ಭರವಸಾರ್ಹ ಭವಿಷ್ಯವಾಣಿಗಾಗಿ ಹುಡುಕಾಟ
ಮಹಾ ಅಲೆಕ್ಸಾಂಡರನೆಂದು ಪ್ರಸಿದ್ಧನಾದ ಮೆಕೆದೋನ್ಯದ ರಾಜನು, ಸಾ.ಶ.ಪೂ. 336ರಲ್ಲಿ ಸಿಂಹಾಸನವನ್ನು ಏರಿದನು. ಇದಾದ ಸ್ವಲ್ಪ ಸಮಯದ ನಂತರ, ಅವನು ಮಧ್ಯ ಗ್ರೀಸ್ನಲ್ಲಿರುವ ಢೆಲ್ಫೈಯ ದೇವತಾವಾಣಿ ಗುಡಿಯನ್ನು ಸಂದರ್ಶಿಸಿದನು. ಅವನ ಭವಿಷ್ಯದ ಯೋಜನೆಯು, ಆ ಸಮಯದಲ್ಲಿದ್ದ ಲೋಕದ ಹೆಚ್ಚಿನ ಭಾಗವನ್ನು ಜಯಿಸುವಂತಹ ಮಹತ್ವಾಕಾಂಕ್ಷೆಯನ್ನು ಒಳಗೊಂಡಿತ್ತು. ಆದರೆ, ತನ್ನ ಪ್ರಚಂಡ ಸಾಹಸವು ಸಫಲವಾಗಲು ದೈವಿಕ ಅಭಯಹಸ್ತದ ಸಹಾಯವನ್ನು ಅವನು ಬಯಸಿದನು. ಪುರಾಣಕಥೆಗಳಿಗನುಸಾರ, ಅವನು ಢೆಲ್ಫೈಯನ್ನು ಸಂದರ್ಶಿಸಿದ ಆ ದಿನವು, ದೇವತಾವಾಣಿಯನ್ನು ಹೇಳುವ ಪುರೋಹಿತೆಯನ್ನು ಸಂದರ್ಶಿಸಲು ಅನುಮತಿಯಿರದ ದಿನವಾಗಿತ್ತು. ಖಂಡಿತವಾಗಿಯೂ ಉತ್ತರವನ್ನು ಪಡೆಯಲೇಬೇಕು ಎಂದು ಬಯಸಿದ ಅಲೆಕ್ಸಾಂಡರನು, ಪಟ್ಟುಹಿಡಿಯುತ್ತಾ ದೇವತಾವಾಣಿಯನ್ನು ಹೇಳುವಂತೆ ಪುರೋಹಿತೆಯನ್ನು ಒತ್ತಾಯಪಡಿಸಿದನು. ಅವಳು ಹತಾಶೆಯಿಂದ ಹೀಗೆಂದು ಕೂಗಿದಳು: “ಮಗನೇ, ನೀನು ಅಜೇಯನಾಗುವಿ!” ಆ ಯುವರಾಜನು ಈ ಶುಭಶಕುನವನ್ನು, ದಂಡಯಾತ್ರೆಯಲ್ಲಿ ತಾನು ವಿಜಯಿಯಾಗುವೆನು ಎಂಬ ಆಶಾಜನಕ ಸೂಚನೆಯಾಗಿ ಸ್ವೀಕರಿಸಿದನು.
ಹಾಗಿದ್ದರೂ, ದಾನಿಯೇಲ ಎಂಬ ಬೈಬಲ್ ಪುಸ್ತಕದಲ್ಲಿ ಕಂಡುಬರುವ ಪ್ರವಾದನೆಗಳನ್ನು ಅಲೆಕ್ಸಾಂಡರನು ಪರೀಕ್ಷಿಸಿದ್ದಾದರೆ, ತನ್ನ ಕಾರ್ಯಾಚರಣೆಯ ಫಲಿತಾಂಶವು ಏನಾಗುವುದೆಂದು ಹೆಚ್ಚು ಉತ್ತಮವಾಗಿ ಅವನು ತಿಳಿದುಕೊಳ್ಳಲು ಸಾಧ್ಯವಾಗುತ್ತಿತ್ತು. ಅವು ಗಮನಾರ್ಹ ನಿಷ್ಕೃಷ್ಟತೆಯೊಂದಿಗೆ ಅವನ ಶೀಘ್ರ ವಿಜಯಗಳನ್ನು ಮುಂತಿಳಿಸಿದವು. ಸಾಮಾನ್ಯ ಅಭಿಪ್ರಾಯಕ್ಕನುಸಾರ, ಅಲೆಕ್ಸಾಂಡರನಿಗೆ ಕ್ರಮೇಣ ತನ್ನ ಕುರಿತು ದಾನಿಯೇಲನು ಬರೆದಿರುವ ವಿಷಯಗಳನ್ನು ಪರಿಶೀಲಿಸುವ ಅವಕಾಶವು ಒದಗಿಬಂತು. ಯೆಹೂದಿ ಇತಿಹಾಸಕಾರನಾದ ಜೋಸೀಫಸನ ಪ್ರಕಾರ, ಮೆಕೆದೊನ್ಯದ ಅರಸನು ಯೆರೂಸಲೇಮಿಗೆ ಬಂದಾಗ, ಅವನಿಗೆ ಪ್ರಾಯಶಃ ದಾನಿಯೇಲನ ಪುಸ್ತಕದ ಎಂಟನೇ ಅಧ್ಯಾಯದ ಪ್ರವಾದನೆಯನ್ನು ತೋರಿಸಿದ್ದಿರಬೇಕು. (ದಾನಿಯೇಲ 8:5-8, 20, 21) ವರದಿಗನುಸಾರ, ಈ ಕಾರಣದಿಂದಲೇ ನಗರವು ಅಲೆಕ್ಸಾಂಡರನ ವಿನಾಶಕಾರಿ ಸೈನ್ಯಗಳಿಂದ ಸಂರಕ್ಷಿಸಲ್ಪಟ್ಟಿತ್ತು.
