಿಗತ ಸಾಕ್ಷಿಗಳು ಇಂತಹ ವಿಷಯಗಳಲ್ಲಿ ವಾಚ್ ಟವರ್ ಸೊಸೈಟಿ ಹಾಗೂ ಅದರ ಪ್ರತಿನಿಧಿಗಳ ನಿರ್ದೇಶನಕ್ಕೆ ವಿವೇಕಯುತವಾಗಿ ಸಹಕರಿಸುತ್ತಾರೆ.—ಇಬ್ರಿಯ 13:17.
ಕಾನೂನುಬದ್ಧವಾಗಿ ಸುವಾರ್ತೆಯನ್ನು ಸಮರ್ಥಿಸುವುದು
18. (ಎ) ಸುವಾರ್ತೆಯನ್ನು ಸಾರಲು ನಮಗೆ ಮಾನವ ಸರಕಾರಗಳ ಅನುಮತಿಯ ಅಗತ್ಯವಿಲ್ಲವೇಕೆ? (ಬಿ) ಸಾರುವ ಅನುಮತಿ ನಿರಾಕರಿಸಲ್ಪಟ್ಟಾಗ ನಾವು ಯಾವ ಕ್ರಮವನ್ನು ಕೈಕೊಳ್ಳುತ್ತೇವೆ?
18 ದೇವರ ರಾಜ್ಯದ ಸುವಾರ್ತೆಯನ್ನು ಸಾರುವ ನಮ್ಮ ಅಧಿಕಾರವು ಸ್ವರ್ಗದಿಂದ ಬರುತ್ತದೆ. ಈ ಕೆಲಸವನ್ನು ಮಾಡುವಂತೆ ನಮಗೆ ಆಜ್ಞೆಯಿತ್ತ ಯೇಸುವಿಗೆ, ‘ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ಎಲ್ಲಾ ಅಧಿಕಾರವು’ ಕೊಡಲ್ಪಟ್ಟಿದೆ. (ಮತ್ತಾಯ 28:18-20; ಫಿಲಿಪ್ಪಿ 2:9-11) ಆದುದರಿಂದ, ಸಾರಲಿಕ್ಕಾಗಿ ನಮಗೆ ಮಾನವ ಸರಕಾರಗಳ ಅನುಮತಿ ಬೇಕಾಗಿಲ್ಲ. ಹಾಗಿದ್ದರೂ, ಧಾರ್ಮಿಕ ಸ್ವಾತಂತ್ರ್ಯವಿರುವುದು ರಾಜ್ಯ ಸಂದೇಶದ ಪ್ರಸಾರಕ್ಕೆ ಅನುಕೂಲಕರವಾಗಿದೆ. ನಮ್ಮ ಆರಾಧನೆಯನ್ನು ಮುಂದುವರಿಸಿಕೊಂಡು ಹೋಗಲು ಸ್ವಾತಂತ್ರ್ಯವಿರುವ ದೇಶಗಳಲ್ಲಿ, ಅದನ್ನು ರಕ್ಷಿಸಲು ನಾವು ಕಾನೂನಿನ ವ್ಯವಸ್ಥೆಯನ್ನು ಉಪಯೋಗಿಸಿಕೊಳ್ಳುವೆವು. ಎಲ್ಲಿ ನಮಗೆ ಅಂತಹ ಸ್ವಾತಂತ್ರ್ಯವಿಲ್ಲವೊ ಅಲ್ಲಿ ಕಾನೂನಿನ ಚೌಕಟ್ಟಿನೊಳಗೆ ಅದನ್ನು ಪಡೆದುಕೊಳ್ಳಲು ನಾವು ಪ್ರಯತ್ನಿಸುವೆವು. ನಮ್ಮ ಉದ್ದೇಶವು ಸಾಮಾಜಿಕ ಸುಧಾರಣೆಯಲ್ಲ, ಬದಲಾಗಿ “ಸುವಾರ್ತೆಯನ್ನು ಸಮರ್ಥಿಸುವುದು ಮತ್ತು ಅದನ್ನು ಕಾನೂನುಬದ್ಧವಾಗಿ ಸ್ಥಾಪಿಸುವುದು” ಆಗಿದೆ.c—ಫಿಲಿಪ್ಪಿ 1:7, NW.
