ಬೆಳಕು ಕತ್ತಲೆಯ ಯುಗವೊಂದನ್ನು ಕೊನೆಗೊಳಿಸುತ್ತದೆ
ಯೇಸು ಕ್ರಿಸ್ತನ ಮತ್ತು ಅವನ ಅಪೊಸ್ತಲರ ಜಗತ್ತು ಹೀಬ್ರು ಶಾಸ್ತ್ರದ ಕಾಲಗಳಿಗಿಂತ ತೀರ ಭಿನ್ನವಾಗಿತ್ತು. ಇದರ ಅರಿವಿಲ್ಲದ ಬೈಬಲ್ ವಾಚಕರು, ಪ್ರವಾದಿ ಮಲಾಕಿಯನಿಂದ ಸುವಾರ್ತೆಯ ಲೇಖಕ ಮತ್ತಾಯನ ತನಕ ಸಾಮಾಜಿಕ ಮತ್ತು ಧಾರ್ಮಿಕತೆಯ ಅವಿಚ್ಛಿನ್ನ ಮುಂದುವರಿಕೆಯನ್ನು ಕಲ್ಪಿಸಿಕೊಂಡು, ಅವರ ನಡುವೆ ಆ 400 ವರ್ಷಗಳ ಸಮಯದಲ್ಲಿ ಏನು ಸಂಭವಿಸಿತ್ತೆಂಬುದರ ಅಸ್ಪಷ್ಟ ಭಾವನೆಯನ್ನು ತಾಳಬಹುದು.
ಇಂದಿನ ದಿನದ ಹೆಚ್ಚಿನ ಬೈಬಲುಗಳಲ್ಲಿ ಹೀಬ್ರು ಶಾಸ್ತ್ರದ ಕೊನೆಯ ಪುಸ್ತಕವಾದ ಮಲಾಕಿಯ, ಇಸ್ರಾಯೇಲ್ಯರ ಉಳಿಕೆಯವರು ಬಾಬೆಲಿನಲ್ಲಿನ ಬಂದಿವಾಸದಿಂದ ಬಿಡಿಸಲ್ಪಟ್ಟ ಮೇಲೆ ತಮ್ಮ ಸ್ವದೇಶದಲ್ಲಿ ಪುನರ್ವಸತಿ ಮಾಡಿದ್ದನ್ನು ತಿಳಿಸಿ, ಕೊನೆಗೊಳಿಸುತ್ತದೆ. (ಯೆರೆಮೀಯ 23:3) ದುಷ್ಟ ಜಗತ್ತನ್ನು ನಿರ್ಮೂಲಗೊಳಿಸಿ ಮೆಸ್ಸೀಯ ಸಂಬಂಧಿತ ಯುಗವನ್ನು ಪ್ರಸ್ತಾಪಿಸಲು ದೇವರ ತೀರ್ಪಿನ ದಿನಕ್ಕಾಗಿ ಕಾಯುವಂತೆ ದೈವಭಕ್ತ ಯೆಹೂದ್ಯರನ್ನು ಪ್ರೋತ್ಸಾಹಿಸಲಾಗಿತ್ತು. (ಮಲಾಕಿಯ 4:1, 2) ಈ ಮಧ್ಯೆ ಪರ್ಷಿಯವು ಆಳಿತು. ಯೆಹೂದದಲ್ಲಿ ಶಿಬಿರಹೂಡಿದ್ದ ಪಾರಸೀ ಸೇನೆಗಳು ಮಿಲಿಟರಿ ಶಕ್ತಿಯ ಮೂಲಕ ಶಾಂತಿಯನ್ನು ಕಾಪಾಡಿದವು ಮತ್ತು ರಾಜ ಶಾಸನವನ್ನು ಎತ್ತಿಹಿಡಿದವು.—ಹೋಲಿಸಿ ಎಜ್ರ 4:23.
ಆದರೂ, ಹಿಂಬಾಲಿಸಿದ ನಾಲ್ಕು ಶತಮಾನಗಳಲ್ಲೆಲ್ಲ ಬೈಬಲ್ ದೇಶಗಳು ಸ್ಥಿರವಾಗಿ ಉಳಿಯಲಿಲ್ಲ. ಆತ್ಮಿಕ ಅಂಧಕಾರ ಮತ್ತು ಗೊಂದಲವು ಒಳನುಗ್ಗಲಾರಂಭಿಸಿತು. ಸಮೀಪ ಪೂರ್ವವು ಹಿಂಸಾಚಾರ, ಭಯವಾದ, ದಬ್ಬಾಳಿಕೆ, ತೀವ್ರಗಾಮಿ ಧಾರ್ಮಿಕ ವಿಚಾರಗಳು, ಊಹಾತ್ಮಕ ತತ್ವಜ್ಞಾನ, ಮತ್ತು ಸಾಂಸ್ಕೃತಿಕ ಧಕ್ಕೆಯಿಂದ ಕಂಪನಗೊಂಡಿತು.
ಕ್ರೈಸ್ತ ಗ್ರೀಕ್ ಶಾಸ್ತ್ರದ ಮೊದಲನೆಯ ಪುಸ್ತಕವಾದ ಮತ್ತಾಯನ ಸುವಾರ್ತೆಯು ಒಂದು ಭಿನ್ನವಾದ ಯುಗದಲ್ಲಿ ಬರೆಯಲ್ಪಟ್ಟಿತು. ರೋಮಿನ ಸೇನೆಗಳು ಪ್ಯಾಕ್ಸ್ ರೊಮಾನ ಅಥವಾ ರೋಮನ್ ಶಾಂತಿಯನ್ನು ಜಾರಿಗೆ ತಂದವು. ಕಷ್ಟಾನುಭವ, ದಬ್ಬಾಳಿಕೆ, ಮತ್ತು ಬಡತನವನ್ನು ತೆಗೆದುಹಾಕುವಂತೆಯೂ, ಜೀವ, ಸಮೃದ್ಧಿ, ಮತ್ತು ಪ್ರಶಾಂತತೆಯ ಮೇಲೆ ಬೆಳಕು ಬೀರುವಂತೆಯೂ ಮೆಸ್ಸೀಯನ ಬರೋಣಕ್ಕಾಗಿ ಭಕ್ತರಾದ ಜನರು ಆತುರದಿಂದ ಕಾದರು. (ಹೋಲಿಸಿ ಲೂಕ 1:67-79; 24:21; 2 ತಿಮೊಥೆಯ 1:10.) ಯೇಸು ಕ್ರಿಸ್ತನ ಜನನಕ್ಕೆ ಮುಂಚಿನ ಶತಮಾನಗಳಲ್ಲಿ ಯೆಹೂದಿ ಸಮಾಜವನ್ನು ಪುನರ್ರೂಪಿಸಿದ ಪ್ರಬಲ ಶಕ್ತಿಗಳನ್ನು ನಾವು ತುಸು ನಿಕಟವಾಗಿ ದೃಷ್ಟಿಸೋಣ.
