ನಿಜ ನಂಬಿಕೆಗೆ ನಡೆಸುವಂತಹ ಆ ಹೆಸರು
“ನೀವು ಯೇಸುವಿನಲ್ಲಿ ಮತ್ತು ವಿಮೋಚಿಸುವಂತಹ ಅವನ ರಕ್ತದಲ್ಲಿ ನಂಬಿಕೆಯಿಡುವುದಿಲ್ಲ,” ಎಂದು ಒಬ್ಬಾಕೆ ಸ್ತ್ರೀಯು ಯೆಹೋವನ ಸಾಕ್ಷಿಗಳಲ್ಲಿ ಒಬ್ಬರಿಗೆ ಹೇಳಿದಳು. ಮನುಷ್ಯನೊಬ್ಬನು ಪ್ರತಿಪಾದಿಸಿದ್ದು: “ನೀವು ನಿಮ್ಮನ್ನು ಯೆಹೋವನ ಸಾಕ್ಷಿಗಳೆಂದು ಕರೆದುಕೊಳ್ಳುತ್ತೀರಾದರೂ, ನಾನೊಬ್ಬ ಯೇಸುವಿನ ಸಾಕ್ಷಿಯಾಗಿದ್ದೇನೆ.”
ಯೆಹೋವನ ಸಾಕ್ಷಿಗಳು ಯೇಸುವಿನಲ್ಲಿ ನಂಬಿಕೆಯಿಡುವುದಿಲ್ಲ ಅಥವಾ ಅವನಿಗೆ ಸಾಕಷ್ಟು ಪ್ರಾಧಾನ್ಯತೆಯನ್ನು ಕೊಡುವುದಿಲ್ಲವೆಂಬ ಅಭಿಪ್ರಾಯವು ಸರ್ವಸಾಧಾರಣವಾಗಿದೆ. ಆದರೆ, ನಿಜತ್ವಗಳು ಏನನ್ನು ತೋರಿಸುತ್ತವೆ?
ಯೆಹೋವ ಎಂಬ ದೇವರ ಹೆಸರಿನ ಸಂಬಂಧದಲ್ಲಿ, ಯೆಹೋವನ ಸಾಕ್ಷಿಗಳಿಗೆ ಬಲವಾದ ಅನಿಸಿಕೆಗಳಿರುವುದು ನಿಜ.a ಬ್ರೆಸಿಲ್ ದೇಶದ ಈತಾಮಾರ್ ಎಂಬ ಸಾಕ್ಷಿಯು ಜ್ಞಾಪಿಸಿಕೊಳ್ಳುವುದು: “ನಾನು ದೇವರ ಹೆಸರನ್ನು ತಿಳಿದುಕೊಂಡ ಆ ಸಮಯವು, ನನ್ನ ಜೀವಿತನ್ನೇ ಬದಲಾಯಿಸಿದ ಸಮಯವಾಗಿತ್ತು. ನಾನು ಅದನ್ನು ಪ್ರಥಮ ಬಾರಿ ಓದಿದಾಗ, ನಿದ್ರಾವಸ್ಥೆಯಿಂದ ಎಚ್ಚರಗೊಂಡಂತೆ ನನಗೆ ಭಾಸವಾಯಿತು. ಯೆಹೋವ ಎಂಬ ಹೆಸರು ನನ್ನಲ್ಲಿನ ಉತ್ಸಾಹವನ್ನು ಕೆರಳಿಸಿ, ನನ್ನನ್ನು ಪ್ರಚೋದಿಸಿತು. ಅದು ನನ್ನ ಅಂತರಂಗವನ್ನು ಸ್ಪರ್ಶಿಸಿತು.” ಹಾಗಿದ್ದರೂ, ಅವನು ಕೂಡಿಸಿ ಹೇಳುವುದು: “ನನ್ನ ಹೃದಯವು ಯೇಸುವಿಗಾಗಿಯೂ ಪ್ರೀತಿಯಿಂದ ತುಂಬಿತುಳುಕುತ್ತದೆ.”
ಹೌದು, ನಿತ್ಯಜೀವವನ್ನು ಪಡೆದುಕೊಳ್ಳಲು ತಾವು “ದೇವರ ಮಗನ ಹೆಸರಿನಲ್ಲಿ,” ಅಂದರೆ, ಯೇಸುವಿನಲ್ಲಿ ನಂಬಿಕೆಯಿಡಬೇಕೆಂದು ಯೆಹೋವನ ಸಾಕ್ಷಿಗಳು ಗ್ರಹಿಸುತ್ತಾರೆ. (1 ಯೋಹಾನ 5:13) ಆದರೆ, ‘ಯೇಸುವಿನ ಹೆಸರಿನಲ್ಲಿ’ ಎಂಬ ಅಭಿವ್ಯಕ್ತಿಯ ಅರ್ಥವೇನಾಗಿದೆ?
