ನಿಮ್ಮ ಮಗು ಬೋರ್ಡಿಂಗ್ ಸ್ಕೂಲಿಗೆ ಹೋಗಬೇಕೋ?
ವಿಕಸಿಸುತ್ತಿರುವ ದೇಶವೊಂದರಲ್ಲಿನ ಒಂದು ಚಿಕ್ಕ ಪಟ್ಟಣದಲ್ಲಿ ನೀವು ಜೀವಿಸುತ್ತಿದ್ದೀರೆಂದು ಭಾವಿಸಿಕೊಳ್ಳಿ. ಪ್ರೈಮರಿ ಶಾಲೆಯಲ್ಲಿ ಓದುತ್ತಿರುವ ಹಲವಾರು ಮಕ್ಕಳು ನಿಮಗಿದ್ದಾರಾದರೂ, 12ರ ಪ್ರಾಯದಲ್ಲಿ ಅವರು ಪ್ರೌಢ ಶಾಲೆಗೆ ತೇರ್ಗಡೆಯಾಗುವರು. ನಿಮ್ಮ ಕ್ಷೇತ್ರದಲ್ಲಿ ಪ್ರೌಢ ಶಾಲೆಗಳು ತೀರ ಕಿಕ್ಕಿರಿದಿವೆ, ಆವಶ್ಯಕವಿರುವ ಸಾಮಾನು ಸರಂಜಾಮುಗಳಲ್ಲಿ ಕೊರತೆಯುಳ್ಳವುಗಳಾಗಿವೆ, ನ್ಯೂನ ಸಿಬ್ಬಂದಿ ವರ್ಗವನ್ನೂ ಒಳಗೊಂಡಿವೆ. ಕೆಲವೊಮ್ಮೆ ಮುಷ್ಕರಗಳು ವಾರಗಳು ಇಲ್ಲವೇ ಒಂದೊಂದು ಸಲ ತಿಂಗಳುಗಳ ತನಕ ಶಾಲೆಗಳನ್ನು ಮುಚ್ಚಿಬಿಡುತ್ತವೆ.
ನಗರದಲ್ಲಿರುವ ಒಂದು ಬೋರ್ಡಿಂಗ್ ಸ್ಕೂಲನ್ನು ವರ್ಣಿಸುವ ಆಕರ್ಷಕವಾದೊಂದು ಬ್ರೋಷರನ್ನು ಯಾರೋ ಒಬ್ಬರು ನಿಮಗೆ ನೀಡುತ್ತಾರೆ. ಸುಸಜ್ಜಿತ ತರಗತಿಗಳು, ಪ್ರಯೋಗಶಾಲೆಗಳು ಹಾಗೂ ಗ್ರಂಥಾಲಯಗಳಲ್ಲಿ ಓದುತ್ತಿರುವ, ಸಂತುಷ್ಟ, ನೀಟಾಗಿ ಉಡುಗೆತೊಟ್ಟಿರುವ ವಿದ್ಯಾರ್ಥಿಗಳ ಚಿತ್ರಗಳನ್ನು ನೀವು ನೋಡುತ್ತೀರಿ. ಆ ವಿದ್ಯಾರ್ಥಿಗಳು ಕಂಪ್ಯೂಟರುಗಳನ್ನು ಉಪಯೋಗಿಸುತ್ತಾರೆ ಮತ್ತು ಸ್ವಚ್ಛವಾದ, ಆಕರ್ಷಕ ಹಾಸ್ಟೆಲ್ ಕೋಣೆಗಳಲ್ಲಿ ವಿಶ್ರಮಿಸುತ್ತಾರೆ. ಈ ಶಾಲೆಯ ಗುರಿಗಳಲ್ಲಿ ಒಂದು, “ವಿದ್ಯಾರ್ಥಿಗಳು ಪಡೆದುಕೊಳ್ಳಲು ಸಮರ್ಥರಾಗಿರುವ ಅತ್ಯಂತ ಉಚ್ಚಮಟ್ಟದ ವ್ಯಾಸಂಗವನ್ನು ಗಳಿಸಿಕೊಳ್ಳಲು” ಅವರಿಗೆ ಸಹಾಯಮಾಡುವುದೇ ಆಗಿದೆ ಎಂಬುದಾಗಿ ನೀವು ಓದುತ್ತೀರಿ. ನೀವು ಮುಂದೆ ಹೀಗೆ ಓದುತ್ತೀರಿ: “ಸೌಜನ್ಯ, ಸಭ್ಯತೆ, ಹೆತ್ತವರಿಗೂ ಹಿರಿಯರಿಗೂ ಗೌರವ, ಸಹಕಾರ, ಸಹನೆ, ದಯೆ, ಪ್ರಾಮಾಣಿಕತೆ, ಹಾಗೂ ಸಮಗ್ರತೆಗೆ ಮಹತ್ತ್ವವು ಕೊಡಲ್ಪಡುವ ಕುಟುಂಬದೊಳಕ್ಕೆ ಸಾಮಾನ್ಯವಾಗಿ ನಿರೀಕ್ಷಿಸಲ್ಪಡುವಂಥದ್ದೇ ರೀತಿಯ ವರ್ತನಾ ಮಟ್ಟವನ್ನು ಪಾಲಿಸುವಂತೆ ಎಲ್ಲ ವಿದ್ಯಾರ್ಥಿಗಳಿಗೆ ಕೇಳಿಕೊಳ್ಳಲಾಗುತ್ತದೆ.”
ಮಂದಸ್ಮಿತನಾದ ಯುವಕನೊಬ್ಬನು, “ನನ್ನ ಹೆತ್ತವರು ನನಗೆ, ಅತ್ಯುತ್ತಮವಾದ ಶಾಲೆಗೆ ಹಾಜರಾಗುವ ಗಮನಾರ್ಹವಾದ ಸುಯೋಗವನ್ನು ನೀಡಿದರು” ಎಂದು ಹೇಳಿದ್ದಾಗಿ ಉಲ್ಲೇಖಿಸಲಾಗಿದೆ. “ಶಾಲೆಯು ಪ್ರಚೋದಿಸುವಂಥದ್ದೂ ಕುತೂಹಲ ಕೆರಳಿಸುವಂಥದ್ದೂ ಆಗಿದೆ. ಇಲ್ಲಿ ಕಲಿಕೆಯು ಸ್ವಾಭಾವಿಕವಾಗಿಯೇ ಬರುತ್ತದೆ” ಎಂಬುದಾಗಿ ಒಬ್ಬ ಹುಡುಗಿಯು ಹೇಳುತ್ತಾಳೆ. ಅಂಥ ಒಂದು ಬೋರ್ಡಿಂಗ್ ಸ್ಕೂಲಿಗೆ ನೀವು ನಿಮ್ಮ ಮಗನನ್ನೋ ಮಗಳನ್ನೋ ಕಳುಹಿಸುವಿರೋ?
ಶಿಕ್ಷಣ ಹಾಗೂ ಆತ್ಮಿಕತೆ
ಕಾಳಜಿವಹಿಸುವ ಎಲ್ಲ ಹೆತ್ತವರು, ತಮ್ಮ ಮಕ್ಕಳಿಗೆ ಜೀವಿತದಲ್ಲಿ ಒಂದು ಒಳ್ಳೆಯ ಆರಂಭವನ್ನು ನೀಡಲು ಬಯಸುತ್ತಾರೆ, ಹಾಗೂ ಆ ಗುರಿಯನ್ನು ಸಾಧಿಸಲು, ಆದ್ಯಂತವಾದ, ಸಮತೋಲನದ ಶಿಕ್ಷಣವು ಪ್ರಾಮುಖ್ಯ. ಅನೇಕ ವೇಳೆ ಐಹಿಕ ಶಿಕ್ಷಣವು, ಭಾವೀ ಉದ್ಯೋಗ ಅವಕಾಶಗಳಿಗೆ ದ್ವಾರಗಳನ್ನು ತೆರೆಯುತ್ತದೆ ಹಾಗೂ ಯುವ ಜನರು ತಮ್ಮನ್ನು ಮತ್ತು ತಮ್ಮ ಭಾವೀ ಕುಟುಂಬಗಳನ್ನು ಪೋಷಿಸಲು ಶಕ್ತರಾಗಿರುವ ವಯಸ್ಕರಾಗಿ ಬೆಳೆಯುವಂತೆ ಸಹಾಯಮಾಡುತ್ತದೆ.
