ದೇವರ ಜೀವನ ಮಾರ್ಗವನ್ನು ಅನುಸರಿಸಲು ದೃಢನಿಶ್ಚಿತರಾಗಿರುವುದು
ದೇವರನ್ನು ಸೇವಿಸಲು ಬಯಸುವವರಿಗೆ, “ದೇವರ ಜೀವನ ಮಾರ್ಗ” ಎಂಬ ಅಧಿವೇಶನಗಳು ಎಷ್ಟೊಂದು ವಿಷಯಗಳನ್ನು ಸಾದರಪಡಿಸಿದವು! “ಉಪದೇಶ, ಉತ್ತೇಜನ, ಹಾಗೂ ತಿಳುವಳಿಕೆಯ ಒಂದು ಅದ್ಭುತಕರ ಸಮಯಾವಧಿಯು ಅದಾಗಿತ್ತು” ಎಂದು ಪ್ರತಿನಿಧಿಯೊಬ್ಬಳು ಅಧಿವೇಶನದ ಬಗ್ಗೆ ವರ್ಣಿಸಿದಳು.
“ಆನಂದಿಸಲು, ಮನನಮಾಡಲು, ಜ್ಞಾನವನ್ನು ಪಡೆದುಕೊಳ್ಳಲು ಬಹಳಷ್ಟು ವಿಷಯವು ಅಲ್ಲಿತ್ತು” ಎಂದು ಇನ್ನೊಬ್ಬ ಪ್ರತಿನಿಧಿಯು ಹೇಳಿದನು. ಈಗ ನಾವು ಕಾರ್ಯಕ್ರಮವನ್ನೇ ಪರಿಗಣಿಸೋಣ.
ಯೇಸು ಕ್ರಿಸ್ತನು—ಮಾರ್ಗವೂ ಸತ್ಯವೂ ಜೀವವೂ ಆಗಿದ್ದಾನೆ
ಅಧಿವೇಶನದ ಮೊದಲನೆಯ ದಿನದ ಮುಖ್ಯವಿಷಯವು ಇದಾಗಿತ್ತು. (ಯೋಹಾನ 14:6) ಅಧಿವೇಶನದಲ್ಲಿ ನಾವು ಒಟ್ಟುಗೂಡುವುದರ ಉದ್ದೇಶವನ್ನು ಮೊದಲ ಭಾಷಣವು ತಿಳಿಯಪಡಿಸಿತು: ಸಾಧ್ಯವಿರುವ ಅತ್ಯುತ್ತಮವಾದ ಜೀವನ ಮಾರ್ಗದ ಕುರಿತು, ಅಂದರೆ ದೇವರ ಜೀವನ ಮಾರ್ಗದ ಕುರಿತು ಇನ್ನೂ ಹೆಚ್ಚು ವಿಷಯಗಳನ್ನು ಕಲಿಯುವುದೇ ಆಗಿತ್ತು. ತನ್ನ ಮಾರ್ಗಗಳಲ್ಲಿ ಹೇಗೆ ನಡೆಯುವುದು ಎಂಬುದನ್ನು ಯೆಹೋವನು ತನ್ನ ಜನರಿಗೆ ಕಲಿಸುತ್ತಾನೆ. ಆತನು ಇದನ್ನು ಬೈಬಲಿನ ಮೂಲಕ, “ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ” ಮೂಲಕ, ಮತ್ತು ಪವಿತ್ರಾತ್ಮದ ಮೂಲಕ ಕಲಿಸುತ್ತಾನೆ. (ಮತ್ತಾಯ 24:45-47; ಲೂಕ 4:1; 2 ತಿಮೊಥೆಯ 3:16) ಇಡೀ ವಿಶ್ವದ ಪರಮಾಧಿಕಾರಿಯಿಂದ ಕಲಿಸಲ್ಪಡುವುದು ಎಂತಹ ಒಂದು ಸುಯೋಗವಾಗಿದೆ!
ಆ ದಿನದ ಮುಖ್ಯವಿಷಯಕ್ಕನುಸಾರವಾಗಿ, ಪ್ರಮುಖ ಭಾಷಣದ ವಿಷಯವು “ಕ್ರಿಸ್ತನ ಪ್ರಾಯಶ್ಚಿತ್ತ—ದೇವರ ರಕ್ಷಣಾಮಾರ್ಗ” ಎಂದಾಗಿತ್ತು. ದೇವರ ಜೀವನ ಮಾರ್ಗಕ್ಕೆ ಸರಿಹೊಂದಿಸಿಕೊಳ್ಳಲು ಪ್ರಯತ್ನಿಸುವಾಗ, ಯೆಹೋವನ ಉದ್ದೇಶದಲ್ಲಿ ಯೇಸು ಕ್ರಿಸ್ತನ ಪಾತ್ರವನ್ನು ಅರ್ಥಮಾಡಿಕೊಳ್ಳುವುದು ಅತ್ಯಾವಶ್ಯಕವಾಗಿದೆ. ಭಾಷಣಕರ್ತನು ಹೇಳಿದ್ದು: “ಯೇಸು ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞವು ಇಲ್ಲದಿರುತ್ತಿದ್ದಲ್ಲಿ, ಯಾವುದೇ ಮಾನವನಿಗೆ ಎಷ್ಟೇ ನಂಬಿಕೆಯಿರಲಿ ಅಥವಾ ನಂಬಿಗಸ್ತ ಕ್ರಿಯೆಗಳಿರಲಿ, ಅವನು ದೇವರಿಂದ ನಿತ್ಯಜೀವವನ್ನು ಪಡೆಯಲು ಸಾಧ್ಯವಿರುತ್ತಿರಲಿಲ್ಲ.” ತದನಂತರ ಅವನು ಯೋಹಾನ 3:16ರನ್ನು ಉಲ್ಲೇಖಿಸಿದನು. ಅದು ಹೇಳಿದ್ದು: “ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.” ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞದಲ್ಲಿ ನಂಬಿಕೆಯನ್ನು ಇಡುವುದು ಮಾತ್ರ ಸಾಲದು, ಬದಲಾಗಿ ನಾವು ಸತ್ಯದ ನಿಷ್ಕೃಷ್ಟ ಜ್ಞಾನವನ್ನೂ ಪಡೆದುಕೊಳ್ಳುವ ಅಗತ್ಯವಿದೆ. ಯೆಹೋವನಿಗೆ ನಮ್ಮ ಜೀವಿತಗಳನ್ನು ಸಮರ್ಪಿಸಿಕೊಳ್ಳುವುದು, ನೀರಿನ ದೀಕ್ಷಾಸ್ನಾನದ ಮೂಲಕ ಇದನ್ನು ಸಂಕೇತಿಸುವುದು, ಮತ್ತು ಯೇಸು ಕ್ರಿಸ್ತನು ತೋರಿಸಿದ ಮಾದರಿಗನುಸಾರ ಜೀವಿಸುವುದು ಸಹ ಇದರಲ್ಲಿ ಒಳಗೂಡಿದೆ.—1 ಪೇತ್ರ 2:21.
