ಸಂಕ್ಷೋಭೆಯಲ್ಲಿರುವ ಒಂದು ಲೋಕದಲ್ಲಿ ಅವರು ಶಾಂತಿಯನ್ನು ಕಂಡುಕೊಂಡರು
ಈ ಪತ್ರಿಕೆಯ ಆವರಣವು, ಬಾಸ್ನಿಯ ಮತ್ತು ಹೆರ್ಸಗೋವಿನದ ತೀಕ್ಷ್ಣವಾದೊಂದು ಹೋರಾಟದ ದೃಶ್ಯವನ್ನು ಚಿತ್ರಿಸುತ್ತದೆ. ಅಂತಹ ಒಂದು ಸ್ಥಳದಲ್ಲಿ ಶಾಂತಿಯು ಅಸ್ತಿತ್ವದಲ್ಲಿರಸಾಧ್ಯವೊ? ಆಶ್ಚರ್ಯಕರವಾಗಿ, ಉತ್ತರವು ಹೌದು ಎಂದಾಗಿರುತ್ತದೆ. ಆ ದುರಂತಮಯ ದೇಶದಲ್ಲಿ, ರೋಮನ್ ಕ್ಯಾತೊಲಿಕ್, ಈಸ್ಟರ್ನ್ ಆರ್ತೊಡಾಕ್ಸ್, ಮತ್ತು ಮುಸ್ಲಿಮ್ ಸಮುದಾಯಗಳು ಕ್ಷೇತ್ರಕ್ಕಾಗಿ ಜಗಳವಾಡುತ್ತಿರುವಾಗ, ಅನೇಕ ವ್ಯಕ್ತಿಗಳು ಶಾಂತಿಗಾಗಿ ಹಾತೊರೆಯುತ್ತಿದ್ದಾರೆ ಮತ್ತು ಕೆಲವರು ಅದನ್ನು ಕಂಡುಕೊಂಡಿದ್ದಾರೆ.
ಡಾರೆಮ್ ಕುಟುಂಬದವರು ಸಾರಯೆವೊದ ನಿವಾಸಿಗಳಾಗಿದ್ದರು, ಮತ್ತು ಅವರು ಯೆಹೋವನ ಸಾಕ್ಷಿಗಳಾಗಿದ್ದರು. ಆ ನಗರದಲ್ಲಿನ ಎಲ್ಲಾ ಸಂಕ್ಷೋಭೆಯ ನಡುವೆಯೂ, ಅವರು ದೇವರ ರಾಜ್ಯದ ಸುವಾರ್ತೆಯನ್ನು ಹಂಚಲಿಕ್ಕಾಗಿ ತಮ್ಮ ನೆರೆಯವರನ್ನು ಕ್ರಮವಾಗಿ ಭೇಟಿಮಾಡುತ್ತಿದ್ದರು. (ಮತ್ತಾಯ 24:14) ಯಾಕೆ? ಯಾಕಂದರೆ ಈ ರಾಜ್ಯವು ನೈಜವಾಗಿದೆ, ಅದು ಈಗಾಗಲೇ ಸ್ವರ್ಗದಲ್ಲಿ ಸ್ಥಾಪಿಸಲ್ಪಟ್ಟಿದೆ, ಮತ್ತು ಅದು ಶಾಂತಿಗಾಗಿರುವ ಮಾನವಕುಲದ ಅತ್ಯುತ್ತಮವಾದ ಹಾಗೂ ಏಕೈಕ ನಿರೀಕ್ಷೆಯಾಗಿದೆಯೆಂದು ಡಾರೆಮ್ ಕುಟುಂಬಕ್ಕೆ ತಿಳಿದಿತ್ತು. ಅಪೊಸ್ತಲ ಪೌಲನು ಯಾವುದನ್ನು “ಶಾಂತಿಯ ಸುವಾರ್ತೆ” ಎಂದು ಕರೆದನೊ, ಅದರಲ್ಲಿ ಯೆಹೋವನ ಸಾಕ್ಷಿಗಳಿಗೆ ಸಂಪೂರ್ಣ ಭರವಸೆಯಿದೆ. (ಎಫೆಸ 2:17, NW) ಬೊಜೊ ಮತ್ತು ಹೀನಾ ಡಾರೆಮ್ರಂತಹ ಜನರಿಂದಾಗಿ, ಬಾಸ್ನಿಯ ಮತ್ತು ಹೆರ್ಸಗೋವಿನದಲ್ಲಿ ಅನೇಕರು ಶಾಂತಿಯನ್ನು ಕಂಡುಕೊಳ್ಳುತ್ತಿದ್ದಾರೆ.