‘ಒಂದು ಬೋರ್ಡಿಂಗ್ ಸ್ಕೂಲು, ಸ್ವಲ್ಪ ನೈತಿಕ ಮಾರ್ಗದರ್ಶನದೊಂದಿಗೆ ಒಂದು ಒಳ್ಳೆಯ ಶಿಕ್ಷಣವನ್ನು ನೀಡುತ್ತದಾದರೆ, ಅದರ ಪ್ರಯೋಜನವನ್ನು ಏಕೆ ಪಡೆದುಕೊಳ್ಳಬಾರದು?’ ಎಂದು ನೀವು ಕೇಳಬಹುದು. ಆ ಪ್ರಶ್ನೆಯನ್ನು ಉತ್ತರಿಸಲು, ತೀರ ಪ್ರಾಮುಖ್ಯವಾಗಿರುವ ಒಂದು ಅಂಶವನ್ನು ಕ್ರೈಸ್ತ ಹೆತ್ತವರು—ತಮ್ಮ ಮಕ್ಕಳ ಆತ್ಮಿಕ ಕ್ಷೇಮವನ್ನು—ಪ್ರಾರ್ಥನಾಪೂರ್ವಕವಾಗಿ ಪರಿಗಣಿಸಬೇಕು. ಯೇಸು ಕ್ರಿಸ್ತನು ಕೇಳಿದ್ದು: “ಒಬ್ಬ ಮನುಷ್ಯನು ಲೋಕವನ್ನೆಲ್ಲಾ ಸಂಪಾದಿಸಿಕೊಂಡರೂ ಪ್ರಾಣನಷ್ಟಪಟ್ಟರೆ ಅವನಿಗೆ ಪ್ರಯೋಜನವೇನು?” (ಮಾರ್ಕ 8:36) ಖಂಡಿತವಾಗಿಯೂ, ಇದರಲ್ಲಿ ಪ್ರಯೋಜನವೇ ಇಲ್ಲ. ಆದುದರಿಂದ, ಕ್ರೈಸ್ತ ಹೆತ್ತವರು ತಮ್ಮ ಮಕ್ಕಳನ್ನು ಬೋರ್ಡಿಂಗ್ ಸ್ಕೂಲಿಗೆ ಕಳುಹಿಸಲು ನಿರ್ಧರಿಸುವ ಮುನ್ನ, ಇದು ನಿತ್ಯಜೀವಕ್ಕಾಗಿರುವ ತಮ್ಮ ಮಕ್ಕಳ ಪ್ರತೀಕ್ಷೆಗಳ ಮೇಲೆ ಬೀರಬಹುದಾದ ಪರಿಣಾಮವನ್ನು ಪರಿಗಣಿಸಬೇಕು.
ಇತರ ವಿದ್ಯಾರ್ಥಿಗಳ ಪ್ರಭಾವ
ಕೆಲವು ಬೋರ್ಡಿಂಗ್ ಸ್ಕೂಲುಗಳು ಪರಿಣಾಮಕಾರಿಯಾದ ವ್ಯಾಸಂಗ ಮಟ್ಟಗಳನ್ನು ಪಡೆದಿರಬಹುದು. ಆದರೆ ಹಾಜರಾಗುವವರು ಇಲ್ಲವೇ ಅಂಥ ಶಾಲೆಗಳನ್ನು ನಡೆಸುತ್ತಿರುವ ಕೆಲವರ ನೈತಿಕ ಮಟ್ಟಗಳ ಕುರಿತಾಗಿ ಏನು? ಈ “ಕಡೇ ದಿವಸಗಳಲ್ಲಿ” ಧಾರಾಳವಾಗಿರುವ ಈ ರೀತಿಯ ಜನರ ಕುರಿತಾಗಿ ಅಪೊಸ್ತಲ ಪೌಲನು ಬರೆದುದು: “ಕಡೇ ದಿವಸಗಳಲ್ಲಿ ಕಠಿನಕಾಲಗಳು ಬರುವವೆಂಬದನ್ನು ತಿಳಿದುಕೋ. ಮನುಷ್ಯರು ಸ್ವಾರ್ಥಚಿಂತಕರೂ ಹಣದಾಸೆಯವರೂ ಬಡಾಯಿಕೊಚ್ಚುವವರೂ ಅಹಂಕಾರಿಗಳೂ ದೂಷಕರೂ ತಂದೆತಾಯಿಗಳಿಗೆ ಅವಿಧೇಯರೂ ಉಪಕಾರನೆನಸದವರೂ ದೇವಭಯವಿಲ್ಲದವರೂ ಮಮತೆಯಿಲ್ಲದವರೂ ಸಮಾಧಾನವಾಗದವರೂ ಚಾಡಿಹೇಳುವವರೂ ದಮೆಯಿಲ್ಲದವರೂ ಉಗ್ರತೆಯುಳ್ಳವರೂ ಒಳ್ಳೇದನ್ನು ಪ್ರೀತಿಸದವರೂ ದ್ರೋಹಿಗಳೂ ದುಡುಕಿನವರೂ ಉಬ್ಬಿಕೊಂಡವರೂ ದೇವರನ್ನು ಪ್ರೀತಿಸದೆ ಭೋಗಗಳನ್ನೇ ಪ್ರೀತಿಸುವವರೂ ಭಕ್ತಿಯ ವೇಷವಿದ್ದು ಅದರ ಬಲವನ್ನು ಬೇಡವೆನ್ನುವವರೂ ಆಗಿರುವರು; ಇಂಥವರ ಸಹವಾಸವನ್ನೂ ಮಾಡದಿರು.”—2 ತಿಮೊಥೆಯ 3:1-5.
ಬೈಬಲ್ ಮೂಲತತ್ತ್ವಗಳಿಗನುಸಾರವಾಗಿ ಜೀವಿಸುವ ವಿಷಯದಲ್ಲಿ ಯೆಹೋವನ ಸಾಕ್ಷಿಗಳಿಗೆ ಒಂದು ಪಂಥಾಹ್ವಾನವನ್ನೊಡ್ಡುತ್ತಾ, ಈ ನೈತಿಕ ಹಾಗೂ ಆತ್ಮಿಕ ಅವನತಿಯು ಭೌಗೋಲಿಕವಾಗಿದೆ. ಪ್ರತಿ ದಿನ ಮನೆಗೆ ಬರುವ ವಿದ್ಯಾರ್ಥಿಗಳು, ಲೌಕಿಕ ಶಾಲಾ ಸಹಪಾಠಿಗಳೊಂದಿಗಿನ ತಮ್ಮ ಸೀಮಿತ ಸಹವಾಸವು ಕೂಡ, ತಮ್ಮ ಆತ್ಮಿಕತೆಯ ಮೇಲೆ ಪ್ರಬಲವಾಗಿ ನಕಾರಾತ್ಮಕವಾದ ಪ್ರಭಾವವನ್ನು ಬೀರಸಾಧ್ಯವಿದೆ ಎಂಬುದನ್ನು ಕಂಡುಕೊಳ್ಳುತ್ತಾರೆ. ಆ ಪ್ರಭಾವವನ್ನು ಪ್ರತಿರೋಧಿಸುವುದು, ಸಾಕ್ಷಿ ಮಕ್ಕಳಿಗೆ—ತಮ್ಮ ಹೆತ್ತವರಿಂದ ದೈನಿಕ ಬೆಂಬಲ, ಸಲಹೆ, ಹಾಗೂ ಉತ್ತೇಜನವು ದೊರಕುವಾಗಲೂ—ನಿಜವಾಗಿಯೂ ಕಷ್ಟಸಾಧ್ಯವಾದ ವಿಷಯವಾಗಿರಸಾಧ್ಯವಿದೆ.
