ಮಕಬೀಯರು ಯಾರು?
ಮಕಬೀಯರು ಜೀವಿಸುತ್ತಿದ್ದ ಅವಧಿಯು, ಅನೇಕರಿಗೆ ಹೀಬ್ರು ಶಾಸ್ತ್ರಗಳು ಪೂರ್ಣಗೊಂಡ ಮತ್ತು ಯೇಸು ಕ್ರಿಸ್ತನ ಆಗಮನಕ್ಕೆ ಮುಂಚಿನ ನಡುವಣ ಕಾಲದಲ್ಲಿ ಮರೆಯಲ್ಲಿದ್ದ ಕಪ್ಪುಪೆಟ್ಟಿಗೆಯಂತಿದೆ. ವಿಮಾನ ದುರ್ಘಟನೆಗಳ ಬಳಿಕ, ನಿರ್ದಿಷ್ಟ ವಿವರಗಳನ್ನು ತಿಳಿದುಕೊಳ್ಳಲು ವಿಮಾನದ ಕಪ್ಪುಪೆಟ್ಟಿಗೆಯನ್ನು ಪರಿಶೀಲಿಸಲಾಗುತ್ತದೆ. ಇದೇ ರೀತಿಯಲ್ಲಿ, ಈ ಮಕಬೀ ಅವಧಿಯನ್ನು ಪರಿಶೀಲಿಸುವ ಮೂಲಕ ನಾವು ಸ್ವಲ್ಪ ವಿಷಯವನ್ನು ಕಲಿತುಕೊಳ್ಳಬಲ್ಲೆವು. ಅದು ಯೆಹೂದಿ ಜನಾಂಗಕ್ಕೆ ಪರಿವರ್ತನೆ ಮತ್ತು ಬದಲಾವಣೆಯ ಸಮಯವಾಗಿತ್ತು.
ಈ ಮಕಬೀಯರು ಯಾರು? ಮುಂತಿಳಿಸಲ್ಪಟ್ಟ ಮೆಸ್ಸೀಯನು ಬರುವ ಮುಂಚೆ ಅವರು ಯೆಹೂದಿ ಮತವನ್ನು ಹೇಗೆ ಪ್ರಭಾವಿಸಿದರು?—ದಾನಿಯೇಲ 9:25, 26.
ಗ್ರೀಕ್ ಸಂಸ್ಕೃತಿಯ ಬಲವಾದ ಪ್ರಭಾವ
ಮಹಾ ಅಲೆಕ್ಸಾಂಡರನು, ಗ್ರೀಸ್‌ನಿಂದ ಹಿಡಿದು ಭಾರತದ (ಸಾ.ಶ.ಪೂ. 336-323) ವರೆಗಿನ ಪ್ರದೇಶಗಳನ್ನು ವಶಪಡಿಸಿಕೊಂಡನು. ಅವನ ಈ ವಿಶಾಲವಾದ ಸಾಮ್ರಾಜ್ಯವು, ಗ್ರೀಕ್ ಭಾಷೆ ಮತ್ತು ಸಂಸ್ಕೃತಿಯ ಹಬ್ಬುವಿಕೆಗೆ ತುಂಬ ಸಹಾಯಮಾಡಿತು. ಅಲೆಕ್ಸಾಂಡರನ ಅಧಿಕಾರಿಗಳು ಮತ್ತು ಸೈನಿಕರು, ಸ್ಥಳೀಯ ಸ್ತ್ರೀಯರನ್ನು ವಿವಾಹವಾಗುತ್ತಾ, ಗ್ರೀಕ್ ಮತ್ತು ವಿದೇಶಿ ಸಂಸ್ಕೃತಿಗಳ ಸಮ್ಮಿಳನಕ್ಕೆ ಕಾರಣರಾದರು. ಅಲೆಕ್ಸಾಂಡರನ ಮರಣದ ನಂತರ, ಅವನ ಸಾಮ್ರಾಜ್ಯವು ಅವನ ಸೇನಾಧಿಪತಿಗಳ ಪಾಲಾಯಿತು. ಸಾ.ಶ.ಪೂ. ಎರಡನೆಯ ಶತಮಾನದ ಆರಂಭದಲ್ಲಿ, ಸಿರಿಯದ ಗ್ರೀಕ್ ಸೆಲ್ಯೂಸಿಡ್ ರಾಜವಂಶದವನಾದ IIIನೆಯ ಆಂಟಿಯಕಸ್, ಐಗುಪ್ತದ ಗ್ರೀಕ್ ಟಾಲೆಮಿಗಳ ವಶದಿಂದ ಇಸ್ರಾಯೇಲನ್ನು ಕಸಿದುಕೊಂಡನು. ಇಸ್ರಾಯೇಲಿನಲ್ಲಿದ್ದ ಯೆಹೂದ್ಯರು, ಗ್ರೀಕರ ಆಳ್ವಿಕೆಯಿಂದ ಹೇಗೆ ಬಾಧಿಸಲ್ಪಟ್ಟರು?