19. (ಎ) ‘ದೇವರ ವಿಷಯಗಳನ್ನು ದೇವರಿಗೆ ಸಲ್ಲಿಸುವುದರ’ ಪರಿಣಾಮವು ಏನಾಗಿರಬಹುದು? (ಬಿ) ಇದರ ವಿಷಯದಲ್ಲಿ ನಮ್ಮ ದೃಢಸಂಕಲ್ಪವು ಏನಾಗಿದೆ?
19 ಯೆಹೋವನ ಸಾಕ್ಷಿಗಳೋಪಾದಿ, ನಾವು ಯೆಹೋವನನ್ನು ವಿಶ್ವದ ಪರಮಾಧಿಕಾರಿ ಎಂದು ಅಂಗೀಕರಿಸುತ್ತೇವೆ. ಆತನ ನಿಯಮವು ಶ್ರೇಷ್ಠಮಟ್ಟದ್ದಾಗಿದೆ. ನಾವು ನಿಷ್ಠೆಯಿಂದ ಮಾನವ ಸರಕಾರಗಳಿಗೆ ವಿಧೇಯರಾಗಿ, ‘ಕೈಸರನ ವಿಷಯಗಳನ್ನು ಕೈಸರನಿಗೆ ಸಲ್ಲಿಸುತ್ತೇವೆ.’ ಆದರೆ ‘ದೇವರ ವಿಷಯಗಳನ್ನು ದೇವರಿಗೆ ಸಲ್ಲಿಸುವ’ ಹೆಚ್ಚು ಪ್ರಮುಖವಾದ ಜವಾಬ್ದಾರಿಯನ್ನು ಪೂರೈಸುವ ಈ ವಿಷಯಕ್ಕೆ ಯಾವುದೂ ಅಡ್ಡಬರುವಂತೆ ನಾವು ಬಿಡುವುದಿಲ್ಲ. (ಮತ್ತಾಯ 22:21) ಹಾಗೆ ಮಾಡುವುದರಿಂದ ನಾವು ಜನಾಂಗಗಳಿಂದ ‘ಹಗೆಮಾಡಲ್ಪಡುವೆವು’ ಎಂಬುದನ್ನು ಪೂರ್ತಿಯಾಗಿ ಗ್ರಹಿಸುವುದಾದರೂ, ಇದನ್ನು ಶಿಷ್ಯತ್ವದ ವೆಚ್ಚವೆಂದು ಅರ್ಥಮಾಡಿಕೊಳ್ಳುತ್ತೇವೆ. ಯೆಹೋವನ ಸಾಕ್ಷಿಗಳ ಈ 20ನೆಯ ಶತಮಾನದ ಕಾನೂನುಬದ್ಧ ದಾಖಲೆಯು, ನಮ್ಮ ನಂಬಿಕೆಯನ್ನು ಸಮರ್ಥಿಸಲು ನಾವು ದೃಢಸಂಕಲ್ಪವುಳ್ಳವರು ಎಂಬುದಕ್ಕೆ ಸಾಕ್ಷ್ಯವಾಗಿದೆ. ಯೆಹೋವನ ಸಹಾಯ ಮತ್ತು ಬೆಂಬಲದೊಂದಿಗೆ ನಾವು “ಎಡೆಬಿಡದೆ . . . ಶುಭವರ್ತಮಾನವನ್ನು ಸಾರುತ್ತಾ” ಮುಂದುವರಿಯುವೆವು.—ಅ. ಕೃತ್ಯಗಳು 5:42.
[ಅಧ್ಯಯನ ಪ್ರಶ್ನೆಗಳು]
a ಮ್ಯಾತ್ಯೂ ಹೆನ್ರಿಸ್ ಕಾಮೆಂಟರಿ ಆನ್ ದ ಹೋಲ್ ಬೈಬಲ್ ವಿವರಿಸುವುದೇನೆಂದರೆ, ಯೆಹೂದಿ ವಿರೋಧಿಗಳು “ತಮಗೆ ಪರಿಚಯವಿದ್ದಂತಹ [ಅನ್ಯರ] ಬಳಿಗೆ ಉದ್ದೇಶಪೂರ್ವಕವಾಗಿ ಹೋಗಿ, ಕ್ರೈಸ್ತತ್ವದ ವಿರುದ್ಧ ಕೆಟ್ಟದಾದ ಅಭಿಪ್ರಾಯವನ್ನು ಮಾತ್ರವಲ್ಲ ನಿಕೃಷ್ಟವಾದ ಅಭಿಪ್ರಾಯವನ್ನೂ ಮೂಡಿಸಲಿಕ್ಕಾಗಿ ಮನಸ್ಸಿಗೆ ತೋಚಿದ್ದೆಲ್ಲವನ್ನೂ ಹೇಳುತ್ತಿದ್ದರು.”
