ನೀವು ಬೈಬಲ್ ಪ್ರವಾದನೆಯನ್ನು ನಂಬಸಾಧ್ಯವಿರುವ ಕಾರಣ
ವಾಯವ್ಯ ಗ್ರೀಸಿನಲ್ಲಿರುವ ಇಪೈರಸ್ನ ರಾಜನಾದ ಪಿರಸನು, ರೋಮನ್ ಸಾಮ್ರಾಜ್ಯದೊಂದಿಗೆ ದೀರ್ಘ ಸಮಯದಿಂದಲೂ ಒಂದು ಹೋರಾಟದಲ್ಲಿ ಒಳಗೂಡಿದ್ದನು. ಆ ಹೋರಾಟದ ಫಲಿತಾಂಶವನ್ನು ತಿಳಿದುಕೊಳ್ಳುವ ಕುತೂಹಲದಿಂದ ಅವನು ಢೆಲ್ಫೈಯ ದೇವತಾವಾಣಿಯ ಪುರೋಹಿತೆಯ ಬಳಿಗೆ ವಿಚಾರಿಸಲು ಹೋದನು. ಆದರೆ ಅಲ್ಲಿ ಅವನಿಗೆ ದೊರಕಿದ ಉತ್ತರವನ್ನು ಈ ಕೆಳಗಿನ ಹೇಳಿಕೆಗಳಲ್ಲಿ ಒಂದರ ಮೂಲಕ ಅರ್ಥಮಾಡಿಕೊಳ್ಳಸಾಧ್ಯವಿದೆ: (1) “ಏಕುಸನ ಪುತ್ರನಾದ ನೀನು ರೋಮನರನ್ನು ಸೋಲಿಸುವಿ ಎಂದು ನಾನು ಹೇಳುತ್ತೇನೆ. ನೀನು ಎಲ್ಲೇ ಹೋದರೂ ಅಲ್ಲಿಂದ ಹಿಂದಿರುಗಿ ಬರುವಿ, ನೀನು ಎಂದೂ ಯುದ್ಧದಲ್ಲಿ ನಾಶವಾಗಲಾರೆ.” (2) “ಏಕುಸನ ಪುತ್ರನಾದ ನಿನ್ನನ್ನು ರೋಮನರು ಜಯಿಸುವರು ಎಂದು ನಾನು ಹೇಳುತ್ತೇನೆ. ನೀನು ಎಲ್ಲೇ ಹೋದರೂ ಹಿಂದಿರುಗಿ ಬರಲಾರೆ, ನೀನು ಯುದ್ಧದಲ್ಲಿ ಸಾಯುವಿ.” ಅವನು ದೇವತಾವಾಣಿಯ ಮೊದಲ ಉತ್ತರಕ್ಕೆ ಬೆಲೆಕೊಟ್ಟನು. ಈ ಕಾರಣದಿಂದಲೇ ರೋಮ್ನ ವಿರುದ್ಧ ಯುದ್ಧಕ್ಕೆ ಹೋದನು. ಆದರೆ, ಆ ಯುದ್ಧದಲ್ಲಿ ಪಿರಸನು ಸಂಪೂರ್ಣವಾಗಿ ಸೋತುಹೋದನು.
ಇಂತಹ ಘಟನೆಗಳಿಂದ, ಪುರಾತನ ದೇವತಾವಾಣಿಗಳು ಅಸ್ಪಷ್ಟವಾಗಿವೆ ಹಾಗೂ ರಹಸ್ಯಮಯವಾಗಿವೆ ಎಂಬ ಕುಪ್ರಸಿದ್ಧಿ ಬಂತು. ಆದರೆ, ಬೈಬಲ್ ಪ್ರವಾದನೆಯ ಕುರಿತಾಗಿ ಏನು? ಬೈಬಲಿನಲ್ಲಿ ಕಂಡುಬರುವ ಪ್ರವಾದನೆಗಳು, ದೇವತಾವಾಣಿಗಳಿಗಿಂತ ಹೆಚ್ಚೇನೂ ಉತ್ತಮವಾಗಿಲ್ಲ ಎಂದು ಕೆಲವು ವಿಮರ್ಶಕರು ವಾದಮಾಡುತ್ತಾರೆ. ಬೈಬಲಿನ ಭವಿಷ್ಯವಾಣಿಗಳು, ಭವಿಷ್ಯತ್ತಿನ ಘಟನೆಗಳ ಕುರಿತಾದ ಚತುರ ಮುಂತಿಳಿಸುವಿಕೆಗಳಾಗಿದ್ದು, ಬಹಳ ಜಾಣರಾದ ಹಾಗೂ ತೀಕ್ಷ್ಣಗ್ರಹಿಕೆಯುಳ್ಳ ವ್ಯಕ್ತಿಗಳಿಂದ, ಅಂದರೆ ಯಾಜಕವರ್ಗದಿಂದ ಮುಂತಿಳಿಸಲ್ಪಟ್ಟಿದ್ದವು ಎಂದು ವಿಮರ್ಶಕರು ಊಹಿಸುತ್ತಾರೆ. ಕೇವಲ ಅನುಭವದಿಂದ ಅಥವಾ ತಮ್ಮ ವಿಶೇಷ ಸಂಬಂಧದ ಮೂಲಕ ಈ ಪುರುಷರು ಕೆಲವೊಂದು ಸನ್ನಿವೇಶಗಳ ಸಹಜ ಬೆಳವಣಿಗೆಯನ್ನು ಮುನ್ನರಿತಿದ್ದರು ಎಂದು ಭಾವಿಸಿಕೊಳ್ಳಿರಿ. ದೇವತಾವಾಣಿಗಳ ಗುಣಲಕ್ಷಣಗಳೊಂದಿಗೆ ಬೈಬಲ್ ಪ್ರವಾದನೆಗಳ ಬೇರೆ ಬೇರೆ ಗುಣಲಕ್ಷಣಗಳನ್ನು ಹೋಲಿಸಿ ನೋಡುವ ಮೂಲಕ, ನಾವು ಯೋಗ್ಯವಾದ ತೀರ್ಮಾನಕ್ಕೆ ಬರಲು ಶಕ್ತರಾಗುವೆವು.
