ನೀವು ಕೊಟ್ಟ ಮಾತುಗಳನ್ನು ಏಕೆ ಪಾಲಿಸಬೇಕು?
“ಕೆಲವೇ ಮಾತುಗಳನ್ನು ಕೊಡುವ ಮನುಷ್ಯನಿಗೇ ಮತಹಾಕಿರಿ; ಅವನಿಂದ ನಿಮಗೆ ಕಡಿಮೆ ನಿರಾಶೆಯಾಗುವುದು,” ಎಂದು ಅಮೆರಿಕದ ಅಧ್ಯಕ್ಷರುಗಳ ಮಾಜಿ ಸಲಹೆಗಾರ ಬರ್ನರ್ಡ್ ಬರೂಕ್ ಹೇಳಿದರು. ಇಂದಿನ ಲೋಕದಲ್ಲಿ ಕೊಟ್ಟ ಮಾತಿಗೆ ತಪ್ಪುವುದು ಸಾಮಾನ್ಯವಾದ ವಿಷಯವಾಗಿರುವಂತೆ ತೋರುತ್ತದೆ. ವಿವಾಹದ ಪ್ರತಿಜ್ಞೆಗಳ ವಿಷಯದಲ್ಲಿ, ವ್ಯಾಪಾರದ ಒಪ್ಪಂದಗಳಲ್ಲಿ, ಅಥವಾ ಮಕ್ಕಳೊಂದಿಗೆ ಹೆಚ್ಚು ಸಮಯವನ್ನು ಕಳೆಯಲು ಕೊಟ್ಟಿರುವ ಮಾತುಗಳ ವಿಷಯದಲ್ಲಿಯೂ ಇದು ಸತ್ಯವಾಗಿರುತ್ತದೆ. “ಕೊಟ್ಟ ಮಾತಿನಂತೆ ನಡೆಯುತ್ತಾನೆ” ಎಂದು ಇಂದು ಯಾರ ಕುರಿತೂ ಹೇಳಸಾಧ್ಯವಿಲ್ಲ.
ಅನೇಕ ಜನರು ಮಾತುಗಳನ್ನು ಕೊಡುವಾಗ, ಅವುಗಳನ್ನು ಪಾಲಿಸಬೇಕೆಂಬ ಉದ್ದೇಶ ಅವರಿಗಿರುವುದಿಲ್ಲ. ಇನ್ನಿತರರು ದುಡುಕಿ, ತಾವು ಪಾಲಿಸಲು ಸಾಧ್ಯವಿರದಂತಹ ಮಾತನ್ನು ಕೊಟ್ಟುಬಿಡುತ್ತಾರೆ ಅಥವಾ ಮಾತನ್ನು ಮುರಿಯುತ್ತಾರೆ, ಯಾಕಂದರೆ ಹಾಗೆ ಮಾಡುವುದು ಅವರಿಗೆ ಅತಿ ಸುಲಭವಾದದ್ದಾಗಿ ತೋರುತ್ತದೆ.
ಮುಂಗಾಣದಿದ್ದಂತಹ ಪರಿಸ್ಥಿತಿಗಳಿಂದಾಗಿ, ಕೊಟ್ಟ ಮಾತನ್ನು ಪಾಲಿಸುವುದು ಕೆಲವೊಮ್ಮೆ ಕಷ್ಟಕರವಾಗಿರಬಹುದು ಎಂಬುದು ಒಪ್ಪತಕ್ಕದ್ದೇ. ಆದರೆ ಮಾತನ್ನು ಮುರಿಯುವುದು ನಿಜವಾಗಿಯೂ ತುಂಬ ಹಾನಿಯನ್ನು ಉಂಟುಮಾಡುತ್ತದೊ? ನೀವು ಕೊಟ್ಟ ಮಾತುಗಳನ್ನು ಗಂಭೀರವಾದದ್ದಾಗಿ ಪರಿಗಣಿಸಬೇಕೊ? ಯೆಹೋವ ದೇವರ ಮಾದರಿಯ ಕಡೆಗೆ ಸ್ವಲ್ಪ ಗಮನವನ್ನು ಹರಿಸುವುದು, ಈ ವಿಷಯವನ್ನು ನಾವೇಕೆ ಗಂಭೀರವಾಗಿ ಎಣಿಸಬೇಕೆಂಬುದನ್ನು ನೋಡುವಂತೆ ಸಹಾಯಮಾಡುವುದು.