ಯೇಸುವಿನ ಹೆಸರು ಏನನ್ನು ಪ್ರತಿನಿಧಿಸುತ್ತದೆ?
“ಯೇಸುವಿನ ಹೆಸರಿನಲ್ಲಿ” ಎಂಬಂಥ ಅಭಿವ್ಯಕ್ತಿ ಮತ್ತು ತದ್ರೀತಿಯ ಅಭಿವ್ಯಕ್ತಿಗಳು, ಕ್ರೈಸ್ತ ಗ್ರೀಕ್ ಶಾಸ್ತ್ರಗಳು ಅಥವಾ “ಹೊಸ ಒಡಂಬಡಿಕೆ”ಯ ಆದ್ಯಂತ ಕಂಡುಬರುತ್ತವೆ. ಯೇಸುವಿನ ಪಾತ್ರವನ್ನು ಸೂಚಿಸುತ್ತಾ ಉಪಯೋಗಿಸಲ್ಪಟ್ಟಾಗ, “ಹೆಸರು” ಎಂಬ ಪದವು 80ಕ್ಕಿಂತಲೂ ಹೆಚ್ಚು ಬಾರಿ ಕಾಣಿಸಿಕೊಳ್ಳುತ್ತದೆ. ಅಪೊಸ್ತಲರ ಕೃತ್ಯಗಳು ಎಂಬ ಪುಸ್ತಕದಲ್ಲಿಯೇ ಆ ಪದವು ಸುಮಾರು 30 ಬಾರಿ ಕಂಡುಬರುತ್ತದೆ. ಪ್ರಥಮ ಶತಮಾನದ ಕ್ರೈಸ್ತರು, ಯೇಸುವಿನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿದರು, ಅವನ ಹೆಸರಿನಲ್ಲಿ ವಾಸಿಮಾಡಿದರು, ಕಲಿಸಿದರು, ಪ್ರಾರ್ಥಿಸಿದರು, ಕಷ್ಟಾನುಭವಿಸಿದರು, ಮತ್ತು ಅದನ್ನು ಮಹಿಮೆಪಡಿಸಿದರು.—ಅ. ಕೃತ್ಯಗಳು 2:38; 3:16; 5:28; 9:14, 16; 19:17.
ಬೈಬಲಿನ ಒಂದು ಶಬ್ದಕೋಶಕ್ಕನುಸಾರ, ಬೈಬಲಿನಲ್ಲಿ “ಹೆಸರು” ಎಂಬುದಕ್ಕಿರುವ ಗ್ರೀಕ್ ಪದವು, “ಅಧಿಕಾರ, ವ್ಯಕ್ತಿತ್ವ, ಅಂತಸ್ತು, ಗಾಂಭೀರ್ಯ, ಶಕ್ತಿ, ಅತ್ಯುತ್ಕೃಷ್ಟತೆ, ಮುಂತಾದವುಗಳನ್ನು ಅರ್ಥೈಸತಕ್ಕ ಎಲ್ಲ ವಿಷಯಗಳನ್ನು ಸೂಚಿಸುವುದಕ್ಕಾಗಿ ಒಂದು ಹೆಸರನ್ನು” ಬಳಸಲಾಗುತ್ತದೆ. ಆದುದರಿಂದ ಯೇಸುವಿನ ಹೆಸರು, ಯೆಹೋವ ದೇವರು ಅವನಿಗೆ ಒಪ್ಪಿಸಿಕೊಟ್ಟಿರುವ ಘನತೆ ಹಾಗೂ ಭಾರೀ ಉಚ್ಚ ಅಧಿಕಾರ ವ್ಯಾಪ್ತಿಯನ್ನು ಪ್ರತಿನಿಧಿಸುತ್ತದೆ. ಸ್ವತಃ ಯೇಸುವೇ ಹೇಳಿದ್ದು: “ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ಎಲ್ಲಾ ಅಧಿಕಾರವು ನನಗೆ ಕೊಡಲ್ಪಟ್ಟಿದೆ.” (ಮತ್ತಾಯ 28:18) ಪೇತ್ರ ಯೋಹಾನರು ಒಬ್ಬ ಕುಂಟನನ್ನು ಗುಣಪಡಿಸಿದ ತರುವಾಯ, ಯೆಹೂದಿ ಧಾರ್ಮಿಕ ನಾಯಕರು ಕೇಳಿದ್ದು: “ನೀವು ಎಂಥಾ ಶಕ್ತಿಯಿಂದ ಇಲ್ಲವೆ ಎಂಥಾ ಹೆಸರಿನಿಂದ ಇದನ್ನು ಮಾಡಿದಿರಿ?” ಅದಕ್ಕೆ ಪೇತ್ರನು, “ನಜರೇತಿನ ಯೇಸು ಕ್ರಿಸ್ತನ ಹೆಸರಿನಿಂದಲೇ ಈ ಮನುಷ್ಯನು ನಿಮ್ಮೆದುರಿನಲ್ಲಿ ಸ್ವಸ್ಥನಾಗಿ ನಿಂತಿರುತ್ತಾನೆ” ಎಂದು ಧೈರ್ಯದಿಂದ ಉತ್ತರಿಸಿದಾಗ, ಯೇಸುವಿನ ಹೆಸರು ಪ್ರತಿನಿಧಿಸುವ ಅಧಿಕಾರ ಹಾಗೂ ಶಕ್ತಿಯಲ್ಲಿ ಅವನಿಗಿರುವ ನಂಬಿಕೆಯನ್ನು ವ್ಯಕ್ತಪಡಿಸಿದನು.—ಅ. ಕೃತ್ಯಗಳು 3:1-10; 4:5-10.