ಪಾರಸೀಯರ ಕಾಲದಲ್ಲಿ ಯೆಹೂದಿ ಜೀವನ
ಸಾ.ಶ.ಪೂ. 537ರಲ್ಲಿ ಯೆಹೂದ್ಯರನ್ನು ಬಾಬೆಲಿನ ಬಂದಿವಾಸದಿಂದ ಮುಕ್ತಮಾಡಿದ ಕೋರೇಶನ ಘೋಷಣೆಯನ್ನು ಹಿಂಬಾಲಿಸಿ, ಯೆಹೂದ್ಯರ ಮತ್ತು ಯೆಹೂದ್ಯೇತರ ಸಹವಾಸಿಗಳ ಒಂದು ಗುಂಪು ಬಾಬೆಲನ್ನು ಬಿಟ್ಟು ಹೊರಟಿತು. ಈ ಆತ್ಮಿಕ ಪ್ರತಿವರ್ತನೆಯ ಉಳಿಕೆಯವರು, ನಾಶಗೊಂಡಿದ್ದ ಪಟ್ಟಣಗಳ ಮತ್ತು ಬರಡುಬಿದ್ದ ದೇಶದ ಒಂದು ಕ್ಷೇತ್ರಕ್ಕೆ ಮರಳಿದರು. ಒಮ್ಮೆ ವಿಸ್ತಾರವಾಗಿದ್ದ ಇಸ್ರಾಯೇಲ್ಯ ಕ್ಷೇತ್ರವು ಎದೋಮ್ಯ, ಪೊನೀಷ್ಯ, ಸಮಾರ್ಯ, ಅರಬಿ ಗೋತ್ರಗಳು, ಮತ್ತು ಇತರರಿಂದ ತಿಂದುಹಾಕಲ್ಪಟ್ಟಿತ್ತು. ಯೆಹೂದ ಮತ್ತು ಬೆನ್ಯಾಮೀನ ಕ್ಷೇತ್ರದಲ್ಲಿ ಏನು ಉಳಿದಿತ್ತೋ ಅದು ಪಾರಸೀ ಅಧಿಕಾರದ ಕೆಳಗೆ ಆಬಾರ್ ನಾಹಾರ (ನದಿಯಾಚೆ) ಎಂದು ಕರೆಯಲ್ಪಟ್ಟ ಯೆಹೂದ ಪ್ರಾಂತವಾಯಿತು.—ಎಜ್ರ 1:1-4; 2:64, 65.
ಪರ್ಷಿಯನ್ ಆಳಿಕೆಯ ಕೆಳಗೆ, ಯೆಹೂದವು “ವಿಸ್ತರಣೆ ಮತ್ತು ಜನಸಂಖ್ಯಾ ಬೆಳವಣಿಗೆಯ ಒಂದು ಅವಧಿಯನ್ನು” ಅನುಭವಿಸಲಾರಂಭಿಸಿತು ಎಂದು ಹೇಳುತ್ತದೆ ಕೇಂಬ್ರಿಜ್ ಹಿಸ್ಟರಿ ಆಫ್ ಜ್ಯುಡೆಯಿಸ್ಮ್. ಯೆರೂಸಲೇಮಿನ ಕುರಿತು ಅದು ಇನ್ನೂ ಹೇಳುವುದು: “ರೈತರು ಮತ್ತು ಯಾತ್ರಿಕರು ಕೊಡುಗೆಗಳನ್ನು ತಂದರು, ದೇವಾಲಯ ಮತ್ತು ನಗರವು ಸಮೃದ್ಧವಾಯಿತು, ಮತ್ತು ಅವುಗಳ ಐಶ್ವರ್ಯವು ವಿದೇಶಿ ವರ್ತಕರನ್ನು ಮತ್ತು ಶಿಲ್ಪಿಗಳನ್ನು ಆಕರ್ಷಿಸಿತು.” ಪಾರಸೀಯರು ಸ್ಥಳಿಕ ಸರಕಾರ ಮತ್ತು ಧರ್ಮದೆಡೆಗೆ ಅತಿ ಸೈರಣೆವುಳ್ಳವರಾಗಿದ್ದರೂ, ತೆರಿಗೆಯು ಅತಿರೇಕವಾಗಿತ್ತು ಮತ್ತು ಅಮೂಲ್ಯ ಲೋಹ ನಾಣ್ಯಗಳಿಂದ ಮಾತ್ರ ಅದನ್ನು ಸಲ್ಲಿಸಸಾಧ್ಯವಿತ್ತು.—ಹೋಲಿಸಿ ನೆಹೆಮೀಯ 5:1-5, 15; 9:36, 37; 13:15, 16, 20.
ಪರ್ಷಿಯನ್ ಸಾಮ್ರಾಜ್ಯದ ಕೊನೆಯ ವರ್ಷಗಳು ಅತಿ ಗೊಂದಲದ ಕಾಲವಾಗಿದ್ದು ಸೇನಾ ದಂಗೆಗಳಿಂದ ಗುರುತಿಸಲ್ಪಟ್ಟವು. ಭೂಮಧ್ಯ ಸಮುದ್ರ ಕರಾವಳಿಯ ಉದ್ದಕ್ಕೂ ಅನೇಕ ಯೆಹೂದ್ಯರು ಒಂದು ಬಂಡಾಯದಲ್ಲಿ ಒಳಗೂಡಿದ್ದರು ಮತ್ತು ಅವರನ್ನು ದೂರ ಉತ್ತರಕ್ಕಿರುವ ಕ್ಯಾಸ್ಪಿಯನ್ ಸಮುದ್ರದ ಹಿರ್ಕೇನಿಯಕ್ಕೆ ಗಡೀಪಾರು ಮಾಡಲಾಯಿತು. ಆದರೂ, ಹೆಚ್ಚಿನ ಯೆಹೂದವು ಪಾರಸೀಯ ಶಿಕ್ಷೆಯಿಂದ ಬಾಧಿತವಾದಂತೆ ಕಾಣಲಿಲ್ಲ.