ಯೆಹೋವನು ತನ್ನ ವಾಗ್ದಾನಗಳನ್ನು ಪೂರೈಸುತ್ತಾನೆ
ನಾವು ಆರಾಧಿಸುವ ದೇವರ ಹೆಸರೇ ವಾಗ್ದಾನಗಳ ಪೂರೈಸುವಿಕೆಯೊಂದಿಗೆ ಜೋಡಿಸಲ್ಪಟ್ಟಿದೆ. ಬೈಬಲ್ ಸಮಯಗಳಲ್ಲಿ ಒಬ್ಬ ವ್ಯಕ್ತಿಯ ಹೆಸರೇ ಅನೇಕ ವೇಳೆ ಅವನ ಬಗ್ಗೆ ವರ್ಣನೆಯನ್ನು ಕೊಡುತ್ತಿತ್ತು. ಯೆಹೋವ ಎಂಬ ಹೆಸರಿನ ಕುರಿತಾಗಿಯೂ ಇದು ಸತ್ಯವಾಗಿದೆ. ಅದರರ್ಥ, “ಆತನು ಆಗಿಸುತ್ತಾನೆ.” (ವಿಮೋಚನಕಾಂಡ 3:14) ಈ ರೀತಿಯಲ್ಲಿ ಆ ದೈವಿಕ ಹೆಸರಿನಲ್ಲಿ, ದೇವರು ತನ್ನ ವಾಗ್ದಾನಗಳನ್ನು ಪೂರೈಸಿ, ತನ್ನ ಉದ್ದೇಶಗಳನ್ನು ನೆರವೇರಿಸುತ್ತಾನೆಂಬ ವಿಚಾರವು ಒಳಗೂಡಿದೆ.
ತನ್ನ ಹೆಸರಿಗೆ ತಕ್ಕಂತೆ, ಯೆಹೋವನು ಪ್ರಾಚೀನ ಇಸ್ರಾಯೇಲ್ ಜನಾಂಗಕ್ಕೆ ಕೊಟ್ಟ ಪ್ರತಿಯೊಂದು ವಾಗ್ದಾನವನ್ನು ಪೂರೈಸಿದನು. ಈ ವಾಗ್ದಾನಗಳ ಕುರಿತಾಗಿ, ರಾಜ ಸೊಲೊಮೋನನು ಅಂಗೀಕರಿಸಿದ್ದು: “ತಾನು ವಾಗ್ದಾನಮಾಡಿದಂತೆ ತನ್ನ ಪ್ರಜೆಗಳಾದ ಇಸ್ರಾಯೇಲ್ಯರಿಗೆ ವಿಶ್ರಾಂತಿಯನ್ನು ಅನುಗ್ರಹಿಸಿದ ಯೆಹೋವನಿಗೆ ಸ್ತೋತ್ರವಾಗಲಿ. ಆತನು ತನ್ನ ಸೇವಕನಾದ ಮೋಶೆಯ ಮುಖಾಂತರವಾಗಿ ಮಾಡಿದ ಅತಿಶ್ರೇಷ್ಠವಾಗ್ದಾನಗಳಲ್ಲಿ ಒಂದೂ ತಪ್ಪಿಹೋಗಲಿಲ್ಲ.”—1 ಅರಸುಗಳು 8:56.
ಯೆಹೋವನು ಎಷ್ಟು ಭರವಸಾರ್ಹನಾಗಿದ್ದಾನೆಂದರೆ, ಅಪೊಸ್ತಲ ಪೌಲನು ಹೀಗೆ ತರ್ಕಿಸಸಾಧ್ಯವಿತ್ತು: “ದೇವರು ಅಬ್ರಹಾಮನಿಗೆ ವಾಗ್ದಾನಮಾಡಿದಾಗ ತನಗಿಂತ ಹೆಚ್ಚಿನವನ ಆಣೆಯಿಡುವದಕ್ಕಾಗದೆ ಇದ್ದದರಿಂದ ತನ್ನಾಣೆ” ಇಟ್ಟನು. (ಇಬ್ರಿಯ 6:13) ಹೌದು, ಯೆಹೋವನ ಹೆಸರು ಮತ್ತು ವ್ಯಕ್ತಿರೂಪವು, ಆತನು ತನ್ನ ವಾಗ್ದಾನಗಳನ್ನು ಪೂರೈಸದೆ ಇರುವುದಿಲ್ಲವೆಂಬುದಕ್ಕೆ ಒಂದು ಖಾತರಿಯಾಗಿದೆ. ಅದನ್ನು ಪೂರೈಸಲು ಆತನು ಎಷ್ಟೇ ಬೆಲೆಯನ್ನು ತೆರಬೇಕಾದರೂ ಅದನ್ನು ಮಾಡಿಯೇ ತೀರಿಸುವನು. (ರೋಮಾಪುರ 8:32) ಯೆಹೋವನು ತನ್ನ ವಾಗ್ದಾನಗಳನ್ನು ಪೂರೈಸುತ್ತಾನೆಂಬ ವಾಸ್ತವಾಂಶವು, ನಮಗೆ ಒಂದು ಲಂಗರಿನಂತಿರುವ ನಿರೀಕ್ಷೆಯನ್ನು ಕೊಡುತ್ತದೆ.—ಇಬ್ರಿಯ 6:19.