ಹಾಗಾದರೆ, ತಮ್ಮ ಮನೆಗಳಿಂದ ಬೋರ್ಡಿಂಗ್ ಸ್ಕೂಲುಗಳಿಗೆ ಕಳುಹಿಸಲ್ಪಟ್ಟಿರುವ ಮಕ್ಕಳ ಪರಿಸ್ಥಿತಿಯು ಏನಾಗಿದೆ? ಅವರು ಒಂಟಿಯಾಗಿ ಬಿಡಲ್ಪಟ್ಟು, ಪ್ರೀತಿಪರ ಹೆತ್ತವರ ಕ್ರಮವಾದ ಆತ್ಮಿಕ ಬೆಂಬಲದಿಂದ ವಂಚಿತರಾಗಿದ್ದಾರೆ. ಪೂರಾ 24 ಗಂಟೆಗಳನ್ನು ತಮ್ಮ ಸಹಪಾಠಿಗಳೊಂದಿಗೆ ಕಳೆಯುವುದರಿಂದ—ಬಹುಶಃ ಮನೆಯಲ್ಲಿ ವಾಸಿಸುವ ವಿದ್ಯಾರ್ಥಿಗಳಿಗಿಂತಲೂ ಹೆಚ್ಚಾಗಿ—ಸಮೂಹಕ್ಕೆ ಹೊಂದಿಕೊಳ್ಳುವುದಕ್ಕಿರುವ ಒತ್ತಡವು, ಅವರ ಎಳೆಯ ಹೃದಮನಗಳ ಮೇಲೆ ಒಂದು ಅತ್ಯಂತ ಶಕ್ತಿಯುತ ಪ್ರಭಾವವನ್ನು ಬೀರುತ್ತದೆ. ಒಬ್ಬ ವಿದ್ಯಾರ್ಥಿಯು ಹೇಳಿದ್ದು: “ನೈತಿಕವಾಗಿ, ಬೋರ್ಡಿಂಗ್ ಸ್ಕೂಲಿನಲ್ಲಿರುವ ವಿದ್ಯಾರ್ಥಿಯು, ಬೆಳಗ್ಗಿನಿಂದ ರಾತ್ರಿಯ ವರೆಗೆ ಗಂಡಾಂತರದಲ್ಲಿ ಜೀವಿಸುತ್ತಿರುತ್ತಾನೆ.”
ಪೌಲನು ಬರೆದುದು: “ಮೋಸಹೋಗಬೇಡಿರಿ; ದುಸ್ಸಹವಾಸವು ಸದಾಚಾರವನ್ನು ಕೆಡಿಸುತ್ತದೆ.” (1 ಕೊರಿಂಥ 15:33) ದೇವರನ್ನು ಸೇವಿಸದಿರುವವರೊಂದಿಗೆ ತಮ್ಮ ಮಕ್ಕಳು ನಿರಂತರ ಸಹವಾಸದಲ್ಲಿರುವಲ್ಲಿ, ಯಾವುದೇ ಆತ್ಮಿಕ ಹಾನಿಯನ್ನು ಅನುಭವಿಸುವುದಿಲ್ಲವೆಂದು ಆಲೋಚಿಸುವುದರಲ್ಲಿ ಕ್ರೈಸ್ತ ಹೆತ್ತವರು ಮೋಸಹೋಗಬಾರದು. ಸ್ವಲ್ಪ ಸಮಯಾವಧಿಯ ಅನಂತರ, ದೇವಭಕ್ತ ಮಕ್ಕಳು ಕ್ರೈಸ್ತ ಮೌಲ್ಯಗಳಿಗೆ ವಿಸಂವೇದಿಗಳಾಗಿ ಪರಿಣಮಿಸಿ, ಆತ್ಮಿಕ ವಿಷಯಗಳಿಗಾಗಿರುವ ಎಲ್ಲ ಗಣ್ಯತೆಯನ್ನು ಕಳೆದುಕೊಳ್ಳಸಾಧ್ಯವಿದೆ. ಕೆಲವೊಮ್ಮೆ ಇದು, ತಮ್ಮ ಮಕ್ಕಳು ಬೋರ್ಡಿಂಗ್ ಸ್ಕೂಲನ್ನು ಬಿಟ್ಟು ಹಿಂದಿರುಗುವ ತನಕವೂ ಹೆತ್ತವರಿಗೆ ಗೊತ್ತಾಗುವುದಿಲ್ಲ. ಆಗ ಅನೇಕ ವೇಳೆ ವಿಷಯಗಳನ್ನು ಸರಿಪಡಿಸುವುದಕ್ಕೆ ಸಮಯವು ಮೀರಿಹೋಗಿರುತ್ತದೆ.
ಕ್ಲೆಮಂಟ್ನ ಅನುಭವವು ಲಾಕ್ಷಣಿಕರೂಪದ್ದಾಗಿದೆ. ಅವನು ಹೇಳುವುದು: “ಬೋರ್ಡಿಂಗ್ ಸ್ಕೂಲಿಗೆ ಹೋಗುವ ಮುನ್ನ, ನನಗೆ ಸತ್ಯದ ಕುರಿತು ಒಲವಿತ್ತು ಹಾಗೂ ಸಹೋದರರೊಂದಿಗೆ ನಾನು ಕ್ಷೇತ್ರ ಸೇವೆಯಲ್ಲಿ ಪಾಲ್ಗೊಳ್ಳುತ್ತಿದ್ದೆ. ನಾನು ವಿಶೇಷವಾಗಿ ನಮ್ಮ ಕುಟುಂಬ ಬೈಬಲ್ ಅಭ್ಯಾಸದಲ್ಲಿ ಹಾಗೂ ಸಭಾ ಪುಸ್ತಕ ಅಭ್ಯಾಸದಲ್ಲಿ ಭಾಗವಹಿಸುವುದರಲ್ಲಿ ಆನಂದಿಸಿದೆ. ಆದರೂ, 14 ವರ್ಷ ಪ್ರಾಯದವನಾಗಿದ್ದಾಗ ಬೋರ್ಡಿಂಗ್ ಸ್ಕೂಲಿಗೆ ಹೋದ ಮೇಲೆ, ನಾನು ಸತ್ಯವನ್ನು ಸಂಪೂರ್ಣವಾಗಿ ಬಿಟ್ಟುಬಿಟ್ಟೆ. ಬೋರ್ಡಿಂಗ್ ಸ್ಕೂಲಿನಲ್ಲಿ ನಾನು ವ್ಯಯಿಸಿದ ಐದು ವರ್ಷಗಳಾದ್ಯಂತವೂ ನಾನೆಂದೂ ಕೂಟಗಳಿಗೆ ಹಾಜರಾಗಲಿಲ್ಲ. ದುಸ್ಸಹವಾಸದ ಪರಿಣಾಮವಾಗಿ ನಾನು, ಅಮಲೌಷಧಗಳು, ಧೂಮಪಾನ, ಹಾಗೂ ಮಿತಿಮೀರಿದ ಕುಡಿತದಲ್ಲಿ ಒಳಗೂಡಿದೆ.”