ಆ ದಿನದ ಮಧ್ಯಾಹ್ನದ ಕಾರ್ಯಕ್ರಮವು, “ಪ್ರೀತಿಯ ಮಾರ್ಗವು ಎಂದಿಗೂ ಬಿದ್ದುಹೋಗುವುದಿಲ್ಲ” ಎಂಬ ಮುಖ್ಯಾಂಶವಿರುವ ಭಾಷಣದೊಂದಿಗೆ ಆರಂಭವಾಯಿತು. 1 ಕೊರಿಂಥ 13:4-8ರಲ್ಲಿ ದಾಖಲಿಸಲ್ಪಟ್ಟಿರುವ ಪ್ರೀತಿಯ ಕುರಿತಾದ ಪೌಲನ ಪ್ರಚೋದಕ ವರ್ಣನೆಯ ಪ್ರತಿಯೊಂದು ವಚನದ ಚರ್ಚೆಯು ಇದರಲ್ಲಿ ಒಳಗೂಡಿತ್ತು. ಸ್ವತ್ಯಾಗದ ಪ್ರೀತಿಯು ಕ್ರೈಸ್ತತ್ವವನ್ನು ಗುರುತಿಸುವ ಅಂಶವಾಗಿದೆ ಮತ್ತು ದೇವರ ಹಾಗೂ ನೆರೆಯವರ ಕಡೆಗಿನ ಪ್ರೀತಿಯು, ಯೆಹೋವನಿಂದ ಅಂಗೀಕರಿಸಲ್ಪಡುವ ಆರಾಧನೆಯ ಅತ್ಯಗತ್ಯ ಅಂಶವಾಗಿದೆ ಎಂದು ಸಭಿಕರಿಗೆ ಜ್ಞಾಪಕಹುಟ್ಟಿಸಲಾಯಿತು.
ಇದಾದ ಬಳಿಕ, “ಹೆತ್ತವರೇ—ನಿಮ್ಮ ಮಕ್ಕಳಲ್ಲಿ ದೇವರ ಮಾರ್ಗವನ್ನು ನಾಟಿಸಿರಿ” ಎಂಬ ಶೀರ್ಷಿಕೆಯುಳ್ಳ, ಮೂರು ಭಾಗದ ಭಾಷಣಮಾಲೆಯು ಸಾದರಪಡಿಸಲ್ಪಟ್ಟಿತು. ದೇವರ ವಾಕ್ಯವನ್ನು ಓದುವುದರಲ್ಲಿ ಹಾಗೂ ಅಭ್ಯಾಸಿಸುವುದರಲ್ಲಿ ಹೆತ್ತವರು ಒಂದು ಒಳ್ಳೆಯ ಮಾದರಿಯನ್ನಿಡುವ ಮೂಲಕ, ದೇವರನ್ನು ಸೇವಿಸುವಂತೆ ತಮ್ಮ ಮಕ್ಕಳಿಗೆ ಸಹಾಯ ಮಾಡಸಾಧ್ಯವಿದೆ. ಕ್ರಮವಾದ ಕುಟುಂಬ ಅಭ್ಯಾಸದ ಮೂಲಕ, ಮತ್ತು ಕುಟುಂಬದ ಆವಶ್ಯಕತೆಗಳಿಗನುಗುಣವಾಗಿ ಅದನ್ನು ಹೊಂದಿಸಿಕೊಳ್ಳುವ ಮೂಲಕ, ಅವರು ತಮ್ಮ ಮಕ್ಕಳಲ್ಲಿ ಸತ್ಯವನ್ನು ನಾಟಿಸಬಲ್ಲರು. ಮಕ್ಕಳು ಸಭಾ ಚಟುವಟಿಕೆಗಳಲ್ಲಿ ಹಾಗೂ ಕ್ಷೇತ್ರ ಸೇವೆಯಲ್ಲಿ ಒಳಗೂಡುವಂತೆ ಸಹಾಯ ಮಾಡುವುದು ಸಹ ಪ್ರಾಮುಖ್ಯವಾದದ್ದಾಗಿದೆ. ಈ ದುಷ್ಟ ಲೋಕದಲ್ಲಿ ದೇವಭಯವುಳ್ಳ ಮಕ್ಕಳನ್ನು ಬೆಳೆಸುವುದು ಒಂದು ಪಂಥಾಹ್ವಾನವಾಗಿದೆಯಾದರೂ, ಹಾಗೆ ಮಾಡುವುದರಿಂದ ಅತ್ಯುತ್ತಮ ಪ್ರತಿಫಲಗಳನ್ನು ಕೊಯ್ಯಸಾಧ್ಯವಿದೆ.
ಈ ಭಾಷಣಮಾಲೆಯನ್ನು ಹಿಂಬಾಲಿಸಿ, “ಯೆಹೋವನು ನಿಮ್ಮನ್ನು ಗೌರವಾರ್ಹ ಬಳಕೆಗಾಗಿ ರೂಪಿಸಲಿ” ಎಂಬ ಭಾಷಣವು ಕೊಡಲ್ಪಟ್ಟಿತು. ಒಬ್ಬ ಕುಂಬಾರನು ಮಣ್ಣಿನ ಪಾತ್ರೆಗೆ ಆಕಾರವನ್ನು ಕೊಡುವಂತೆಯೇ, ತನ್ನನ್ನು ಸೇವಿಸಲು ಬಯಸುವವರನ್ನು ದೇವರು ಒಳ್ಳೆಯದಾಗಿ ರೂಪಿಸುತ್ತಾನೆ. (ರೋಮಾಪುರ 9:20, 21) ತನ್ನ ವಾಕ್ಯದಲ್ಲಿ ಸಲಹೆಯನ್ನು ಕೊಡುವ ಮೂಲಕ ಹಾಗೂ ತನ್ನ ದೃಶ್ಯ ಸಂಸ್ಥೆಯ ಮೂಲಕ ಆತನು ಇದನ್ನು ಮಾಡುತ್ತಾನೆ. ನಾವು ನಮ್ಮನ್ನು ದೊರಕಿಸಿಕೊಳ್ಳುವಲ್ಲಿ, ಸಂದರ್ಭಗಳಿಗೆ ಸೂಕ್ತವಾಗಿ ಪ್ರತಿಕ್ರಿಯಿಸುವಲ್ಲಿ, ಹಾಗೂ ಆತನು ನಮ್ಮ ಮಾರ್ಗವನ್ನು ನಿರ್ದೇಶಿಸುವಂತೆ ಬಿಡಲು ಇಷ್ಟಪಡುವವರಾಗಿರುವಲ್ಲಿ, ನಾವು ನಮ್ಮ ಸಾಮರ್ಥ್ಯಗಳನ್ನು ಪೂರ್ಣ ರೀತಿಯಲ್ಲಿ ಉಪಯೋಗಿಸುವಂತೆ ಯೆಹೋವನು ನಮಗೆ ಸಹಾಯ ಮಾಡುತ್ತಾನೆ.
ಈಗ “ಮಿಷನೆರಿ ಕ್ಷೇತ್ರದಲ್ಲಿ ಸೇವೆ” ಎಂಬ ಕಾರ್ಯಕ್ರಮದ ಅತಿ ರೋಮಾಂಚಕ ಭಾಗವು ಸಾದರಪಡಿಸಲ್ಪಟ್ಟಿತು. ಈಗ ಭೂವ್ಯಾಪಕವಾಗಿ 148 ದೇಶಗಳಲ್ಲಿ 2,390 ಕ್ರೈಸ್ತ ಶುಶ್ರೂಷಕರು ಸೇವೆಮಾಡುತ್ತಿದ್ದು, ಅವರು ಮಿಷನೆರಿ ಸುಯೋಗವನ್ನು ಹೊಂದಿರುವವರೆಂದು ಪರಿಗಣಿಸಲಾಗಿದೆ. ಅವರು ನಿಷ್ಠೆ ಹಾಗೂ ಹುರುಪಿನ ಅತ್ಯುತ್ತಮ ಮಾದರಿಯನ್ನು ಇಟ್ಟಿದ್ದಾರೆ ಮತ್ತು ವಿದೇಶೀ ಕ್ಷೇತ್ರಗಳಲ್ಲಿ ಸೇವೆಮಾಡುವ ತಮ್ಮ ಸುಯೋಗಕ್ಕಾಗಿ ಅವರು ತುಂಬ ಕೃತಜ್ಞರಾಗಿದ್ದಾರೆ. ಅಂತಾರಾಷ್ಟ್ರೀಯ ಅಧಿವೇಶನಗಳಲ್ಲಿ, ಕಾರ್ಯಕ್ರಮದ ಈ ಭಾಗದಲ್ಲಿ, ಮಿಷನೆರಿ ಜೀವನದ ಪಂಥಾಹ್ವಾನಗಳು ಹಾಗೂ ಆನಂದಗಳ ಕುರಿತು ಮಿಷನೆರಿಗಳು ಮಾತಾಡಿದರು.
