ಹರ್ಷರಹಿತ ಲೋಕದಲ್ಲಿ ಹರ್ಷಭರಿತರು
“ತೀರ ನಕಾರಾತ್ಮಕ ರೀತಿಯಲ್ಲಿ ಹೇಳುವುದಾದರೆ, ಇದು ಸೈತಾನನ ಶತಮಾನವಾಗಿದೆ,” ಎಂದು ಜನವರಿ 26, 1995ರ ದ ನ್ಯೂ ಯಾರ್ಕ್ ಟೈಮ್ಸ್ನ ಒಂದು ಸಂಪಾದಕೀಯವು ಆರಂಭಿಸಿತು. “ಹಿಂದಣ ಯಾವುದೇ ಒಂದು ಯುಗದಲ್ಲಿ ಜನರು, ಬೇರೆ ಕೋಟ್ಯಂತರ ಜನರನ್ನು ಜಾತಿ, ಧರ್ಮ ಅಥವಾ ಅಂತಸ್ತಿನ ಕಾರಣಗಳಿಗಾಗಿ ಕೊಲ್ಲಲು ಇಷ್ಟು ಹೆಚ್ಚು ಸಹಜ ಪ್ರವೃತ್ತಿಯನ್ನು, ಇಷ್ಟು ಅಪೇಕ್ಷೆಯನ್ನು ತೋರಿಸಿರುವುದಿಲ್ಲ.”
ಮೇಲಿನಂತಹ ಸಂಪಾದಕೀಯವನ್ನು ಪ್ರೇರೇಪಿಸಿದ್ದು, ನಾಸಿ ಮೃತ್ಯು ಶಿಬಿರಗಳಲ್ಲಿ ಸೆರೆಯಾಗಿದ್ದ ನಿರ್ದೋಷಿ ಬಲಿಪಶುಗಳ ಮುಕ್ತತೆಯ 50ನೆಯ ವಾರ್ಷಿಕೋತ್ಸವ. ಆದರೂ, ಇದೇ ರೀತಿಯ ಕ್ರೌರ್ಯ ಕೊಲೆಗಳು ಆಫ್ರಿಕ ಮತ್ತು ಪೂರ್ವ ಯೂರೋಪಿನ ಭಾಗಗಳಲ್ಲಿ ಇನ್ನೂ ಸಂಭವಿಸುತ್ತಿವೆ.
ಅಸಹಾಯಕ ವರ್ಗಗಳ ಕೊಲೆಗಳು, ಕುಲಸಂಬಂಧದ ನಿರ್ಮೂಲನೆಗಳು, ಗೋತ್ರೀಯ ಸಂಹಾರಗಳು—ಅವು ಏನೆಂದೇ ಕರೆಯಲ್ಪಡಲಿ—ತೀರಾ ದುಃಖವನ್ನು ಫಲಿಸುತ್ತವೆ. ಆದರೂ ಅಂತಹ ಕಗ್ಗೊಲೆಗಳ ಮಧ್ಯದಲ್ಲಿ, ಹರ್ಷದ ಬಲವಾದ ಧ್ವನಿಗಳು ಎದ್ದುಬರುತ್ತವೆ. ದೃಷ್ಟಾಂತಕ್ಕಾಗಿ, 1930ಗಳಲ್ಲಿನ ಜರ್ಮನಿಯನ್ನು ನಾವು ನೋಡೋಣ.