ಶಿಕ್ಷಕರ ಪ್ರಭಾವ
ಯಾವುದೇ ಶಾಲೆಯಲ್ಲಿ ಅಧಿಕಾರದ ತಮ್ಮ ಸ್ಥಾನವನ್ನು ದುರುಪಯೋಗಿಸುವ, ನೈತಿಕವಾಗಿ ಭ್ರಷ್ಟರಾದ ಶಿಕ್ಷಕರಿರಸಾಧ್ಯವಿದೆ. ಇತರರು ತಮ್ಮ ವಿದ್ಯಾರ್ಥಿಗಳನ್ನು ಲೈಂಗಿಕವಾಗಿ ಶೋಷಣೆಗೊಳಪಡಿಸುವಾಗ, ಕೆಲವರು ಕ್ರೂರಿಗಳೂ ನಿಷ್ಠುರರೂ ಆಗಿದ್ದಾರೆ. ಬೋರ್ಡಿಂಗ್ ಸ್ಕೂಲುಗಳಲ್ಲಿ ಇಂಥ ಶಿಕ್ಷಕರಿಂದ ಮಾಡಲ್ಪಡುವ ಕ್ರಿಯೆಗಳು, ವರದಿಸಲ್ಪಡದೇ ಹೋಗುವುದು ಹೆಚ್ಚು ಸಂಭವನೀಯ.
ಆದರೂ, ಹೆಚ್ಚಿನ ಶಿಕ್ಷಕರು, ಮಕ್ಕಳು ಸಮಾಜದ ಉಪಯುಕ್ತ ಸದಸ್ಯರಾಗಿ, ತಮ್ಮ ಸುತ್ತಲಿರುವ ಲೋಕಕ್ಕೆ ತಕ್ಕದ್ದಾಗಿ, ಸರಿಹೊಂದಿಕೊಳ್ಳುವವರಾಗಿ ಪರಿಣಮಿಸುವಂತೆ ಅವರನ್ನು ತರಬೇತುಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಾರೆ. ಆದರೆ ಇಲ್ಲಿ ಸಾಕ್ಷಿ ಮಕ್ಕಳಿಗೆ ಮತ್ತೊಂದು ಸಮಸ್ಯೆಯಿದೆ. ಲೋಕದ ಮೌಲ್ಯಗಳು ಯಾವಾಗಲೂ ಕ್ರೈಸ್ತ ಮೂಲತತ್ತ್ವಗಳೊಂದಿಗೆ ಒಮ್ಮತಗೊಳ್ಳುವುದಿಲ್ಲ. ಶಿಕ್ಷಕರು ವಿದ್ಯಾರ್ಥಿಗಳನ್ನು, ಲೋಕದ ಭಾಗವಾಗಿರುವಂತೆ ಪ್ರೋತ್ಸಾಹಿಸುವಾಗ, ತನ್ನ ಹಿಂಬಾಲಕರು “ಲೋಕದ ಭಾಗ”ವಾಗಿರುವುದಿಲ್ಲ (NW) ಎಂದು ಯೇಸು ಹೇಳಿದನು.—ಯೋಹಾನ 17:16.
ಮಕ್ಕಳು ಬೈಬಲ್ ಮೂಲತತ್ತ್ವಗಳನ್ನು ಅನುಸರಿಸುತ್ತಿರುವಾಗ ಸಮಸ್ಯೆಗಳು ಉದ್ಭವಿಸುವುದಾದರೆ ಆಗೇನು? ಮಕ್ಕಳು ಸ್ಥಳಿಕ ಶಾಲೆಯೊಂದಕ್ಕೆ ಹಾಜರಾಗಿ, ಮನೆಯಲ್ಲಿ ವಾಸಿಸುತ್ತಿರುವಲ್ಲಿ, ಅವರು ತಮ್ಮ ಹೆತ್ತವರೊಂದಿಗೆ ಅಂಥ ವಿಷಯಗಳನ್ನು ಚರ್ಚಿಸಬಲ್ಲರು. ಅದಕ್ಕೆ ಪ್ರತಿಯಾಗಿ, ಹೆತ್ತವರು ತಮ್ಮ ಮಕ್ಕಳನ್ನು ಮಾರ್ಗದರ್ಶಿಸಿ, ಶಿಕ್ಷಕನೊಂದಿಗೆ ಮಾತಾಡಬಲ್ಲರು. ಇದರ ಪರಿಣಾಮವಾಗಿ, ಸಮಸ್ಯೆಗಳು ಹಾಗೂ ಅಪಾರ್ಥಗಳು ಸಾಮಾನ್ಯವಾಗಿ ಶೀಘ್ರವಾಗಿ ಬಗೆಹರಿಸಲ್ಪಡುತ್ತವೆ.
ಬೋರ್ಡಿಂಗ್ ಸ್ಕೂಲುಗಳಲ್ಲಿ ಇದೊಂದು ಭಿನ್ನವಾದ ವಿಷಯವಾಗಿದೆ. ಅಂಥ ವಿದ್ಯಾರ್ಥಿಗಳು ತಮ್ಮ ಶಿಕ್ಷಕರ ಸತತ ನಿಯಂತ್ರಣದ ಕೆಳಗಿರುತ್ತಾರೆ. ಮಕ್ಕಳು ಕ್ರೈಸ್ತ ಮೂಲತತ್ತ್ವಗಳಿಗಾಗಿ ನಿಲುವನ್ನು ತೆಗೆದುಕೊಳ್ಳುವಲ್ಲಿ, ಅವರು ತಮ್ಮ ಹೆತ್ತವರಿಂದ ನೀಡಲ್ಪಡುವ ದೈನಂದಿನ ಬೆಂಬಲವಿಲ್ಲದೇ ನಿಲುವನ್ನು ತೆಗೆದುಕೊಳ್ಳತಕ್ಕದ್ದು. ಕೆಲವೊಮ್ಮೆ, ಅಂಥ ಮಕ್ಕಳು ಸಂದರ್ಭಗಳ ಕೆಳಗೆ ದೇವರಿಗೆ ನಂಬಿಗಸ್ತರಾಗಿ ಉಳಿಯಶಕ್ತರಾಗುತ್ತಾರೆ. ಆದರೂ ಹೆಚ್ಚಿನ ವೇಳೆ ಅವರು ನಂಬಿಗಸ್ತರಾಗಿ ಉಳಿಯಶಕ್ತರಾಗುವುದಿಲ್ಲ. ಒಂದು ಮಗುವು, ಶಿಕ್ಷಕನೊಬ್ಬನ ಇಷ್ಟಕ್ಕೆ ಮಣಿಯುವುದು ಸಂಭಾವ್ಯ.
