ಶಾಂತಿಯ ನಿಜ ಸಂದೇಶವಾಹಕರು ಯಾರಾಗಿದ್ದಾರೆ?
ಶಾಂತಿಯ ಸಂದೇಶವಾಗಿ ಕಂಡುಬಂದ ಒಂದು ವಿಷಯವನ್ನು, ಮೇ 31, 1996ರಂದು ವಾರ್ತಾ ಮಾಧ್ಯಮಗಳು ಘೋಷಿಸಿದವು. ಹಿಂದಿನ ದಿನ, ಇನ್ನೇನು ಇಸ್ರಾಯೇಲಿನ ಪ್ರಧಾನ ಮಂತ್ರಿಯಾಗಲಿದ್ದ ಬೆನ್ಯಾಮೀನ್ ನೆತಾನ್ಯಾಹೂ, “ಇಸ್ರಾಯೇಲ್ ದೇಶ ಮತ್ತು ಪಲೆಸ್ತೀನ್ಯರು ಕೂಡಿದ ಅದರ ಎಲ್ಲ ನೆರೆಹೊರೆಯ ದೇಶಗಳ ಮಧ್ಯೆ, ಶಾಂತಿ ಕಾರ್ಯಗತಿಯ ಭದ್ರತೆ ಜೊತೆಗೂಡಿರುವ ಶಾಂತಿಯ ಮುಂದುವರಿಕೆಗೆ ಆಳವಾಗಿ ಬದ್ಧರಾಗಿದ್ದಾರೆ” ಎಂಬ ಅಧಿಕೃತ ಹೇಳಿಕೆ ಹೊರಡಿಸಲ್ಪಟ್ಟಿತು.
ನೆತಾನ್ಯಾಹೂವಿನ ವ್ಯಾಪಕವಾಗಿ ಪ್ರಕಟಿಸಲ್ಪಟ್ಟ ಆಯ್ಕೆಯು, ಮಧ್ಯಪೂರ್ವದಲ್ಲಿ ಶಾಂತಿ ಒಂದು ಸ್ವಪ್ನಕ್ಕಿಂತ ಹೆಚ್ಚಿನದ್ದಾಗಬಹುದೊ ಎಂದು ಅನೇಕರು ಕುತೂಹಲಪಡುವಂತೆ ಮಾಡಿತು. ಹಾಗಿದ್ದರೆ, ಇತರ ರಾಷ್ಟ್ರಗಳು ತಮ್ಮ ತಾರತಮ್ಯಗಳನ್ನು ಮರೆತುಬಿಟ್ಟು, ಇಸ್ರಾಯೇಲ್ ದೇಶವನ್ನು ಅನುಸರಿಸಸಾಧ್ಯವಿತ್ತೋ?
ನಿಜವಾಗಿಯೂ, ಶಾಂತಿಯನ್ನು ಗಳಿಸುವುದಕ್ಕಿಂತ ಅದನ್ನು ವಾಗ್ದಾನಿಸುವುದು ಹೆಚ್ಚು ಸುಲಭವಾಗಿದೆ. ಇದನ್ನು ತಿಳಿದ ಅನೇಕರು ಸಂದೇಹಪಡುವವರಾದರು. ಪತ್ರಕರ್ತ ಹೆಮಿ ಶಾಲೆವ್ ತಿಳಿಸಿದಂತೆ, “ಇಸ್ರಾಯೇಲಿನ ಅರ್ಧದಷ್ಟು ಜನರಿಗೆ ಬಿಡುಗಡೆಯು ಸಮೀಪವಿದೆ ಎಂಬ ಅನಿಸಿಕೆಯಿದೆ ಮತ್ತು ಉಳಿದ ಅರ್ಧಾಂಶದಷ್ಟು ಜನರು, ಇಸ್ರಾಯೇಲ್ ಒಂದು ಯಾತನೆಯ, ಬಿಡುಗಡೆ ಇಲ್ಲದ ಭಯಂಕರ ಸನ್ನಿವೇಶದಲ್ಲಿ ಸಿಕ್ಕಿಬಿದ್ದಿದೆ ಎಂದು ನಂಬುತ್ತಾರೆ.” ಸಾರಾಂಶವಾಗಿ, ಅವರು ತಿಳಿಸಿದ್ದು: “ಕೆಲವರು ಉಲ್ಲಾಸಿಸುತ್ತಾರೆ; ಇತರರು ಅಳುತ್ತಾರೆ.”
