ಶಸ್ತ್ರಧಾರಿ ಕಳ್ಳರು ಆಕ್ರಮಿಸುವಾಗ
ಪಶ್ಚಿಮ ಆಫ್ರಿಕದ ಹೊರವಲಯದಲ್ಲಿರುವ ಈಕೋಯಿ ಎಂಬ ಬೆಡಗಿನ ನಗರದಲ್ಲಿ, ಮಹಲುಗಳು ಕೋಟೆಗಳಂತಾಗಿವೆ. ಅನೇಕ ಮಹಲುಗಳಿಗೆ 3 ಮೀಟರ್ ಎತ್ತರದ ಗೋಡೆಗಳಿವೆ. ಆ ಗೋಡೆಗಳ ಮೇಲೆ ಮೊನಚಾದ ಕಬ್ಬಿಣದ ಮೊಳೆಗಳು, ಕೋಚು ಕೋಚಾಗಿ ತುಂಡುಮಾಡಲ್ಪಟ್ಟಿರುವ ಗಾಜುಗಳು, ಅಥವಾ ಮುಳ್ಳು ತಂತಿಗಳ ಸುರುಳಿಗಳಿರುತ್ತವೆ. ಬೋಲ್ಟ್‌ಗಳು, ಬಾರ್‌ಗಳು, ಸರಪಳಿಗಳು ಮತ್ತು ಲಾಕ್‌ಗಳಿಂದ ಸುರಕ್ಷಿತಗೊಳಿಸಲ್ಪಟ್ಟಿರುವ ಬೃಹತ್ಗಾತ್ರದ ಗೇಟುಗಳ ಬಳಿಯಲ್ಲಿ ಕಾವಲುಗಾರರಿರುತ್ತಾರೆ. ಕಿಟಕಿಗಳಲ್ಲಿ ಕಂಬಿಗಳನ್ನು ಹಾಕಲಾಗಿದೆ. ಮಲಗುವ ಕೋಣೆಗಳಿಗೆ ಉಕ್ಕಿನ ಗೇಟುಗಳಿರುತ್ತವೆ. ರಾತ್ರಿಯಾದಾಗ, ದೊಡ್ಡದೊಡ್ಡ ನಾಯಿಗಳನ್ನು—ಅಲ್ಸೇಷನ್‌ಗಳು ಮತ್ತು ರಾಟ್‌ವೈಲರ್‌ಗಳು—ಅವುಗಳ ಗೂಡುಗಳಿಂದ ಹೊರಗೆ ಬಿಡಲಾಗುತ್ತದೆ. ಉಜ್ವಲವಾದ ದೀಪಗಳು ಕತ್ತಲನ್ನು ಓಡಿಸುತ್ತವೆ. ಮತ್ತು ಗುಪ್ತವಾಗಿ ಇರಿಸಲಾಗಿರುವ ಕಂಪ್ಯೂಟರ್ ಸಿಸ್ಟಮ್‌ಗಳು ಕಳ್ಳರ ಕುರಿತು ಎಚ್ಚರಿಸುತ್ತವೆ.
ತಮ್ಮ ಮನೆಗಳನ್ನು ಭದ್ರಪಡಿಸಿಕೊಳ್ಳುವ ವಿಷಯದಲ್ಲಿ ಯಾರೊಬ್ಬರೂ ಹಿಂದೆಮುಂದೆ ನೋಡುವುದಿಲ್ಲ. ವಾರ್ತಾಪತ್ರಗಳಲ್ಲಿನ ತಲೆಬರಹಗಳು ಹೀಗಿರುತ್ತವೆ: “ಶಸ್ತ್ರಧಾರಿ ಕಳ್ಳರು ಸಮುದಾಯವನ್ನು ಲೂಟಿಮಾಡುತ್ತಾರೆ”; “ಯುವ ಕಳ್ಳರು ಅನಿಯಂತ್ರಿತರಾಗುತ್ತಾರೆ;” ಮತ್ತು “ಭೀತಿ—ಬೀದಿ ಪುಂಡರು [ಪಟ್ಟಣವನ್ನು] ಆಕ್ರಮಿಸುತ್ತಾರೆ.” ಅನೇಕ ದೇಶಗಳಲ್ಲಿ ಪರಿಸ್ಥಿತಿಯು ಹೀಗೆಯೇ ಇರುತ್ತದೆ. ಬೈಬಲ್ ಮುಂತಿಳಿಸಿರುವಂತೆ, ನಾವು ನಿಜವಾಗಿಯೂ ಕಷ್ಟಕರವಾದ ಸಮಯಗಳಲ್ಲಿ ಜೀವಿಸುತ್ತಿದ್ದೇವೆ.—2 ತಿಮೊಥೆಯ 3:1.
ಶಸ್ತ್ರಧಾರಿ ಕಳ್ಳತನವನ್ನು ಸೇರಿಸಿ, ಪಾತಕದ ಪ್ರಮಾಣವು ಭೌಗೋಲಿಕವಾಗಿ ಗಗನಕ್ಕೇರುತ್ತಿದೆ. ಹೆಚ್ಚೆಚ್ಚಾಗಿ, ಸರಕಾರಗಳು ತಮ್ಮ ಸ್ವಂತ ಪ್ರಜೆಗಳನ್ನು ಸಂರಕ್ಷಿಸಲು ಒಂದೋ ಅಶಕ್ತರಾಗಿದ್ದಾರೆ ಇಲ್ಲವೇ ಮನಸ್ಸಿಲ್ಲದವರಾಗಿದ್ದಾರೆ. ಕೆಲವು ದೇಶಗಳಲ್ಲಿ ಪೊಲೀಸರು, ಸಹಾಯಕ್ಕಾಗಿರುವ ಕರೆಗಳಿಗೆ ಓಗೊಡಲಿಕ್ಕಾಗಿ ತೀರ ಕಡಿಮೆ ಸಂಖ್ಯೆಯಲ್ಲಿರುತ್ತಾರೆ ಮತ್ತು ಅವರ ಬಳಿ ತೀರ ಕಡಿಮೆ ಸಂಖ್ಯೆಯ ಹಾಗೂ ಹಳೆಯ ರೀತಿಯ ಶಸ್ತ್ರಗಳಿರುತ್ತವೆ. ಹಾದುಹೋಗುವವರಲ್ಲಿ ಹೆಚ್ಚಿನವರು ಸಹಾಯಮಾಡಲು ಹಿಂಜರಿಯುತ್ತಾರೆ.