ಯಾರಲ್ಲಿ ನಂಬಿಕೆ—ಯೇಸುವಿನಲ್ಲೊ ಕೈಸರನಲ್ಲೊ?
ಯೇಸುವಿನ ಹೆಸರಿನಲ್ಲಿ ನಂಬಿಕೆಯ ಪ್ರತಿಪಾದನೆ ಮಾಡುವುದು ಸುಲಭವಾಗಿರಲಿಲ್ಲ. ಯೇಸು ಮುಂತಿಳಿಸಿದಂತೆ, ಅವನ ಶಿಷ್ಯರು ‘ಅವನ ಹೆಸರಿನ ನಿಮಿತ್ತ ಎಲ್ಲಾ ಜನಾಂಗಗಳವರ ಹಗೆಗೆ’ ಪಾತ್ರರಾಗುವರು. (ಮತ್ತಾಯ 24:9) ಏಕೆ? ಏಕೆಂದರೆ, ಯೇಸುವಿನ ಹೆಸರು, ದೇವರ ನೇಮಿತ ಅರಸನಾಗಿ, ರಾಜಾಧಿರಾಜನಾಗಿ ಅವನ ಸ್ಥಾನಮಾನವನ್ನು ಪ್ರತಿನಿಧಿಸುತ್ತದೆ. ಎಲ್ಲ ಜನಾಂಗಗಳವರು ಅವನಿಗೆ ಅಧೀನತೆಯಲ್ಲಿ ತಲೆಬಾಗಬೇಕಾದರೂ, ಅದನ್ನು ಮಾಡಲು ಅವರು ಸಿದ್ಧರಾಗಿರುವುದಿಲ್ಲ.—ಕೀರ್ತನೆ 2:1-7.
ಯೇಸುವಿನ ದಿನದ ಧಾರ್ಮಿಕ ನಾಯಕರು ಸಹ, ಯೇಸುವಿಗೆ ಅಧೀನರಾಗಿ ತಲೆಬಾಗಲು ಇಷ್ಟಪಡಲಿಲ್ಲ. “ಕೈಸರನೇ ಹೊರತು ನಮಗೆ ಬೇರೆ ಅರಸನಿಲ್ಲ,” ಎಂದು ಹೇಳುವ ಮೂಲಕ, ಅವರು ದೇವಕುಮಾರನನ್ನು ತಿರಸ್ಕರಿಸಿಬಿಟ್ಟರು. (ಯೋಹಾನ 19:13-15) ತಮ್ಮ ನಂಬಿಕೆಯನ್ನು ಅವರು ಕೈಸರನಲ್ಲಿ ಹಾಗೂ ಅವನ ಸಾಮ್ರಾಜ್ಯದ ಶಕ್ತಿಸಾಮರ್ಥ್ಯದಲ್ಲಿ ವ್ಯಕ್ತಪಡಿಸಿದರು. ತಮ್ಮ ಸ್ಥಾನಮಾನಗಳನ್ನು ಕಾಪಾಡಿಕೊಳ್ಳುವ ಸಲುವಾಗಿ, ಯೇಸು ಸಾಯಬೇಕೆಂತಲೂ ಅವರು ನಿರ್ಧರಿಸಿದರು.—ಯೋಹಾನ 11:47-53.
