ರಾಜ್ಯ ಘೋಷಕರು ವರದಿ ಮಾಡುತ್ತಾರೆ
ಆಫ್ರಿಕದಲ್ಲಿ ಎಳೆಯರು ಸುವಾರ್ತೆಯನ್ನು ಪ್ರಕಟಪಡಿಸುತ್ತಾರೆ
ಯೇಸುವಿನ ಪುನರುತ್ಥಾನವಾದ ಸ್ವಲ್ಪ ಸಮಯದಲ್ಲೇ, ಆಫ್ರಿಕದ ಒಬ್ಬ ಮನುಷ್ಯನು ಯೆರೂಸಲೇಮಿಗೆ ಭೇಟಿಕೊಡುತ್ತಿದ್ದನು. ಬೈಬಲ್ ಅವನ ಹೆಸರನ್ನು ಕೊಡುವುದಿಲ್ಲ. ಅವನು “ಐಥಿಯೋಪ್ಯದವರ ರಾಣಿಯಾಗಿದ್ದ ಕಂದಾಕೆಯ ಕೈಕೆಳಗೆ ದೊಡ್ಡ ಅಧಿಕಾರಿಯೂ ಆಕೆಯ ಎಲ್ಲಾ ಖಜಾನೆಯ ಮೇಲ್ವಿಚಾರಕನೂ” ಆಗಿ ಮಾತ್ರ ಪರಿಚಯಿಸಲ್ಪಡುತ್ತಾನೆ. ಅವನ ಕುರಿತಾಗಿ ಬೈಬಲಿನಲ್ಲಿ ಏಕೆ ತಿಳಿಸಲಾಗಿದೆ? ಯಾಕಂದರೆ ಆತನಿಗೆ “ಯೇಸುವಿನ ವಿಷಯವಾದ ಸುವಾರ್ತೆಯನ್ನು” ಪ್ರಕಟಪಡಿಸಲಿಕ್ಕಾಗಿ ಒಬ್ಬ ದೇವದೂತನು ಕ್ರೈಸ್ತ ಸೌವಾರ್ತಿಕನಾಗಿದ್ದ ಫಿಲಿಪ್ಪನನ್ನು ನಿರ್ದೇಶಿಸಿದನು. ಈ ಐಥಿಯೋಪ್ಯದ ಮನುಷ್ಯನು ದಾಖಲಿಸಲ್ಪಟ್ಟಂತಹ ಕ್ರೈಸ್ತ ಸಭೆಯ ಸದಸ್ಯರಾದವರಲ್ಲಿ ಪ್ರಥಮ ಆಫ್ರಿಕದ ಮನುಷ್ಯನಾಗಿದ್ದನು.—ಅ. ಕೃತ್ಯಗಳು 8:26-39.
ಇಂದು, ಆಫ್ರಿಕದಲ್ಲಿ ಲಕ್ಷಾಂತರ ಯೆಹೋವನ ಸಾಕ್ಷಿಗಳಿದ್ದಾರೆ. ಯೇಸುವಿನ ಕುರಿತಾದ ಸುವಾರ್ತೆಯನ್ನು ಇತರರೊಂದಿಗೆ ಹಂಚಲು ಅವರು ಪ್ರತಿಯೊಂದು ಸಂದರ್ಭವನ್ನೂ ಉಪಯೋಗಿಸುತ್ತಾರೆ. ಇದರಲ್ಲಿ ಆಫ್ರಿಕದ ಎಳೆಯರಿಗೂ ಒಂದು ಪಾತ್ರವಿದೆಯೆಂದು ಮುಂದಿನ ಅನುಭವಗಳು ತೋರಿಸುತ್ತವೆ.
