ಭೀಕರ ಪರೀಕ್ಷೆಗಳ ಸಮಯದಲ್ಲೆಲ್ಲಾ ಪೋಷಿಸಲ್ಪಟ್ಟದ್ದು
ಏವಾ ಯೂಸೆಫ್ಸನ್ ಹೇಳಿರುವಂತೆ
ಹಂಗೆರಿಯ ಬೂಡಪೆಸ್ಟ್ನ ಊಈಪೆಸ್ಟೆ ಜಿಲ್ಲೆಯಲ್ಲಿ ನಮ್ಮ ಒಂದು ಸಣ್ಣ ಗುಂಪು ಕ್ರೈಸ್ತ ಶುಶ್ರೂಷೆಯಲ್ಲಿ ಹೊರಟುಹೋಗುವ ಮೊದಲು ನಾವು ಒಂದು ಚಿಕ್ಕ ಕೂಟವಾಗಿ ಕೂಡಿದ್ದೆವು. ಅದು IIನೆಯ ಲೋಕ ಯುದ್ಧಕ್ಕೆ ತುಸು ಮೊದಲು, 1939ರಲ್ಲಾಗಿತ್ತು. ಆಗ ಯೆಹೋವನ ಸಾಕ್ಷಿಗಳ ಸಾರುವ ಕಾರ್ಯವು ನಿಷೇಧಕ್ಕೊಳಗಾಗಿತ್ತು. ಆ ದಿನಗಳಲ್ಲಿ ಬೈಬಲನ್ನು ಬಹಿರಂಗವಾಗಿ ಬೋಧಿಸುವುದರಲ್ಲಿ ಭಾಗಿಗಳಾಗುವವರನ್ನು ಅನೇಕ ವೇಳೆ ದಸ್ತಗಿರಿ ಮಾಡಲಾಗುತ್ತಿತ್ತು.
ನಾನು ಈ ಚಟುವಟಿಕೆಯಲ್ಲಿ ಭಾಗವಹಿಸುತ್ತಿದ್ದುದು ಇದು ಪ್ರಥಮ ಬಾರಿಯಾಗಿದ್ದುದರಿಂದ, ನಾನು ತುಸು ಚಿಂತಿತಳೂ ಬಿಳಿಚಿಕೊಂಡವಳೂ ಆಗಿ ಕಂಡಿದ್ದಿರಬೇಕು. ಒಬ್ಬ ವೃದ್ಧ ಕ್ರೈಸ್ತ ಸಹೋದರರು ನನ್ನ ಕಡೆ ತಿರುಗಿ, “ಏವಾ, ನೀನು ಎಂದೂ ಹೆದರುವ ಅಗತ್ಯವಿಲ್ಲ. ಯೆಹೋವನನ್ನು ಸೇವಿಸುವುದು ಮಾನವನಿಗಿರಸಾಧ್ಯವಿರುವ ಅತಿ ದೊಡ್ಡದಾದ ಗೌರವ,” ಎಂದು ಹೇಳಿದರು. ಆ ಯೋಚನಾಪರವೂ ಶಕ್ತಿದಾಯಕವೂ ಆದ ಮಾತುಗಳು ಅನೇಕ ಭೀಕರ ಪರೀಕ್ಷೆಗಳಲ್ಲಿ ನನ್ನನ್ನು ಪೋಷಿಸುವಂತೆ ಸಹಾಯಮಾಡಿದವು.
ಯೆಹೂದಿ ಹಿನ್ನೆಲೆ
ಐದು ಮಂದಿ ಮಕ್ಕಳಿದ್ದ ಒಂದು ಯೆಹೂದಿ ಕುಟುಂಬದಲ್ಲಿ ನಾನು ಹಿರಿಯವಳಾಗಿದ್ದೆ. ತಾಯಿಯವರಿಗೆ ಯೆಹೂದಿ ಮತವು ತೃಪ್ತಿ ಕೊಡದಿದ್ದುದರಿಂದ ಅವರು ಬೇರೆ ಧರ್ಮಗಳನ್ನು ಪರೀಕ್ಷಿಸಲಾರಂಭಿಸಿದರು. ಅವರು ಬೈಬಲ್ ಸತ್ಯಕ್ಕಾಗಿ ಹುಡುಕುತ್ತಿದ್ದ ಇನ್ನೊಬ್ಬ ಯೆಹೂದಿ ಸ್ತ್ರೀಯಾದ ಎರ್ಸೇಬೆಟ್ ಸ್ಲೇಸಿಂಗರ್ ಎಂಬವರನ್ನು ಸಂಧಿಸಿದ್ದು ಹೀಗೆಯೇ. ಈ ಎರ್ಸೇಬೆಟ್, ತಾಯಿಗೆ ಯೆಹೋವನ ಸಾಕ್ಷಿಗಳ ಸಂಪರ್ಕ ಮಾಡಿಸಿದರು. ಇದರ ಪರಿಣಾಮವಾಗಿ ನಾನೂ ಬೈಬಲ್ ಬೋಧನೆಗಳಲ್ಲಿ ತುಂಬ ಆಸಕ್ತಳಾದೆ. ಬೇಗನೆ ನಾನು ಕಲಿತ ವಿಷಯಗಳನ್ನು ಇತರರೊಂದಿಗೆ ಹಂಚಿಕೊಳ್ಳಲಾರಂಭಿಸಿದೆ.