ಯೆಹೋವನ ವಾಗ್ದಾನಗಳು ಮತ್ತು ನಮ್ಮ ಭವಿಷ್ಯ
ನಮ್ಮ ನಿರೀಕ್ಷೆ, ನಮ್ಮ ನಂಬಿಕೆ ಮತ್ತು ನಮ್ಮ ಜೀವವೇ, ಇವೆಲ್ಲವೂ ಯೆಹೋವನ ವಾಗ್ದಾನಗಳ ಪೂರೈಸುವಿಕೆಯ ಮೇಲೆ ಅವಲಂಬಿಸುತ್ತವೆ. ನಮಗೆ ಯಾವ ನಿರೀಕ್ಷೆಯಿದೆ? “ನಾವು ದೇವರ ವಾಗ್ದಾನವನ್ನು ನಂಬಿ ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ ಎದುರುನೋಡುತ್ತಾ ಇದ್ದೇವೆ; ಅವುಗಳಲ್ಲಿ ನೀತಿಯು ವಾಸವಾಗಿರುವದು.” (2 ಪೇತ್ರ 3:13) “ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನ”ವಾಗುವುದೆಂಬ ನಂಬಿಕೆಗೂ ಶಾಸ್ತ್ರವಚನಗಳು ಆಧಾರವನ್ನು ಕೊಡುತ್ತವೆ. (ಅ. ಕೃತ್ಯಗಳು 24:15) ಮತ್ತು ಈ ಸದ್ಯದ ಜೀವಿತಕ್ಕಿಂತಲೂ ಹೆಚ್ಚಿನದ್ದು ಇದೆಯೆಂದು ನಾವು ನಿಶ್ಚಿತರಾಗಿರಬಲ್ಲೆವು. ಅಪೊಸ್ತಲ ಯೋಹಾನನು ಯಾವುದನ್ನು ‘ವಾಗ್ದಾನಮಾಡಿದ್ದ’ ವಿಷಯವೆಂದು ಕರೆದನೊ ಅದು “ನಿತ್ಯಜೀವ”ವಾಗಿದೆ. (1 ಯೋಹಾನ 2:25) ಆದರೆ ಯೆಹೋವನ ವಾಕ್ಯದಲ್ಲಿರುವ ಆತನ ವಾಗ್ದಾನಗಳು, ಕೇವಲ ಭವಿಷ್ಯಕ್ಕೆ ಸೀಮಿತವಾಗಿರುವುದಿಲ್ಲ. ನಮ್ಮ ದಿನನಿತ್ಯದ ಜೀವಿತಗಳಿಗೆ ಈಗಲೂ ಅವು ಅರ್ಥವನ್ನು ಕೊಡುತ್ತವೆ.
ಕೀರ್ತನೆಗಾರನು ಹೀಗೆ ಹಾಡಿದನು: “ತನಗೆ ಮೊರೆಯಿಡುವವರೆಲ್ಲರಿಗೆ ಯೆಹೋವನು ಹತ್ತಿರವಾಗಿಯೇ ಇದ್ದಾನೆ. . . . ಸಹಾಯಕ್ಕಾಗಿರುವ ಅವರ ಕೂಗನ್ನು ಆತನು ಕೇಳುವನು.” (ಕೀರ್ತನೆ 145:18, 19, NW) ತಾನು “ಸೋತವನಿಗೆ ತ್ರಾಣವನ್ನು ಅನುಗ್ರಹಿಸಿ ನಿರ್ಬಲನಿಗೆ ಬಹು ಬಲವನ್ನು ದಯಪಾಲಿಸು”ತ್ತೇನೆಂದು ಸಹ ದೇವರು ನಮಗೆ ಆಶ್ವಾಸನೆ ಕೊಡುತ್ತಾನೆ. (ಯೆಶಾಯ 40:29) ಮತ್ತು ‘ನಮ್ಮ ಶಕ್ತಿಯನ್ನು ಮೀರುವ ಶೋಧನೆಯನ್ನು ನಮಗೆ ಬರಗೊಡಿಸದೆ ನಾವು ಅದನ್ನು ಸಹಿಸುವದಕ್ಕೆ ಶಕ್ತರಾಗುವಂತೆ ಶೋಧನೆಯಾಗುತ್ತಲೇ ತಪ್ಪಿಸಿಕೊಳ್ಳುವ ಮಾರ್ಗವನ್ನು ಸಿದ್ಧಮಾಡುವನು’ ಎಂಬ ಅರಿವು ಎಷ್ಟು ಸಾಂತ್ವನದಾಯಕವಾಗಿದೆ! (1 ಕೊರಿಂಥ 10:13) ಈ ವಾಗ್ದಾನಗಳಲ್ಲಿ ಯಾವುದೇ ವಾಗ್ದಾನಗಳ ನೆರವೇರಿಕೆಯನ್ನು ನಾವು ವೈಯಕ್ತಿಕವಾಗಿ ಅನುಭವಿಸಿರುವಲ್ಲಿ, ಯೆಹೋವನ ಮೇಲೆ ನಾವು ಪೂರ್ಣ ಭರವಸೆಯನ್ನಿಡಸಾಧ್ಯವಿದೆ ಎಂದು ನಮಗೆ ತಿಳಿದಿರುತ್ತದೆ. ದೇವರು ಕೊಡುವಂತಹ ಮತ್ತು ನೆರವೇರಿಸುವಂತಹ ಅನೇಕ ವಾಗ್ದಾನಗಳಿಂದ ನಾವು ಪಡೆದುಕೊಳ್ಳುವ ಪ್ರಯೋಜನಗಳನ್ನು ಮನಸ್ಸಿನಲ್ಲಿಟ್ಟುಕೊಂಡು, ನಾವು ಆತನಿಗೆ ಕೊಟ್ಟ ಮಾತುಗಳನ್ನು ಹೇಗೆ ವೀಕ್ಷಿಸಬೇಕು?