ಒಬ್ಬ ಇತಿಹಾಸಕಾರನು ಬರೆದುದು: “ಯೆಹೂದ್ಯರು ತಮ್ಮ ಗ್ರೀಕ್ ನೆರೆಹೊರೆಯವರಿಂದ ದೂರವಿರುವುದು ಅಸಾಧ್ಯವಾಗಿತ್ತು ಮತ್ತು ಗ್ರೀಕ್ ಸಂಸ್ಕೃತಿಗೊಳಗಾಗಿದ್ದ ತಮ್ಮ ಯೆಹೂದಿ ಸಹೋದರರೊಂದಿಗಿನ ಸಂಪರ್ಕದಿಂದಲೂ ದೂರವಿರಲು ಸಾಧ್ಯವಿರಲಿಲ್ಲ. ಆದುದರಿಂದ, ಗ್ರೀಕ್ ಸಂಸ್ಕೃತಿ ಮತ್ತು ಆಲೋಚನೆಗಳಿಂದ ಪ್ರಭಾವಿತರಾಗದೆ ಇರುವುದು ಅಸಾಧ್ಯವಾಗಿತ್ತು. . . . ಆ ಸಮಯದಲ್ಲಿ ಉಸಿರಾಡುವ ಗಾಳಿಯಲ್ಲೂ ಗ್ರೀಕ್ ಸಂಸ್ಕೃತಿಯ ಪ್ರಭಾವವಿತ್ತು!” ಯೆಹೂದ್ಯರು ತಮ್ಮ ಹೆಸರುಗಳನ್ನು ಗ್ರೀಕ್ ಹೆಸರುಗಳಿಗೆ ಬದಲಾಯಿಸಿಕೊಂಡರು. ಸಾಕಷ್ಟು ಮಟ್ಟಿಗೆ ಅವರು ಗ್ರೀಕ್ ಪದ್ಧತಿ ಮತ್ತು ಉಡುಪನ್ನು ತಮ್ಮದಾಗಿಸಿಕೊಂಡರು. ಹೀಗೆ ಗ್ರೀಕ್ ಸಂಸ್ಕೃತಿಯೊಂದಿಗೆ ಬೆರೆತುಹೋಗುವ ಕುಟಿಲ ಪ್ರಭಾವವು ಹೆಚ್ಚಾಗುತ್ತಾ ಇತ್ತು.
ಯಾಜಕರು ಭ್ರಷ್ಟರಾದದ್ದು
ಯೆಹೂದ್ಯರಲ್ಲಿ ಗ್ರೀಕರ ಪ್ರಭಾವಕ್ಕೊಳಗಾದವರಲ್ಲಿ ಹೆಚ್ಚಿನವರು ಯಾಜಕರಾಗಿದ್ದರು. ಯೆಹೂದಿ ಮತವು ಕಾಲಕ್ಕನುಸಾರ ಹೊಂದಿಕೊಂಡುಹೋಗಲು ಗ್ರೀಕ್ ಸಂಸ್ಕೃತಿಯನ್ನು ಅಂಗೀಕರಿಸಬೇಕೆಂದು ಅವರಲ್ಲಿ ಅನೇಕರು ನೆನಸಿದರು. ಹಾಗೆ ನೆನಸಿದವರಲ್ಲಿ ಒಬ್ಬನು, ಯೆಹೂದಿ ಮಹಾ ಯಾಜಕನಾದ IIIನೆಯ ಓನಾಯಸನ ತಮ್ಮನಾದ ಜೇಸನ್ (ಹೀಬ್ರು ಭಾಷೆಯಲ್ಲಿ ಜೋಶುವ ಎಂದು ಕರೆಯಲ್ಪಟ್ಟನು) ಆಗಿದ್ದನು. ಓನಾಯಸನು ಅಂತಿಯೋಕ್ಯಕ್ಕೆ ಹೋಗಿದ್ದಾಗ, ಜೇಸನ್ ಗ್ರೀಕ್ ಅಧಿಕಾರಿಗಳಿಗೆ ಲಂಚಕೊಟ್ಟನು. ಏಕೆ? ಓನಾಯಸನ ಸ್ಥಾನದಲ್ಲಿ ತನ್ನನ್ನು ಮಹಾ ಯಾಜಕನಾಗಿ ನೇಮಿಸುವಂತೆ ಅವರನ್ನು ಪುಸಲಾಯಿಸಲಿಕ್ಕಾಗಿಯೇ. ಗ್ರೀಕ್ ಸೆಲ್ಯೂಸಿಡ್ ರಾಜನಾದ ಆಂಟಿಯಕಸ್ ಇಫಿಫೆನೀಸ್ (ಸಾ.ಶ.ಪೂ. 175-164) ಆ ಲಂಚವನ್ನು ಕೂಡಲೇ ಸ್ವೀಕರಿಸಿದನು. ಈ ಹಿಂದೆ, ಗ್ರೀಕ್ ಅರಸರು ಯೆಹೂದಿ ಮಹಾ ಯಾಜಕತ್ವದ ವಿಷಯದಲ್ಲಿ ಎಂದೂ ತಲೆಹಾಕಿರಲಿಲ್ಲ. ಆದರೆ ಆಂಟಿಯಕಸ್‌ಗೆ, ತನ್ನ ಮಿಲಿಟರಿ ಕಾರ್ಯಾಚರಣೆಗಳಿಗಾಗಿ ಹಣದ ಅಗತ್ಯವಿತ್ತು. ಗ್ರೀಕ್ ಸಂಸ್ಕೃತಿಯನ್ನು ಹೆಚ್ಚು ಸಕ್ರಿಯವಾಗಿ ಪ್ರವರ್ಧಿಸುವ ಒಬ್ಬ ಯೆಹೂದಿ ಮುಖಂಡನು ತನ್ನ ಜೊತೆ ಸೇರಿದ್ದರಿಂದಲೂ ಅವನು ತುಂಬ ಸಂತೋಷಪಟ್ಟನು. ಜೇಸನನ ವಿನಂತಿಯ ಮೇರೆಗೆ, ಆಂಟಿಯಕಸ್, ಯೆರೂಸಲೇಮಿಗೆ ಗ್ರೀಕ್ ನಗರ (ಪೊಲಿಸ್) ಎಂಬ ಸ್ಥಾನವನ್ನು ದಯಪಾಲಿಸಿದನು. ಮತ್ತು ಜೇಸನನು ಒಂದು ವ್ಯಾಯಾಮ ಶಾಲೆಯನ್ನು ಕಟ್ಟಿದನು. ಅಲ್ಲಿ, ಯುವ ಯೆಹೂದ್ಯರು ಮತ್ತು ಯಾಜಕರೂ ಆಟಗಳಲ್ಲಿ ಸ್ಪರ್ಧಿಸುತ್ತಿದ್ದರು.