ಗ್ರೀಕರ ಕಾಲಾವಧಿ
ಮಹಾ ಅಲೆಗ್ಸಾಂಡರನು ಸಾ.ಶ.ಪೂ. 332ರಲ್ಲಿ ಮಧ್ಯಪೂರ್ವದ ಮೇಲೆ ಚಿರತೆಯಂತೆ ಹಾರಿದನು, ಆದರೆ ಅವನಿಗಿಂತ ಮುಂಚೆಯೇ ಗ್ರೀಕ್ ಆಮದುಗಳ ಒಂದು ರುಚಿಯು ಅವರನ್ನು ತಲಪಿತ್ತು. (ದಾನಿಯೇಲ 7:6) ಗ್ರೀಕ್ ಸಂಸ್ಕೃತಿಗೆ ರಾಜಕೀಯ ಮೌಲ್ಯವಿತ್ತೆಂದು ಗ್ರಹಿಸುತ್ತಾ, ಅವನು ತನ್ನ ವಿಸ್ತರಿಸುತ್ತಿರುವ ಸಾಮ್ರಾಜ್ಯವನ್ನು ಗ್ರೀಕೀಕರಿಸಲು ಉದ್ದೇಶಪೂರ್ವಕವಾಗಿ ಮುಂದೊತ್ತಿದನು. ಗ್ರೀಕ್ ಒಂದು ಅಂತಾರಾಷ್ಟ್ರೀಯ ಭಾಷೆಯಾಯಿತು. ಅಲೆಗ್ಸಾಂಡರನ ಸಂಕ್ಷಿಪ್ತ ಆಳಿಕೆಯು ಕೂಟವಾದಗಳ ಪ್ರೇಮ, ಕ್ರೀಡೆಗಳಲ್ಲಿ ಉತ್ಸಾಹ, ಮತ್ತು ರಸಾಭಿಜ್ಞಾನದ ಗಣ್ಯತೆಯನ್ನು ಪ್ರವರ್ಧಿಸಿತು. ಕ್ರಮೇಣ ಯೆಹೂದಿ ಪರಂಪರೆಯು ಸಹ ಗ್ರೀಕಾನುಕರಣಕ್ಕೆ ಬಲಿಬಿತ್ತು.
ಸಾ.ಶ.ಪೂ. 323ರಲ್ಲಿ ಅಲೆಗ್ಸಾಂಡರನ ಮರಣವನ್ನು ಹಿಂಬಾಲಿಸಿ, ಸಿರಿಯ ಮತ್ತು ಐಗುಪ್ತದಲ್ಲಿದ್ದ ಅವನ ಉತ್ತರಾಧಿಕಾರಿಗಳು, “ಉತ್ತರರಾಜ” ಮತ್ತು “ದಕ್ಷಿಣರಾಜ” ಎಂದು ಪ್ರವಾದಿ ದಾನಿಯೇಲನು ಕರೆದಿದ್ದವರ ಪಾತ್ರಗಳನ್ನು ತುಂಬಿಸುವುದರಲ್ಲಿ ಮೊದಲಿಗರಾದರು. (ದಾನಿಯೇಲ 11:1-19) “ದಕ್ಷಿಣರಾಜ”ನಾದ ಐಗುಪ್ತದ ಟಾಲಮಿ II ಫಿಲೆಡೆಲ್ಪಸ್ (ಸಾ.ಶ.ಪೂ. 285-246) ಇವನ ಆಳಿಕೆಯಲ್ಲಿ, ಹೀಬ್ರು ಶಾಸ್ತ್ರವು ಸಾಮಾನ್ಯ ಗ್ರೀಕ್ ಭಾಷೆಯಾದ ಕಾಯ್ನೆಗೆ ತರ್ಜುಮೆಯಾಗತೊಡಗಿತು. ಈ ಭಾಷಾಂತರವನ್ನು ಸೆಪ್ಟುಅಜಿಂಟ್ ಎಂದು ಕರೆಯಲಾಯಿತು. ಈ ಕೃತಿಯ ಅನೇಕ ವಚನಗಳು ಕ್ರೈಸ್ತ ಗ್ರೀಕ್ ಶಾಸ್ತ್ರಗಳಲ್ಲಿ ಉದ್ಧರಿಸಲಾಗಿವೆ. ಆತ್ಮಿಕ ರೀತಿಯಲ್ಲಿ ಗೊಂದಲ ಮತ್ತು ಅಂಧಕಾರ ತುಂಬಿದ ಜಗತ್ತಿಗೆ, ಅರ್ಥಗಳ ಜ್ಞಾನೋದಯವುಂಟುಮಾಡುವ ಛಾಯೆಗಳನ್ನು ತಿಳಿಯಪಡಿಸುವುದರಲ್ಲಿ ಗ್ರೀಕ್ ಭಾಷೆಯು ಅತ್ಯುತ್ತಮ ಸಾಧನವಾಗಿ ಪರಿಣಮಿಸಿತು.
ಆಂಟೈಯಕಸ್ IV ಇಪಿಫೆನೀಸ್, ಸಿರಿಯದ ರಾಜನೂ ಪಲೆಸ್ತೀನದ ಅಧಿಪತಿಯೂ (ಸಾ.ಶ.ಪೂ. 175-164) ಆದ ಬಳಿಕ, ಸರಕಾರಿ ಪ್ರೇರಿತ ಹಿಂಸೆಗಳ ಮೂಲಕ ಯೆಹೂದಿ ಮತವು ಬಹಳ ಮಟ್ಟಿಗೆ ನಿರ್ಮೂಲವಾಯಿತೆನ್ನಬೇಕು. ಯೆಹೂದ್ಯರು ಯೆಹೋವ ದೇವರನ್ನು ತಿರಸ್ಕರಿಸುವಂತೆಯೂ ಗ್ರೀಕ್ ದೇವತೆಗಳಿಗೆ ಮಾತ್ರ ಬಲಿಯರ್ಪಿಸುವಂತೆಯೂ ಪ್ರಾಣಾಂತಕ ಬೆದರಿಕೆಯ ಕೆಳಗೆ ಒತ್ತಾಯಿಸಲ್ಪಟ್ಟರು. ಸಾ.ಶ.ಪೂ. 168ನೆಯ ಡಿಸೆಂಬರ್ನಲ್ಲಿ, ಯೆರೂಸಲೇಮಿನಲ್ಲಿ ಯೆಹೋವನ ದೇವಾಲಯದ ಮಹಾ ಯಜ್ಞವೇದಿಯ ಮೇಲೆ ಒಂದು ವಿಧರ್ಮಿ ವೇದಿಯು ಕಟ್ಟಲ್ಪಟ್ಟಿತು ಮತ್ತು ಅದರ ಮೇಲೆ ಒಲಿಂಪಸ್ಸಿನ ಸೂಸ್ಗೆ ಬಲಿಗಳನ್ನು ಅರ್ಪಿಸಲಾಯಿತು. ಧಕ್ಕೆ ಹೊಡೆಯಲ್ಪಟ್ಟರೂ ಧೀರರಾದ ಹಳ್ಳಿಗಾಡಿನ ಪುರುಷರು ಜ್ಯೂಡಸ್ ಮ್ಯಾಕಬೀಯಸ್ನ ನಾಯಕತ್ವದಲ್ಲಿ ತಮ್ಮನ್ನು ತಂಡವಾಗಿ ಒಟ್ಟುಸೇರಿಸಿ, ಯೆರೂಸಲೇಮು ಹಸ್ತಗತವಾಗುವ ತನಕ ಕಟು ಹೋರಾಟವನ್ನು ನಡಸಿದರು. ದೇವಾಲಯವನ್ನು ದೇವರಿಗೆ ಪುನಃ ಸಮರ್ಪಿಸಲಾಯಿತು, ಮತ್ತು ಅದು ಹೊಲೆಗೈಯಲ್ಪಟ್ಟು ಸರಿ ಮೂರು ವರ್ಷಗಳಲ್ಲಿ ನಿತ್ಯದ ಬಲಿಯರ್ಪಣೆಗಳು ನವೀಕರಿಸಲ್ಪಟ್ಟವು.
