ಪಶ್ಚಿಮ ಆಫ್ರಿಕದಲ್ಲಿ ವಿಫಲಗೊಳಿಸಲ್ಪಟ್ಟ ಕಳ್ಳತನದ ಯತ್ನ
ಯ್ಯೂನಿಸ್ ಏಬೂ ಹೇಳಿದಂತೆ
“ಶಸ್ತ್ರಧಾರಿ ಕಳ್ಳರು, ನಮ್ಮ ಮನೆಯಲ್ಲಿ ನಾವು ಸಾಮಾನ್ಯವಾಗಿ ಸಭಾ ಪುಸ್ತಕ ಅಭ್ಯಾಸವನ್ನು ನಡೆಸುವ ದಿನದಂದು ಕಳ್ಳತನವನ್ನು ಮಾಡಲು ಯೋಜಿಸಿದರು. ಸಹೋದರ ಸಹೋದರಿಯರಿಗಾಗಿ ಮತ್ತು ಆಸಕ್ತ ಜನರಿಗಾಗಿ ನಾವು ನಮ್ಮ ಗೇಟುಗಳನ್ನು ತೆರೆದಿಡುತ್ತೇವೆ. ಆ ಕಳ್ಳರಿಗೆ ನಮ್ಮ ಈ ರೂಢಿ ಮತ್ತು ಕೂಟದ ಸಮಯ ಗೊತ್ತಿತ್ತೆಂದು ತೋರುತ್ತದೆ. ಅವರು ಎಲ್ಲಿಂದಲೊ ಒಂದು ಕಾರನ್ನು ಕದ್ದುಕೊಂಡು, ಪುಸ್ತಕ ಅಭ್ಯಾಸವು ನಡೆಯುವ ದಿನ, ಸಮಯಕ್ಕೆ ಸರಿಯಾಗಿ ನಮ್ಮ ಗೇಟಿನ ಬಳಿ ಕಾದುಕೊಂಡಿದ್ದರು.
“ಅನಿರೀಕ್ಷಿತವಾಗಿ, ಅವರು ನಮ್ಮ ಮನೆಗೆ ಬಂದ ಆ ವಾರದಲ್ಲೇ, ನಮ್ಮ ಸರ್ಕಿಟ್ ಮೇಲ್ವಿಚಾರಕರ ಸಂದರ್ಶನ ನಡೆಯುತ್ತಿತ್ತು. ನಮ್ಮ ಮನೆಯಲ್ಲಿ ಕೂಡಿಬರುವ ಬದಲಿಗೆ, ನಾವು ರಾಜ್ಯ ಸಭಾಗೃಹದಲ್ಲಿ ಸೇರಿದೆವು. ಕೂಟವು ಮುಗಿದ ಬಳಿಕ, ಹಿರಿಯರ ಕೂಟವಿತ್ತು. ಸಾಮಾನ್ಯವಾಗಿ ಮಕ್ಕಳು ಮತ್ತು ನಾನು ಮನೆಗೆ ಹೋಗುತ್ತಿದ್ದೆವು. ಆದರೆ ಒಬ್ಬ ಹಿರಿಯನಾಗಿರುವ ನನ್ನ ಗಂಡನು, ಆ ದಿನ ನಾವು ಅವನಿಗಾಗಿ ಕಾಯುವಂತೆ ಹೇಳಿದರು. ಅದಕ್ಕೆ ಹೆಚ್ಚು ಸಮಯ ಆಗಲಿಕ್ಕಿಲ್ಲವೆಂದು ಅವರು ಹೇಳಿದರು. ಆದುದರಿಂದ ನಾವು ಕಾದುಕುಳಿತೆವು.
“ಅವರು ಬಂದ ಮೇಲೆ, ಕಾರ್ ಸ್ಟಾರ್ಟ್ ಆಗಲಿಲ್ಲ. ಸರ್ಕಿಟ್ ಮೇಲ್ವಿಚಾರಕರಿಗೆ ಮತ್ತು ನನ್ನ ಗಂಡನಿಗೆ ಅದನ್ನು ರಿಪೇರಿ ಮಾಡಲು ಸಾಧ್ಯವಾಗಲಿಲ್ಲ. ನಾವು ಕರೆದಂತಹ ಮೆಕ್ಯಾನಿಕನಿಗೂ ಅದನ್ನು ಸರಿಪಡಿಸಲಾಗಲಿಲ್ಲ.
“ಮಕ್ಕಳು ನಡೆದುಕೊಂಡೇ ಮನೆಗೆ ಹೋಗಬೇಕಾಯಿತು. ಸ್ವಲ್ಪ ಸಮಯದ ನಂತರ ನಾನೂ ಮನೆಗೆ ಹೋದೆ. ನಾನು ಸುಮಾರು ಹತ್ತು ಘಂಟೆಗೆ ತಲಪಿದೆ. ನಾನು ಮತ್ತು ಮಕ್ಕಳು ಕಾರಿನಲ್ಲಿ ಬಂದಿರಲಿಲ್ಲವಾದ್ದರಿಂದ ನಾವು ಕಂಪೌಂಡನ್ನು ಪ್ರವೇಶಿಸುವಾಗ, ದೊಡ್ಡ ಗೇಟನ್ನು ತೆರೆಯಲಿಲ್ಲ.