ವಂಚನೆಯನ್ನು ವಂಚನೆಯೇ ಗೆದ್ದಿತು. ಏಕೆಂದರೆ ಮೂರು ವರ್ಷಗಳ ನಂತರ, ಬಹುಶಃ ಯಾಜಕ ವಂಶದವನಾಗಿರದ ಮೆನೆಲಾಸ್, ಇನ್ನೂ ದೊಡ್ಡ ಮೊತ್ತದ ಲಂಚವನ್ನು ನೀಡಿದನು. ಆದುದರಿಂದ ಜೇಸನ್ ಪಲಾಯನಗೈದನು. ಆಂಟಿಯಕಸ್‌ಗೆ ಹಣಕೊಡಲು, ಮೆನೆಲಾಸನು ದೇವಾಲಯದ ಬೊಕ್ಕಸದಿಂದ ತುಂಬ ಹಣವನ್ನು ಹೊರತೆಗೆದನು. (ಅಂತಿಯೋಕ್ಯದಲ್ಲಿ ದೇಶಭ್ರಷ್ಟನಾಗಿ ವಾಸಿಸುತ್ತಿದ್ದ) IIIನೆಯ ಓನಾಯಸ್ ಇದನ್ನು ಪ್ರತಿಭಟಿಸಿದಾಗ, ಅವನನ್ನು ಕೊಲ್ಲುವಂತೆ ಮೆನೆಲಾಸ್ ಏರ್ಪಾಡು ಮಾಡಿದನು.
ಆಂಟಿಯಕಸ್ ಸತ್ತುಹೋಗಿದ್ದಾನೆಂಬ ಗಾಳಿಮಾತು ಹಬ್ಬಿದಾಗ, ಮೆನೆಲಾಸ್‌ನಿಂದ ಮಹಾ ಯಾಜಕತ್ವವನ್ನು ಕಸಿದುಕೊಳ್ಳಲಿಕ್ಕಾಗಿ ಜೇಸನನು ಒಂದು ಸಾವಿರ ಪುರುಷರೊಂದಿಗೆ ಯೆರೂಸಲೇಮ್‌ಗೆ ಹಿಂದಿರುಗಿ ಬಂದನು. ಆದರೆ ಆಂಟಿಯಕಸ್ ಸತ್ತಿರಲಿಲ್ಲ. ಜೇಸನನ ಕೆಲಸ ಮತ್ತು ತನ್ನ ಗ್ರೀಕ್ ಸಂಸ್ಕೃತಿಯ ಕಾರ್ಯನೀತಿಗಳ ವಿರುದ್ಧ ಯೆಹೂದ್ಯರೊಳಗಿನ ಗಲಭೆಯ ಕುರಿತು ಕೇಳಿಸಿಕೊಂಡಾಗ, ಆಂಟಿಯಕಸ್ ವಿಪರೀತವಾಗಿ ಪ್ರತಿಕ್ರಿಯಿಸಿದನು.
ಆಂಟಿಯಕಸ್ ಕ್ರಿಯೆಗೈಯುತ್ತಾನೆ
ದ ಮಕಬೀಸ್ ಎಂಬ ತಮ್ಮ ಪುಸ್ತಕದಲ್ಲಿ, ಮೋಶೆ ಪರ್ಲ್‌ಮ್ಯಾನ್ ಬರೆದುದು: “ದಾಖಲೆಗಳು ಅಸ್ಪಷ್ಟವಾಗಿರುವುದಾದರೂ, ಯೆಹೂದ್ಯರಿಗೆ ಧಾರ್ಮಿಕ ಸ್ವಾತಂತ್ರ್ಯವನ್ನು ಕೊಟ್ಟಿದ್ದರಿಂದ ಒಂದು ರಾಜಕೀಯ ತಪ್ಪನ್ನು ಮಾಡಲಾಯಿತೆಂಬ ತೀರ್ಮಾನಕ್ಕೆ ಆಂಟಿಯಕಸ್ ಬಂದನೆಂದು ತೋರುತ್ತದೆ. ಅವನಿಗನುಸಾರ, ಯೆರೂಸಲೇಮಿನಲ್ಲಿನ ಇತ್ತೀಚಿನ ದಂಗೆಯು ಆರಂಭವಾದದ್ದು, ಕೇವಲ ಧಾರ್ಮಿಕ ಉದ್ದೇಶಗಳಿಂದ ಅಲ್ಲ ಬದಲಾಗಿ ಯೂದಾಯದವರು ಐಗುಪ್ತದ ಆಳ್ವಿಕೆಯನ್ನು ಇಷ್ಟಪಟ್ಟಿದ್ದರಿಂದಲೇ. ಮತ್ತು ಈ ರಾಜಕೀಯ ಅಭಿಪ್ರಾಯಗಳು ಅಪಾಯಕರವಾಗಿರುವಂತೆ ವೀಕ್ಷಿಸಲಾಯಿತು. ಯಾಕಂದರೆ ತನ್ನ ಎಲ್ಲ ಪ್ರಜೆಗಳಲ್ಲಿ ಕೇವಲ ಯೆಹೂದ್ಯರು ಧಾರ್ಮಿಕ ಪ್ರತ್ಯೇಕತೆಗಾಗಿ ಕೇಳಿಕೊಂಡಿದ್ದರು ಮತ್ತು ಅವರಿಗೆ ಅದನ್ನು ಧಾರಾಳವಾಗಿ ಅನುಮತಿಸಲಾಗಿತ್ತು. . . . ಇದನ್ನು ನಿಲ್ಲಿಸಬೇಕೆಂದು ಅವನು ನಿರ್ಣಯಿಸಿದನು.”