ಮೊದಲನೆಯ ದಿನದ ಕೊನೆಯ ಭಾಷಣದ ಶೀರ್ಷಿಕೆಯು “ಮರಣಾನಂತರ ಜೀವನ ಇದೆಯೆ?” ಎಂಬುದಾಗಿತ್ತು. ಸಹಸ್ರಾರು ವರ್ಷಗಳಿಂದ ಈ ಪ್ರಶ್ನೆಯು ಮಾನವರನ್ನು ತಬ್ಬಿಬ್ಬುಗೊಳಿಸಿದೆ. ಪ್ರತಿಯೊಂದು ಸಮಾಜದಲ್ಲಿರುವ ಜನರು ಈ ವಿಷಯವನ್ನು ಎದುರಿಸಲು ಪ್ರಯತ್ನಿಸುತ್ತಿದ್ದಾರೆ. ಊಹಿಸಲ್ಪಡುವ ಉತ್ತರಗಳಿಗೆ ಕೊರತೆಯೇ ಇಲ್ಲ. ಈ ಉತ್ತರಗಳು, ಉತ್ತರವನ್ನು ಕೊಡುವ ಜನರ ಸಂಸ್ಕೃತಿಗಳು ಹಾಗೂ ಧರ್ಮಗಳಷ್ಟೇ ವ್ಯತ್ಯಾಸಮಯವಾಗಿವೆ. ಆದರೂ ಜನರು ಸತ್ಯವನ್ನು ಕಲಿಯುವ ಅಗತ್ಯವಿದೆ.
ತದನಂತರ, ಭಾಷಣಕರ್ತನು ನಾವು ಸಾಯುವಾಗ ನಮಗೆ ಏನು ಸಂಭವಿಸುತ್ತದೆ? (ಇಂಗ್ಲಿಷ್) ಎಂಬ 32 ಪುಟದ ಹೊಸ ವರ್ಣರಂಜಿತ ಬ್ರೋಷರಿನ ಬಿಡುಗಡೆಯನ್ನು ಪ್ರಕಟಿಸಿದನು. ಆತ್ಮದ ಅಮರತ್ವದ ಕುರಿತಾದ ಬೋಧನೆಯು ಯಾವ ಮೂಲದಿಂದ ಬಂತೆಂಬುದನ್ನು ಈ ಬ್ರೋಷರ್ ವಿವರಿಸುತ್ತದೆ ಮತ್ತು ಇಂದು ಲೋಕದಲ್ಲಿರುವ ಬಹುಮಟ್ಟಿಗೆ ಎಲ್ಲ ಧರ್ಮಗಳಲ್ಲಿ ಅದು ಹೇಗೆ ಒಂದು ಪ್ರಮುಖ ಕಲ್ಪನೆಯಾಗಿದೆ ಎಂಬುದನ್ನು ಸಹ ತೋರಿಸುತ್ತದೆ. ಸ್ಪಷ್ಟವಾದ ಹಾಗೂ ಮನಸ್ಸಿಗೆ ಹಿಡಿಸುವಂತಹ ರೀತಿಯಲ್ಲಿ, ಆತ್ಮದ ಕುರಿತು ಬೈಬಲು ಏನು ಹೇಳುತ್ತದೆ, ನಾವು ಏಕೆ ಸಾಯುತ್ತೇವೆ, ಮತ್ತು ನಾವು ಸಾಯುವಾಗ ನಮಗೆ ಏನು ಸಂಭವಿಸುತ್ತದೆ ಎಂಬ ವಿಷಯಗಳನ್ನು ಪರಿಶೀಲಿಸುತ್ತದೆ. ಮೃತರಿಗೆ ಹಾಗೂ ಜೀವಿಸುತ್ತಿರುವವರಿಗೆ ಯಾವ ನಿರೀಕ್ಷೆಯಿದೆ ಎಂಬುದನ್ನು ಸಹ ಬ್ರೋಷರ್ ವಿವರಿಸುತ್ತದೆ. ಎಲ್ಲ ಕಡೆಗಳಲ್ಲಿರುವ ಸತ್ಯಾನ್ವೇಷಕರಿಗೆ ಈ ಪ್ರಕಾಶನವು ಎಂತಹ ಒಂದು ಆಶೀರ್ವಾದವಾಗಿರುವುದು!
ನೀವು ನಡಕೊಳ್ಳುವ ರೀತಿಯ ಕುರಿತು ಚೆನ್ನಾಗಿ ನೋಡಿಕೊಳ್ಳಿರಿ
ಅಧಿವೇಶನದ ಎರಡನೆಯ ದಿನಕ್ಕೆ ಇದು ಎಷ್ಟು ಸೂಕ್ತವಾದ ಒಂದು ಮುಖ್ಯವಿಷಯವಾಗಿತ್ತು! (ಎಫೆಸ 5:15) ಬೆಳಗ್ಗಿನ ಕಾರ್ಯಕ್ರಮವು, ಸಾರುವ ಹಾಗೂ ಶಿಷ್ಯರನ್ನಾಗಿ ಮಾಡುವ ಕೆಲಸಕ್ಕೆ ಮಹತ್ವವನ್ನು ನೀಡಿತ್ತು. ದಿನದ ವಚನದ ಬಳಿಕ, “ಜೀವಕ್ಕೆ ನಡಿಸುವ ಮಾರ್ಗವನ್ನೇರಲು ಜನರಿಗೆ ಸಹಾಯಮಾಡುವುದು” ಎಂಬ ಭಾಷಣವನ್ನು ಸಾದರಪಡಿಸುವ ಮೂಲಕ ಕಾರ್ಯಕ್ರಮವು ಮುಂದುವರಿಸಲ್ಪಟ್ಟಿತು. ಈ ತುರ್ತಿನ ಕೆಲಸವನ್ನು ಮುಂದುವರಿಸುವಾಗ, ಸಕಾರಾತ್ಮಕವಾದ ಮನೋಭಾವವು ನಮ್ಮಲ್ಲಿರುವುದು ಅತಿ ಪ್ರಾಮುಖ್ಯವಾಗಿದೆ. ಸತ್ಯವನ್ನು ಇತರರೊಂದಿಗೆ ಹಂಚಿಕೊಳ್ಳುವುದು ನಮಗೆ ಕೊಡಲ್ಪಟ್ಟಿರುವ ಒಂದು ಸುಯೋಗವಾಗಿದೆ ಮತ್ತು ನಮ್ಮ ಕರ್ತವ್ಯವಾಗಿದೆ ಎಂಬುದನ್ನು ಗ್ರಹಿಸತಕ್ಕದ್ದು. ಸಾ.ಶ. ಪ್ರಥಮ ಶತಮಾನದಲ್ಲಿ ಅಧಿಕಾಂಶ ಮಂದಿ ದೇವರ ವಾಕ್ಯವನ್ನು ತಿರಸ್ಕರಿಸಿದರು. ವಿರೋಧವಿದ್ದಾಗ್ಯೂ, ‘ನಿತ್ಯಜೀವಕ್ಕೆ ನೇಮಿತರಾಗಿದ್ದು, ನಂಬಿಗಸ್ತರಾಗಿದ್ದ’ ಜನರು ಸಹ ಅಲ್ಲಿದ್ದರು. (ಅ. ಕೃತ್ಯಗಳು 13:48, 50; 14:1-5) ಇಂದು ಸಹ ಸನ್ನಿವೇಶವು ಅದೇ ರೀತಿಯಲ್ಲಿದೆ. ಅನೇಕರು ಬೈಬಲ್ ಸತ್ಯತೆಯನ್ನು ತಿರಸ್ಕರಿಸುವುದಾದರೂ, ಯೋಗ್ಯವಾಗಿ ಪ್ರತಿಕ್ರಿಯಿಸುವಂತಹ ವ್ಯಕ್ತಿಗಳನ್ನು ಹುಡುಕುವುದನ್ನು ನಾವು ಮುಂದುವರಿಸುತ್ತೇವೆ.—ಮತ್ತಾಯ 10:11-13.
