“ಪ್ರಭಾವಯುಕ್ತವಾದವುಗಳು ಮತ್ತು ಮನಗಾಣಿಸುವಂಥವುಗಳು”
“ನಾಳೆಯಿಂದಾರಂಭಿಸಿ ನಾನು ಅದನ್ನು ಸಾರುವ ಕೆಲಸದಲ್ಲಿ ಉಪಯೋಗಿಸಲಿದ್ದೇನೆ, ಏಕೆಂದರೆ ಅದರಲ್ಲಿರುವ ತರ್ಕಗಳು ನಿಜವಾಗಿಯೂ ಪ್ರಭಾವಯುಕ್ತವಾದವುಗಳು ಮತ್ತು ಮನಗಾಣಿಸುವಂಥವುಗಳು ಆಗಿವೆ” ಎಂದು, ಫ್ರಾನ್ಸಿನ ಯೆಹೋವನ ಸಾಕ್ಷಿಗಳಲ್ಲಿ ಒಬ್ಬನು ಬರೆದನು. ಅಮೆರಿಕದ ಸಾಕ್ಷಿಯೊಬ್ಬನು ಬರೆದುದು: “ಆ ಕೂಡಲೆ ನಾನದನ್ನು ಓದಿದೆ, ಮತ್ತು ಕ್ಷೇತ್ರ ಸೇವೆಯಲ್ಲಿ ನಿರುತ್ಸಾಹಿಗಳಾಗಿರುವ ಹಾಗೂ ಬೈಬಲಿನಲ್ಲಿ ಯಾವುದೇ ಭರವಸೆಯನ್ನು ಇಡದಿರುವಂತಹ ಅನೇಕ ಜನರನ್ನು ನಾವು ಭೇಟಿಯಾಗುತ್ತೇವಾದುದರಿಂದ, ಅದನ್ನು ಸೇವೆಯಲ್ಲಿ ಉಪಯೋಗಿಸಲು ನಾನು ಕಾಯಸಾಧ್ಯವಿಲ್ಲ.” ಅವರು ಯಾವುದನ್ನು ವರ್ಣಿಸುತ್ತಿದ್ದರು? 1997/98ರಲ್ಲಿ ನಡೆದ “ದೇವರ ವಾಕ್ಯದಲ್ಲಿ ನಂಬಿಕೆ” ಜಿಲ್ಲಾ ಅಧಿವೇಶನಗಳಲ್ಲಿ ವಾಚ್ ಟವರ್ ಸೊಸೈಟಿಯಿಂದ ಬಿಡುಗಡೆಮಾಡಲ್ಪಟ್ಟ, ಸಕಲ ಜನರಿಗಾಗಿರುವ ಒಂದು ಗ್ರಂಥ ಎಂಬ ಶಿರೋನಾಮವುಳ್ಳ 32 ಪುಟದ ಬ್ರೋಷರಿನ ಕುರಿತಾಗಿಯೇ.
ಈ ಪ್ರಕಾಶನವನ್ನು ನಿರ್ದಿಷ್ಟ ರೀತಿಯ ಸಭಿಕರನ್ನು ಮನಸ್ಸಿನಲ್ಲಿಟ್ಟುಕೊಂಡು ಸಿದ್ಧಪಡಿಸಲಾಗಿತ್ತು—ಯಾರು ವಿದ್ಯಾವಂತರಾಗಿರಬಹುದಾದರೂ, ಬೈಬಲಿನ ಕುರಿತು ಸ್ವಲ್ಪವೇ ತಿಳಿದಿದ್ದಾರೋ ಅಂತಹ ಜನರಿಗೆ. ಅಂತಹ ಅನೇಕ ವ್ಯಕ್ತಿಗಳು ಬೈಬಲನ್ನು ವೈಯಕ್ತಿಕವಾಗಿ ಎಂದೂ ಓದಿರದಿದ್ದರೂ, ಅದರ ಕುರಿತು ಅವರಿಗೆ ನಿಶ್ಚಿತಾಭಿಪ್ರಾಯಗಳಿವೆ. ಈ ಬ್ರೋಷರಿನ ಉದ್ದೇಶವು, ಬೈಬಲು ಪರೀಕ್ಷೆಗೆ ಯೋಗ್ಯವಾಗಿದೆ ಎಂಬುದನ್ನು ವಾಚಕನಿಗೆ ಮನಗಾಣಿಸುವುದೇ ಆಗಿದೆ. ಈ ಬ್ರೋಷರ್ ವಾಚಕನನ್ನು, ಬೈಬಲು ದೇವರ ಪ್ರೇರಿತ ವಾಕ್ಯವಾಗಿದೆ ಎಂಬ ದೃಷ್ಟಿಕೋನವನ್ನು ಅಂಗೀಕರಿಸುವಂತೆ ಒತ್ತಾಯಿಸುವುದಿಲ್ಲ. ಬದಲಾಗಿ, ವಾಸ್ತವ ಸಂಗತಿಗಳು ತಾವೇ ಮಾತಾಡುವಂತೆ ಅದು ಬಿಡುತ್ತದೆ. ಅದು ಶಬ್ದಾಡಂಭರವುಳ್ಳದ್ದಾಗಿಲ್ಲ, ಆದರೆ ಅದು ಸುಸ್ಪಷ್ಟವೂ ಮುಚ್ಚುಮರೆಯಿಲ್ಲದ್ದೂ ಆಗಿದೆ.