ಮುಂದೇನಾಯಿತು ಎಂಬುದನ್ನು ಇಸ್ರೇಲಿ ರಾಜನೀತಿಜ್ಞ ಮತ್ತು ವಿದ್ವಾಂಸ, ಅಬ್ಬ ಇಬಾನ್ ಸಾರಾಂಶಿಸುತ್ತಾನೆ: “[ಸಾ.ಶ.ಪೂ.] 168 ಮತ್ತು 167ರ ವರ್ಷಗಳಲ್ಲಿ ನಡೆದ ಘಟನೆಗಳ ಸರಮಾಲೆಯಲ್ಲಿ, ಯೆಹೂದ್ಯರನ್ನು ಹತಿಸಲಾಯಿತು, ದೇವಾಲಯವನ್ನು ಲೂಟಿಮಾಡಲಾಯಿತು, ಯೆಹೂದಿ ಧರ್ಮವನ್ನು ನಿಷೇಧಿಸಲಾಯಿತು. ಸುನ್ನತಿ ಮಾಡಿಸಿಕೊಳ್ಳುವಲ್ಲಿ ಮತ್ತು ಸಬ್ಬತ್ತನ್ನು ಆಚರಿಸುವಲ್ಲಿ ಮರಣ ಶಿಕ್ಷೆಯನ್ನು ವಿಧಿಸಲಾಗುತ್ತಿತ್ತು. ಕೊನೆಯ ಅಪಮಾನವು, ಡಿಸೆಂಬರ್ 167ರಲ್ಲಿ ನಡೆಯಿತು. ಆಂಟಿಯಕಸ್‌ನ ಅಪ್ಪಣೆಗನುಸಾರ, ದೇವಾಲಯದೊಳಗೇ ಸೀಯಸ್ ದೇವತೆಗೆ ಒಂದು ವೇದಿಯನ್ನು ಕಟ್ಟಲಾಯಿತು. ಮತ್ತು ಯೆಹೂದಿ ನಿಯಮಕ್ಕನುಸಾರ ಅಶುದ್ಧವಾಗಿದ್ದ ಹಂದಿ ಮಾಂಸವನ್ನು ಯೆಹೂದ್ಯರು ಗ್ರೀಕರ ದೇವತೆಗೆ ಬಲಿಯಾಗಿ ಅರ್ಪಿಸುವಂತೆ ಕೇಳಿಕೊಳ್ಳಲಾಯಿತು.” ಈ ಸಮಯದಲ್ಲಿ, ಮೆನೆಲಾಸ್ ಮತ್ತು ಗ್ರೀಕ್ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾದ ಇತರ ಯೆಹೂದ್ಯರು ತಮ್ಮ ಸ್ಥಾನಗಳನ್ನು ಬಿಟ್ಟುಕೊಡದೆ, ಹೊಲೆಗೊಳಿಸಲ್ಪಟ್ಟಿದ್ದ ಒಂದು ದೇವಾಲಯದಲ್ಲಿ ಪುರೋಹಿತ ಕಾರ್ಯನಡೆಸಿದರು.
ಅನೇಕ ಯೆಹೂದ್ಯರು ಗ್ರೀಕ್ ಸಂಸ್ಕೃತಿಯನ್ನು ಸ್ವೀಕರಿಸಿದರೂ, ಹಾಸಿಡಿಮ್—ಧರ್ಮಶ್ರದ್ಧೆಯುಳ್ಳವರು—ಎಂದು ಕರೆಯಲ್ಪಡುತ್ತಿದ್ದ ಒಂದು ಹೊಸ ಗುಂಪು, ಮೋಶೆಯ ಧರ್ಮಶಾಸ್ತ್ರಕ್ಕೆ ಹೆಚ್ಚು ಕಟ್ಟುನಿಟ್ಟಿನ ವಿಧೇಯತೆಯನ್ನು ಉತ್ತೇಜಿಸುತ್ತಿದ್ದರು. ಗ್ರೀಕ್ ಸಂಸ್ಕೃತಿಯ ಪ್ರಭಾವಕ್ಕೊಳಗಾದ ಯಾಜಕರಿಂದ ಬೇಸತ್ತುಹೋಗಿದ್ದ ಸಾಮಾನ್ಯ ಜನರು, ಈಗ ಅಧಿಕ ಸಂಖ್ಯೆಯಲ್ಲಿ ಹಾಸಿಡಿಮ್‌ರ ಪಕ್ಷವಹಿಸಿದರು. ದೇಶದಾದ್ಯಂತ ಯೆಹೂದ್ಯರು, ವಿಧರ್ಮಿ ಪದ್ಧತಿಗಳನ್ನು ಮತ್ತು ಯಜ್ಞಗಳನ್ನು ಅನುಸರಿಸಬೇಕು ಇಲ್ಲವೆ ಸಾಯಬೇಕು ಎಂದು ಬಲಾತ್ಕರಿಸಲ್ಪಟ್ಟಾಗ, ಹುತಾತ್ಮವಾದದ ಒಂದು ಅವಧಿಯು ಆರಂಭವಾಯಿತು. ಮಕಬೀಯರ ಸಂದೇಹಾಸ್ಪದ ಪುಸ್ತಕಗಳು, ರಾಜಿಮಾಡಿಕೊಳ್ಳುವುದರ ಬದಲು ಸಾಯಲು ಇಷ್ಟಪಟ್ಟ ಸ್ತ್ರೀಪುರುಷರು ಮತ್ತು ಮಕ್ಕಳ ಕುರಿತಾದ ಅನೇಕ ವೃತ್ತಾಂತಗಳನ್ನು ನೀಡುತ್ತವೆ.