ನಿರ್ಬಂಧಿತ ಓಡಾಟ
ಎಲ್ಲಿ ವಿದ್ಯಾರ್ಥಿಗಳಿಗೆ ತಮ್ಮಿಷ್ಟದಂತೆ ಹೋಗಿ, ಬರುವ ಸ್ವಾತಂತ್ರ್ಯವಿದೆಯೋ ಆ ವಿಶ್ವವಿದ್ಯಾನಿಲಯಗಳಿಗೆ ಅಸದೃಶವಾಗಿ, ಬೋರ್ಡಿಂಗ್ ಸ್ಕೂಲುಗಳು ಮಕ್ಕಳ ಓಡಾಟವನ್ನು ನಿರ್ಬಂಧಿಸುತ್ತವೆ. ಈ ಶಾಲೆಗಳಲ್ಲಿ ಅನೇಕ ಶಾಲೆಗಳು, ವಿದ್ಯಾರ್ಥಿಗಳನ್ನು ಶಾಲೆಯ ಕಾಂಪೌಂಡನ್ನು ಬಿಟ್ಟುಹೋಗುವಂತೆ ಅನುಮತಿಸುವುದಿಲ್ಲ—ಭಾನುವಾರವನ್ನು ಹೊರತುಪಡಿಸಿ—ಹಾಗೂ ಕೆಲವು ಶಾಲೆಗಳು ಅದಕ್ಕೂ ಅನುಮತಿಯನ್ನು ನೀಡುವುದಿಲ್ಲ. ಬೋರ್ಡಿಂಗ್ ಸ್ಕೂಲಿನ ಏರೂ ಎಂಬ ಹೆಸರಿನ 11 ವರ್ಷ ಪ್ರಾಯದ ವಿದ್ಯಾರ್ಥಿನಿಯು ಹೇಳುವುದು: “ಸ್ಕೂಲಿನ ಅಧಿಕಾರಿಗಳು ನಮಗೆ ಎಂದೂ ಕೂಟಗಳಿಗೆ ಹೋಗಲು ಬಿಡುವುದಿಲ್ಲ. ಮತ್ತು ನಿಶ್ಚಯವಾಗಿಯೂ ಕ್ಷೇತ್ರ ಸೇವೆಗೆ ಹೋಗಲು ಬಿಡುವುದಿಲ್ಲ. ಶಾಲೆಯ ಒಳಗೆ ಕೇವಲ ಕ್ಯಾಥೊಲಿಕರಿಗೂ ಮುಸ್ಲಿಮರಿಗೂ ಧಾರ್ಮಿಕ ಆರಾಧನಾ ವ್ಯವಸ್ಥೆಗಳಿವೆ. ಪ್ರತಿ ವಿದ್ಯಾರ್ಥಿಯು ಈ ಎರಡು ಧರ್ಮಗಳಲ್ಲಿ ಒಂದನ್ನು ಆರಿಸಿಕೊಳ್ಳತಕ್ಕದ್ದು, ಇಲ್ಲವೇ ಶಿಕ್ಷಕರಿಂದಲೂ ವಿದ್ಯಾರ್ಥಿಗಳಿಂದಲೂ—ಇಬ್ಬರಿಂದಲೂ—ತೀಕ್ಷ್ಣವಾದ ವೈಷಮ್ಯವನ್ನು ಎದುರಿಸತಕ್ಕದ್ದು. ವಿದ್ಯಾರ್ಥಿಗಳು ರಾಷ್ಟ್ರಗೀತೆಯನ್ನು ಹಾಗೂ ಚರ್ಚ್ ಸ್ತೋತ್ರಗೀತೆಗಳನ್ನು ಹಾಡುವಂತೆಯೂ ಒತ್ತಾಯಿಸಲ್ಪಡುತ್ತಾರೆ.”
ಹೆತ್ತವರು ತಮ್ಮ ಮಕ್ಕಳನ್ನು ಇಂಥ ಒಂದು ಸ್ಕೂಲಿಗೆ ಸೇರಿಸುವಾಗ, ತಮ್ಮ ಎಳೆಯರಿಗೆ ಅವರು ಯಾವ ಸಂದೇಶವನ್ನು ಕೊಡುತ್ತಿದ್ದಾರೆ? ಆ ಸಂದೇಶವು, ಐಹಿಕ ಶಿಕ್ಷಣವು, ಆರಾಧನೆಗಾಗಿ ಕೂಡಿಬರುವ ಹಾಗೂ ಶಿಷ್ಯರನ್ನಾಗಿ ಮಾಡುವ ಕಾರ್ಯದಲ್ಲಿ ಪಾಲುತೆಗೆದುಕೊಳ್ಳುವುದಕ್ಕಿಂತಲೂ ಹೆಚ್ಚು ಪ್ರಾಮುಖ್ಯ—ದೇವರಿಗೆ ತೋರಿಸಲ್ಪಡುವ ಸಮಗ್ರತೆಗಿಂತಲೂ ಹೆಚ್ಚು ಪ್ರಾಮುಖ್ಯ—ವಾಗಿರಲು ಸಾಧ್ಯವಿದೆ.—ಮತ್ತಾಯ 24:14; 28:19, 20; 2 ಕೊರಿಂಥ 6:14-18; ಇಬ್ರಿಯ 10:24, 25.
ಕೆಲವು ಬೋರ್ಡಿಂಗ್ ಸ್ಕೂಲುಗಳಲ್ಲಿ, ಸಾಕ್ಷಿ ವಿದ್ಯಾರ್ಥಿಗಳು ಬೈಬಲನ್ನು ಜೊತೆಗೂಡಿ ಅಭ್ಯಾಸಿಸಲು ಸಮರ್ಥರಾಗಿದ್ದಾರಾದರೂ, ಇದು ಕೂಡ ಅನೇಕವೇಳೆ ಕಷ್ಟಕರವಾಗಿರುತ್ತದೆ. 16 ವರ್ಷ ಪ್ರಾಯದ ಬ್ಲೆಸಿಂಗ್ ಎಂಬ ಒಬ್ಬ ಯುವತಿಯು, ತಾನು ಹಾಜರಾಗುವ ಬೋರ್ಡಿಂಗ್ ಸ್ಕೂಲಿನ ಕುರಿತು ಹೀಗೆ ಹೇಳುತ್ತಾಳೆ: “ಕ್ರೈಸ್ತರೆಂದು ಹೇಳಿಕೊಳ್ಳುವವರು ಪ್ರತಿ ದಿನ ಪ್ರಾರ್ಥನೆಗೆ ಒಟ್ಟುಗೂಡುತ್ತಾರೆ. ಸಾಕ್ಷಿಗಳಾದ ನಾವು ನಮ್ಮ ಬೈಬಲ್ ಅಭ್ಯಾಸವನ್ನು ಮಾಡಸಾಧ್ಯವಾಗುವಂತೆ, ನಾವು ಅವರೊಂದಿಗೆ ಶ್ರದ್ಧಾಪೂರ್ವಕವಾಗಿ ಬೇಡಿಕೊಳ್ಳಲು ಪ್ರಯತ್ನಿಸುತ್ತೇವಾದರೂ, ನಮ್ಮ ಧರ್ಮವು ಅಂಗೀಕೃತವಲ್ಲವೆಂದು ಹಿರಿಯ ವಿದ್ಯಾರ್ಥಿಗಳು ಹೇಳುತ್ತಾರೆ. ಅನಂತರ ಅವರು ನಮ್ಮನ್ನು ತಮ್ಮೊಂದಿಗೆ ಪ್ರಾರ್ಥಿಸುವಂತೆ ಒತ್ತಾಯಿಸಲು ಪ್ರಯತ್ನಿಸುತ್ತಾರೆ. ನಾವು ನಿರಾಕರಿಸುವಲ್ಲಿ, ಅವರು ನಮ್ಮನ್ನು ಶಿಕ್ಷಿಸುತ್ತಾರೆ. ಶಿಕ್ಷಕರಿಗೆ ಮೊರೆಯಿಡುವುದು ವಿಷಯಗಳನ್ನು ತೀರ ಕೆಟ್ಟದ್ದಾಗಿ ಮಾಡುತ್ತದೆ. ಅವರು ನಮ್ಮನ್ನು ಎಲ್ಲ ರೀತಿಯ ಹೆಸರುಗಳಿಂದ ಕರೆಯುತ್ತಾರೆ ಹಾಗೂ ನಮ್ಮನ್ನು ಶಿಕ್ಷಿಸುವಂತೆ ಹಿರಿಯ ವಿದ್ಯಾರ್ಥಿಗಳಿಗೆ ಹೇಳುತ್ತಾರೆ.”