ಪೊಲೀಸರಿಂದಾಗಿ, ಸಾರ್ವಜನಿಕರಿಂದಾಗಲಿ ಸಹಾಯವನ್ನು ಪಡೆಯುವುದರ ಆಶೆಯನ್ನೇ ಬಿಟ್ಟುಬಿಡಬೇಕಾದ ಬಲಿಗಳು, ತಮ್ಮನ್ನು ತಾವೇ ರಕ್ಷಿಸಿಕೊಳ್ಳಬೇಕಾಗುತ್ತದೆ. ಒಂದು ಅಭಿವೃದ್ಧಿಶೀಲ ದೇಶದಲ್ಲಿರುವ ಒಬ್ಬ ಕ್ರೈಸ್ತ ಹಿರಿಯನು ಹೇಳಿದ್ದು: “ನೀವು ಸಹಾಯಕ್ಕಾಗಿ ಕೂಗುವಲ್ಲಿ, ಕಳ್ಳರು ನಿಮ್ಮನ್ನು ಅಂಗಹೀನಮಾಡುವರು, ಇಲ್ಲದಿದ್ದಲ್ಲಿ ಕೊಲ್ಲುವರು. ಹೊರಗಿನಿಂದ ಸಹಾಯಸಿಗುವ ಮಾತನ್ನಂತೂ ಬಿಟ್ಟೇಬಿಡಿ. ಅದು ಸಿಗುವಲ್ಲಿ, ಒಳ್ಳೇದು. ಆದರೆ ಅದನ್ನು ನಿರೀಕ್ಷಿಸಬೇಡಿರಿ ಇಲ್ಲವೇ ಅದಕ್ಕಾಗಿ ಕೂಗಬೇಡಿರಿ, ಯಾಕಂದರೆ ಸಹಾಯಕ್ಕಾಗಿ ಕೂಗುವುದರಿಂದ ನೀವು ಇನ್ನೂ ಹೆಚ್ಚಿನ ತೊಂದರೆಯನ್ನು ಆಮಂತ್ರಿಸುತ್ತಿದ್ದೀರಷ್ಟೇ.”
ಸಂರಕ್ಷಣೆ ಮತ್ತು ದೇವರ ವಾಕ್ಯ
ಕ್ರೈಸ್ತರು ಈ ಲೋಕದ ಭಾಗವಾಗಿರದಿದ್ದರೂ, ಅವರು ಈ ಲೋಕದಲ್ಲಿ ಜೀವಿಸುತ್ತಾರೆ. (ಯೋಹಾನ 17:11, 16) ಆದುದರಿಂದ ಇತರರಂತೆ, ಅವರು ತಮ್ಮ ಸುರಕ್ಷೆಗಾಗಿ ಸಮಂಜಸವಾದ ಏರ್ಪಾಡುಗಳನ್ನು ಮಾಡುತ್ತಾರೆ. ಆದರೂ, ಯೆಹೋವನನ್ನು ಸೇವಿಸದಿರುವ ಇತರ ಅನೇಕರಂತಿರದೆ, ದೇವರ ಜನರು ಕ್ರೈಸ್ತ ತತ್ವಗಳ ಚೌಕಟ್ಟಿನೊಳಗೆ ಸಂರಕ್ಷಣೆಯನ್ನು ಪಡೆದುಕೊಳ್ಳುತ್ತಾರೆ.
ವ್ಯತಿರಿಕ್ತವಾಗಿ, ಆಫ್ರಿಕದ ಕೆಲವು ದೇಶಗಳಲ್ಲಿನ ಜನರು, ಕಳ್ಳತನದಿಂದ ತಮ್ಮನ್ನು ಸಂರಕ್ಷಿಸಿಕೊಳ್ಳಲು ಮಾಟಮಂತ್ರದ ಸಹಾಯವನ್ನು ಪಡೆದುಕೊಳ್ಳುತ್ತಾರೆ. ಒಬ್ಬ ಮಾಂತ್ರಿಕನು, ಮಣಿಕಟ್ಟು, ಎದೆ, ಅಥವಾ ಬೆನ್ನಿನಲ್ಲಿ ಒಂದು ಇರಿತವನ್ನು ಮಾಡುತ್ತಾನೆ. ಅನಂತರ ಮಾಂತ್ರಿಕ ದ್ರವವನ್ನು ಆ ಇರಿತದ ಮೇಲೆ ಲೇಪಿಸಲಾಗುತ್ತದೆ ಮತ್ತು ಕೆಲವು ಮಂತ್ರಗಳನ್ನು ಪಠಿಸಲಾಗುತ್ತದೆ. ಆಗ ಆ ವ್ಯಕ್ತಿಯು ಕಳ್ಳರ ದಾಳಿಯಿಂದ ಸಂರಕ್ಷಿಸಲ್ಪಡುವನೆಂದು ಹೇಳಲಾಗುತ್ತದೆ. ಇತರರು, ತಮ್ಮ ಮನೆಗಳಲ್ಲಿ ತಾಯಿತಿಗಳು ಅಥವಾ ಮಾಂತ್ರಿಕ ದ್ರವಗಳನ್ನು ಇರಿಸಿಕೊಂಡು, ಇಂತಹ “ಇನ್ಶ್ಯೂರೆನ್ಸ್,” ಕಳ್ಳರು ತಮಗೆ ಯಾವುದೇ ಹಾನಿಮಾಡದೆ ಬಿಟ್ಟುಹೋಗುವಂತೆ ಮಾಡುವುದೆಂದು ನಂಬುತ್ತಾರೆ.
