ಮಲಕುಟುಂಬಗಳು ಯಶಸ್ವಿಯಾಗಬಲ್ಲವು
ಮಲಕುಟುಂಬಗಳು ಯಶಸ್ವಿಯಾಗುವ ಸಾಧ್ಯತೆಯಿದೆಯೊ? ಹೌದು, ಅದರಲ್ಲಿ ಒಳಗೂಡಿರುವ ಎಲ್ಲರೂ ಈ ಮುಂದಿನ ವಿಷಯವನ್ನು ಜ್ಞಾಪಕದಲ್ಲಿಟ್ಟುಕೊಳ್ಳುವುದಾದರೆ ಸಾಧ್ಯವಿದೆ. ಅದೇನೆಂದರೆ, “ದೈವಪ್ರೇರಿತವಾದ ಪ್ರತಿಯೊಂದು ಶಾಸ್ತ್ರವು ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಶಿಕ್ಷೆಗೂ ಉಪಯುಕ್ತವಾಗಿದೆ.” (2 ತಿಮೊಥೆಯ 3:16) ಪ್ರತಿಯೊಬ್ಬರೂ ಬೈಬಲ್ ತತ್ವಗಳನ್ನು ಕಾರ್ಯರೂಪಕ್ಕೆ ಹಾಕುವಾಗ, ಯಶಸ್ಸು ದೊರೆಯುವುದು ಖಂಡಿತ.
ಮೂಲಭೂತ ಗುಣ
ಮಾನವ ಸಂಬಂಧಗಳಲ್ಲಿ ಪಾಲಿಸಬೇಕಾದ ಕೆಲವೇ ನಿಯಮಗಳನ್ನು ಬೈಬಲು ನೀಡುತ್ತದೆ. ನಾವು ವಿವೇಕಯುತವಾಗಿ ಕ್ರಿಯೆಗೈಯುವಂತೆ ನಮ್ಮನ್ನು ಮಾರ್ಗದರ್ಶಿಸುವ ಒಳ್ಳೆಯ ಗುಣಗಳನ್ನು ಹಾಗೂ ಮನೋಭಾವಗಳನ್ನು ಬೆಳೆಸಿಕೊಳ್ಳುವಂತೆ ಅದು ಹೆಚ್ಚಾಗಿ ಉತ್ತೇಜಿಸುತ್ತದೆ. ಇಂತಹ ಒಳ್ಳೆಯ ಮನೋಭಾವಗಳು ಹಾಗೂ ಗುಣಗಳು ಒಂದು ಸಂತೋಷಕರ ಕುಟುಂಬ ಜೀವಿತಕ್ಕೆ ಮೂಲಾಧಾರವಾಗಿವೆ.
ಈ ಸಂಗತಿಯು ಸ್ಪಷ್ಟವಾಗಿ ತೋರಿಬರುವುದಾದರೂ, ಯಾವುದೇ ಕುಟುಂಬವು ಯಶಸ್ವಿಯಾಗಬೇಕಾದರೆ ಅತ್ಯಗತ್ಯವಾಗಿರುವ ಮೂಲಭೂತ ಗುಣವು ಪ್ರೀತಿಯಾಗಿದೆ ಎಂದು ಹೇಳುವುದು ಸೂಕ್ತವಾಗಿದೆ. ಅಪೊಸ್ತಲ ಪೌಲನು ಹೇಳಿದ್ದು: “ನಿಮ್ಮ ಪ್ರೀತಿಯು ನಿಷ್ಕಪಟವಾಗಿರಲಿ. . . . ಕ್ರೈಸ್ತ ಸಹೋದರರು ಅಣ್ಣತಮ್ಮಂದಿರೆಂದು ಒಬ್ಬರನ್ನೊಬ್ಬರು ಪ್ರೀತಿಸಿರಿ.” (ರೋಮಾಪುರ 12:9, 10) “ಪ್ರೀತಿ” ಎಂಬ ಪದವು ಅತಿಯಾಗಿ ದುರುಪಯೋಗಿಸಲ್ಪಟ್ಟಿರುವುದಾದರೂ, ಪೌಲನು ಇಲ್ಲಿ ಉಲ್ಲೇಖಿಸುವಂತಹ ಗುಣವು ಅದ್ವಿತೀಯವಾಗಿದೆ. ಅದು ದೈವಿಕ ಪ್ರೀತಿಯಾಗಿದ್ದು, “ಎಂದಿಗೂ ಬಿದ್ದುಹೋಗುವದಿಲ್ಲ.” (1 ಕೊರಿಂಥ 13:8) ಅದು ನಿಸ್ವಾರ್ಥವೂ ಸೇವೆಸಲ್ಲಿಸಲು ಸದಾ ಸಿದ್ಧವೂ ಆಗಿರುವುದಾಗಿ ಬೈಬಲು ವರ್ಣಿಸುತ್ತದೆ. ಅದು ಇತರರ ಒಳಿತಿಗಾಗಿ ಸಕ್ರಿಯವಾಗಿ ಕಾರ್ಯಮಾಡುತ್ತದೆ. ಅದು ತಾಳ್ಮೆಯುಳ್ಳದ್ದೂ ದಯಾಪರವೂ ಆಗಿದ್ದು, ಎಂದಿಗೂ ಹೊಟ್ಟೆಕಿಚ್ಚು ಪಡುವುದಿಲ್ಲ, ಜಂಬಕೊಚ್ಚಿಕೊಳ್ಳುವುದಿಲ್ಲ, ಇಲ್ಲವೆ ಅಹಂಕಾರದಿಂದ ವರ್ತಿಸುವುದಿಲ್ಲ. ಅದು ಸ್ವಲಾಭದ ಕುರಿತು ಯೋಚಿಸುವುದಿಲ್ಲ. ಅದು ಕ್ಷಮಿಸಲು, ನಂಬಲು, ನಿರೀಕ್ಷಿಸಲು, ಏನೇ ಸಂಭವಿಸಿದರೂ ಸಹಿಸಿಕೊಳ್ಳಲು ಸದಾ ಸಿದ್ಧವಾಗಿರುತ್ತದೆ.—1 ಕೊರಿಂಥ 13:4-7.
