ಅವರು ಯೆಹೋವನ ಚಿತ್ತವನ್ನು ಮಾಡಿದರು
ಫಿಲಿಪ್ಪನು ಐಥಿಯೋಪ್ಯದ ಒಬ್ಬ ಅಧಿಕಾರಿಗೆ ದೀಕ್ಷಾಸ್ನಾನ ಮಾಡಿಸುತ್ತಾನೆ
ತನ್ನ ರಥದಲ್ಲಿ ಪ್ರಯಾಣಿಸುತ್ತಿರುವಾಗ, ಐಥಿಯೋಪ್ಯದವನೊಬ್ಬನು ತನ್ನ ಸಮಯವನ್ನು ವಿವೇಕಯುತವಾಗಿ ಉಪಯೋಗಿಸುತ್ತಿದ್ದನು. ಅವನು ಗಟ್ಟಿಯಾಗಿ ಓದುತ್ತಿದ್ದನು—ಇದು ಪ್ರಥಮ ಶತಮಾನದ ಪ್ರಯಾಣಿಕರ ನಡುವೆ ಇದ್ದ ಒಂದು ಸರ್ವಸಾಮಾನ್ಯ ಪದ್ಧತಿಯಾಗಿತ್ತು. ಈ ನಿರ್ದಿಷ್ಟ ಮನುಷ್ಯನು, “ಐಥಿಯೋಪ್ಯದವರ ರಾಣಿಯಾಗಿದ್ದ ಕಂದಾಕೆಯ ಕೈಕೆಳ”ಗಿನ ಒಬ್ಬ ಅಧಿಕಾರಿಯಾಗಿದ್ದನು.a ಅವನು “ಆಕೆಯ ಎಲ್ಲಾ ಖಜಾನೆಯ ಮೇಲ್ವಿಚಾರಕನೂ” ಆಗಿದ್ದನು—ಕಾರ್ಯತಃ, ಅವನು ಒಬ್ಬ ಹಣಕಾಸಿನ ಮಂತ್ರಿಯಾಗಿದ್ದನು. ಜ್ಞಾನವನ್ನು ಪಡೆದುಕೊಳ್ಳಲಿಕ್ಕಾಗಿ ಈ ಅಧಿಕಾರಿಯು ದೇವರ ವಾಕ್ಯದಿಂದ ಓದುತ್ತಿದ್ದನು.—ಅ. ಕೃತ್ಯಗಳು 8:27, 28.
ಅವನಿಗೆ ಸಮೀಪದಲ್ಲಿ ಸೌವಾರ್ತಿಕನಾದ ಫಿಲಿಪ್ಪನಿದ್ದನು. ದೇವದೂತನೊಬ್ಬನು ಅವನನ್ನು ಈ ಸ್ಥಳಕ್ಕೆ ನಿರ್ದೇಶಿಸಿದ್ದನು, ಮತ್ತು ಈಗ ಅವನಿಗೆ ಹೀಗೆ ಹೇಳಲ್ಪಟ್ಟಿತು: “ನೀನು ಆ ರಥದ ಹತ್ತಿರ ಹೋಗಿ ಅದರ ಸಂಗಡಲೇ ನಡೆ.” (ಅ. ಕೃತ್ಯಗಳು 8:26, 29) ‘ಈ ಮನುಷ್ಯನು ಯಾರು? ಅವನು ಏನನ್ನು ಓದುತ್ತಿದ್ದಾನೆ? ನನ್ನನ್ನು ಏಕೆ ಅವನ ಬಳಿಗೆ ನಿರ್ದೇಶಿಸಲಾಗಿದೆ?’ ಎಂಬುದಾಗಿ ಫಿಲಿಪ್ಪನು ತನ್ನನ್ನು ಕೇಳಿಕೊಳ್ಳುತ್ತಿರುವುದನ್ನು ನಾವು ಊಹಿಸಿಕೊಳ್ಳಬಲ್ಲೆವು.