▫ ಕೆನ್ಯದ ನೈರೋಬಿಯಲ್ಲಿ, ಸ್ಯಾಂಡಿ ಮತ್ತು ಪ್ರಿಯ ಎಂಬ 11 ವರ್ಷ ಪ್ರಾಯದ ಇಬ್ಬರು ಹುಡುಗಿಯರು ನೆರೆಯವರಾಗಿದ್ದರು. ಅವರು ಜೊತೆಯಾಗಿ ಆಡುವುದರಲ್ಲಿ ಮತ್ತು ಕಥೆ ಪುಸ್ತಕಗಳನ್ನು ವಿನಿಮಯಮಾಡುವುದರಲ್ಲಿ ಆನಂದಿಸುತ್ತಿದ್ದರು. ಪ್ರಿಯಳ ಹೆತ್ತವರು ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಾಸಿಸಲು ಆರಂಭಿಸಿದರು. ಈಗ ಪ್ರಿಯಾಳಿಗೆ, ಅವಳು ತನ್ನ ಸಂಗ್ರಹಕ್ಕೆ ಕೂಡಿಸಲಿಕ್ಕಾಗಿ ಹೊಸ ಪುಸ್ತಕಗಳಿದ್ದವು. ಇವುಗಳಲ್ಲಿ ಆಕೆಗೆ ಅಚ್ಚುಮೆಚ್ಚಿನದ್ದಾಗಿ ಪರಿಣಮಿಸಿದ ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಪ್ರಕಾಶಿತ ಮಹಾ ಬೋಧಕನಿಗೆ ಕಿವಿಗೊಡುವುದು ಎಂಬ ಪುಸ್ತಕವೂ ಸೇರಿತ್ತು. ಅವಳು ತನ್ನ ಮಹಾ ಬೋಧಕ ಪುಸ್ತಕವನ್ನು ತನ್ನ ಸ್ನೇಹಿತೆ ಸ್ಯಾಂಡಿಯೊಂದಿಗೆ ಹಂಚಿಕೊಂಡಳು, ಮತ್ತು ಇಬ್ಬರು ಹುಡುಗಿಯರು ಅದನ್ನು ಕ್ರಮವಾಗಿ ಅಭ್ಯಾಸಿಸಲು ಆರಂಭಿಸಿದರು.
ಆದಾಗಲೂ, ಸ್ಯಾಂಡಿಯ ತಾಯಿ ಯೂನ, ಆ್ಯಂಗ್ಲಿಕನ್ ಚರ್ಚಿಗೆ ಹಾಜರಾಗುತ್ತಿದ್ದಳು ಮತ್ತು ತನ್ನ ಮಗಳು ಯೆಹೋವನ ಸಾಕ್ಷಿಗಳ ಪುಸ್ತಕಗಳನ್ನು ಓದಬಾರದೆಂದು ಬಯಸಿದಳು. ತಾಯಿಯ ವಿರೋಧದ ಹೊರತೂ, ಅಭ್ಯಾಸವು ಮುಂದುವರಿಯಿತು. ಒಂದು ದಿನ ಸ್ಯಾಂಡಿ ತನ್ನ ತಾಯಿಗೆ, ತಮ್ಮ ಚರ್ಚೆಗೆ ಕೇವಲ ಒಮ್ಮೆ ಕಿವಿಗೊಡುವಂತೆ ಬೇಡಿಕೊಂಡಳು. ಆ ದಿನ ಹುಡುಗಿಯರು ಓದಿದಂತಹ ಅಧ್ಯಾಯದ ಶೀರ್ಷಿಕೆಯು “ಜನ್ಮದಿನವನ್ನಾಚರಿಸಿದ ಇಬ್ಬರು ಪುರುಷರು” ಎಂದಾಗಿತ್ತು. ಯೂನ ಕಿವಿಗೊಟ್ಟಳು ಮತ್ತು ತುಂಬಾ ಪ್ರಭಾವಿತಳಾದಳು. ಅವಳು ಕೂಡಲೇ ಅನೇಕ ಬೈಬಲ್ ಪ್ರಶ್ನೆಗಳೊಂದಿಗೆ ಪ್ರಿಯಳ ತಾಯಿಯನ್ನು ಸಮೀಪಿಸಿದಳು.