ಭಿನ್ನಾಭಿಪ್ರಾಯಗಳನ್ನು ಸರಿಪಡಿಸಲು ಮತ್ತು ವ್ಯತ್ಯಾಸವಾದ ಹಿನ್ನೆಲೆ ಹಾಗೂ ವ್ಯಕ್ತಿತ್ವವುಳ್ಳ ಜನರನ್ನು ಏಕೀಕರಿಸಲು, ಯಥಾರ್ಥವಾದ ಪ್ರೀತಿಯು ಸಹಾಯಮಾಡುತ್ತದೆ. ಮತ್ತು ಅದು ವಿವಾಹವಿಚ್ಛೇದದಿಂದಾಗಿ ಇಲ್ಲವೆ ಸ್ವಂತ ತಂದೆ ಅಥವಾ ತಾಯಿಯ ಮರಣದಿಂದಾಗಿ ಸಂಭವಿಸುವ ಧ್ವಂಸಕರ ಪರಿಣಾಮಗಳನ್ನೂ ಜಯಿಸಲು ಸಹಾಯ ಮಾಡುತ್ತದೆ. ಒಬ್ಬ ಮಲತಂದೆಯು ತನ್ನ ನಿಜವಾದ ಸಮಸ್ಯೆಗಳನ್ನು ವರ್ಣಿಸುತ್ತಾನೆ: “ನಾನು ನನ್ನ ಅನಿಸಿಕೆಗಳ ಕುರಿತಷ್ಟೇ ಚಿಂತಿಸುತ್ತಿದ್ದ ಕಾರಣ, ನನ್ನ ಮಲಮಕ್ಕಳ ಮತ್ತು ನನ್ನ ಪತ್ನಿಯ ಭಾವನೆಗಳನ್ನು ಅಲಕ್ಷಿಸಿದೆ. ನಾನು ತುಂಬ ಸೂಕ್ಷ್ಮಗ್ರಾಹಿಯಾಗಿರದಂತೆ ಕಲಿತುಕೊಳ್ಳಬೇಕಿತ್ತು. ಎಲ್ಲಕ್ಕಿಂತಲೂ ಹೆಚ್ಚಾಗಿ, ನಾನು ದೀನನಾಗಿರಲು ಕಲಿತುಕೊಳ್ಳಬೇಕಾಗಿತ್ತು.” ಅಗತ್ಯವಾದ ಬದಲಾವಣೆಗಳನ್ನು ಮಾಡಿಕೊಳ್ಳಲು ಪ್ರೀತಿಯು ಅವನಿಗೆ ನೆರವಾಯಿತು.
ಸ್ವಂತ ತಂದೆ ಅಥವಾ ತಾಯಿ
ಈಗ ಮನೆಯಲ್ಲಿಲ್ಲದ ತಮ್ಮ ಸ್ವಂತ ತಂದೆ ಅಥವಾ ತಾಯಿಯೊಂದಿಗೆ ಮಕ್ಕಳಿಗಿರುವ ಸಂಬಂಧವನ್ನು ಕಾಪಾಡಿಕೊಂಡು ಹೋಗಲು ಪ್ರೀತಿಯು ಸಹಾಯ ಮಾಡಬಲ್ಲದು. ಒಬ್ಬ ಮಲತಂದೆಯು ಒಪ್ಪಿಕೊಳ್ಳುವುದು: “ನನ್ನ ಮಲಮಕ್ಕಳ ಪ್ರೀತಿಯು ಮೊದಲು ನನಗೆ ಸಿಗಬೇಕೆಂದು ನಾನು ಬಯಸಿದೆ. ಅವರು ತಮ್ಮ ಸ್ವಂತ ತಂದೆಯನ್ನು ಭೇಟಿಮಾಡಿ ಹಿಂದಿರುಗುವಾಗ, ಅವರ ತಂದೆಯನ್ನು ಟೀಕಿಸದೆ ಇರಲು ನನ್ನಿಂದ ಸಾಧ್ಯವಾಗಲಿಲ್ಲ. ಮಕ್ಕಳು ಅವರ ತಂದೆಯೊಂದಿಗೆ ಸಂತೋಷದಿಂದಿದ್ದು ಹಿಂದಿರುಗಿದರೆ, ನನಗೆ ಬಹಳ ಸಂಕಟವಾಗುತ್ತಿತ್ತು. ಅವರು ದುಃಖಿಸುತ್ತಾ ಹಿಂದಿರುಗಿದರೆ, ನನಗೆ ತುಂಬ ಸಂತೋಷವಾಗುತ್ತಿತ್ತು. ಅವರ ಪ್ರೀತಿಯನ್ನು ನಾನು ಎಲ್ಲಿ ಕಳೆದುಕೊಳ್ಳುವೆನೊ ಎಂಬ ಭಯ ನನಗಿತ್ತು. ನನ್ನ ಮಲಮಕ್ಕಳ ಜೀವಿತಗಳಲ್ಲಿ ಅವರ ಸ್ವಂತ ತಂದೆಯ ಪಾತ್ರಕ್ಕಿದ್ದ ಮಹತ್ವವನ್ನು ಗ್ರಹಿಸುವುದು ಮತ್ತು ಅಂಗೀಕರಿಸುವುದು ಅತ್ಯಂತ ಕಷ್ಟಕರವಾದ ವಿಷಯಗಳಲ್ಲಿ ಒಂದಾಗಿತ್ತು.”
