ಒಂದು ಆಶೀರ್ವಾದವಾಗಿರಬಲ್ಲ ಸಂದರ್ಶನ
1 ಜಕ್ಕಾಯನು ಸಂತೋಷದಿಂದ ಯೇಸುವನ್ನು ತನ್ನ ಮನೆಗೆ ಅತಿಥಿಯೋಪಾದಿ ಬರಮಾಡಿಕೊಂಡನು. ಆ ಸಂದರ್ಶನವು ಎಂತಹ ಒಂದು ಆಶೀರ್ವಾದವಾಗಿ ಪರಿಣಮಿಸಿತು!—ಲೂಕ 19:2-9.
2 ಇಂದು, ಸಭೆಯ ತಲೆಯೋಪಾದಿ ಯೇಸು ಕ್ರಿಸ್ತನು, ‘ದೇವರ ಮಂದೆಯನ್ನು ಕಾಯುವಂತೆ’ ಹಿರಿಯರನ್ನು ನಿರ್ದೇಶಿಸುತ್ತಾನೆ. (1 ಪೇತ್ರ 5:2, 3; ಯೋಹಾ. 21:15-17) ಕೂಟಗಳಲ್ಲಿ ಕಲಿಸುವುದು ಮತ್ತು ಕ್ಷೇತ್ರ ಸೇವೆಯಲ್ಲಿ ಮುಂದಾಳುತ್ವವನ್ನು ವಹಿಸುವುದಕ್ಕೆ ಕೂಡಿಸಿ, ಸಭೆಯ ಮೇಲ್ವಿಚಾರಕರು ಸಭೆಯ ಒಬ್ಬೊಬ್ಬ ಸದಸ್ಯನಿಗೆ ಪ್ರೀತಿಪರ, ವೈಯಕ್ತಿಕ ನೆರವನ್ನು ಒದಗಿಸುತ್ತಾರೆ. ಆದುದರಿಂದ ಆಗಿಂದಾಗ್ಗೆ, ನಿಮ್ಮ ಮನೆಯಲ್ಲಾಗಲಿ, ರಾಜ್ಯ ಸಭಾಗೃಹದಲ್ಲಾಗಲಿ, ಕ್ಷೇತ್ರ ಸೇವೆಯಲ್ಲಿ ಜೊತೆಯಾಗಿ ಕೆಲಸಮಾಡುವಾಗ ಅಥವಾ ಇತರ ಸಂದರ್ಭಗಳಲ್ಲಾಗಲಿ, ಹಿರಿಯರಿಂದ ವೈಯಕ್ತಿಕ ಗಮನವನ್ನು ಪಡೆಯಲು ನೀವು ಮುನ್ನೋಡಬಹುದು. ಹಿರಿಯರ ಸಂದರ್ಶನಗಳ ವಿಷಯದಲ್ಲಿ ನೀವು ಭಯಪಡಬೇಕೊ? ಖಂಡಿತವಾಗಿಯೂ ಇಲ್ಲ. ಅವರು ನಿಮ್ಮನ್ನು ಸಂದರ್ಶಿಸುತ್ತಿರುವುದು, ನೀವು ಯಾವುದೋ ರೀತಿಯಲ್ಲಿ ತಪ್ಪಿಬೀಳುತ್ತಿದ್ದೀರೆಂಬುದನ್ನು ಅರ್ಥೈಸುವುದಿಲ್ಲ. ಹಾಗಾದರೆ, ಒಂದು ಕುರಿಪಾಲನಾ ಸಂದರ್ಶನದ ಉದ್ದೇಶವೇನಾಗಿದೆ?