ಉಳಿದ ಗ್ರೀಕ್ ಕಾಲಾವಧಿಯಲ್ಲಿ, ಯೂದಾಯ ಸಮಾಜದವರು ತಮ್ಮ ಕ್ಷೇತ್ರಗಳನ್ನು ಅದರ ಪುರಾತನ ಗಡಿಗಳಿಗೆ ಹಬ್ಬಿಸಲು ಆಕ್ರಮಣಶೀಲರಾಗಿ ಮುಂದೊತ್ತಿದರು. ಅವರ ಹೊಸತಾಗಿ ಪಡೆದ ಮಿಲಿಟರಿ ಶೌರ್ಯವು ಭಕ್ತಿಹೀನ ರೀತಿಯಲ್ಲಿ ವಿಧರ್ಮಿ ನೆರೆಹೊರೆಯವರನ್ನು ಕತ್ತಿಯ ಬೆದರಿಕೆಹಾಕಿ ಬಲಾತ್ಕಾರದಿಂದ ಮತಾಂತರಿಸಲು ಬಳಸಲ್ಪಟ್ಟಿತು. ಆದರೂ, ಗ್ರೀಕ್ ರಾಜಕೀಯ ವಿಚಾರ ಸರಣಿಯು ನಗರಗಳನ್ನು ಮತ್ತು ಊರುಗಳನ್ನು ಪ್ರಭಾವಿಸುವುದನ್ನು ಮುಂದುವರಿಸಿತು.
ಈ ಸಮಯದಲ್ಲಿ, ಮಹಾ ಯಾಜಕತ್ವದ ಪದಕ್ಕೆ ಸ್ಪರ್ಧಿಸುವವರು ಹೆಚ್ಚಾಗಿ ಭ್ರಷ್ಟರೇ ಆಗಿದ್ದರು. ಹೂಟಗಳು, ಗುಪ್ತವಧೆಗಳು, ಮತ್ತು ರಾಜಕೀಯ ಒಳಸಂಚುಗಳು ಅವರ ಹುದ್ದೆಯನ್ನು ದೂಷಿತಗೊಳಿಸಿದ್ದವು. ಯೆಹೂದ್ಯರ ನಡುವಣ ಭಾವವು ಹೆಚ್ಚು ಭಕ್ತಿಹೀನವಾದಷ್ಟಕ್ಕೆ, ಗ್ರೀಕ್ ಕ್ರೀಡೆಗಳು ಹೆಚ್ಚು ಜನಪ್ರಿಯವಾದವು. ಕ್ರೀಡೆಗಳಲ್ಲಿ ಭಾಗವಹಿಸುವುದಕ್ಕೋಸ್ಕರ ಯುವ ಯಾಜಕರು ತಮ್ಮ ಕರ್ತವ್ಯಗಳನ್ನು ದುರ್ಲಕ್ಷಿಸುವುದನ್ನು ಕಾಣುವುದು ಅದೆಷ್ಟು ಸೋಜಿಗವಾಗಿತ್ತು! ಯೆಹೂದ್ಯೇತರರೊಂದಿಗೆ ನಗ್ನತೆಯಲ್ಲಿ ಸ್ಪರ್ಧಿಸುವಾಗ ತಮ್ಮ ಪೇಚಾಟವನ್ನು ವರ್ಜಿಸಲಿಕ್ಕಾಗಿ ಯೆಹೂದಿ ಕ್ರೀಡಾಪಟುಗಳು ‘ಸುನ್ನತಿರಹಿತ’ರಾಗಲು ವೇದನಾಮಯ ಶಸ್ತ್ರಕ್ರಿಯೆಗೂ ತಮ್ಮನ್ನು ಒಪ್ಪಿಸಿಕೊಟ್ಟರು.—ಹೋಲಿಸಿ 1 ಕೊರಿಂಥ 7:18.
ಧಾರ್ಮಿಕ ಬದಲಾವಣೆಗಳು
ಬಂದಿವಾಸದ ಅನಂತರದ ಆರಂಭ ವರ್ಷಗಳಲ್ಲಿ, ನಂಬಿಗಸ್ತ ಯೆಹೂದ್ಯರು ವಿಧರ್ಮಿ ಕಲ್ಪನೆಗಳನ್ನು ಮತ್ತು ತತ್ವಜ್ಞಾನಗಳನ್ನು ಹೀಬ್ರು ಶಾಸ್ತ್ರದಲ್ಲಿ ಪ್ರಕಟವಾದ ನಿಜ ಧರ್ಮದೊಂದಿಗೆ ಬೆರಸುವುದನ್ನು ಪ್ರತಿಭಟಿಸಿದ್ದರು. ಪರ್ಷಿಯದೊಂದಿಗೆ ನಿಕಟ ಸಂಬಂಧದ 60ಕ್ಕಿಂತಲೂ ಹೆಚ್ಚು ವರ್ಷಗಳ ಬಳಿಕ ಬರೆಯಲ್ಪಟ್ಟ ಎಸ್ತೇರಳು ಪುಸ್ತಕದಲ್ಲಿ ಜರತುಷ್ಟ್ರ ಮತದ ಒಂದು ಕುರುಹಾದರೂ ಇರುವುದಿಲ್ಲ. ಅದಲ್ಲದೆ, ಈ ಪಾರಸೀ ಧರ್ಮದ ಯಾವ ಪ್ರಭಾವವಾದರೂ ಪಾರಸೀ ಕಾಲಾವಧಿಯ (ಸಾ.ಶ.ಪೂ. 537-443) ಆರಂಭದ ಭಾಗದಲ್ಲಿ ಬರೆಯಲ್ಪಟ್ಟ ಬೈಬಲಿನ ಪುಸ್ತಕಗಳಾದ ಎಜ್ರ, ನೆಹೆಮೀಯ, ಅಥವಾ ಮಲಾಕಿಯ ಪುಸ್ತಕಗಳಲ್ಲಿ ಕಂಡುಬರುವುದಿಲ್ಲ.