ಮಕಬೀಯರು ಪ್ರತಿಕ್ರಿಯಿಸುತ್ತಾರೆ
ಆಂಟಿಯಕಸ್ ಕೈಗೊಂಡ ತೀವ್ರ ಕ್ರಮಗಳು, ಅನೇಕ ಯೆಹೂದ್ಯರು ತಮ್ಮ ಧರ್ಮಕ್ಕಾಗಿ ಹೋರಾಡುವಂತೆ ಪ್ರಚೋದಿಸಿದವು. ಲಾಡ್ ಎಂಬ ಆಧುನಿಕ ನಗರದ ಹತ್ತಿರದಲ್ಲಿ, ಮಾಡಿನ್ ಎಂಬ ಪಟ್ಟಣವಿದೆ. ಇದು ಯೆರೂಸಲೇಮಿನ ವಾಯವ್ಯ ದಿಕ್ಕಿನಲ್ಲಿದೆ. ಈ ಪಟ್ಟಣದ ಪೇಟೆಗೆ ಮತ್ತತ್ತಾಯಸ್ ಎಂಬ ಯಾಜಕನನ್ನು ಕರೆಸಲಾಯಿತು. ಮತ್ತತ್ತಾಯಸ್‌ನನ್ನು ಸ್ಥಳಿಕ ಜನರು ಗೌರವಿಸುತ್ತಿದ್ದರು. ಆದುದರಿಂದ, ಅವನು ತನ್ನ ಸ್ವಂತ ಜೀವವನ್ನು ಉಳಿಸಿಕೊಂಡು, ಬೇರೆಲ್ಲ ಜನರಿಗೆ ಒಂದು ಮಾದರಿಯನ್ನು ಇಡಲಿಕ್ಕಾಗಿ, ವಿಧರ್ಮಿ ಬಲಿಪೂಜೆಯಲ್ಲಿ ಭಾಗವಹಿಸುವಂತೆ ಜನರನ್ನು ಒಪ್ಪಿಸಲು ರಾಜನ ಪ್ರತಿನಿಧಿಯು ಪ್ರಯತ್ನಿಸಿದನು. ಮತ್ತತ್ತಾಯಸ್ ನಿರಾಕರಿಸಿದಾಗ, ಇನ್ನೊಬ್ಬ ಯೆಹೂದಿಯು ರಾಜಿಮಾಡಿಕೊಳ್ಳಲು ಸಿದ್ಧನಾಗಿ ಮುಂದೆ ಬಂದನು. ಕೋಪದಿಂದ ಕೆರಳಿ, ಮತ್ತತ್ತಾಯಸ್ ಒಂದು ಆಯುಧವನ್ನು ಕಸಿದುಕೊಂಡು ಅವನನ್ನು ಕೊಂದುಹಾಕಿದನು. ಈ ವೃದ್ಧ ಪುರುಷನ ಹಿಂಸಾತ್ಮಕ ಪ್ರತಿಕ್ರಿಯೆಯಿಂದ ದಂಗುಬಡಿದವರಾಗಿ, ಗ್ರೀಕ್ ಸೈನಿಕರು ಪ್ರತಿಕ್ರಿಯಿಸಲು ಸ್ವಲ್ಪ ತಡಮಾಡಿದರು. ಕೆಲವೇ ಕ್ಷಣಗಳೊಳಗೆ, ಮತ್ತತ್ತಾಯಸ್ ಆ ಗ್ರೀಕ್ ಅಧಿಕಾರಿಯನ್ನೂ ಕೊಂದುಹಾಕಿದನು. ಆ ಗ್ರೀಕ್ ಸೈನಿಕರು ತಮ್ಮನ್ನು ರಕ್ಷಿಸಿಕೊಳ್ಳುವ ಮುಂಚೆಯೇ ಮತ್ತತ್ತಾಯಸನ ಐದು ಮಂದಿ ಪುತ್ರರು ಮತ್ತು ಪಟ್ಟಣದ ನಿವಾಸಿಗಳು, ಅವರನ್ನು ವಶಪಡಿಸಿಕೊಂಡರು.
‘ಧರ್ಮಶಾಸ್ತ್ರಕ್ಕಾಗಿ ಹುರುಪುಳ್ಳವರೆಲ್ಲರೂ ನನ್ನನ್ನು ಹಿಂಬಾಲಿಸಲಿ’ ಎಂದು ಮತ್ತತ್ತಾಯಸ್ ಕೂಗಿಹೇಳಿದನು. ಗ್ರೀಕರ ಪ್ರತೀಕಾರದಿಂದ ತಪ್ಪಿಸಿಕೊಳ್ಳಲಿಕ್ಕಾಗಿ, ಅವನು ಮತ್ತು ಅವನ ಪುತ್ರರು ಬೆಟ್ಟಗಳಿಗೆ ಓಡಿಹೋದರು. ಅವರ ಕೃತ್ಯಗಳ ಕುರಿತಾದ ಸುದ್ದಿಯು ಹರಡಿದಾಗ, (ಅನೇಕ ಹಾಸಿಡಿಮರನ್ನು ಸೇರಿಸಿ) ಯೆಹೂದ್ಯರು ಅವರೊಂದಿಗೆ ಜೊತೆಗೂಡಿದರು.