ಫಿಲಿಪ್ಪನು ರಥದೊಂದಿಗೆ ಅದರ ಮಾರ್ಗದುದ್ದಕ್ಕೂ ಓಡಿದಾಗ, ಆ ಐಥಿಯೋಪ್ಯದವನು ಈ ಮಾತುಗಳನ್ನು ಓದುತ್ತಿರುವುದನ್ನು ಅವನು ಕೇಳಿಸಿಕೊಂಡನು: “ವಧ್ಯಸ್ಥಾನಕ್ಕೆ ಒಯ್ಯಲ್ಪಡುವ ಕುರಿಯಂತೆ ಆತನು ಒಯ್ಯಲ್ಪಟ್ಟನು; ಕುರಿಮರಿಯು ಉಣ್ಣೆ ಕತ್ತರಿಸುವವನ ಮುಂದೆ ಮೌನವಾಗಿರುವಂತೆ ಆತನು ಬಾಯಿ ತೆರೆಯಲೇ ಇಲ್ಲ. ಆತನಿಗುಂಟಾದ ದೀನಾವಸ್ಥೆಯಲ್ಲಿ ನ್ಯಾಯವು ಇಲ್ಲದೆಹೋಯಿತು. ಆತನ ಸಕಾಲದವರನ್ನು ಹೇಳತಕ್ಕದ್ದೇನು? ಆತನ ಜೀವವನ್ನು ಭೂಮಿಯ ಮೇಲಿನಿಂದ ತೆಗೆದುಬಿಟ್ಟರಲ್ಲಾ.”—ಅ. ಕೃತ್ಯಗಳು 8:32, 33.
ಫಿಲಿಪ್ಪನು ಆ ಕೂಡಲೆ ಆ ಭಾಗವನ್ನು ಗ್ರಹಿಸಿದನು. ಅದು ಯೆಶಾಯನ ಬರಹದಿಂದ ತೆಗೆದಂತಹ ಭಾಗವಾಗಿತ್ತು. (ಯೆಶಾಯ 53:7, 8) ಐಥಿಯೋಪ್ಯದವನು ತಾನು ಏನನ್ನು ಓದುತ್ತಿದ್ದನೋ ಆ ವಿಷಯದಿಂದ ತಬ್ಬಿಬ್ಬಾದನು. “ನೀನು ಓದುವದು ನಿನಗೆ ತಿಳಿಯುತ್ತದೋ?” ಎಂದು ಕೇಳುವ ಮೂಲಕ ಫಿಲಿಪ್ಪನು ಒಂದು ಸಂಭಾಷಣೆಯನ್ನು ಆರಂಭಿಸಿದನು. ಆ ಐಥಿಯೋಪ್ಯದವನು ಉತ್ತರಿಸಿದ್ದು: “ಯಾರಾದರೂ ನನಗೆ ಅರ್ಥ ತಿಳಿಸಿಕೊಟ್ಟ ಹೊರತು ಅದು ನನಗೆ ಹೇಗೆ ತಿಳಿದೀತು”? ತದನಂತರ ಅವನು ತನ್ನ ರಥದಲ್ಲಿ ತನ್ನನ್ನು ಜೊತೆಗೂಡುವಂತೆ ಫಿಲಿಪ್ಪನನ್ನು ಕೇಳಿಕೊಂಡನು.—ಅ. ಕೃತ್ಯಗಳು 8:30, 31.
“ನನಗೆ ದೀಕ್ಷಾಸ್ನಾನವಾಗುವದಕ್ಕೆ ಅಡ್ಡಿ ಏನು”?