ಯೇಸುವಿನ ಮರಣಾನಂತರದ ಶತಮಾನಗಳಲ್ಲಿ, ಕ್ರೈಸ್ತರೆಂದು ಹೇಳಿಕೊಂಡ ಅನೇಕರು, ಯೆಹೂದಿ ನಾಯಕರಂತಹ ಮನೋಭಾವವನ್ನೇ ತೋರ್ಪಡಿಸಿದರು. ಈ ನಾಮಮಾತ್ರದ ಕ್ರೈಸ್ತರು, ಸರಕಾರದ ಶಕ್ತಿಸಾಮರ್ಥ್ಯದಲ್ಲಿ ನಂಬಿಕೆಯನ್ನಿಟ್ಟು, ಅದರ ಗಲಭೆಗಳಲ್ಲಿ ಒಳಗೊಂಡರು. ಉದಾಹರಣೆಗೆ, 11ನೆಯ ಶತಮಾನದಲ್ಲಿ, ನಿರುದ್ಯೋಗಿ ಯೋಧರನ್ನು ಮಿಲಿಷಿಯಾ ಕ್ರಿಸ್ಟಿ ಅಥವಾ ಕ್ರೈಸ್ತ ಸೈನಿಕರಾಗಿ ಚರ್ಚು ಒಟ್ಟುಗೂಡಿಸಿದಾಗ, “ನ್ಯಾಯಸಮ್ಮತ ಯುದ್ಧದ ಹೊಣೆಗಾರಿಕೆಯು ಕ್ರೈಸ್ತಪ್ರಪಂಚದ ಐಹಿಕ ಅಧಿಕಾರಿಗಳಿಂದ ತೆಗೆಯಲ್ಪಟ್ಟು, ಕ್ರೈಸ್ತ ಸೈನಿಕರ ನಿಯೋಗದ ಮೂಲಕ ಚರ್ಚಿಗೆ ವರ್ಗಾಯಿಸಲ್ಪಟ್ಟಿತು.” (ದಿ ಆಕ್ಸ್ಫರ್ಡ್ ಹಿಸ್ಟರಿ ಆಫ್ ಕ್ರಿಸ್ಟ್ಯಾನಿಟಿ) ಆ ವೃತ್ತಾಂತವು ಕೂಡಿಸಿ ಹೇಳುವುದೇನೆಂದರೆ, ಧಾರ್ಮಿಕ ಯುದ್ಧದಲ್ಲಿ ತೊಡಗುವ ಹೆಚ್ಚಿನ ಸೈನಿಕರು “ತಾವು ದೇವರೊಂದಿಗೆ ಒಂದು ಒಪ್ಪಂದವನ್ನು ಮಾಡಿಕೊಂಡು, ಪ್ರಮೋದವನದಲ್ಲಿ ತಮಗಾಗಿ ಒಂದು ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆಂದು” ನಂಬುವಂತೆ, ಪೋಪನ ಕೆಲವು ಪ್ರಕಟನೆಗಳು ಸಹಾಯಮಾಡಿದವು.
ಯೇಸುವಿಗೆ ನಿಷ್ಠಾವಂತರಾಗಿದ್ದು, ಅದೇ ಸಮಯದಲ್ಲಿ ರಾಜಕೀಯ ವಿಷಯಗಳಲ್ಲಿ ಹಾಗೂ ರಾಷ್ಟ್ರಗಳ ಯುದ್ಧಗಳಲ್ಲಿ ಭಾಗವಹಿಸಲು ಸಾಧ್ಯವೆಂದು ಕೆಲವರು ವಾದಿಸಬಹುದು. ದುಷ್ಟತನದ ವಿರುದ್ಧ ಹೋರಾಡುವುದು ಒಬ್ಬ ಕ್ರೈಸ್ತನ ಕರ್ತವ್ಯವೆಂದು, ಮತ್ತು ಅಗತ್ಯಬಿದ್ದಾಗ ಯುದ್ಧವನ್ನೂ ಮಾಡಬಹುದೆಂದು ಅವರಿಗೆ ಅನಿಸಬಹುದು. ಆದರೆ, ಆದಿ ಕ್ರೈಸ್ತರಿಗೆ ಇದೇ ರೀತಿಯ ದೃಷ್ಟಿಕೋನವಿತ್ತೊ?