ಸಹಜವಾದ ಮಾನವ ಅಗತ್ಯ
ಅರಸನಿರಲಿ, ಸಾಮಾನ್ಯ ಪ್ರಜೆಯಿರಲಿ, ಹಳೆ ಕಾಲದವನಾಗಿರಲಿ, ಆಧುನಿಕ ಕಾಲದವನಾಗಿರಲಿ, ಮನುಷ್ಯನು ಭವಿಷ್ಯತ್ತಿನ ಕುರಿತು ವಿಶ್ವಾಸಾರ್ಹವಾದ ಭವಿಷ್ಯವಾಣಿಗಳ ಅಗತ್ಯವನ್ನು ಕಂಡಿದ್ದಾನೆ. ಬುದ್ಧಿವಂತ ಸೃಷ್ಟಿಜೀವಿಗಳೋಪಾದಿ ಮಾನವರಾದ ನಾವು ಗತಕಾಲದ ಕುರಿತು ಅಭ್ಯಾಸಿಸುತ್ತೇವೆ, ವರ್ತಮಾನದ ಕುರಿತು ಅರಿವುಳ್ಳವರಾಗಿದ್ದೇವೆ ಮತ್ತು ಭವಿಷ್ಯತ್ತಿನ ಕುರಿತು ವಿಶೇಷ ಆಸಕ್ತಿಯನ್ನು ತೋರಿಸುತ್ತೇವೆ. ಚೀನೀ ಗಾದೆಯು ಸಮಂಜಸವಾಗಿಯೇ ಹೇಳುವುದು: “ಮೂರು ದಿವಸಗಳ ಕಾರ್ಯಾದಿಗಳನ್ನು ಮುಂದಾಗಿ ಕಾಣಸಾಧ್ಯವಿರುವವನು ಸಾವಿರ ವರುಷಗಳ ವರೆಗೆ ಧನಿಕನಾಗಿರುವನು.”
ಬಹಳ ಕಾಲದಿಂದಲೂ ಕೋಟಿಗಟ್ಟಲೆ ಜನರು ತಾವು ದೈವಿಕವೆಂದು ಗ್ರಹಿಸಿರುವುದನ್ನು ವಿಚಾರಿಸುವ ಮೂಲಕ, ಭವಿಷ್ಯತ್ತಿನೊಳಗೆ ಇಣಿಕಿ ನೋಡುವ ಪ್ರಯತ್ನವನ್ನು ಮಾಡಿದ್ದಾರೆ. ಉದಾಹರಣೆಗೆ, ಪ್ರಾಚೀನ ಗ್ರೀಕರನ್ನು ತೆಗೆದುಕೊಳ್ಳಿ. ಅವರಲ್ಲಿ ಢೆಲ್ಫೈ, ಡೀಲಾಸ್ ಮತ್ತು ಡಡೋನಾ ಮುಂತಾದ ಅಸಂಖ್ಯಾತ ಪವಿತ್ರ ದೇವತಾಗುಡಿಗಳು ಇದ್ದವು ಮತ್ತು ಅವರು ಅಲ್ಲಿ ರಾಜಕೀಯ ಅಥವಾ ಸೈನಿಕ ವಿಕಸನಗಳ ಕುರಿತು ಮಾತ್ರವಲ್ಲ, ಪ್ರಯಾಣ, ವಿವಾಹ ಮತ್ತು ಮಕ್ಕಳು ಮುಂತಾದ ವೈಯಕ್ತಿಕ ವಿಷಯಗಳ ಕುರಿತು ತಮ್ಮ ದೇವತೆಗಳ ಬಳಿ ವಿಚಾರಿಸುತ್ತಿದ್ದರು. ಕೇವಲ ಅರಸರು ಮತ್ತು ಸೇನಾಧಿಪತಿಗಳು ಮಾತ್ರವೇ ಅಲ್ಲ, ಇಡೀ ಕುಲಗಳು ಮತ್ತು ಪುರರಾಜ್ಯಗಳು ಸಹ, ಇಂತಹ ಗುಡಿಗಳ ಪುರೋಹಿತರಿಗೆ ಆತ್ಮಲೋಕದಿಂದ ಸಿಗುವ ಉತ್ತರಗಳಿಂದ ಮಾರ್ಗದರ್ಶನಗಳನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದವು.