ದೇವರಿಗೆ ನಾವು ಕೊಟ್ಟಿರುವ ಮಾತುಗಳನ್ನು ಪಾಲಿಸುವುದು
ನಾವು ದೇವರಿಗೆ ಮಾಡಿರುವ ಸಮರ್ಪಣೆಯು ನಿಸ್ಸಂದೇಹವಾಗಿಯೂ ನಾವು ಕೊಡಸಾಧ್ಯವಿರುವ ಅತ್ಯಂತ ಪ್ರಮುಖ ಮಾತಾಗಿದೆ. ಈ ಹೆಜ್ಜೆಯನ್ನು ತೆಗೆದುಕೊಳ್ಳುವ ಮೂಲಕ, ನಾವು ಯೆಹೋವನನ್ನು ಸದಾಕಾಲಕ್ಕೂ ಸೇವಿಸಲು ಬಯಸುತ್ತೇವೆಂಬುದನ್ನು ಪ್ರದರ್ಶಿಸುತ್ತೇವೆ. ದೇವರ ಆಜ್ಞೆಗಳು ಭಾರವಾದವುಗಳಲ್ಲವಾದರೂ, ನಾವು ಈ ದುಷ್ಟ ವಿಷಯಗಳ ವ್ಯವಸ್ಥೆಯಲ್ಲಿ ಜೀವಿಸುತ್ತಿರುವುದರಿಂದ ಆತನ ಚಿತ್ತವನ್ನು ಮಾಡುವುದು ಯಾವಾಗಲೂ ಸುಲಭವಾಗಿರಲಿಕ್ಕಿಲ್ಲ. (2 ತಿಮೊಥೆಯ 3:12; 1 ಯೋಹಾನ 5:3) ಆದರೆ ನಾವು ‘ನೇಗಿಲಿನ ಮೇಲೆ ಕೈಯನ್ನು ಹಾಕಿ’ ಯೆಹೋವನ ಸಮರ್ಪಿತ ಸೇವಕರು ಮತ್ತು ಆತನ ಮಗನಾದ ಯೇಸು ಕ್ರಿಸ್ತನ ಶಿಷ್ಯರಾದ ಬಳಿಕ, ನಾವು ಹಿಂದೆ ಬಿಟ್ಟು ಬಂದಿರುವ ಲೋಕದ ವಿಷಯಗಳನ್ನು ಎಂದೂ ತಿರುಗಿ ನೋಡಬಾರದು.—ಲೂಕ 9:62.
ಯೆಹೋವನಿಗೆ ಪ್ರಾರ್ಥಿಸುವಾಗ, ನಾವು ಒಂದು ಬಲಹೀನತೆಯನ್ನು ಜಯಿಸಲು ಹೋರಾಡುವೆವು, ಒಂದು ಕ್ರೈಸ್ತ ಗುಣವನ್ನು ವಿಕಸಿಸುವೆವು, ಅಥವಾ ನಮ್ಮ ದೇವಪ್ರಭುತ್ವ ಚಟುವಟಿಕೆಯ ಯಾವುದೊ ಒಂದು ಭಾಗವನ್ನು ಹೆಚ್ಚಿಸುವೆವೆಂದು ಆತನಿಗೆ ಮಾತುಕೊಡಲು ನಾವು ಪ್ರೇರಿಸಲ್ಪಡಬಹುದು. ಅಂತಹ ಮಾತುಗಳನ್ನು ನಾವು ಪೂರೈಸುವಂತೆ ಯಾವುದು ಸಹಾಯಮಾಡುವುದು?—ಪ್ರಸಂಗಿ 5:2-5ನ್ನು ಹೋಲಿಸಿರಿ.
