ನಂಬಿಕೆಯ ಪ್ರತಿಪಾದನೆಯನ್ನು ಅನೇಕರು ಮಾಡುತ್ತಾರೆ
“ಯೇಸು ಅದ್ಭುತಕರ್ತನು! ಅವನು ಅತ್ಯುತ್ತಮನು!” ಎಂಬುದಾಗಿ ಯೇಸುವಿನ ಕುರಿತು ಬ್ರೆಸಿಲಿನ ಧಾರ್ಮಿಕ ಮಹಿಳೆಯೊಬ್ಬಳು ಉದ್ಗರಿಸಿದಳು. ನಿಜ, ಯೇಸುವಿನ ಹೆಸರು ಬೀರುವ ಪ್ರಭಾವವನ್ನು ಅಲ್ಲಗಳೆಯಲು ಸಾಧ್ಯವೇ ಇಲ್ಲ. ಇತಿಹಾಸದಾದ್ಯಂತ, ಜನರು ಸ್ವಇಚ್ಛೆಯಿಂದ ಅವನಿಗಾಗಿ ಕಷ್ಟಾನುಭವಿಸಿ, ಪ್ರಾಣತೆತ್ತಿದ್ದಾರೆ.
ಪೇತ್ರ ಮತ್ತು ಯೋಹಾನರೆಂಬ ಅಪೊಸ್ತಲರು, ಯೆರೂಸಲೇಮಿನಲ್ಲಿ ‘ಯೇಸುವಿನ ಹೆಸರನ್ನು ಎತ್ತಿ ಉಪದೇಶ’ಮಾಡಿದರು. ಈ ಕಾರಣ, ಅವರು ಬಂಧಿಸಲ್ಪಟ್ಟು ಚಾವಟಿಯಿಂದ ಹೊಡೆಯಲ್ಪಟ್ಟರು. ಆದರೂ, “ತಾವು ಆ ಹೆಸರಿನ ನಿಮಿತ್ತವಾಗಿ ಅವಮಾನಪಡುವದಕ್ಕೆ ಯೋಗ್ಯರೆನಿಸಿಕೊಂಡೆವೆಂದು ಸಂತೋಷಿಸುತ್ತಾ ಹಿರೀಸಭೆಯ ಎದುರಿನಿಂದ ಹೊರಟು”ಹೋದರು.—ಅ. ಕೃತ್ಯಗಳು 5:28, 41.
ಯೇಸುವಿನ ಹೆಸರನ್ನು ಬಹಳ ಗೌರವದಿಂದ ಕಂಡ ಪ್ರಥಮ ಶತಮಾನದ ಮತ್ತೊಬ್ಬ ಕ್ರೈಸ್ತನು ಅಂತಿಪನಾಗಿದ್ದನು. ಬೈಬಲಿನ ಕೊನೆಯ ಪುಸ್ತಕವಾದ ಪ್ರಕಟನೆಯಲ್ಲಿ, ಯೇಸು ಅವನನ್ನು, “ಸೈತಾನನು ಎಲ್ಲಿ ವಾಸಿಸುತ್ತಿದ್ದಾನೋ ಆ ನಿನ್ನ ಪಕ್ಕದಲ್ಲಿ ಕೊಲ್ಲಲ್ಪಟ್ಟ ನನ್ನ ಸಾಕ್ಷಿಯೂ ನಂಬಿಗಸ್ತನೂ ಆದ ಅಂತಿಪ”ನೆಂದು ಸೂಚಿಸಿ ಮಾತನಾಡುತ್ತಾನೆ. (ಪ್ರಕಟನೆ 2:13, NW) ಪೆರ್ಗಮದಲ್ಲಿದ್ದ ಇತರ ಕ್ರೈಸ್ತರೊಂದಿಗೆ ಅಂತಿಪನು, ಯೇಸುವಿನಲ್ಲಿ ತನಗಿದ್ದ ನಂಬಿಕೆಯನ್ನು ಅಲ್ಲಗಳೆಯಲು ನಿರಾಕರಿಸಿದನು. ಈ ರೀತಿಯಲ್ಲಿ, ಯೇಸುವಿನ ಹೆಸರಿಗೆ ಬಲವಾದ ಸಮರ್ಥನೆಯನ್ನು ಅಂತಿಪನು ತೋರಿಸಿದ ಕಾರಣ, ತನ್ನ ಸ್ವಂತ ಜೀವವನ್ನು ಅವನು ದಂಡವಾಗಿ ತೆರಬೇಕಾಯಿತು!