ಎಪ್ರಿಲ್ 1935ರೊಳಗೆ, ಹಿಟ್ಲರ್ ಮತ್ತು ಅವನ ನಾಸಿ ಪಕ್ಷದಿಂದ, ಯೆಹೋವನ ಸಾಕ್ಷಿಗಳು ಪೌರ ಸೇವೆಯ ಸಕಲ ಉದ್ಯೋಗಗಳಿಂದ ನಿಷೇಧಿಸಲ್ಪಟ್ಟರು. ಕ್ರೈಸ್ತ ತಾಟಸ್ಥ್ಯವನ್ನು ಅವರು ಕಾಪಾಡಿಕೊಂಡ ಕಾರಣದಿಂದಲೂ ಸಾಕ್ಷಿಗಳು ಕೈದು ಮಾಡಲ್ಪಟ್ಟರು, ಸೆರೆಮನೆಗೆ ಹಾಕಲ್ಪಟ್ಟರು, ಮತ್ತು ಕೂಟಶಿಬಿರಗಳಿಗೆ ಕಳುಹಿಸಲ್ಪಟ್ಟರು. (ಯೋಹಾನ 17:16) ಆಗಸ್ಟ್ 1936ರ ಕೊನೆಯಲ್ಲಿ, ಯೆಹೋವನ ಸಾಕ್ಷಿಗಳ ಸಾಮೂಹಿಕ ದಸ್ತಗಿರಿಗಳಾದವು. ಅವರಲ್ಲಿ ಸಾವಿರಾರು ಮಂದಿ ಕೂಟಶಿಬಿರಗಳಿಗೆ ಕಳುಹಿಸಲ್ಪಟ್ಟರು; ಬದುಕಿ ಉಳಿದಲ್ಲಿ 1945ರ ತನಕ ಅವರಲ್ಲಿ ಹೆಚ್ಚಿನವರು ಅಲ್ಲೇ ಉಳಿದರು. ಆ ಶಿಬಿರಗಳಲ್ಲಿ ಅವರಿಗೆ ಕೊಡಲಾದ ಅಮಾನುಷ ಉಪಚಾರಕ್ಕೆ ಸಾಕ್ಷಿಗಳಾದರೊ ಹೇಗೆ ಪ್ರತಿಕ್ರಿಯಿಸಿದರು? ಅದು ಆಶ್ಚರ್ಯಕರವಾಗಿ ತೋರಬಹುದಾದರೂ, ತಮ್ಮ ಹರ್ಷರಹಿತ ಪರಿಸರಗಳಲ್ಲೂ ಅವರು ಹರ್ಷವನ್ನು ಕಾಪಾಡಿಕೊಳ್ಳಲು ಶಕ್ತರಾದರು.
“ಕೆಸರಿನಲ್ಲಿರುವ ಒಂದು ಬಂಡೆ”
ಬ್ರಿಟಿಷ್ ಇತಿಹಾಸಕಾರ್ತಿ ಕ್ರಿಸ್ಟೀನ್ ಕಿಂಗ್, ಶಿಬಿರಗಳಲ್ಲಿದ್ದ ಒಬ್ಬಾಕೆ ಕ್ಯಾತೊಲಿಕ್ ಸ್ತ್ರೀಯನ್ನು ಇಂಟರ್ವ್ಯೂ ಮಾಡಿದರು. “ನಾನೆಂದೂ ಮರೆತಿಲ್ಲದ ಒಂದು ವಾಕ್ಸರಣಿಯನ್ನು ಆಕೆ ಬಳಸಿದಳು,” ಅಂದರು ಡಾ. ಕಿಂಗ್. “ಆ ಜೀವನದ ಭೀಕರತೆಯ ಕುರಿತು, ತಾನು ಜೀವಿಸಿದ ಅಸಹ್ಯಕರ ಪರಿಸ್ಥಿತಿಗಳ ಕುರಿತು ಆಕೆ ಸವಿಸ್ತಾರವಾಗಿ ಮಾತಾಡಿದಳು. ಮತ್ತು ತನಗೆ ಸಾಕ್ಷಿಗಳ ಪರಿಚಯವಿತ್ತು ಎಂದಳಾಕೆ, ಹಾಗೂ ಆ ಸಾಕ್ಷಿಗಳು ಕೆಸರಿನಲ್ಲಿರುವ ಬಂಡೆಯಾಗಿದ್ದರು. ಆ ಎಲ್ಲ ಕೊಚ್ಚೆಯಲ್ಲಿ ಸಾಕಷ್ಟು ಗಟ್ಟಿಯಾದ ನೆಲದಂತಿದ್ದರು. ಗಾರ್ಡ್ಗಳು ಶಿಸ್ತಿನ ನಡಗೆಯಲ್ಲಿ ದಾಟಿಹೋಗುವಾಗ ಉಗುಳದೇ ಇದ್ದವರು ಅವರೊಬ್ಬರೇ ಎಂದು ಅವಳಂದಳು. ಇದೆಲ್ಲದರೊಂದಿಗೆ ದ್ವೇಷದಿಂದ ವ್ಯವಹರಿಸದೆ, ಪ್ರೀತಿಯಿಂದಲೂ ನಿರೀಕ್ಷೆಯಿಂದಲೂ ಮತ್ತು ಒಂದು ಉದ್ದೇಶವಿತ್ತೆಂಬ ಅನಿಸಿಕೆಯಿಂದ ವರ್ತಿಸಿದ ಜನರು ಅವರು ಮಾತ್ರ.”