ನಿಜ ಕ್ರೈಸ್ತರು ಯಾವುದೇ ರೀತಿಯ ಮಾಟಮಂತ್ರದಲ್ಲಿ ಕೈಹಾಕುವುದಿಲ್ಲ. ಬೈಬಲು, ಎಲ್ಲ ವಿಧದ ಪ್ರೇತಾರಾಧನೆಯನ್ನು ಖಂಡಿಸುತ್ತದೆ. ಮತ್ತು ಇದು ಸರಿಯಾಗಿದೆ, ಯಾಕಂದರೆ ಅಂತಹ ಆಚರಣೆಗಳು ಒಬ್ಬ ವ್ಯಕ್ತಿಯನ್ನು ದೆವ್ವಗಳ ಸಂಪರ್ಕಕ್ಕೆ ತರುತ್ತದೆ. ಈ ದೆವ್ವಗಳೇ ಭೂಮಿಯ ಮೇಲೆ ಹಿಂಸೆಯನ್ನು ಪ್ರವರ್ಧಿಸುತ್ತವೆ. (ಆದಿಕಾಂಡ 6:2, 4, 11) ಬೈಬಲ್ ಸ್ಪಷ್ಟವಾಗಿ ತಿಳಿಸುವುದು: “ಯಂತ್ರಮಂತ್ರಗಳನ್ನು ಮಾಡಬಾರದು.”—ಯಾಜಕಕಾಂಡ 19:26.
ತಮ್ಮೊಂದಿಗೆ ಬಂದೂಕುಗಳನ್ನು ಇರಿಸಿಕೊಳ್ಳುವ ಮೂಲಕ ಕೆಲವು ಜನರು ಸುರಕ್ಷೆಯನ್ನು ಪಡೆಯಲು ಪ್ರಯತ್ನಿಸುತ್ತಾರೆ. ಆದರೆ, “ಕತ್ತಿಯನ್ನು ಹಿಡಿದವರೆಲ್ಲರು ಕತ್ತಿಯಿಂದ ಸಾಯುವರು” ಎಂದು ಹೇಳಿದ ಯೇಸುವಿನ ಮಾತುಗಳನ್ನು ಕ್ರೈಸ್ತರು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. (ಮತ್ತಾಯ 26:52) ದೇವರ ಜನರು ‘ತಮ್ಮ ಕತ್ತಿಗಳನ್ನು ಕುಲುಮೆಗೆ ಹಾಕಿ ಗುಳಗಳನ್ನಾಗಿಯೂ ಮಾಡಿದ್ದಾರೆ’ ಮತ್ತು ಕಳ್ಳತನ ಅಥವಾ ಯಾವುದೇ ರೀತಿಯ ಆಕ್ರಮಣದಿಂದ ತಮ್ಮನ್ನು ಸಂರಕ್ಷಿಸಿಕೊಳ್ಳಲು ಬಂದೂಕುಗಳನ್ನು ಖರೀದಿಸುವುದಿಲ್ಲ.—ಮೀಕ 4:3.
ಶಸ್ತ್ರಧಾರಿ ಕಾವಲುಗಾರರನ್ನು ಇಟ್ಟುಕೊಳ್ಳುವುದರ ಕುರಿತೇನು? ಇದು ಒಂದು ವೈಯಕ್ತಿಕ ನಿರ್ಣಯವಾಗಿರುವುದಾದರೂ, ಅಂತಹ ಏರ್ಪಾಡು ಬಂದೂಕನ್ನು ಇನ್ನೊಬ್ಬರ ಕೈಯಲ್ಲಿ ಇರಿಸುತ್ತದೆ ಅಷ್ಟೇ. ಒಬ್ಬ ಕಳ್ಳನು ನುಗ್ಗಿಬರುವಲ್ಲಿ, ಕಾವಲುಗಾರರು ಏನನ್ನು ಮಾಡುವಂತೆ ಒಬ್ಬ ಧಣಿಯು ಅಪೇಕ್ಷಿಸುವನು? ಅಗತ್ಯವಿರುವಲ್ಲಿ, ಜನರನ್ನು ಮತ್ತು ಕಾವಲು ಇಡಲಾಗುವ ಸ್ವತ್ತುಗಳನ್ನು ಸಂರಕ್ಷಿಸಲಿಕ್ಕಾಗಿ, ಕಳ್ಳನನ್ನು ಗುಂಡಿಕ್ಕುವಂತೆ ಅಪೇಕ್ಷಿಸುವನೊ?