ಮುಂದಿನ ಭಾಷಣವು, ಜೀವದ ಸಂದೇಶದೊಂದಿಗೆ ಬೇರೆಯವರನ್ನು ತಲಪುವುದರಲ್ಲಿನ ಪಂಥಾಹ್ವಾನದ ಕುರಿತು ಚರ್ಚಿಸಿತು. ಈಗ ಜನರನ್ನು ಮನೆಗಳಲ್ಲಿ ಕಂಡುಕೊಳ್ಳುವುದು ಕಷ್ಟಕರವಾಗಿರುವುದರಿಂದ, ಸಾಧ್ಯವಾದಷ್ಟು ಹೆಚ್ಚು ಜನರಿಗೆ ನಾವು ರಾಜ್ಯದ ಸಂದೇಶವನ್ನು ತಲಪಿಸಲು ಇಷ್ಟಪಡುವಲ್ಲಿ, ನಾವು ಸಂಪೂರ್ಣ ಸಿದ್ಧರಾಗಿರಬೇಕು ಮತ್ತು ಜಾಣತನವನ್ನು ಉಪಯೋಗಿಸಬೇಕು. ಅನೇಕ ದೇಶಗಳಲ್ಲಿ, ಟೆಲಿಫೋನ್ ಸಾಕ್ಷಿಕಾರ್ಯದ ಮೂಲಕ ಮತ್ತು ವ್ಯಾಪಾರಿ ಕ್ಷೇತ್ರಗಳಲ್ಲಿ ಸಾರುವ ಮೂಲಕ, ಸುವಾರ್ತೆಯ ಪ್ರಚಾರಕರು ಅತ್ಯುತ್ತಮ ಫಲಿತಾಂಶಗಳನ್ನು ಪಡೆದುಕೊಳ್ಳುತ್ತಾರೆ. ಹೀಗೆ ಮಾಡುವ ಮೂಲಕ ಅವರು ಮನೆಗಳಲ್ಲಿ ಸಿಗದಿರುವಂತಹ ಜನರನ್ನು ತಲಪಲು ಶಕ್ತರಾಗಿದ್ದಾರೆ.
“ಕ್ರಿಸ್ತನು ಆಜ್ಞಾಪಿಸಿದ್ದನ್ನೆಲ್ಲಾ ಶಿಷ್ಯರಿಗೆ ಕಲಿಸುವುದು” ಎಂಬ ಭಾಷಣವು, ನಮ್ಮ ಶುಶ್ರೂಷೆಯಲ್ಲಿ ಕೌಶಲಪೂರ್ಣರಾಗುವುದರ ಪ್ರಮುಖತೆಯ ಮೇಲೆ ಮನಸ್ಸನ್ನು ಕೇಂದ್ರೀಕರಿಸಿತು. ನಾವು ಇತರರಿಂದ ಕಲಿಯುವಾಗ ಮತ್ತು ಸಭಾ ಕೂಟಗಳಲ್ಲಿ ಕೊಡಲ್ಪಡುವ ಅತ್ಯುತ್ತಮ ತರಬೇತಿಯನ್ನು ಅನ್ವಯಿಸುವಾಗ ನಮ್ಮ ಕಲಿಸುವಿಕೆಯ ಕೌಶಲಗಳು ಇನ್ನೂ ಉತ್ತಮಗೊಳ್ಳುತ್ತವೆ. ನಮ್ಮ ಕಲಿಸುವಿಕೆಯಲ್ಲಿ ನಾವು ಹೆಚ್ಚೆಚ್ಚು ಕೌಶಲಪೂರ್ಣರಾದಂತೆ, ಇತರರು ಸಹ ಬೈಬಲ್ ಸತ್ಯವನ್ನು ಕಲಿಯುವಂತೆ ಸಹಾಯ ಮಾಡುವ ನಮ್ಮ ಕೆಲಸದಲ್ಲಿ ಅತ್ಯಧಿಕ ಸಂತೋಷವನ್ನು ಹಾಗೂ ಸಂತೃಪ್ತಿಯನ್ನು ಕಂಡುಕೊಳ್ಳುತ್ತೇವೆ.
ಸಮರ್ಪಣೆ ಮತ್ತು ದೀಕ್ಷಾಸ್ನಾನದ ಅರ್ಥದ ಕುರಿತಾದ ಭಾಷಣದೊಂದಿಗೆ ಬೆಳಗ್ಗಿನ ಕಾರ್ಯಕ್ರಮವು ಮುಕ್ತಾಯಗೊಂಡಿತು. ಭಾಷಣಕರ್ತನು ಹೇಳಿದ ಅಂಶಗಳಲ್ಲಿ ಒಂದು, ನಾವು ಸಂಪೂರ್ಣವಾಗಿ ದೇವರಲ್ಲಿ ಭರವಸೆಯಿಟ್ಟು, ಆತನ ಚಿತ್ತವನ್ನು ಮಾಡಲು ಶ್ರದ್ಧಾಪೂರ್ವಕವಾಗಿ ಪ್ರಯತ್ನಿಸುವುದಾದರೆ, ಆತನು ನಮ್ಮನ್ನು ಆಶೀರ್ವದಿಸುತ್ತಾನೆ ಹಾಗೂ ಬಲಪಡಿಸುತ್ತಾನೆ. ಒಬ್ಬ ವಿವೇಕಿಯು ಬರೆದುದು: “ನಿನ್ನ ಎಲ್ಲಾ ನಡವಳಿಯಲ್ಲಿ ಆತನ [ದೇವರ] ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು.” (ಜ್ಞಾನೋಕ್ತಿ 3:6) ಅಧಿವೇಶನದ ಮುಖ್ಯ ಭಾಗವು, ಆನಂದದಾಯಕ ದೀಕ್ಷಾಸ್ನಾನವೇ ಆಗಿತ್ತು. ಅನೇಕರು ದೇವರ ಜೀವನ ಮಾರ್ಗವನ್ನು ಅನುಸರಿಸಲು ಆರಂಭಿಸಿದ್ದಾರೆ ಎಂಬುದನ್ನು ಇದು ವ್ಯಕ್ತಪಡಿಸಿತು.