ನಾನು 1941ರ ಬೇಸಗೆಯಲ್ಲಿ 18 ವಯಸ್ಸಿನವಳಾದಾಗ, ಡ್ಯಾನ್ಯೂಬ್ ನದಿಯಲ್ಲಿ ದೀಕ್ಷಾಸ್ನಾನ ಪಡೆದುಕೊಳ್ಳುವ ಮೂಲಕ ಯೆಹೋವ ದೇವರಿಗೆ ನನ್ನ ಸಮರ್ಪಣೆಯನ್ನು ಸೂಚಿಸಿದೆ. ತಾಯಿಯವರು ಅದೇ ಸಮಯದಲ್ಲಿ ದೀಕ್ಷಾಸ್ನಾನ ಪಡೆದುಕೊಂಡರಾದರೂ ತಂದೆ ನಮ್ಮ ಹೊಸದಾಗಿ ಕಂಡುಕೊಂಡಿದ್ದ ನಂಬಿಕೆಯನ್ನು ತಮ್ಮದಾಗಿಸಿಕೊಳ್ಳಲಿಲ್ಲ. ನನ್ನ ದೀಕ್ಷಾಸ್ನಾನವಾಗಿ ಸ್ವಲ್ಪದರಲ್ಲಿ ನಾನು ಪಯನೀಯರಳಾಗಲು, ಅಂದರೆ ಪೂರ್ಣಸಮಯದ ಶುಶ್ರೂಷೆಯಲ್ಲಿ ಭಾಗಿಯಾಗಲು ಯೋಜನೆಗಳನ್ನು ಮಾಡಿದೆ. ನನಗೆ ಒಂದು ಸೈಕಲನ್ನು ಕೊಳ್ಳಬೇಕಾಗಿದ್ದ ಕಾರಣ, ಒಂದು ದೊಡ್ಡ ಬಟ್ಟೆ ಕಾರ್ಖಾನೆಯ ಪ್ರಯೋಗಶಾಲೆಯಲ್ಲಿ ಕೆಲಸಮಾಡತೊಡಗಿದೆ.
ಪರೀಕ್ಷೆಗಳ ಪ್ರಾರಂಭ
ನಾಸಿಗಳು ಹಂಗೆರಿಯನ್ನು ವಶಪಡಿಸಿಕೊಂಡಿದ್ದ ಕಾರಣ ನಾನು ಕೆಲಸ ಮಾಡುತ್ತಿದ್ದ ಕಾರ್ಖಾನೆ ಜರ್ಮನ್ ಆಡಳಿತದ ಕೆಳಗೆ ಬಂದಿತ್ತು. ಒಂದು ದಿನ, ನಾಸಿಗಳಿಗೆ ನಿಷ್ಠೆ ತೋರಿಸುವ ಪ್ರತಿಜ್ಞೆಯನ್ನು ಮಾಡಲಿಕ್ಕಾಗಿ, ಮೇಲ್ವಿಚಾರಕರ ಮುಂದೆ ನೆರೆದುಬರಲಿಕ್ಕಾಗಿ ಎಲ್ಲ ಕಾರ್ಮಿಕರನ್ನು ಕರೆಯಲಾಯಿತು. ಇದನ್ನು ಮಾಡಲು ತಪ್ಪುವಲ್ಲಿ ಗಂಭೀರವಾದ ಪರಿಣಾಮಗಳು ಉಂಟಾಗಬಹುದೆಂದು ನಮಗೆ ಹೇಳಲಾಯಿತು. ಹೈಲ್ ಹಿಟ್ಲರ್ ಎಂದು ಹೇಳಬೇಕಾಗಿದ್ದ ಸಂಸ್ಕಾರದ ಸಮಯದಲ್ಲಿ, ನಾನು ಗೌರವಪೂರ್ವಕವಾಗಿ ನಿಂತುಕೊಂಡೆನಾದರೂ ಕೇಳಿಕೊಳ್ಳಲ್ಪಟ್ಟಿದ್ದ ಕ್ರಿಯೆಯನ್ನು ಕೈಕೊಳ್ಳಲಿಲ್ಲ. ಅದೇ ದಿವಸ, ನನ್ನನ್ನು ಆಫೀಸಿಗೆ ಕರೆದು, ನನ್ನ ಸಂಬಳವನ್ನು ಕೊಟ್ಟು, ನನ್ನನ್ನು ಕೆಲಸದಿಂದ ತೆಗೆದುಹಾಕಲಾಯಿತು. ಕೆಲಸವು ವಿರಳವಾಗಿದ್ದುದರಿಂದ, ಪಯನೀಯರಳಾಗುವ ನನ್ನ ಯೋಜನೆ ಈಗ ಏನಾಗಬಹುದು ಎಂದು ನಾನು ಯೋಚಿಸಿದೆ. ಆದರೆ ಮರುದಿನವೇ ನನಗೆ ಹೆಚ್ಚು ಸಂಬಳದ ಹೊಸ ಕೆಲಸವೊಂದು ಸಿಕ್ಕಿತು.
ಪಯನೀಯರಳಾಗುವ ನನ್ನ ಬಯಕೆಯು ಈಗ ಈಡೇರಸಾಧ್ಯವಾಯಿತು. ನನಗೆ ಅನೇಕ ಪಯನೀಯರ್ ಜೊತೆಗಾರ್ತಿಯರಿದ್ದರು ಮತ್ತು ಅವರಲ್ಲಿ ಕೊನೆಯವಳು, ಯೂಲಿಷ್ಕಾ ಆಸ್ಟಲಾಶ್. ನೀಡಲು ಯಾವ ಸಾಹಿತ್ಯವೂ ಇಲ್ಲದ್ದರಿಂದ, ಶುಶ್ರೂಷೆಯಲ್ಲಿ ನಾವು ಬೈಬಲನ್ನು ಮಾತ್ರ ಉಪಯೋಗಿಸಿದೆವು. ನಾವು ಆಸಕ್ತರನ್ನು ಕಂಡುಕೊಂಡಾಗ ಪುನರ್ಭೇಟಿಗಳನ್ನು ಮಾಡಿ ಅವರಿಗೆ ಸಾಹಿತ್ಯಗಳನ್ನು ಎರವಲುಕೊಟ್ಟೆವು.
ಪದೇ ಪದೇ, ಯೂಲಿಷ್ಕಾ ಮತ್ತು ನನಗೆ, ನಾವು ಕೆಲಸಮಾಡುತ್ತಿದ್ದ ಟೆರಿಟೊರಿಗಳನ್ನು ಬದಲಾಯಿಸಬೇಕಾಗುತ್ತಿತ್ತು. ಒಬ್ಬ ಪಾದ್ರಿ, ನಾವು ‘ಅವನ ಕುರಿಗಳನ್ನು’ ಭೇಟಿಮಾಡುತ್ತಿದ್ದೇವೆಂದು ತಿಳಿದಾಗ, ಯೆಹೋವನ ಸಾಕ್ಷಿಗಳು ಅವರನ್ನು ಭೇಟಿಮಾಡುವಲ್ಲಿ ಅದನ್ನು ತನಗೆ ಅಥವಾ ಪೊಲೀಸರಿಗೆ ವರದಿಮಾಡಬೇಕೆಂದು ಚರ್ಚಿನಲ್ಲಿ ಪ್ರಕಟಿಸಿದ ಕಾರಣವೇ ಹೀಗಾಯಿತು. ಇಂತಹ ಪ್ರಕಟನೆಯ ಕುರಿತು ಮಿತ್ರಭಾವದ ಜನರು ನಮಗೆ ತಿಳಿಸಿದಾಗ, ನಾವು ಇನ್ನೊಂದು ಟೆರಿಟೊರಿಗೆ ಹೋಗುತ್ತಿದ್ದೆವು.