“ತತ್ಕ್ಷಣದ” ಪ್ರೀತಿಯನ್ನು ನಿರೀಕ್ಷಿಸುವುದು ವಾಸ್ತವಿಕವಲ್ಲ ಎಂಬುದನ್ನು ತಿಳಿದುಕೊಳ್ಳಲು ಈ ಮಲತಂದೆಗೆ ಯಥಾರ್ಥ ಪ್ರೀತಿಯು ಸಹಾಯ ಮಾಡಿತು. ಮಕ್ಕಳು ಅವನನ್ನು ಕೂಡಲೇ ಅಂಗೀಕರಿಸದಿದ್ದಾಗ ಅವನಲ್ಲಿ ತೊರೆಯಲ್ಪಟ್ಟ ಭಾವನೆ ಉಂಟಾಗಬಾರದಿತ್ತು. ತನ್ನ ಮಲಮಕ್ಕಳ ಹೃದಯಗಳಲ್ಲಿದ್ದ ಅವರ ಸ್ವಂತ ತಂದೆಯ ಸ್ಥಾನವನ್ನು ತಾನೆಂದಿಗೂ ಪಡೆದುಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ತಿಳಿದುಕೊಂಡನು. ಏಕೆಂದರೆ ಮಕ್ಕಳಿಗೆ ಚಿಕ್ಕಂದಿನಿಂದಲೂ ತಮ್ಮ ಸ್ವಂತ ತಂದೆಯ ಪರಿಚಯವಿತ್ತು. ಆದರೆ ಮಲತಂದೆಯಾದರೊ ಹೊಸಬನಾಗಿದ್ದು, ಮಕ್ಕಳ ಪ್ರೀತಿಯನ್ನು ಸಂಪಾದಿಸಲು ಪ್ರಯಾಸಪಡಬೇಕಾಗಿತ್ತು. ಸಂಶೋಧಕಿ ಎಲಿಸಬೆತ್ ಎನ್ಸ್ಟೈನ್ ಹೀಗೆ ಹೇಳುತ್ತಾ ಅನೇಕರ ಅನುಭವವನ್ನು ತಿಳಿಯಪಡಿಸುತ್ತಾರೆ: “ಸ್ವಂತ ತಂದೆ ಅಥವಾ ತಾಯಿಯ ಸ್ಥಾನವನ್ನು ಯಾರೂ ತೆಗೆದುಕೊಳ್ಳಲು ಸಾಧ್ಯವಿಲ್ಲ—ಎಂದಿಗೂ ಸಾಧ್ಯವಿಲ್ಲ. ಮರಣಹೊಂದಿರುವ ಇಲ್ಲವೆ ಮಕ್ಕಳನ್ನು ತ್ಯಜಿಸಿಬಿಟ್ಟಿರುವ ತಂದೆ ಅಥವಾ ತಾಯಿಯು ಕೂಡ ಮಕ್ಕಳ ಜೀವಿತಗಳಲ್ಲಿ ಒಂದು ಪ್ರಮುಖ ಸ್ಥಾನವನ್ನು ಉಳಿಸಿಕೊಂಡಿರುತ್ತಾರೆ.”
ಶಿಸ್ತು—ಅತಿ ಸೂಕ್ಷ್ಮವಾದ ವಿಷಯ
ಯುವ ಜನರಿಗೆ ಪ್ರೀತಿಪರ ಶಿಸ್ತಿನ ಅಗತ್ಯವಿದೆ ಎಂದು ಬೈಬಲು ಸೂಚಿಸುತ್ತದೆ, ಮತ್ತು ಅದು ಮಲಮಕ್ಕಳ ವಿಷಯದಲ್ಲೂ ಸತ್ಯವಾಗಿದೆ. (ಜ್ಞಾನೋಕ್ತಿ 8:33) ಈ ವಿಷಯದ ಕುರಿತಾದ ಬೈಬಲಿನ ಅಭಿಪ್ರಾಯದೊಂದಿಗೆ ಅನೇಕ ವೃತ್ತಿಪರರು ಸಮ್ಮತಿಸುತ್ತಿದ್ದಾರೆ. ಪ್ರೊಫೆಸರ್ ಸಿರೀಸ್ ಆಲ್ವೀಸ್ ಡಿ ಆರಾವೂಸೂ ಹೇಳಿದ್ದು: “ಸ್ವಭಾವತಃ ಯಾರೂ ಇತಿಮಿತಿಗಳನ್ನು ಇಷ್ಟಪಡುವುದಿಲ್ಲ. ಹಾಗಿದ್ದರೂ ಅವು ಅತ್ಯಗತ್ಯವಾಗಿವೆ. ‘ಬೇಡ’ ಎಂಬುದು ಒಂದು ರಕ್ಷಣಾತ್ಮಕ ಪದವಾಗಿದೆ.”