ಬರಲಿರುವ ಒಂದು ನಿಜ ಶಾಂತಿ
ಡಾರೆಮ್ ಕುಟುಂಬದ ಕುರಿತಾಗಿ ಹೇಳಲು ಹೆಚ್ಚಿನ ವಿಷಯವಿದೆ. ಆದಾಗಲೂ, ಮೊದಲು ನಾವು ದೇವರ ರಾಜ್ಯದಲ್ಲಿ ಭರವಸೆಯನ್ನು ಪಡೆದುಕೊಂಡ ಇನ್ನೊಬ್ಬ ದಂಪತಿಗಳ ಕುರಿತಾಗಿ ಮಾತಾಡೋಣ. ಅವರ ಹೆಸರುಗಳು ಆರ್ಟರ್ ಮತ್ತು ಆರೀನಾ. ಅವರು ಮತ್ತು ಅವರ ಎಳೆಯ ಪುತ್ರರು, ಹಿಂದಿನ ಸೋವಿಯೆಟ್ ಒಕ್ಕೂಟದ ಕ್ಷೇತ್ರದಲ್ಲಿನ ಒಂದು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಜೀವಿಸುತ್ತಿದ್ದರು. ಆಂತರಿಕ ಯುದ್ಧವು ಸ್ಫೋಟಿಸಿದಾಗ, ಆರ್ಟರ್ ಪಕ್ಷಗಳಲ್ಲಿ ಒಂದು ಪಕ್ಷಕ್ಕಾಗಿ ಹೋರಾಡಿದನು. ಆದಾಗಲೂ, ಸ್ಪಲ್ಪಸಮಯದಲ್ಲೇ ಅವನು ಸ್ವತಃ ಕೇಳಿಕೊಂಡದ್ದು, ‘ನನ್ನ ನೆರೆಯವರಾಗಿರುತ್ತಿದ್ದ ಈ ಜನರ ವಿರುದ್ಧವಾಗಿ ನಾನು ಏಕೆ ಹೋರಾಡುತ್ತಿದ್ದೇನೆ?’ ಅವನು ದೇಶವನ್ನು ಬಿಟ್ಟನು, ಮತ್ತು ಅನೇಕ ಕಷ್ಟಗಳ ನಂತರ ತನ್ನ ಎಳೆಯ ಕುಟುಂಬದೊಂದಿಗೆ ಎಸ್ಟೋನಿಯಕ್ಕೆ ಆಗಮಿಸಿದನು.
ಸೆಂಟ್ ಪೀಟರ್ಸ್ಬರ್ಗ್ಗೆ ಒಂದು ಸಂದರ್ಶನ ಮಾಡುತ್ತಿದ್ದಾಗ, ಆರ್ಟರ್ ಯೆಹೋವನ ಸಾಕ್ಷಿಗಳನ್ನು ಭೇಟಿಯಾದನು ಮತ್ತು ದೇವರ ರಾಜ್ಯದ ಕುರಿತಾಗಿ ಅವನೇನನ್ನು ಕಲಿತನೋ ಅದರಿಂದ ಪ್ರಭಾವಿತನಾದನು. ಬಲು ಬೇಗನೇ ದೇವರ ರಾಜ್ಯವು ಮಾನವಕುಲದ ಮೇಲೆ ಏಕೈಕ ಆಧಿಪತ್ಯವಾಗುವುದು ಯೆಹೋವನ ಚಿತ್ತವಾಗಿದೆ. (ದಾನಿಯೇಲ 2:44) ಆಗ ಭೂಮಿಯು, ಇನ್ನುಮುಂದೆ ಯಾವುದೇ ಆಂತರಿಕ ಯುದ್ಧಗಳು ಅಥವಾ ಅಂತಾರಾಷ್ಟ್ರೀಯ ಸಂಘರ್ಷಗಳು ಇಲ್ಲದಂತಹ ಒಂದು ಶಾಂತಿಭರಿತ ಸ್ಥಳವಾಗಿರುವುದು. ಆ ಸಮಯದ ಕುರಿತಾಗಿ ಯೆಶಾಯನು ಪ್ರವಾದಿಸಿದ್ದು: “ನನ್ನ ಪರಿಶುದ್ಧ ಪರ್ವತದಲ್ಲೆಲ್ಲಾ ಯಾರೂ ಕೇಡು ಮಾಡುವದಿಲ್ಲ, ಯಾರೂ ಹಾಳುಮಾಡುವದಿಲ್ಲ; ಸಮುದ್ರದಲ್ಲಿ ನೀರು ಹೇಗೋ ಹಾಗೆಯೇ ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿಕೊಂಡಿರುವದು.”—ಯೆಶಾಯ 11:9.
ಸಾಕ್ಷಿಯೊಬ್ಬನು ತನಗೆ ತೋರಿಸಿದ ಒಂದು ಬೈಬಲ್ ಅಭ್ಯಾಸ ಸಹಾಯಕದಲ್ಲಿ, ಭವಿಷ್ಯತ್ತಿನ ಆ ಶಾಂತಿಭರಿತ ಭೂಮಿಯ ಒಬ್ಬ ಕಲಾವಿದನ ಚಿತ್ರವನ್ನು ಗಮನಿಸುತ್ತಾ, ಅದರಂತೆ ತೋರುತ್ತಿದ್ದ ಒಂದು ಸ್ಥಳದಲ್ಲಿ ತಾನು ಜೀವಿಸುತ್ತಿದ್ದೆನೆಂದು ಆರ್ಟರ್ ಹೇಳಿದನು. ಈಗಲಾದರೋ, ಅದು ಆಂತರಿಕ ಯುದ್ಧದಿಂದ ನಾಶಮಾಡಲ್ಪಡುತ್ತಿತ್ತು. ಈಗ ಎಸ್ಟೋನಿಯದಲ್ಲಿದ್ದುಕೊಂಡು, ಆರ್ಟರ್ ಮತ್ತು ಅವನ ಕುಟುಂಬವು, ಯೆಹೋವನ ಸಾಕ್ಷಿಗಳೊಂದಿಗಿನ ಒಂದು ಬೈಬಲಭ್ಯಾಸದ ಮೂಲಕ ದೇವರ ರಾಜ್ಯದ ಕುರಿತಾಗಿ ಹೆಚ್ಚನ್ನು ಕಲಿಯುತ್ತಿದೆ.