ಭಿನ್ನತೆಗಳಿರುವ ಅಂಶಗಳು
ಅಸ್ಪಷ್ಟವಾಗಿ ಉತ್ತರ ನೀಡುವುದೇ ದೇವತಾವಾಣಿಗಳ ವಿಶೇಷತೆಯಾಗಿತ್ತು. ಉದಾಹರಣೆಗೆ, ಢೆಲ್ಫೈಯಲ್ಲಿ ಕೊಡಲ್ಪಟ್ಟ ದೇವತಾವಾಣಿಗಳು ತುಂಬ ಅಸ್ಪಷ್ಟವಾಗಿ ಹೇಳಲ್ಪಟ್ಟವು. ಆದುದರಿಂದ, ಪುರೋಹಿತರು ಅವುಗಳ ಅರ್ಥವನ್ನು ತಿಳಿಸಬೇಕಾಗುತ್ತಿತ್ತು ಹಾಗೂ ಪರಸ್ಪರ ವಿರುದ್ಧಾರ್ಥಗಳನ್ನು ಕೊಡಸಾಧ್ಯವಿರುವ ವಚನಗಳನ್ನು ರೂಪಿಸಬೇಕಾಗಿತ್ತು. ಇದಕ್ಕೆ ಸರಿಹೊಂದುವ ಒಂದು ಉದಾಹರಣೆಯು, ಲಿಡಿಯದ ರಾಜನಾದ ಕ್ರೀಸಸ್ಗೆ ಕೊಡಲ್ಪಟ್ಟ ಉತ್ತರವಾಗಿದೆ. ಅವನು ದೇವತಾವಾಣಿಯನ್ನು ಸಂಪರ್ಕಿಸಿದಾಗ, ಅವನಿಗೆ ಈ ಉತ್ತರವು ನೀಡಲ್ಪಟ್ಟಿತು: “ಒಂದುವೇಳೆ ಕ್ರೀಸಸನು ಹೇಲಸ್ ನದಿಯನ್ನು ದಾಟಿಹೋಗುವಲ್ಲಿ, ಅವನು ಒಂದು ಬಲಿಷ್ಠ ಸಾಮ್ರಾಜ್ಯವನ್ನು ನಾಶಮಾಡಿಬಿಡುವನು.” ವಾಸ್ತವದಲ್ಲಿ, ನಾಶವಾದ ಆ “ಬಲಿಷ್ಠ ಸಾಮ್ರಾಜ್ಯ”ವು ಬೇರೆ ಯಾರದ್ದೂ ಅಲ್ಲ, ಅವನ ಸ್ವಂತ ಸಾಮ್ರಾಜ್ಯವೇ ಆಗಿತ್ತು! ಕಪ್ಪದೋಕ್ಯವನ್ನು ಆಕ್ರಮಿಸಲಿಕ್ಕಾಗಿ ಕ್ರೀಸಸನು ಹೇಲಸ್ ನದಿಯನ್ನು ದಾಟಿದಾಗ, ಪಾರಸಿಯನಾದ ಕೋರೆಷನ ಕೈಗೆ ಸಿಕ್ಕಿ ಸಂಪೂರ್ಣವಾಗಿ ಸೋತುಹೋದನು.
ವಿಧರ್ಮಿ ದೇವತಾವಾಣಿಗಳಿಗೆ ವಿರುದ್ಧವಾಗಿ, ಬೈಬಲ್ ಪ್ರವಾದನೆಗಳು ನಿಷ್ಕೃಷ್ಟತೆ ಹಾಗೂ ಸ್ಪಷ್ಟತೆಗೆ ಪ್ರಸಿದ್ಧವಾಗಿವೆ. ಇದಕ್ಕೆ ಒಂದು ಉದಾಹರಣೆಯು, ಬೈಬಲಿನ ಯೆಶಾಯ ಪುಸ್ತಕದಲ್ಲಿ ದಾಖಲಿಸಲ್ಪಟ್ಟಿರುವ ಬಾಬೆಲಿನ ಪತನದ ಕುರಿತಾದ ಪ್ರವಾದನೆಯಾಗಿದೆ. ಈ ಘಟನೆಯು ಸಂಭವಿಸುವ ಸುಮಾರು 200 ವರ್ಷಗಳಿಗೆ ಮುಂಚೆಯೇ, ಮೇದ್ಯಯ-ಪಾರಸಿಯ ಸಾಮ್ರಾಜ್ಯವು ಬಾಬೆಲನ್ನು ಸಂಪೂರ್ಣವಾಗಿ ಸೋಲಿಸಿಬಿಡುವುದರ ಕುರಿತು, ಸವಿಸ್ತಾರವಾಗಿ ಮತ್ತು ನಿಷ್ಕೃಷ್ಟವಾದ ರೀತಿಯಲ್ಲಿ ಪ್ರವಾದಿಯಾದ ಯೆಶಾಯನು ಮುಂತಿಳಿಸಿದನು. ಆ ಜಯಶಾಲಿಯ ಹೆಸರು ಕೋರೆಷ ಎಂಬುದನ್ನು ಸಹ ಆ ಪ್ರವಾದನೆಯು ಮುಂತಿಳಿಸಿತು. ಅಷ್ಟುಮಾತ್ರವಲ್ಲ, ಕಂದಕದಂತಿದ್ದ ನದಿಯ ರಕ್ಷಣ ವ್ಯವಸ್ಥೆಯನ್ನು ಒಣಗಿಸಿ, ತೆರೆದ ಬಾಗಿಲುಗಳ ಮೂಲಕ ಕೋಟೆಕೊತ್ತಲಗಳುಳ್ಳ ನಗರವನ್ನು ಪ್ರವೇಶಿಸುವಂತಹ ಹಂಚಿಕೆಯನ್ನು ಸಹ ಅದು ಪ್ರಕಟಪಡಿಸಿತು. ಇದೆಲ್ಲವೂ ಮುಂತಿಳಿಸಲ್ಪಟ್ಟಂತೆಯೇ ನೆರವೇರಿತು. (ಯೆಶಾಯ 44:27–45:2) ಕಾಲಕ್ರಮೇಣ ಬಾಬೆಲ್ ಸಂಪೂರ್ಣವಾಗಿ ನಿರ್ಜನವಾಗುವುದು ಎಂಬುದನ್ನು ಸಹ ಸರಿಯಾಗಿ ಪ್ರವಾದಿಸಿತು.—ಯೆಶಾಯ 13:17-22.