ಮಾಟಮಂತ್ರ ಮತ್ತು ಶಸ್ತ್ರಗಳನ್ನು ಸಂರಕ್ಷಣೆಯ ಆಯುಧಗಳಾಗಿ ಉಪಯೋಗಿಸದೇ ಇರುವ ವಿಷಯದಲ್ಲಿ ಕ್ರೈಸ್ತರು ತೆಗೆದುಕೊಳ್ಳುವ ನಿಲುವು, ದೇವರನ್ನು ಅರಿಯದವರ ದೃಷ್ಟಿಯಲ್ಲಿ ಮೂರ್ಖತನವಾಗಿ ತೋರಬಹುದು. ಆದರೆ ಬೈಬಲ್ ನಮಗೆ ಆಶ್ವಾಸನೆಯನ್ನೀಯುವುದು: “ಮನುಷ್ಯನ ಭಯ ಉರುಲು; ಯೆಹೋವನ ಭರವಸ ಉದ್ಧಾರ.” (ಜ್ಞಾನೋಕ್ತಿ 29:25) ಯೆಹೋವನು ತನ್ನ ಜನರನ್ನು ಒಂದು ಸಮೂಹದೋಪಾದಿ ಸಂರಕ್ಷಿಸುತ್ತಾನಾದರೂ, ಕಳ್ಳತನದ ಪ್ರತಿಯೊಂದು ಸಂದರ್ಭದಲ್ಲಿ ತನ್ನ ಸೇವಕರನ್ನು ಆತನು ಸಂರಕ್ಷಿಸುವುದಿಲ್ಲ. ಯೋಬನು ತುಂಬ ನಂಬಿಗಸ್ತ ವ್ಯಕ್ತಿಯಾಗಿದ್ದನು. ಆದರೂ, ಕೊಳ್ಳೆಹೊಡೆಯುವವರು ಯೋಬನ ಸೇವಕರನ್ನು ಕೊಂದು, ಅವನ ಜಾನುವಾರುಗಳನ್ನು ಕದ್ದುಕೊಂಡು ಹೋಗುವಂತೆ ದೇವರು ಅನುಮತಿಸಿದನು. (ಯೋಬ 1:14, 15, 17) ಅಪೊಸ್ತಲ ಪೌಲನು ಸಹ ‘ಕಳ್ಳರ ಅಪಾಯಗಳನ್ನು’ ಅನುಭವಿಸುವಂತೆ ದೇವರು ಅನುಮತಿಸಿದನು. (2 ಕೊರಿಂಥ 11:26) ಆದರೆ, ತನ್ನ ಸೇವಕರು ಕಳ್ಳತನದ ಗಂಡಾಂತರವನ್ನು ಕಡಿಮೆಗೊಳಿಸುವ ಮೂಲತತ್ವಗಳಿಗನುಸಾರ ಜೀವಿಸುವಂತೆ ದೇವರು ಅವರಿಗೆ ಕಲಿಸುತ್ತಾನೆ. ಹಾನಿಯಾಗುವ ಸಂಭವವನ್ನು ಕಡಿಮೆಗೊಳಿಸುವಂತಹ ರೀತಿಯಲ್ಲಿ, ಕಳ್ಳತನದ ಪ್ರಯತ್ನಗಳಿಗೆ ಪ್ರತಿಕ್ರಿಯಿಸುವಂತೆ ಅವರಿಗೆ ಸಹಾಯಮಾಡುವ ತಿಳಿವಳಿಕೆಯೊಂದಿಗೂ ಆತನು ಅವರನ್ನು ಸಜ್ಜುಗೊಳಿಸುತ್ತಾನೆ.
ಕಳ್ಳತನದ ಬೆದರಿಕೆಯನ್ನು ಕಡಿಮೆಗೊಳಿಸುವುದು
ಒಬ್ಬ ಜ್ಞಾನಿಯು ಬಹು ಸಮಯದ ಹಿಂದೆ ಹೇಳಿದ್ದು: “ಐಶ್ವರ್ಯವಂತನ ಸಮೃದ್ಧಿಯೋ ಅವನಿಗೆ ನಿದ್ರೆ ಬರಲೀಸದು.” (ಪ್ರಸಂಗಿ 5:12) ಬೇರೆ ಮಾತುಗಳಲ್ಲಿ ಹೇಳುವುದಾದರೆ, ಬಹಳಷ್ಟು ಸ್ವತ್ತುಗಳುಳ್ಳವರು, ಅವುಗಳನ್ನು ಎಲ್ಲಿ ಕಳೆದುಕೊಳ್ಳುವೆವೊ ಎಂಬುದರ ಕುರಿತು ಎಷ್ಟು ಚಿಂತಿತರಾಗುತ್ತಾರೆಂದರೆ, ಅವರಿಗೆ ನಿದ್ರೆಯೇ ಬರುವುದಿಲ್ಲ.
ಆದುದರಿಂದ ಚಿಂತೆಯನ್ನು ಮಾತ್ರವಲ್ಲ, ಕಳ್ಳತನದ ಅಪಾಯವನ್ನು ಸಹ ಕಡಿಮೆಗೊಳಿಸುವ ಒಂದು ವಿಧವು, ಅನೇಕ ದುಬಾರಿ ಸ್ವತ್ತುಗಳನ್ನು ಕೂಡಿಸಿಟ್ಟುಕೊಳ್ಳದಿರುವುದೇ ಆಗಿದೆ. ಪ್ರೇರಿತ ಅಪೊಸ್ತಲನು ಬರೆದುದು: “ಲೋಕದಲ್ಲಿರುವ ಶರೀರದಾಶೆ ಕಣ್ಣಿನಾಶೆ ಬದುಕುಬಾಳಿನ ಡಂಬ ಈ ಮೊದಲಾದವುಗಳೆಲ್ಲವು ತಂದೆಯಿಂದ ಹುಟ್ಟದೆ ಲೋಕದಿಂದ ಹುಟ್ಟಿದವುಗಳಾಗಿವೆ.” (1 ಯೋಹಾನ 2:16) ದುಬಾರಿ ವಸ್ತುಗಳನ್ನು ಖರೀದಿಸುವಂತೆ ಜನರನ್ನು ಪ್ರಚೋದಿಸುವ ಆಶೆಗಳೇ, ಕಳ್ಳರು ಅವುಗಳನ್ನು ಕದಿಯುವಂತೆ ಪ್ರಚೋದಿಸುತ್ತವೆ. ಮತ್ತು “ಬದುಕುಬಾಳಿನ ಡಂಬ”ವು, ಲೂಟಿಮಾಡುವವರಿಗೆ ಒಂದು ಆಮಂತ್ರಣದಂತಿದೆ.