ಸಂಕ್ಷೋಭೆಯ ನಡುವೆ ಶಾಂತಿ
ಕೀರ್ತನೆ 37:37 ಹೇಳುವುದು: “ಒಳ್ಳೇ ನಡತೆಯುಳ್ಳವನನ್ನು ನೋಡು, ಯಥಾರ್ಥನನ್ನು ಲಕ್ಷಿಸು; ಶಾಂತನಿಗೆ ಸಂತಾನವೃದ್ಧಿ ಆಗುವದು.” ವಾಸ್ತವದಲ್ಲಿ, ದೇವರ ದೃಷ್ಟಿಯಲ್ಲಿ ನಿರ್ದೋಷಿಯೂ ಯಥಾರ್ಥನೂ ಆಗಿರುವವನ ಶಾಂತಿಯು ಅವನ ಭವಿಷ್ಯತ್ತಿಗೆ ಸೀಮಿತವಾಗಿರುವುದಿಲ್ಲ. ಅವನು ಅದನ್ನು ಈಗಲೇ ಆನಂದಿಸುತ್ತಾನೆ. ಅದು ಹೇಗೆ ಸಾಧ್ಯ? ಪೌಲ್ ಎಂಬ ಹೆಸರಿನ ಒಬ್ಬ ಮನುಷ್ಯನ ಅನುಭವವನ್ನು ಪರಿಗಣಿಸಿರಿ.
ಪೌಲ್, ಅವನು ನಿಜವಾಗಿ ನೆರೆಯ ದೇಶದಿಂದ ಬಂದವನಾದರೂ, ನೈರುತ್ಯ ಇಥಿಯೋಪ್ಯದಲ್ಲಿ ಬಹುದೂರದ ಒಂದು ನಿರಾಶ್ರಿತರ ಶಿಬಿರದಲ್ಲಿ ಜೀವಿಸುತ್ತಾನೆ. ತನ್ನ ತಾಯ್ನಾಡಿನಲ್ಲಿ, ಒಂದು ಎಣ್ಣೆ ಕಂಪೆನಿಗಾಗಿ ಕೆಲಸ ಮಾಡುತ್ತಿದ್ದ ಒಬ್ಬ ಯೆಹೋವನ ಸಾಕ್ಷಿಯನ್ನು ಅವನು ಭೇಟಿಯಾದನು, ಮತ್ತು ಈ ಮನುಷ್ಯನು ಅವನಿಗೆ ಒಂದು ಬೈಬಲ್ ಅಭ್ಯಾಸ ಸಹಾಯಕವಾದ ನಿತ್ಯ ಜೀವಕ್ಕೆ ನಡಿಸುವ ಸತ್ಯವು ಎಂಬ ಪುಸ್ತಕವನ್ನು ಕೊಟ್ಟನು.a ಪೌಲನು ಆ ಸಾಕ್ಷಿಯನ್ನು ಪುನಃ ಎಂದೂ ಭೇಟಿಯಾಗಲಿಲ್ಲ, ಆದರೆ ಅವನು ಆ ಪುಸ್ತಕವನ್ನು ಜಾಗರೂಕತೆಯಿಂದ ಅಭ್ಯಾಸಿಸಿದನು. ಆಂತರಿಕ ಯುದ್ಧವು ಅವನನ್ನು ಇಥಿಯೋಪ್ಯದಲ್ಲಿರುವ ಒಂದು ನಿರಾಶ್ರಿತರ ಶಿಬಿರಕ್ಕೆ ಹೋಗುವಂತೆ ಮಾಡಿತು, ಮತ್ತು ಅಲ್ಲಿ ಅವನು ಕಲಿತಂಥ ವಿಷಯಗಳ ಕುರಿತಾಗಿ ಇತರರೊಂದಿಗೆ ಮಾತಾಡಿದನು. ಒಂದು ಚಿಕ್ಕ ಗುಂಪು ಇದನ್ನು ಸತ್ಯವೆಂದು ಸ್ವೀಕರಿಸಿತು. ತಾವು ಕಲಿತಿದ್ದ ವಿಷಯದ ಆಧಾರದ ಮೇಲೆ, ಅವರು ಬೇಗನೇ ಶಿಬಿರದಲ್ಲಿದ್ದ ಇತರರಿಗೆ ಸಾರುತ್ತಿದ್ದರು.
ಸಹಾಯಕ್ಕಾಗಿ ಕೋರುತ್ತಾ, ಪೌಲ್ ವಾಚ್ ಟವರ್ ಸೊಸೈಟಿಯ ಮುಖ್ಯ ಕಾರ್ಯಾಲಯಕ್ಕೆ ಬರೆದನು. ಆ್ಯಡಿಸಾಬಬಾದಿಂದ ಕಳುಹಿಸಲ್ಪಟ್ಟ ಒಬ್ಬ ಶುಶ್ರೂಷಕನು, ದೇವರ ರಾಜ್ಯದ ಕುರಿತಾಗಿ ಹೆಚ್ಚನ್ನು ಕಲಿಯಲಿಕ್ಕಾಗಿ ಸಿದ್ಧರಾಗಿ, ತನಗಾಗಿ ಕಾಯುತ್ತಿದ್ದ 35 ಜನರನ್ನು ಕಂಡು ಆಶ್ಚರ್ಯಚಕಿತನಾದನು. ಕ್ರಮವಾಗಿ ಸಹಾಯವು ಕೊಡಲ್ಪಡಲಿಕ್ಕಾಗಿ ಏರ್ಪಾಡುಗಳು ಮಾಡಲ್ಪಟ್ಟವು.