ಪ್ರವಾದಿಯಾದ ಯೋನನಿಂದ ಪ್ರಕಟಿಸಲ್ಪಟ್ಟ ಈ ಎಚ್ಚರಿಕೆಯ ಸ್ಪಷ್ಟತೆಯನ್ನು ಸಹ ಪರಿಗಣಿಸಿರಿ: “ನಾಲ್ವತ್ತು ದಿನಗಳಾದ ಮೇಲೆ ನಿನೆವೆಯು ಕೆಡವಲ್ಪಡುವದು.” (ಯೋನ 3:4) ಇಲ್ಲಿ ಯಾವುದೇ ಅನಿಶ್ಚಿತತೆ ಇಲ್ಲ! ಈ ಸಂದೇಶವು ಎಷ್ಟು ಪರಿಣಾಮಕಾರಿಯೂ ನೇರವಾದದ್ದೂ ಆಗಿತ್ತೆಂದರೆ, ಆ ಕೂಡಲೆ ನಿನೆವೆಯ ಜನರು “ದೇವರಲ್ಲಿ ನಂಬಿಕೆಯಿಟ್ಟು ಉಪವಾಸವನ್ನು ಗೊತ್ತುಮಾಡಿ ಸಾರಿದರು; . . . ಎಲ್ಲರೂ ಗೋಣಿತಟ್ಟನ್ನು ಸುತ್ತಿಕೊಂಡರು.” ಅವರ ಪಶ್ಚಾತ್ತಾಪದ ಫಲಿತಾಂಶವಾಗಿ, ಆಗ ಯೆಹೋವನು ನಿನೆವೆಯ ಜನರ ಮೇಲೆ ವಿಪತ್ತನ್ನು ಬರಮಾಡಲಿಲ್ಲ.—ಯೋನ 3:5-10.
ದೇವತಾವಾಣಿಗಳನ್ನು ರಾಜಕೀಯ ಪ್ರಭಾವದ ಮಾಧ್ಯಮವಾಗಿ ಉಪಯೋಗಿಸುತ್ತಿದ್ದರು. ಕೆಲವೊಮ್ಮೆ ರಾಜರು ಹಾಗೂ ಸೇನಾಧಿಪತಿಗಳು, ತಮ್ಮ ವೈಯಕ್ತಿಕ ಅಭಿರುಚಿಗಳನ್ನು ಹಾಗೂ ವ್ಯವಹಾರಗಳನ್ನು ಕಾರ್ಯರೂಪಕ್ಕೆ ತರಲಿಕ್ಕಾಗಿ, ದೇವತಾವಾಣಿಯಲ್ಲಿ ತಮಗೆ ಇಷ್ಟವಾಗುವ ಅರ್ಥವಿವರಣೆಯನ್ನು ಅನೇಕಸಲ ಉಲ್ಲೇಖಿಸುತ್ತಾ, ಅದಕ್ಕೆ “ದೈವಿಕ ಸೋಗ”ನ್ನು ಕೊಡುತ್ತಿದ್ದರು. ಆದರೆ, ದೇವರ ಪ್ರವಾದನಾ ಸಂದೇಶಗಳ ವಿಷಯದಲ್ಲಿ ಹೇಳುವಾಗ, ಅವು ಯಾವುದೇ ರೀತಿಯ ವೈಯಕ್ತಿಕ ಪರಿಗಣನೆಗಳಿಲ್ಲದೇ ಕೊಡಲ್ಪಡುತ್ತಿದ್ದವು.
ದೃಷ್ಟಾಂತಕ್ಕಾಗಿ: ಯೆಹೋವನ ಪ್ರವಾದಿಯಾದ ನಾತಾನನು, ತಪ್ಪುಮಾಡಿದಂತಹ ರಾಜ ದಾವೀದನಿಗೆ ತಿದ್ದುಪಾಟನ್ನು ನೀಡಲು ಹಿಂಜರಿಯಲಿಲ್ಲ. (2 ಸಮುವೇಲ 12:1-12) IIನೆಯ ಯಾರೊಬ್ಬಾಮನು ಇಸ್ರಾಯೇಲಿನ ಹತ್ತು-ಕುಲ ರಾಜ್ಯಗಳ ಮೇಲೆ ಅಧಿಕಾರ ನಡಿಸುತ್ತಿದ್ದ ಸಮಯದಲ್ಲಿ, ಆ ದಂಗೆಕೋರ ರಾಜನು ಹಾಗೂ ಅವನ ಬೆಂಬಲಿಗರು ಧರ್ಮಭ್ರಷ್ಟರಾಗಿ, ದೇವರಿಗೆ ಅಗೌರವವನ್ನು ತರುವಂತಹ ನಡತೆಯನ್ನು ತೋರಿಸಿದ್ದರಿಂದ, ಪ್ರವಾದಿಗಳಾದ ಹೋಶೇಯ ಹಾಗೂ ಆಮೋಸರು ಅವರನ್ನು ನಿರ್ದಯವಾಗಿ ಖಂಡಿಸಿದರು. (ಹೋಶೇಯ 5:1-7; ಆಮೋಸ 2:6-8) ವಿಶೇಷವಾಗಿ ಪ್ರವಾದಿಯಾದ ಆಮೋಸನ ಬಾಯಿಂದ ಯೆಹೋವನು ಆ ರಾಜನಿಗೆ ಕೊಟ್ಟ ಎಚ್ಚರಿಕೆಯು ತುಂಬ ಕಠೋರವಾಗಿತ್ತು: “ನಾನು ಕತ್ತಿಹಿರಿದು ಯಾರೊಬ್ಬಾಮನ ಮನೆತನಕ್ಕೆ ವಿರುದ್ಧವಾಗಿ ಏಳುವೆನು.” (ಆಮೋಸ 7:9) ಯಾರೊಬ್ಬಾಮನ ಮನೆತನವು ನಾಶವಾಯಿತು.—1 ಅರಸು 15:25-30; 2 ಪೂರ್ವಕಾಲವೃತ್ತಾಂತ 13:20.