ಒಂದು ದೊಡ್ಡ ಪ್ರದರ್ಶನವನ್ನು ಮಾಡದೆ ಇರುವುದರ ಜೊತೆಗೆ, ನೀವು ಒಬ್ಬ ಸತ್ಯ ಕ್ರೈಸ್ತರಾಗಿದ್ದೀರೆಂಬುದನ್ನು ಪ್ರದರ್ಶಿಸುವುದು ಇನ್ನೊಂದು ಸುರಕ್ಷೆಯಾಗಿದೆ. ನೀವು ಇತರರಿಗಾಗಿ ಪ್ರೀತಿಯನ್ನು ತೋರಿಸುವಲ್ಲಿ, ನಿಮ್ಮ ವ್ಯವಹಾರಗಳಲ್ಲಿ ಪ್ರಾಮಾಣಿಕರಾಗಿರುವಲ್ಲಿ, ಮತ್ತು ಕ್ರೈಸ್ತ ಶುಶ್ರೂಷೆಯಲ್ಲಿ ಸಕ್ರಿಯರಾಗಿರುವಲ್ಲಿ, ನಿಮ್ಮ ಸಮಾಜದಲ್ಲಿ ನೀವು ಒಬ್ಬ ಒಳ್ಳೆಯ ವ್ಯಕ್ತಿ ಮತ್ತು ಗೌರವಕ್ಕೆ ಅರ್ಹರಾದ ಒಬ್ಬ ವ್ಯಕ್ತಿಯಾಗಿದ್ದೀರೆಂಬ ಹೆಸರನ್ನು ಪಡೆದುಕೊಳ್ಳಬಹುದು. (ಗಲಾತ್ಯ 5:19-23) ಅಂತಹ ಒಂದು ಕ್ರೈಸ್ತ ಹೆಸರು, ಯಾವುದೇ ಆಯುಧಕ್ಕಿಂತಲೂ ಹೆಚ್ಚಿನ ಸಂರಕ್ಷಣೆಯನ್ನು ಒದಗಿಸಸಾಧ್ಯವಿದೆ.
ಶಸ್ತ್ರಧಾರಿ ಕಳ್ಳರು ಆಕ್ರಮಿಸುವಾಗ
ಆದರೆ ಕಳ್ಳರು ಹೇಗಾದರೂ ಮಾಡಿ ನಿಮ್ಮ ಮನೆಯನ್ನು ಒಳಹೊಕ್ಕಿ ನಿಮ್ಮನ್ನು ಎದುರಿಸುವಲ್ಲಿ ನೀವೇನು ಮಾಡಬೇಕು? ನಿಮ್ಮ ಸ್ವತ್ತುಗಳಿಗಿಂತಲೂ ನಿಮ್ಮ ಜೀವವು ಹೆಚ್ಚು ಪ್ರಾಮುಖ್ಯವೆಂಬುದನ್ನು ಜ್ಞಾಪಕದಲ್ಲಿಡಿರಿ. ಕ್ರಿಸ್ತ ಯೇಸು ಹೇಳಿದ್ದು: “ಕೆಡುಕನನ್ನು ಎದುರಿಸಬೇಡ. ಒಬ್ಬನು ನಿನ್ನ ಬಲಗೆನ್ನೆಯ ಮೇಲೆ ಹೊಡೆದರೆ ಅವನಿಗೆ ಮತ್ತೊಂದು ಕೆನ್ನೆಯನ್ನೂ ಒಡ್ಡು. ನಿನ್ನ ಸಂಗಡ ವ್ಯಾಜ್ಯವಾಡಿ ನಿನ್ನ ಒಳಂಗಿಯನ್ನು ತಕ್ಕೊಳ್ಳಬೇಕೆಂದಿರುವವನಿಗೆ ಮೇಲಂಗಿಯನ್ನೂ ಬಿಡು.”—ಮತ್ತಾಯ 5:39, 40.
ಇದು ವಿವೇಕಯುತವಾದ ಸಲಹೆಯಾಗಿದೆ. ಕ್ರೈಸ್ತರು ತಮ್ಮ ಆಸ್ತಿಯ ಕುರಿತಾಗಿ ಕಳ್ಳರಿಗೆ ಮಾಹಿತಿಯನ್ನು ಕೊಡುವ ಹಂಗಿನಲ್ಲಿಲ್ಲದಿದ್ದರೂ, ನಾವು ಅವರನ್ನು ಪ್ರತಿರೋಧಿಸುತ್ತಿದ್ದೇವೆ, ಸಹಕರಿಸುತ್ತಿಲ್ಲ ಅಥವಾ ವಂಚಿಸುತ್ತಿದ್ದೇವೆಂದು ಕಳ್ಳರಿಗೆ ಸುಳಿವು ಸಿಗುವಲ್ಲಿ ಅವರು ಹಿಂಸಾತ್ಮಕರಾಗುವುದು ಹೆಚ್ಚು ಸಂಭವನೀಯ. ಅವರಲ್ಲಿ ಹೆಚ್ಚಿನವರು, “ಸಕಲ ನೈತಿಕ ಪ್ರಜ್ಞೆಯ ಮೇರೆಯನ್ನು ದಾಟಿದವರಾಗಿದ್ದು,” ಸುಲಭವಾಗಿ ಕೆಡುಕಿನ, ನಿರ್ದಯೆಯ ಕೃತ್ಯಗಳನ್ನು ನಡೆಸುವಂತೆ ಕೆರಳಿಸಲ್ಪಡುತ್ತಾರೆ.—ಎಫೆಸ 4:19, NW.