ಊಟದ ಬಿಡುವಿನ ಬಳಿಕ, “ಅಂತ್ಯರಹಿತ ಜೀವನದ ನೋಟದಲ್ಲಿ ಸೇವೆಮಾಡುವುದು” ಎಂಬ ಭಾಷಣದೊಂದಿಗೆ ಮಧ್ಯಾಹ್ನದ ಕಾರ್ಯಕ್ರಮವು ಆರಂಭವಾಯಿತು. ವಿಧೇಯ ಮಾನವಕುಲವು ಭೂಮಿಯ ಮೇಲೆ ತನ್ನನ್ನು ಸದಾಕಾಲ ಸೇವಿಸಬೇಕು ಎಂಬ ದೇವರ ಉದ್ದೇಶವು ನೆರವೇರಿಸಲ್ಪಡುವುದು. ನಿತ್ಯತೆಯ ದೂರದೃಷ್ಟಿಯುಳ್ಳವರಾಗಿದ್ದು, ನಮ್ಮ ಆಲೋಚನೆಗಳು, ಯೋಜನೆಗಳು, ಹಾಗೂ ನಿರೀಕ್ಷೆಗಳನ್ನು, ಯೆಹೋವನನ್ನು ಸೇವಿಸುವುದರ ಮೇಲೆ ಕೇಂದ್ರೀಕರಿಸುವುದು ಎಷ್ಟು ಸೂಕ್ತವಾದದ್ದಾಗಿದೆ! ನಾವು ‘ಯೆಹೋವನ ದಿನ’ವನ್ನು ಮನಸ್ಸಿನಲ್ಲಿ ನಿಕಟವಾಗಿಟ್ಟುಕೊಳ್ಳಲು ಬಯಸುವಾಗ, ಸದಾಕಾಲಕ್ಕೂ ದೇವರನ್ನು ಸೇವಿಸುವುದೇ ನಮ್ಮ ಗುರಿಯಾಗಿದೆ ಎಂಬುದನ್ನು ಜ್ಞಾಪಕದಲ್ಲಿಟ್ಟುಕೊಳ್ಳುವುದು ಅತ್ಯಾವಶ್ಯಕವಾಗಿದೆ. (2 ಪೇತ್ರ 3:12) ಯೇಸು ಯಾವಾಗ ದೇವರ ನ್ಯಾಯತೀರ್ಪನ್ನು ವಿಧಿಸುತ್ತಾನೆ ಎಂಬ ನಿಗದಿತ ಸಮಯವು ನಮಗೆ ತಿಳಿಯದೆ ಇರುವುದು, ನಾವು ಎಚ್ಚರವುಳ್ಳವರಾಗಿರುವಂತೆ ಮಾಡುತ್ತದೆ ಹಾಗೂ ನಾವು ಯೆಹೋವನನ್ನು ನಿಸ್ವಾರ್ಥ ಉದ್ದೇಶಗಳಿಂದ ಸೇವಿಸುತ್ತೇವೆ ಎಂಬುದನ್ನು ರುಜುಪಡಿಸಲು ನಮಗೆ ದಿನಾಲೂ ಅವಕಾಶಗಳನ್ನು ಒದಗಿಸುತ್ತದೆ.
ತದನಂತರ ಕೊಡಲ್ಪಟ್ಟ ಎರಡು ಭಾಷಣಗಳು, ಪೌಲನು ಎಫೆಸದವರಿಗೆ ಬರೆದ 4ನೆಯ ಅಧ್ಯಾಯದ ಮೇಲಾಧಾರಿತವಾಗಿದ್ದವು. ಪರಿಗಣಿಸಲ್ಪಟ್ಟ ಬೇರೆಬೇರೆ ವಿಷಯಗಳಲ್ಲಿ, “ಪುರುಷರಲ್ಲಿ ದಾನಗಳು,” ಅಂದರೆ ಪವಿತ್ರಾತ್ಮದಿಂದ ನೇಮಿತರಾಗಿದ್ದು ಆತ್ಮಿಕವಾಗಿ ಅರ್ಹರಾಗಿರುವ ವ್ಯಕ್ತಿಗಳ ಆಶೀರ್ವಾದವೂ ನಮಗಿದೆ ಎಂಬ ವಿಷಯವೂ ಒಳಗೂಡಿತ್ತು. ಈ ಹಿರಿಯರು ನಮ್ಮ ಆತ್ಮಿಕ ಪ್ರಯೋಜನಕ್ಕಾಗಿ ಸಲಹೆ ಹಾಗೂ ಮಾರ್ಗದರ್ಶನವನ್ನು ಒದಗಿಸುತ್ತಾರೆ. “ಹೊಸ ವ್ಯಕ್ತಿತ್ವವನ್ನು” ಧರಿಸುವುದನ್ನು ಸಹ ಪೌಲನ ಪ್ರೇರಿತ ಪತ್ರವು ಉತ್ತೇಜಿಸುತ್ತದೆ. (ಎಫೆಸ 4:8, 24) ಸಹಾನುಭೂತಿ, ದಯೆ, ದೀನಭಾವ, ಸಾತ್ವಿಕತ್ವ, ದೀರ್ಘಶಾಂತಿ, ಮತ್ತು ಪ್ರೀತಿಯಂತಹ ಗುಣಗಳು ದೈವಿಕ ವ್ಯಕ್ತಿತ್ವದಲ್ಲಿ ಒಳಗೂಡಿವೆ.—ಕೊಲೊಸ್ಸೆ 3:12-14.
ನಾವು ಹೇಗೆ ನಡೆದುಕೊಳ್ಳುತ್ತೇವೆ ಎಂಬುದರ ಕುರಿತು ಕಟ್ಟುನಿಟ್ಟಾಗಿ ಅವಲೋಕಿಸುವುದರಲ್ಲಿ, ಲೋಕದಿಂದ ನಮ್ಮನ್ನು ನಿಷ್ಕಳಂಕರನ್ನಾಗಿ ಇರಿಸಿಕೊಳ್ಳುವುದು ಸಹ ಒಳಗೂಡಿದೆ. ಇದು ಮುಂದಿನ ಭಾಷಣದ ಮುಖ್ಯವಿಷಯವಾಗಿತ್ತು. ಮನೋರಂಜನೆ, ಸಾಮಾಜಿಕ ಚಟುವಟಿಕೆಗಳು, ಮತ್ತು ಪ್ರಾಪಂಚಿಕ ಬೆನ್ನಟ್ಟುವಿಕೆಯ ಆಯ್ಕೆಮಾಡುವಾಗ, ಸಮತೂಕವಾದ ನೋಟವು ಇರುವುದು ಅತ್ಯಗತ್ಯ. ಲೋಕದಿಂದ ನಿಷ್ಕಳಂಕರಾಗಿರಲಿಕ್ಕಾಗಿ ಯಾಕೋಬ 1:27ರಲ್ಲಿ ಕೊಡಲ್ಪಟ್ಟಿರುವ ಸಲಹೆಯನ್ನು ಅನ್ವಯಿಸಿಕೊಳ್ಳುವ ಮೂಲಕ, ದೇವರ ಮುಂದೆ ನಮಗೆ ಒಂದು ಶುದ್ಧ ನಿಲುವು ಇರುತ್ತದೆ ಮತ್ತು ನಾವು ಒಳ್ಳೇ ಮನಸ್ಸಾಕ್ಷಿಯನ್ನೂ ಕಾಪಾಡಿಕೊಳ್ಳಸಾಧ್ಯವಿದೆ. ಇದರಿಂದ ಉದ್ದೇಶಭರಿತ ಜೀವಿತವನ್ನು ನಡೆಸಸಾಧ್ಯವಿದೆ ಮತ್ತು ನಾವು ಶಾಂತಿ, ಆತ್ಮಿಕ ಸಮೃದ್ಧಿ, ಹಾಗೂ ಒಳ್ಳೆಯ ಸಹವಾಸಿಗಳಿಂದ ಆಶೀರ್ವದಿಸಲ್ಪಡುವೆವು.