ಹಣವನ್ನು ಪಡೆದುಕೊಂಡು ಅಧಿಕಾಂಶ ದೇವತಾವಾಣಿಗಳನ್ನು ತಿಳಿಸಲಾಗುತ್ತಿತ್ತು. ಯಾರು ಹೆಚ್ಚು ಹಣವನ್ನು ಕೊಟ್ಟರೋ ಅವರಿಗೆ ಇಷ್ಟವಾದ ದೇವತಾವಾಣಿಯನ್ನು ತಿಳಿಸಲಾಗುತ್ತಿತ್ತು. ಢೆಲ್ಫೈಯಲ್ಲಿರುವ ದೇವತಾವಾಣಿಯನ್ನು ಸಂಪರ್ಕಿಸಿದವರು, ನಿಷ್ಪ್ರಯೋಜಕ ಮಾಹಿತಿಗಾಗಿ ದುಬಾರಿ ಬೆಲೆಯನ್ನು ತೆತ್ತರು. ಮತ್ತು ಹೀಗೆ ಅಪೊಲೋ ದೇವತೆಯ ದೇವಾಲಯವನ್ನು ಹಾಗೂ ಇನ್ನಿತರ ಮಂದಿರಗಳನ್ನು ಅವರು ಅಪಾರ ಧನಸಂಪತ್ತಿನಿಂದ ತುಂಬಿಸಿದರು. ಇದಕ್ಕೆ ವಿರುದ್ಧವಾಗಿ, ಬೈಬಲ್ ಪ್ರವಾದನೆಗಳು ಹಾಗೂ ಎಚ್ಚರಿಕೆಗಳು ಕೊಡಲ್ಪಡುವಾಗ, ಹಣವನ್ನು ತೆಗೆದುಕೊಳ್ಳಲಾಗುತ್ತಿರಲಿಲ್ಲ ಮತ್ತು ಯಾವುದೇ ರೀತಿಯ ಪಕ್ಷಪಾತವು ತೋರಿಸಲ್ಪಡುತ್ತಿರಲಿಲ್ಲ. ಹೀಗೆ ಒಬ್ಬ ವ್ಯಕ್ತಿಗೆ ಯಾವುದೇ ಸ್ಥಾನಮಾನವಿರಲಿ ಅಥವಾ ಎಷ್ಟೇ ಧನಸಂಪತ್ತಿರಲಿ, ಬೈಬಲ್ ಪ್ರವಾದನೆಗಳು ಹಾಗೂ ಎಚ್ಚರಿಕೆಗಳು ನಿಷ್ಪಕ್ಷಪಾತವಾಗಿ ಕೊಡಲ್ಪಡುತ್ತಿದ್ದವು. ಏಕೆಂದರೆ, ಒಬ್ಬ ನಿಜ ಪ್ರವಾದಿಗೆ ಲಂಚವನ್ನು ಕೊಡಸಾಧ್ಯವಿರಲಿಲ್ಲ. ಪ್ರವಾದಿಯೂ ನ್ಯಾಯಸ್ಥಾಪಕನೂ ಆಗಿದ್ದ ಸಮುವೇಲನು ನಿರ್ವಂಚನೆಯಿಂದ ಹೀಗೆ ಕೇಳಸಾಧ್ಯವಿತ್ತು: “ನಾನು . . . ಯಾರನ್ನಾದರೂ ವಂಚಿಸಿ ಪೀಡಿಸಿದ್ದೂ ಲಂಚ ತೆಗೆದುಕೊಂಡು ಕುರುಡನಂತೆ ತೀರ್ಪುಮಾಡಿದ್ದೂ ಉಂಟೋ?”—1 ಸಮುವೇಲ 12:3.
ದೇವತಾವಾಣಿಗಳು ನಿರ್ದಿಷ್ಟ ಸ್ಥಳಗಳಲ್ಲಿ ಮಾತ್ರ ಹೇಳಲ್ಪಡುತ್ತಿದ್ದುದರಿಂದ, ಉತ್ತರಗಳನ್ನು ಪಡೆದುಕೊಳ್ಳಲಿಕ್ಕಾಗಿ ಅಲ್ಲಿಗೆ ಪ್ರಯಾಣಿಸಲು ವ್ಯಕ್ತಿಯೊಬ್ಬನು ಬಹಳ ಕಷ್ಟಪಡಬೇಕಾಗಿತ್ತು. ಆ ಸ್ಥಳಗಳಲ್ಲಿ ಹೆಚ್ಚಿನವನ್ನು ತಲಪುವುದು ತುಂಬ ಕಷ್ಟಕರವಾಗಿದ್ದುದರಿಂದ, ಸಾಧಾರಣ ವ್ಯಕ್ತಿಯೊಬ್ಬನು ಅಲ್ಲಿಗೆ ಹೋಗಲು ಸಾಧ್ಯವಿರಲಿಲ್ಲ. ಏಕೆಂದರೆ, ಮೌಂಟ್ ಟೊಮೊರಸ್ನ ಡಡೋನಾದಲ್ಲಿ ಹಾಗೂ ಪರ್ವತಮಯವಾದ ಮಧ್ಯ ಗ್ರೀಸ್ನ ಢೆಲ್ಫೈಯಂತಹ ಸ್ಥಳಗಳಲ್ಲಿ ಅವು ಇದ್ದವು. ಸಾಮಾನ್ಯವಾಗಿ, ಕೇವಲ ಐಶ್ವರ್ಯವಂತರು ಹಾಗೂ ಬಲಶಾಲಿಗಳು ಮಾತ್ರ ಅಂತಹ ಗುಡಿಗಳಲ್ಲಿರುವ ದೇವದೇವತೆಗಳನ್ನು ವಿಚಾರಿಸಸಾಧ್ಯವಿತ್ತು. ಅಷ್ಟುಮಾತ್ರವಲ್ಲ, ವರ್ಷದ ಕೆಲವು ದಿನಗಳಲ್ಲಿ ಮಾತ್ರ ಆ “ದೇವದೇವತೆಗಳ ಸಂಕಲ್ಪ”ವನ್ನು ಪ್ರಕಟಪಡಿಸಲಾಗುತ್ತಿತ್ತು. ಇದಕ್ಕೆ ತದ್ವಿರುದ್ಧವಾಗಿ, ಜನರು ತಿಳಿದುಕೊಳ್ಳಬೇಕಾಗಿದ್ದ ಪ್ರವಾದನೆಗಳನ್ನು ತಿಳಿಯಪಡಿಸಲಿಕ್ಕಾಗಿ ಯೆಹೋವ ದೇವರು ತನ್ನ ಪ್ರವಾದನಾ ಸಂದೇಶವಾಹಕರನ್ನು ನೇರವಾಗಿ ಅವರ ಬಳಿಗೆ ಕಳುಹಿಸಿದನು. ಉದಾಹರಣೆಗಾಗಿ, ಯೆಹೂದ್ಯರು ಬಾಬೆಲಿನಲ್ಲಿ ದೇಶಭ್ರಷ್ಟರಾಗಿದ್ದಾಗ, ಕಡಿಮೆಪಕ್ಷ ಮೂವರು ಪ್ರವಾದಿಗಳು—ಯೆರೂಸಲೇಮಿನಲ್ಲಿ ಯೆರೆಮೀಯನು, ದೇಶಭ್ರಷ್ಟರ ನಡುವೆ ಯೆಹೆಜ್ಕೇಲನು, ಮತ್ತು ಬಾಬೆಲ್ ಸಾಮ್ರಾಜ್ಯದ ರಾಜಧಾನಿಯಲ್ಲಿ ದಾನಿಯೇಲನು—ತನ್ನ ಜನರ ನಡುವೆ ಇರುವಂತೆ ದೇವರು ಏರ್ಪಾಡನ್ನು ಮಾಡಿದ್ದನು.—ಯೆರೆಮೀಯ 1:1, 2; ಯೆಹೆಜ್ಕೇಲ 1:1; ದಾನಿಯೇಲ 2:48.