ಸ್ಯಾಮ್ಯೂಎಲ್ ಒಂದು ಕಟ್ಟಡ ಸಮುಚ್ಚಯದಲ್ಲಿ ವಾಸಿಸುತ್ತಾನೆ. ಕಟ್ಟಡದಿಂದ ಯಾರೂ ಹೊರಹೋಗದಂತೆ ಅಥವಾ ಒಳಪ್ರವೇಶಿಸದಂತೆ ತಡೆಗಟ್ಟನ್ನು ಹಾಕಿ, ಕಳ್ಳರು ಒಂದು ಮಹಡಿಮನೆಯಿಂದ ಇನ್ನೊಂದಕ್ಕೆ ಹೋಗುತ್ತಾ ಲೂಟಿಮಾಡಿದರು. ಸಾಮ್ಯೂಲನು ಗುಂಡಿನ ಶಬ್ದಗಳನ್ನು, ಬಾಗಿಲುಗಳು ಅಪ್ಪಳಿಸಲ್ಪಡುವುದನ್ನು, ಜನರು ಚೀರುತ್ತಿರುವುದನ್ನು, ಕೂಗಾಡುತ್ತಿರುವುದನ್ನು ಮತ್ತು ಗೋಳಾಡುತ್ತಿರುವುದನ್ನು ಕೇಳಿಸಿಕೊಂಡನು. ಅಲ್ಲಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇರಲಿಲ್ಲ. ಸ್ಯಾಮ್ಯೂಎಲನು ತನ್ನ ಹೆಂಡತಿ ಮತ್ತು ಮೂವರು ಪುತ್ರರಿಗೆ ಮೊಣಕಾಲೂರಿ, ತಮ್ಮ ಕೈಗಳನ್ನು ಮೇಲಕ್ಕೆತ್ತಿ, ಕಣ್ಣುಗಳನ್ನು ಮುಚ್ಚಿಕೊಂಡು ಕಾದುಕೊಂಡಿರುವಂತೆ ಹೇಳಿದನು. ಕಳ್ಳರು ಒಳಪ್ರವೇಶಿಸಿದಾಗ, ಸ್ಯಾಮ್ಯೂಎಲನು ಅವರ ಕಡೆಗೆ ನೋಡದೆ ತನ್ನ ದೃಷ್ಟಿಯನ್ನು ನೆಲದ ಮೇಲೆಯೇ ನೆಟ್ಟು, ಅವರೊಂದಿಗೆ ಮಾತಾಡಿದನು. ಏಕೆಂದರೆ ಆ ಕಳ್ಳರ ಮುಖಗಳನ್ನು ತಾನು ನೋಡುವಲ್ಲಿ, ತಾನು ತದನಂತರ ಅವರ ಗುರುತುಹಿಡಿಯುವೆನೆಂದು ಅವರು ನೆನಸುವಂತೆ ಮಾಡಬಹುದೆಂದು ಅವನಿಗೆ ಗೊತ್ತಿತ್ತು. ಅವನಂದದ್ದು: “ಒಳಗೆ ಬನ್ನಿ. ನಿಮಗೆ ಏನು ಬೇಕೋ ಅದೆಲ್ಲವನ್ನು ಹಿಂಜರಿಯದೆ ತೆಗೆದುಕೊಂಡು ಹೋಗಬಹುದು. ನಾವು ಯೆಹೋವನ ಸಾಕ್ಷಿಗಳಾಗಿದ್ದೇವೆ, ಮತ್ತು ನಾವು ನಿಮ್ಮನ್ನು ತಡೆಗಟ್ಟುವುದಿಲ್ಲ.” ಇದರಿಂದ ಕಳ್ಳರಿಗೆ ಆಶ್ಚರ್ಯವಾಯಿತು. ಮುಂದಿನ ಒಂದು ತಾಸಿಗಿಂತಲೂ ಹೆಚ್ಚು ಸಮಯದ ವರೆಗೆ, ಒಟ್ಟಿನಲ್ಲಿ 12 ಶಸ್ತ್ರಧಾರಿ ಕಳ್ಳರು ಗುಂಪುಗಳಲ್ಲಿ ಬಂದರು. ಅವರು ಆಭರಣಗಳು, ಹಣ ಮತ್ತು ಎಲೆಕ್ಟ್ರಾನಿಕ್ ಸಲಕರಣೆಗಳನ್ನು ತೆಗೆದುಕೊಂಡು ಹೋದರೂ, ಕಟ್ಟಡದಲ್ಲಿದ್ದ ಇತರರಿಗೆ ಅವರು ಹಾನಿಮಾಡಿದಂತೆ ಈ ಕುಟುಂಬದ ಯಾವ ಸದಸ್ಯನನ್ನೂ ಹೊಡೆಯಲಿಲ್ಲ ಅಥವಾ ಮಚ್ಚುಗತ್ತಿಯಿಂದ ಗಾಯಗೊಳಿಸಲಿಲ್ಲ. ತಮ್ಮ ಜೀವಗಳನ್ನು ರಕ್ಷಿಸಿದಕ್ಕಾಗಿ ಸ್ಯಾಮ್ಯೂಎಲನ ಕುಟುಂಬವು ಯೆಹೋವನಿಗೆ ಉಪಕಾರವನ್ನು ಸಲ್ಲಿಸಿತು.
