ನಿಮ್ಮ ಜೀವನವು ಅದೃಷ್ಟದಿಂದ ನಿಯಂತ್ರಿಸಲ್ಪಡುತ್ತದೆಯೊ?
“ಆಲಾ ನಾ ಡೊ.” ಈ ಅಭಿವ್ಯಕ್ತಿಯು, ಪಶ್ಚಿಮ ಆಫ್ರಿಕದ ಮಾಲಿಯ ಬ್ಯಾಮ್ಬಾರಾ ಭಾಷೆಯಲ್ಲಿ, “ಅದು ದೇವರ ಕೆಲಸ,” ಎಂಬುದನ್ನು ಅರ್ಥೈಸುತ್ತದೆ. ಈ ರೀತಿಯ ಗುರಿನುಡಿಗಳು, ಲೋಕದ ಆ ಭಾಗದಲ್ಲಿ ಸರ್ವಸಾಮಾನ್ಯವಾಗಿವೆ. ವೊಲಾಫ್ ಭಾಷೆಯಲ್ಲಿ, ನಾಣ್ಣುಡಿಯು ಈ ರೀತಿಯದ್ದಾಗಿದೆ, “ಯಾಲ್ಲಾ ಮೊ ಕೊ ಡೆಫ್” (ದೇವರು ಅದನ್ನು ಮಾಡಿದನು). ಮತ್ತು ಒಂದು ಡೋಗಾನ್ ಉಪಭಾಷೆಯಲ್ಲಿ, “ಆಮಾ ಬಿರೇ” (ದೇವರು ಅದನ್ನು ಆಗಿಸಿದನು) ಎಂದು ಅವರು ಹೇಳುತ್ತಾರೆ.
ಈ ಅಭಿವ್ಯಕ್ತಿಗಳಿಗೆ ಇತರ ದೇಶಗಳಲ್ಲಿ ಅವುಗಳ ಪಡಿರೂಪಗಳಿವೆ. “ಅವನ ಸಮಯವು ಬಂದಿತ್ತು” ಮತ್ತು “ಅದು ದೇವರ ಚಿತ್ತವಾಗಿತ್ತು” ಎಂಬಂತಹ ಗುರಿನುಡಿಗಳು, ಮರಣ ಅಥವಾ ದುರಂತವು ತಾಕುವಾಗಲೆಲ್ಲ ಅನೇಕ ವೇಳೆ ಕೇಳಲ್ಪಡುತ್ತವೆ. ಪಶ್ಚಿಮ ಆಫ್ರಿಕದಲ್ಲಿ, “ಆಡುವುದು ಮಾಡುವುದು ನಮ್ಮ ಇಚ್ಛೆ, ಆಗುವುದು ಹೋಗುವುದು ದೈವೇಚ್ಛೆ” ಎಂಬಂತಹ ಗುರಿನುಡಿಗಳು, ಸಾರ್ವಜನಿಕ ಸಾಗಣೆಯ ವಾಹನಗಳ ಮೇಲೆ ಸಾಮಾನ್ಯವಾಗಿ ಪೆಯಿಂಟ್ ಮಾಡಲ್ಪಡುತ್ತವೆ ಮತ್ತು ಅಂಗಡಿಗಳಲ್ಲಿ ಗುರುತುಗಳಂತೆ ಅಂಟಿಸಲ್ಪಡುತ್ತವೆ. ಅನೇಕರಿಗೆ ಅವು ಕೇವಲ ರೂಪಕಗಳಾಗಿವೆ. ಆದರೆ, ಅನೇಕಾವರ್ತಿ ಅವು ಅದೃಷ್ಟವಾದದಲ್ಲಿ ಆಳವಾಗಿ ಬೇರೂರಿರುವ ವಿಶ್ವಾಸವನ್ನು ಪ್ರತಿಬಿಂಬಿಸುತ್ತವೆ.