ಪೌಲನಂತಹ ಜನರು ಶಾಂತಿಯನ್ನು ಅನುಭವಿಸುತ್ತಾರೆಂದು ಹೇಗೆ ಹೇಳಸಾಧ್ಯವಿದೆ? ಅವರ ಜೀವಿತಗಳು ಸುಲಭವಾಗಿರುವುದಿಲ್ಲ, ಆದರೆ ಅವರಿಗೆ ದೇವರಲ್ಲಿ ನಂಬಿಕೆಯಿದೆ. ಈ ಲೋಕದ ಸಂಕ್ಷೋಭೆಯಿಂದ ಬಾಧಿಸಲ್ಪಡುವಾಗ, ಅವರು ಬೈಬಲಿನ ಸಲಹೆಯನ್ನು ಅನ್ವಯಿಸುತ್ತಾರೆ: “ಯಾವ ಸಂಬಂಧವಾಗಿಯೂ ಚಿಂತೆಮಾಡದೆ ಸರ್ವವಿಷಯದಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನೂ ಪ್ರಾರ್ಥನೆವಿಜ್ಞಾಪನೆಗಳನ್ನೂ ಮಾಡುತ್ತಾ ನಿಮಗೆ ಬೇಕಾದದ್ದನ್ನು ತಿಳಿಯಪಡಿಸಿರಿ.” ಫಲಸ್ವರೂಪವಾಗಿ, ಇಂದು ವಿರಳವಾಗಿರುವ ಒಂದು ಸಂತೃಪ್ತಿ ಅವರಲ್ಲಿದೆ. ಫಿಲಿಪ್ಪಿ ಸಭೆಗೆ ಅಪೊಸ್ತಲ ಪೌಲನು ಬರೆದಂತಹ ಮಾತುಗಳು ಅವರಿಗೆ ಅನ್ವಯವಾಗುತ್ತವೆ: “ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಯುವದು.” ನಿಜವಾಗಿಯೂ, “ಶಾಂತಿದಾಯಕನಾದ ದೇವರು” ಆದ ಯೆಹೋವನೊಂದಿಗೆ ಅವರು ಒಂದು ನಿಕಟವಾದ ಸಂಬಂಧವನ್ನು ಅನುಭವಿಸುತ್ತಾರೆ.—ಫಿಲಿಪ್ಪಿ 4:6, 7, 9.
ಸದ್ಯದ ಶಾಂತಿ
ಬೈಬಲಿನಲ್ಲಿ “ಸಮಾಧಾನದ ಪ್ರಭು” ಎಂದು ಕರೆಯಲ್ಪಟ್ಟಿರುವ ಯೇಸು ಕ್ರಿಸ್ತನು, ದೇವರ ರಾಜ್ಯದ ಸಿಂಹಾಸನಾಸೀನನಾಗಿರುವ ರಾಜನಾಗಿದ್ದಾನೆ. (ಯೆಶಾಯ 9:6) ಅವನ ಕುರಿತಾಗಿ ಪುರಾತನಕಾಲದ ಪ್ರವಾದಿಯು ಹೇಳಿದ್ದು: “ಆತನು ಕೊಡುವ ಅಪ್ಪಣೆಯು ಜನಾಂಗಗಳಿಗೆ ಸಮಾಧಾನಕರವಾಗಿರುವದು; ಆತನ ಆಳಿಕೆಯು ಸಮುದ್ರದಿಂದ ಸಮುದ್ರದ ವರೆಗೂ . . . ನದಿಯಿಂದ ಭೂಮಿಯ ಕಟ್ಟಕಡೆಯ ವರೆಗೂ ಹರಡಿಕೊಂಡಿರುವದು.” (ಜೆಕರ್ಯ 9:10) ಇಂತಹ ಪ್ರೇರಿತ ಮಾತುಗಳು, ಹೋಸೆ ಎಂಬ ಹೆಸರಿನ ಒಬ್ಬ ಮನುಷ್ಯನ ಜೀವಿತದ ಮೇಲೆ ಗಾಢವಾದ ಪರಿಣಾಮವನ್ನು ಬೀರಿದವು.
ಒಂದು ಸಮಯದಲ್ಲಿ ಹೋಸೆ ಸೆರೆಮನೆಯಲ್ಲಿದ್ದನು. ಅವನೊಬ್ಬ ಭಯೋತ್ಪಾದಕನಾಗಿದ್ದನು ಮತ್ತು ಪೊಲೀಸರ ನಿವಾಸ ಕಟ್ಟಡಗಳನ್ನು ಉಡಾಯಿಸಲು ಸಿದ್ಧತೆಗಳನ್ನು ಮಾಡುತ್ತಿದ್ದಾಗ ದಸ್ತಗಿರಿ ಮಾಡಲ್ಪಟ್ಟಿದ್ದನು. ತನ್ನ ದೇಶದಲ್ಲಿರುವ ಪರಿಸ್ಥಿತಿಗಳನ್ನು ಉತ್ತಮಗೊಳಿಸಲು ಕೇವಲ ಹಿಂಸಾಚಾರವು ಸರಕಾರವನ್ನು ಒತ್ತಾಯಪಡಿಸುವುದೆಂದು ಅವನು ನೆನಸಿದನು. ಅವನು ಸೆರೆಮನೆಯಲ್ಲಿದ್ದಾಗ, ಯೆಹೋವನ ಸಾಕ್ಷಿಗಳು ಅವನ ಹೆಂಡತಿಯೊಂದಿಗೆ ಬೈಬಲನ್ನು ಅಭ್ಯಾಸಿಸಲಾರಂಭಿಸಿದರು.