ಪ್ರಾಮಾಣಿಕವಾಗಿ ಕೊಡಲ್ಪಡುವಂತಹ ಮಾತುಗಳು, ಹೃದಯ ಹಾಗೂ ಮನಸ್ಸಿನಿಂದ ಹೊರಹೊಮ್ಮುತ್ತವೆ. ಆದುದರಿಂದ ನಾವು ಯೆಹೋವನಿಗೆ ಮಾತುಗಳನ್ನು ಕೊಡುವಾಗ, ನಮ್ಮ ಭಯ, ಆಸೆಗಳು ಹಾಗೂ ಬಲಹೀನತೆಗಳನ್ನು ಪ್ರಾಮಾಣಿಕವಾಗಿ ತಿಳಿಸುತ್ತಾ ಪ್ರಾರ್ಥನೆಯಲ್ಲಿ ಮನಬಿಚ್ಚಿ ಮಾತಾಡುವ ಮೂಲಕ ಅವುಗಳನ್ನು ದೃಢೀಕರಿಸೋಣ. ನಾವು ಕೊಟ್ಟಿರುವ ಮಾತಿನ ಕುರಿತಾಗಿ ಪ್ರಾರ್ಥಿಸುವುದರಿಂದ, ಅದನ್ನು ನಡೆಸುವ ನಮ್ಮ ದೃಢನಿರ್ಧಾರವು ಬಲಗೊಳ್ಳುವುದು. ನಾವು ದೇವರಿಗೆ ಕೊಟ್ಟಿರುವ ಮಾತುಗಳನ್ನು ಸಾಲಗಳೋಪಾದಿ ಎಣಿಸಬಹುದು. ಸಾಲಗಳು ದೊಡ್ಡ ಪ್ರಮಾಣದ್ದಾಗಿರುವಾಗ, ಅವುಗಳನ್ನು ಕ್ರಮೇಣವಾಗಿ ಹಿಂದಿರುಗಿಸಬೇಕಾಗುತ್ತದೆ. ತದ್ರೀತಿಯಲ್ಲೇ, ನಾವು ಯೆಹೋವನಿಗೆ ಅನೇಕ ಮಾತುಗಳನ್ನು ಕೊಟ್ಟಿರುವಲ್ಲಿ, ಅದನ್ನು ಪೂರೈಸಲು ಸಮಯ ತಗಲುವುದು. ಆದರೆ ನಮ್ಮಿಂದ ಸಾಧ್ಯವಿರುವಷ್ಟನ್ನು ಆತನಿಗೆ ಕ್ರಮವಾಗಿ ಕೊಡುವ ಮೂಲಕ, ನಾವು ಏನನ್ನು ಹೇಳುತ್ತೇವೊ ಅದರಂತೆ ನಡೆಯಲು ಪ್ರಯತ್ನಿಸುತ್ತಿದ್ದೇವೆಂಬುದನ್ನು ತೋರಿಸಿಕೊಡುತ್ತೇವೆ, ಮತ್ತು ಅದಕ್ಕಾಗಿ ಆತನು ನಮ್ಮನ್ನು ಆಶೀರ್ವದಿಸುವನು.
ನಾವು ಕೊಟ್ಟಿರುವ ಮಾತುಗಳನ್ನು ಗಂಭೀರವಾದದ್ದಾಗಿ ಎಣಿಸುತ್ತೇವೆಂಬುದನ್ನು, ಅನೇಕ ಬಾರಿ, ಪ್ರಾಯಶಃ ಪ್ರತಿದಿನ ಅವುಗಳ ಕುರಿತಾಗಿ ಪ್ರಾರ್ಥಿಸುವ ಮೂಲಕ ತೋರಿಸಸಾಧ್ಯವಿದೆ. ನಾವು ಪ್ರಾಮಾಣಿಕ ಮನಸ್ಸಿನಿಂದ ಮಾತು ಕೊಟ್ಟಿದ್ದೇವೆಂದು ಇದು ನಮ್ಮ ಸ್ವರ್ಗೀಯ ತಂದೆಗೆ ತೋರಿಸುವುದು. ಇದು ಒಂದು ನಿರಂತರ ಮರುಜ್ಞಾಪನವೂ ಆಗಿರುವುದು. ಈ ವಿಷಯದಲ್ಲಿ ದಾವೀದನು ನಮಗಾಗಿ ಒಂದು ಒಳ್ಳೆಯ ಮಾದರಿಯನ್ನಿಟ್ಟನು. ಒಂದು ಗೀತೆಯಲ್ಲಿ ಅವನು ಯೆಹೋವನನ್ನು ಬೇಡಿಕೊಂಡದ್ದು: “ದೇವರೇ, ನನ್ನ ಕೂಗನ್ನು ಕೇಳಿ ನನ್ನ ಪ್ರಾರ್ಥನೆಗೆ ಕಿವಿಗೊಡು. ಹೀಗಾದರೆ ನಾನು ಪ್ರತಿದಿನವೂ ನನ್ನ ಹರಕೆಗಳನ್ನು ಸಲ್ಲಿಸುವವನಾಗಿ ನಿನ್ನ ನಾಮವನ್ನು ಸದಾ ಸ್ಮರಿಸಿ ಕೀರ್ತಿಸುತ್ತಿರುವೆನು.”—ಕೀರ್ತನೆ 61:1, 8.
