ಮಲಕುಟುಂಬಗಳಿಗೆ ಸೀಮಿತವಾಗಿರುವ ಸಮಸ್ಯೆಗಳು
ಆನಂದಿತ ಮಲಕುಟುಂಬಗಳು ಅಸಾಧ್ಯವಲ್ಲ! ಹೇಗೆ?
ಲೋಕದ ಅನೇಕ ಭಾಗಗಳಲ್ಲಿ ಮಲಕುಟುಂಬವು ಒಂದು ಸರ್ವಸಾಮಾನ್ಯ ಸಂಗತಿಯಾಗಿದೆ. ಆದರೂ, ಮಲಕುಟುಂಬಗಳಿಗೆ ತಮ್ಮದೇ ಆದ ವಿಶೇಷ ಸಮಸ್ಯೆಗಳಿವೆ. ಅವುಗಳಲ್ಲಿ ಅತ್ಯಂತ ಕಷ್ಟಕರವಾದದ್ದು ಮಕ್ಕಳ ಪಾಲನೆಯೇ ಎಂಬುದರಲ್ಲಿ ಸಂದೇಹವಿಲ್ಲ. ಹಾಗಿದ್ದರೂ, ಮಲಕುಟುಂಬದ ಪರಿಸರದಲ್ಲಿ ಮಕ್ಕಳನ್ನು ಯಶಸ್ವಿಯಾಗಿ ಬೆಳೆಸಸಾಧ್ಯವಿದೆ ಎಂಬುದನ್ನು ತೋರಿಸಲು ಮುಂದಿನ ಎರಡು ಲೇಖನಗಳು ಪ್ರಯತ್ನಿಸುವವು.
ಸಾಮಾನ್ಯವಾಗಿ ಮಲತಂದೆ ಮತ್ತು ಮಲತಾಯಿಯ ಕುರಿತು ಸದಭಿಪ್ರಾಯವಿರುವುದಿಲ್ಲ. ನಾವು ಮಕ್ಕಳಾಗಿದ್ದಾಗ ನಮ್ಮಲ್ಲಿ ಅನೇಕರು, ತನ್ನ ಕ್ರೂರ ಮಲತಾಯಿಯಿಂದ ಬಹಳವಾಗಿ ಪೀಡಿಸಲ್ಪಟ್ಟ ಸಿಂಡ್ರೆಲಾ ಎಂಬ ಕಾಲ್ಪನಿಕ ಕಥೆಯನ್ನು ಕೇಳಿದ್ದೇವೆ. ಮತ್ತು ಯೂರೋಪ್ನಲ್ಲಿರುವ ಮಕ್ಕಳು, ಸ್ನೋ ವೈಟ್ ಮತ್ತು ಏಳು ಕುಬ್ಜರು ಎಂಬ ದಂತಕಥೆಯನ್ನೂ ಕೇಳಿರುವರು. ಆ ಕಥೆಯಲ್ಲಿ ಸ್ನೋ ವೈಟಳ ಮಲತಾಯಿ ಒಬ್ಬ ದುಷ್ಟ ಮಾಟಗಾತಿಯಾಗಿರುತ್ತಾಳೆ!
ಇಂತಹ ಕಾಲ್ಪನಿಕ ಕಥೆಗಳು ಮಲಕುಟುಂಬಗಳ ಕುರಿತು ಸರಿಯಾದ ನೋಟವನ್ನು ನೀಡುತ್ತವೊ? ಎಲ್ಲ ಮಲಹೆತ್ತವರು ನಿಜವಾಗಿಯೂ ಅಷ್ಟೊಂದು ಕ್ರೂರಿಗಳಾಗಿರುತ್ತಾರೊ? ಇಲ್ಲ. ಅವರಲ್ಲಿ ಹೆಚ್ಚಿನವರು, ವಿವಾಹದ ಮೂಲಕ ತಮ್ಮ ಅಧೀನಕ್ಕೆ ಬರುವ ಮಕ್ಕಳಿಗೆ ಅತ್ಯುತ್ತಮವಾದುದನ್ನೇ ಮಾಡಲು ಬಯಸುತ್ತಾರೆ. ಆದರೆ ಮಲಕುಟುಂಬ ಜೀವಿತಕ್ಕೆ ಸೀಮಿತವಾಗಿರುವ ಕೆಲವೊಂದು ಕಷ್ಟಕರ ಸಮಸ್ಯೆಗಳನ್ನು ಅವರು ಎದುರಿಸಲೇಬೇಕಾಗುತ್ತದೆ.