ಹೋಸೆ ಬಿಡುಗಡೆಗೊಳಿಸಲ್ಪಟ್ಟ ನಂತರ, ಅವನೂ ಬೈಬಲನ್ನು ಅಭ್ಯಾಸಿಸಿದನು, ಮತ್ತು ಬೇಗನೇ ಕೀರ್ತನೆ 85:8ರ ಮಾತುಗಳು ಅವನಿಗೆ ಅನ್ವಯವಾಗಲಾರಂಭಿಸಿದವು: “ಯೆಹೋವದೇವರು ಏನು ಹೇಳುತ್ತಾನೋ ಕೇಳುತ್ತೇನೆ. ಆತನು ತನ್ನ ಭಕ್ತಜನರಿಗೆ ಸಮಾಧಾನವಾಕ್ಯವನ್ನು ಹೇಳುತ್ತಾನಲ್ಲಾ.” ಆದಾಗಲೂ, ಆ ವಚನವು ಒಂದು ಎಚ್ಚರಿಕೆಯೊಂದಿಗೆ ಸಮಾಪ್ತಿಗೊಳ್ಳುತ್ತದೆ: “ಅವರಾದರೋ ತಿರಿಗಿ ಮೂರ್ಖತನದಲ್ಲಿ [“ಆತ್ಮವಿಶ್ವಾಸಕ್ಕೆ,” NW] ಬೀಳದಿರಲಿ.” ಹೀಗೆ, ಯೆಹೋವನ ಶಾಂತಿಯನ್ನು ಹುಡುಕುವ ಒಬ್ಬನು ಸ್ವತಂತ್ರವಾಗಿ ಅಥವಾ ಆತನ ಚಿತ್ತಕ್ಕೆ ವಿರೋಧವಾಗಿ ವರ್ತಿಸಲು ಧೈರ್ಯವಹಿಸುವುದಿಲ್ಲ.
ಇಂದು, ಹೋಸೆ ಮತ್ತು ಅವನ ಹೆಂಡತಿ ಕ್ರೈಸ್ತ ಶುಶ್ರೂಷಕರಾಗಿದ್ದಾರೆ. ಹಿಂದೆ ಹೋಸೆಯು ಮನೆಯಲ್ಲಿ ಮಾಡಿದ ಬಾಂಬುಗಳಿಂದ ಬಗೆಹರಿಸಲು ಪ್ರಯತ್ನಿಸಿದ ಸಮಸ್ಯೆಗಳಿಗೆ ಪರಿಹಾರವಾಗಿ ಅವರು ಇತರರನ್ನು ಯೆಹೋವನ ರಾಜ್ಯದ ಕಡೆಗೆ ನಿರ್ದೇಶಿಸುತ್ತಿದ್ದಾರೆ. ಅವರು ಬೈಬಲಿನಲ್ಲಿ ಭರವಸೆಯಿಡಲು ಇಚ್ಛೆಯುಳ್ಳವರಾಗಿದ್ದಾರೆ. ಅದು ಹೇಳುವುದು: “ನಿಜವಾಗಿ ಯೆಹೋವನು ಒಳ್ಳೆಯದನ್ನು ಅನುಗ್ರಹಿಸುವನು.” (ಕೀರ್ತನೆ 85:12) ವಾಸ್ತವದಲ್ಲಿ, ತಾನು ನಾಶಮಾಡಲು ಯೋಜಿಸುತ್ತಿದ್ದ ಕಟ್ಟಡಗಳನ್ನು, ಹೋಸೆಯು ಇತ್ತೀಚೆಗೆ ಸಂದರ್ಶಿಸಿದನು. ಯಾಕೆ? ಅಲ್ಲಿರುವ ಕುಟುಂಬಗಳೊಂದಿಗೆ ದೇವರ ರಾಜ್ಯದ ಕುರಿತಾಗಿ ಮಾತಾಡಲಿಕ್ಕಾಗಿಯೇ.
ಶಾಂತಿಭರಿತ ಜನರು
ಕೀರ್ತನೆ 37:10, 11ರಲ್ಲಿ ಬೈಬಲ್ ಹೇಳುವುದು: “ಇನ್ನು ಸ್ವಲ್ಪಕಾಲದೊಳಗೆ ದುಷ್ಟನು ಕಾಣಿಸದೆ ಹೋಗುವನು; ಅವನಿದ್ದ ಸ್ಥಳದಲ್ಲಿ ಎಷ್ಟು ವಿಚಾರಿಸಿದರೂ ಅವನು ಸಿಕ್ಕುವದೇ ಇಲ್ಲ. ಆದರೆ ದೀನರು ದೇಶವನ್ನು ಅನುಭವಿಸುವರು; ಅವರು ಮಹಾಸೌಖ್ಯದಿಂದ ಆನಂದಿಸುವರು.” ಎಂಥ ಒಂದು ಮಹಿಮಾಭರಿತ ಪ್ರತೀಕ್ಷೆ!