ಅದೃಷ್ಟವಾದ ಎಂದರೇನು? ದ ವರ್ಲ್ಡ್ ಬುಕ್ ಎನ್ಸೈಕ್ಲೊಪೀಡಿಯ ಅದನ್ನು “ಮಾನವರು ನಿಯಂತ್ರಿಸಲಸಾಧ್ಯವಾದ ಶಕ್ತಿಗಳಿಂದ ಘಟನೆಗಳು ನಿಷ್ಕರ್ಷಿಸಲ್ಪಟ್ಟಿವೆ ಎಂಬ ನಂಬಿಕೆ” ಎಂಬುದಾಗಿ ವಿಶದೀಕರಿಸುತ್ತದೆ. ಈ ‘ಶಕ್ತಿಗಳು’ ಏನಾಗಿವೆ? ವ್ಯಕ್ತಿಯೊಬ್ಬನ ಅದೃಷ್ಟವು, ತನ್ನ ಜನನದಲ್ಲಿ ನಕ್ಷತ್ರಗಳ ವಿನ್ಯಾಸದಿಂದ ಬಲವಾಗಿ ಪ್ರಭಾವಿಸಲ್ಪಟ್ಟಿತ್ತೆಂದು ಸಾವಿರಾರು ವರ್ಷಗಳ ಹಿಂದೆ ಬಬಿಲೋನ್ಯರು ನಂಬಿದರು. (ಹೋಲಿಸಿ ಯೆಶಾಯ 47:13.) ಅದೃಷ್ಟವು, ಜೀವನದ ಎಳೆಯನ್ನು ಹೊಸೆದ, ಅಳತೆ ಮಾಡಿ, ಕತ್ತರಿಸಿದ ಮೂರು ಶಕ್ತಿಶಾಲಿ ದೇವತೆಗಳ ಕೈಗಳಲ್ಲಿದ್ದವೆಂದು ಗ್ರೀಕರು ನಂಬಿದರು. ಹಾಗಿದ್ದರೂ, ಸ್ವತಃ ದೇವರೇ ಒಬ್ಬ ವ್ಯಕ್ತಿಯ ಅದೃಷ್ಟವನ್ನು ನಿರ್ಧರಿಸುತ್ತಾನೆಂಬ ಕಲ್ಪನೆಯನ್ನು ಪ್ರಾರಂಭಿಸಿದವರು ಕ್ರೈಸ್ತಪ್ರಪಂಚದ ದೇವತಾ ಶಾಸ್ತ್ರಜ್ಞರೇ!
ಉದಾಹರಣೆಗೆ, “ಸಂತ” ಅಗಸ್ಟೀನನು, ಜೋಯಿಸರ “ತಪ್ಪಾದ ಹಾಗೂ ಅಹಿತಕಾರಕ ಅಭಿಪ್ರಾಯಗಳನ್ನು” ತಿರಸ್ಕರಿಸಿದನು. ಇನ್ನೊಂದು ಕಡೆಯಲ್ಲಿ ಅವನು ವಾದಿಸಿದ್ದೇನೆಂದರೆ, “ದೇವರು ಅಸ್ತಿತ್ವದಲ್ಲಿದ್ದಾನೆಂದು ಒಪ್ಪಿಕೊಳ್ಳುವುದು, ಮತ್ತು ಅದೇ ಸಮಯದಲ್ಲಿ ಆತನಿಗೆ ಭವಿಷ್ಯತ್ತಿನ ಸಂಗತಿಗಳ ಮುನ್ನರಿವಿದೆ ಎಂಬುದನ್ನು ಅಲ್ಲಗಳೆಯುವುದು, ಅತಿ ಸ್ಫುಟವಾದ ಮೂರ್ಖತನವಾಗಿದೆ.” ದೇವರು ನಿಜವಾಗಿಯೂ ಸರ್ವಶಕ್ತನಾಗಿರಬೇಕಾದಲ್ಲಿ, ಆತನು “ಸಕಲವನ್ನು ಮೊದಲೇ ವಿಧಿಸಿ, ಸರ್ವವನ್ನು ಅವು ಸಂಭವಿಸುವ ಮೊದಲೇ ತಿಳಿದಿರ”ಬೇಕೆಂಬುದನ್ನು ಅವನು ಪ್ರತಿಪಾದಿಸಿದನು. ಆದಾಗಲೂ, ದೇವರಿಗೆ ಎಲ್ಲಾ ವಿಷಯಗಳ ಮುನ್ನರಿವು ಇದೆಯಾದರೂ, ಮಾನವರು ಇಚ್ಛಾಸ್ವಾತಂತ್ರ್ಯವನ್ನು ಇನ್ನೂ ಪಡೆದಿರುತ್ತಾರೆಂದು ಅಗಸ್ಟೀನ್ ಭಾವೋದ್ರಿಕ್ತನಾಗಿ ವಾದಿಸಿದನು.—ದ ಸಿಟಿ ಆಫ್ ಗಾಡ್, Vನೆಯ ಪುಸ್ತಕ, 7-9 ಅಧ್ಯಾಯಗಳು.
ಶತಮಾನಗಳ ನಂತರ, ಪ್ರಾಟೆಸ್ಟೆಂಟ್ ದೇವತಾ ಶಾಸ್ತ್ರಜ್ಞನಾದ ಜಾನ್ ಕ್ಯಾಲ್ವಿನ್, ಕೆಲವರು “ಸ್ವರ್ಗೀಯ ರಾಜ್ಯದ ಮಕ್ಕಳಾಗಿಯೂ ಬಾಧ್ಯಸ್ಥರಾಗಿಯೂ ಇರಲು [ದೇವರ ಮೂಲಕ] ಪೂರ್ವ ನಿರ್ಣಯಿಸಲ್ಪಟ್ಟಿರು”ವಾಗ, ಇತರರು “ಆತನ ಕೋಪದ ಗ್ರಾಹಕರು” ಆಗಿರಲು ಪೂರ್ವ ನಿರ್ಣಯಿಸಲ್ಪಟ್ಟಿದ್ದಾರೆಂದು ವಾದಿಸುತ್ತಾ, ಆ ವಿಚಾರವನ್ನು ಇನ್ನಷ್ಟು ವಿಕಸಿಸಿದನು!