ಆದರೂ, ಪರ್ಷಿಯನ್ ಕಾಲಾವಧಿಯ ಕೊನೆಯಲ್ಲಿ, ಅನೇಕ ಯೆಹೂದ್ಯರು ಪಾರಸೀಯರ ಅಹುರ ಮಸ್ದಾ ಎಂಬ ಮುಖ್ಯ ದೇವರ ಆರಾಧಕರ ಕೆಲವು ದೃಷ್ಟಿಕೋನಗಳನ್ನು ಸ್ವೀಕರಿಸಲು ತೊಡಗಿದರೆಂದು ವಿದ್ವಾಂಸರು ನಂಬುತ್ತಾರೆ. ಇದು ಜನಪ್ರಿಯ ಅಂಧಶ್ರದ್ಧೆಗಳಲ್ಲಿ ಮತ್ತು ಇಸ್ಸೀನರ ನಂಬಿಕೆಗಳಲ್ಲಿ ತೋರಿಬರುತ್ತದೆ. ಕುನ್ನಿ ನರಿಗಳು, ಇತರ ಬಂಜರು ಜೀವಿಗಳು, ಮತ್ತು ಕೆಲವು ಇರುಳ ಪಕ್ಷಿಗಳಿಗಾಗಿದ್ದ ಸಾಮಾನ್ಯ ಹೀಬ್ರು ಪದಗಳು ಯೆಹೂದಿ ಮನಗಳಲ್ಲಿ ಬಬಿಲೋನ್ಯ ಮತ್ತು ಪಾರಸೀಯ ಐತಿಹ್ಯದ ದುಷ್ಟ ಆತ್ಮಗಳ ಮತ್ತು ಇರುಳ ಪೆಡಂಭೂತಗಳೊಂದಿಗೆ ಜೊತೆಗೂಡಿಸಲ್ಪಟ್ಟವು.
ಯೆಹೂದ್ಯರು ವಿಧರ್ಮಿ ವಿಚಾರಗಳನ್ನು ಒಂದು ಭಿನ್ನ ಬೆಳಕಿನಲ್ಲಿ ನೋಡತೊಡಗಿದರು. ಸ್ವರ್ಗ, ನರಕ, ಆತ್ಮ, ವಾಕ್ಯ (ಲೋಗೋಸ್) ಮತ್ತು ವಿವೇಕ ಇವೆಲ್ಲವು ಹೊಸ ಅರ್ಥಗಳನ್ನು ಗಳಿಸಿದವು. ಮತ್ತು ಆಗ ಕಲಿಸಲ್ಪಟ್ಟ ಪ್ರಕಾರ, ಮನುಷ್ಯರೊಂದಿಗೆ ಸಂಪರ್ಕ ಮಾಡದಷ್ಟು ದೂರ ದೇವರು ಹೋಗಿದ್ದುದಾದರೆ, ಅವನಿಗೆ ಮಧ್ಯಸ್ಥಗಾರರ ಅಗತ್ಯವಿದೆ. ಈ ಮಧ್ಯಸ್ಥಿಕೆ ಮಾಡುವ ಮತ್ತು ರಕ್ಷಕ ಆತ್ಮಗಳನ್ನು ಗ್ರೀಕರು ಡೈಮೊನೀಸ್ ಎಂದು ಕರೆದರು. ಈ ಡೈಮೊನೀಸ್ (ದೆವ್ವಗಳು) ಒಳ್ಳೆಯವು ಅಥವಾ ಕೆಟ್ಟವು ಆಗಿರಬಲ್ಲವು ಎಂಬ ವಿಚಾರವನ್ನು ಸ್ವೀಕರಿಸಿದುದರಿಂದ, ಯೆಹೂದ್ಯರು ಪೈಶಾಚಿಕ ಪ್ರಭಾವಕ್ಕೆ ಸುಲಭವಾಗಿ ಈಡಾದರು.
ಸ್ಥಳಿಕ ಆರಾಧನೆಯಲ್ಲಿ ಒಂದು ರಚನಾತ್ಮಕ ಬದಲಾವಣೆಯು ಒಳಗೂಡಿತು. ಎಲ್ಲಿ ನೆರೆಹೊರೆಯ ಯೆಹೂದ್ಯರು ಧಾರ್ಮಿಕ ಶಿಕ್ಷಣ ಮತ್ತು ಆರಾಧನೆಗಾಗಿ ಕೂಡಿ ಬಂದರೋ ಆ ಸ್ಥಳಗಳು ಸಭಾಮಂದಿರ (ಸಿನಗಾಗ್)ಗಳಾಗಿ ಎದ್ದುಬಂದವು. ಸರಿಯಾಗಿ ಯಾವಾಗ, ಎಲ್ಲಿ, ಮತ್ತು ಹೇಗೆ ಯೆಹೂದಿ ಸಭಾಮಂದಿರಗಳು ಆರಂಭಗೊಂಡವೆಂದು ತಿಳಿದಿರುವುದಿಲ್ಲ. ದೂರ ದೇಶಗಳ ಯೆಹೂದ್ಯರಿಗೆ ದೇವಾಲಯಕ್ಕೆ ಹೋಗಲು ಸಾಧ್ಯವಿಲ್ಲದಿದ್ದಾಗ ಅವು ಅವರ ಆರಾಧನಾ ಅಗತ್ಯವನ್ನು ಪೂರೈಸಿದುದರಿಂದ, ಈ ಸಭಾಮಂದಿರಗಳು ಬಂದಿವಾಸದ ಅವಧಿಯಲ್ಲಿ ಅಥವಾ ಅನಂತರದ ಅವಧಿಯಲ್ಲಿ ಸ್ಥಾಪಿಸಲ್ಪಟ್ಟವೆಂದು ಸಾಮಾನ್ಯವಾಗಿ ನಂಬಲಾಗುತ್ತದೆ. ಗಮನಾರ್ಹವಾಗಿ, ಅವು ಯೇಸು ಮತ್ತು ಆತನ ಶಿಷ್ಯರಿಗೆ, ‘ಕತ್ತಲೆಯೊಳಗಿಂದ ಕರೆದು ತನ್ನ ಆಶ್ಚರ್ಯಕರವಾದ ಬೆಳಕಿನಲ್ಲಿ ಸೇರಿಸಿದಾತನ ಗುಣಾತಿಶಯಗಳನ್ನು ಪ್ರಚಾರ’ ಮಾಡುವುದಕ್ಕೆ ಉತ್ತಮವಾದ ಸಭಾಗೃಹಗಳಾಗಿ ಪರಿಣಮಿಸಿದವು.—1 ಪೇತ್ರ 2:9.