ಆದಾಗಲೂ, ಯೆಹೋವನ ಶಾಂತಿಯು ಕೇವಲ “ದೀನ”ರಿಗಾಗಿದೆ ಎಂಬುದನ್ನು ಗಮನಿಸಿರಿ. ಶಾಂತಿಯನ್ನು ಹುಡುಕುವವರು ಶಾಂತಿಭರಿತರಾಗಿರಲು ಕಲಿಯಬೇಕಾಗಬಹುದು. ನ್ಯೂ ಸೀಲೆಂಡಿನಲ್ಲಿ ಜೀವಿಸುತ್ತಿರುವ ಕೀತ್ನೊಂದಿಗೆ ವಿಷಯವು ಹೀಗಿತ್ತು. ಕೀತ್ನನ್ನು “ದೇಹದಲ್ಲಿ ಮತ್ತು ವ್ಯಕ್ತಿತ್ವದಲ್ಲಿ ಕಟ್ಟುಮಸ್ತಿನವನು, ಆಕ್ರಮಣಶೀಲನು, ಮತ್ತು ವಾದಶೀಲನು” ಎಂಬುದಾಗಿ ವರ್ಣಿಸಲಾಗುತ್ತಿತ್ತು. ಅವನು ಕೈದಿಗಳ ತಂಡದ ಒಬ್ಬ ಸದಸ್ಯನಾಗಿದ್ದನು ಮತ್ತು ಸಾಕ್ಷಾತ್ ಒಂದು ಕೋಟೆಯಾಗಿದ್ದ ಮನೆಯೊಂದರಲ್ಲಿ ಜೀವಿಸುತ್ತಿದ್ದನು. ಒಳನುಗ್ಗುವವರನ್ನು ಹೊರಗಿಡಲು ಅವನ ತೋಟಗಳಲ್ಲಿ ಮೂರು ಕಾವಲು ನಾಯಿಗಳು ಗಸ್ತುತಿರುಗುತ್ತಿದ್ದವು. ತನ್ನ ಆರು ಮಕ್ಕಳ ತಾಯಿಯಾಗಿದ್ದ, ಅವನ ಹೆಂಡತಿ, ಅವನನ್ನು ವಿಚ್ಛೇದಿಸಿದ್ದಳು.
ಕೀತ್ ಯೆಹೋವನ ಸಾಕ್ಷಿಗಳನ್ನು ಭೇಟಿಯಾದಾಗ, ಸುವಾರ್ತೆಯು ಅವನ ಮೇಲೆ ಗಾಢವಾದ ಪರಿಣಾಮವನ್ನು ಬೀರಿತು. ಸ್ವಲ್ಪ ಸಮಯದಲ್ಲೇ ಅವನು ಮತ್ತು ಅವನ ಮಕ್ಕಳು ಸಾಕ್ಷಿಗಳೊಂದಿಗೆ ಕೂಟಗಳಿಗೆ ಹಾಜರಾಗುತ್ತಿದ್ದರು. ತನ್ನ ಸೊಂಟದವರೆಗಿದ್ದ ಕೂದಲನ್ನು ಅವನು ಕತ್ತರಿಸಿದನು ಮತ್ತು ತನ್ನ ಹಿಂದಿನ ಒಡನಾಡಿಗಳೊಂದಿಗೆ ದೇವರ ರಾಜ್ಯದ ಕುರಿತಾಗಿ ಮಾತಾಡಲಾರಂಭಿಸಿದನು. ಇವರಲ್ಲಿ ಕೆಲವರು ಬೈಬಲನ್ನು ಅಭ್ಯಾಸಿಸಲೂ ಆರಂಭಿಸಿದರು.
ಲೋಕದ ಸುತ್ತಲಿನ ಲಕ್ಷಾಂತರ ಸಹೃದಯಿ ಜನರಂತೆ, ಕೀತ್ ಅಪೊಸ್ತಲ ಪೇತ್ರನ ಮಾತುಗಳನ್ನು ಅನ್ವಯಿಸಲಾರಂಭಿಸಿದ್ದನು: “ಜೀವದಲ್ಲಿ ಸಂತೋಷಪಟ್ಟು ಸುದಿನಗಳನ್ನು ನೋಡುವದಕ್ಕೆ ಇಷ್ಟವುಳ್ಳವನು . . . ಕೆಟ್ಟದ್ದನ್ನು ಬಿಟ್ಟು ಒಳ್ಳೇದನ್ನು ಮಾಡಲಿ; ಸಮಾಧಾನವನ್ನು ಹಾರೈಸಿ ಅದಕ್ಕೋಸ್ಕರ ಪ್ರಯತ್ನಪಡಲಿ.” (1 ಪೇತ್ರ 3:10, 11) ಕೀತ್ನ ಹಿಂದಿನ ಪತ್ನಿಯು ಅವನನ್ನು ಪುನಃ ವಿವಾಹವಾಗಲು ಸಮ್ಮತಿಸಿದಳು, ಮತ್ತು ಅವನು ಈಗ “ಸಮಾಧಾನವನ್ನು ಹಾರೈಸಿ ಅದಕ್ಕೋಸ್ಕರ ಪ್ರಯತ್ನಪಡ”ಲು ಕಲಿಯುತ್ತಿದ್ದಾನೆ.