ಆದರೆ, ಮಲಹೆತ್ತವರೊಬ್ಬರಿರುವ ಒಂದು ಕುಟುಂಬದಲ್ಲಿ ಶಿಸ್ತಿನ ಕುರಿತಾದ ವಿಭಿನ್ನ ದೃಷ್ಟಿಕೋನಗಳು ಗಂಭೀರವಾದ ಬಿರುಕುಗಳಿಗೆ ನಡೆಸಬಲ್ಲವು. ಮಲಮಕ್ಕಳು ಈಗ ಅವರೊಂದಿಗಿರದ ಒಬ್ಬ ವಯಸ್ಕರಿಂದ ರೂಪಿಸಲ್ಪಟ್ಟಿದ್ದಾರೆ. ಬಹುಶಃ ಅವರಲ್ಲಿ ಮಲತಂದೆ ಅಥವಾ ತಾಯಿಯನ್ನು ರೇಗಿಸುವ ರೂಢಿಗಳು ಇಲ್ಲವೆ ಹವ್ಯಾಸಗಳಿರಬಹುದು. ಮತ್ತು ಕೆಲವೊಂದು ವಿಷಯಗಳ ಕುರಿತು ಮಲಹೆತ್ತವರ ಅನಿಸಿಕೆಗಳು ಏಕೆ ಇಷ್ಟೊಂದು ದೃಢವಾಗಿವೆ ಎಂಬುದನ್ನು ಅವರು ಅರ್ಥಮಾಡಿಕೊಳ್ಳದಿರಬಹುದು. ಇಂತಹ ಸನ್ನಿವೇಶವನ್ನು ಯಶಸ್ವಿಕರವಾಗಿ ಎದುರಿಸುವುದು ಹೇಗೆ? ಪೌಲನು ಕ್ರೈಸ್ತರನ್ನು ಉತ್ತೇಜಿಸುವುದು: “ಪ್ರೀತಿ ಸ್ಥಿರಚಿತ್ತ ಸಾತ್ವಿಕತ್ವ ಇವುಗಳನ್ನು ಸಂಪಾದಿಸುವದಕ್ಕೆ ಪ್ರಯಾಸಪಡು.” (1 ತಿಮೊಥೆಯ 6:11) ಮಲಹೆತ್ತವರು ಮತ್ತು ಮಕ್ಕಳು ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿರುವಾಗ, ಅವರು ಸಾತ್ವಿಕರೂ ತಾಳ್ಮೆಯುಳ್ಳವರೂ ಆಗಿರುವಂತೆ ಕ್ರೈಸ್ತ ಪ್ರೀತಿಯು ಅವರಿಬ್ಬರಿಗೂ ಸಹಾಯ ಮಾಡುತ್ತದೆ. ಮಲತಂದೆ ಅಥವಾ ತಾಯಿಯು ತಾಳ್ಮೆಯಿಲ್ಲದವರಾಗಿದ್ದರೆ, ಈ ತನಕ ಬೆಳೆದುಬಂದಿರುವ ಯಾವುದೇ ಸಂಬಂಧವನ್ನು ‘ಕೋಪ, ಕ್ರೋಧ, ಮತ್ತು ದೂಷಣೆ’ಯು ಬೇಗನೆ ಧ್ವಂಸಮಾಡಬಲ್ಲದು.—ಎಫೆಸ 4:31.
ಯಾವ ವಿಷಯವು ಸಹಾಯ ಮಾಡುವುದೆಂಬ ಒಳನೋಟವನ್ನು ಪ್ರವಾದಿಯಾದ ಮೀಕನು ತಿಳಿಯಪಡಿಸುತ್ತಾನೆ. ಅವನು ಹೇಳಿದ್ದು: “ನ್ಯಾಯವನ್ನು ಆಚರಿಸುವದು, ಕರುಣೆಯಲ್ಲಿ ಆಸಕ್ತನಾಗಿರುವದು, ನಿನ್ನ ದೇವರಿಗೆ ನಮ್ರವಾಗಿ ನಡೆದುಕೊಳ್ಳುವದು, ಇಷ್ಟನ್ನೇ ಹೊರತು ಯೆಹೋವನು ನಿನ್ನಿಂದ ಇನ್ನೇನು ಅಪೇಕ್ಷಿಸುವನು?” (ಮೀಕ 6:8) ಶಿಸ್ತನ್ನು ನೀಡುವಾಗ ನ್ಯಾಯವು ಅತ್ಯಾವಶ್ಯಕವಾಗಿದೆ. ಆದರೆ ದಯೆಯ ಕುರಿತೇನು? ರವಿವಾರ ಬೆಳಗ್ಗೆ ಸಭಾ ಆರಾಧನೆಯಲ್ಲಿ ಭಾಗವಹಿಸಲು ಸಾಧ್ಯವಾಗುವಂತೆ ತನ್ನ ಮಲಮಕ್ಕಳನ್ನು ಎಬ್ಬಿಸುವುದು ತುಂಬ ಕಷ್ಟಕರವಾಗಿತ್ತೆಂದು ಒಬ್ಬ ಕ್ರೈಸ್ತ ಹಿರಿಯನು ಹೇಳುತ್ತಾನೆ. ಅವರನ್ನು ಬಯ್ಯುವ ಬದಲು ಅವನು ದಯೆ ತೋರಿಸಲು ಪ್ರಯತ್ನಿಸಿದನು. ಅವನು ಬೆಳಗ್ಗೆ ಬೇಗನೆ ಎದ್ದು, ಉಪಾಹಾರವನ್ನು ತಯಾರಿಸಿ, ಅವರಲ್ಲಿ ಪ್ರತಿಯೊಬ್ಬರಿಗೆ ಬಿಸಿಬಿಸಿಯಾದ ಪಾನೀಯವನ್ನು ಕೊಟ್ಟನು. ಇದರಿಂದಾಗಿ ಅವನು ಎಬ್ಬಿಸಿದೊಡನೆಯೇ ಎದ್ದೇಳಲು ಅವರು ಸಿದ್ಧರಾಗಿದ್ದರು.