ಯೆಹೂದಿ ಮತವು ಹಲವಾರು ವಿಚಾರಾಭಿಪ್ರಾಯಗಳನ್ನು ಸ್ವೀಕರಿಸಿತು
ಸಾ.ಶ.ಪೂ. ಎರಡನೆಯ ಶತಮಾನದಲ್ಲಿ, ವಿವಿಧ ವಿಚಾರಾಭಿಪ್ರಾಯಗಳು ಹೊರಬರಲಾರಂಭಿಸಿದವು. ಅವು ಪ್ರತ್ಯೇಕವಾದ ಧಾರ್ಮಿಕ ಸಂಸ್ಥೆಗಳಾಗಿರಲಿಲ್ಲ. ಬದಲಿಗೆ, ಜನರನ್ನು ಪ್ರಭಾವಿಸಲು ಮತ್ತು ಜನಾಂಗವನ್ನು ನಿಯಂತ್ರಣದಲ್ಲಿಡಲು ಪ್ರಯತ್ನಿಸಿದ ಯೆಹೂದಿ ವೈದಿಕರ, ತತ್ವಜ್ಞಾನಿಗಳ, ಮತ್ತು ರಾಜಕೀಯ ಕಾರ್ಯಕರ್ತರ ಚಿಕ್ಕ ಚಿಕ್ಕ ಸಂಘಗಳಾಗಿದ್ದು, ಎಲ್ಲವು ಯೆಹೂದಿ ಮತದ ಆಶ್ರಯದ ಕೆಳಗಿದ್ದವು.
ರಾಜನೀತಿಜ್ಞರಾಗಿ ವರ್ತಿಸಿದ ಸದ್ದುಕಾಯರು, ಸಾ.ಶ.ಪೂ. ಎರಡನೆಯ ಶತಕದ ಮಧ್ಯದಲ್ಲಿ ಹ್ಯಾಸ್ಮೋನೀಯನ್ ಬಂಡಾಯವಾದಂದಿನಿಂದ ತಮ್ಮ ರಾಯಭಾರ ನಿರ್ವಹಣೆಯ ಚಾಕಚಕ್ಯತೆಗೆ ಖ್ಯಾತರಾದ, ಮುಖ್ಯವಾಗಿ ಕುಲೀನ ವರ್ಗದ ಶ್ರೀಮಂತರಾಗಿದ್ದರು. ಅವರಲ್ಲಿ ಅನೇಕರು ವ್ಯಾಪಾರಸ್ಥರೂ ಜಮೀನ್ದಾರರೂ ಆಗಿದ್ದರೂ ಹೆಚ್ಚಿನವರು ಯಾಜಕರಾಗಿದ್ದರು. ಯೇಸುವಿನ ಜನನವಾಗುವುದರೊಳಗೆ, ಹೆಚ್ಚಿನ ಸದ್ದುಕಾಯರು ಪಲೆಸ್ತೀನದಲ್ಲಿ ರೋಮನ್ ಆಳಿಕೆಯನ್ನು ಇಷ್ಟಪಟ್ಟಿದ್ದರು ಯಾಕೆಂದರೆ ಅದು ಹೆಚ್ಚು ಸ್ಥಿರವಾಗಿಯೂ ಪರಿಸ್ಥಿತಿಯನ್ನು ಯಥಾಸ್ಥಿತಿಯಲ್ಲಿಡಲು ಹೆಚ್ಚು ಸಂಭಾವ್ಯವಾಗಿತ್ತೆಂದೂ ಅವರು ಯೋಚಿಸಿದರು. (ಹೋಲಿಸಿ ಯೋಹಾನ 11:47, 48.) ಹೆರೋದನ ಕುಟುಂಬದ ಆಳಿಕೆಯು, ರಾಷ್ಟ್ರೀಯ ಭಾವನೆಯನ್ನು ಹೆಚ್ಚು ಉತ್ತಮವಾಗಿ ಒಪ್ಪುವುದೆಂದು ಅಲ್ಪ ಸಂಖ್ಯಾತ (ಹೆರೋದ್ಯರು) ನಂಬಿದರು. ಹೇಗಾದರೂ ರಾಷ್ಟ್ರವು, ಯೆಹೂದಿ ಮತಭ್ರಾಂತರ ಕೈಯಲ್ಲಿರುವುದು ಅಥವಾ ಯಾಜಕರನ್ನು ಬಿಟ್ಟು ಬೇರೆ ಯಾರೂ ದೇವಾಲಯದ ಅಧಿಕಾರ ವಹಿಸುವುದು ಸದ್ದುಕಾಯರಿಗೆ ಬೇಡವಾಗಿತ್ತು. ಸದ್ದುಕಾಯರ ನಂಬಿಕೆಗಳು, ಮೋಶೆಯ ಬರಹಗಳ ಮೇಲೆ ಅವರ ಸ್ವಂತ ಅರ್ಥವಿವರಣೆಯಲ್ಲಿ ಮುಖ್ಯವಾಗಿ ಆಧಾರಿಸಿದ ಸಂಪ್ರದಾಯ ಪಾಲನೆಯಾಗಿತ್ತು, ಮತ್ತು ಪ್ರಬಲವಾದ ಫರಿಸಾಯರ ಪಂಥಕ್ಕೆ ಅವರ ವಿರೋಧವನ್ನು ಪ್ರತಿಬಿಂಬಿಸಿತು. (ಅ. ಕೃತ್ಯಗಳು 23:6-8) ಹೀಬ್ರು ಶಾಸ್ತ್ರದ ಪ್ರವಾದನೆಗಳನ್ನು ಬರಿಯ ಊಹಾಪೋಹಗಳೆಂದು ಸದ್ದುಕಾಯರು ತಿರಸ್ಕರಿಸಿಬಿಟ್ಟರು. ಬೈಬಲಿನ ಐತಿಹಾಸಿಕ, ಕಾವ್ಯರೂಪದ ಮತ್ತು ಗಾದೆರೂಪದ ಪುಸ್ತಕಗಳು ಪ್ರೇರಿತವಲ್ಲವೆಂದೂ ಅನಾವಶ್ಯಕವೆಂದೂ ಅವರು ಕಲಿಸಿದರು.