ನಮ್ಮ ಮಾತುಗಳನ್ನು ಪಾಲಿಸುವುದು ಭರವಸೆಯನ್ನು ಹೆಚ್ಚಿಸುತ್ತದೆ
ನಾವು ದೇವರಿಗೆ ಕೊಟ್ಟ ಮಾತುಗಳನ್ನು ಹಗುರವಾಗಿ ಎಣಿಸಬಾರದಿದ್ದರೆ, ನಾವು ಜೊತೆ ಕ್ರೈಸ್ತರಿಗೆ ಕೊಡುವ ಮಾತುಗಳ ಕುರಿತಾಗಿಯೂ ಅದನ್ನೇ ಹೇಳಸಾಧ್ಯವಿದೆ. ನಾವು ಯೆಹೋವನೊಂದಿಗೆ ಒಂದು ರೀತಿಯಲ್ಲಿ, ಮತ್ತು ನಮ್ಮ ಸಹೋದರರೊಂದಿಗೆ ಮತ್ತೊಂದು ರೀತಿಯಲ್ಲಿ ವ್ಯವಹರಿಸಬಾರದು. (1 ಯೋಹಾನ 4:20ನ್ನು ಹೋಲಿಸಿರಿ.) ತನ್ನ ಪರ್ವತ ಪ್ರಸಂಗದಲ್ಲಿ ಯೇಸು ಹೇಳಿದ್ದು: “ನಿಮ್ಮ ಮಾತು ಹೌದಾದರೆ ಹೌದು, ಅಲ್ಲವಾದರೆ ಅಲ್ಲ, ಎಂದಿರಲಿ.” (ಮತ್ತಾಯ 5:37) ನಾವು ಕೊಟ್ಟ ಮಾತು ಯಾವಾಗಲೂ ಭರವಸಾರ್ಹವಾಗಿದೆಯೆಂದು ಖಚಿತಪಡಿಸುವುದು, ‘ಒಂದೇ ಮನೆಯವರಂತಿರುವ ಕ್ರಿಸ್ತನಂಬಿಕೆಯುಳ್ಳವರಿಗೆ ಒಳ್ಳೇದನ್ನು ಮಾಡುವ’ ಒಂದು ವಿಧವಾಗಿದೆ. (ಗಲಾತ್ಯ 6:10) ನಾವು ಪಾಲಿಸುವ ಪ್ರತಿಯೊಂದು ಮಾತು, ಭರವಸೆಯನ್ನು ಹೆಚ್ಚಿಸುತ್ತದೆ.
ಹಣವು ಒಳಗೂಡಿರುವುದಾದರೆ, ಮಾತನ್ನು ಮುರಿಯುವುದರಿಂದ ಆಗುವ ಹಾನಿಯು ಅನೇಕ ವೇಳೆ ದೊಡ್ಡದಾಗಿ ತೋರುತ್ತದೆ. ಒಬ್ಬ ಕ್ರೈಸ್ತನು ಸಾಲವನ್ನು ಹಿಂದಿರುಗಿಸುವ ವಿಷಯದಲ್ಲಾಗಲಿ, ಒಂದು ಕೆಲಸವನ್ನು ಪೂರೈಸುವ ವಿಷಯದಲ್ಲಾಗಲಿ, ಅಥವಾ ಒಂದು ವ್ಯಾಪಾರೀ ಒಪ್ಪಂದದ ವಿಷಯದಲ್ಲಾಗಲಿ ತಾನು ಕೊಟ್ಟಿರುವ ಮಾತನ್ನು ಪಾಲಿಸಲೇಬೇಕು. ಇದು ದೇವರನ್ನು ಸಂತೋಷಪಡಿಸುತ್ತದೆ ಮತ್ತು ಸಹೋದರರು ‘ಒಂದಾಗಿರಲು’ ಅತ್ಯಾವಶ್ಯಕವಾಗಿರುವ ಪರಸ್ಪರ ಭರವಸೆಯನ್ನು ದೃಢಪಡಿಸುತ್ತದೆ.—ಕೀರ್ತನೆ 133:1.