ತದನಂತರ “ಯುವಕರೇ—ದೇವರ ಮಾರ್ಗವನ್ನು ಅನುಸರಿಸಿರಿ” ಎಂಬ ಮೂರು ಭಾಗದ ಭಾಷಣಮಾಲೆಯು ಸಾದರಪಡಿಸಲ್ಪಟ್ಟಿತು. ದೇವರು ತಮ್ಮನ್ನು ಪ್ರೀತಿಸುತ್ತಾನೆ ಮತ್ತು ಶುದ್ಧಾರಾಧನೆಯನ್ನು ಎತ್ತಿಹಿಡಿಯಲಿಕ್ಕಾಗಿ ನಾವು ಮಾಡುವಂತಹ ಪ್ರಯತ್ನಗಳನ್ನು ಗಣ್ಯಮಾಡುತ್ತಾನೆ ಎಂಬುದನ್ನು ತಿಳಿದವರಾಗಿದ್ದು, ಆತನನ್ನು ನಂಬಿಗಸ್ತಿಕೆಯಿಂದ ಸೇವಿಸಲಿಕ್ಕಾಗಿ ಯುವ ಜನರು ತಮ್ಮ ಗ್ರಹಣಶಕ್ತಿಯನ್ನು ತರಬೇತುಗೊಳಿಸಬೇಕು. ಗ್ರಹಣಶಕ್ತಿಯನ್ನು ಉತ್ತಮಗೊಳಿಸಿಕೊಳ್ಳುವ ಒಂದು ವಿಧವು, ದೇವರ ವಾಕ್ಯವನ್ನು ದಿನಾಲೂ ಓದುವುದು ಹಾಗೂ ಅದರ ಬಗ್ಗೆ ಮನನಮಾಡುವುದೇ ಆಗಿದೆ. ನಾವು ಹೀಗೆ ಮಾಡುವಲ್ಲಿ, ಯೆಹೋವನ ಮಾರ್ಗಗಳನ್ನು ತಿಳಿದುಕೊಳ್ಳಸಾಧ್ಯವಿದೆ. (ಕೀರ್ತನೆ 119:9-11) ಹೆತ್ತವರು, ಹಿರಿಯರು, ಹಾಗೂ ಸೊಸೈಟಿಯ ಪ್ರಕಾಶನಗಳಿಂದ ಕೊಡಲ್ಪಡುವ ಪ್ರೌಢ ಸಲಹೆಯನ್ನು ಅಂಗೀಕರಿಸುವ ಮೂಲಕವೂ ಗ್ರಹಣಶಕ್ತಿಯು ವಿಕಸಿಸುತ್ತದೆ. ಯುವ ಜನರು ತಮ್ಮ ಗ್ರಹಣಶಕ್ತಿಯನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸುವ ಮೂಲಕ, ದೇವರಿಂದ ವಿಮುಖಗೊಂಡಿರುವ ಈ ಲೋಕದ ವೈಶಿಷ್ಟ್ಯಗಳಾಗಿರುವ ಪ್ರಾಪಂಚಿಕ ಸಂಪತ್ತು, ಅಶುದ್ಧ ಮಾತು, ಹಾಗೂ ವಿಪರೀತ ಮನೋರಂಜನೆಯಲ್ಲಿ ತಲ್ಲೀನರಾಗುವ ಪ್ರವೃತ್ತಿಯನ್ನು ಪ್ರತಿರೋಧಿಸುತ್ತಾರೆ. ದೇವರ ಜೀವನ ಮಾರ್ಗವನ್ನು ಅನುಸರಿಸುವ ಮೂಲಕ, ಯುವಕರು ಹಾಗೂ ವೃದ್ಧರು ನಿಜವಾದ ಯಶಸ್ಸನ್ನು ಪಡೆದುಕೊಳ್ಳಸಾಧ್ಯವಿದೆ.
ಎರಡನೆಯ ದಿನದ ಕೊನೆಯ ಭಾಷಣವು “ಸೃಷ್ಟಿಕರ್ತನು—ಆತನ ವ್ಯಕ್ತಿತ್ವ ಮತ್ತು ಆತನ ಮಾರ್ಗಗಳು” ಎಂಬುದಾಗಿತ್ತು. ಕೋಟಿಗಟ್ಟಲೆ ಜನರಿಗೆ ಸೃಷ್ಟಿಕರ್ತನ ಬಗ್ಗೆ ಏನೂ ತಿಳಿದಿಲ್ಲ ಎಂದು ತಿಳಿಸಿದ ಬಳಿಕ ಬಾಷಣಕರ್ತನು ಹೇಳಿದ್ದು: “ಜೀವನದಲ್ಲಿ ನಿಜ ಅರ್ಥವು ನಿರ್ಮಾಣಿಕರ್ತನನ್ನು, ನಮ್ಮ ವೈಯಕ್ತಿಕ ದೇವರನ್ನು ತಿಳಿಯುವುದಕ್ಕೆ ಸಂಬಂಧಿಸಿದೆ ಹಾಗೂ ಆತನ ವ್ಯಕ್ತಿತ್ವವನ್ನು ಅಂಗೀಕರಿಸಿ, ಆತನ ಮಾರ್ಗಗಳೊಂದಿಗೆ ಸಹಕರಿಸುವುದಕ್ಕೆ ಸಂಬಂಧಿಸಿದೆ. . . . ನಿರ್ಮಾಣಿಕರ್ತನನ್ನು ಸ್ವೀಕರಿಸಲು ಮತ್ತು ಆತನ ಸಂಬಂಧದಲ್ಲಿ ಅರ್ಥವನ್ನು ಕಂಡುಕೊಳ್ಳಲು ಜನರಿಗೆ ಸಹಾಯಮಾಡುವುದಕ್ಕಾಗಿ ನಮ್ಮ ಲೋಕದ ಕುರಿತು ಮತ್ತು ನಮ್ಮ ಕುರಿತು ವಾಸ್ತವಾಂಶಗಳಿವೆ.” ಆ ಬಳಿಕ ಭಾಷಣಕರ್ತನು ಒಬ್ಬ ಬುದ್ಧಿವಂತ ಹಾಗೂ ಪ್ರೀತಿಪರ ಸೃಷ್ಟಿಕರ್ತನ ಅಸ್ತಿತ್ವವನ್ನು ಸೂಚಿಸುವ ಪುರಾವೆಯ ಕುರಿತು ಚರ್ಚಿಸಿದನು. ಆ ಭಾಷಣದ ಕೊನೆಯಲ್ಲಿ, ನಿಮ್ಮ ಕುರಿತು ಚಿಂತಿಸುವ ಒಬ್ಬ ನಿರ್ಮಾಣಿಕರ್ತನು ಇದ್ದಾನೊ? (ಇಂಗ್ಲಿಷ್) ಎಂಬ ಹೊಸ ಪುಸ್ತಕವು ಬಿಡುಗಡೆಮಾಡಲ್ಪಟ್ಟಿತು.
“ಇದೇ ಮಾರ್ಗ. ಇದರಲ್ಲೇ ನಡೆಯಿರಿ”
ಇದು ಅಧಿವೇಶನದ ಮೂರನೆಯ ದಿನದ ಮುಖ್ಯವಿಷಯವಾಗಿತ್ತು. (ಯೆಶಾಯ 30:21) ಯೆಹೆಜ್ಕೇಲನ ದೇವಾಲಯದರ್ಶನದ ಮೇಲೆ ಕೇಂದ್ರೀಕರಿಸಿದ ಮೂರು ಭಾಷಣಗಳ ಭಾಷಣಮಾಲೆಯೊಂದಿಗೆ ಕಾರ್ಯಕ್ರಮವು ಆರಂಭವಾಯಿತು. ಇಂದು ದೇವಜನರಿಗೆ ಈ ದರ್ಶನವು ಬಹಳ ಅರ್ಥವುಳ್ಳದ್ದಾಗಿದೆ. ಏಕೆಂದರೆ ಅದು ನಮ್ಮ ಸಮಯದ ಶುದ್ಧಾರಾಧನೆಗೆ ಸಂಬಂಧಪಟ್ಟದ್ದಾಗಿದೆ. ದರ್ಶನವನ್ನು ಅರ್ಥಮಾಡಿಕೊಳ್ಳಲಿಕ್ಕಾಗಿರುವ ಕೀಲಿ ಕೈಯು ಇದಾಗಿದೆ: ಯೆಹೋವನ ಮಹಾನ್ ಆತ್ಮಿಕ ಆಲಯವು, ಶುದ್ಧಾರಾಧನೆಗಾಗಿರುವ ಆತನ ಏರ್ಪಾಡನ್ನು ಪ್ರತಿನಿಧಿಸುತ್ತದೆ. ಈ ದರ್ಶನದ ವೈಶಿಷ್ಟ್ಯಗಳನ್ನು ಚರ್ಚಿಸಿದಂತೆ, ಅಭಿಷಿಕ್ತ ಉಳಿಕೆಯವರಿಂದ ಹಾಗೂ ಪ್ರಭು ವರ್ಗದ ಭಾವೀ ಸದಸ್ಯರ ಪ್ರೀತಿಪೂರ್ಣ ಮೇಲ್ವಿಚಾರಕರಿಂದ ಮಾಡಲ್ಪಡುವ ಕೆಲಸಕ್ಕೆ ಬೆಂಬಲ ನೀಡಲಿಕ್ಕಾಗಿ, ತಾವು ಮಾಡುತ್ತಿರುವ ಚಟುವಟಿಕೆಯ ಕುರಿತು ಕೇಳುಗರು ಆಲೋಚಿಸಿದರು.