ಹಣ ಮತ್ತು ಪ್ರಾಪಂಚಿಕ ಸ್ವತ್ತುಗಳ ವಿಷಯದಲ್ಲಿ ಕಳ್ಳರ ಆಕ್ರಮಣಕ್ಕೆ ಬಲಿಯಾದವರು, ಪ್ರತಿರೋಧಿಸದಿರುವಲ್ಲಿ ಅವರಿಗೆ ಹಾನಿಯಾಗುವ ಸಂಭನೀಯತೆ ಕಡಿಮೆ.a
ಕೆಲವೊಮ್ಮೆ, ಒಬ್ಬ ಕ್ರೈಸ್ತನು ಸತ್ಯದ ಕುರಿತಾಗಿ ಸಾಕ್ಷಿಯನ್ನು ಕೊಡುವಲ್ಲಿ ಅದು ಹಾನಿಯ ವಿರುದ್ಧ ಒಂದು ಸುರಕ್ಷೆಯಾಗಿರುವುದು. ಏಡಾ ಎಂಬವನ ಮನೆಯನ್ನು ಕಳ್ಳರು ಆಕ್ರಮಣ ಮಾಡಿದಾಗ, ಅವನು ಅವರಿಗಂದದ್ದು: “ನೀವು ತುಂಬ ಕಷ್ಟದಲ್ಲಿದ್ದೀರೆಂದು ನನಗೆ ಗೊತ್ತು, ಅದಕ್ಕಾಗಿಯೇ ನೀವು ಈ ಕೆಲಸವನ್ನು ಮಾಡುತ್ತಿದ್ದೀರಿ. ಆದರೆ, ಬೇಗನೆ ಒಂದು ದಿನ ಎಲ್ಲರಿಗೆ, ತನಗಾಗಿ ಮತ್ತು ತನ್ನ ಕುಟುಂಬಕ್ಕಾಗಿ ತಿನ್ನಲು ಸಾಕಷ್ಟು ಇರುವುದೆಂದು ಯೆಹೋವನ ಸಾಕ್ಷಿಗಳೋಪಾದಿ ನಾವು ನಂಬುತ್ತೇವೆ. ದೇವರ ರಾಜ್ಯದ ಕೆಳಗೆ ಎಲ್ಲರೂ ಶಾಂತಿ ಮತ್ತು ಸಂತೋಷದಿಂದ ಜೀವಿಸುವರು.” ಈ ಮಾತುಗಳು ಆ ಕಳ್ಳರ ಹಿಂಸಾತ್ಮಕ ಭಾವವನ್ನು ತಗ್ಗಿಸಿತು. ಅವರಲ್ಲೊಬ್ಬನು ಹೇಳಿದ್ದು: “ನಾವು ನಿಮ್ಮ ಮನೆಗೆ ಬಂದದಕ್ಕೆ ಕ್ಷಮೆಯಾಚಿಸುತ್ತೇವೆ. ಆದರೆ ನಾವು ಹಸಿದಿದ್ದೇವೆಂಬುದನ್ನು ಅರ್ಥಮಾಡಿಕೊಳ್ಳಿರಿ.” ಅವರು ಏಡಾನ ಸ್ವತ್ತುಗಳನ್ನು ಲೂಟಿಮಾಡಿದರೂ, ಅವನಿಗೆ ಅಥವಾ ಅವನ ಕುಟುಂಬದಲ್ಲಿರುವ ಯಾರಿಗೂ ಅವರೂ ಹಾನಿಮಾಡಲಿಲ್ಲ.
ಶಾಂತಚಿತ್ತರಾಗಿರುವುದು
ಒಂದು ಅಪಾಯಕಾರಿ ಸನ್ನಿವೇಶದಲ್ಲಿರುವಾಗ, ವಿಶೇಷವಾಗಿ ಕಳ್ಳರ ಮುಖ್ಯ ಗುರಿಯು ತಮ್ಮ ಬಲಿಗಳನ್ನು ಮಣಿಯುವಂತೆ ದಿಗಿಲುಗೊಳಿಸುವುದೇ ಆಗಿರುವಾಗ, ಶಾಂತಚಿತ್ತರಾಗಿರುವುದು ಸುಲಭವಲ್ಲ. ಪ್ರಾರ್ಥನೆಯು ನಮಗೆ ಸಹಾಯಮಾಡುವುದು. ಸಹಾಯಕ್ಕಾಗಿರುವ ನಮ್ಮ ಮೊರೆಯು, ಸದ್ದಿಲ್ಲದೆ ಮತ್ತು ಸಂಕ್ಷಿಪ್ತವಾಗಿ ಮಾಡಲ್ಪಟ್ಟರೂ, ಯೆಹೋವನಿಗೆ ಕೇಳಿಸುತ್ತದೆ. ಬೈಬಲ್ ನಮಗೆ ಆಶ್ವಾಸನೆಯನ್ನೀಯುವುದು: “ಯೆಹೋವನು ನೀತಿವಂತರನ್ನು ಕಟಾಕ್ಷಿಸುತ್ತಾನೆ; ಅವರು ಮೊರೆಯಿಡುವಾಗ ಕಿವಿಗೊಡುತ್ತಾನೆ.” (ಕೀರ್ತನೆ 34:15) ಯೆಹೋವನು ನಮಗೆ ಕಿವಿಗೊಡಬಲ್ಲನು, ಮತ್ತು ಯಾವುದೇ ಸನ್ನಿವೇಶವನ್ನು ಶಾಂತಚಿತ್ತರಾಗಿ ನಿಭಾಯಿಸುವಂತೆ ನಮಗೆ ವಿವೇಕವನ್ನು ಕೊಡಬಲ್ಲನು.—ಯಾಕೋಬ 1:5.