b ಆ ನಿಂದಾತ್ಮಕ ಲೇಖನವು ರಷ್ಯನ್ ವಾರ್ತಾಪತ್ರಿಕೆಯಲ್ಲಿ ಪ್ರಕಟಿಸಲ್ಪಟ್ಟ ನಂತರ (15ನೆಯ ಪ್ಯಾರಗ್ರಾಫ್‌ನಲ್ಲಿ ಉಲ್ಲೇಖಿಸಲ್ಪಟ್ಟದ್ದು), ಯೆಹೋವನ ಸಾಕ್ಷಿಗಳು, ವಾರ್ತಾ ಮಾಧ್ಯಮಗಳ ವಾಗ್ವಾದಕ್ಕಾಗಿರುವ ರಷ್ಯನ್ ಫೆಡ್‌ರೇಷನ್‌ನ ಅಧ್ಯಕ್ಷರ ನ್ಯಾಯಾಂಗ ಸಭೆಗೆ ಅಪೀಲ್ ಮಾಡಿ, ಆ ಲೇಖನದಲ್ಲಿ ಕೊಡಲ್ಪಟ್ಟಿರುವ ಸುಳ್ಳು ಆಪಾದನೆಗಳನ್ನು ಪುನರ್ವಿಮರ್ಶಿಸುವಂತೆ ಮನವಿಮಾಡಿಕೊಂಡರು. ಈ ಮಾನನಷ್ಟಕರವಾದ ಲೇಖನವನ್ನು ಪ್ರಕಟಿಸಿದ್ದಕ್ಕಾಗಿ, ಇತ್ತೀಚೆಗೆ ನ್ಯಾಯಾಲಯವು ಆ ವಾರ್ತಾಪತ್ರಿಕೆಯ ಮೇಲೆ ದಂಡ ವಿಧಿಸಿತು.—ಡಿಸೆಂಬರ್ 8, 1998ರ ಎಚ್ಚರ! ಪತ್ರಿಕೆಯ 26-7ನೆಯ ಪುಟಗಳನ್ನು ನೋಡಿರಿ.
c ಈ ಸಂಚಿಕೆಯ 19-22ನೆಯ ಪುಟಗಳಲ್ಲಿರುವ “ಕಾನೂನುಬದ್ಧವಾಗಿ ಸುವಾರ್ತೆಯನ್ನು ಸಂರಕ್ಷಿಸುವುದು” ಎಂಬ ಲೇಖನವನ್ನು ನೋಡಿರಿ.
ನಿಮಗೆ ನೆನಪಿದೆಯೊ?
◻ ಯೆಹೋವನ ಸಾಕ್ಷಿಗಳು ಏಕೆ ‘ಹಗೆಮಾಡಲ್ಪಡುತ್ತಾರೆ’?
◻ ನಮ್ಮ ಧಾರ್ಮಿಕ ನಂಬಿಕೆಗಳಲ್ಲಿ ಪಾಲಿಗರಾಗದವರನ್ನು ನಾವು ಹೇಗೆ ವೀಕ್ಷಿಸಬೇಕು?
◻ ವಿರೋಧಿಗಳೊಂದಿಗೆ ವ್ಯವಹರಿಸುವಾಗ ಯಾವ ಸಮತೂಕದ ಮಾದರಿಯನ್ನು ಯೇಸು ಇಟ್ಟನು?
◻ ನಾವು ನಿಂದಿಸಲ್ಪಡುವಾಗ, “ಸುಮ್ಮನಿರುವ ಸಮಯ, ಮಾತಾಡುವ ಸಮಯ” ಇದೆ ಎಂಬ ತತ್ವವನ್ನು ನಾವು ಹೇಗೆ ಅನ್ವಯಿಸಸಾಧ್ಯವಿದೆ?