ಇಂದು, ಲೋಕದ ಅನೇಕ ಭಾಗಗಳಲ್ಲಿ ಅದೃಷ್ಟದಲ್ಲಿನ ನಂಬಿಕೆಯು ಗಂಭೀರವಾಗಿ ತೆಗೆದುಕೊಳ್ಳಲ್ಪಡುತ್ತದೆ. ಪಶ್ಚಿಮ ಆಫ್ರಿಕದಲ್ಲಿರುವ ಊಸ್ಮಾನ್ ಎಂಬ ಒಬ್ಬ ಯುವ ಪುರುಷನ ಅನುಭವವನ್ನು ಪರಿಗಣಿಸಿರಿ. ಅವನು ತನ್ನ ಶಾಲೆಯಲ್ಲಿನ ಅತ್ಯುತ್ತಮ ವಿದ್ಯಾರ್ಥಿಗಳಲ್ಲಿ ಒಬ್ಬನಾಗಿದ್ದನು, ಆದರೆ ಅವನು ತನ್ನ ಅಂತಿಮ ಪರೀಕ್ಷೆಗಳನ್ನು ಬರೆದಾಗ ಅನುತ್ತೀರ್ಣನಾದನು! ಇದು, ಅದೇ ತರಗತಿಯನ್ನು ಮತ್ತೊಂದು ವರ್ಷ ಹಾಜರಾಗುವುದನ್ನು ಮಾತ್ರವಲ್ಲ, ತನ್ನ ಕುಟುಂಬ ಹಾಗೂ ಮಿತ್ರರ ಸಮ್ಮುಖದಲ್ಲಿ ಪೇಚಾಟಕ್ಕೊಳಗಾಗುವುದನ್ನೂ ಅರ್ಥೈಸಿತು. ಅದು ದೇವರ ಚಿತ್ತವಾಗಿತ್ತೆಂದು ಹೇಳುವ ಮೂಲಕ ಒಬ್ಬ ಮಿತ್ರನು ಅವನನ್ನು ಸಂತೈಸಲು ಪ್ರಯತ್ನಿಸಿದನು. ಊಸ್ಮಾನನ ತಾಯಿ ತದ್ರೀತಿಯಲ್ಲಿ ಅವನ ಅಸಫಲತೆಗಾಗಿ ಅದೃಷ್ಟವನ್ನು ದೂಷಿಸಿದಳು.
ಆರಂಭದಲ್ಲಿ, ಸಹಾನುಭೂತಿಯನ್ನು ತೋರಿಸುವ ಅವರ ಪ್ರಯತ್ನಗಳನ್ನು ಸ್ವೀಕರಿಸಲು ಊಸ್ಮಾನ್ ಸಂತೋಷಿಸಿದನು. ಎಷ್ಟೆಂದರೂ, ಅವನ ಅಸಫಲತೆಯು ನಿಜವಾಗಿಯೂ ದೇವರ ಚಿತ್ತವಾಗಿದ್ದಲ್ಲಿ, ಅದನ್ನು ತಡೆಯಲು ಅವನು ಏನನ್ನೂ ಮಾಡಸಾಧ್ಯವಿರಲಿಲ್ಲ. ಆದರೆ ಅವನ ತಂದೆಯು ವಿಷಯಗಳನ್ನು ಭಿನ್ನವಾಗಿ ಅವಲೋಕಿಸಿದನು. ಪರೀಕ್ಷೆಗಳಲ್ಲಿ ಅನುತ್ತೀರ್ಣನಾಗಿದ್ದು—ದೇವರದ್ದಲ್ಲ—ಅವನ ಸ್ವಂತ ತಪ್ಪಾಗಿತ್ತೆಂದು ಅವನು ಊಸ್ಮಾನನಿಗೆ ಹೇಳಿದನು. ತನ್ನ ವಿದ್ಯಾಭ್ಯಾಸವನ್ನು ಅಲಕ್ಷಿಸಿದ್ದ ಕಾರಣದಿಂದಲೇ ಊಸ್ಮಾನ್ ಅನುತ್ತೀರ್ಣನಾದನು.
ಅದೃಷ್ಟದಲ್ಲಿದ್ದ ತನ್ನ ನಂಬಿಕೆಯು ಕದಲಿಸಲ್ಪಟ್ಟ ಕಾರಣ, ಸ್ವತಃ ವಿಷಯಗಳ ತನಿಖೆಮಾಡಲು ಊಸ್ಮಾನ್ ನಿರ್ಧರಿಸಿದನು. ಮುಂದಿನ ಲೇಖನವನ್ನು ಪರಿಗಣಿಸುವ ಮೂಲಕ ನೀವೂ ಅದನ್ನೇ ಮಾಡುವಂತೆ ನಾವು ನಿಮ್ಮನ್ನು ಆಮಂತ್ರಿಸುತ್ತೇವೆ.