ಮಿಲಿಟರಿ ಕಾರ್ಯಾಚರಣೆಗಳನ್ನು ನೋಡಿಕೊಳ್ಳಲು ಮತ್ತತ್ತಾಯಸ್ ತನ್ನ ಮಗನಾದ ಯೆಹೂದನನ್ನು ನೇಮಿಸಿದನು. ಪ್ರಾಯಶಃ ಯೆಹೂದನಿಗಿದ್ದ ಮಿಲಿಟರಿ ಶೌರ್ಯದಿಂದಾಗಿ ಅವನನ್ನು ಮಕಬೀ—ಅಂದರೆ “ಸುತ್ತಿಗೆ”—ಎಂದು ಕರೆಯಲಾಯಿತು. ಮತ್ತತ್ತಾಯಸ್ ಮತ್ತು ಅವನ ಪುತ್ರರನ್ನು, ಹಾಸ್‌ಮೊನಿಯನ್ಸ್ ಎಂದು ಕರೆಯಲಾಯಿತು. ಆ ಹೆಸರು, ಹೆಷ್ಮೋನ್ ಎಂಬ ಪಟ್ಟಣದಿಂದ ಅಥವಾ ಆ ಹೆಸರಿನ ಒಬ್ಬ ಪೂರ್ವಜನಿಂದ ಬಂತು. (ಯೆಹೋಶುವ 15:27) ಯೆಹೂದ ಮಕಬೀ, ದಂಗೆಯ ಸಮಯದಲ್ಲಿ ಒಬ್ಬ ಪ್ರಮುಖ ವ್ಯಕ್ತಿಯಾದನು. ಆದುದರಿಂದ, ಇಡೀ ಕುಟುಂಬವನ್ನು ಮಕಬೀಯರು ಎಂದು ಕರೆಯಲು ಆರಂಭಿಸಲಾಯಿತು.
ದೇವಾಲಯವನ್ನು ಪುನಃ ವಶಕ್ಕೆ ತೆಗೆದುಕೊಳ್ಳಲಾಯಿತು
ದಂಗೆಯ ಮೊದಲನೆಯ ವರ್ಷದಲ್ಲಿ, ಮತ್ತತ್ತಾಯಸ್ ಮತ್ತು ಅವನ ಪುತ್ರರು ಒಂದು ಚಿಕ್ಕ ಸೈನ್ಯವನ್ನು ಸಂಘಟಿಸಲು ಶಕ್ತರಾದರು. ಅನೇಕ ಸಂದರ್ಭಗಳಲ್ಲಿ, ಗ್ರೀಕ್ ಸೈನಿಕರು ಸಬ್ಬತ್ ದಿನದಂದು ಹಾಸಿಡಿಮ್ ಹೋರಾಟಗಾರರ ಗುಂಪುಗಳ ಮೇಲೆ ಆಕ್ರಮಣ ಮಾಡಿದರು. ಈ ಹೋರಾಟಗಾರರು ತಮ್ಮನ್ನು ರಕ್ಷಿಸಿಕೊಳ್ಳಲು ಶಕ್ತರಾಗಿದ್ದರೂ, ಸಬ್ಬತ್ತನ್ನು ಉಲ್ಲಂಘಿಸಲು ಬಯಸಲಿಲ್ಲ. ಆದುದರಿಂದ ಸಾಮೂಹಿಕ ಹತ್ಯೆಗಳು ನಡೆದವು. ಈಗ ಒಬ್ಬ ಧಾರ್ಮಿಕ ಅಧಿಕಾರಿಯಾಗಿ ಪರಿಗಣಿಸಲಾಗುತ್ತಿದ್ದ ಮತ್ತತ್ತಾಯಸನು ಒಂದು ನಿಯಮವನ್ನು ಜಾರಿಗೆತಂದನು. ಇದು ಯೆಹೂದ್ಯರು ಸಬ್ಬತ್ ದಿನದಂದು ತಮ್ಮನ್ನು ರಕ್ಷಿಸಿಕೊಳ್ಳುವಂತೆ ಅನುಮತಿಯನ್ನು ನೀಡಿತು. ಇದು ಆ ದಂಗೆಗೆ ನವ ಚೇತನವನ್ನು ನೀಡಿತು. ಅಷ್ಟು ಮಾತ್ರವಲ್ಲದೆ, ಯೆಹೂದಿ ಮತದಲ್ಲಿ, ಧಾರ್ಮಿಕ ಮುಖಂಡರು ಬದಲಾಗುತ್ತಿರುವ ಪರಿಸ್ಥಿತಿಗಳಿಗನುಸಾರವಾಗಿ ಯೆಹೂದಿ ನಿಯಮವನ್ನು ಬದಲಾಯಿಸಲು ಅದು ಒಂದು ನಮೂನೆಯಾಯಿತು. ತರುವಾಯದ ಒಂದು ಹೇಳಿಕೆಯಲ್ಲಿ ಟ್ಯಾಲ್ಮುಡ್ ಇದನ್ನು ತೋರಿಸುತ್ತದೆ: “ಅನೇಕ ಸಬ್ಬತ್‌ಗಳನ್ನು ಪವಿತ್ರೀಕರಿಸಲಿಕ್ಕಾಗಿ, ಅವರು ಒಂದು ಸಬ್ಬತ್ತನ್ನು ಉಲ್ಲಂಘಿಸಲಿ.”—ಯೋಮ 85ಬಿ.
ತನ್ನ ವೃದ್ಧ ತಂದೆಯ ಮರಣದ ನಂತರ, ಯೆಹೂದ ಮಕಬೀ ಆ ದಂಗೆಯ ನಾಯಕನಾದನು. ಮುಕ್ತ ಹೋರಾಟದಲ್ಲಿ ತನ್ನ ಶತ್ರುವನ್ನು ಸೋಲಿಸುವ ಸಾಮರ್ಥ್ಯ ತನಗಿಲ್ಲದಿರುವುದನ್ನು ಗ್ರಹಿಸುತ್ತಾ, ಅವನು ಆಧುನಿಕ ಸಮಯಗಳ ಗೆರಿಲ್ಲ ಹೋರಾಟದಂತಹ ಹೊಸ ವಿಧಾನಗಳನ್ನು ರಚಿಸಿದನು. ಆಂಟಿಯಕಸನ ಪಡೆಗಳು ತಮ್ಮ ರಕ್ಷಣೆಯ ಸಾಮಾನ್ಯವಾದ ವಿಧಾನಗಳನ್ನು ಪ್ರಯೋಗಿಸಲಾಗದ ಪ್ರದೇಶಗಳಲ್ಲಿ ಅವನು ಅವರನ್ನು ಆಕ್ರಮಿಸಿದನು. ಈ ರೀತಿಯಲ್ಲಿ ಹಲವಾರು ಕದನಗಳಲ್ಲಿ ಯೆಹೂದ, ತನ್ನ ಸ್ವಂತ ಸೈನ್ಯಕ್ಕಿಂತ ಬಹಳಷ್ಟು ದೊಡ್ಡದಾದ ಪಡೆಗಳನ್ನು ಸೋಲಿಸಲು ಶಕ್ತನಾದನು.