ಭಿನ್ನರಾಗಿ ಎದ್ದುಕಾಣುವುದು
ಬೋರ್ಡಿಂಗ್ ಸ್ಕೂಲಿನ ವಿದ್ಯಾರ್ಥಿಗಳು ಸ್ಪಷ್ಟವಾಗಿ ಯೆಹೋವನ ಸಾಕ್ಷಿಗಳೆಂದು ಜ್ಞಾತರಾಗಿರುವಾಗ, ಇದು ಅವರ ಒಳಿತಿಗಾಗಿ ಕಾರ್ಯನಡಿಸಬಲ್ಲದು. ಶಾಲೆಯ ಅಧಿಕಾರಿಗಳು, ಸಾಕ್ಷಿಗಳ ನಂಬಿಕೆಗೆ ವಿರುದ್ಧವಾಗಿ ಕಾರ್ಯನಡಿಸುವ ಕಡ್ಡಾಯ ಸುಳ್ಳು ಧಾರ್ಮಿಕ ಚಟುವಟಿಕೆಗಳಲ್ಲಿನ ಭಾಗವಹಿಸುವಿಕೆಯಿಂದ ವಿನಾಯಿತಿ ನೀಡಬಹುದು. ಜೊತೆ ವಿದ್ಯಾರ್ಥಿಗಳು, ಅಹಿತಕರವಾದ ಚಟುವಟಿಕೆಗಳು ಹಾಗೂ ಸಂಭಾಷಣೆಗಳಲ್ಲಿ ಅವರನ್ನು ಒಳಗೂಡಿಸುವುದಕ್ಕೆ ಪ್ರಯತ್ನಿಸುವುದರಿಂದ ದೂರವಿರಬಹುದು. ಜೊತೆ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಸಾಕ್ಷಿನೀಡಲು ಅವಕಾಶಗಳಿರಬಹುದು. ಇನ್ನೂ ಹೆಚ್ಚಾಗಿ, ಕ್ರೈಸ್ತ ಮೂಲತತ್ತ್ವಗಳಿಗನುಸಾರ ಜೀವಿಸುವವರು, ಗಂಭೀರ ತಪ್ಪುಗೈಯುವಿಕೆಗೆ ಸಂಶಯಿಸಲ್ಪಡದಿರುವುದು ಸಂಭವನೀಯ, ಹಾಗೂ ಅವರು ಕೆಲವೊಮ್ಮೆ ಶಿಕ್ಷಕರ ಹಾಗೂ ಸಹ ವಿದ್ಯಾರ್ಥಿಗಳ ಗೌರವವನ್ನು ಸಂಪಾದಿಸಿಕೊಳ್ಳುತ್ತಾರೆ.
ಆದರೂ, ವಿಷಯಗಳು ಯಾವಾಗಲೂ ಅದೇ ರೀತಿ ಸಂಭವಿಸುವುದಿಲ್ಲ. ಭಿನ್ನರಾಗಿ ಎದ್ದುಕಾಣುವುದು, ಅನೇಕವೇಳೆ ಒಬ್ಬ ಯುವ ವ್ಯಕ್ತಿಯನ್ನು ವಿದ್ಯಾರ್ಥಿಗಳಿಂದ ಹಾಗೂ ಶಿಕ್ಷಕರಿಂದ—ಇಬ್ಬರಿಂದಲೂ—ಬರುವ ಹಿಂಸೆಗೆ ಹಾಗೂ ಕುಚೋದ್ಯಕ್ಕೆ ಗುರಿಮಾಡುತ್ತದೆ. ಬೋರ್ಡಿಂಗ್ ಸ್ಕೂಲೊಂದಕ್ಕೆ ಹಾಜರಾಗುವ 15 ವರ್ಷ ಪ್ರಾಯದ ಹುಡುಗನಾದ ಯಿಂಕಾ ಹೇಳುವುದು: “ಶಾಲೆಯಲ್ಲಿ, ನೀವು ಯೆಹೋವನ ಸಾಕ್ಷಿಗಳಲ್ಲಿ ಒಬ್ಬರಾಗಿದ್ದೀರೆಂದು ವಿದಿತರಾಗಿರುವಲ್ಲಿ, ನೀವು ಒಂದು ಗುರಿಹಲಗೆಯಾಗುತ್ತೀರಿ. ನಮ್ಮ ಆತ್ಮಿಕ ಹಾಗೂ ನೈತಿಕ ನಿಲುವಿನ ಕುರಿತು ಅವರಿಗೆ ತಿಳಿದಿರುವುದರಿಂದ, ಅವರು ನಮ್ಮನ್ನು ಹಿಡಿಯಲು ಬಲೆಗಳನ್ನು ಬೀಸುತ್ತಾರೆ.”
ಹೆತ್ತವರ ಜವಾಬ್ದಾರಿ
ಯಾವನೇ ಶಿಕ್ಷಕನು, ಸ್ಕೂಲು, ಇಲ್ಲವೇ ಕಾಲೇಜು, ಮಕ್ಕಳನ್ನು ಯೆಹೋವನ ಸಮರ್ಪಿತ ಸೇವಕರನ್ನಾಗಿ ರೂಪಿಸುವ ಕಾರ್ಯವನ್ನು ಕೈಕೊಳ್ಳಲು ಯುಕ್ತವಾಗಿ ಪ್ರಯತ್ನಿಸಸಾಧ್ಯವಿಲ್ಲ. ಅದು ಅವರ ಕೆಲಸವಾಗಲಿ ಜವಾಬ್ದಾರಿಯಾಗಲಿ ಆಗಿರುವುದಿಲ್ಲ. ಸ್ವತಃ ಹೆತ್ತವರೇ ತಮ್ಮ ಮಕ್ಕಳ ಆತ್ಮಿಕ ಅಗತ್ಯಗಳ ಕಾಳಜಿವಹಿಸಬೇಕೆಂದು ದೇವರ ವಾಕ್ಯವು ನಿರ್ದೇಶಿಸುತ್ತದೆ. ಪೌಲನು ಬರೆದುದು: “ತಂದೆಗಳೇ, ನಿಮ್ಮ ಮಕ್ಕಳಿಗೆ ಕೋಪವನ್ನೆಬ್ಬಿಸದೆ ಕರ್ತನಿಗೆ [“ಯೆಹೋವನಿಗೆ,” NW] ಮೆಚ್ಚಿಗೆಯಾಗಿರುವ ಬಾಲಶಿಕ್ಷೆಯನ್ನೂ ಬಾಲೋಪದೇಶವನ್ನೂ ಮಾಡುತ್ತಾ ಅವರನ್ನೂ ಸಾಕಿ ಸಲಹಿರಿ.” (ಎಫೆಸ 6:4) ತಮ್ಮ ಮಕ್ಕಳು ಬೋರ್ಡಿಂಗ್ ಸ್ಕೂಲೊಂದರಲ್ಲಿದ್ದು, ತಿಂಗಳಿಗೆ ಒಂದೆರಡು ಬಾರಿ ಮಾತ್ರ ಹೆತ್ತವರು ಭೇಟಿಮಾಡುವಂತೆ ನಿರ್ಬಂಧಿಸಲ್ಪಟ್ಟಿರುವಲ್ಲಿ, ಈ ದೈವಿಕ ಸಲಹೆಯನ್ನು ಹೆತ್ತವರು ಹೇಗೆ ಅನ್ವಯಿಸಿಕೊಳ್ಳಸಾಧ್ಯವಿದೆ?
ಸಂದರ್ಭಗಳು ಮಹತ್ತರವಾಗಿ ಬದಲಾಗುತ್ತವಾದರೂ ಕ್ರೈಸ್ತ ಹೆತ್ತವರು ಈ ಪ್ರೇರಿತ ಹೇಳಿಕೆಯೊಂದಿಗೆ ಸಾಮರಸ್ಯದಲ್ಲಿ ಕ್ರಿಯೆಗೈಯಲು ತುಂಬ ಪ್ರಯಾಸಪಡುತ್ತಾರೆ: “ಯಾವನಾದರೂ ಸ್ವಂತ ಜನರನ್ನು, ವಿಶೇಷವಾಗಿ ತನ್ನ ಮನೆಯವರನ್ನು ಸಂರಕ್ಷಿಸದೆಹೋದರೆ ಅವನು ಕ್ರಿಸ್ತನಂಬಿಕೆಯನ್ನು ತಿರಸ್ಕರಿಸಿದವನೂ ನಂಬದವನಿಗಿಂತ ಕಡೆಯಾದವನೂ ಆಗಿದ್ದಾನೆ.”—1 ತಿಮೊಥೆಯ 5:8.