ಸಾಮಾನ್ಯವಾಗಿ ದೇವತಾವಾಣಿಗಳನ್ನು ಖಾಸಗಿಯಾಗಿ ಕೊಡಲಾಗುತ್ತಿತ್ತು. ಏಕೆಂದರೆ, ಆ ಉತ್ತರಗಳನ್ನು ಪಡೆದುಕೊಳ್ಳುವವರು ತಮ್ಮ ಸ್ವಂತ ಲಾಭಕ್ಕೋಸ್ಕರ ಅದರ ಅರ್ಥವಿವರಣೆಯನ್ನು ದುರುಪಯೋಗಿಸಿಕೊಳ್ಳಸಾಧ್ಯವಿತ್ತು. ಇದಕ್ಕೆ ವಿರುದ್ಧವಾಗಿ, ಅನೇಕವೇಳೆ ಬೈಬಲ್ ಪ್ರವಾದನೆಗಳು, ಎಲ್ಲರೂ ಕೇಳಿಸಿಕೊಳ್ಳಸಾಧ್ಯವಾಗುವಂತೆ ಮತ್ತು ಎಲ್ಲರೂ ಅದರ ಅರ್ಥಸೂಚನೆಗಳನ್ನು ತಿಳಿದುಕೊಳ್ಳುವಂತೆ ಬಹಿರಂಗವಾಗಿ ತಿಳಿಸಲ್ಪಡುತ್ತಿದ್ದವು. ತಾನು ತಿಳಿಸುವಂತಹ ಸಂದೇಶವು ಯೆರೂಸಲೇಮ್ ಪಟ್ಟಣದ ಮುಖಂಡರು ಹಾಗೂ ನಿವಾಸಿಗಳಿಗೆ ಜನಪ್ರಿಯವಾಗಿರಲಿಲ್ಲ ಎಂಬುದು ಪ್ರವಾದಿಯಾದ ಯೆರೆಮೀಯನಿಗೆ ಗೊತ್ತಿದ್ದರೂ, ಅವನು ಅಲ್ಲಿ ಅನೇಕ ಬಾರಿ ಬಹಿರಂಗವಾಗಿ ಮಾತಾಡಿದನು.—ಯೆರೆಮೀಯ 7:1, 2.
ಇಂದು, ದೇವತಾವಾಣಿಗಳನ್ನು ಪುರಾತನ ಇತಿಹಾಸದ ಒಂದು ಭಾಗವಾಗಿ ಪರಿಗಣಿಸಲಾಗುತ್ತದೆ. ನಾವು ಜೀವಿಸುತ್ತಿರುವ ಈ ಸಂಕಷ್ಟಕರ ಸಮಯದಲ್ಲಿ ಅವುಗಳಿಂದ ಜನರಿಗೆ ಯಾವುದೇ ವ್ಯಾವಹಾರಿಕ ಪ್ರಯೋಜನವಿಲ್ಲ. ನಮ್ಮ ದಿನ ಅಥವಾ ನಮ್ಮ ಭವಿಷ್ಯತ್ತಿನೊಂದಿಗೆ ಅಂತಹ ದೇವತಾವಾಣಿಗಳಿಗೆ ಯಾವುದೇ ಸಂಬಂಧವಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ಬೈಬಲ್ ಪ್ರವಾದನೆಗಳು, ‘ಸಜೀವವೂ ಕಾರ್ಯಸಾಧಕವೂ ಆಗಿರುವ ದೇವರ ವಾಕ್ಯದ’ ಭಾಗವಾಗಿವೆ. (ಇಬ್ರಿಯ 4:12) ಈಗಾಗಲೇ ನೆರವೇರಿರುವ ಬೈಬಲ್ ಪ್ರವಾದನೆಗಳು, ಜನರೊಂದಿಗೆ ಯೆಹೋವನ ವ್ಯವಹಾರಗಳ ಕುರಿತು ಒಂದು ನಮೂನೆಯನ್ನು ಒದಗಿಸುತ್ತವೆ, ಮತ್ತು ಆತನ ಉದ್ದೇಶಗಳು ಹಾಗೂ ವ್ಯಕ್ತಿತ್ವದ ಅತ್ಯಗತ್ಯ ವೈಶಿಷ್ಟ್ಯಗಳನ್ನು ಪ್ರಕಟಪಡಿಸುತ್ತವೆ. ಅಷ್ಟುಮಾತ್ರವಲ್ಲ, ಪ್ರಮುಖ ಬೈಬಲ್ ಪ್ರವಾದನೆಗಳು ಸಮೀಪ ಭವಿಷ್ಯತ್ತಿನಲ್ಲಿ ನೆರವೇರಲಿಕ್ಕಿವೆ. ಮುಂದೆ ಏನು ಸಂಭವಿಸಲಿದೆ ಎಂಬುದನ್ನು ವರ್ಣಿಸುತ್ತಾ ಅಪೊಸ್ತಲ ಪೇತ್ರನು ಬರೆದುದು: “ನಾವು ದೇವರ ವಾಗ್ದಾನವನ್ನು ನಂಬಿ ನೂತನಾಕಾಶಮಂಡಲ [ಸ್ವರ್ಗೀಯ ಮೆಸ್ಸೀಯ ರಾಜ್ಯ]ವನ್ನೂ ನೂತನಭೂಮಂಡಲ [ನೀತಿವಂತ ಮಾನವ ಸಮಾಜ]ವನ್ನೂ ಎದುರುನೋಡುತ್ತಾ ಇದ್ದೇವೆ; ಅವುಗಳಲ್ಲಿ ನೀತಿಯು ವಾಸವಾಗಿರುವದು.”—2 ಪೇತ್ರ 3:13.