ಪ್ರೊಫೆಸರ್ ಆನ ಲೂಯಿಸ ವ್ಯಾಯಿರ ಡಿ ಮಾಟೋಸ್ ಅವರು ಈ ಮುಂದಿನ ಸ್ವಾರಸ್ಯಕರವಾದ ಹೇಳಿಕೆಯನ್ನು ಮಾಡಿದರು: “ಯಾವ ರೀತಿಯ ಕುಟುಂಬವೆಂಬುದು ಪ್ರಾಮುಖ್ಯವಾದ ವಿಷಯವಲ್ಲ, ಬದಲಿಗೆ ಸಂಬಂಧದ ಗುಣಮಟ್ಟವೇ ಪ್ರಾಮುಖ್ಯವಾದ ವಿಷಯವಾಗಿದೆ. ನನ್ನ ಅಧ್ಯಯನಗಳಿಂದ ನಾನು ಗಮನಿಸಿರುವುದೇನೆಂದರೆ, ವರ್ತನೆ ಸಂಬಂಧಿತ ಸಮಸ್ಯೆಗಳುಳ್ಳ ಯುವ ಜನರು ಬಹಳ ಮಟ್ಟಿಗೆ ಹೆತ್ತವರ ಮೇಲ್ವಿಚಾರಣೆಯಿಲ್ಲದ, ನಿಯಮಗಳ ಹಾಗೂ ಸಂವಾದದ ಕೊರತೆಯಿರುವ ಕುಟುಂಬಗಳಿಂದ ಹೆಚ್ಚಾಗಿ ಬಂದಿರುತ್ತಾರೆ.” ಅವರು ಹೀಗೂ ಹೇಳಿದರು: “ಮಕ್ಕಳ ಪಾಲನೆಯಲ್ಲಿ ಬೇಡ ಎಂದು ಹೇಳುವುದರ ಮಹತ್ವವು, ಬಹಳವಾಗಿ ಒತ್ತಿಹೇಳಬೇಕಾದ ವಿಷಯವಾಗಿದೆ.” ಈ ಹೇಳಿಕೆಯೊಂದಿಗೆ ಕೂಡಿಸಿ, ಎಮ್ಲಿ ಮತ್ತು ಜಾನ್ ವಿಶರ್ ಎಂಬ ಡಾಕ್ಟರರು ಹೇಳಿರುವುದು: “ಶಿಸ್ತನ್ನು ಪಡೆದುಕೊಳ್ಳುವ ವ್ಯಕ್ತಿ, ಅದನ್ನು ನೀಡುತ್ತಿರುವ ವ್ಯಕ್ತಿಯ ಪ್ರತಿಕ್ರಿಯೆಗಳ ಬಗ್ಗೆ ಹಾಗೂ ಅವನೊಂದಿಗಿನ ಸಂಬಂಧದ ಬಗ್ಗೆ ಯೋಚಿಸುವಾಗ ಮಾತ್ರ ಶಿಸ್ತು ಪ್ರಭಾವಕಾರಿಯಾಗಿರುತ್ತದೆ.”
ಮಲಕುಟುಂಬಗಳಲ್ಲಿ ಶಿಸ್ತನ್ನು ನೀಡಬೇಕಾದವರು ಯಾರೆಂಬ ಪ್ರಶ್ನೆಯ ಮೇಲೆ ಈ ಹೇಳಿಕೆಗಳು ಕೇಂದ್ರೀಕರಿಸುತ್ತವೆ. ಬೇಡವೆಂದು ಹೇಳುವವರು ಯಾರಾಗಿರಬೇಕು? ವಿಷಯಗಳನ್ನು ಕೂಡಿ ಚರ್ಚಿಸಿದ ಮೇಲೆ, ಆರಂಭದಲ್ಲಿ ಶಿಸ್ತನ್ನು ನೀಡಬೇಕಾಗಿರುವ ಪ್ರಧಾನ ವ್ಯಕ್ತಿಯು ಸ್ವಂತ ತಂದೆ ಇಲ್ಲವೆ ತಾಯಿಯಾಗಿರಬೇಕೆಂದು ಕೆಲವು ಹೆತ್ತವರು ತೀರ್ಮಾನಿಸಿದ್ದಾರೆ. ಇದು ಮಲತಂದೆ ಇಲ್ಲವೆ ತಾಯಿಗೆ, ಮಕ್ಕಳೊಂದಿಗೆ ನಿಕಟವಾದ ಸಂಬಂಧವನ್ನು ಬೆಳೆಸಿಕೊಳ್ಳುವಂತೆ ಸಮಯಾವಕಾಶ ಕೊಡುತ್ತದೆ. ಮಕ್ಕಳು ಮಲತಂದೆ ಇಲ್ಲವೆ ತಾಯಿಯಿಂದ ಶಿಸ್ತಿಗೊಳಗಾಗುವ ಮೊದಲು, ಮಲಹೆತ್ತವರ ಪ್ರೀತಿಯ ಬಗ್ಗೆ ಆತ್ಮವಿಶ್ವಾಸವುಳ್ಳವರಾಗಿರಲು ಕಲಿತುಕೊಳ್ಳಲಿ.