ಐಥಿಯೋಪ್ಯದವನು ಫಿಲಿಪ್ಪನಿಗೆ ಹೇಳಿದ್ದು: “ಪ್ರವಾದಿಯು ಇದನ್ನು ಯಾರ ವಿಷಯದಲ್ಲಿ ಹೇಳಿದ್ದಾನೆ? ತನ್ನ ವಿಷಯದಲ್ಲಿಯೋ? ಮತ್ತೊಬ್ಬನ ವಿಷಯದಲ್ಲಿಯೋ? ದಯಮಾಡಿ ಹೇಳಬೇಕು.” (ಅ. ಕೃತ್ಯಗಳು 8:34) ಆ ಐಥಿಯೋಪ್ಯದವನ ಗೊಂದಲವು ಆಶ್ಚರ್ಯಕರವಾಗಿರಲಿಲ್ಲ, ಏಕೆಂದರೆ ಯೆಶಾಯನ ಪ್ರವಾದನೆಯ “ಕುರಿ” ಅಥವಾ “ಸೇವಕ”ನ ಗುರುತಿಸುವಿಕೆಯು, ದೀರ್ಘ ಸಮಯದಿಂದಲೂ ಒಂದು ರಹಸ್ಯವಾಗಿತ್ತು. (ಯೆಶಾಯ 53:11) ಫಿಲಿಪ್ಪನು ಐಥಿಯೋಪ್ಯದವನಿಗೆ “ಯೇಸುವಿನ ವಿಷಯವಾದ ಸುವಾರ್ತೆ”ಯನ್ನು ಪ್ರಕಟಿಸಿದಾಗ, ಇದು ಎಷ್ಟು ಸ್ಪಷ್ಟವಾಗಿದ್ದಿರಬೇಕು! ಸ್ವಲ್ಪ ಸಮಯಾನಂತರ ಐಥಿಯೋಪ್ಯದವನು ಹೇಳಿದ್ದು: “ಅಗೋ, ನೀರು; ನನಗೆ ದೀಕ್ಷಾಸ್ನಾನವಾಗುವದಕ್ಕೆ ಅಡ್ಡಿ ಏನು”? ಆದುದರಿಂದ ಫಿಲಿಪ್ಪನು ಆಗಲೇ, ಅಲ್ಲಿಯೇ ಅವನಿಗೆ ದೀಕ್ಷಾಸ್ನಾನ ಮಾಡಿಸಿದನು.—ಅ. ಕೃತ್ಯಗಳು 8:35-38.
ಇದು ಒಂದು ದುಡುಕಿನ ಕೃತ್ಯವಾಗಿತ್ತೋ? ಖಂಡಿತವಾಗಿಯೂ ಇಲ್ಲ! ಆ ಐಥಿಯೋಪ್ಯದವನು ಒಬ್ಬ ಯೆಹೂದಿ ಮತಾವಲಂಬಿಯಾಗಿದ್ದನು.b ಆದುದರಿಂದ ಮೆಸ್ಸೀಯ ಸಂಬಂಧಿತ ಪ್ರವಾದನೆಗಳನ್ನೂ ಒಳಗೊಂಡು, ಶಾಸ್ತ್ರಗಳ ಜ್ಞಾನದೊಂದಿಗೆ, ಅವನು ಈಗಾಗಲೇ ಯೆಹೋವನ ಒಬ್ಬ ಆರಾಧಕನಾಗಿದ್ದನು. ಹಾಗಿದ್ದರೂ, ಅವನ ಜ್ಞಾನವು ಅಪೂರ್ಣವಾಗಿತ್ತು. ಈಗ ಐಥಿಯೋಪ್ಯದವನು ಯೇಸು ಕ್ರಿಸ್ತನ ಪಾತ್ರದ ಕುರಿತಾದ ಅತ್ಯಾವಶ್ಯಕ ಮಾಹಿತಿಯನ್ನು ಪಡೆದುಕೊಂಡಿದ್ದರಿಂದ, ದೇವರು ತನ್ನಿಂದ ಏನನ್ನು ಅಪೇಕ್ಷಿಸುತ್ತಾನೆಂಬುದನ್ನು ತಿಳಿದುಕೊಂಡನು ಮತ್ತು ಅನುವರ್ತಿಸಲು ಸಿದ್ಧನಾಗಿದ್ದನು. ದೀಕ್ಷಾಸ್ನಾನವು ಸೂಕ್ತವಾಗಿತ್ತು.—ಮತ್ತಾಯ 28:18-20; 1 ಪೇತ್ರ 3:21.
ತದನಂತರ, “ಆ ಕೂಡಲೆ ಯೆಹೋವನ ಆತ್ಮವು ಫಿಲಿಪ್ಪನನ್ನು ಎತ್ತಿಕೊಂಡುಹೋಯಿತು.” ಅವನು ಇನ್ನೊಂದು ನೇಮಕಕ್ಕೆ ಹೊರಟುಹೋದನು. ಆ ಐಥಿಯೋಪ್ಯದವನು “ಸಂತೋಷವುಳ್ಳವನಾಗಿ ತನ್ನ ದಾರಿಯನ್ನು ಹಿಡಿ”ದನು.—ಅ. ಕೃತ್ಯಗಳು 8:39, 40, NW.