3 ಸಹೋದರರು ‘ಹೇಗಿದ್ದಾರೆಂದು ನೋಡಲಿಕ್ಕಾಗಿ’ ತಾನು ಸಂದರ್ಶಿಸಲು ಬಯಸುತ್ತೇನೆಂದು ಪೌಲನು ಹೇಳಿದನು. (ಅ. ಕೃ. 15:36) ಹೌದು, ಪ್ರೀತಿಪರ ಕುರುಬರೋಪಾದಿ, ನೀವು ಹೇಗಿದ್ದೀರೆಂಬುದನ್ನು ತಿಳಿಯಲು ಹಿರಿಯರು ತುಂಬ ಆಸಕ್ತರಾಗಿದ್ದಾರೆ. ನಿಮಗೆ ಸಹಾಯಕಾರಿಯೂ ಭಕ್ತಿವೃದ್ಧಿಮಾಡುವಂತಹದ್ದೂ ಆಗಿರಬಹುದಾದ ಆತ್ಮಿಕ ನೆರವನ್ನು ಅವರು ನೀಡಲು ಬಯಸುತ್ತಾರೆ. ನಮ್ಮಲ್ಲಿ ಪ್ರತಿಯೊಬ್ಬರಿಗೆ ಅಂತಹ ವೈಯಕ್ತಿಕ ಆರೈಕೆಯು ದೊರೆಯಬೇಕೆಂದು ನಮ್ಮ ಪ್ರೀತಿಯ ಕುರುಬನಾದ ಯೆಹೋವನು ಅಪೇಕ್ಷಿಸುತ್ತಾನೆ.—ಯೆಹೆ. 34:11.
4 ಹಿರಿಯರ ಸಂದರ್ಶನಗಳನ್ನು ಸ್ವಾಗತಿಸಿರಿ: ಪೌಲನು ತನ್ನ ಸಹೋದರರನ್ನು ಸಂದರ್ಶಿಸುವ ಗುರಿಯು, ಅವರಿಗೆ ‘ಅವರು ದೃಢವಾಗುವದಕ್ಕೋಸ್ಕರ ಆತ್ಮಿಕ ವರವನ್ನು ಕೊಡುವುದು ಮತ್ತು ಉತ್ತೇಜನದ ವಿನಿಮಯ ಮಾಡುವುದು’ (NW) ಆಗಿತ್ತು. (ರೋಮಾ. 1:11, 12) ಈ ಕಷ್ಟಕರವಾದ ಕಡೇ ದಿವಸಗಳಲ್ಲಿ, ನಮಗೆಲ್ಲರಿಗೂ ಆತ್ಮಿಕ ಉತ್ತೇಜನದ ಅಗತ್ಯವಿದೆ, ಮತ್ತು ನಂಬಿಕೆಯಲ್ಲಿ ದೃಢರಾಗಿ ಮುಂದುವರಿಯಲಿಕ್ಕಾಗಿ ಸಹಾಯದ ಅಗತ್ಯವಿದೆ. ಒಂದು ಕುರಿಪಾಲನಾ ಸಂದರ್ಶನಕ್ಕೆ ನೀವು ತೋರಿಸುವ ಸಕಾರಾತ್ಮಕ ಪ್ರತಿಕ್ರಿಯೆಯು, ನಿಸ್ಸಂದೇಹವಾಗಿ ಉತ್ತೇಜನದ ಉತ್ತಮ ವಿನಿಮಯದಲ್ಲಿ ಫಲಿಸುವುದು.
5 ಹಿರಿಯರ ಕುರಿಪಾಲನಾ ಕೆಲಸದಿಂದ ಸಿಗುವ ಅನೇಕ ಪ್ರಯೋಜನಗಳನ್ನು ಗಣ್ಯಮಾಡಿರಿ. ನೀವು ಚಿಂತಿತರಾಗಿರುವ ಯಾವುದೇ ವಿಷಯ ಅಥವಾ ಪ್ರಶ್ನೆ ಇರುವಲ್ಲಿ, ಸಭೆಯಲ್ಲಿರುವ ಹಿರಿಯರು ಸಹಾಯಮಾಡಲಿಕ್ಕಾಗಿಯೇ ಇದ್ದಾರೆಂಬುದನ್ನು ಜ್ಞಾಪಿಸಿಕೊಳ್ಳಿರಿ. ನಿಮ್ಮ ಆತ್ಮಿಕ ಕ್ಷೇಮವನ್ನು ಬಾಧಿಸುತ್ತಿರಬಹುದಾದ ಯಾವುದೇ ವಿಷಯಗಳನ್ನು ಅವರೊಂದಿಗೆ ಚರ್ಚಿಸಲು ಹಿಂಜರಿಯಬೇಡಿರಿ. ಯೆಹೋವನಿಂದ ಬಂದಿರುವ ಈ ಪ್ರೀತಿಪರ ಏರ್ಪಾಡನ್ನು ಗಣ್ಯಮಾಡಿರಿ, ಮತ್ತು ಅಂತಹ ಒಂದು ಸಂದರ್ಶನವು ತರಬಹುದಾದ ಆಶೀರ್ವಾದಗಳಲ್ಲಿ ಆನಂದಿಸಿರಿ.