ಒಂದು ದಿನ ಯೂಲಿಷ್ಕಾ ಮತ್ತು ನಾನು, ಆಸಕ್ತಿ ತೋರಿಸಿದ ಒಬ್ಬ ಹುಡುಗನನ್ನು ಭೇಟಿಯಾದೆವು. ನಾವು ಪುನಃ ಬಂದು ಅವನಿಗೆ ಏನಾದರೂ ಓದಲು ಎರವಲುಕೊಡುವ ಭೇಟಿನಿಶ್ಚಯ ಮಾಡಿದೆವು. ಆದರೆ ನಾವು ಪುನಃ ಹೋದಾಗ, ಪೊಲೀಸರು ಅಲ್ಲಿದ್ದರು. ನಮ್ಮನ್ನು ದಸ್ತಗಿರಿಮಾಡಿ ಡುನಾವೆಚೆಯ ಪೊಲೀಸ್ ಠಾಣೆಗೆ ಒಯ್ಯಲಾಯಿತು. ನಮ್ಮನ್ನು ಹಿಡಿಯಲಿಕ್ಕಾಗಿ ಆ ಹುಡುಗನನ್ನು ಸೆಳೆವಸ್ತುವಾಗಿ ಉಪಯೋಗಿಸಲಾಗಿತ್ತು. ನಾವು ಪೊಲೀಸ್ ಠಾಣೆಗೆ ಬಂದು ಅಲ್ಲಿ ಒಬ್ಬ ಪಾದ್ರಿಯನ್ನು ನೋಡಿದಾಗ ಅವನೂ ಇದರಲ್ಲಿ ಸೇರಿದ್ದನೆಂಬುದು ನಮಗೆ ತಿಳಿದುಬಂತು.
ನನ್ನ ಅತಿ ಕಠಿನ ಪರೀಕ್ಷೆ
ಆ ಪೊಲೀಸ್ ಠಾಣೆಯಲ್ಲಿ ನನ್ನ ತಲೆಯನ್ನು ಬೋಳಿಸಲಾಯಿತು. ಸುಮಾರು ಹನ್ನೆರಡು ಜನ ಪೊಲೀಸರ ಮುಂದೆ ನಾನು ಬೆತ್ತಲೆಯಾಗಿ ನಿಲ್ಲಬೇಕಾಯಿತು. ಹಂಗೆರಿಯಲ್ಲಿ ನಮ್ಮ ನಾಯಕನಾರೆಂದು ತಿಳಿಯಲು, ಅವರು ನನ್ನನ್ನು ವಿಚಾರಣೆಗೊಳಪಡಿಸಿದರು. ನಮಗೆ ಯೇಸು ಕ್ರಿಸ್ತನ ಹೊರತು ಇನ್ನಾವ ನಾಯಕನೂ ಇಲ್ಲವೆಂದು ನಾನು ತಿಳಿಸಿದೆ. ಆಗ ಅವರು ತಮ್ಮ ಬೆತ್ತಗಳಿಂದ ನನಗೆ ಕನಿಕರವಿಲ್ಲದೆ ಹೊಡೆದರೂ ನಾನು ನನ್ನ ಕ್ರೈಸ್ತ ಸಹೋದರರ ಹೆಸರನ್ನು ಹೇಳಿ ದ್ರೋಹಬಗೆಯಲಿಲ್ಲ.
ಆ ಬಳಿಕ, ಅವರು ನನ್ನ ಪಾದಗಳನ್ನು ಜೋಡಿಸಿ ಕಟ್ಟಿ, ನನ್ನ ಕೈಗಳನ್ನು ನನ್ನ ತಲೆಯ ಮೇಲಕ್ಕೆ ಹಿಡಿದು ಅವನ್ನೂ ಜೋಡಿಸಿ ಕಟ್ಟಿದರು. ಆ ಬಳಿಕ, ಒಬ್ಬ ಪೊಲೀಸನನ್ನು ಬಿಟ್ಟು, ಎಲ್ಲರೂ ಒಬ್ಬರ ಹಿಂದೆ ಇನ್ನೊಬ್ಬರು ನನ್ನ ಮೇಲೆ ಬಲಾತ್ಕಾರಸಂಭೋಗ ಮಾಡಿದರು. ನಾನು ಎಷ್ಟು ಬಿಗಿಯಾಗಿ ಕಟ್ಟಲ್ಪಟ್ಟಿದ್ದೆನೆಂದರೆ, ಮೂರು ವರ್ಷಗಳು ಕಳೆದ ಬಳಿಕವೂ ಅದರ ಗುರುತುಗಳು ನನ್ನ ಮಣಿಕಟ್ಟಿನ ಮೇಲಿದ್ದವು. ನಾನು ಎಷ್ಟು ಘಾಸಿಗೊಳಿಸಲ್ಪಟ್ಟಿದ್ದೆನೆಂದರೆ, ನನ್ನ ಅತಿ ಕಠಿನ ಗಾಯಗಳು ಸ್ವಲ್ಪಮಟ್ಟಿಗೆ ಗುಣವಾಗುವ ವರೆಗೆ ಎರಡು ವಾರಗಳಷ್ಟು ಸಮಯ ನನ್ನನ್ನು ತಳಮನೆಯಲ್ಲಿ ಇಡಲಾಯಿತು.
