ಯುದ್ಧರಹಿತವಾದ ಒಂದು ಲೋಕವು ಶಕ್ಯವೊ?
ಯುದ್ಧ ಮತ್ತು ಅದರ ಫಲಾಂತರದ ಕರಾಳ ವಾಸ್ತವಿಕತೆಯನ್ನು ಪುನಃ ಎಂದಿಗೂ ನೋಡದೆ ಅಥವಾ ಅನುಭವಿಸದೆ ಇರುವುದನ್ನು ಕಲ್ಪಿಸಿಕೊಳ್ಳಿ. ಬಂದೂಕು ಹಾರಿಸುವ ಅಥವಾ ಬಾಂಬುಗಳ ಶಬ್ದವನ್ನು ಎಂದಿಗೂ ಕೇಳದಿರುವುದನ್ನು, ಪಲಾಯನ ಮಾಡುತ್ತಿರುವ, ಬಹುಮಟ್ಟಿಗೆ ಹೊಟ್ಟೆಗಿಲ್ಲದ ನಿರಾಶ್ರಿತರ ಸಮೂಹವನ್ನು ಎಂದಿಗೂ ನೋಡದಿರುವುದನ್ನು, ನೀವು ಅಥವಾ ಒಬ್ಬ ಪ್ರಿಯ ವ್ಯಕ್ತಿಯು ಯಾವುದೊ ಕ್ರೂರ ಹಾಗೂ ಅರ್ಥವಿಲ್ಲದ ಘರ್ಷಣೆಯಲ್ಲಿ ಸಾಯುವಿರೊ ಎಂಬುದಾಗಿ ಎಂದಿಗೂ ಕುತೂಹಲಪಡದಿರುವುದನ್ನು ಕಲ್ಪಿಸಿಕೊಳ್ಳಿ. ಯುದ್ಧರಹಿತವಾದ ಒಂದು ಲೋಕದಲ್ಲಿ ಜೀವಿಸುವುದು ಎಷ್ಟು ಅದ್ಭುತಕರವಾಗಿರುವುದು!
‘ಒಂದು ಸಂಭವನೀಯ ಪ್ರತೀಕ್ಷೆಯಲ್ಲ,’ ಎಂದು ನೀವು ಹೇಳಬಹುದು. ಆದರೂ, ಕೇವಲ ಕೆಲವೆ ವರ್ಷಗಳ ಹಿಂದೆ, ಒಂದು ಶಾಂತಿಭರಿತ ಲೋಕದ ನೋಟವು ಉಜ್ವಲವಾಗಿ ಉರಿಯುತ್ತಿತ್ತು. 1990 ಮತ್ತು 1991ರಲ್ಲಿ, ರಾಷ್ಟ್ರಗಳು ಭದ್ರತೆ ಮತ್ತು ಸಹಕಾರದ ಒಂದು ಹೊಸ ಶಕದ ಹೊಸ್ತಿಲಲ್ಲಿದ್ದವೆಂದು ಅನೇಕರು ಹೇಳುತ್ತಿದ್ದರು. ಆ ಸಮಯಗಳ ಮನೋವೃತ್ತಿಯನ್ನು ವ್ಯಕ್ತಪಡಿಸುತ್ತಾ, ಆಗ ಅಮೆರಿಕದ ಅಧ್ಯಕ್ಷರಾಗಿದ್ದ ಜಾರ್ಜ್ ಬುಷ್, ಅನೇಕ ಸಂದರ್ಭಗಳಲ್ಲಿ ಉದಯವಾಗುತ್ತಿರುವ “ಹೊಸ ಲೋಕ ವ್ಯವಸ್ಥೆ”ಯ ಕುರಿತು ಮಾತಾಡಿದರು.
ಈ ಆಶಾವಾದಿತ್ವವು ಏಕೆ? ಶೀತಲ ಯುದ್ಧವು ಕೊನೆಗೊಂಡಿತ್ತು. 40ಕ್ಕಿಂತಲೂ ಹೆಚ್ಚು ವರ್ಷಗಳಿಂದ, ನ್ಯೂಕ್ಲಿಯರ್ ಯುದ್ಧದ ಬೆದರಿಕೆಯು, ಮಾನವಜಾತಿಯ ಮೇಲೆ ಒಂದು ಅತಿ ತೆಳುವಾದ ದಾರದ ಮೂಲಕ ತೂಗು ಹಾಕಲ್ಪಟ್ಟಿರುವ ಖಡ್ಗದಂತೆ ವಿಪತ್ಕಾರಕವಾಗಿ ನೇತಾಡಿತ್ತು. ಆದರೆ ಸಮತಾವಾದದ ಮುಕ್ತಾಯ ಮತ್ತು ಸೋವಿಯಟ್ ಒಕ್ಕೂಟದ ವಿಘಟನದಿಂದಾಗಿ, ನ್ಯೂಕ್ಲಿಯರ್ ಸರ್ವನಾಶದ ಬೆದರಿಕೆಯು ಮಾಯವಾಗುತ್ತಿರುವಂತೆ ತೋರಿತು. ಲೋಕವು ನಿರ್ಭಯವಾಗಿ ಉಸಿರಾಡಿತು.