ಮಕ್ಕಳ ಪಾಲನೆಯಲ್ಲಿ ಉದ್ಭವಿಸುವ ಸಮಸ್ಯೆಗಳು
ಮೊದಲನೆಯ ವಿವಾಹವು ವಿಫಲವಾಗುವುದಕ್ಕೆ ಸಂಗಾತಿಗಳಲ್ಲಿರುವ ಪ್ರೌಢತೆಯ ಕೊರತೆಯೇ ಅನೇಕ ವೇಳೆ ಕಾರಣವಾಗಿರುತ್ತದೆ. ಎರಡನೆಯ ವಿವಾಹದಲ್ಲಿ, ಮಕ್ಕಳೊಂದಿಗೆ ವ್ಯವಹರಿಸುವುದು ಹೆತ್ತವರ ವೈವಾಹಿಕ ಸಂಬಂಧದಲ್ಲಿ ಒತ್ತಡವನ್ನು ತರಬಲ್ಲದು. ಕೆಲವು ದಾಖಲೆಗಳು ತೋರಿಸುವುದೇನೆಂದರೆ, ಮಲಹೆತ್ತವರೊಬ್ಬರಿರುವ 10 ಕುಟುಂಬಗಳಲ್ಲಿ 4ಕ್ಕಿಂತಲೂ ಹೆಚ್ಚು ಕುಟುಂಬಗಳು, ಮೊದಲ ಐದು ವರ್ಷಗಳೊಳಗೆ ವಿವಾಹವಿಚ್ಛೇದದಲ್ಲಿ ಕೊನೆಗೊಳ್ಳುತ್ತವೆ.
ಮಲಹೆತ್ತವರೊಬ್ಬರ ಆಗಮನದಿಂದ ಮಕ್ಕಳಲ್ಲಿ ಉಂಟಾಗುವ ಭಾವನಾತ್ಮಕ ಸಂಕ್ಷೋಭೆ, ನಿಷ್ಠೆಯ ಸಂಘರ್ಷಗಳು, ಮತ್ತು ಹೊಟ್ಟೆಕಿಚ್ಚು ಹಾಗೂ ಅಸಮಾಧಾನದ ಅನಿಸಿಕೆಗಳು ತಲೆದೋರುವವೆಂದು ನವದಂಪತಿಗಳು ಗ್ರಹಿಸದೆ ಇರಬಹುದು. ತಮ್ಮ ಸ್ವಂತ ತಂದೆ ಅಥವಾ ತಾಯಿಗೆ, ತಮ್ಮ ಮೇಲಿರುವ ಪ್ರೀತಿಗಿಂತಲೂ ಹೆಚ್ಚಾಗಿ ತಮ್ಮ ಮಲತಂದೆ ಅಥವಾ ತಾಯಿಯ ಮೇಲಿದೆ ಎಂದು ಈ ಮಲಮಕ್ಕಳು ಊಹಿಸಿಕೊಳ್ಳಬಹುದು. ಅಲ್ಲದೆ, ಒಬ್ಬ ಸಂಗಾತಿಯಿಂದ ತೊರೆಯಲ್ಪಟ್ಟ ಸ್ವಂತ ತಂದೆ ಅಥವಾ ತಾಯಿಗೆ, ಆ ಹಿಂದಿನ ಸಂಗಾತಿಯ ಮೇಲೆ ಮಕ್ಕಳಿಗಿರುವ ಒಲವನ್ನು ಅರ್ಥಮಾಡಿಕೊಳ್ಳುವುದು ತುಂಬ ಕಷ್ಟಕರವಾಗಿರಬಹುದು. ತನ್ನ ಸ್ವಂತ ತಂದೆಯೊಂದಿಗೆ ತನಗಿದ್ದ ಒಳ್ಳೆಯ ಸಂಬಂಧವನ್ನು ವಿವರಿಸಲು ಒಬ್ಬ ಹುಡುಗನು ಪ್ರಯತ್ನಿಸಿದನು. ಅವನು ಹೇಳಿದ್ದು: “ಡ್ಯಾಡಿ ನಿಮ್ಮೊಂದಿಗೆ ಕೆಟ್ಟದಾಗಿ ವರ್ತಿಸಿದರೆಂದು ನನಗೆ ಗೊತ್ತು ಮಮ್ಮಿ. ಆದರೆ, ಅವರು ನನ್ನೊಂದಿಗೆ ಒಳ್ಳೆಯವರಾಗಿಯೇ ನಡೆದುಕೊಂಡಿದ್ದಾರೆ!” ಇಂತಹ ಒಂದು ಹೇಳಿಕೆಯು ಯಥಾರ್ಥವಾಗಿದ್ದರೂ, ಅದು ಮಗುವಿನ ತಂದೆಯ ಬಗ್ಗೆ ತಾಯಿಯ ಹೃದಯದಲ್ಲಿ ತೀವ್ರವಾದ ಅಸಮಾಧಾನವನ್ನು ಉಂಟುಮಾಡಬಲ್ಲದು.