ಒಬ್ಬ ಸಾಕ್ಷಿಯು ಯೂನಳೊಂದಿಗೆ ಬೈಬಲನ್ನು ಅಭ್ಯಾಸಿಸುವಂತೆ ಪ್ರಿಯಾಳ ತಾಯಿ ಏರ್ಪಡಿಸಿದಳು. ಬೇಗನೇ ಯೂನ ತಾನೇ ಏನನ್ನು ಕಲಿಯುತ್ತಿದ್ದಳೋ ಅದನ್ನು ತನ್ನ ಸಹೋದ್ಯೋಗಿಯಾದ ಡಾಲಿಯೊಂದಿಗೆ ಹಂಚುತ್ತಿದ್ದಳು. ಇಷ್ಟರೊಳಗೆ, 11 ವರ್ಷ ಪ್ರಾಯದ ಪ್ರಿಯ ಪ್ರಗತಿಯನ್ನು ಮಾಡುತ್ತಾ ಮುಂದುವರಿದಳು ಮತ್ತು ಯೆಹೋವನ ಸಾಕ್ಷಿಗಳ ಒಂದು ಜಿಲ್ಲಾ ಅಧಿವೇಶನದಲ್ಲಿ ನೀರಿನ ದೀಕ್ಷಾಸ್ನಾನದ ಮೂಲಕ ಯೆಹೋವ ದೇವರಿಗೆ ತನ್ನ ಸಮರ್ಪಣೆಯನ್ನು ಸಂಕೇತಿಸಲು ನಿರ್ಣಯಿಸಿದಳು. ಅದೇ ಅಧಿವೇಶನದಲ್ಲಿ, ಪ್ರಿಯಳ ಹರ್ಷಕ್ಕೆ, ಯೂನ ಮತ್ತು ಡಾಲಿ ಸಹ ದೀಕ್ಷಾಸ್ನಾನಹೊಂದಿದರು!
▫ ಯೆಹೋವನ ಸಾಕ್ಷಿಗಳ ಕೆಲಸವು ನೋಂದಣಿ ಮಾಡಲ್ಪಡದಿರುವ ಆಫ್ರಿಕದ ಕೆಲವು ದೇಶಗಳಿವೆ. ಅಂತಹ ಒಂದು ದೇಶದಲ್ಲಿ, ಸಾಕ್ಷಿಗಳ ಧಾರ್ಮಿಕ ಚಟುವಟಿಕೆಗಳು ಮತ್ತು ನಂಬಿಕೆಗಳ ಕಡೆಗೆ ಸಹಿಷ್ಣುತೆಯ ಒಂದು ಸಾಮಾನ್ಯ ವಾತಾವರಣವಿದೆ. ಆ ದೇಶದ ಒಂದು ಶಾಲೆಯಲ್ಲಿ, ಸಾಕ್ಷಿಗಳ ಮಕ್ಕಳಾಗಿದ್ದ, ಒಬ್ಬ ಏಳು ವರ್ಷ ಪ್ರಾಯದ ಹುಡುಗ ಮತ್ತು ಅವನ ಆರು ವರ್ಷ ಪ್ರಾಯದ ತಮ್ಮ, ಧಾರ್ಮಿಕ ಪ್ರಾರ್ಥನೆಗಳ ಸಮಯದಲ್ಲಿ ಶಾಲಾಕೊಠಡಿಯಿಂದ ಗೈರುಹಾಜರಾಗುವಂತೆ ಅನುಮತಿಸಲ್ಪಟ್ಟಿದ್ದರು.