ದುಃಖಕರವಾಗಿ, ಮಾನವನು ಶಾಂತಿಯನ್ನು ತರಲು ಪ್ರಯತ್ನಿಸುವಾಗ, ಆಗುವುದು ಇದೇ. ಒಬ್ಬ ಮುಖಂಡನ ಹಾಗೂ ಅವನ ಬೆಂಬಲಿಗರ ಜಯವು, ವಿರೋಧಿ ಗುಂಪಿಗೆ ಸೋಲಿನ ಅರ್ಥದಲ್ಲಿದೆ. ಅತೃಪ್ತಿಯು ಭ್ರಮನಿರಸನಕ್ಕೆ ನಡಿಸುತ್ತದೆ, ಮತ್ತು ಭ್ರಮನಿರಸನವು ಅನೇಕ ವೇಳೆ ದಂಗೆಗೆ ನಡಿಸುತ್ತದೆ. ಮಧ್ಯಪೂರ್ವ, ಲ್ಯಾಟಿನ್ ಅಮೆರಿಕ, ಪ್ರಾಚ್ಯ ಯೂರೋಪ್, ಅಥವಾ ಇನ್ನೆಲ್ಲಿಯೇ ಆಗಲಿ, ಶಾಂತಿಗಾಗಿರುವ ಮಾನವಕುಲದ ಪ್ರಯತ್ನಗಳು ತೀರ ಭ್ರಮೆಯದ್ದಾಗಿವೆ.
ನಿಜ ಶಾಂತಿ ಸಮೀಪವಿದೆ!
ಮಧ್ಯಪೂರ್ವದಲ್ಲಿನ ಶಾಂತಿಯು, ಒಂದು ಅತ್ಯಾಸಕ್ತಿಯ ವಾರ್ತಾ ವಿಷಯವಾಗಿದ್ದ ಸಮಯದಲ್ಲಿ, ಶಾಂತಿಯ ಇನ್ನೊಂದು ಸಂದೇಶವು ಕೇಳಿಬಂತು. ಇದೊಂದು ವ್ಯಾಪಕವಾಗಿ ಪ್ರಕಟಿಸಲ್ಪಟ್ಟ ರಾಜಕೀಯ ಭಾಷಣವಾಗಿರಲಿಲ್ಲ; ಅಥವಾ ಅದು ರಾಷ್ಟ್ರಗಳ ಮಧ್ಯೆ ಒಂದು ಶಾಂತಿ ಒಪ್ಪಂದವಾಗಿರಲಿಲ್ಲ. ಬದಲಾಗಿ, ಈ ಸಂದೇಶವು ದೇವರ ರಾಜ್ಯದ ಮೂಲಕವಾಗಿ ಮಾತ್ರವೇ ಬರುವಂತಹ ಶಾಂತಿಯ ಕುರಿತು ಘೋಷಿಸಿತು. ಈ ಸಂದೇಶವು ಎಲ್ಲಿ ಕೇಳಿಬಂತು? ಲೋಕವ್ಯಾಪಕವಾಗಿ 1996/97ರಲ್ಲಿ ನಡೆಸಲ್ಪಡುತ್ತಿರುವ, ಯೆಹೋವನ ಸಾಕ್ಷಿಗಳ 1,900ಕ್ಕಿಂತಲೂ ಹೆಚ್ಚು “ದೈವಿಕ ಶಾಂತಿಯ ಸಂದೇಶವಾಹಕರು” ಜಿಲ್ಲಾ ಅಧಿವೇಶನಗಳಲ್ಲಿಯೇ.