ಆಂತರಿಕ ಪ್ರತಿಸ್ಪರ್ಧೆಗಳು ಮತ್ತು ಏಳಿಗೆಹೊಂದುತ್ತಿದ್ದ ರೋಮ್ ಸಾಮ್ರಾಜ್ಯದಿಂದ ಎದುರಿಸಲ್ಪಟ್ಟು, ಸೆಲ್ಯೂಸಿಡ್ ಸಾಮ್ರಾಜ್ಯದ ರಾಜರುಗಳು ಯೆಹೂದಿ ವಿರೋಧಿ ಶಾಸನಗಳನ್ನು ಜಾರಿಗೊಳಿಸುವ ಕುರಿತು ಅಷ್ಟೊಂದು ಚಿಂತೆ ಮಾಡಲಿಲ್ಲ. ಇದು, ಯೆಹೂದನು ಯೆರೂಸಲೇಮಿನ ಹೆಬ್ಬಾಗಿಲುಗಳ ವರೆಗೆ ಆಕ್ರಮಣಮಾಡುತ್ತಾ ಹೋಗುವಂತೆ ಮಾರ್ಗವನ್ನು ತೆರೆಯಿತು. ಸಾ.ಶ.ಪೂ. 165ರ (ಅಥವಾ ಪ್ರಾಯಶಃ ಸಾ.ಶ.ಪೂ. 164ರ) ಡಿಸೆಂಬರ್ ತಿಂಗಳಿನಲ್ಲಿ, ಅವನು ಮತ್ತು ಅವನ ಸೈನ್ಯಗಳು ದೇವಾಲಯವನ್ನು ಸ್ವಾಧೀನಪಡಿಸಿಕೊಂಡು, ಅದರ ಪಾತ್ರೆಗಳನ್ನು ಶುಚಿಗೊಳಿಸಿ, ಅದನ್ನು ದೇವರಿಗೆ ಪುನಃ ಸಮರ್ಪಿಸಿದರು. ಇದೆಲ್ಲವೂ ದೇವಾಲಯವು ಹೊಲೆಗೈಯಲ್ಪಟ್ಟು, ಸರಿಯಾಗಿ ಮೂರು ವರ್ಷಗಳ ನಂತರ ನಡೆಯಿತು. ಯೆಹೂದ್ಯರು ಈ ಘಟನೆಯನ್ನು, ಸಮರ್ಪಣೆಯ ಉತ್ಸವವಾದ ಹನುಕ್ಕಹದ ಸಮಯದಲ್ಲಿ ವಾರ್ಷಿಕವಾಗಿ ಸ್ಮರಿಸುತ್ತಾರೆ.
ಧರ್ಮಶ್ರದ್ಧೆಗಿಂತಲೂ ಹೆಚ್ಚಾಗಿ ರಾಜಕೀಯ ಉದ್ದೇಶಗಳು
ದಂಗೆಯ ಗುರಿಗಳನ್ನು ಸಾಧಿಸಲಾಯಿತು. ಯೆಹೂದಿ ಮತದ ವಿರುದ್ಧ ಇದ್ದ ಎಲ್ಲ ನಿಷೇಧಗಳನ್ನು ತೆಗೆಯಲಾಯಿತು. ದೇವಾಲಯದಲ್ಲಿ ಆರಾಧನೆ ಮತ್ತು ಯಜ್ಞಗಳನ್ನು ಪುನಃ ಆರಂಭಿಸಲಾಯಿತು. ಈಗ ತೃಪ್ತಿಯಿಂದ, ಹಾಸಿಡಿಮರು ಯೆಹೂದ ಮಕಬೀಯ ಸೈನ್ಯವನ್ನು ಬಿಟ್ಟು ತಮ್ಮ ತಮ್ಮ ಮನೆಗಳಿಗೆ ಹಿಂದಿರುಗಿ ಹೋದರು. ಆದರೆ ಯೆಹೂದನಿಗೆ ಬೇರೆ ಯೋಜನೆಗಳಿದ್ದವು. ಚೆನ್ನಾಗಿ ತರಬೇತಿಗೊಳಿಸಲ್ಪಟ್ಟ ಒಂದು ಸೈನ್ಯ ತನಗಿದ್ದದರಿಂದ, ಒಂದು ಸ್ವತಂತ್ರ ಯೆಹೂದಿ ರಾಜ್ಯವನ್ನು ಸ್ಥಾಪಿಸಲು ಅದನ್ನು ಏಕೆ ಉಪಯೋಗಿಸಬಾರದೆಂದು ಅವನು ಯೋಚಿಸಿದನು. ಆ ದಂಗೆಯನ್ನು ಆರಂಭಿಸಿದಂತಹ ಧಾರ್ಮಿಕ ಕಾರಣಗಳ ಸ್ಥಾನದಲ್ಲಿ ಈಗ ರಾಜಕೀಯ ಉದ್ದೇಶಗಳು ನುಸುಳಿದವು. ಆದುದರಿಂದ ಈ ಹೋರಾಟವು ಮುಂದುವರಿಯಿತು.