‘ಕೆಸರಿನಲ್ಲಿ ಬಂಡೆಗಳಂತಿರಲು’ ಯೆಹೋವನ ಸಾಕ್ಷಿಗಳನ್ನು ಶಕ್ತರಾಗಿ ಮಾಡಿದ್ದು ಯಾವುದು? ಯೆಹೋವ ದೇವರಲ್ಲಿ ಮತ್ತು ಆತನ ಪುತ್ರ ಯೇಸು ಕ್ರಿಸ್ತನಲ್ಲಿ ಅಚಲವಾದ ನಂಬಿಕೆಯೇ. ಆದುದರಿಂದ, ಹಿಟ್ಲರನ ಪ್ರಯತ್ನಗಳು ಅವರ ಕ್ರೈಸ್ತ ಪ್ರೀತಿ ಮತ್ತು ಆನಂದವನ್ನು ಅಡಗಿಸುವುದರಲ್ಲಿ ಸೋತುಹೋದವು.
ಶಿಬಿರದಿಂದ ಪಾರಾದ ಇಬ್ಬರು, ಈ ನಂಬಿಕೆಯ ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸಿದ ಐದು ದಶಕಗಳ ಬಳಿಕ, ಅದನ್ನು ಜ್ಞಾಪಿಸಿಕೊಳ್ಳುವುದನ್ನು ಕೇಳಿರಿ. ಒಬ್ಬರು ಹೇಳುವುದು: “ಅತ್ಯಂತ ಕ್ರೌರ್ಯಾತ್ಮಕ ಪರಿಸ್ಥಿತಿಗಳ ಕೆಳಗೆ ಯೆಹೋವನಿಗೆ ನನ್ನ ಪ್ರೀತಿ ಮತ್ತು ಕೃತಜ್ಞತೆಯನ್ನು ರುಜುಪಡಿಸುವ ಅಸದೃಶ್ಯ ಸೌಭಾಗ್ಯ ನನಗೆ ದೊರೆತದ್ದಕ್ಕಾಗಿ ನಾನು ಸಂತೋಷದಿಂದ ತುಂಬಿ ತುಳುಕುತ್ತೇನೆ. ಇದನ್ನು ಮಾಡಲು ನನ್ನನ್ನು ಯಾರೂ ಬಲಾತ್ಕರಿಸಲಿಲ್ಲ! ಅದಕ್ಕೆ ವ್ಯತಿರಿಕ್ತವಾಗಿ, ದೇವರಿಗಿಂತ ಹೆಚ್ಚಾಗಿ ಹಿಟ್ಲರನಿಗೆ ವಿಧೇಯರಾಗುವಂತೆ ಬೆದರಿಕೆಗಳಿಂದ ನಮ್ಮನ್ನು ಬಲಾತ್ಕರಿಸಲು ಪ್ರಯತ್ನಿಸಿದವರು ನಮ್ಮ ಶತ್ರುಗಳೇ ಆಗಿದ್ದರು—ಆದರೆ ಸಾಫಲ್ಯರಹಿತವಾಗಿ! ನಾನು ಈಗ ಸಂತೋಷಿತಳಾಗಿರುವುದು ಮಾತ್ರವಲ್ಲ, ಒಳ್ಳೇ ಮನಸ್ಸಾಕ್ಷಿಯ ಕಾರಣ, ಸೆರೆಮನೆಯ ಗೋಡೆಗಳ ಹಿಂದೆಯೂ ನಾನು ಹರ್ಷಿತಳಾಗಿದ್ದೆ.”—ಮರೀಯ ಹಾಂಬ್ಯಾಖ್, 94 ವಯಸ್ಸು.