“ಆದಿ ಕ್ರೈಸ್ತರು ಸಶಸ್ತ್ರ ಸೇನೆಗಳಲ್ಲಿ ಸೇವೆಸಲ್ಲಿಸಲಿಲ್ಲ” ಎಂದು ದ ಕ್ರಿಸ್ಟಿಯನ್ ಸೆಂಚುರಿ ಪತ್ರಿಕೆಯಲ್ಲಿನ ಒಂದು ಲೇಖನವು ಹೇಳುತ್ತದೆ. ಸಾ.ಶ. 170-180ರ ಶತಕದ ವರೆಗೆ, ಕ್ರೈಸ್ತರು ಸೇನೆಗಳಲ್ಲಿ ಸೇವೆಸಲ್ಲಿಸಿದರೆಂಬುದಕ್ಕೆ ಯಾವ ಪುರಾವೆಯೂ ಇಲ್ಲವೆಂದು ಅದು ವಿವರಿಸುತ್ತದೆ. ಆ ಲೇಖನವು ಕೂಡಿಸಿ ಹೇಳುವುದು: “ತದನಂತರ ಕ್ರೈಸ್ತರು, ತಮ್ಮ ತಾಟಸ್ಥ್ಯವನ್ನು ಕ್ರಮೇಣ ಬಿಟ್ಟುಬಿಟ್ಟರು.”
ಇದರಿಂದಾದ ಪರಿಣಾಮವೇನು? ದ ಕ್ರಿಸ್ಟಿಯನ್ ಸೆಂಚುರಿ ಲೇಖನವು ಗಮನಿಸುವುದು: “ಯುದ್ಧಾಚರಣೆಯ ವಿಷಯದಲ್ಲಿ, ಕ್ರೈಸ್ತರಲ್ಲದವರ ನಿಲುವನ್ನೇ ಕ್ರೈಸ್ತರು ತೆಗೆದುಕೊಂಡದ್ದು, ಕ್ರೈಸ್ತತ್ವಕ್ಕೆ ಕಳಂಕ ತಂದ ಮೂಲ ಕಾರಣವಾಗಿದೆ. ಕ್ರೈಸ್ತರು ಒಂದು ಕಡೆ, ತಮ್ಮ ಕೋಮಲ ರಕ್ಷಕನಲ್ಲಿ ತಮಗಿರುವ ನಂಬಿಕೆಯನ್ನು ಸಮರ್ಥಿಸಿ, ಮತ್ತೊಂದು ಕಡೆ, ಧಾರ್ಮಿಕ ಇಲ್ಲವೆ ರಾಷ್ಟ್ರೀಯ ಯುದ್ಧಗಳನ್ನು ಮನಃಪೂರ್ವಕವಾಗಿ ಬೆಂಬಲಿಸಿದ್ದಾರೆ. ಇದು ಅವರ ನಂಬಿಕೆಯನ್ನು ಬಹಳವಾಗಿ ಹಾನಿಗೊಳಿಸಿದೆ.”
ಇಂದು ಆದಿ ಕ್ರೈಸ್ತರನ್ನು ಅನುಕರಿಸುವುದು
ಆದಿ ಕ್ರೈಸ್ತರ ಪ್ರಾಮಾಣಿಕ ಮಾದರಿಯನ್ನು ಇಂದಿನ ಕ್ರೈಸ್ತರು ಅನುಕರಿಸಸಾಧ್ಯವೊ? ಅನುಕರಿಸಸಾಧ್ಯವೆಂದು ಈ ಶತಮಾನದ ಯೆಹೋವನ ಸಾಕ್ಷಿಗಳು ತೋರಿಸಿಕೊಟ್ಟಿದ್ದಾರೆ. ಅವರ ಕುರಿತು ಮಾತನಾಡುತ್ತಾ, ಹೊಲೊಕಾಸ್ಟ್ ಎಡುಕೇಷನಲ್ ಡೈಜೆಸ್ಟ್ನ ಸಂಪಾದಕರು ಗಮನಿಸುವುದು: “ಯೆಹೋವನ ಸಾಕ್ಷಿಗಳಲ್ಲಿ ಯಾರೊಬ್ಬರೂ ಯುದ್ಧದಲ್ಲಿ ಭಾಗವಹಿಸುವುದಿಲ್ಲ. . . . ಅಧಿಕಾರದ ಸ್ಥಾನದಲ್ಲಿರುವ ಪ್ರತಿಯೊಬ್ಬರೂ ಈ ಗುಂಪಿನವರಾಗಿರುತ್ತಿದ್ದರೆ, [IIನೆಯ ಜಾಗತಿಕ ಯುದ್ಧವು] ಎಂದಿಗೂ ಸಂಭವಿಸುತ್ತಿರಲಿಲ್ಲ.”