ಈ ಅಧಿವೇಶನಗಳಲ್ಲಿ, ಯಾವುದೇ ಮಾನವ ಸರಕಾರವು ನಿಜ ಶಾಂತಿ ಮತ್ತು ಭದ್ರತೆಯನ್ನು ತರಸಾಧ್ಯವಿಲ್ಲವೆಂದು ಸ್ಪಷ್ಟೀಕರಿಸಲಾಯಿತು. ಏಕೆ? ಏಕೆಂದರೆ, ಇದು ದಿನನಿತ್ಯ ನಮ್ಮಿಂದ ಶಾಂತಿಯನ್ನು ಕಸಿದುಕೊಳ್ಳುವಂತಹ ವಿಷಯಗಳನ್ನು ಅಂತ್ಯಗೊಳಿಸುವುದನ್ನು ಕೇಳಿಕೊಳ್ಳುತ್ತದೆ. ಪ್ರತಿ ಮುಂಜಾನೆ ಯುದ್ಧದ ಅಥವಾ ಹಿಂಸಾಚಾರದ ಭಯವಿಲ್ಲದೆ ಏಳುವುದೇ, ನಿಜ ಶಾಂತಿಯ ಅರ್ಥ. ಇದರ ಅರ್ಥ, ಅಪರಾಧವಾಗಲಿ, ಬಾಗಿಲುಗಳಿಗೆ ಬೀಗಗಳಾಗಲಿ, ಬೀದಿಗಳಲ್ಲಿ ನಡೆಯುವುದರ ಭಯವಾಗಲಿ, ಛಿದ್ರವಾದ ಕುಟುಂಬಗಳಾಗಲಿ ಇನ್ನಿರುವುದಿಲ್ಲ. ಭೂಮಿಯ ಮೇಲಿನ ಯಾವ ಸರಕಾರವು ಆ ಎಲ್ಲಾ ವಿಷಯಗಳನ್ನು ಪೂರೈಸಬಲ್ಲದು? ವಾಸ್ತವವಾಗಿ, ಭೂಮಿಯ ಮೇಲಿನ ಯಾವ ಸರಕಾರವು ಅದನ್ನು ವಾಗ್ದಾನಿಸುವಷ್ಟು ಧೈರ್ಯವನ್ನಾದರೂ ಮಾಡೀತು?
ಹಾಗಿದ್ದರೂ, ದೇವರ ರಾಜ್ಯವು ಇಂತಹ ವಿಷಯಗಳನ್ನು ತರಬಲ್ಲದು ಹಾಗೂ ತರುವುದು. ಬೈಬಲ್ ವಾಗ್ದಾನಿಸುವುದು: “ಇಗೋ, ದೇವರ ನಿವಾಸವು ಮನುಷ್ಯರಲ್ಲಿ ಅದೆ; ಆತನು ಅವರೊಡನೆ ವಾಸಮಾಡುವನು, ಅವರು ಆತನಿಗೆ ಪ್ರಜೆಗಳಾಗಿರುವರು; ದೇವರು ತಾನೇ ಅವರ ಸಂಗಡ ಇರುವನು, ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.” (ಪ್ರಕಟನೆ 21:3, 4) ಕಷ್ಟಾನುಭವಿಸುತ್ತಿರುವ ಮಾನವಕುಲಕ್ಕೆ ಎಂತಹ ಬಿಡುಗಡೆಯನ್ನು ಇದು ತರುವುದು!
ಯೆಹೋವ ದೇವರ ವಾಗ್ದಾನವು ವ್ಯರ್ಥವಾದ ವಾಗ್ದಾನವಲ್ಲ. ಬೈಬಲ್ ನಮಗೆ ಆಶ್ವಾಸನೆ ಕೊಡುವುದು: “ದೇವರು ಮನುಷ್ಯನಂತೆ ಎರಡು ಮಾತಿನವನಲ್ಲ; ಮಾನವನಂತೆ ಮನಸ್ಸನ್ನು ಬೇರೆಮಾಡಿಕೊಳ್ಳುವವನಲ್ಲ. ತಾನು ಹೇಳಿದ ಮೇರೆಗೆ ನಡೆಯುವದಿಲ್ಲವೋ; ಮಾತುಕೊಟ್ಟನಂತರ ನೆರವೇರಿಸುವದಿಲ್ಲವೋ.” (ಅರಣ್ಯಕಾಂಡ 23:19) ಹೌದು, ದೇವರ ಪಕ್ಷದಲ್ಲಿ ನಿಲುವನ್ನು ತೆಗೆದುಕೊಳ್ಳುವವರೆಲ್ಲರ ಆಶೀರ್ವಾದಕ್ಕಾಗಿ—ಆತನು ಏನನ್ನು ವಾಗ್ದಾನಿಸಿದ್ದಾನೋ, ಅದು ನೆರವೇರುವುದು.