ಯೆಹೂದ್ಯ ವಿರೋಧಿ ಗ್ರೀಕ್ತತ್ವದ ತೀವ್ರ ಪ್ರತಿಕ್ರಿಯೆಯಾಗಿ ಫರಿಸಾಯರು ಗ್ರೀಕ್ ಕಾಲಾವಧಿಯಲ್ಲಿ ಉದ್ಭವಿಸಿದ್ದರು. ಆದರೆ ಯೇಸುವಿನ ದಿನಗಳೊಳಗೆ ಅವರು ಕಟ್ಟುನಿಟ್ಟಿನವರೂ, ಸಂಪ್ರದಾಯಬದ್ಧರೂ, ನಿಯಮಕ್ಕೆ ಅತಿ ಪ್ರಾಶಸ್ತ್ಯಕೊಡುವವರೂ, ಅಹಂಕಾರಿಗಳೂ, ಸ್ವನೀತಿಯುಳ್ಳ ಮತಾಂತರಿಗಳೂ ಶಿಕ್ಷಕರೂ ಆಗಿದ್ದು ಸಭಾಮಂದಿರದ ಶಿಕ್ಷಣದ ಮೂಲಕ ರಾಷ್ಟ್ರವನ್ನು ಅಂಕೆಯಲ್ಲಿಡಲು ಪ್ರಯತ್ನಿಸುವವರಾದರು. ಅವರು ಮುಖ್ಯವಾಗಿ ಮಧ್ಯಮ ವರ್ಗದ ಜನರಿಂದ ಬಂದವರಾಗಿದ್ದು, ಸಾಮಾನ್ಯ ಜನರನ್ನು ಧಿಕ್ಕರಿಸಿದರು. ಯೇಸು ಹೆಚ್ಚಿನ ಫರಿಸಾಯರನ್ನು ಸ್ವಾರ್ಥಪರರೂ, ಕಪಟತುಂಬಿದ ನಿರ್ದಯೆಯ ಧನಪ್ರೇಮಿಗಳೂ ಆಗಿ ವೀಕ್ಷಿಸಿದನು. (ಮತ್ತಾಯ, 23ನೆಯ ಅಧ್ಯಾಯ) ಅವರು ಇಡೀ ಹೀಬ್ರು ಶಾಸ್ತ್ರಗಳನ್ನು ತಮ್ಮ ಸ್ವಂತ ಅರ್ಥವಿವರಣೆಯ ಬೆಳಕಿನಲ್ಲಿ ಸ್ವೀಕರಿಸಿದರಾದರೂ, ತಮ್ಮ ಮೌಖಿಕ ಸಂಪ್ರದಾಯಗಳಿಗೆ ತತ್ಸಮಾನದ ಮಹತ್ವವನ್ನು ಅಥವಾ ಹೆಚ್ಚು ಮಹತ್ವವನ್ನು ಜೋಡಿಸಿದರು. ತಮ್ಮ ಸಂಪ್ರದಾಯಗಳು “ಧರ್ಮಶಾಸ್ತ್ರದ ಸುತ್ತಲೂ ಒಂದು ಗೋಡೆಯಾಗಿ” ಇದ್ದವು ಎಂದರವರು. ಆದರೆ ಒಂದು ಗೋಡೆಯಾಗಿ ಇರುವ ಬದಲಿಗೆ, ಅವರ ಸಂಪ್ರದಾಯಗಳಾದರೋ ದೇವರ ವಾಕ್ಯವನ್ನು ನಿರರ್ಥಕಗೊಳಿಸಿ ಸಾರ್ವಜನಿಕರನ್ನು ಕಂಗೆಡಿಸಿದವು.—ಮತ್ತಾಯ 23:2-4; ಮಾರ್ಕ 7:1, 9-13.
ಇಸ್ಸೀನರು ಅತೀಂದ್ರಿಯ ವಾದಿಗಳಾಗಿದ್ದು ಕೆಲವು ಒಂಟಿಗ ಸಮಾಜಗಳಲ್ಲಿ ಜೀವಿಸಿದ್ದರೆಂಬುದು ವ್ಯಕ್ತ. ವಾಗ್ದತ್ತ ಮೆಸ್ಸೀಯನನ್ನು ಎದುರುಗೊಳ್ಳಲು ಶುದ್ಧತೆಯಿಂದ ಕಾಯುತ್ತಿರುವ ಇಸ್ರಾಯೇಲಿನ ನಿಜ ಉಳಿಕೆಯವರು ತಾವೇ ಎಂದವರು ಭಾವಿಸಿದರು. ಇಸ್ಸೀನರು ಧರ್ಮಭಕ್ತಿಯ ಧ್ಯಾನಪರ ವಿರಕ್ತ ಜೀವನವನ್ನು ನಡಸಿದರು ಮತ್ತು ಅವರ ನಂಬಿಕೆಗಳಲ್ಲಿ ಅನೇಕ ನಂಬಿಕೆಗಳು ಪಾರಸೀ ಮತ್ತು ಗ್ರೀಕ್ ಕಲ್ಪನೆಗಳನ್ನು ಪ್ರತಿಬಿಂಬಿಸಿದವು.
ಧಾರ್ಮಿಕವಾಗಿ ಪ್ರೇರೇಪಿಸಲ್ಪಟ್ಟ, ಮತಾಂಧ ಶ್ರದ್ಧೆಯ ಹಠೋತ್ಸಾಹಿಗಳ ಹಲವಾರು ವೈವಿಧ್ಯಗಳು, ಸ್ವತಂತ್ರ ಯೆಹೂದ್ಯ ಜನಾಂಗದಲ್ಲಿ ಹಸ್ತಕ್ಷೇಪಮಾಡಿದ ಪ್ರತಿಯೊಬ್ಬನನ್ನು ಹತ್ಯಾರ್ಹರಾದ ಶತ್ರುಗಳಾಗಿ ವೀಕ್ಷಿಸಿದವು. ಅವರನ್ನು ಹ್ಯಾಸ್ಮೋನೀಯನ್ರಿಗೆ ಹೋಲಿಸಲಾಗಿತ್ತು ಮತ್ತು ಸಾಹಸಿಗರಾದ ಆದರ್ಶವಾದಿ ಯುವ ಜನರಿಗೆ ಅವರು ಮುಖ್ಯವಾಗಿ ಹಿಡಿಸಿದರು. ಡಕಾಯಿತ ಕೊಲೆಗಾರರು ಅಥವಾ ಪ್ರತಿಭಟನಾ ಕಾದಾಳುಗಳಾಗಿ ಇತರರಿಂದ ಅರ್ಥೈಸಲ್ಪಟ್ಟ ಅವರು ಗೆರಿಲ ಯುದ್ಧತಂತ್ರಗಳನ್ನು ಹೂಡಿ, ದೇಶದ ಹೆದ್ದಾರಿಗಳನ್ನು ಮತ್ತು ಸಾರ್ವಜನಿಕ ಚೌಕಗಳನ್ನು ಅಪಾಯಕರವಾಗಿ ಮಾಡಿ ಆ ದಿನದ ಒತ್ತಡಗಳಿಗೆ ಇನ್ನಷ್ಟನ್ನು ಕೂಡಿಸಿದರು.