ಆದರೆ ಒಪ್ಪಂದಕ್ಕನುಸಾರ ನಡೆಯದಿರುವುದರಿಂದ ಸಭೆಗೆ ಹಾನಿಯಾಗುವುದು ಮಾತ್ರವಲ್ಲ, ಅದರಲ್ಲಿ ನೇರವಾಗಿ ಒಳಗೂಡಿರುವ ವ್ಯಕ್ತಿಗಳಿಗೂ ಹಾನಿಯಾಗುವುದು. ಒಬ್ಬ ಸಂಚರಣ ಮೇಲ್ವಿಚಾರಕನು ಅವಲೋಕಿಸಿದ್ದು: “ವ್ಯಾಪಾರದ ಒಪ್ಪಂದದಲ್ಲಿರುವ ಇಬ್ಬರು ಸಹೋದರರಲ್ಲಿ ಒಬ್ಬನು, ಮತ್ತೊಬ್ಬ ಸಹೋದರನು ಒಪ್ಪಂದಕ್ಕೆ ಸರಿಯಾಗಿ ನಡೆದುಕೊಂಡಿಲ್ಲವೆಂದು ನೆನಸುವಾಗ ಉಂಟಾಗುವ ಕಲಹಗಳು ಅನೇಕ ವೇಳೆ ಇಡೀ ಸಭೆಗೆ ತಿಳಿದುಬರುತ್ತದೆ. ಆಗ ಸಹೋದರರು ಪಕ್ಷವಹಿಸಲು ಪ್ರಾರಂಭಿಸುತ್ತಾರೆ, ಮತ್ತು ರಾಜ್ಯ ಸಭಾಗೃಹದಲ್ಲಿ ಉದ್ರಿಕ್ತ ವಾತಾವರಣವು ಉಂಟಾಗಬಹುದು.” ಆದುದರಿಂದ ನಾವು ಮಾಡುವಂತಹ ಯಾವುದೇ ಒಪ್ಪಂದದ ಕುರಿತಾಗಿ ಜಾಗರೂಕತೆಯಿಂದ ಆಲೋಚಿಸಿ, ಅದನ್ನು ಬರವಣಿಗೆಯಲ್ಲಿ ದಾಖಲಿಸುವುದು ಎಷ್ಟು ಪ್ರಾಮುಖ್ಯ!a
ದುಬಾರಿ ವಸ್ತುಗಳನ್ನು ಮಾರುವಾಗ ಅಥವಾ ಬಂಡವಾಳ ಹೂಡುವಂತೆ ಶಿಫಾರಸ್ಸು ಮಾಡುವಾಗಲೂ ಎಚ್ಚರಿಕೆಯನ್ನು ವಹಿಸಬೇಕಾಗಿದೆ. ವಿಶೇಷವಾಗಿ ನಾವು ಆ ವ್ಯಾಪಾರದಿಂದ ವೈಯಕ್ತಿಕವಾಗಿ ಲಾಭವನ್ನು ಪಡೆದುಕೊಳ್ಳುತ್ತಿರುವುದಾದರೆ ಎಚ್ಚರರಾಗಿರುವ ಅಗತ್ಯವಿದೆ. ತದ್ರೀತಿಯಲ್ಲಿ, ನಿರ್ದಿಷ್ಟ ವಸ್ತುಗಳು ಅಥವಾ ಆರೋಗ್ಯ ಉತ್ಪನ್ನಗಳ ಲಾಭಗಳ ವಿಷಯವಾಗಿ ಬಣ್ಣಹಚ್ಚಿ ಹೇಳದಂತೆ ಅಥವಾ ಬಂಡವಾಳ ಹೂಡುವುದರಿಂದ ಒದಗುವ ವಾಸ್ತವಿಕವಲ್ಲದ ಲಾಭಗಳ ಕುರಿತಾಗಿ ಮಾತುಕೊಡುವ ವಿಷಯದಲ್ಲಿ ತುಂಬ ಜಾಗರೂಕರಾಗಿರುವ ಅಗತ್ಯವಿದೆ. ಇದರಲ್ಲಿ ಒಳಗೂಡಿರುವ ಯಾವುದೇ ಅಪಾಯಗಳ ಕುರಿತಾಗಿ ಪೂರ್ಣವಾಗಿ ವಿವರಿಸುವಂತೆ ಪ್ರೀತಿಯು ಕ್ರೈಸ್ತರನ್ನು ಪ್ರಚೋದಿಸಬೇಕು. (ರೋಮಾಪುರ 12:10) ಹೆಚ್ಚಿನ ಸಹೋದರರಿಗೆ ವ್ಯಾಪಾರದ ವಿಷಯದಲ್ಲಿ ತುಂಬ ಕಡಿಮೆ ಅನುಭವವಿರುವುದರಿಂದ, ನಂಬಿಕೆಯಿಂದಾಗಿ ಅವರಿಗೆ ನಮ್ಮೊಂದಿಗೆ ಸಂಬಂಧವಿರುವ ಏಕಮಾತ್ರ ಕಾರಣಕ್ಕಾಗಿ ಅವರು ನಮ್ಮ ಸಲಹೆಯನ್ನು ನಂಬಬಹುದು. ಈ ಭರವಸೆಯು ಮುರಿದುಹೋಗುವಲ್ಲಿ ಅದೆಷ್ಟು ವಿಷಾದಕರ ಸಂಗತಿ!