ಅದೇ ದಿನದ ಬೆಳಗ್ಗಿನ ಕಾರ್ಯಕ್ರಮದಲ್ಲಿ, ಪೋಷಾಕು ಧರಿಸಿದ ಪಾತ್ರಧಾರಿಗಳಿಂದ ಕೂಡಿದ ಒಂದು ವರ್ಣರಂಜಿತ ಬೈಬಲ್ ಡ್ರಾಮಾ ಇತ್ತು. “ಕುಟುಂಬಗಳೇ—ದೈನಂದಿನ ಬೈಬಲ್ ವಾಚನವನ್ನು ನಿಮ್ಮ ಜೀವನಮಾರ್ಗವಾಗಿ ಮಾಡಿರಿ!” ಎಂಬುದು ಡ್ರಾಮಾದ ಮುಖ್ಯ ವಿಷಯವಾಗಿತ್ತು. ರಾಜನಾದ ನೆಬೂಕದ್ನೆಚ್ಚರನಿಂದ ಪ್ರತಿಷ್ಠಾಪಿಸಲ್ಪಟ್ಟ ಬಂಗಾರದ ಪ್ರತಿಮೆಗೆ ಅಡ್ಡಬೀಳಲು ನಿರಾಕರಿಸಿದ ಮೂವರು ಇಬ್ರಿಯರ ನಂಬಿಕೆ ಹಾಗೂ ಧೈರ್ಯವನ್ನು ಅದು ಚಿತ್ರಿಸಿತು. ಬೈಬಲು ಕೇವಲ ಪುರಾತನ ಇತಿಹಾಸದ ಒಂದು ಪುಸ್ತಕವಾಗಿಲ್ಲ, ಬದಲಾಗಿ ಅದರ ಸಲಹೆಯು ಇಂದಿನ ಯುವ ಜನರಿಗೆ ಹಾಗೂ ವಯಸ್ಕರಿಗೆ ಪ್ರಯೋಜನಕರವಾಗಿದೆ ಎಂಬುದನ್ನು ಖಚಿತಪಡಿಸುವುದು ಈ ಡ್ರಾಮಾದ ಉದ್ದೇಶವಾಗಿತ್ತು.
ಮಧ್ಯಾಹ್ನದ ಕಾರ್ಯಕ್ರಮದಲ್ಲಿ “ನಿತ್ಯಜೀವಕ್ಕೆ ನಡಿಸುವ ಏಕಮಾತ್ರ ಮಾರ್ಗ” ಎಂಬ ಬಹಿರಂಗ ಭಾಷಣವು ಸಾದರಪಡಿಸಲ್ಪಟ್ಟಿತು. ಮಾನವಕುಲವು ಪಾಪ ಮತ್ತು ಮರಣಕ್ಕೆ ಒಳಗಾಗಿದ್ದರ ಇತಿಹಾಸದ ಕುರಿತು ತಿಳಿಯಪಡಿಸಿದ ಬಳಿಕ, ಭಾಷಣಕರ್ತನು ಈ ರೀತಿಯ ಆಲೋಚನಾಪ್ರೇರಕ ಮಾತುಗಳಿಂದ ಭಾಷಣವನ್ನು ಕೊನೆಗೊಳಿಸಿದನು: “ಈ ಅಧಿವೇಶನದ ಮುಖ್ಯ ಬೈಬಲ್ ವಚನವು, ಯೆಶಾಯ 30ನೆಯ ಅಧ್ಯಾಯ 21ನೆಯ ವಚನವಾಗಿತ್ತು. ಅದನ್ನುವುದು: “ನೀವು ಬಲಕ್ಕಾಗಲಿ ಎಡಕ್ಕಾಗಲಿ ತಿರುಗಿಕೊಳ್ಳುವಾಗ ಇದೇ ಮಾರ್ಗ, ಇದರಲ್ಲೇ ನಡೆಯಿರಿ ಎಂದು ನಿಮ್ಮ ಹಿಂದೆ ಆಡುವ ಮಾತು ನಿಮ್ಮ ಕಿವಿಗೆ ಬೀಳುವುದು.” ಈ ಮಾತು ನಮ್ಮ ಕಿವಿಗೆ ಬೀಳುವದು ಹೇಗೆ? ದೇವರ ವಾಕ್ಯವಾದ ಪವಿತ್ರ ಬೈಬಲಿಗೆ ಕಿವಿಗೊಡುವ ಮೂಲಕ, ಮತ್ತು ಬೈಬಲು ಹಾಗೂ ತನ್ನ ಆಧುನಿಕ ದಿನದ ಕ್ರೈಸ್ತ ಸಂಸ್ಥೆಯ ಮೂಲಕ, ನಮ್ಮ ಮಹಾ ಬೋಧಕನಾದ ಯೆಹೋವ ದೇವರು ಒದಗಿಸುವ ಮಾರ್ಗದರ್ಶನವನ್ನು ಅನುಸರಿಸುವ ಮೂಲಕವೇ. ನಿಶ್ಚಯವಾಗಿಯೂ, ಹೀಗೆ ಮಾಡುವುದು ನಿತ್ಯಜೀವಕ್ಕಾಗಿರುವ ಏಕಮಾತ್ರ ಮಾರ್ಗವಾಗಿದೆ.”
ಆ ವಾರದ ಕಾವಲಿನಬುರುಜು ಪತ್ರಿಕೆಯ ಅಭ್ಯಾಸ ಲೇಖನದ ಸಾರಾಂಶದ ಬಳಿಕ, “ಯೆಹೋವನ ಮಾರ್ಗದಲ್ಲಿ ನಡೆಯುತ್ತಾ ಇರಿ” ಎಂಬ ಶೀರ್ಷಿಕೆಯ ಕೊನೆಯ ಭಾಷಣವು ಕೊಡಲ್ಪಟ್ಟಿತು. ಆಂಶಿಕವಾಗಿ ಅದು ಕಾರ್ಯಕ್ರಮದ ಮುಖ್ಯ ಅಂಶಗಳನ್ನು ಪುನರ್ವಿಮರ್ಶಿಸಿತು. ತದನಂತರ ಭಾಷಣಕರ್ತನು, ದೇವರ ಮಾರ್ಗದಲ್ಲಿ ಜೀವಿಸುತ್ತಾ ಮುಂದುವರಿಯುವ ನಿರ್ಧಾರವನ್ನು ವ್ಯಕ್ತಪಡಿಸುತ್ತಾ ಒಂದು ಠರಾವನ್ನು ಮುಂದಿಟ್ಟನು.