ಸಾ.ಶ. 155ರಲ್ಲಿ, ಅಂದರೆ, ಸುಮಾರು ಐವತ್ತು ವರ್ಷಗಳ ತರುವಾಯ, ಕ್ರೈಸ್ತನೆನಿಸಿಕೊಂಡ ಪಾಲಿಕಾರ್ಪ್ನು, ಕ್ರಿಸ್ತನನ್ನು ದೂಷಿಸುವಂತೆ ಆಜ್ಞಾಪಿಸಲ್ಪಟ್ಟಾಗ, ತದ್ರೀತಿಯ ಪರೀಕ್ಷೆಯನ್ನು ಎದುರಿಸಿದನು. ಅವನ ಪ್ರತಿಕ್ರಿಯೆಯು ಹೀಗಿತ್ತು: “ಎಂಬತ್ತಾರು ವರ್ಷಗಳಿಂದ ನಾನು ಅವನಿಗೆ ಸೇವೆಸಲ್ಲಿಸುತ್ತಾ ಬಂದಿದ್ದೇನೆ. ಆದರೆ, ಒಮ್ಮೆಯಾದರೂ ಅವನು ನನಗೆ ಕೇಡು ಬಗೆದಿರುವುದನ್ನು ನಾನು ಕಂಡಿಲ್ಲ. ನನ್ನನ್ನು ರಕ್ಷಿಸಿರುವ ರಾಜನನ್ನು ನಾನು ಹೇಗೆ ತಾನೆ ನಿಂದಿಸಲಿ?” ಯೇಸುವನ್ನು ಅಲ್ಲಗಳೆಯಲು ಅವನು ನಿರಾಕರಿಸಿದ ಕಾರಣ, ಪಾಲಿಕಾರ್ಪನನ್ನು ಬೆಂಕಿಯಿಂದ ಸುಟ್ಟು ಸಾಯಿಸಲಾಯಿತು.
ಅಪೊಸ್ತಲರು, ಅಂತಿಪನು, ಮತ್ತು ಇತರರು, ಕ್ರಿಸ್ತನ ಕುರಿತಾದ ತಮ್ಮ ವಿಶ್ವಾಸವನ್ನು ಮರಣದ ಮೂಲಕ ರುಜುಪಡಿಸಲು ಹಿಂಜರಿಯಲಿಲ್ಲ! ನಮ್ಮ ದಿನದ ಜನರ ಕುರಿತೇನು?
ನಮ್ಮ ದಿನದಲ್ಲಿ ಯೇಸುವಿನ ಹೆಸರು
ಯೇಸುವಿನ ಹೆಸರು ಇಂದಿಗೂ ಬಲವಾದ ಭಾವನೆಗಳನ್ನು ಕೆರಳಿಸುತ್ತದೆ. ಇತ್ತೀಚಿನ ದಶಕಗಳಲ್ಲಿ ಲ್ಯಾಟಿನ್ ಅಮೆರಿಕದಲ್ಲಿ, ಯೇಸುವಿನಲ್ಲಿ ನಂಬಿಕೆಯಿಡುವುದಾಗಿ ಪ್ರತಿಪಾದಿಸುವ ಚರ್ಚುಗಳ ಸಂಖ್ಯೆಯು ಗಗನಕ್ಕೇರಿದೆ. ಅತ್ಯಂತ ಚಿಕ್ಕ ಹಳ್ಳಿಗಳಲ್ಲೂ ಒಂದು ಪೆಂಟಕೋಸ್ಟ್ ಚರ್ಚ್ ಇರುತ್ತದೆ. ಅದೇ ಸಮಯದಲ್ಲಿ, ಈ ಚರ್ಚುಗಳು ರಾಜಕೀಯ ರಂಗದಲ್ಲಿ ಬೀರುತ್ತಿರುವ ಪ್ರಭಾವವು ಹೆಚ್ಚುತ್ತಿದೆ. ಉದಾಹರಣೆಗೆ, ಬ್ರೆಸಿಲಿನ ರಾಷ್ಟ್ರೀಯ ಸಭೆ ಮತ್ತು ಶಾಸನ ಸಭೆಯಲ್ಲಿ, 31 ಸೀಟುಗಳು ಈ ಚರ್ಚ್ ಸದಸ್ಯರ ಸ್ವಾಧೀನದಲ್ಲಿವೆ.