ಬೈಬಲ್ ಪ್ರವಾದನೆ ಹಾಗೂ ಸುಳ್ಳು ಧರ್ಮದ ದೇವತಾವಾಣಿಗಳ ಈ ಸಂಕ್ಷಿಪ್ತ ಹೋಲಿಕೆಯು, ದ ಗ್ರೇಟ್ ಐಡಿಯಾಸ್ ಎಂಬ ಶೀರ್ಷಿಕೆಯಿರುವ ಪುಸ್ತಕದಲ್ಲಿ ವ್ಯಕ್ತಪಡಿಸುವಂತಹದ್ದೇ ತೀರ್ಮಾನಕ್ಕೆ ನೀವು ಸಹ ಬರುವಂತೆ ನಿಮ್ಮನ್ನು ಪ್ರಚೋದಿಸಬಹುದು. ಅದು ಹೀಗೆ ಹೇಳುತ್ತದೆ: “ಮರ್ತ್ಯ ಮಾನವನು ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ವಿಷಯದಲ್ಲಿ ಹೇಳುವುದಾದರೆ, ಹೀಬ್ರು ಪ್ರವಾದಿಗಳು ಅದರಲ್ಲಿ ಅಗ್ರಗಣ್ಯರಾಗಿ ಕಂಡುಬರುತ್ತಾರೆ. ಕಣಿಹೇಳುವ ವಿಧರ್ಮಿಗಳ ಹಾಗೆ . . . ಈ ಪ್ರವಾದಿಗಳು ದೇವರ ರಹಸ್ಯಗಳನ್ನು ಅರ್ಥಮಾಡಿಕೊಳ್ಳಲಿಕ್ಕಾಗಿ ಮಾಟಮಂತ್ರಗಳನ್ನು ಉಪಯೋಗಿಸುವ ಅಗತ್ಯವಿರಲಿಲ್ಲ. . . . ದೇವತಾವಾಣಿಗಳ ಪ್ರವಾದನಾ ಮಾತುಗಳಿಗೆ ವಿರುದ್ಧವಾಗಿ, ಈ ಪ್ರವಾದಿಗಳ ಪ್ರವಾದನಾ ಮಾತುಗಳು ತೀರ ಸ್ಪಷ್ಟವಾಗಿದ್ದವು. ದೇವರು ಭವಿಷ್ಯತ್ತಿಗಾಗಿ ಮಾಡಿರುವ ಯೋಜನೆಯನ್ನು ರಹಸ್ಯವಾಗಿಡುವುದಿಲ್ಲ, ಬದಲಾಗಿ ಅದನ್ನು ಪ್ರಕಟಪಡಿಸುವುದೇ ಅವರ ಉದ್ದೇಶವಾಗಿತ್ತು. ಏಕೆಂದರೆ ಭವಿಷ್ಯತ್ತಿನಲ್ಲಿ ಏನು ಸಂಭವಿಸಲಿದೆ ಎಂಬುದನ್ನು ಜನರು ತಿಳಿದುಕೊಳ್ಳುವಂತೆ ದೇವರೇ ಬಯಸುತ್ತಾನೆ.”
ನೀವು ಬೈಬಲ್ ಪ್ರವಾದನೆಯನ್ನು ನಂಬುವಿರೋ?
ನೀವು ಬೈಬಲ್ ಪ್ರವಾದನೆಯನ್ನು ನಂಬಸಾಧ್ಯವಿದೆ. ವಾಸ್ತವದಲ್ಲಿ, ನೀವು ಯೆಹೋವನನ್ನು ಹಾಗೂ ಆತನ ಪ್ರವಾದನ ವಾಕ್ಯವನ್ನು ನಿಮ್ಮ ಜೀವಿತದ ಕೇಂದ್ರಬಿಂದುವಾಗಿ ಮಾಡಿಕೊಳ್ಳಸಾಧ್ಯವಿದೆ. ಬೈಬಲ್ ಪ್ರವಾದನೆಯು, ಈಗಾಗಲೇ ನೆರವೇರಿರುವ ಭವಿಷ್ಯನುಡಿಗಳ ಒಂದು ಹಳೆಯ ದಾಖಲೆಯಾಗಿಲ್ಲ. ಶಾಸ್ತ್ರವಚನಗಳಲ್ಲಿ ಕಂಡುಬರುವ ಅನೇಕ ಪ್ರವಾದನೆಗಳು, ಈಗ ನೆರವೇರುತ್ತಿವೆ ಅಥವಾ ಸಮೀಪ ಭವಿಷ್ಯತ್ತಿನಲ್ಲಿ ನೆರವೇರಲಿವೆ. ಗತಕಾಲವನ್ನು ಪರಿಗಣಿಸುವಲ್ಲಿ, ಈ ಪ್ರವಾದನೆಗಳು ಸಹ ನೆರವೇರುವವು ಎಂಬ ತೀರ್ಮಾನಕ್ಕೆ ನಾವು ಬರಬಲ್ಲೆವು. ಇಂತಹ ಪ್ರವಾದನೆಗಳು ನಮ್ಮ ಸಮಯಗಳ ಮೇಲೆ ಗಮನವನ್ನು ಕೇಂದ್ರೀಕರಿಸುವುದರಿಂದ ಹಾಗೂ ನಮ್ಮ ಭವಿಷ್ಯತ್ತು ಇದರಲ್ಲಿ ಒಳಗೂಡಿರುವುದರಿಂದ, ನಾವು ಇವುಗಳನ್ನು ಗಂಭೀರವಾಗಿ ಪರಿಗಣಿಸುವುದು ನಮಗೆ ಪ್ರಯೋಜನಕರ.