ಉತ್ತರ ಐಅರ್ಲೆಂಡ್ನಲ್ಲಿ ಸಂಭವಿಸಿದಂತಹ ಇತ್ತೀಚಿನ ಪ್ರಾಂತೀಯ ಗಲಭೆಗಳ ವಿಷಯದಲ್ಲೂ ಇದನ್ನೇ ಹೇಳಸಾಧ್ಯವಿದೆ. ಕೆಲವು ವರ್ಷಗಳ ಹಿಂದೆ, ಯೆಹೋವನ ಸಾಕ್ಷಿಗಳಲ್ಲಿ ಒಬ್ಬನು, ಬೆಲ್ಫಾಸ್ಟ್ ನಗರದ ಒಂದು ಪ್ರಾಟೆಸ್ಟಂಟ್ ಕ್ಷೇತ್ರದಲ್ಲಿ ಮನೆಮನೆಯ ಸಾಕ್ಷಿಕಾರ್ಯದಲ್ಲಿ ತೊಡಗಿದ್ದನು. ಆ ಸಾಕ್ಷಿಯು ಈ ಮೊದಲು ಕ್ಯಾಥೊಲಿಕನಾಗಿದ್ದನೆಂದು ತಿಳಿದುಕೊಂಡ ಒಬ್ಬ ಮನೆಯವನು ಕೇಳಿದ್ದು: “ನೀವು ಕ್ಯಾಥೊಲಿಕರಾಗಿದ್ದಾಗ, ಐಆರ್ಏ [ಐರಿಷ್ ರಿಪಬ್ಲಿಕನ್ ಆರ್ಮಿ]ಗೆ ಬೆಂಬಲವನ್ನು ನೀಡಿದಿರೊ?” ಆ ಮನೆಯವನು ಹಿಂಸಾತ್ಮಕನಾಗಬಲ್ಲನೆಂದು ಸಾಕ್ಷಿಯು ಗ್ರಹಿಸಿದನು. ಏಕೆಂದರೆ, ಒಬ್ಬ ಕ್ಯಾಥೊಲಿಕನನ್ನು ಗುಂಡಿಕ್ಕಿ ಕೊಲ್ಲಲು ಪ್ರಯತ್ನಿಸಿದುದಕ್ಕಾಗಿ ಅವನನ್ನು ಸೆರೆಯಲ್ಲಿ ಬಂಧಿಸಿ, ಆಗ ತಾನೇ ಬಿಡುಗಡೆ ಮಾಡಲಾಗಿತ್ತು. ಆದಕಾರಣ ಸಾಕ್ಷಿಯು ಉತ್ತರಿಸಿದ್ದು: “ಈಗ ನಾನೊಬ್ಬ ಕ್ಯಾಥೊಲಿಕನಾಗಿರುವುದಿಲ್ಲ. ನಾನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಿದ್ದೇನೆ. ಮತ್ತು ಒಬ್ಬ ಸತ್ಯ ಕ್ರೈಸ್ತನೋಪಾದಿ, ಯಾವುದೇ ಸರಕಾರ ಇಲ್ಲವೆ ಮನುಷ್ಯನಿಗಾಗಿ ನಾನು ಯಾರನ್ನೂ ಕೊಲ್ಲಲಾರೆ.” ಇದನ್ನು ಕೇಳಿದ ಮನೆಯವನು, ಸಾಕ್ಷಿಯ ಕೈಕುಲುಕಿ, “ಎಲ್ಲ ರೀತಿಯ ಕೊಲ್ಲುವಿಕೆ ತಪ್ಪಾಗಿದೆ. ನೀವು ಒಳ್ಳೆಯ ಕೆಲಸವನ್ನು ಮಾಡುತ್ತಿದ್ದೀರಿ. ಮತ್ತು ಇದನ್ನೇ ಮುಂದುವರಿಸಿರಿ” ಎಂದು ಹೇಳಿದನು.
ಯೇಸುವಿನ ಹೆಸರಿನಲ್ಲಿ ನಂಬಿಕೆಯನ್ನಿಡುವುದರ ಅರ್ಥ
ಯೇಸುವಿನ ಹೆಸರಿನಲ್ಲಿ ನಂಬಿಕೆಯನ್ನಿಡುವುದು, ಕೇವಲ ಯುದ್ಧದಿಂದ ದೂರವಿರುವುದನ್ನು ಅರ್ಥೈಸುವುದಿಲ್ಲ. ಅದು ಕ್ರಿಸ್ತನ ಎಲ್ಲ ಆಜ್ಞೆಗಳಿಗೆ ವಿಧೇಯರಾಗುವುದನ್ನು ಅರ್ಥೈಸುತ್ತದೆ. “ನಾನು ನಿಮಗೆ ಕೊಟ್ಟ ಆಜ್ಞೆಗಳಿಗೆ ಸರಿಯಾಗಿ ನೀವು ನಡೆದರೆ ನೀವು ನನ್ನ ಸ್ನೇಹಿತರು” ಎಂಬುದಾಗಿ ಯೇಸು ಹೇಳಿದನು. ಅವನ ಆಜ್ಞೆಗಳಲ್ಲಿ ಒಂದು, ನಾವು “ಒಬ್ಬರನ್ನೊಬ್ಬರು ಪ್ರೀತಿಸಬೇಕು” ಎಂದಾಗಿದೆ. (ಯೋಹಾನ 15:14, 17) ಪ್ರೀತಿಯು ಇತರರಿಗೆ ಒಳಿತನ್ನು ಮಾಡಲು ಕೋರುತ್ತದೆ. ಅದು ಎಲ್ಲ ರೀತಿಯ ಕುಲಸಂಬಂಧಿತ, ಧಾರ್ಮಿಕ, ಹಾಗೂ ಸಾಮಾಜಿಕ ಪೂರ್ವಾಗ್ರಹವನ್ನು ಹೊಡೆದೋಡಿಸುತ್ತದೆ. ಅದು ಹೇಗೆಂದು ಯೇಸು ತೋರಿಸಿಕೊಟ್ಟನು.