ಅಮೆರಿಕದಲ್ಲಿ ಆರಂಭವಾಗಿರುವ ಒಂದು ಹೊಸ ಧಾರ್ಮಿಕ ಗುಂಪಿನ ಕೇಂದ್ರ ಬಿಂದು ಸಹ ಯೇಸುವೇ ಆಗಿದ್ದಾನೆ. ಅದರ ಅನುಯಾಯಿಗಳು ತಮ್ಮನ್ನು, ಕೊಟ್ಟ ಮಾತಿನಂತೆ ನಡೆದುಕೊಳ್ಳುವವರು (ಪ್ರಾಮಿಸ್ ಕೀಪರ್ಸ್) ಎಂಬುದಾಗಿ ಕರೆದುಕೊಳ್ಳುತ್ತಾರೆ. ಅವರ ಕೂಟಗಳಲ್ಲಿನ ಹಾಜರಿಯು, 1991ರಲ್ಲಿದ್ದ 4,200ರಿಂದ 1996ರಲ್ಲಿ 11 ಲಕ್ಷಕ್ಕೆ ಬೆಳೆಯಿತೆಂದು ಟೈಮ್ ಪತ್ರಿಕೆಯು 1997ರಲ್ಲಿ ವರದಿಸಿತು. ಅದರ ಭಕ್ತಿಗೀತೆಗಳಲ್ಲೊಂದರ ಸಾಲು ಹೀಗಿದೆ: “ಓ ಯೇಸುವಿನಲ್ಲಿ ವಿಜಯ, ನನ್ನ ಸನಾತನ ರಕ್ಷಕನೇ.”
ಆದರೂ, ಯೇಸುವಿನ ಹೆಸರಿನಿಂದ ಪ್ರೇರಿತಗೊಂಡ ಎಲ್ಲ ಭಾವನೆಗಳೂ ಸದುದ್ದೇಶವುಳ್ಳವುಗಳಾಗಿ ಪರಿಣಮಿಸಿಲ್ಲ. ಅನೇಕ ಬಾರಿ ಯುದ್ಧವು ಅವನ ಹೆಸರಿನೊಂದಿಗೆ ಆರಂಭಗೊಂಡಿದೆ. ಯೇಸುವಿನ ಹೆಸರಿನಲ್ಲಿ, ಯೆಹೂದ್ಯರು ಹತಿಸಲ್ಪಟ್ಟಿದ್ದಾರೆ, ವಿಧರ್ಮಿಗಳು ಕೊಲ್ಲಲ್ಪಟ್ಟಿದ್ದಾರೆ. ಅಲ್ಲದೆ ಭಿನ್ನಾಭಿಪ್ರಾಯಗಳುಳ್ಳವರು ಹಿಂಸಿಸಲ್ಪಟ್ಟು, ಅಂಗಹೀನ ಮಾಡಿ, ಬೆಂಕಿಯಿಂದ ಸುಟ್ಟುಸಾಯಿಸಲ್ಪಟ್ಟಿದ್ದಾರೆ. ಮತ್ತು ಇತ್ತೀಚೆಗೆ, ಸುವಾರ್ತೆಯ ವ್ಯಾಪಾರೀಕರಣವು ಕುಖ್ಯಾತಿಯನ್ನು ತಂದಿದೆ. ಇದೆಲ್ಲವೂ ಯೇಸುವಿನ ಹೆಸರು ಹಾಗೂ ಅದರ ಅರ್ಥದ ತುಚ್ಛ ಮತ್ತು ಅಸಹ್ಯ ದುರುಪಯೋಗವಾಗಿದೆ.
ಅಲ್ಲದೆ, ಅದು ಕೆಲವೊಂದು ಸಮಂಜಸವಾದ ಪ್ರಶ್ನೆಗಳನ್ನು ಎಬ್ಬಿಸುತ್ತದೆ: ಯೇಸುವಿನ ಹೆಸರಿನಲ್ಲಿ ನಂಬಿಕೆ ಇಡುವುದು ಏನನ್ನು ಒಳಗೂಡುತ್ತದೆ? ಈ ವಿಷಯದಲ್ಲಿ ಯೆಹೋವನ ಸಾಕ್ಷಿಗಳ ದೃಷ್ಟಿಕೋನವು ಏನಾಗಿದೆ? ಈ ಪ್ರಶ್ನೆಗಳಿಗೆ ಮುಂದಿನ ಲೇಖನವು ಉತ್ತರ ನೀಡುವುದು.