ಕುಟುಂಬದಲ್ಲಿರುವ ತಂದೆಯು ಮಲತಂದೆಯಾಗಿದ್ದರೆ ಆಗೇನು? ಕುಟುಂಬದ ತಲೆಯು ತಂದೆಯೆಂದು ಬೈಬಲು ಹೇಳುವುದಿಲ್ಲವೊ? ಹೌದು, ಹೇಳುತ್ತದೆ. (ಎಫೆಸ 5:22, 23; 6:1, 2) ಆದರೆ, ದಂಡನೆಯನ್ನು ಒಳಗೊಂಡಿರುವ ಶಿಸ್ತಿನ ವಿಷಯವನ್ನು ಸ್ವಲ್ಪ ಸಮಯಕ್ಕಾಗಿ ಹೆಂಡತಿಗೆ ವಹಿಸಲು ಮಲತಂದೆಯು ಬಯಸಬಹುದು. ಮಕ್ಕಳು ‘ತಮ್ಮ [ಹೊಸ] ತಂದೆಯ ಶಿಸ್ತಿಗೆ ಕಿವಿಗೊಡಲು’ ಸಾಧ್ಯವಾಗುವಂತೆ, ಮಲತಂದೆಯು ಅದಕ್ಕಾಗಿ ಅಡಿಪಾಯವನ್ನು ಹಾಕುತ್ತಿರುವಾಗ, ಅವರು ‘ತಾಯಿಯ ನಿಯಮಕ್ಕೆ’ ವಿಧೇಯರಾಗುವಂತೆ ಅವನು ಅನುಮತಿಸಬಹುದು. (ಜ್ಞಾನೋಕ್ತಿ 1:8; 6:20; 31:1) ಹೀಗೆ ಮಾಡುವುದು, ತಲೆತನದ ತತ್ವದ ವಿರುದ್ಧ ಕಾರ್ಯಮಾಡುವುದಿಲ್ಲ ಎಂಬುದನ್ನು ಪ್ರಮಾಣವು ತೋರಿಸುತ್ತದೆ. ಇದಕ್ಕೆ ಕೂಡಿಸುತ್ತಾ ಒಬ್ಬ ಮಲತಂದೆಯು ಹೇಳುವುದು: “ಶಿಸ್ತಿನಲ್ಲಿ ಬುದ್ಧಿವಾದ, ತಿದ್ದುವಿಕೆ, ಹಾಗೂ ಗದರಿಕೆ ಸೇರಿದೆಯೆಂದು ನಾನು ಜ್ಞಾಪಿಸಿಕೊಂಡೆ. ಇದು ನ್ಯಾಯವಾದ, ಪ್ರೀತಿದಾಯಕ ವಿಧದಲ್ಲಿ ಹಾಗೂ ಸಹಾನುಭೂತಿಯಿಂದ ನೀಡಲ್ಪಟ್ಟು, ಹೆತ್ತವರ ಮಾದರಿಯಿಂದ ಸಮರ್ಥಿಸಲ್ಪಟ್ಟಿರುವಾಗ, ಸಾಮಾನ್ಯವಾಗಿ ಪ್ರಭಾವಕಾರಿಯಾಗಿರುತ್ತದೆ.”
ಹೆತ್ತವರು ಪರಸ್ಪರ ಮಾತನಾಡಿಕೊಳ್ಳಲೇಬೇಕು
ಜ್ಞಾನೋಕ್ತಿ 15:22 (NW) ಹೇಳುವುದು: “ಅಂತರಂಗದ ಮಾತು ಇಲ್ಲದಿರುವಲ್ಲಿ ಯೋಜನೆಗಳ ಭಂಗಗೊಳ್ಳುವಿಕೆಯಿದೆ.” ಮಲಕುಟುಂಬವೊಂದರಲ್ಲಿ ಹೆತ್ತವರ ಮಧ್ಯೆ ಶಾಂತವಾದ ಮತ್ತು ಮುಚ್ಚುಮರೆಯಿಲ್ಲದ ಮಾತುಕತೆ ಅತ್ಯಾವಶ್ಯಕವಾಗಿದೆ. ಓ ಎಸ್ಟಾಡೊ ಡೆ ಸೌ ಪೌಲೂ ಎಂಬ ವಾರ್ತಾಪತ್ರಿಕೆಯಲ್ಲಿ ಬರೆಯುವ ಲೇಖಕಿಯೊಬ್ಬಳು ಗಮನಿಸಿದ್ದು: “ಹೆತ್ತವರಿಟ್ಟ ಇತಿಮಿತಿಗಳನ್ನು ಪರೀಕ್ಷಿಸಲು ಮಕ್ಕಳು ಸದಾ ಪ್ರಯತ್ನಿಸುತ್ತಾರೆ.” ಇದು ಮಲಕುಟುಂಬಗಳಲ್ಲಿ ಮತ್ತಷ್ಟೂ ಸತ್ಯವಾಗಿರಬಹುದು. ಆದಕಾರಣ, ವಿಭಿನ್ನ ವಿಷಯಗಳ ಸಂಬಂಧದಲ್ಲಿ ಹೆತ್ತವರು ಒಂದೇ ರೀತಿಯ ಅಭಿಪ್ರಾಯವುಳ್ಳವರಾಗಿರಬೇಕು. ಇದರಿಂದಾಗಿ, ಹೆತ್ತವರು ಒಂದೇ ಮನಸ್ಸಿನವರೆಂದು ಮಕ್ಕಳು ತಿಳಿದುಕೊಳ್ಳುವರು. ಮಲತಂದೆ ಇಲ್ಲವೆ ತಾಯಿಯು ಕ್ರೂರವಾದ ರೀತಿಯಲ್ಲಿ ವರ್ತಿಸುತ್ತಿದ್ದಾರೆಂದು ಸ್ವಂತ ಹೆತ್ತವರಲ್ಲೊಬ್ಬರಿಗೆ ಅನಿಸುವಲ್ಲಿ ಆಗೇನು? ಆಗ ಹೆತ್ತವರು ಮಕ್ಕಳ ಮುಂದೆ ಅಲ್ಲ, ಖಾಸಗಿಯಾಗಿ ವಿಷಯವನ್ನು ಬಗೆಹರಿಸಬೇಕು.
ಪುನಃ ವಿವಾಹವಾದ ಒಬ್ಬಾಕೆ ತಾಯಿಯು ಹೇಳುವುದು: “ಮಲತಂದೆಯು ಆಕೆಯ ಮಕ್ಕಳಿಗೆ ಶಿಸ್ತುನೀಡುವಾಗ, ಅವಸರದಿಂದ ಇಲ್ಲವೆ ಅನ್ಯಾಯವಾಗಿ ವರ್ತಿಸುತ್ತಿರುವುದನ್ನು ನೋಡುವುದು ತಾಯಿಗೆ ಅತ್ಯಂತ ಕಷ್ಟಕರವಾದ ಸಂಗತಿಯಾಗಿದೆ. ಅವಳು ಎದೆಗುಂದಿ, ತನ್ನ ಮಕ್ಕಳ ಪರವಹಿಸಲು ಬಯಸುತ್ತಾಳೆ. ಇಂತಹ ಸನ್ನಿವೇಶಗಳಲ್ಲಿ ಗಂಡನಿಗೆ ಅಧೀನಳಾಗಿದ್ದು, ಅವನಿಗೆ ಸಮರ್ಥನೆ ನೀಡುವುದು ತುಂಬ ಕಷ್ಟಕರವಾಗಿದೆ.