ನಮಗಾಗಿ ಪಾಠ
ಯೆಹೋವನ ಪ್ರಸ್ತುತ ದಿನದ ಸೇವಕರೋಪಾದಿ, ದೇವರ ವಾಕ್ಯದ ಸತ್ಯವನ್ನು ಕಲಿಯಲಿಕ್ಕಾಗಿ ಪ್ರಾಮಾಣಿಕ ಹೃದಯದ ವ್ಯಕ್ತಿಗಳಿಗೆ ಸಹಾಯ ಮಾಡುವ ಹಂಗು ನಮಗಿದೆ. ಅನೇಕರು ಪ್ರಯಾಣಿಸುತ್ತಿರುವಾಗ ಅಥವಾ ಇನ್ನಿತರ ಅನೌಪಚಾರಿಕ ಪರಿಸ್ಥಿತಿಗಳಲ್ಲಿ ಇತರರಿಗೆ ಸುವಾರ್ತೆಯನ್ನು ನೀಡುವುದರಲ್ಲಿ ಸಫಲರಾಗಿದ್ದಾರೆ. ರಾಜ್ಯ ಸಾರುವಿಕೆಯ ಕೆಲಸದ ಒಂದು ಫಲಿತಾಂಶವಾಗಿ, ಪ್ರತಿ ವರ್ಷ ಲಕ್ಷಾಂತರ ಮಂದಿ ದೀಕ್ಷಾಸ್ನಾನ ಪಡೆದುಕೊಳ್ಳುವ ಮೂಲಕ, ಯೆಹೋವ ದೇವರಿಗೆ ತಮ್ಮ ಸಮರ್ಪಣೆಯನ್ನು ಸಂಕೇತಿಸುತ್ತಾರೆ.
ಹೊಸಬರನ್ನು ದೀಕ್ಷಾಸ್ನಾನಕ್ಕೆ ತ್ವರೆಪಡಿಸಬಾರದೆಂಬುದು ನಿಶ್ಚಯ. ಮೊದಲಾಗಿ ಅವರು ಯೆಹೋವ ದೇವರ ಮತ್ತು ಆತನ ಪುತ್ರನಾದ ಯೇಸು ಕ್ರಿಸ್ತನ ಕುರಿತಾದ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳಬೇಕು. (ಯೋಹಾನ 17:3) ಅನಂತರ ಅವರು ದೇವರ ಮಟ್ಟಗಳಿಗೆ ಹೊಂದಿಕೊಳ್ಳಲಿಕ್ಕಾಗಿ ಹಿಂದಿರುಗಿ, ಕೆಟ್ಟ ನಡತೆಯನ್ನು ತೊರೆದು, ಪಶ್ಚಾತ್ತಾಪಪಡಬೇಕು. (ಅ. ಕೃತ್ಯಗಳು 3:19) ವಿಶೇಷವಾಗಿ ಕೆಟ್ಟ ಆಲೋಚನೆ ಮತ್ತು ನಡತೆಯು ಆಳವಾಗಿ ಬೇರೂರಿರುವಲ್ಲಿ, ಇದಕ್ಕೆ ಸಮಯ ಹಿಡಿಯುತ್ತದೆ. ಹೊಸಬರು ಕ್ರೈಸ್ತ ಶಿಷ್ಯತ್ವದಲ್ಲಿ ಒಳಗೂಡಿರುವ ತ್ಯಾಗವನ್ನು ಗಂಭೀರವಾಗಿ ಪರಿಗಣಿಸಬೇಕಾಗಿರುವಾಗ, ಯೆಹೋವ ದೇವರೊಂದಿಗಿನ ಒಂದು ಸಮರ್ಪಿತ ಸಂಬಂಧದೊಳಗೆ ಪ್ರವೇಶಿಸುವ ಮಹಾ ಆಶೀರ್ವಾದಗಳು ಫಲಿಸುತ್ತವೆ. (ಹೋಲಿಸಿರಿ ಲೂಕ 9:23; 14:25-33.) ಯೆಹೋವನ ಸಾಕ್ಷಿಗಳಾಗಿರುವವರು, ತನ್ನ ಚಿತ್ತವನ್ನು ಪೂರೈಸಲಿಕ್ಕಾಗಿ ದೇವರು ಉಪಯೋಗಿಸುತ್ತಿರುವ ಸಂಸ್ಥೆಯ ಕಡೆಗೆ ಅಂತಹ ಹೊಸಬರನ್ನು ಅತ್ಯುತ್ಸಾಹದಿಂದ ನಿರ್ದೇಶಿಸುತ್ತಾರೆ. (ಮತ್ತಾಯ 24:45-47) ಐಥಿಯೋಪ್ಯದವನಂತೆ, ಈ ಹೊಸಬರು ದೇವರು ತಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ ಎಂಬುದರ ಕುರಿತಾಗಿ ಕಲಿಯುವುದರಲ್ಲಿ ಹಾಗೂ ಅದಕ್ಕೆ ಹೊಂದಿಕೊಳ್ಳುವುದರಲ್ಲಿ ಹರ್ಷಿಸುವರು.