ಯೆಶಾಯ 2:2, 3ರಲ್ಲಿ ಕಂಡುಬರುವ ಬೈಬಲ್ ಪ್ರವಾದನೆಯನ್ನು ನೀವು ಖಂಡಿತವಾಗಿಯೂ ನಂಬಸಾಧ್ಯವಿದೆ: “ಅಂತ್ಯಕಾಲದಲ್ಲಿ ಯೆಹೋವನ ಮಂದಿರದ ಬೆಟ್ಟವು ಗುಡ್ಡಬೆಟ್ಟಗಳಿಗಿಂತ ಉನ್ನತೋನ್ನತವಾಗಿ ಬೆಳೆದು ನೆಲೆಗೊಳ್ಳುವದು; . . . ಹೊರಟುಬಂದ ಬಹು ಜನಾಂಗದವರು—ಬನ್ನಿರಿ, ಯೆಹೋವನ ಪರ್ವತಕ್ಕೆ, ಯಾಕೋಬ್ಯರ ದೇವರ ಮಂದಿರಕ್ಕೆ, ಹೋಗೋಣ! ಆತನು ತನ್ನ ಮಾರ್ಗಗಳ ವಿಷಯವಾಗಿ ನಮಗೆ ಬೋಧನೆ ಮಾಡುವನು, ನಾವು ಆತನ ದಾರಿಗಳಲ್ಲಿ ನಡೆಯುವೆವು.” ಇಂದು, ಲಕ್ಷಾಂತರ ಜನರು ಯೆಹೋವನ ಉನ್ನತ ಆರಾಧನೆಯನ್ನು ಮನಃಪೂರ್ವಕವಾಗಿ ಸ್ವೀಕರಿಸುತ್ತಿದ್ದಾರೆ ಮತ್ತು ಆತನ ಮಾರ್ಗಗಳಲ್ಲಿ ನಡೆಯಲು ಕಲಿಯುತ್ತಿದ್ದಾರೆ. ದೇವರ ಮಾರ್ಗಗಳಲ್ಲಿ ನಡೆಯಸಾಧ್ಯವಾಗುವಂತೆ, ಆತನ ಮಾರ್ಗಗಳ ಕುರಿತು ಹೆಚ್ಚನ್ನು ಕಲಿಯಲು ಹಾಗೂ ಆತನ ಕುರಿತಾದ ಹಾಗೂ ಆತನ ಉದ್ದೇಶಗಳ ಕುರಿತಾದ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳಲಿಕ್ಕಾಗಿರುವ ಅವಕಾಶವನ್ನು ನೀವು ಯೋಗ್ಯವಾಗಿ ಉಪಯೋಗಿಸಿಕೊಳ್ಳುವಿರೋ?—ಯೋಹಾನ 17:3.
ಬೈಬಲಿನ ಇನ್ನೊಂದು ಪ್ರವಾದನೆಯ ನೆರವೇರಿಕೆಯು, ನಾವು ಇನ್ನೂ ಹೆಚ್ಚು ತುರ್ತಿನಿಂದ ಕ್ರಿಯೆಗೈಯುವುದನ್ನು ಅಗತ್ಯಪಡಿಸುತ್ತದೆ. ಭವಿಷ್ಯತ್ತಿನ ಕುರಿತು ಕೀರ್ತನೆಗಾರನು ಪ್ರವಾದನಾತ್ಮಕವಾಗಿ ಹಾಡಿದ್ದು: “ಕೆಡುಕರು ತೆಗೆದುಹಾಕಲ್ಪಡುವರು . . . ಇನ್ನು ಸ್ವಲ್ಪಕಾಲದೊಳಗೆ ದುಷ್ಟನು ಕಾಣಿಸದೆ ಹೋಗುವನು.” (ಕೀರ್ತನೆ 37:9, 10) ಬೈಬಲ್ ಪ್ರವಾದನೆಗಳನ್ನು ಕಡೆಗಣಿಸಿ ಮಾತಾಡುವವರನ್ನು ಒಳಗೊಂಡು, ಎಲ್ಲ ದುಷ್ಟರ ಮೇಲೆ ಬರಲಿಕ್ಕಿರುವ ವಿನಾಶದಿಂದ ತಪ್ಪಿಸಿಕೊಳ್ಳಲು ಯಾವುದರ ಅಗತ್ಯವಿದೆಯೆಂದು ನೀವು ಭಾವಿಸುತ್ತೀರಿ? ಅದೇ ಕೀರ್ತನೆಯು ಉತ್ತರಿಸುವುದು: “ಯೆಹೋವನನ್ನು ನಿರೀಕ್ಷಿಸುವವರೇ ದೇಶವನ್ನು ಅನುಭವಿಸುವರು.” (ಕೀರ್ತನೆ 37:9) ಯೆಹೋವನನ್ನು ನಿರೀಕ್ಷಿಸುವುದು ಅಂದರೆ, ಆತನ ವಾಗ್ದಾನಗಳಲ್ಲಿ ಸಂಪೂರ್ಣವಾಗಿ ಭರವಸೆಯಿಡುವುದು ಮತ್ತು ಆತನ ಮಟ್ಟಗಳಿಗನುಸಾರ ನಮ್ಮ ಜೀವಿತಗಳನ್ನು ಹೊಂದಿಸಿಕೊಳ್ಳುವುದೇ ಆಗಿದೆ.—ಜ್ಞಾನೋಕ್ತಿ 2:21, 22.