“ನಾನು ಬೆಡ್ರೂಮನ್ನು ಪ್ರವೇಶಿಸಿದಾಗ ಒಂದು ದೊಡ್ಡ ಗುಂಡುಹೊಡೆತದ ಶಬ್ದವನ್ನು ಕೇಳಿಸಿಕೊಂಡೆ. ಏನಾಗುತ್ತಿದೆಯೆಂದು ನನಗೆ ತಿಳಿಯಲಿಲ್ಲ. ನಾನು ಪೊಲೀಸರಿಗೆ ಫೋನ್ ಮಾಡಲು ಪ್ರಯತ್ನಿಸಿದೆ, ಆದರೆ ಫೋನ್ ಸ್ತಬ್ಧಗೊಂಡಿತ್ತು. ನಾನು ಕೆಳಗಿನ ಮಹಡಿಗೆ ಓಡಿಹೋಗಿ, ಉಕ್ಕಿನ ಪ್ರವೇಶದ್ವಾರಕ್ಕೆ ಬೀಗ ಜಡಿದೆ. ಅನಂತರ ನಾನು ಮಧ್ಯದ ಬಾಗಿಲಿಗೆ ಬೀಗ ಹಾಕಲು ಅವಸರಿಸಿದೆ. ಲೈಟ್ಗಳನ್ನು ಆಫ್ ಮಾಡಿದೆ. ನನ್ನ ಮಕ್ಕಳಿಗೆ ಗಾಬರಿಯಾಗುತ್ತಿತ್ತು, ಆದುದರಿಂದ ಅವರು ಶಾಂತಚಿತ್ತರಾಗಿರುವಂತೆ ಅವರಿಗೆ ಹೇಳಿದೆ. ನಾವು ಜೊತೆಗೂಡಿ ರಕ್ಷಣೆಗಾಗಿ ಯೆಹೋವನಿಗೆ ಪ್ರಾರ್ಥಿಸಿದೆವು. ಇದೆಲ್ಲ ನಡೆಯುತ್ತಿದ್ದಾಗ, ನನ್ನ ಗಂಡನು ರಾಜ್ಯ ಸಭಾಗೃಹದ ಬಳಿಯಲ್ಲಿ, ಕಾರನ್ನು ಆರಂಭಿಸಲು ಇನ್ನೂ ಪ್ರಯತ್ನಿಸುತ್ತಾ ಇದ್ದರು.
“ನಾನು ಕಿಟಕಿಯಿಂದ ಇಣಿಕಿನೋಡಿದಾಗ, ಗೇಟಿನ ಬಳಿ ಒಬ್ಬ ಮನುಷ್ಯನು ಬೀದಿಯಲ್ಲಿ ಬಿದ್ದಿರುವುದನ್ನು ನೋಡಿದೆ. ಕಳ್ಳರು ಹೋಗಿಬಿಟ್ಟಿದ್ದರೆಂದು ತೋರಿತು, ಆದುದರಿಂದ ನಾನು ಆ ಗಾಯಗೊಂಡ ಮನುಷ್ಯನನ್ನು ನನ್ನ ಕಾರ್ನಲ್ಲಿ ಹಾಕಿ, ಆಸ್ಪತ್ರೆಗೆ ತಲಪಿಸಿದೆ. ಅದೊಂದು ಅಪಾಯಕಾರಿ ಕೆಲಸವಾಗಿತ್ತಾದರೂ, ನಾನು ಏನಾದರೂ ಮಾಡಲೇಬೇಕಿತ್ತು. ಆದರೆ ದುಃಖಕರವಾಗಿ ಅವನು ಮರುದಿನ ಸತ್ತನು.
“ಆ ದುರಂತ ಅಲ್ಲದೆ, ಇನ್ನೂ ಕೆಟ್ಟದ್ದಾದ ಸಂಗತಿಗಳು ನಡೆಯುವ ಸಾಧ್ಯತೆಯಿತ್ತು. ಸರ್ಕಿಟ್ ಮೇಲ್ವಿಚಾರಕರ ಸಂದರ್ಶನದಿಂದಾಗಿ, ನಮ್ಮ ಮನೆಯಲ್ಲಿ ಪುಸ್ತಕಭ್ಯಾಸ ನಡೆಯಲಿಲ್ಲ. ಕಾರ್ ಕೆಟ್ಟುಹೋಗಿದ್ದುದರಿಂದ ನಾವು ಕುಟುಂಬದೋಪಾದಿ ಜೊತೆಯಾಗಿ ಮನೆಗೆ ಹಿಂದಿರುಗಲಿಲ್ಲ. ನನ್ನ ಗಂಡನು, ಮನೆಗೆ ಹಿಂದಿರುಗಿದಾಗ ರಾತ್ರಿ ತುಂಬ ತಡವಾಗಿತ್ತು. ಅವರು ಬಂದಿರುತ್ತಿದ್ದರೆ, ಕಳ್ಳರು ಖಂಡಿತವಾಗಿಯೂ ಅವರನ್ನು ಹಿಡಿಯುತ್ತಿದ್ದರು. ಇದರಿಂದಾಗಿ ಮತ್ತು ಇತರ ಅಂಶಗಳಿಂದಾಗಿ, ಆ ರಾತ್ರಿ ನಾವು ಬಚಾವಾದೆವು.
“ಯೆಹೋವನು ನಮ್ಮ ಪ್ರಬಲಸ್ಥಾನ ಮತ್ತು ನಮ್ಮ ಆಶ್ರಯವಾಗಿದ್ದಾನೆ. ಈ ವಚನದಲ್ಲಿ ಹೇಳುವಂತೆ: ‘ಯೆಹೋವನು ಪಟ್ಟಣವನ್ನು ಕಾಯದಿದ್ದರೆ ಕಾವಲುಗಾರರು ಅದನ್ನು ಕಾಯುವದು ವ್ಯರ್ಥ.’”—ಕೀರ್ತನೆ 127:1.