ಒಬ್ಬ ಮಲತಂದೆಯು ಒಪ್ಪಿಕೊಂಡದ್ದು: “ನನ್ನ ಮಲಮಕ್ಕಳ ಪಾಲನೆಗೆ ಸಂಬಂಧಿಸಿದ್ದ ಎಲ್ಲ ಸಮಸ್ಯೆಗಳನ್ನು ನಿಭಾಯಿಸಲು ನಾನು ನಿಜವಾಗಿಯೂ ಸಿದ್ಧನಾಗಿರಲಿಲ್ಲ. ನಾನು ಅವರ ತಾಯಿಯನ್ನು ವಿವಾಹವಾಗಿದ್ದ ಕಾರಣ ಅವರ ತಂದೆಯಾದೆ ಎಂದಷ್ಟೇ ನೆನಸಿದೆ. ನನಗದು ತುಂಬ ದೊಡ್ಡ ವಿಷಯವಾಗಿ ಕಾಣಲಿಲ್ಲ! ಮಕ್ಕಳಿಗೆ ತಮ್ಮ ಸ್ವಂತ ತಂದೆಯ ಬಗ್ಗೆ ಇದ್ದ ಒಲವನ್ನು ನಾನು ಅರ್ಥಮಾಡಿಕೊಳ್ಳಲಿಲ್ಲ. ಈ ಕಾರಣ ನಾನು ಅನೇಕ ತಪ್ಪುಗಳನ್ನು ಮಾಡಿದೆ.”
ವಿಶೇಷವಾಗಿ ಶಿಸ್ತಿನ ವಿಷಯದಲ್ಲಿ ಸಮಸ್ಯೆಗಳು ಏಳಬಲ್ಲವು. ಮಕ್ಕಳಿಗೆ ಪ್ರೀತಿಪರ ಶಿಸ್ತಿನ ಅಗತ್ಯವಿದೆಯಾದರೂ, ಅದು ಸ್ವಂತ ಹೆತ್ತವರೊಬ್ಬರಿಂದಲೇ ಬರುವಾಗ ಅವರು ಪ್ರತಿಭಟಿಸುತ್ತಾರೆಂದರೆ, ಮಲತಂದೆ ಅಥವಾ ತಾಯಿಯಿಂದ ಬರುವಾಗ, ಅದನ್ನು ಸ್ವೀಕರಿಸುವುದು ತೀರ ಕಷ್ಟಕರವೇ ಸರಿ! ಸಾಮಾನ್ಯವಾಗಿ, ಇಂತಹ ಶಿಸ್ತು ನೀಡಲ್ಪಡುವಾಗ ಒಂದು ಮಲಮಗುವು, “ನೀನು ನಿಜವಾಗಿಯೂ ನನ್ನ ತಂದೆಯಲ್ಲ!” ಎಂದು ಹೇಳಬಹುದು. ಇಂತಹ ಮಾತುಗಳು, ಸದುದ್ದೇಶವುಳ್ಳ ಒಬ್ಬ ಮಲತಂದೆಯ ಹೃದಯವನ್ನು ಛಿದ್ರಗೊಳಿಸಬಲ್ಲವು.
ಮಲಹೆತ್ತವರೊಬ್ಬರಿರುವ ಒಂದು ಕುಟುಂಬದಲ್ಲಿ ಮಕ್ಕಳನ್ನು ಯಶಸ್ವಿಕರವಾಗಿ ಬೆಳೆಸಸಾಧ್ಯವಿದೆಯೊ? ಒಂದು ಯಶಸ್ವಿಕರವಾದ ಮಲಕುಟುಂಬವನ್ನು ಕಟ್ಟುವುದರಲ್ಲಿ ಮಲಹೆತ್ತವರು ಸಕಾರಾತ್ಮಕವಾದ ಪಾತ್ರವನ್ನು ವಹಿಸಬಲ್ಲರೊ? ಇದರಲ್ಲಿ ಒಳಗೂಡಿರುವ ಎಲ್ಲರು ದೇವರ ಪ್ರೇರಿತ ವಾಕ್ಯವಾದ ಬೈಬಲಿನಲ್ಲಿರುವ ಸಲಹೆಯನ್ನು ಅನ್ವಯಿಸುವುದಾದರೆ, ಈ ಮೇಲಿನ ಎರಡೂ ಪ್ರಶ್ನೆಗಳಿಗೆ ಉತ್ತರವು ಹೌದಾಗಿರುವುದು.
[ಪುಟ 3 ರಲ್ಲಿರುವ ಚಿತ್ರ]
“ನೀನು ನಿಜವಾಗಿಯೂ ನನ್ನ ತಂದೆಯಲ್ಲ!”