“ಒಮ್ಮೆ, 12 ಮತ್ತು 14 ವರ್ಷ ಪ್ರಾಯದ ನನ್ನ ಇಬ್ಬರು ಗಂಡುಮಕ್ಕಳು, ಯಾವುದೊ ಕೆಲಸಕ್ಕಾಗಿ ತಮ್ಮ ಮಲತಂದೆಯ ಅನುಮತಿಯನ್ನು ಕೇಳಿದರು. ಅವನು ಕೂಡಲೇ ನಿರಾಕರಿಸಿ, ಕೋಣೆಯಿಂದ ಹೊರನಡೆದನು. ಹುಡುಗರಿಗೆ ತಮ್ಮ ವಿನಂತಿ ಏಕೆ ಪ್ರಾಮುಖ್ಯವಾಗಿತ್ತೆಂಬ ವಿವರಣೆಯನ್ನು ನೀಡುವ ಅವಕಾಶವೂ ಇರಲಿಲ್ಲ. ಹುಡುಗರು ಇನ್ನೇನು ಅಳಲಿದ್ದರು, ಮತ್ತು ನನ್ನ ಬಾಯಿಂದ ಮಾತೇ ಹೊರಡಲಿಲ್ಲ. ಹಿರಿಯ ಹುಡುಗನು ನನ್ನನ್ನು ನೋಡಿ ಹೇಳಿದ್ದು: ‘ಅವರು ಮಾಡಿದ್ದನ್ನು ನೋಡಿದಿರಾ ಮಮ್ಮಿ?’ ‘ಹೂಂ, ನೋಡಿದೆ. ಹಾಗಿದ್ದರೂ, ಅವರು ಮನೆಯ ತಲೆಯಾಗಿದ್ದಾರೆ ಮತ್ತು ತಲೆತನವನ್ನು ಗೌರವಿಸಬೇಕೆಂದು ಬೈಬಲು ನಮಗೆ ಹೇಳುತ್ತದೆ,’ ಎಂದು ನಾನು ಉತ್ತರಿಸಿದೆ. ಅವರು ಒಳ್ಳೆಯ ಹುಡುಗರಾಗಿದ್ದ ಕಾರಣ, ಇದಕ್ಕೆ ಸಮ್ಮತಿಸಿ ಶಾಂತರಾದರು. ಆ ದಿನ ಸಂಜೆಯೇ, ನಾನು ನನ್ನ ಪತಿಗೆ ಎಲ್ಲವನ್ನೂ ವಿವರಿಸಿದಾಗ, ತಾವು ತೀರ ಅಧಿಕಾರಶಾಹಿಯಂತೆ ನಡೆದುಕೊಂಡದ್ದು ಅವರಿಗೆ ತಿಳಿದುಬಂತು. ಅವರು ನೇರವಾಗಿ ಹುಡುಗರ ಕೋಣೆಗೆ ಹೋಗಿ ತಪ್ಪೊಪ್ಪಿಕೊಂಡರು.
“ಆ ಘಟನೆಯಿಂದ ನಾವು ಅನೇಕ ವಿಷಯಗಳನ್ನು ಕಲಿತುಕೊಂಡೆವು. ತೀರ್ಮಾನಗಳನ್ನು ಮಾಡುವ ಮೊದಲು ಕಿವಿಗೊಟ್ಟು ಆಲಿಸಲು ನನ್ನ ಪತಿ ಕಲಿತುಕೊಂಡರು. ತಲೆತನದ ತತ್ವವು ಸಂಕಟಕರವಾಗಿದ್ದರೂ ಅದನ್ನು ಸಮರ್ಥಿಸುವುದನ್ನು ನಾನು ಕಲಿತುಕೊಂಡೆ. ಅಧೀನರಾಗಿರುವುದರ ಮಹತ್ವವನ್ನು ಹುಡುಗರು ಕಲಿತುಕೊಂಡರು. (ಕೊಲೊಸ್ಸೆ 3:18, 19) ಮತ್ತು ನನ್ನ ಪತಿಯ ಹೃತ್ಪೂರ್ವಕ ತಪ್ಪೊಪ್ಪಿಗೆಯು, ನಮ್ಮೆಲ್ಲರಿಗೂ ದೀನತೆಯ ಪ್ರಾಮುಖ್ಯವಾದ ಪಾಠವನ್ನು ಕಲಿಸಿತು. (ಜ್ಞಾನೋಕ್ತಿ 29:23) ಇಂದು ಹುಡುಗರಿಬ್ಬರೂ ಕ್ರೈಸ್ತ ಹಿರಿಯರಾಗಿದ್ದಾರೆ.”
ತಪ್ಪುಗಳು ಖಂಡಿತವಾಗಿಯೂ ಆಗುವವು. ಮಕ್ಕಳು ಮನನೋಯಿಸುವಂತಹ ವಿಷಯಗಳನ್ನು ನಿಶ್ಚಯವಾಗಿಯೂ ಹೇಳುವರು ಇಲ್ಲವೆ ಮಾಡುವರು. ಆ ಗಳಿಗೆಯ ಒತ್ತಡದಿಂದಾಗಿ, ಮಲಹೆತ್ತವರು ಅನುಚಿತವಾಗಿ ನಡೆದುಕೊಳ್ಳಬಹುದು. ಹಾಗಿದ್ದರೂ, ‘ಅದು ನನ್ನ ತಪ್ಪು, ದಯವಿಟ್ಟು ನನ್ನನ್ನು ಕ್ಷಮಿಸಿರಿ’ ಎಂಬಂತಹ ಸರಳವಾದ ಮಾತುಗಳು, ಗಾಯಗಳನ್ನು ವಾಸಿಮಾಡುವುದರಲ್ಲಿ ಬಹಳ ಪರಿಣಾಮಕಾರಿಯಾಗಿವೆ.