ಉಪಶಮನಾವಧಿ
ತರುವಾಯ ನನ್ನನ್ನು ಎಲ್ಲಿ ಅನೇಕ ಮಂದಿ ಯೆಹೋವನ ಸಾಕ್ಷಿಗಳಿದ್ದರೊ, ಆ ನಾಜ್ಕಾನಿಸಾ ಪಟ್ಟಣದ ಸೆರೆಮನೆಗೆ ಒಯ್ಯಲಾಯಿತು. ನಾವು ಸೆರೆವಾಸಿಗಳಾಗಿದ್ದರೂ, ಸಾಪೇಕ್ಷವಾಗಿ ಎರಡು ಸಂತೋಷದ ವರ್ಷಗಳು ಕಳೆದವು. ನಾವು ಎಲ್ಲ ಕೂಟಗಳನ್ನು ಗುಪ್ತವಾಗಿ ನಡೆಸಿ, ಹೆಚ್ಚುಕಡಮೆ ಒಂದು ಸಭೆಯಂತೆ ಕಾರ್ಯನಡೆಸಿದೆವು. ಅನೌಪಚಾರಿಕ ಸಾಕ್ಷಿಸೇವೆಯ ಅನೇಕ ಸಂದರ್ಭಗಳೂ ನಮಗಿದ್ದವು. ನನಗೂ ನನ್ನ ತಾಯಿಗೂ ಬೈಬಲ್ ಸತ್ಯವನ್ನು ಪರಿಚಯಿಸಿದ್ದ ಎರ್ಸೇಬೆಟ್ ಸ್ಲೇಸಿಂಗರ್ನ ಮಾಂಸಿಕ ಸಹೋದರಿಯಾಗಿದ್ದ ಆಲ್ಗಾ ಸ್ಲೇಸಿಂಗರನ್ನು ನಾನು ಭೇಟಿಯಾದದ್ದು ಈ ಸೆರೆಮನೆಯಲ್ಲಿಯೇ.
ಇಸವಿ 1944ರೊಳಗಾಗಿ ಹಂಗೆರಿಯಲ್ಲಿದ್ದ ನಾಸಿಗಳು, ಅವರು ವಶಪಡಿಸಿಕೊಂಡಿದ್ದ ಇತರ ಪ್ರದೇಶಗಳಲ್ಲಿನ ಯೆಹೂದ್ಯರನ್ನು ಕ್ರಮಬದ್ಧವಾಗಿ ಕೊಲ್ಲುತ್ತಿದ್ದಂತೆಯೇ, ಹಂಗೆರಿಯಲ್ಲಿಯೂ ನಿರ್ನಾಮಮಾಡಲು ನಿಶ್ಚಯಿಸಿದ್ದರು. ಒಂದು ದಿನ ಅವರು ಆಲ್ಗಾ ಮತ್ತು ನನ್ನನ್ನು ಹುಡುಕುತ್ತಾ ಬಂದರು. ನಮ್ಮನ್ನು ರೈಲ್ವೇ ಪಶುಸಾಗಣೆಯ ಗಾಡಿಗಳಲ್ಲಿ ತುಂಬಿಸಲಾಯಿತು ಮತ್ತು ಚೆಕೊಸ್ಲೊವಾಕಿಯ ಮಾರ್ಗವಾಗಿ ಬಹಳ ಪ್ರಯಾಸದ ಪ್ರಯಾಣದ ಬಳಿಕ, ನಾವು ದಕ್ಷಿಣ ಪೋಲೆಂಡ್ನ ನಮ್ಮ ಗಮ್ಯಸ್ಥಾನವನ್ನು—ಔಷ್ವಿಟ್ಸ್ ಮರಣ ಶಿಬಿರ—ಸೇರಿದೆವು.
ಔಷ್ವಿಟ್ಸನ್ನು ಪಾರಾಗುವುದು
ಆಲ್ಗಾಳೊಂದಿಗೆ ಇರುತ್ತಿದ್ದಾಗ ನನಗೆ ಸುರಕ್ಷಿತಳೆಂಬ ಅನಿಸಿಕೆಯಾಗುತ್ತಿತ್ತು. ಕಷ್ಟಕರ ಸಂದರ್ಭಗಳಲ್ಲೂ ಆಕೆ ಹಾಸ್ಯಭರಿತಳಾಗಿರಸಾಧ್ಯವಿತ್ತು. ನಾವು ಔಷ್ವಿಟ್ಸನ್ನು ತಲುಪಿದಾಗ, ಕುಪ್ರಸಿದ್ಧ ಡಾ. ಮೆಂಗೆಲ ಎಂಬ ವ್ಯಕ್ತಿಯ ಮುಂದೆ ನಾವು ಹಾಜರಾದೆವು. ಹೊಸದಾಗಿ ಕೆಲಸಕ್ಕೆ ಬಂದವರಲ್ಲಿ ಗಟ್ಟಿಮುಟ್ಟಾದ ವ್ಯಕ್ತಿಗಳಿಂದ ಗಟ್ಟಿಮುಟ್ಟಾಗಿಲ್ಲದವರನ್ನು ಬೇರ್ಪಡಿಸುವುದು ಇವನ ಕೆಲಸವಾಗಿತ್ತು. ಗಟ್ಟಿಮುಟ್ಟಾಗಿಲ್ಲದವರು ವಿಷಾನಿಲ ಕೋಣೆಗಳಿಗೆ ಕಳುಹಿಸಲ್ಪಟ್ಟರು. ನಮ್ಮ ಸರದಿ ಬಂದಾಗ, ಮೆಂಗೆಲ, ಆಲ್ಗಾಳನ್ನು, “ನಿನಗೆಷ್ಟು ಪ್ರಾಯ?” ಎಂದು ಕೇಳಿದನು.
ಧೈರ್ಯದಿಂದ, ಆದರೆ ಹಾಸ್ಯಪೂರಿತವಾಗಿ ಕಣ್ಣು ಮಿಟುಕಿಸುತ್ತ, “20” ಎಂದಳವಳು. ವಾಸ್ತವವಾಗಿ ಅವಳ ಪ್ರಾಯ ಅದರ ಇಮ್ಮಡಿಯಾಗಿತ್ತು. ಆದರೆ ಮೆಂಗಲ ನಕ್ಕು ಅವಳು ಬಲಬದಿಗೆ ಹೋಗುವಂತೆ ಮತ್ತು ಆ ಕಾರಣದಿಂದ ಬದುಕಿ ಉಳಿಯುವಂತೆ ಬಿಟ್ಟನು.