ಇನ್ನೊಬ್ಬ ಸಾಕ್ಷಿಯು ಹೇಳುವುದು: “ಸೆರೆಮನೆವಾಸದ ನನ್ನ ದಿನಗಳನ್ನು ಕೃತಜ್ಞತೆ ಮತ್ತು ಹರ್ಷದಿಂದ ನಾನು ಜ್ಞಾಪಿಸಿಕೊಳ್ಳುತ್ತೇನೆ. ಹಿಟ್ಲರನ ಕೈಕೆಳಗೆ ಸೆರೆಮನೆಗಳಲ್ಲಿ ಮತ್ತು ಕೂಟಶಿಬಿರಗಳಲ್ಲಿ ಕಳೆದ ವರ್ಷಗಳು, ಕಷ್ಟಕರವೂ ಶೋಧನೆಗಳಿಂದ ತುಂಬಿದವುಗಳೂ ಆಗಿದ್ದವು. ಆದರೆ ಅವುಗಳನ್ನು ಅನುಭವಿಸದೆ ಇದ್ದಿರಲು ನಾನು ಬಯಸಿದ್ದಿರಲಾರೆ, ಯಾಕೆಂದರೆ ಯೆಹೋವನಲ್ಲಿ ಪೂರ್ಣವಾಗಿ ಭರವಸೆಯಿಡುವಂತೆ ಅವು ನನಗೆ ಕಲಿಸಿದವು.”—ಯೊಹಾನೆಸ್ ನೊಯಿಬಾಕರ್, 91 ವಯಸ್ಸು.
“ಯೆಹೋವನಲ್ಲಿ ಸಂಪೂರ್ಣವಾಗಿ ಭರವಸೆಯಿಡುವುದು”—ಅದೇ ಯೆಹೋವನ ಸಾಕ್ಷಿಗಳಿಂದ ಅನುಭವಿಸಲ್ಪಡುವ ಹರ್ಷದ ರಹಸ್ಯ. ಹೀಗೆ ಅವರು ಹರ್ಷರಹಿತ ಲೋಕದಿಂದ ಸುತ್ತುವರಿಯಲ್ಪಟ್ಟರೂ ಹರ್ಷಭರಿತರಾಗಿದ್ದಾರೆ. ಇತ್ತೀಚಿನ ತಿಂಗಳುಗಳಲ್ಲಿ ನಡೆದ “ಹರ್ಷಭರಿತ ಸ್ತುತಿಗಾರರು” ಜಿಲ್ಲಾ ಅಧಿವೇಶನಗಳಲ್ಲಿ ಅವರ ಹರ್ಷವು ಪ್ರತ್ಯಕ್ಷವಾಗಿ ತೋರಿಬಂತು. ಈ ಹರ್ಷಕರ ನೆರವಿಗಳನ್ನು ನಾವು ಸಂಕ್ಷಿಪ್ತವಾಗಿ ಪರಾಮರ್ಶಿಸೋಣ.
[ಪುಟ 4 ರಲ್ಲಿರುವ ಚಿತ್ರ]
ಮರೀಯ ಹಾಂಬ್ಯಾಖ್