ಒಂದು ದಿನ ಒಬ್ಬ ಹೊಸ ಶಿಕ್ಷಕರು, ಹುಡುಗರು ಇತರ ಮಕ್ಕಳೊಂದಿಗೆ ಪ್ರಾರ್ಥನೆಯಲ್ಲಿ ಜೊತೆಗೂಡಬೇಕೆಂದು ತಗಾದೆಮಾಡಿದರು. ಹಿರಿಯ ಹುಡುಗನು ನಿರಾಕರಿಸಿದನು ಮತ್ತು ಶಿಕ್ಷಕರಿಂದ ಹೊಡೆಯಲ್ಪಟ್ಟನು. ಅವನ ತಮ್ಮ, ಆರು ವರ್ಷ ಪ್ರಾಯದ ಶಾಡ್ರಾಕ್, ಹೆಡ್ಮಾಸ್ಟರರನ್ನು ಅವರ ಕಛೇರಿಯಲ್ಲಿ ಕಾಣಬೇಕೆಂದು ಪಟ್ಟುಹಿಡಿದನು. ಹೆಡ್ಮಾಸರ್ಟ್ ಮತ್ತು ಹೊಸ ಶಿಕ್ಷಕನು ಅವನು ಇತರರೊಂದಿಗೆ ಯಾಕೆ ಜೊತೆಗೂಡಲು ಬಯಸುವುದಿಲ್ಲವೆಂದು ಅವನನ್ನು ಕೇಳಿದರು. ತನ್ನ ಹೆತ್ತವರಿಂದ ಹೊಡೆಯಲ್ಪಡುವ ಭಯ ಅವನಿಗಿದೆಯೋ ಎಂದು ಅವರು ಕೇಳಿದರು. ಅವನು ಒಳ್ಳೆಯ ಆ್ಯರಬಿಕ್ನಲ್ಲಿ ಉತ್ತರಿಸಿದ್ದು: “ಇಲ್ಲ, ನಾನು ಆರಾಧಿಸುವ ದೇವರು ಗಲಿಬಿಲಿಯ ದೇವರಾಗಿಲ್ಲ ಬದಲಾಗಿ ವ್ಯವಸ್ಥೆಯ ದೇವರಾಗಿದ್ದಾನೆ. ನಾನು ಮನೆಯಲ್ಲಿ ಒಬ್ಬ ಯೆಹೋವನ ಸಾಕ್ಷಿ, ಮತ್ತು ಶಾಲೆಯಲ್ಲಿ ಇನ್ನೊಂದು ಧರ್ಮದವನಾಗಿರಲಾರೆ!” ಪರಿಣಾಮವಾಗಿ, ಅವನಿಗೆ ವಿನಾಯಿತಿಯನ್ನು ಕೊಡಲಾಯಿತು.
ದೀಕ್ಷಾಸ್ನಾನ ಹೊಂದಿದ ಬಳಿಕ, ಅ. ಕೃತ್ಯಗಳ ಪುಸ್ತಕದಲ್ಲಿ ತಿಳಿಸಲಾದ ಆ ಐಥಿಯೋಪ್ಯದ ಮನುಷ್ಯನು “ಸಂತೋಷವುಳ್ಳವನಾಗಿ ತನ್ನ ದಾರಿಯನ್ನು ಹಿಡಿ”ದನು. (ಅ. ಕೃತ್ಯಗಳು 8:39) ತದ್ರೀತಿಯಲ್ಲಿ ಇಂದು, ಆಫ್ರಿಕದ ವಿಸ್ತರಿತ ಭೂಖಂಡದಲ್ಲಿರುವ ರಾಜ್ಯ ಘೋಷಕರು ‘ಯೇಸುವಿನ ವಿಷಯವಾದ ಸುವಾರ್ತೆಯನ್ನು ತಿಳಿಸುವ’ ತಮ್ಮ ಸುಯೋಗದಲ್ಲಿ ಹರ್ಷಿಸುತ್ತಾರೆ.—ಅ. ಕೃತ್ಯಗಳು 8:35.