ಯೇಸುವಿನ ದಿನದ ಯೆಹೂದ್ಯರಲ್ಲಿ, ಸಮಾರ್ಯದವರ ವಿರುದ್ಧ ಕಠೋರ ಭಾವನೆಯಿತ್ತು. ಇದಕ್ಕೆ ತದ್ವಿರುದ್ಧವಾಗಿ, ಯೇಸು ಒಬ್ಬಾಕೆ ಸಮಾರ್ಯದ ಸ್ತ್ರೀಯೊಂದಿಗೆ ಮಾತಾಡಿದನು, ಮತ್ತು ಅದರಿಂದಾಗಿ ಅವಳು ಮತ್ತು ಇನ್ನೂ ಅನೇಕರು ಅವನ ಹೆಸರಿನಲ್ಲಿ ನಂಬಿಕೆಯನ್ನಿಟ್ಟರು. (ಯೋಹಾನ 4:39) ಅವನ ಶಿಷ್ಯರು “ಯೆರೂಸಲೇಮಿನಲ್ಲಿಯೂ ಎಲ್ಲಾ ಯೂದಾಯ ಸಮಾರ್ಯ ಸೀಮೆಗಳಲ್ಲಿಯೂ ಭೂಲೋಕದ ಕಟ್ಟಕಡೆಯ ವರೆಗೂ” ತನಗೆ ಸಾಕ್ಷಿಗಳಾಗಿರುವರೆಂದೂ ಯೇಸು ಹೇಳಿದನು. (ಅ. ಕೃತ್ಯಗಳು 1:8) ಅವನ ಜೀವದಾಯಕ ಸಂದೇಶವು ಕೇವಲ ಯೆಹೂದ್ಯರಿಗೆ ಮಾತ್ರ ಸೀಮಿತವಾಗಿರಲಿಲ್ಲ. ಅದಕ್ಕಾಗಿಯೇ, ರೋಮನ್ ಶತಾಧಿಪತಿಯಾದ ಕೊರ್ನೇಲ್ಯನನ್ನು ಭೇಟಿಮಾಡುವಂತೆ ಪೇತ್ರನಿಗೆ ಆದೇಶ ನೀಡಲಾಯಿತು. ಮತ್ತೊಂದು ಕುಲದ ವ್ಯಕ್ತಿಯನ್ನು ಯೆಹೂದ್ಯನೊಬ್ಬನು ಭೇಟಿಯಾಗುವುದು ನ್ಯಾಯಸಮ್ಮತವಾಗಿರದಿದ್ದರೂ, “ಯಾವ ಮನುಷ್ಯನನ್ನಾದರೂ ಹೊಲೆಯನು ಇಲ್ಲವೆ ಅಶುದ್ಧನು ಅನ್ನಬಾರದೆಂದು” ದೇವರು ಪೇತ್ರನಿಗೆ ತೋರಿಸಿದನು.—ಅ. ಕೃತ್ಯಗಳು 10:28.