ಒಬ್ಬ ಪ್ರಾಧ್ಯಾಪಕನಿಗನುಸಾರ, ಇಂದು “ಭವಿಷ್ಯತ್ತಿನ ಅಧ್ಯಯನಕ್ಕಾಗಿ ಮೀಸಲಾಗಿರುವ ಸಂಸ್ಥೆಗಳಲ್ಲಿ ಥಟ್ಟನೆ ಸಂಖ್ಯಾಭಿವೃದ್ಧಿಯಾಗಿದೆ.” ಹೀಗಿದ್ದರೂ, ಅನೇಕರು ಪ್ರವಾದನೆಯ ಏಕಮಾತ್ರ ನಿಷ್ಕೃಷ್ಟ ಮೂಲವಾಗಿರುವ ಬೈಬಲನ್ನು ಕಡೆಗಣಿಸುವ ಆಯ್ಕೆಮಾಡಿದ್ದಾರೆ. ತಾವು ಹುಡುಕುತ್ತಿರುವ ಮಾಹಿತಿಯು ಬೈಬಲಿನ ಪ್ರವಾದನೆಗಳಲ್ಲಿ ಸಿಗುವ ಸಾಧ್ಯತೆಯಿದೆ ಎಂಬುದನ್ನು ಅವರು ಸಂಪೂರ್ಣವಾಗಿ ಅಲ್ಲಗಳೆಯುತ್ತಾರೆ. ಪ್ರಾಚೀನ ಗುಡಿಗಳ ಪುರೋಹಿತೆಯು ಕೊಟ್ಟ ದೇವತಾವಾಣಿಗಳು ಮತ್ತು ಬೈಬಲ್ ಪ್ರವಾದನೆಗಳು ಒಂದೇ ಆಗಿವೆಯೆಂದು ಹೇಳುವ ಮಟ್ಟಿಗೂ ಕೆಲವು ವಿದ್ವಾಂಸರು ಹೋಗಿದ್ದಾರೆ. ಮತ್ತು ಆಧುನಿಕ ದಿನದ ಸಂದೇಹವಾದಿಗಳು ಸಾಮಾನ್ಯವಾಗಿ ಬೈಬಲ್ ಪ್ರವಾದನೆಯ ವಿರುದ್ಧ ಪಕ್ಷಪಾತಿಗಳಾಗಿದ್ದಾರೆ.
ನೀವಾಗಿಯೇ ದಾಖಲೆಗಳನ್ನು ಪರೀಕ್ಷಿಸಿ ನೋಡುವಂತೆ ನಾವು ನಿಮ್ಮನ್ನು ಆಮಂತ್ರಿಸುತ್ತೇವೆ. ಬೈಬಲ್ ಭವಿಷ್ಯವಾಣಿಗಳು ಮತ್ತು ಮಾನವ ಪುರೋಹಿತರ ದೇವತಾವಾಣಿಗಳ ಜಾಗರೂಕ ಹೋಲಿಕೆಯು ಏನನ್ನು ತಿಳಿಸುವುದು? ನೀವು ಪ್ರಾಚೀನ ದೇವತಾವಾಣಿಗಳ ಗುಡಿಗಳಿಗಿಂತಲೂ ಹೆಚ್ಚಾಗಿ ಬೈಬಲ್ ಪ್ರವಾದನೆಗಳ ಮೇಲೆ ನಂಬಿಕೆಯಿಡಬಲ್ಲಿರೋ? ಮತ್ತು ಬೈಬಲ್ ಪ್ರವಾದನೆಗಳ ಸುತ್ತಲೂ ನಿಮ್ಮ ಜೀವಿತವನ್ನು ವಿಶ್ವಾಸಾರ್ಹ ರೀತಿಯಲ್ಲಿ ಕಟ್ಟಬಲ್ಲಿರೋ?
[ಪುಟ 3 ರಲ್ಲಿರುವ ಚಿತ್ರ]
ಬೈಬಲು ಅಲೆಕ್ಸಾಂಡರನ ಶೀಘ್ರ ವಿಜಯಗಳನ್ನು ಮುಂತಿಳಿಸಿತು
[ಕೃಪೆ]
Cortesía del Museo del Prado, Madrid, Spain
[ಪುಟ 4 ರಲ್ಲಿರುವ ಚಿತ್ರ]
ಮಹಾ ಅಲೆಕ್ಸಾಂಡರ್
[ಕೃಪೆ]
Musei Capitolini, Roma
[ಪುಟ 2 ರಲ್ಲಿರುವ ಚಿತ್ರ ಕೃಪೆ]
COVER: General Titus and Alexander the Great: Musei Capitolini, Roma