ಔಷ್ವಿಟ್ಸ್ನ ಕೈದಿಗಳನ್ನೆಲ್ಲ ಅವರ ಕೈದಿ ಉಡುಪಿನಲ್ಲಿನ ಸಂಕೇತಗಳಿಂದ ಗುರುತಿಸಲಾಗಿತ್ತು—ಯೆಹೂದ್ಯರಿಗೆ ಸ್ಟಾರ್ ಆಫ್ ಡೇವಿಡ್ (ದಾವೀದನ ನಕ್ಷತ್ರ) ಗುರುತೂ ಯೆಹೋವನ ಸಾಕ್ಷಿಗಳಿಗೆ ಪರ್ಪ್ಲ್ ಟ್ರೈಆ್ಯಂಗಲ್ (ಕೆನ್ನೀಲಿ ತ್ರಿಕೋನ) ಗುರುತೂ ಇದ್ದವು. ಅವರು ನಮ್ಮ ಬಟ್ಟೆಗಳ ಮೇಲೆ ದಾವೀದನ ನಕ್ಷತ್ರವನ್ನು ಹೊಲಿಯಲು ಬಯಸಿದಾಗ, ನಾವು ಯೆಹೋವನ ಸಾಕ್ಷಿಗಳಾಗಿದ್ದೇವೆ ಮತ್ತು ನಮಗೆ ಕೆನ್ನೀಲಿ ತ್ರಿಕೋನವೇ ಬೇಕೆಂದು ನಾವು ಅವರಿಗೆ ವಿವರಿಸಿದೆವು. ಇದು ನಾವು ನಮ್ಮ ಯೆಹೂದಿ ಪರಂಪರೆಯ ಕುರಿತು ನಾಚಿಕೊಂಡದ್ದರ ಕಾರಣದಿಂದಲ್ಲ, ಬದಲಾಗಿ ಈಗ ಯೆಹೋವನ ಸಾಕ್ಷಿಗಳಾಗಿದ್ದುದರ ಕಾರಣದಿಂದಾಗಿತ್ತು. ನಮ್ಮನ್ನು ಒದೆಯುವ ಮೂಲಕ ಮತ್ತು ಹೊಡೆಯುವ ಮೂಲಕ ಯೆಹೂದಿ ಸಂಕೇತವನ್ನು ನಾವು ಸ್ವೀಕರಿಸುವಂತೆ ಅವರು ನಿರ್ಬಂಧಿಸಲು ಪ್ರಯತ್ನಿಸಿದರು. ಆದರೆ ಅವರು ನಮ್ಮನ್ನು ಯೆಹೋವನ ಸಾಕ್ಷಿಗಳೋಪಾದಿ ಅಂಗೀಕರಿಸುವ ತನಕ ನಾವು ಸ್ಥಿರವಾಗಿ ನಿಂತೆವು.
ಸ್ವಲ್ಪ ಸಮಯದಲ್ಲಿ, ನನಗಿಂತ ಮೂರು ವರ್ಷ ಚಿಕ್ಕವಳಾಗಿದ್ದ ನನ್ನ ತಂಗಿ ಎಲ್ವೀರಳನ್ನು ನಾನು ಭೇಟಿಯಾದೆ. ಏಳು ಮಂದಿಯಿದ್ದ ನಮ್ಮ ಇಡೀ ಕುಟುಂಬವನ್ನು ಔಷ್ವಿಟ್ಸ್ಗೆ ಕೊಂಡೊಯ್ಯಲಾಗಿತ್ತು. ಆದರೆ ಎಲ್ವೀರ ಮತ್ತು ನನ್ನನ್ನು ಮಾತ್ರ ಕೆಲಸಕ್ಕೆ ಯೋಗ್ಯರೆಂದು ಎಣಿಸಲಾಗಿತ್ತು. ತಂದೆ, ತಾಯಿ ಮತ್ತು ನಮ್ಮ ಮೂವರು ಸೋದರ ಸೋದರಿಯರು ವಿಷಾನಿಲ ಕೋಣೆಗಳಲ್ಲಿ ಸತ್ತರು. ಎಲ್ವೀರ ಆಗ ಒಬ್ಬ ಸಾಕ್ಷಿಯಾಗಿರಲಿಲ್ಲ ಮತ್ತು ನಾವು ಶಿಬಿರದ ಒಂದೇ ಭಾಗದಲ್ಲಿರಲಿಲ್ಲ. ಆಕೆ ಬದುಕಿ ಉಳಿದು, ಅಮೆರಿಕಕ್ಕೆ ವಲಸೆಹೋಗಿ, ಪೆನ್ಸಿಲ್ವೇನಿಯದ ಪಿಟ್ಸ್ಬರ್ಗಿನಲ್ಲಿದ್ದಾಗ ಸಾಕ್ಷಿಯಾಗಿ ಆ ಬಳಿಕ ಅಲ್ಲಿ 1973ರಲ್ಲಿ ತೀರಿಕೊಂಡಳು.