ಈ ಮೇಲೆ ಉಲ್ಲೇಖಿಸಿದ ಹೇಳಿಕೆಗಳು ಸೂಚಿಸುವಂತೆ, ಅಧಿವೇಶನಗಳಲ್ಲಿ ಉಪಸ್ಥಿತರಿದ್ದವರು, ತಮ್ಮ ಕ್ಷೇತ್ರ ಸೇವೆಯಲ್ಲಿ ಈ ಬ್ರೋಷರನ್ನು ಉಪಯೋಗಿಸಲು ತುಂಬ ಕಾತುರರಾಗಿದ್ದರು. ಉದಾಹರಣೆಗೆ, ಫ್ರಾನ್ಸಿನಲ್ಲಿ ಆಗಸ್ಟ್ 23 ಮತ್ತು 24ಕ್ಕೆ ಒಂದು ವಿಶೇಷ ಸಾಕ್ಷಿ ಕಾರ್ಯಾಚರಣೆಯನ್ನು ಏರ್ಪಡಿಸಲಾಗಿತ್ತು. ಆಗ ಲೋಕದಾದ್ಯಂತದಿಂದ ಬಂದ ಲಕ್ಷಗಟ್ಟಲೆ ಯುವ ಭೇಟಿಗಾರರು, ಲೋಕ ಯುವ ಜನರ ದಿನಕ್ಕಾಗಿ ಪ್ಯಾರಿಸ್ನಲ್ಲಿ ಕೂಡಿಬಂದರು. ಸುಮಾರು 2,500 ಸಾಕ್ಷಿಗಳು (ಅಧಿಕಾಂಶ ಮಂದಿ 16ರಿಂದ 30 ವರ್ಷಪ್ರಾಯದವರು), ಇಟಾಲಿಯನ್, ಇಂಗ್ಲಿಷ್, ಜರ್ಮನ್, ಪೋಲಿಷ್, ಫ್ರೆಂಚ್, ಹಾಗೂ ಸ್ಪ್ಯಾನಿಷ್ ಭಾಷೆಗಳಲ್ಲಿ 18,000 ಪ್ರತಿಗಳನ್ನು ವಿತರಿಸಿದರು.
ಸರ್ವಪ್ರಕಾರದಿಂದಲೂ, ಸಕಲ ಜನರಿಗಾಗಿರುವ ಒಂದು ಗ್ರಂಥ ಎಂಬ ಈ ಬ್ರೋಷರನ್ನು ನಾವು ನಮ್ಮ ಸೇವೆಯಲ್ಲಿ ಉಪಯೋಗಿಸೋಣ. ಸ್ವತಃ ಅವರೇ ಬೈಬಲನ್ನು ಪರೀಕ್ಷಿಸಿನೋಡಬೇಕೆಂದು ವಿವೇಚನೆಯುಳ್ಳ ಜನರಿಗೆ ಮನಗಾಣಿಸುವುದರಲ್ಲಿ ಈ ಪ್ರಕಾಶನವು ಅಮೂಲ್ಯವಾದದ್ದಾಗಿ ಪರಿಣಮಿಸಲಿ.