ಕುಟುಂಬ ಐಕ್ಯವನ್ನು ಬಲಪಡಿಸುವುದು
ಮಲಕುಟುಂಬದಲ್ಲಿ ಆದರದ ಸಂಬಂಧವನ್ನು ಬೆಳೆಸಲು ಸಮಯದ ಅಗತ್ಯವಿದೆ. ನೀವು ಮಲತಂದೆ ಅಥವಾ ತಾಯಿಯಾಗಿದ್ದರೆ, ನೀವು ಅನುಭೂತಿ ತೋರಿಸುವವರಾಗಿರಬೇಕು. ಅರ್ಥಮಾಡಿಕೊಳ್ಳುವವರಾಗಿದ್ದು, ಮಕ್ಕಳೊಂದಿಗೆ ಸಮಯವನ್ನು ಕಳೆಯಲು ಸಿದ್ಧರಾಗಿರಿ. ಚಿಕ್ಕ ಮಕ್ಕಳೊಂದಿಗೆ ಆಟವಾಡಿರಿ. ಹಿರಿಯ ಮಕ್ಕಳೊಂದಿಗೆ ಮಾತಾಡಿರಿ. ಸಮಯವನ್ನು ಒಟ್ಟುಗೂಡಿ ಕಳೆಯುವ ಅವಕಾಶಗಳಿಗಾಗಿ ಹುಡುಕಿರಿ. ಉದಾಹರಣೆಗೆ, ಊಟದ ತಯಾರಿ ಅಥವಾ ಕಾರನ್ನು ಶುಚಿಗೊಳಿಸುವಂತಹ ಮನೆಯ ಕೆಲಸಗಳಲ್ಲಿ ಮಕ್ಕಳು ಸಹಾಯ ಮಾಡುವಂತೆ ಕೇಳಿಕೊಳ್ಳಿರಿ. ನೀವು ಮಾರುಕಟ್ಟೆಗೆ ಹೋಗುವಾಗ, ನಿಮ್ಮನ್ನು ಜೊತೆಗೂಡಿ ಸಹಾಯ ಮಾಡುವಂತೆ ಕೇಳಿಕೊಳ್ಳಿರಿ. ಇದರೊಂದಿಗೆ, ಪ್ರೀತಿಯ ಚಿಕ್ಕಪುಟ್ಟ ಹಾವಭಾವಗಳು ನಿಮ್ಮಲ್ಲಿರುವ ಪ್ರೀತಿಯನ್ನು ತೋರಿಸಬಲ್ಲವು. (ಮಲತಂದೆಗಳು ತಮ್ಮ ಮಲಪುತ್ರಿಯರೊಂದಿಗೆ ಯೋಗ್ಯವಾದ ಮಿತಿಗಳನ್ನಿಟ್ಟು, ಅವರಿಗೆ ಮುಜುಗರವಾಗದಂತೆ ನೋಡಿಕೊಳ್ಳಬೇಕು. ಮತ್ತು ಹುಡುಗರಿಗೂ ಇತಿಮಿತಿಗಳಿವೆ ಎಂದು ಮಲತಾಯಂದಿರು ಜ್ಞಾಪದಲ್ಲಿಟ್ಟುಕೊಳ್ಳಬೇಕು.)
ಮಲಕುಟುಂಬಗಳು ಯಶಸ್ವಿಯಾಗಬಲ್ಲವು. ಅನೇಕ ಮಲಕುಟುಂಬಗಳು ಯಶಸ್ಸನ್ನು ಹೊಂದಿವೆ. ಮಲಕುಟುಂಬದಲ್ಲಿರುವ ಎಲ್ಲರೂ, ಹೆತ್ತವರು ಸಹ, ಸರಿಯಾದ ಮನೋಭಾವಗಳು ಹಾಗೂ ವಾಸ್ತವಿಕವಾದ ನಿರೀಕ್ಷೆಯುಳ್ಳವರಾಗಿರುವಲ್ಲಿ, ಆ ಕುಟುಂಬಗಳು ತುಂಬ ಯಶಸ್ವಿಕರವಾಗಿರುತ್ತವೆ. ಅಪೊಸ್ತಲ ಯೋಹಾನನು ಬರೆದುದು: “ಪ್ರಿಯರೇ, ನಾವು ಒಬ್ಬರನ್ನೊಬ್ಬರು ಪ್ರೀತಿಸೋಣ. ಪ್ರೀತಿಯು ದೇವರಿಂದಾಗಿದೆ.” (1 ಯೋಹಾನ 4:7) ಹೌದು, ಹೃತ್ಪೂರ್ವಕ ಪ್ರೀತಿಯೇ ಒಂದು ಸಂತೋಷಕರ ಮಲಕುಟುಂಬದ ನಿಜವಾದ ರಹಸ್ಯವಾಗಿದೆ.
[ಪುಟ 7 ರಲ್ಲಿರುವ ಚಿತ್ರ]
ಸಂತೋಷಕರವಾದ ಮಲಕುಟುಂಬಗಳು
ಒಟ್ಟಿಗೆ ಸಮಯವನ್ನು ಕಳೆಯುತ್ತವೆ . . .
ದೇವರ ವಾಕ್ಯವನ್ನು ಒಟ್ಟಿಗೆ ಓದುತ್ತವೆ . . .
ಒಟ್ಟಿಗೆ ಮಾತಾಡುತ್ತವೆ . . .
ಒಟ್ಟಿಗೆ ಕೆಲಸಮಾಡುತ್ತವೆ . . .