ಯೇಸುವನ್ನು ಅನುಕರಿಸುತ್ತಾ, ಯೆಹೋವನ ಸಾಕ್ಷಿಗಳು ಎಲ್ಲ ಜನರಿಗೆ, ಅವರ ಕುಲಸಂಬಂಧಿತ, ಧಾರ್ಮಿಕ, ಇಲ್ಲವೆ ಆರ್ಥಿಕ ಹಿನ್ನಲೆ ಏನೇ ಆಗಿರಲಿ, ಯೇಸುವಿನ ಹೆಸರಿನ ಮೂಲಕ ಬರುವಂತಹ ರಕ್ಷಣೆಯ ಕುರಿತು ತಿಳಿದುಕೊಳ್ಳಲು ಸ್ವಇಚ್ಛೆಯಿಂದ ಸಹಾಯ ಮಾಡುತ್ತಾರೆ. ‘ಯೇಸುವೇ ಕರ್ತನೆಂದು ಬಹಿರಂಗವಾಗಿ ಪ್ರಕಟಿಸುವಂತೆ’ ಯೇಸುವಿನ ಹೆಸರಿನಲ್ಲಿನ ನಂಬಿಕೆಯು ಅವರನ್ನು ಪ್ರಚೋದಿಸುತ್ತದೆ. (ರೋಮಾಪುರ 10:8, 9) ಯೇಸುವಿನ ಹೆಸರಿನಲ್ಲಿ ನಂಬಿಕೆಯಿಡಲು ನೀವೂ ಕಲಿತುಕೊಳ್ಳುವಂತೆ, ಯೆಹೋವನ ಸಾಕ್ಷಿಗಳ ಸಹಾಯವನ್ನು ಸ್ವೀಕರಿಸಬೇಕೆಂದು ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ.
ಯೇಸುವಿನ ಹೆಸರು, ಗೌರವ, ಮರ್ಯಾದೆ, ಹಾಗೂ ವಿಧೇಯತೆಯ ಅನಿಸಿಕೆಗಳನ್ನು ಪ್ರೇರಿಸಬೇಕು. ಅಪೊಸ್ತಲ ಪೌಲನು ಹೇಳಿದ್ದು: “ಸ್ವರ್ಗ ಮರ್ತ್ಯ ಪಾತಾಳಗಳಲ್ಲಿರುವವರೆಲ್ಲರೂ ಯೇಸುವಿನ ಹೆಸರಿನಲ್ಲಿ ಅಡ್ಡಬಿದ್ದು ಯೇಸು ಕ್ರಿಸ್ತನನ್ನು ಒಡೆಯನೆಂದು ಪ್ರತಿಜ್ಞೆಮಾಡಿ ತಂದೆಯಾದ ದೇವರಿಗೆ ಘನವನ್ನು ಸಲ್ಲಿಸುವರು.” (ಫಿಲಿಪ್ಪಿ 2:10, 11) ಭೂನಿವಾಸಿಗಳಲ್ಲಿ ಹೆಚ್ಚಿನವರು ಯೇಸುವಿನ ಆಳ್ವಿಕೆಗೆ ಅಧೀನರಾಗಲು ಬಯಸದಿದ್ದರೂ, ಎಲ್ಲ ಜನರು ಹಾಗೆ ಮಾಡುವ ಅಗತ್ಯವಿದೆ. ಅಧೀನರಾಗದಿದ್ದಲ್ಲಿ, ನಾಶವಾಗುವ ಸಮಯವು ಹತ್ತಿರವಾಗಿದೆ ಎಂದು ಬೈಬಲು ತೋರಿಸುತ್ತದೆ. (2 ಥೆಸಲೊನೀಕ 1:6-9) ಹಾಗಾದರೆ, ಯೇಸುವಿನ ಎಲ್ಲ ಆಜ್ಞೆಗಳನ್ನು ಕೈಕೊಳ್ಳುವ ಮೂಲಕ ಅವನ ಹೆಸರಿನಲ್ಲಿ ನಂಬಿಕೆಯಿಡುವ ಸಮಯವು ಇದೇ ಆಗಿದೆ.
[ಪಾದಟಿಪ್ಪಣಿ]
a ಹೆಚ್ಚಿನ ಮಾಹಿತಿಗಾಗಿ, 1984ರಲ್ಲಿ ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟ, ಸದಾಕಾಲ ಬಾಳಲಿರುವ ಆ ದೈವಿಕ ಹೆಸರು (ಇಂಗ್ಲಿಷ್) ಎಂಬ ಬ್ರೋಷರಿನ 28-31ನೆಯ ಪುಟಗಳನ್ನು ನೋಡಿರಿ.
[ಪುಟ 6 ರಲ್ಲಿರುವ ಚಿತ್ರ]
ಯೇಸುವಿನ ಹೆಸರಿನಲ್ಲಿ, ಲಕ್ಷಾಂತರ ಜನರು ಇತರರನ್ನು ಕೊಂದಿದ್ದಾರೆ ಹಾಗೂ ಸ್ವತಃ ಕೊಲ್ಲಲ್ಪಟ್ಟಿದ್ದಾರೆ
[ಪುಟ 7 ರಲ್ಲಿರುವ ಚಿತ್ರ]
ಯೇಸು ಕುಲಸಂಬಂಧಿತ ಪೂರ್ವಾಗ್ರಹಕ್ಕೆ ಎಡೆಗೊಡಲಿಲ್ಲ. ನೀವು ಕೊಡುತ್ತೀರೊ?