ದೇವರ ಶಾಂತಿಯ ಸಂದೇಶವಾಹಕರು
ಯೆಹೋವನ ಸಾಕ್ಷಿಗಳು ದೇವರ ರಾಜ್ಯದ ಹುರುಪಿನ ಸಾರುವಿಕೆಗೆ ಸುಪ್ರಸಿದ್ಧರಾಗಿದ್ದಾರೆ. ಪ್ರತಿ ವರುಷ ಅವರು ಬೈಬಲಿನ ಹುರಿದುಂಬಿಸುವ ಸಂದೇಶವನ್ನು ಇತರರಿಗೆ ಸಾರುವುದರಲ್ಲಿ, ಒಟ್ಟು 100 ಕೋಟಿಗಿಂತಲೂ ಹೆಚ್ಚು ತಾಸುಗಳನ್ನು ಕಳೆಯುತ್ತಾರೆ. ಇದು, “ಇದಲ್ಲದೆ ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವದು,” ಎಂಬ ಯೇಸುವಿನ ಮಾತುಗಳ ನೆರವೇರಿಕೆಯಲ್ಲಿದೆ. (ಮತ್ತಾಯ 24:14) ಸಾಕ್ಷಿಗಳು ತರುವ ಸಂದೇಶವು ವಾಸ್ತವವಾಗಿ “ಸುವಾರ್ತೆ”ಯಾಗಿದೆ, ಏಕೆಂದರೆ ಅದು ಮಾನವಕುಲದ ಏಕಮಾತ್ರ ನಿರೀಕ್ಷೆಯಾಗಿ ದೇವರ ಸ್ವರ್ಗೀಯ ರಾಜ್ಯವನ್ನು ಘೋಷಿಸುತ್ತದೆ. ಮತ್ತು ಭವಿಷ್ಯತ್ತಿಗಾಗಿ ಇದು ಎಂತಹ ಒಂದು ದೃಢ ನಿರೀಕ್ಷೆಯಾಗಿದೆ!
ಈಗಲೂ ದೇವರ ರಾಜ್ಯವು ತನ್ನ ಪ್ರಜೆಗಳಲ್ಲಿ ನೈಜವಾದ ಶಾಂತಿಯ ಬಂಧವನ್ನೂ, ಸಹೋದರ ಪ್ರೀತಿಯನ್ನೂ ಬೆಳೆಸುತ್ತಿದೆ. ಯೇಸು ಹೀಗೆ ಹೇಳಿದನು: “ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು.” (ಯೋಹಾನ 13:35) ಸತ್ಯ ಕ್ರೈಸ್ತತ್ವದ ಮೂಲ ಆವಶ್ಯಕತೆಯಾದ ಇದಕ್ಕೆ ಹೊಂದಿಕೆಯಾಗಿ ಜೀವಿಸಲು ಯೆಹೋವನ ಸಾಕ್ಷಿಗಳು ಪ್ರಯತ್ನಪಡುತ್ತಾರೆ. ಇದರ ಫಲಿತಾಂಶವಾಗಿ, ಯೆಹೂದ್ಯರನ್ನು ಹಾಗೂ ಅರಬರನ್ನು, ಕ್ರೊಏಷಿಯದವರನ್ನು ಹಾಗೂ ಸರ್ಬಿಯದವರನ್ನು, ಹೂಟೂ ಹಾಗೂ ಟೂಟ್ಸಿಗಳನ್ನು ಐಕ್ಯಗೊಳಿಸುವ ಒಂದು ಅದ್ಭುತಕರ ಸಹೋದರತ್ವವು ಅವರದ್ದಾಗಿದೆ. ಮಾನವಕುಲದ ಅಧಿಕಾಂಶ ಜನರು ಕೇವಲ ಕನಸುಕಾಣಬಹುದಾದ ಈ ಶಾಂತಿಯು, ಈಗ ಲೋಕದಾದ್ಯಂತ ಲಕ್ಷಾಂತರ ಯೆಹೋವನ ಸಾಕ್ಷಿಗಳ ಸ್ವತ್ತಾಗಿದೆ.
“ದೈವಿಕ ಶಾಂತಿಯ ಸಂದೇಶವಾಹಕರು” ಜಿಲ್ಲಾ ಅಧಿವೇಶನದ ಕಾರ್ಯಕ್ರಮದಲ್ಲಿ, ಬೈಬಲಿನ ಮೂಲತತ್ವಗಳಿಗೆ ಅನುಸಾರವಾಗಿ ಜೀವಿಸುತ್ತಾ ಇರುವ, ಹಾಗೂ ದೇವರ ರಾಜ್ಯದ ಸುವಾರ್ತೆಯನ್ನು ಸಾರುತ್ತಾ ಇರುವ ಉತ್ತೇಜನವನ್ನು ಎತ್ತಿತೋರಿಸಲಾಯಿತು. ಲಕ್ಷಾಂತರ ಜನರು ಆನಂದಿಸುತ್ತಿರುವ ಉತ್ಸಾಹಕರವಾದ ಮೂರು ದಿನದ ಅಧಿವೇಶನದ ಮುಂದಿನ ವರದಿಯನ್ನು ನೀವು ಓದುವಂತೆ ನಾವು ಆಮಂತ್ರಿಸುತ್ತೇವೆ.