ಸೆಲ್ಯೂಸಿಡ್ ಆಳ್ವಿಕೆಯ ವಿರುದ್ಧದ ತನ್ನ ಹೋರಾಟಕ್ಕೆ ಬೆಂಬಲವನ್ನು ಪಡೆಯಲು ಪ್ರಯತ್ನಿಸುತ್ತಾ, ಯೆಹೂದ ಮಕಬೀ, ರೋಮ್‌ನೊಂದಿಗೆ ಒಂದು ಒಪ್ಪಂದವನ್ನು ಮಾಡಿಕೊಂಡನು. ಸಾ.ಶ.ಪೂ. 160ರಲ್ಲಿ ಒಂದು ಕದನದಲ್ಲಿ ಅವನು ಸತ್ತರೂ, ಅವನ ಸಹೋದರರು ಆ ಹೋರಾಟವನ್ನು ಮುಂದುವರಿಸಿದರು. ಯೂದಾಯವು ಸೆಲ್ಯೂಸಿಡ್ ಆಳ್ವಿಕೆಯ ಕೆಳಗಿತ್ತು. ಆದರೂ ಯೆಹೂದನ ಸಹೋದರನಾದ ಜೊನಾತಾನ್, ಯೂದಾಯದ ಮಹಾ ಯಾಜಕ ಮತ್ತು ಅಧಿಪತಿಯಾಗಲು ಅವರಿಂದ ಒಪ್ಪಿಗೆ ಪಡೆದುಕೊಳ್ಳುವಂತೆ ಉಪಾಯದಿಂದ ಕೆಲಸಗಳನ್ನು ಮಾಡಿದನು. ಸಿರಿಯನರ ಸಂಚಿನಿಂದಾಗಿ, ಜೊನಾತಾನ್ ವಂಚಿಸಲ್ಪಟ್ಟು, ಸೆರೆಹಿಡಿದು ಕೊಲ್ಲಲ್ಪಟ್ಟಾಗ, ಮಕಬೀ ಸಹೋದರರಲ್ಲಿ ಕೊನೆಯವನಾದ, ಅವನ ತಮ್ಮ ಸಿಮಿಯೋನನು ಅಧಿಕಾರವಹಿಸಿದನು. ಸಿಮಿಯೋನನ ಆಳ್ವಿಕೆಯ ಸಮಯದಲ್ಲಿ, (ಸಾ.ಶ.ಪೂ. 141ರಲ್ಲಿ) ಸೆಲ್ಯೂಸಿಡ್ ಆಳ್ವಿಕೆಯ ಕೊನೆಯ ಅವಶೇಷಗಳನ್ನು ಅಳಿಸಿಹಾಕಲಾಯಿತು. ಸಿಮಿಯೋನನು ರೋಮ್‌ನೊಂದಿಗೆ ಸಂಬಂಧವನ್ನು ಪುನಃ ಸ್ಥಾಪಿಸಿದನು ಮತ್ತು ಯೆಹೂದಿ ನಾಯಕರು, ಅವನನ್ನು ಅಧಿಪತಿ ಮತ್ತು ಮಹಾ ಯಾಜಕನನ್ನಾಗಿ ಸ್ವೀಕರಿಸಿದರು. ಈ ರೀತಿಯಲ್ಲಿ ಮಕಬೀಯರು ಒಂದು ಸ್ವತಂತ್ರ ಹಾಸ್‌ಮೋನಿಯನ್ ರಾಜವಂಶವನ್ನು ಸ್ಥಾಪಿಸಿದರು.
ಮಕಬೀಯರು, ಮೆಸ್ಸೀಯನು ಬರುವ ಮುಂಚೆ ದೇವಾಲಯದಲ್ಲಿ ಆರಾಧನೆಯನ್ನು ಪುನಸ್ಸ್ಥಾಪಿಸಿದರು. (ಹೋಲಿಸಿರಿ ಯೋಹಾನ 1:41, 42; 2:13-17.) ಆದರೆ ಗ್ರೀಕ್ ಸಂಸ್ಕೃತಿಯ ಪ್ರಭಾವಕ್ಕೊಳಗಾದ ಯಾಜಕರ ಕೃತ್ಯಗಳಿಂದಾಗಿ, ಯಾಜಕತ್ವದಲ್ಲಿನ ಭರವಸೆಯು ನುಚ್ಚುನೂರಾದಂತೆಯೇ, ಹಾಸ್‌ಮೋನಿಯನರ ಕೆಳಗೆ ಅದು ಇನ್ನೂ ಹೆಚ್ಚು ಹಾಳಾಯಿತು. ನಂಬಿಗಸ್ತ ದಾವೀದನ ವಂಶದ ಒಬ್ಬ ರಾಜನ ಆಳ್ವಿಕೆಯ ಬದಲಿಗೆ, ರಾಜಕೀಯ ಅಧಿಕಾರದಾಹಿ ಯಾಜಕರ ಆಳ್ವಿಕೆಯು, ಯೆಹೂದಿ ಜನರಿಗೆ ನಿಜವಾದ ಆಶೀರ್ವಾದಗಳನ್ನು ತರಲಿಲ್ಲ.—2 ಸಮುವೇಲ 7:16; ಕೀರ್ತನೆ 89:3, 4, 35, 36.
[ಪುಟ 21 ರಲ್ಲಿರುವ ಚಿತ್ರ]
ಯೆಹೂದ ಮಕಬೀಯನ ತಂದೆಯಾದ ಮತ್ತತ್ತಾಯಸನು ಕೂಗಿಹೇಳಿದ್ದು: ‘ಧರ್ಮಶಾಸ್ತ್ರಕ್ಕಾಗಿ ಹುರುಪುಳ್ಳವರೆಲ್ಲರೂ ನನ್ನನ್ನು ಹಿಂಬಾಲಿಸಲಿ’
[ಕೃಪೆ]
ಯೆಹೂದಿ ನಿರಾಶ್ರಿತರನ್ನು ಬೇಡಿಕೊಳ್ಳುತ್ತಿರುವ ಮತ್ತತ್ತಾಯಸನು/The Doré Bible Illustrations/Dover Publications