ಬೇರೆ ಶಿಬಿರಗಳಲ್ಲಿ ಬದುಕಿ ಉಳಿದದ್ದು
ರಷ್ಯನರು ಸಮೀಪಿಸುತ್ತಿದ್ದ ಕಾರಣ, 1944/45ರ ಚಳಿಗಾಲದಲ್ಲಿ ಜರ್ಮನರು ಔಷ್ವಿಟ್ಸನ್ನು ಖಾಲಿಮಾಡಲು ನಿರ್ಣಯಿಸಿದರು. ಆದಕಾರಣ ಜರ್ಮನಿಯ ಉತ್ತರ ಭಾಗದ ಬೆರ್ಗನ್-ಬೆಲ್ಸನ್ಗೆ ನಮ್ಮನ್ನು ಸ್ಥಳಾಂತರಿಸಲಾಯಿತು. ನಾವು ಬಂದ ಸ್ವಲ್ಪ ಸಮಯದ ಬಳಿಕ, ಆಲ್ಗಾ ಮತ್ತು ನನ್ನನ್ನು ಬ್ರೌನ್ಶ್ವೈಕ್ಗೆ ಕಳುಹಿಸಲಾಯಿತು. ಮಿತ್ರ ಪಡೆಗಳ ತೀಕ್ಷ್ಣ ಬಾಂಬ್ದಾಳಿಗಳಾದ ಬಳಿಕ ಭಗ್ನಾವಶೇಷಗಳನ್ನು ಸ್ವಚ್ಛಮಾಡುವುದು ನಮ್ಮ ಕೆಲಸವಾಗಲಿತ್ತು. ಆಲ್ಗಾ ಮತ್ತು ನಾನು ಈ ವಿಷಯವನ್ನು ಚರ್ಚಿಸಿದೆವು. ಈ ಕೆಲಸವನ್ನು ಮಾಡುವಲ್ಲಿ ನಾವು ನಮ್ಮ ತಾಟಸ್ಥ್ಯವನ್ನು ಉಲ್ಲಂಘಿಸುತ್ತೇವೊ ಎಂಬುದು ನಮಗೆ ತಿಳಿಯದ್ದರಿಂದ, ನಾವಿಬ್ಬರೂ ಅದರಲ್ಲಿ ಭಾಗವಹಿಸುವುದಿಲ್ಲವೆಂದು ನಿರ್ಣಯಿಸಿದೆವು.
ನಮ್ಮ ಈ ನಿರ್ಧಾರ ತುಂಬ ಉದ್ರೇಕವನ್ನು ಹುಟ್ಟಿಸಿತು. ನಮ್ಮನ್ನು ಚರ್ಮದ ಚಡಿಗಳಿಂದ ಹೊಡೆದು ಆ ಬಳಿಕ ಗುಂಡುಹಾರಿಸುವ ಒಂದು ಪಡೆಯ ಮುಂದೆ ಕೊಂಡೊಯ್ಯಲಾಯಿತು. ವಿಷಯವನ್ನು ಪರ್ಯಾಲೋಚಿಸಲು ನಮಗೆ ಒಂದು ನಿಮಿಷ ಕೊಡಲಾಗಿ, ನಾವು ಮನಸ್ಸು ಬದಲಾಯಿಸದಿದ್ದರೆ ಗುಂಡುಹೊಡೆದು ಕೊಲ್ಲಲಾಗುವುದೆಂದು ಹೇಳಲಾಯಿತು. ನಮಗೆ ಯೋಚಿಸಲು ಸಮಯವೇ ಬೇಕಾಗಿಲ್ಲ, ಏಕೆಂದರೆ ನಾವು ಈಗಾಗಲೇ ನಿರ್ಣಯಿಸಿದ್ದೇವೆಂದು ನಾವು ಹೇಳಿದೆವು. ಹೇಗೂ, ಶಿಬಿರದ ಅಧಿಕಾರಿಯ ಅನುಪಸ್ಥಿತಿಯ ಕಾರಣ ಮತ್ತು ಮರಣದಂಡನೆಯನ್ನು ವಿಧಿಸುವ ಅಧಿಕಾರ ಅವನೊಬ್ಬನಿಗೇ ಇದ್ದ ಕಾರಣ ನಮ್ಮ ಮರಣದಂಡನೆಯನ್ನು ಮುಂದಕ್ಕೆ ಹಾಕಬೇಕಾಯಿತು.
ಈ ಮಧ್ಯೆ, ನಮ್ಮನ್ನು ಶಿಬಿರಾಂಗಣದಲ್ಲಿ ಇಡೀ ದಿನ ನಿಲ್ಲುವಂತೆ ನಿರ್ಬಂಧಿಸಲಾಯಿತು. ಪ್ರತಿ ಎರಡು ತಾಸುಗಳಲ್ಲಿ ಬದಲಿಯಾಗುತ್ತಿದ್ದ ಇಬ್ಬರು ಸಶಸ್ತ್ರ ಪಹರೆಯವರು ನಮ್ಮ ಕಾವಲುಗಾರರಾಗಿದ್ದರು. ನಮಗೆ ಯಾವ ಆಹಾರವನ್ನೂ ಕೊಡಲಾಗಲಿಲ್ಲ ಮತ್ತು ಫೆಬ್ರವರಿ ತಿಂಗಳಾಗಿದ್ದರಿಂದ ಚಳಿಯಲ್ಲಿ ನಾವು ತೀವ್ರ ಬಾಧೆಪಟ್ಟೆವು. ಇಂತಹ ದುರುಪಚಾರವು ಒಂದು ವಾರದ ವರೆಗೆ ನಡೆದರೂ ಶಿಬಿರಾಧಿಕಾರಿ ಬರಲಿಲ್ಲ. ಆದಕಾರಣ ನಮ್ಮನ್ನು ಒಂದು ಟ್ರಕ್ಕಿನ ಹಿಂದುಗಡೆ ಹಾಕಿ ಕಳುಹಿಸಲಾಯಿತು ಮತ್ತು ನಮ್ಮ ಆಶ್ಚರ್ಯಕ್ಕೆ, ನಾವು ಬೆರ್ಗನ್-ಬೆಲ್ಸನ್ಗೆ ಹಿಂದೆ ಹೋದೆವು.