ಹಿಂದಿನ ರಷ್ಯಾದಲ್ಲಿ ಜನಿಸಿದ ಒಂದು ಸಮಯದ ಕ್ರೀಡಾಪಟುವನ್ನು ಒಳಗೂಡಿಸಿ, ಅನೇಕರಿಗೆ ಯೆಹೋವನ ಶಾಂತಿಯು ಜೀವರಕ್ಷಕವಾಗಿದೆ. ಈ ಮನುಷ್ಯನು ಒಲಿಂಪಿಕ್ ಸ್ಪರ್ಧೆಗಳಲ್ಲಿ ಪದಕಗಳನ್ನು ಜಯಿಸಿದನು, ಆದರೆ ಭ್ರಾಂತಿನಿವಾರಣೆಯಾಗಿ ಅವನು ಅಮಲೌಷಧಗಳು ಮತ್ತು ಮದ್ಯಪಾನಕ್ಕೆ ಮೊರೆಹೋದನು. ಸೈಬೀರಿಯದಲ್ಲಿನ ಒಂದು ಕೆಲಸದ ಶಿಬಿರದಲ್ಲಿ ಮೂರು ವರ್ಷದ ಸೆರೆಮನೆವಾಸ, ಕೆನಡಕ್ಕೆ ಕಳ್ಳಪ್ರಯಾಣಿಕನಾಗಿ ಹಡಗಿನಲ್ಲಿ ಒಂದು ಪ್ರವಾಸ, ಮತ್ತು ತನ್ನ ಅಮಲೌಷಧ ಹವ್ಯಾಸದಿಂದಾಗಿ ಎರಡು ಸಲ ಬಹುಮಟ್ಟಿಗೆ ಸಾಯುವ ಸ್ಥಿತಿಯನ್ನು ತಲಪುವುದನ್ನು ಒಳಗೂಡಿದ್ದ ವಿಶೇಷ ಘಟನೆಗಳ 19 ವರ್ಷಗಳ ನಂತರ, ಜೀವನದಲ್ಲಿ ಒಂದು ನಿಜವಾದ ಉದ್ದೇಶವನ್ನು ಕಂಡುಕೊಳ್ಳಲಿಕ್ಕಾಗಿ ಸಹಾಯ ಮಾಡುವಂತೆ ಅವನು ದೇವರಿಗೆ ಪ್ರಾರ್ಥಿಸಿದನು. ರಷ್ಯನ್ ಭಾಷೆಯನ್ನಾಡುವ ಯೆಹೋವನ ಸಾಕ್ಷಿಗಳೊಂದಿಗೆ ಒಂದು ಬೈಬಲ್ ಅಭ್ಯಾಸವು, ತನ್ನ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಲು ಅವನಿಗೆ ಸಹಾಯ ಮಾಡಿತು. ಇಂದು ಈ ಮನುಷ್ಯನು, ಇತರ ಲಕ್ಷಾಂತರ ಜನರಂತೆ, ದೇವರೊಂದಿಗೆ ಮತ್ತು ತನ್ನೊಂದಿಗೆ ಶಾಂತಿಯನ್ನು ಕಂಡುಕೊಂಡಿದ್ದಾನೆ.
ಪುನರುತ್ಥಾನದ ನಿರೀಕ್ಷೆ
ಕೊನೆಯದಾಗಿ, ಸಾರಯೆವೊದಲ್ಲಿದ್ದ ಬೊಜೊ ಮತ್ತು ಹೀನಾ ಡಾರೆಮರ ಕಡೆಗೆ ನಮ್ಮ ಗಮನವನ್ನು ಹಿಂದಿರುಗಿಸೋಣ. ಈ ದಂಪತಿಗಳಿಗೆ ಐದು ವರ್ಷ ಪ್ರಾಯದ, ಮಗ್ದಲೇನಾ ಎಂಬ ಒಬ್ಬ ಮಗಳಿದ್ದಳು. ಕಳೆದ ಜುಲೈ ತಿಂಗಳಲ್ಲಿ, ತಮ್ಮ ಸಾರುವ ಚಟುವಟಿಕೆಯಲ್ಲಿ ಪುನಃ ಒಮ್ಮೆ ತೊಡಗಲು ಆ ಮೂವರು ಮನೆಯಿಂದ ಹೊರಡುತ್ತಿದ್ದಾಗ, ಸ್ಫೋಟಿಸುತ್ತಿದ್ದ ಒಂದು ಸಿಡಿಗುಂಡಿನಿಂದ ಅವರೆಲ್ಲರು ಕೊಲ್ಲಲ್ಪಟ್ಟರು. ಅವರು ಇತರರಿಗೆ ಸಾರುತ್ತಿದ್ದ ಶಾಂತಿಯ ಕುರಿತಾಗಿ ಏನು? ಅವರ ಜೀವಗಳನ್ನು ಬಲಿತೆಗೆದುಕೊಂಡ ಸಿಡಿಗುಂಡು ಇದು ನಿಜವಾದ ಶಾಂತಿಯಲ್ಲವೆಂದು ತೋರಿಸಿತೋ?
ನಿಶ್ಚಯವಾಗಿಯೂ ಇಲ್ಲ! ಈ ವಿಷಯಗಳ ವ್ಯವಸ್ಥೆಯಲ್ಲಿ ದುರಂತಗಳು ಸಂಭವಿಸುತ್ತವೆ. ಜನರು ಬಾಂಬುಗಳಿಂದ ಅಥವಾ ಸಿಡಿಗುಂಡುಗಳಿಂದ ಕೊಲ್ಲಲ್ಪಡುತ್ತಾರೆ. ಇತರರು ಅಸ್ವಸ್ಥತೆಯಿಂದಾಗಿ ಅಥವಾ ಅಪಘಾತಗಳಲ್ಲಿ ಸಾಯುತ್ತಾರೆ. ಅನೇಕರು ವೃದ್ಧಾಪ್ಯದಿಂದಾಗಿ ಸಾಯುತ್ತಾರೆ. ದೇವರ ಶಾಂತಿಯನ್ನು ಅನುಭವಿಸುವವರಿಗೆ ಅಂತಹ ಸಂಭವಗಳಿಂದ ವಿನಾಯಿತಿಯಿಲ್ಲ, ಆದರೆ ಇಂತಹ ಘಟನೆಗಳ ಸಾಧ್ಯತೆಯು ಅವರನ್ನು ನಿರೀಕ್ಷೆಯಿಲ್ಲದವರನ್ನಾಗಿ ಬಿಡುವುದಿಲ್ಲ.