ಪ್ರಾರ್ಥನೆ ಅಲ್ಲದೆ, ಶಾಂತಚಿತ್ತರಾಗಿರಲಿಕ್ಕಾಗಿರುವ ಇನ್ನೊಂದು ಸಹಾಯಕವು, ಕಳ್ಳತನವಾಗುವಾಗ ನೀವು ಏನು ಮಾಡುವಿರಿ ಮತ್ತು ಏನು ಮಾಡದಿರುವಿರಿ ಎಂಬುದನ್ನು ಮುಂಚಿತವಾಗಿಯೇ ನಿರ್ಣಯಿಸುವುದಾಗಿದೆ. ನೀವು ಯಾವ ಸನ್ನಿವೇಶದಲ್ಲಿರುವಿರಿ ಎಂಬುದನ್ನು ಮುಂಚಿತವಾಗಿಯೇ ತಿಳಿಯಲು ಸಾಧ್ಯವಿಲ್ಲವೆಂಬುದು ನಿಜ. ಆದರೆ ಒಂದು ವೇಳೆ ನಿಮ್ಮ ಕಟ್ಟಡಕ್ಕೆ ಬೆಂಕಿ ತಗಲುವಲ್ಲಿ ನೀವು ಏನು ಮಾಡಬೇಕೆಂಬುದನ್ನು ತಿಳಿಯಲು, ಸುರಕ್ಷಾ ವಿಧಾನಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ವಿವೇಕಯುತವಾಗಿರುವಂತೆಯೇ, ಕೆಲವೊಂದು ಮೂಲತತ್ವಗಳನ್ನು ಮನಸ್ಸಿನಲ್ಲಿಡುವುದು ಒಳ್ಳೇದು. ಶಾಂತಚಿತ್ತರಾಗಿರುವಂತೆ, ಗಾಬರಿಗೊಳ್ಳದಂತೆ, ಮತ್ತು ಹಾನಿಯನ್ನು ತಪ್ಪಿಸಿಕೊಳ್ಳುವಂತೆ, ಮುಂದಾಲೋಚನೆಯು ನಿಮಗೆ ಸಹಾಯಮಾಡುವುದು.
ಕಳ್ಳತನದ ಕುರಿತಾದ ದೇವರ ದೃಷ್ಟಿಕೋನವು ಸ್ಪಷ್ಟವಾಗಿ ತಿಳಿಸಿದ್ದು: “ಯೆಹೋವನೆಂಬ ನಾನು ನ್ಯಾಯವನ್ನು ಪ್ರೀತಿಸುತ್ತೇನೆ, ಕೊಳ್ಳೆಯನ್ನೂ [“ಕಳ್ಳತನವನ್ನು,” NW] ಅನ್ಯಾಯವನ್ನೂ ದ್ವೇಷಿಸುತ್ತೇನೆ.” (ಯೆಶಾಯ 61:8) ಕಳ್ಳತನವನ್ನು ಒಂದು ಅತಿ ಗಂಭೀರವಾದ ಪಾಪವೆಂದು ಪಟ್ಟಿಮಾಡುವಂತೆ ಯೆಹೋವನು ತನ್ನ ಪ್ರವಾದಿಯನ್ನು ಪ್ರೇರಿಸಿದನು. (ಯೆಹೆಜ್ಕೇಲ 18:18) ಆದರೆ ಪಶ್ಚಾತ್ತಾಪಪಟ್ಟು, ತಾನು ಕದ್ದಿರುವ ವಸ್ತುಗಳನ್ನು ಹಿಂದಿರುಗಿಸುವ ವ್ಯಕ್ತಿಯನ್ನು ದೇವರು ಕರುಣೆಯಿಂದ ಕ್ಷಮಿಸುವನೆಂದು ಅದೇ ಬೈಬಲ್ ಪುಸ್ತಕವು ತೋರಿಸುತ್ತದೆ.—ಯೆಹೆಜ್ಕೇಲ 33:14-16.
ಪಾತಕದಲ್ಲಿ ಮುಳುಗಿರುವ ಒಂದು ಲೋಕದಲ್ಲಿ ಕ್ರೈಸ್ತರು ಜೀವಿಸುತ್ತಿರುವುದಾದರೂ, ಕಳ್ಳತನವು ಇನ್ನಿಲ್ಲದಿರುವ ದೇವರ ರಾಜ್ಯದ ಕೆಳಗೆ ಜೀವಿಸುವ ನಿರೀಕ್ಷೆಯ ವಿಷಯದಲ್ಲಿ ಅವರು ಹರ್ಷಿಸುತ್ತಾರೆ. ಆ ಸಮಯದ ಕುರಿತಾಗಿ, ಬೈಬಲ್ ವಾಗ್ದಾನಿಸುವುದು: ‘[ದೇವರ ಜನರು] ತನ್ನ ತನ್ನ ದ್ರಾಕ್ಷಾಲತೆ, ಅಂಜೂರ ಗಿಡ, ಇವುಗಳ ನೆರಳಿನಲ್ಲಿ ಕೂತುಕೊಳ್ಳುವರು; ಅವರನ್ನು ಯಾರೂ ಹೆದರಿಸರು; ಸೇನಾಧೀಶ್ವರನಾದ ಯೆಹೋವನ ಬಾಯೇ ಇದನ್ನು ನುಡಿದಿದೆ.’—ಮೀಕ 4:4.
[ಪಾದಟಿಪ್ಪಣಿ]
a ಆದರೆ, ಸಹಕಾರವನ್ನು ತೋರಿಸುವುದಕ್ಕೂ ಮಿತಿಗಳಿವೆ. ದೇವರ ನಿಯಮವನ್ನು ಉಲ್ಲಂಘಿಸುವಂತಹ ಯಾವುದೇ ರೀತಿಯಲ್ಲಿ ಯೆಹೋವನ ಸೇವಕರು ಸಹಕರಿಸುವುದಿಲ್ಲ. ಉದಾಹರಣೆಗಾಗಿ, ಒಬ್ಬ ಕ್ರೈಸ್ತಳು, ಬಲಾತ್ಕಾರ ಸಂಭೋಗಕ್ಕೆ ಸಿದ್ಧಮನಸ್ಸಿನಿಂದ ಮಣಿಯದಿರುವಳು.