[ಅಧ್ಯಯನ ಪ್ರಶ್ನೆಗಳು]
a “ಕಂದಾಕೆ” ಎಂಬುದು ಒಂದು ಹೆಸರಾಗಿಲ್ಲ, ಬದಲಾಗಿ ಐಥಿಯೋಪ್ಯದ ರಾಣಿಯರ ಒಂದು ಶ್ರೇಣಿಗೆ ಅನ್ವಯಿಸಿದ ಒಂದು ಬಿರುದಾಗಿದೆ (“ಫರೋಹ” ಮತ್ತು “ಕೈಸರ” ಎಂಬುದಕ್ಕೆ ಸದೃಶವಾಗಿ).
b ಯೆಹೂದಿ ಮತಾವಲಂಬಿಗಳು, ಮೋಶೆಯ ನಿಯಮಶಾಸ್ತ್ರಕ್ಕೆ ಅಂಟಿಕೊಳ್ಳುವ ಆಯ್ಕೆಮಾಡಿಕೊಂಡ ಇಸ್ರಾಯೇಲ್ಯೇತರರಾಗಿದ್ದರು.—ಯಾಜಕಕಾಂಡ 24:22.
[ಪುಟ 8 ರಲ್ಲಿರುವ ಚೌಕ]
ಕಂಚುಕಿ (Eunuch, ನಪುಂಸಕ) ಎಂದು ಕರೆಯಲ್ಪಟ್ಟದ್ದೇಕೆ?
ಅಪೊಸ್ತಲ ಕೃತ್ಯ 8ರಲ್ಲಿರುವ ವೃತ್ತಾಂತದಾದ್ಯಂತ, ಐಥಿಯೋಪ್ಯದವನು ಒಬ್ಬ “ನಪುಂಸಕ” ಎಂದು ಸೂಚಿಸಲ್ಪಟ್ಟಿದ್ದಾನೆ. ಹಾಗಿದ್ದರೂ, ಮೋಶೆಯ ನಿಯಮಶಾಸ್ತ್ರವು ವೀರ್ಯಗುಂದಿಸಲ್ಪಟ್ಟ ಒಬ್ಬ ಪುರುಷನನ್ನು ಸಭೆಯೊಳಕ್ಕೆ ಅಂಗೀಕರಿಸಲಿಲ್ಲವಾದುದರಿಂದ, ಈ ಮನುಷ್ಯನು ಅಕ್ಷರಾರ್ಥವಾಗಿ ಒಬ್ಬ ನಪುಂಸಕನಾಗಿರಲಿಲ್ಲವೆಂಬುದು ಸುವ್ಯಕ್ತ. (ಧರ್ಮೋಪದೇಶಕಾಂಡ 23:1) “ನಪುಂಸಕ” ಎಂಬುದರ ಗ್ರೀಕ್ ಪದವು, ಉನ್ನತ ಅಧಿಕಾರದಲ್ಲಿರುವ ಒಬ್ಬ ವ್ಯಕ್ತಿಗೆ ಸೂಚಿತವಾಗಸಾಧ್ಯವಿದೆ. ಹೀಗೆ, ಆ ಐಥಿಯೋಪ್ಯದವನು, ಐಥಿಯೋಪ್ಯದ ರಾಣಿಯ ಕೈಕೆಳಗಿನ ಒಬ್ಬ ಅಧಿಕಾರಿಯಾಗಿದ್ದನು.