ಯೇಸು ತನ್ನ ಸ್ನೇಹಿತೆ ಮಾರ್ಥಳಿಗೆ ವಾಗ್ದಾನಿಸಿದ್ದು: “ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ; ನನ್ನನ್ನು ನಂಬುವವನು ಸತ್ತರೂ ಬದುಕುವನು.” (ಯೋಹಾನ 11:25) ಯೆಹೋವನ ಸಾಕ್ಷಿಗಳೆಲ್ಲರೂ ನಂಬುವಂತೆ, ಡಾರೆಮ್ ಕುಟುಂಬವು ಇದನ್ನು ನಂಬಿತ್ತು. ಮತ್ತು ತಾವು ಒಂದು ವೇಳೆ ಸತ್ತರೆ, ಆಗ ನಿಜವಾಗಿಯೂ ಒಂದು ಶಾಂತಿಭರಿತ ಸ್ಥಳವಾಗಿರುವ ಭೂಮಿಯಲ್ಲಿ ತಾವು ಪುನರುತ್ಥಾನಗೊಳಿಸಲ್ಪಡುವೆವೆಂದು ಡಾರೆಮ್ ಕುಟುಂಬಕ್ಕೆ ನಂಬಿಕೆಯಿತ್ತು. ಯೆಹೋವ ದೇವರು “ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.”—ಪ್ರಕಟನೆ 21:4.
ಯೇಸು ಸಾಯುವ ಸ್ವಲ್ಪ ಮುಂಚೆ, ಅವನು ತನ್ನ ಹಿಂಬಾಲಕರಿಗೆ ಹೇಳಿದ್ದು: “ಶಾಂತಿಯನ್ನು ನಿಮಗೆ ಬಿಟ್ಟುಹೋಗುತ್ತೇನೆ. . . . ನಿಮ್ಮ ಹೃದಯವು ಕಳವಳಗೊಳ್ಳದಿರಲಿ.” (ಯೋಹಾನ 14:27) ಆ ಶಾಂತಿಯನ್ನು ಹೊಂದಿದ ಮತ್ತು ನಿಶ್ಚಯವಾಗಿಯೂ ಪುನರುತ್ಥಾನದಲ್ಲಿ ಅದನ್ನು ಹೆಚ್ಚು ಪೂರ್ಣವಾಗಿ ಆನಂದಿಸಲಿರುವ ಡಾರೆಮ್ ಕುಟುಂಬದವರೊಂದಿಗೆ ನಾವು ಹರ್ಷಿಸುತ್ತೇವೆ. ಶಾಂತಿಯ ದೇವರಾಗಿರುವ ಯೆಹೋವನನ್ನು ಆರಾಧಿಸುವವರೆಲ್ಲರ ಕುರಿತಾಗಿ ನಾವು ಸಂತೋಷಿಸುತ್ತೇವೆ. ಅಂತಹವರಿಗೆ ಮನಶ್ಶಾಂತಿಯಿದೆ. ಅವರು ದೇವರೊಂದಿಗೆ ಶಾಂತಿಯನ್ನು ಅನುಭವಿಸುತ್ತಾರೆ. ಅವರು ಇತರರೊಂದಿಗೆ ಶಾಂತಿಯನ್ನು ಬೆಳೆಸಿಕೊಳ್ಳುತ್ತಾರೆ. ಮತ್ತು ಒಂದು ಶಾಂತಿಭರಿತ ಭವಿಷ್ಯತ್ತಿನಲ್ಲಿ ಅವರಿಗೆ ಭರವಸೆಯಿದೆ. ಹೌದು, ಸಂಕ್ಷೋಭೆಯಲ್ಲಿರುವ ಒಂದು ಲೋಕದಲ್ಲಿ ಅವರು ಜೀವಿಸುತ್ತಿರುವುದಾದರೂ ಅವರು ಶಾಂತಿಯನ್ನು ಕಂಡುಕೊಂಡಿದ್ದಾರೆ. ನಿಜವಾಗಿಯೂ, ದೇವರನ್ನು ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸುವವರೆಲ್ಲರೂ ಶಾಂತಿಯನ್ನು ಅನುಭವಿಸುತ್ತಾರೆ. ನೀವೂ ಅಂತಹ ಶಾಂತಿಯನ್ನು ಕಂಡುಕೊಳ್ಳುವಂತಾಗಲಿ.
[ಪಾದಟಿಪ್ಪಣಿ]
a ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿತ.
[ಪುಟ 7 ರಲ್ಲಿರುವ ಚಿತ್ರಗಳು]
ಸಂಕ್ಷೋಭೆಯಲ್ಲಿರುವ ಒಂದು ಲೋಕದಲ್ಲಿ ಜೀವಿಸುತ್ತಿರುವ ಹೊರತೂ ಅವರು ಶಾಂತಿಯನ್ನು ಕಂಡುಕೊಂಡಿದ್ದಾರೆ