[ಪುಟ 16 ರಲ್ಲಿರುವ ಚೌಕ]
ಒಂದು ತಪ್ಪಾದ ಪ್ರತಿನಿಧಿತ್ವವನ್ನು ಸರಿಪಡಿಸುವುದು
“ಬೋಲಿವಿಯದ ಯಾಕ್ವೀಬ ಪಟ್ಟಣದಲ್ಲಿ, ಧರ್ಮಭ್ರಷ್ಟರಿಂದ ತಯಾರಿಸಲ್ಪಟ್ಟ ಒಂದು ಚಿತ್ರವನ್ನು ತೋರಿಸಲು ಸ್ಥಳಿಕ ಸೌವಾರ್ತಿಕ ಗುಂಪೊಂದು ಟಿವಿ ಕೇಂದ್ರದಲ್ಲಿ ಏರ್ಪಾಡನ್ನು ಮಾಡಿತು. ಆ ಕಾರ್ಯಕ್ರಮದ ಕೆಟ್ಟ ಪರಿಣಾಮದ ಕಾರಣ, ಹಿರಿಯರು ಎರಡು ಟಿವಿ ಕೇಂದ್ರಗಳಿಗೆ ಭೇಟಿನೀಡಿ, ಯೆಹೋವನ ಸಾಕ್ಷಿಗಳು—ಹೆಸರಿನ ಹಿಂದಿರುವ ಸಂಸ್ಥೆ (ಇಂಗ್ಲಿಷ್) ಮತ್ತು ಬೈಬಲ್—ನಿಜತ್ವ ಹಾಗೂ ಪ್ರವಾದನೆಯ ಗ್ರಂಥ (ಇಂಗ್ಲಿಷ್) ಎಂಬ ವಿಡಿಯೊಗಳನ್ನು ಸಾರ್ವಜನಿಕರಿಗೆ ತೋರಿಸುವಂತೆ ಹಣನೀಡಿದರು. ಸೊಸೈಟಿಯ ವಿಡಿಯೊಗಳನ್ನು ನೋಡಿದ ಬಳಿಕ, ಒಂದು ರೇಡಿಯೊ ಕೇಂದ್ರದ ಯಜಮಾನನು ಧರ್ಮಭ್ರಷ್ಟರ ಕಾರ್ಯಕ್ರಮದಲ್ಲಿ ತೋರಿಸಲ್ಪಟ್ಟ ತಪ್ಪಾದ ಮಾಹಿತಿಯನ್ನು ಪ್ರಸಾರ ಮಾಡಿದ್ದಕ್ಕಾಗಿ ಬಹಳವಾಗಿ ಕೋಪಗೊಂಡನು. ಯೆಹೋವನ ಸಾಕ್ಷಿಗಳ ಮುಂಬರಲಿದ್ದ ಜಿಲ್ಲಾ ಅಧಿವೇಶನದ ಕುರಿತು ಸಂಕ್ಷಿಪ್ತ ಪ್ರಕಟನೆಗಳನ್ನು ಉಚಿತವಾಗಿ ಮಾಡುವುದಾಗಿ ಅವನು ಹೇಳಿದನು. ಹಾಜರಿಯ ಸಂಖ್ಯೆ ಬಹಳವಾಗಿತ್ತು, ಮತ್ತು ಸಾಕ್ಷಿಗಳು ಜನರನ್ನು ಶುಶ್ರೂಷೆಯಲ್ಲಿ ಭೇಟಿಯಾದಾಗ, ಅನೇಕ ಪ್ರಾಮಾಣಿಕ ಹೃದಯದ ಜನರು ಯಥಾರ್ಥವಾದ ಪ್ರಶ್ನೆಗಳನ್ನು ಕೇಳಿದರು.”—1997 ಯಿಯರ್‌ಬುಕ್ ಆಫ್ ಜೆಹೋವಾಸ್ ವಿಟ್ನೆಸೆಸ್ (ಇಂಗ್ಲಿಷ್), 61-2ನೆಯ ಪುಟಗಳು.
[ಪುಟ 17 ರಲ್ಲಿರುವ ಚಿತ್ರ]
ಕೆಲವೊಮ್ಮೆ ಯೇಸು ತನ್ನ ಟೀಕೆಗಾರರ ಸುಳ್ಳು ಆಪಾದನೆಗಳನ್ನು ಬಹಿರಂಗವಾಗಿ ತಪ್ಪೆಂದು ರುಜುಪಡಿಸಿದನು