ಅಷ್ಟರಲ್ಲಿ, ಆಲ್ಗಾ ಮತ್ತು ನನ್ನ ಪರಿಸ್ಥಿತಿ ತೀರ ಕೆಟ್ಟದ್ದಾಗಿತ್ತು. ನನ್ನ ಹೆಚ್ಚಿನಾಂಶ ಕೂದಲು ನಷ್ಟವಾಗಿತ್ತಲ್ಲದೆ ನನಗೆ ತುಂಬ ಜ್ವರ ಬರುತ್ತಿತ್ತು. ನಾನು ಸ್ವಲ್ಪ ಮಟ್ಟಿಗೆ ಕೆಲಸಮಾಡಲು ಸಾಧ್ಯವಾದದ್ದು ಅತ್ಯಂತ ಪ್ರಯತ್ನದ ಕಾರಣವೇ. ಪ್ರತಿ ದಿನ ಕೋಸುಗಡ್ಡೆಯ ತೆಳ್ಳಗಿನ ಸೂಪ್ ಮತ್ತು ರೊಟ್ಟಿಯ ಸಣ್ಣ ತುಂಡು ಸಾಕಾಗುತ್ತಿರಲಿಲ್ಲ. ಆದರೆ ಕೆಲಸಮಾಡುವುದು ಅನಿವಾರ್ಯವಾಗಿತ್ತು ಏಕೆಂದರೆ, ಕೆಲಸಮಾಡಲಾಗದವರನ್ನು ಕೊಲ್ಲಲಾಗುತ್ತಿತ್ತು. ನನ್ನೊಂದಿಗೆ ಅಡುಗೆಮನೆಯಲ್ಲಿ ಕೆಲಸಮಾಡುತ್ತಿದ್ದ ಜರ್ಮನ್ ಸಹೋದರಿಯರು ನಾನು ತುಸು ವಿಶ್ರಾಂತಿ ಪಡೆಯುವಂತೆ ನನಗೆ ಸಹಾಯಮಾಡಿದರು. ಪರೀಕ್ಷಣ ಕಾವಲುಗಾರರು ಬರುತ್ತಿದ್ದಾರೆಂದು ಗೊತ್ತಾದಾಗ, ನಾನು ಎದ್ದುನಿಂತು ಶ್ರದ್ಧಾಪೂರ್ವಕವಾಗಿ ಕೆಲಸಮಾಡುತ್ತಿದ್ದೇನೆಂದು ತೋರಿಸಲಾಗುವಂತೆ ಆ ಸಹೋದರಿಯರು ನನ್ನನ್ನು ಎಚ್ಚರಿಸುತ್ತಿದ್ದರು.
ಒಂದು ದಿನ, ಆಲ್ಗಾಗೆ ತನ್ನ ಕೆಲಸದ ಸ್ಥಳಕ್ಕೆ ಹೋಗುವಷ್ಟೂ ಶಕ್ತಿಯಿರಲಿಲ್ಲ. ಮತ್ತು ಅಂದಿನಿಂದ ನಾವು ಆಕೆಯನ್ನು ನೋಡಲೇ ಇಲ್ಲ. ಹೀಗೆ ಧೀರಳಾಗಿದ್ದ ಮತ್ತು ಶಿಬಿರಗಳಲ್ಲಿ ಆ ಕಷ್ಟಕರವಾದ ತಿಂಗಳುಗಳಲ್ಲಿ ನನಗೆ ಮಹಾ ಸಹಾಯವಾಗಿದ್ದ ಒಬ್ಬ ಸ್ನೇಹಿತೆಯನ್ನೂ ಜೊತೆಗಾರ್ತಿಯನ್ನೂ ನಾನು ಕಳೆದುಕೊಂಡೆ. ನಮ್ಮ ಕರ್ತನಾದ ಯೇಸುಕ್ರಿಸ್ತನ ಅಭಿಷಿಕ್ತ ಅನುಯಾಯಿಯಾಗಿದ್ದ ಆಕೆಗೆ ಆ ಕೂಡಲೇ ತನ್ನ ಸ್ವರ್ಗೀಯ ಬಹುಮಾನವು ದೊರಕಿರಬೇಕು.—ಪ್ರಕಟನೆ 14:13.
ಬಿಡುಗಡೆ ಮತ್ತು ಅನಂತರದ ಜೀವನ
ಮೇ 1945ರಲ್ಲಿ ಯುದ್ಧವು ಮುಗಿದು, ಬಿಡುಗಡೆಯ ಸಮಯ ಬಂದಾಗ, ನಾನು ಎಷ್ಟು ದುರ್ಬಲಳಾಗಿದ್ದೆನೆಂದರೆ, ಹಿಂಸಕರ ನೊಗವು ಕೊನೆಗೆ ಮುರಿಯಲ್ಪಟ್ಟಿತೆಂದು ಹರ್ಷಿಸಲಿಕ್ಕೂ ನನ್ನಿಂದಾಗಲಿಲ್ಲ, ವಿಮೋಚಿತರನ್ನು ಅಂಗೀಕರಿಸುವ ದೇಶಗಳಿಗೆ ಸಾಗಿಸುವ ರಕ್ಷಕ ದಳಗಳನ್ನು ಜೊತೆಗೂಡುವುದೂ ನನ್ನಿಂದಾಗಲಿಲ್ಲ. ಪುನಃ ಬಲವನ್ನು ಪಡೆದುಕೊಳ್ಳುವ ಸಲುವಾಗಿ ನಾನು ಒಂದು ಆಸ್ಪತ್ರೆಯಲ್ಲಿ ಮೂರು ತಿಂಗಳು ಉಳಿದೆ. ಆ ಬಳಿಕ ನನ್ನ ಹೊಸ ನಿವಾಸವಾಗಿ ಪರಿಣಮಿಸಿದ ಸ್ವೀಡನ್ಗೆ ನಾನು ಒಯ್ಯಲ್ಪಟ್ಟೆ. ಕೂಡಲೇ ನಾನು ನನ್ನ ಕ್ರೈಸ್ತ ಸೋದರಸೋದರಿಯರ ಸಂಪರ್ಕ ಬೆಳೆಸಿ, ಸಕಾಲದಲ್ಲಿ ಕ್ಷೇತ್ರ ಶುಶ್ರೂಷೆಯ ಆ ಅಮೂಲ್ಯ ನಿಧಿಯನ್ನು ವಹಿಸಿಕೊಂಡೆ.