ಬದಲಿ ಮಾರ್ಗಗಳಿವೆಯೋ?
ಹೆತ್ತವರಿಗೆ ಕೇವಲ ಎರಡು ಆಯ್ಕೆಗಳಿರುವಂತೆ—ಬೋರ್ಡಿಂಗ್ ಸ್ಕೂಲ್ ಇಲ್ಲವೇ ನ್ಯೂನ ಸಜ್ಜಿತ ಸ್ಥಳಿಕ ಸ್ಕೂಲ್—ತೋರುವಲ್ಲಿ ಅವರೇನು ಮಾಡಬಹುದು? ಈ ಸನ್ನಿವೇಶದಲ್ಲಿ ತಮ್ಮನ್ನು ಕಂಡುಕೊಂಡಿರುವ ಕೆಲವರು, ಸ್ಥಳಿಕ ಶಾಲೆಯೊಂದರಲ್ಲಿನ ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನದ್ದನ್ನು ಕೂಡಿಸಲು, ಖಾಸಗಿ ಪಾಠಗಳಿಗಾಗಿ ಏರ್ಪಡಿಸುತ್ತಾರೆ. ಇತರ ಹೆತ್ತವರು ಸ್ವತಃ ತಮ್ಮ ಮಕ್ಕಳಿಗೆ ಕಲಿಸಲು ಸಮಯವನ್ನು ಬದಿಗಿರಿಸುತ್ತಾರೆ.
ಕೆಲವೊಮ್ಮೆ ಹೆತ್ತವರು, ತಮ್ಮ ಮಕ್ಕಳು ಪ್ರೌಢ ಶಾಲೆಯನ್ನು ಪ್ರವೇಶಿಸುವಷ್ಟು ದೊಡ್ಡವರಾದಾಗ, ಸಮಯಕ್ಕೆ ಮೊದಲೇ ಯೋಜನೆ ಮಾಡುವ ಮೂಲಕ ಸಮಸ್ಯೆಗಳನ್ನು ದೂರವಿರಿಸುತ್ತಾರೆ. ನಿಮಗೆ ಎಳೆಯ ಮಕ್ಕಳಿರುವಲ್ಲಿ ಇಲ್ಲವೇ ಕುಟುಂಬವೊಂದನ್ನು ಬೆಳೆಸಲು ಯೋಜಿಸುತ್ತಿರುವಲ್ಲಿ, ನಿಮ್ಮ ಕ್ಷೇತ್ರದಲ್ಲಿ ಸಮರ್ಪಕವಾದ ಪ್ರೌಢ ಶಾಲೆಯಿದೆಯೋ ಇಲ್ಲವೋ ಎಂಬುದನ್ನು ನೀವು ಪರಿಶೀಲಿಸಬಹುದು. ಸಮರ್ಪಕವಾದ ಪ್ರೌಢ ಶಾಲೆಯಿಲ್ಲದಿರುವಲ್ಲಿ, ಶಾಲೆ ಹತ್ತಿರವಿರುವ ಸ್ಥಳಕ್ಕೆ ಸ್ಥಳಾಂತರಿಸುವ ಸಾಧ್ಯತೆಯಿರಬಹುದು.
ಹೆತ್ತವರಿಗೆ ಚೆನ್ನಾಗಿ ತಿಳಿದಿರುವಂತೆ, ಮಗುವೊಂದರಲ್ಲಿ ಯೆಹೋವನಿಗಾಗಿ ಪ್ರೀತಿಯನ್ನು ಬೇರೂರಿಸಲಿಕ್ಕಾಗಿ, ಕೌಶಲ, ತಾಳ್ಮೆ, ಹಾಗೂ ಹೆಚ್ಚಿನ ಸಮಯ ಅಗತ್ಯ. ಮಗುವೊಂದು ಮನೆಯಲ್ಲಿ ವಾಸಿಸುತ್ತಿರುವಾಗ ಇದು ಕಷ್ಟಸಾಧ್ಯವಾದ ವಿಷಯವಾಗಿರುವಲ್ಲಿ, ಮಗುವು ತುಂಬ ದೂರದ ಸ್ಥಳದಲ್ಲಿ ವಾಸಿಸುತ್ತಿರುವಲ್ಲಿ ಇದು ಇನ್ನೆಷ್ಟು ಕಷ್ಟಕರವಾಗಿದೆ! ಮಗುವೊಂದರ ನಿತ್ಯಜೀವವು ಒಳಗೂಡಿರುವುದರಿಂದ, ಬೋರ್ಡಿಂಗ್ ಸ್ಕೂಲಿನ ನಿಯಂತ್ರಣಕ್ಕೆ ತಮ್ಮ ಎಳೆಯರನ್ನು ಒಪ್ಪಿಸುವುದು, ಸಾಹಸಯೋಗ್ಯವೋ ಇಲ್ಲವೋ ಎಂಬುದನ್ನು ಹೆತ್ತವರು ಗಂಭೀರವಾಗಿ ಹಾಗೂ ಪ್ರಾರ್ಥನಾಪೂರ್ವಕವಾಗಿ ನಿರ್ಧರಿಸತಕ್ಕದ್ದು. ಬೋರ್ಡಿಂಗ್ ಸ್ಕೂಲಿನ ಶಿಕ್ಷಣದ ಪ್ರಯೋಜನಗಳಿಗಾಗಿ, ಮಗುವೊಂದರ ಆತ್ಮಿಕ ಅಭಿರುಚಿಗಳನ್ನು ಬಿಟ್ಟುಕೊಡುವುದು ಎಂತಹ ಮುಂದಾಲೋಚನೆಯಿಲ್ಲದ ವಿಷಯವಾಗಿರುವುದು! ಇದು ಅಲ್ಪ ಬೆಲೆಯ ಸಾಮಾನನ್ನು ಕಾಪಾಡಲಿಕ್ಕಾಗಿ ಉರಿಯುತ್ತಿರುವ ಮನೆಯೊಳಕ್ಕೆ ಧಾವಿಸುವಂತಿರುವುದು—ಕೇವಲ ಜ್ವಾಲೆಗಳಿಂದ ಸುಟ್ಟುಹೋಗಲಿಕ್ಕಾಗಿಯೇ.
ದೇವರ ವಾಕ್ಯವು ಹೇಳುವುದು: “ಜಾಣನು ಕೇಡನ್ನು ಕಂಡು ಅಡಗಿಕೊಳ್ಳುವನು; ಬುದ್ಧಿಹೀನನು ಮುಂದೆ ಹೋಗಿ ನಷ್ಟಪಡುವನು.” (ಜ್ಞಾನೋಕ್ತಿ 22:3) ಒಂದು ಪ್ರತಿಕೂಲ ಸನ್ನಿವೇಶವನ್ನು ತದನಂತರ ಸರಿಪಡಿಸುವುದಕ್ಕಿಂತಲೂ ಅದನ್ನು ತಡೆಗಟ್ಟುವುದು ಉತ್ತಮ. ‘ನನ್ನ ಮಗುವು ಬೋರ್ಡಿಂಗ್ ಸ್ಕೂಲಿಗೆ ಹೋಗಬೇಕೋ?’ ಎಂದು ನೀವು ಸ್ವತಃ ಕೇಳಿಕೊಳ್ಳುವಲ್ಲಿ, ಅದರ ಕುರಿತಾಗಿ ಆಲೋಚಿಸುವುದು ವಿವೇಕಯುತವಾಗಿರುವುದು.