ಯೆಹೋವನಲ್ಲಿ ನಿರೀಕ್ಷೆಯಿಡುವವರು ಭೂಮಿಗೆ ವಾರಸುದಾರರಾಗುವಾಗ, ಅವರ ಜೀವನವು ಹೇಗಿರುವುದು? ವಿಧೇಯ ಮಾನವಕುಲಕ್ಕೆ ವೈಭವಯುತವಾದ ಒಂದು ಭವಿಷ್ಯತ್ತು ಕಾದಿರಿಸಲ್ಪಟ್ಟಿದೆ ಎಂದು ಬೈಬಲ್ ಪ್ರವಾದನೆಗಳು ತಿಳಿಸುತ್ತವೆ. ಪ್ರವಾದಿಯಾದ ಯೆಶಾಯನು ಬರೆದುದು: “ಆಗ ಕುರುಡರ ಕಣ್ಣು ಕಾಣುವದು, ಕಿವುಡರ ಕಿವಿ ಕೇಳುವದು, ಕುಂಟನು ಜಿಂಕೆಯಂತೆ ಹಾರುವನು, ಮೂಕನ ನಾಲಿಗೆಯು ಹರ್ಷಧ್ವನಿಗೈಯುವದು; ಅರಣ್ಯದಲ್ಲಿ ಒರತೆಗಳು ಒಡೆಯುವವು, ಒಣನೆಲದಲ್ಲಿ ನದಿಗಳು ಹುಟ್ಟಿ ಹರಿಯುವವು.” (ಯೆಶಾಯ 35:5, 6) ಆಶ್ವಾಸನೆಯನ್ನು ನೀಡುವಂತಹ ಈ ಮಾತುಗಳನ್ನು ಅಪೊಸ್ತಲ ಯೋಹಾನನು ಬರೆದನು: “[ಯೆಹೋವನು] ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು. . . . ಆಗ ಸಿಂಹಾಸನದ ಮೇಲೆ ಕೂತಿದ್ದವನು—ಇದನ್ನು ಬರೆ; ಈ ಮಾತುಗಳು ನಂಬತಕ್ಕವುಗಳೂ ಸತ್ಯವಾದವುಗಳೂ ಆಗಿವೆ ಎಂದು ಹೇಳಿದನು.”—ಪ್ರಕಟನೆ 21:4, 5.
ಬೈಬಲು ವಿಶ್ವಾಸಾರ್ಹ ಪ್ರವಾದನೆಯ ಒಂದು ಗ್ರಂಥವಾಗಿದೆ ಎಂಬುದು ಯೆಹೋವನ ಸಾಕ್ಷಿಗಳಿಗೆ ಗೊತ್ತಿದೆ. ಮತ್ತು ಅಪೊಸ್ತಲ ಪೇತ್ರನ ಈ ಬುದ್ಧಿವಾದವನ್ನು ಅವರು ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತಾರೆ: “ಇದಲ್ಲದೆ ಪ್ರವಾದನವಾಕ್ಯವು ನಮಗೆ ಮತ್ತೂ ದೃಢವಾಗಿದೆ. ನಿಮ್ಮ ಹೃದಯದೊಳಗೆ ಬೆಳ್ಳಿಯು ಮೂಡಿ ಅರುಣೋದಯವಾಗುವ ಪರ್ಯಂತರ ಅದನ್ನು ಕತ್ತಲೆಯಾದ ಸ್ಥಳದಲ್ಲಿ ಪ್ರಕಾಶಿಸುವ ದೀಪವೆಂದೆಣಿಸಿ ಅದಕ್ಕೆ ಲಕ್ಷಕೊಡುವದೇ ಒಳ್ಳೇದು.” (2 ಪೇತ್ರ 1:19) ಭವಿಷ್ಯತ್ತಿಗಾಗಿ ಬೈಬಲ್ ಪ್ರವಾದನೆಯು ಒದಗಿಸುವ ಭವ್ಯ ಪ್ರತೀಕ್ಷೆಗಳಿಂದ ನೀವು ಪ್ರೋತ್ಸಾಹವನ್ನು ಪಡೆದುಕೊಳ್ಳುವಂತಾಗಲಿ ಎಂಬುದೇ ನಮ್ಮ ನಿಜ ಹಾರೈಕೆಯಾಗಿದೆ!
[ಪುಟ 6 ರಲ್ಲಿರುವ ಚಿತ್ರ]
ಢೆಲ್ಫೈಯ ದೇವತಾವಾಣಿ ಗುಡಿ ಪುರಾತನ ಗ್ರೀಸ್ನಲ್ಲಿ ತುಂಬ ಹೆಸರುವಾಸಿಯಾಗಿತ್ತು.
ಪುರೋಹಿತೆಯು ತ್ರಿಪಾದಗಳುಳ್ಳ ಒಂದು ಪೀಠದ ಮೇಲೆ ಕುಳಿತುಕೊಂಡು ತನ್ನ ದೇವತಾವಾಣಿಗಳನ್ನು ತಿಳಿಸುತ್ತಿದ್ದಳು
[ಚಿತ್ರಗಳು]
ಅಮಲೇರಿಸುವಂತಹ ಹೊಗೆಯು, ಈ ಪುರೋಹಿತೆಯು ಮೈಮರೆಯುವಂತೆ ಮಾಡುತ್ತಿತ್ತು
ಅವಳು ಉಚ್ಚರಿಸಿದ ನುಡಿಗಳು, ಅಪೊಲೋ ದೇವತೆಯಿಂದ ಬಂದ ಪ್ರಕಟನೆಗಳನ್ನು ಒಳಗೊಂಡಿತ್ತೆಂದು ನಂಬಲಾಗುತ್ತಿತ್ತು
[ಕೃಪೆ]
ತ್ರಿಪಾದಗಳುಳ್ಳ ಪೀಠ: From the book Dictionary of Greek and Roman Antiquities; Apollo: The Complete Encyclopedia of Illustration/J. G. Heck
[ಪುಟ 7 ರಲ್ಲಿರುವ ಚಿತ್ರ]
ಢೆಲ್ಫೈಯಲ್ಲಿ ಹೇಳಲಾಗುತ್ತಿದ್ದ ದೇವತಾವಾಣಿಗಳು ಖಂಡಿತವಾಗಿಯೂ ವಿಶ್ವಾಸಾರ್ಹವಾಗಿರಲಿಲ್ಲ
[ಕೃಪೆ]
Delphi, Greece
[ಪುಟ 8 ರಲ್ಲಿರುವ ಚಿತ್ರ]
ಹೊಸ ಲೋಕದ ಕುರಿತಾದ ಬೈಬಲ್ ಪ್ರವಾದನೆಯನ್ನು ನೀವು ಸಂಪೂರ್ಣವಾಗಿ ನಂಬಸಾಧ್ಯವಿದೆ