ಆ ಠರಾವು ಈ ಭಾವಪ್ರೇರಕ ಮಾತುಗಳಿಂದ ಮುಕ್ತಾಯಗೊಂಡಿತು: “ಶಾಸ್ತ್ರೀಯ ಮೂಲತತ್ವಗಳು, ಬುದ್ಧಿವಾದಗಳು ಮತ್ತು ಸೂಚನೆಗಳಿಗನುಸಾರ ಜೀವಿಸುವುದು, ಇಂದಿನ ಜೀವಿತವನ್ನು ಅತ್ಯುತ್ತಮ ಜೀವಿತವನ್ನಾಗಿ ಮಾಡುತ್ತದೆ ಮತ್ತು ವಾಸ್ತವ ಜೀವವನ್ನು ನಾವು ದೃಢವಾಗಿ ಹಿಡಿದುಕೊಳ್ಳಲಾಗುವಂತೆ ಒಂದು ಉತ್ತಮ ಬುನಾದಿಯನ್ನು ಹಾಕುತ್ತದೆ ಎಂಬುದನ್ನು ನಾವು ಮನಗಂಡಿದ್ದೇವೆ. ಎಲ್ಲಕ್ಕಿಂತಲೂ ಹೆಚ್ಚಾಗಿ, ನಾವು ಈ ನಿರ್ಧಾರವನ್ನು ಮಾಡುವುದು, ನಾವು ಯೆಹೋವನನ್ನು ನಮ್ಮ ಪೂರ್ಣ ಹೃದಯ, ಪ್ರಾಣ, ಬುದ್ಧಿ, ಮತ್ತು ಶಕ್ತಿಯಿಂದ ಪ್ರೀತಿಸುವುದರಿಂದಲೇ!” ಸಭಿಕರೆಲ್ಲರೂ ತಮ್ಮ ಸಮ್ಮತಿಯನ್ನು ಹೌದು ಎಂಬ ಉತ್ತರದಿಂದ ದೃಢಪಡಿಸಿದರು!
[ಪುಟ 8 ರಲ್ಲಿರುವ ಚೌಕ/ಚಿತ್ರಗಳು]
ನಿಮ್ಮ ಕುರಿತು ಚಿಂತಿಸುವ ಒಬ್ಬ ನಿರ್ಮಾಣಿಕರ್ತನು ಇದ್ದಾನೊ?
ಈ ಶೀರ್ಷಿಕೆಯಿರುವ ಹೊಸ ಪುಸ್ತಕವು, ಸೃಷ್ಟಿಕರ್ತನಾದ ಯೆಹೋವನ ಅಸ್ತಿತ್ವದ ಕುರಿತು ಮನಗಾಣಿಸುವಂತಹ ಪುರಾವೆಯನ್ನು ಒದಗಿಸುತ್ತದೆ, ಮತ್ತು ಆತನ ಗುಣಗಳ ಕುರಿತು ಚರ್ಚಿಸುತ್ತದೆ. ಯಾರು ಐಹಿಕ ವಿಷಯಗಳಲ್ಲಿ ಸುಶಿಕ್ಷಿತರಾಗಿದ್ದು, ದೇವರಲ್ಲಿ ನಂಬಿಕೆಯಿಡುವುದಿಲ್ಲವೋ ಅಂತಹವರಿಗಾಗಿ ಅದು ವಿಶೇಷವಾಗಿ ವಿನ್ಯಾಸಿಸಲ್ಪಟ್ಟಿದೆ. ಈ 192 ಪುಟದ ಪುಸ್ತಕವು, ಈಗಾಗಲೇ ದೇವರಲ್ಲಿ ನಂಬಿಕೆಯಿಟ್ಟಿದ್ದು, ಆತನ ವ್ಯಕ್ತಿತ್ವ ಹಾಗೂ ಮಾರ್ಗಗಳಿಗಾಗಿ ಗಣ್ಯತೆಯನ್ನು ತೋರಿಸುತ್ತಿರುವ ವ್ಯಕ್ತಿಗಳ ನಂಬಿಕೆಯನ್ನು ಸಹ ಹೆಚ್ಚು ಬಲಗೊಳಿಸುವುದು.
ನಿಮ್ಮ ಕುರಿತು ಚಿಂತಿಸುವ ಒಬ್ಬ ನಿರ್ಮಾಣಿಕರ್ತನು ಇದ್ದಾನೊ? ಎಂಬ ಪುಸ್ತಕವು, ಓದುಗನು ದೇವರಲ್ಲಿ ನಂಬಿಕೆಯಿಡುತ್ತಾನೆ ಎಂದು ಭಾವಿಸುವುದಿಲ್ಲ. ಬದಲಾಗಿ, ಇತ್ತೀಚಿನ ವೈಜ್ಞಾನಿಕ ಕಂಡುಹಿಡಿತಗಳು ಹಾಗೂ ವಿಚಾರಧಾರೆಗಳು, ಸೃಷ್ಟಿಕರ್ತನ ಅಸ್ತಿತ್ವಕ್ಕೆ ಹೇಗೆ ಪುರಾವೆ ನೀಡುತ್ತವೆ ಎಂಬುದನ್ನು ಅದು ಚರ್ಚಿಸುತ್ತದೆ. ಅದರಲ್ಲಿರುವ ಅಧ್ಯಾಯಗಳಲ್ಲಿ “ನಿಮ್ಮ ಜೀವಿತವನ್ನು ಯಾವ ವಿಷಯವು ಹೆಚ್ಚು ಅರ್ಥಭರಿತವಾಗಿ ಮಾಡಸಾಧ್ಯವಿದೆ?,” “ನಿಮ್ಮ ವಿಶ್ವವು ಹೇಗೆ ಅಸ್ತಿತ್ವಕ್ಕೆ ಬಂತು?—ಚರ್ಚಾಸ್ಪದ,” ಮತ್ತು “ನೀವೆಷ್ಟು ಅಪೂರ್ವವಾಗಿದ್ದೀರಿ!” ಎಂಬ ಮೇಲ್ಬರಹಗಳಿರುವ ಅಧ್ಯಾಯಗಳೂ ಇವೆ. ಇನ್ನಿತರ ಅಧ್ಯಾಯಗಳು, ಬೈಬಲು ದೈವಪ್ರೇರಿತವಾಗಿದೆ ಎಂಬ ವಿಷಯದಲ್ಲಿ ನಾವು ಏಕೆ ಖಾತ್ರಿಯಿಂದಿರಸಾಧ್ಯವಿದೆ ಎಂಬ ವಿಷಯವನ್ನು ಪರಿಗಣಿಸುವವು. ಈ ಹೊಸ ಪುಸ್ತಕವು, ಸೃಷ್ಟಿಕರ್ತನ ವ್ಯಕ್ತಿತ್ವ ಹಾಗೂ ಆತನ ಮಾರ್ಗಗಳನ್ನು ತಿಳಿಯಪಡಿಸುವ ಬೈಬಲಿನಾದ್ಯಂತ ನೋಟವನ್ನು ಸಹ ಕೊಡುತ್ತದೆ. ಈ ಪುಸ್ತಕವು, ದೇವರು ಏಕೆ ಇಷ್ಟೊಂದು ಕಷ್ಟಾನುಭವಕ್ಕೆ ಅನುಮತಿ ನೀಡಿದ್ದಾನೆ ಎಂಬುದನ್ನು ಚರ್ಚಿಸುತ್ತದೆ ಮಾತ್ರವಲ್ಲ, ಆತನು ಅದನ್ನು ಸದಾಕಾಲಕ್ಕೂ ಕೊನೆಗೊಳಿಸುತ್ತಾನೆ ಎಂಬುದನ್ನು ಸಹ ವಿವರಿಸುತ್ತದೆ.
[ಪುಟ 7 ರಲ್ಲಿರುವ ಚಿತ್ರ]
ಅನೇಕರು ದೀಕ್ಷಾಸ್ನಾನವನ್ನು ಪಡೆದುಕೊಂಡರು
[ಪುಟ 7 ರಲ್ಲಿರುವ ಚಿತ್ರ]
ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಒಬ್ಬ ಸದಸ್ಯರಾದ ಎ. ಡಿ. ಶ್ರೋಡರ್ ಅವರು ಒಂದು ಹೊಸ ಬ್ರೋಷರನ್ನು ಬಿಡುಗಡೆಮಾಡಿದರು
[ಪುಟ 8,9 ರಲ್ಲಿರುವ ಚಿತ್ರ]
ರೋಮಾಂಚಕ ಡ್ರಾಮಾವು, ದೈನಂದಿನ ಬೈಬಲ್ ವಾಚನವನ್ನು ಉತ್ತೇಜಿಸಿತು