[ಪುಟ 28 ರಲ್ಲಿರುವ ಚೌಕ]
ಬೋರ್ಡಿಂಗ್ ಸ್ಕೂಲಿನ ಕುರಿತಾಗಿ ಯುವ ಸಾಕ್ಷಿಗಳ ಹೇಳಿಕೆಗಳು
“ಬೋರ್ಡಿಂಗ್ ಸ್ಕೂಲಿನಲ್ಲಿ ಸಾಕ್ಷಿ ಮಕ್ಕಳಿಗೆ ಆತ್ಮಿಕ ಸಹವಾಸವು ದೊರಕುವುದಿಲ್ಲ. ತಪ್ಪನ್ನು ಮಾಡಲು ಹೆಚ್ಚು ಒತ್ತಡವಿರುವುದರೊಂದಿಗೆ, ಅದು ತುಂಬ ದ್ವೇಷಭರಿತವಾದ ಒಂದು ಪರಿಸರವಾಗಿದೆ.”—11 ಹಾಗೂ 14ರ ಪ್ರಾಯಗಳ ನಡುವೆ ಬೋರ್ಡಿಂಗ್ ಸ್ಕೂಲಿಗೆ ಹಾಜರಾದ ರೊಟೀಮೀ.
“ಕ್ರೈಸ್ತ ಕೂಟಗಳಿಗೆ ಹಾಜರಾಗುವುದು ಅಸಾಧಾರಣವಾಗಿ ಕಷ್ಟಕರವಾಗಿತ್ತು. ನಾನು ಕೇವಲ ಭಾನುವಾರದಂದು ಹಾಜರಾಗಶಕ್ತಳಾದೆ, ಮತ್ತು ಹಾಗೇ ಹಾಜರಾಗಲಿಕ್ಕೆ, ವಿದ್ಯಾರ್ಥಿಗಳು ಚರ್ಚಿಗೆ ಹೋಗಲು ಸಾಲಿನಲ್ಲಿ ನಿಂತುಕೊಂಡಾಗ, ನಾನು ಮೆಲ್ಲಗೆ ನುಸುಳಿಕೊಂಡು ಹೋಗಬೇಕಿತ್ತು. ನಾನೆಂದೂ ಸಂತೋಷವಾಗಿರಲಿಲ್ಲ, ಏಕೆಂದರೆ ಮನೆಯಲ್ಲಿರುವಾಗ ನಾನು ಎಲ್ಲ ಸಭಾ ಕೂಟಗಳಿಗೆ ಹಾಜರಾಗುವುದಕ್ಕೆ ಹೊಂದಿಕೊಂಡಿದ್ದೆ ಹಾಗೂ ಶನಿವಾರ ಮತ್ತು ಭಾನುವಾರಗಳಂದು ಕ್ಷೇತ್ರ ಸೇವೆಗೆ ಹೋಗುತ್ತಿದ್ದೆ. ಶಾಲೆಯು ಆತ್ಮೋನ್ನತಿಮಾಡುವಂಥ ಅನುಭವವಾಗಿರಲಿಲ್ಲ. ನಾನು ಅನೇಕ ಪ್ರಯೋಜನಗಳಿಂದ ವಂಚಿತಳಾದೆ.”—ಸ್ಕೂಲಿನ ಚರ್ಚ್ ಆರಾಧನೆಗಳಲ್ಲಿ ಆಕೆ ಭಾಗವಹಿಸದೆ ಇದ್ದುದರಿಂದ, ನಿತ್ಯವೂ ಶಿಕ್ಷಕರಿಂದ ಹೊಡೆತ ತಿಂದ ಎಸ್ತರ್.
“ಬೋರ್ಡಿಂಗ್ ಸ್ಕೂಲಿನಲ್ಲಿ ಜೊತೆ ವಿದ್ಯಾರ್ಥಿಗಳಿಗೆ ಸಾಕ್ಷಿನೀಡುವುದು ಸುಲಭವಾಗಿರಲಿಲ್ಲ. ಭಿನ್ನರಾಗಿ ಎದ್ದುಕಾಣುವುದು ಸುಲಭವಾಗಿರುವುದಿಲ್ಲ. ನಾನು ಗುಂಪನ್ನು ಅನುಸರಿಸಲು ಬಯಸಿದೆ. ನಾನು ಕೂಟಗಳಿಗೆ ಹೋಗಲು ಹಾಗೂ ಕ್ಷೇತ್ರ ಸೇವೆಯಲ್ಲಿ ಒಳಗೂಡಲು ಶಕ್ತಳಾಗಿರುತ್ತಿದ್ದಲ್ಲಿ, ಪ್ರಾಯಶಃ ನಾನು ಹೆಚ್ಚು ಧೈರ್ಯಶಾಲಿಯಾಗಿರುತ್ತಿದ್ದೆ. ಆದರೆ ನಾನು ಅದನ್ನು ಕೇವಲ ರಜೆಯಲ್ಲಿದ್ದಾಗ—ವರ್ಷವೊಂದರಲ್ಲಿ ಕೇವಲ ಮೂರು ಬಾರಿ—ಮಾಡಸಾಧ್ಯವಾಗುತ್ತಿತ್ತು. ಎಣ್ಣೆಯಿಂದ ಪುನರ್ತುಂಬಿಸಲ್ಪಡದ ದೀಪವೊಂದು ನಿಮ್ಮಲ್ಲಿರುವುದಾದರೆ, ಬೆಳಕು ಮಬ್ಬಾಗುತ್ತದೆ. ಶಾಲೆಯಲ್ಲಿಯೂ ಹಾಗೇ ಇತ್ತು.”—11ರಿಂದ 16 ವರ್ಷಗಳ ಪ್ರಾಯದಲ್ಲಿ ಬೋರ್ಡಿಂಗ್ ಸ್ಕೂಲಿಗೆ ಹಾಜರಾದ ಲಾರಾ.
“ನಾನು ಈಗ ಬೋರ್ಡಿಂಗ್ ಸ್ಕೂಲಿನಲ್ಲಿಲ್ಲ, ನಾನು ಎಲ್ಲ ಕೂಟಗಳಿಗೆ ಹಾಜರಾಗಲು, ಕ್ಷೇತ್ರ ಸೇವೆಯಲ್ಲಿ ಭಾಗವಹಿಸಲು, ಹಾಗೂ ಕುಟುಂಬದ ಇನ್ನಿತರರೊಂದಿಗೆ ದಿನದ ವಚನವನ್ನು ನೋಡುವುದರಲ್ಲಿ ಆನಂದಿಸಸಾಧ್ಯವಿರುವುದಕ್ಕೆ ಸಂತೋಷಿಸುತ್ತೇನೆ. ಬೋರ್ಡಿಂಗ್ ಸ್ಕೂಲಿನಲ್ಲಿರುವುದು, ಕೆಲವು ಪ್ರಯೋಜನಗಳನ್ನು ಪಡೆದಿದ್ದರೂ, ಯೆಹೋವನೊಂದಿಗಿನ ನನ್ನ ಸಂಬಂಧಕ್ಕಿಂತ ಇನ್ಯಾವ ವಿಷಯವೂ ಹೆಚ್ಚು ಪ್ರಾಮುಖ್ಯವಾಗಿರುವುದಿಲ್ಲ.”—ತನ್ನನ್ನು ಬೋರ್ಡಿಂಗ್ ಸ್ಕೂಲಿನಿಂದ ಬಿಡಿಸಿಬಿಡುವಂತೆ ತನ್ನ ತಂದೆಯ ಮನವೊಪ್ಪಿಸಿದ ನವೋಮಿ.