ನಾನು 1949ರಲ್ಲಿ, ಅನೇಕ ವರ್ಷಗಳ ವರೆಗೆ ಯೆಹೋವನ ಸಾಕ್ಷಿಗಳ ಸಂಚಾರ ಸೇವಕರಾಗಿ ಸೇವೆಮಾಡಿದ ಲೆನರ್ಟ್ ಯೂಸೆಫ್ಸನ್ ಎಂಬವರನ್ನು ಮದುವೆಯಾದೆ. ಲೋಕ ಯುದ್ಧ IIರ ಸಮಯದಲ್ಲಿ ತನ್ನ ನಂಬಿಕೆಯನ್ನು ಕಾಪಾಡಿಕೊಂಡದ್ದರ ಕಾರಣಕ್ಕಾಗಿ ಅವರೂ ಸೆರೆಮನೆಯಲ್ಲಿದ್ದರು. ಸೆಪ್ಟೆಂಬರ್ 1949ರಲ್ಲಿ ನಾವು ಪಯನೀಯರರೋಪಾದಿ ನಮ್ಮ ಜೀವಿತವನ್ನು ಒಟ್ಟಿಗೆ ಆರಂಭಿಸಿ, ಬೂರೋಸ್ ನಗರದಲ್ಲಿ ಸೇವೆಮಾಡುವಂತೆ ನೇಮಿಸಲ್ಪಟ್ಟೆವು. ಅಲ್ಲಿ ನಮ್ಮ ಪ್ರಥಮ ವರುಷಗಳಲ್ಲಿ ನಾವು ಪ್ರತಿ ವಾರ ಆಸಕ್ತರೊಂದಿಗೆ ಹತ್ತು ಬೈಬಲ್ ಅಧ್ಯಯನಗಳನ್ನು ಕ್ರಮವಾಗಿ ನಡೆಸುತ್ತಿದ್ದೆವು. ಬೂರೋಸ್ನ ಸಭೆಯು ಒಂಬತ್ತು ವರುಷಗಳಲ್ಲಿ ಮೂರಾಗುವುದನ್ನು ನೋಡುವ ಸಂತೋಷ ನಮಗಿತ್ತು ಮತ್ತು ಈಗ ಅಲ್ಲಿ ಐದು ಸಭೆಗಳಿವೆ.
ನಾನು ದೀರ್ಘ ಸಮಯದ ವರೆಗೆ ಪಯನೀಯರಳಾಗಿ ಉಳಿಯಲು ಶಕ್ತಳಾಗಲಿಲ್ಲ, ಏಕೆಂದರೆ 1950ರಲ್ಲಿ ನಾವು ಒಬ್ಬ ಮಗಳು, ಮತ್ತು ಎರಡು ವರ್ಷಗಳ ಮೇಲೆ ಒಬ್ಬ ಮಗನ ಹೆತ್ತವರಾದೆವು. ಹೀಗೆ, ಹಂಗೆರಿಯಲ್ಲಿನ ಆ ಪ್ರಿಯ ಸಹೋದರನು ನಾನು ಕೇವಲ 16 ವಯಸ್ಸಿನವಳಾಗಿದ್ದಾಗ ಕಲಿಸಿದಂತಹ ಅಮೂಲ್ಯವಾದ ಸತ್ಯವನ್ನು ನನ್ನ ಮಕ್ಕಳಿಗೂ ಕಲಿಸುವ ಹರ್ಷದಾಯಕ ಸುಯೋಗವು ನನಗೆ ದೊರೆಯಿತು, ಅದೇನಂದರೆ: “ಯೆಹೋವನನ್ನು ಸೇವಿಸುವುದು ಮಾನವನಿಗಿರಸಾಧ್ಯವಿರುವ ಅತಿ ದೊಡ್ಡದಾದ ಗೌರವವಾಗಿದೆ.”
ನನ್ನ ಜೀವಿತವನ್ನು ಹಿಂದೆ ತಿರುಗಿ ನೋಡುವಾಗ, ಯೋಬನ ತಾಳ್ಮೆಯ ಕುರಿತು ನಮಗೆ ಜ್ಞಾಪಕ ಹುಟ್ಟಿಸಲು ಶಿಷ್ಯ ಯಾಕೋಬನು ಏನನ್ನು ಬರೆದನೊ ಅದರ ಸತ್ಯವನ್ನು ನಾನು ಅನುಭವಿಸಿದ್ದೇನೆಂದು ನಾನು ಗ್ರಹಿಸುತ್ತೇನೆ: “ಕರ್ತನು [ಯೆಹೋವನು] ಕರುಣಾಸಾಗರನೂ ದಯಾಳುವೂ ಆಗಿದ್ದಾನೆ.” (ಯಾಕೋಬ 5:11) ನನಗೂ ಭಯಂಕರ ಪರೀಕ್ಷೆಗಳು ಬಂದಿವೆಯಾದರೂ, ಇಬ್ಬರು ಮಕ್ಕಳು, ಅವರ ಜೊತೆಗಳು ಮತ್ತು ಆರು ಮಂದಿ ಮೊಮ್ಮಕ್ಕಳು—ಇವರಿಂದ ನಾನು ಬಹಳವಾಗಿ ಆಶೀರ್ವದಿಸಲ್ಪಟ್ಟಿದ್ದೇನೆ ಮತ್ತು ಅವರೆಲ್ಲರೂ ಯೆಹೋವನ ಆರಾಧಕರಾಗಿದ್ದಾರೆ. ಅವರಲ್ಲದೆ, ನನಗೆ ಅನೇಕಾನೇಕ ಆತ್ಮಿಕ ಮಕ್ಕಳು ಮತ್ತು ಮೊಮ್ಮಕ್ಕಳಿದ್ದಾರೆ. ಅವರಲ್ಲಿ ಕೆಲವರು ಪಯನೀಯರರು ಮತ್ತು ಮಿಷನೆರಿಗಳಾಗಿ ಸೇವೆಮಾಡುತ್ತಿದ್ದಾರೆ. ಈಗ ನನಗಿರುವ ಮಹಾ ನಿರೀಕ್ಷೆಯು, ಮರಣದಲ್ಲಿ ನಿದ್ರಿಸುತ್ತಿರುವ ಪ್ರಿಯರನ್ನು ಸಂಧಿಸಿ, ಅವರು ತಮ್ಮ ಸ್ಮರಣೆಯ ಸಮಾಧಿಗಳಿಂದ ಎದ್ದುಬರುವಾಗ ಅವರನ್ನು ಆಲಿಂಗಿಸುವುದೇ ಆಗಿದೆ.—ಯೋಹಾನ 5:28, 29.
[ಪುಟ 31 ರಲ್ಲಿರುವ ಚಿತ್ರ]
IIನೆಯ ಲೋಕ ಯುದ್ಧದ ಬಳಿಕ, ಸ್ವೀಡನ್ನಲ್ಲಿ ಶುಶ್ರೂಷೆಯಲ್ಲಿರುವಾಗ
[ಪುಟ 31 ರಲ್ಲಿರುವ ಚಿತ್ರ]
ನನ್ನ ಗಂಡನೊಂದಿಗೆ