ಐಗುಪ್ತದಲ್ಲಿ, ಅಲೆಕ್ಸಾಂಡ್ರಿಯನ್ ಯೆಹೂದ್ಯರಲ್ಲಿ ಗ್ರೀಕ್ ತತ್ವಜ್ಞಾನವು ಸಮೃದ್ಧಗೊಂಡಿತು. ಅಲ್ಲಿಂದ ಅದು ಪಲೆಸ್ತೀನಕ್ಕೆ ಮತ್ತು ಯೆಹೂದ್ಯರು ವಿಸ್ತಾರವಾಗಿ ಚದರಿದ್ದ ನೆಲಸುನಾಡುಗಳಿಗೆ ಹಬ್ಬಿತು. ಅಪಾಕ್ರಿಪ ಮತ್ತು ಸ್ಯೂಡೆಪಿಗ್ರಾಫ ಇವನ್ನು ಬರೆದ ಯೆಹೂದಿ ತಾತ್ವಿಕರು ಮೋಶೆಯ ಬರಹಗಳನ್ನು ಅಸ್ಪಷ್ಟವೂ ನೀರಸವೂ ಆದ ರೂಪಕಕಥೆಗಳಾಗಿ ಅರ್ಥವಿವರಿಸಿದರು.
ರೋಮನ್ ಯುಗವು ಆಗಮಿಸುವುದರೊಳಗೆ, ಗ್ರೀಕ್ ಸಂಸ್ಕೃತಿಯು ಪಲೆಸ್ತೀನವನ್ನು ಸಾಮಾಜಿಕವಾಗಿ, ರಾಜಕೀಯವಾಗಿ, ಮತ್ತು ತಾತ್ವಿಕವಾಗಿ ಶಾಶ್ವತವಾಗಿ ಬದಲಾಯಿಸಿತ್ತು. ಒಂದು ನಿರ್ದಿಷ್ಟ ಮೊತ್ತದ ಶಾಸ್ತ್ರೀಯ ಸತ್ಯದ ಸುತ್ತಲೂ ಹೆಣೆಯಲ್ಪಟ್ಟ ಬಬಿಲೋನು, ಪಾರಸೀಯ, ಮತ್ತು ಗ್ರೀಕ್ ಕಲ್ಪನೆಗಳ ಮಿಶ್ರಣವಾದ ಯೆಹೂದಿ ಮತದಿಂದ, ಯೆಹೂದ್ಯರ ಬೈಬಲಿನ ಧರ್ಮವು ಸ್ಥಾನಪಲ್ಲಟವಾಗಿತ್ತು. ಆದರೂ ಒಟ್ಟಿನಲ್ಲಿ, ಸದ್ದುಕಾಯರು, ಪರಿಸಾಯರು, ಮತ್ತು ಇಸ್ಸೀನರ ಸಂಯೋಜನೆಯು ರಾಷ್ಟ್ರದ 7 ಪ್ರತಿಶತಕ್ಕಿಂತಲೂ ಕಡಿಮೆಯಾಗಿತ್ತು. ಈ ಸಂಘರ್ಷಕ ಶಕ್ತಿಗಳ ಸುಳಿಯಲ್ಲಿ ಸಿಕ್ಕಿಬಿದ್ದವರು “ಕುರುಬನಿಲ್ಲದ ಕುರಿಗಳ ಹಾಗೆ ತೊಳಲಿ ಬಳಲಿ” ಹೋಗಿದ್ದ ಯೆಹೂದಿ ಜನರ ಸಮುದಾಯಗಳಾಗಿದ್ದವು.—ಮತ್ತಾಯ 9:36.
ಆ ಕಗ್ಗತ್ತಲೆಯ ಜಗತ್ತಿನೊಳಗೆ ಕಾಲಿಟ್ಟನು ಯೇಸು ಕ್ರಿಸ್ತನು. ಪುನರ್ಆಶ್ವಾಸನೆಯ ಆತನ ಈ ಆಮಂತ್ರಣವು ಸಾಂತ್ವನದಾಯಕವಾಗಿತ್ತು: “ಎಲೈ ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿಕೊಡುವೆನು.” (ಮತ್ತಾಯ 11:28) “ನಾನೇ ಲೋಕಕ್ಕೆ ಬೆಳಕು” ಎಂದು ಅವನು ಹೇಳುವುದನ್ನು ಕೇಳುವುದು ಎಷ್ಟು ರೋಮಾಂಚಕವಾಗಿದೆ! (ಯೋಹಾನ 8:12) ಮತ್ತು ಹೃದಯವನ್ನು ಹರ್ಷಗೊಳಿಸುವ ಆತನ ವಾಗ್ದಾನವು ನಿಶ್ಚಯವಾಗಿಯೂ ಉಲ್ಲಾಸಕರವಾಗಿತ್ತು: “ನನ್ನನ್ನು ಅನುಸರಿಸುವವನು ಕತ್ತಲೆಯಲ್ಲಿ ನಡೆಯದೆ ಜೀವಕೊಡುವ ಬೆಳಕನ್ನು ಹೊಂದಿದವನಾಗಿರುವನು.”—ಯೋಹಾನ 8:12.
[ಪುಟ 26 ರಲ್ಲಿರುವ ಚಿತ್ರ]
ಯೆಹೂದಿ ಧಾರ್ಮಿಕ ಮುಖಂಡರು ಆತ್ಮಿಕ ಕತ್ತಲೆಯಲ್ಲಿದ್ದರೆಂದು ಯೇಸು ತೋರಿಸಿದನು
[ಪುಟ 28 ರಲ್ಲಿರುವ ಚಿತ್ರ]
ಆ್ಯಂಟೈಯಕಸ್ IV (ಇಪಿಫೆನೀಸ್)ನ ಪ್ರತಿರೂಪವನ್ನು ಹೊತ್ತಿರುವ ನಾಣ್ಯ
[ಕೃಪೆ]
Pictorial Archive (Near Eastern History) Est.