ಜನರು ಭವಿಷ್ಯತ್ತನ್ನು ಭರವಸೆಯಿಂದ ಏಕೆ ವೀಕ್ಷಿಸಿದರೆಂಬುದಕ್ಕೆ ಮತ್ತು ಅನೇಕರು ಇನ್ನೂ ಏಕೆ ವೀಕ್ಷಿಸುತ್ತಾರೆಂಬುದಕ್ಕೆ ಮತ್ತೊಂದು ಪ್ರಮುಖ ಕಾರಣವಿತ್ತು. ನಾಲ್ಕು ದಶಕಗಳಿಂದ, ಪೂರ್ವ ಮತ್ತು ಪಶ್ಚಿಮದ ನಡುವಿನ ಪ್ರತಿಸ್ಪರ್ಧೆಯು, ವಿಶ್ವ ಸಂಸ್ಥೆಯನ್ನು ಕೇವಲ ಒಂದು ಚರ್ಚಾಕೂಟವನ್ನಾಗಿ ಮಾಡಿತ್ತು. ಆದರೆ ಶೀತಲ ಯುದ್ಧದ ಸಮಾಪ್ತಿಯು, ಅದು ಏನನ್ನು ಮಾಡಲಿಕ್ಕಾಗಿ ರಚಿಸಲ್ಪಟ್ಟಿತ್ತೊ, ಅದನ್ನು ಮಾಡಲು—ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯ ಕಡೆಗೆ ಕೆಲಸಮಾಡಲು—ಯುಎನ್ ಅನ್ನು ಸ್ವತಂತ್ರಗೊಳಿಸಿತು.
ಇತ್ತೀಚಿನ ವರ್ಷಗಳಲ್ಲಿ ಯುಎನ್, ಯುದ್ಧಕಾರ್ಯಾಚರಣೆಯನ್ನು ಪ್ರೋತ್ಸಾಹಿಸದಿರಲು ಪ್ರಯತ್ನಗಳನ್ನು ತೀವ್ರಗೊಳಿಸಿದೆ. ಸದಸ್ಯ ರಾಷ್ಟ್ರಗಳಿಂದ ಬಂದ ಸೈನಿಕರಿಂದ ಸಜ್ಜಿತವಾಗಿ, ವಿಶ್ವ ಸಂಸ್ಥೆಯು ಹಿಂದಿನ 44 ವರ್ಷಗಳಿಗಿಂತ 1994ರ ಮುಂಚಿನ 4 ವರ್ಷಗಳಲ್ಲಿ, ಶಾಂತಿಯನ್ನು ಕಾಪಾಡುವ ಹೆಚ್ಚಿನ ಕಾರ್ಯಾಚರಣೆಗಳಲ್ಲಿ ತೊಡಗಿತು. ಲೋಕದಾದ್ಯಂತವಾಗಿ, ಸುಮಾರು 70,000 ನಾಗರಿಕರು ಮತ್ತು ಮಿಲಿಟರಿ ಸಿಬ್ಬಂದಿಯವರು 17 ಕಾರ್ಯಾಚರಣೆಗಳಲ್ಲಿ ಸೇವೆ ಸಲ್ಲಿಸಿದರು. ಕೇವಲ ಎರಡು ವರ್ಷಗಳಲ್ಲಿ, ಶಾಂತಿಯನ್ನು ಕಾಪಾಡುವ ವೆಚ್ಚಗಳು, 1994ರಲ್ಲಿ 330 ಕೋಟಿಗಳಿಗೆ ಇಮ್ಮಡಿಗಿಂತ ಹೆಚ್ಚಿದವು.
ಯುಎನ್ನ ಸೆಕ್ರಿಟರಿ ಜನರಲ್ ಆದ ಬುಟ್ರೋಸ್ ಬುಟ್ರೋಸ್-ಘಾಲಿ, ಇತ್ತೀಚೆಗೆ ಬರೆದುದು: “ಸುಮಾರು 50 ವರ್ಷಗಳ ಹಿಂದೆ [ಯುಎನ್ನ ಸ್ಥಾಪನೆಯ ಸಮಯದಲ್ಲಿ] ಸ್ಯಾನ್ ಫ್ರ್ಯಾಂಸಿಸ್ಕೋದಲ್ಲಿ ಸ್ಥಾಪಿಸಲ್ಪಟ್ಟ ಸಾಮೂಹಿಕ ಭದ್ರತೆಯ ವ್ಯವಸ್ಥೆಯು, ಉದ್ದೇಶಿಸಲ್ಪಟ್ಟಂತೆ ಕಾರ್ಯಮಾಡಲು ಅಂತಿಮವಾಗಿ ಆರಂಭಿಸಿದ ಸೂಚನೆಗಳಿವೆ . . . ಒಂದು ಕಾರ್ಯಾತ್ಮಕ ಅಂತಾರಾಷ್ಟ್ರೀಯ ವ್ಯವಸ್ಥೆಯನ್ನು ಸಾಧಿಸುವುದರ ಕಡೆಗೆ ನಾವು ಪ್ರಗತಿ ಮಾಡುತ್ತಿದ್ದೇವೆ.” ಈ ವಿಕಸನಗಳ ಹೊರತೂ, ಒಂದು ಹೊಸ ಲೋಕದ ನೋಟವು ಕ್ಷಿಪ್ರವಾಗಿ ಅದೃಶ್ಯವಾಗುತ್ತದೆ. ಯುದ್ಧರಹಿತವಾದ ಒಂದು ಲೋಕಕ್ಕಾಗಿರುವ ನಿರೀಕ್ಷೆಗಳ ಮೇಲೆ ಮಬ್ಬುಗವಿಸಲು ಏನು ಸಂಭವಿಸಿದೆ? ನಾವು ಎಂದಾದರೂ ಭೌಗೋಲಿಕ ಶಾಂತಿಯನ್ನು ನೋಡುವೆವೆಂದು ನಂಬಲು ಕಾರಣವಿದೆಯೊ? ಈ ಪ್ರಶ್ನೆಗಳನ್ನು ಮುಂದಿನ ಲೇಖನಗಳು ಪರಿಗಣಿಸುವವು.
[Picture Credit Lines on page 3]
War planes: USAF photo
Anti-aircraft guns: U.S. National Archives photo