ಕ್ರೈಸ್ತರೋಪಾದಿ, ನಾವು ಅಪ್ರಾಮಾಣಿಕವಾದ ಅಥವಾ ಇತರರ ನ್ಯಾಯಸಮ್ಮತ ಅಭಿರುಚಿಗಳನ್ನು ಅಲಕ್ಷಿಸುವಂತಹ ವ್ಯಾಪಾರೀ ಪದ್ಧತಿಗಳನ್ನು ಸ್ವೀಕರಿಸಲಾರೆವು. (ಎಫೆಸ 2:2, 3; ಇಬ್ರಿಯ 13:18) ‘ಆತನ ಗುಡಾರದಲ್ಲಿ ಅತಿಥಿಗಳೋಪಾದಿ’ ಯೆಹೋವನ ಅನುಗ್ರಹವನ್ನು ಪಡೆದುಕೊಳ್ಳಲು ನಾವು ಭರವಸಯೋಗ್ಯರಾಗಿರಬೇಕು. ನಮಗೆ ‘ನಷ್ಟವಾದರೂ ಪ್ರಮಾಣತಪ್ಪ’ಬಾರದು.—ಕೀರ್ತನೆ 15:1, 4.
ಇಸ್ರಾಯೇಲಿನ ಯೆಫ್ತಾಹನೆಂಬ ನ್ಯಾಯಧೀಶನು, ಯೆಹೋವನು ತನಗೆ ಅಮ್ಮೋನಿಯರ ಮೇಲೆ ಜಯಸಾಧಿಸುವಂತೆ ಮಾಡುವಲ್ಲಿ, ತಾನು ಕದನದಿಂದ ಹಿಂದಿರುಗಿದ ನಂತರ ತನ್ನನ್ನು ಭೇಟಿಯಾಗಲು ಬರುವ ಪ್ರಥಮ ವ್ಯಕ್ತಿಯನ್ನು ಯೆಹೋವನಿಗೆ ಸರ್ವಾಂಗಹೋಮವಾಗಿ ಅರ್ಪಿಸುವೆನೆಂದು ಮಾತುಕೊಟ್ಟನು. ಯೆಫ್ತಾಹನನ್ನು ಭೇಟಿಯಾಗಲು ಹೊರಗೆ ಬಂದ ಪ್ರಥಮ ವ್ಯಕ್ತಿಯು ಅವನ ಏಕೈಕ ಪುತ್ರಿಯಾಗಿದ್ದಳಾದರೂ, ಅವನು ತಾನು ಕೊಟ್ಟ ಮಾತನ್ನು ಹಿಂದೆಗೆದುಕೊಳ್ಳಲಿಲ್ಲ. ತನ್ನ ಮಗಳ ಹೃತ್ಪೂರ್ವಕವಾದ ಒಪ್ಪಿಗೆಯೊಂದಿಗೆ ಮುಂದುವರಿದು, ಅವನು ಅವಳನ್ನು ದೇವರ ಗುಡಾರದಲ್ಲಿ ಶಾಶ್ವತವಾಗಿ ಸೇವೆಸಲ್ಲಿಸಲು ಅರ್ಪಿಸಿದನು. ಇದು ನಿಸ್ಸಂದೇಹವಾಗಿಯೂ ದುಃಖಪಡಿಸುವಂತಹ ಮತ್ತು ಅನೇಕ ರೀತಿಗಳಲ್ಲಿ ಒಂದು ದೊಡ್ಡ ತ್ಯಾಗವಾಗಿತ್ತು.—ನ್ಯಾಯಸ್ಥಾಪಕರು 11:30-40.
ವಿಶೇಷವಾಗಿ ಸಭಾ ಹಿರಿಯರಿಗೆ ತಮ್ಮ ಒಪ್ಪಂದಕ್ಕನುಸಾರ ನಡೆಯುವ ಜವಾಬ್ದಾರಿ ಇದೆ. 1 ತಿಮೊಥೆಯ 3:2ಕ್ಕನುಸಾರ ಒಬ್ಬ ಮೇಲ್ವಿಚಾರಕನು, “ದೋಷಾರೋಪಣೆಯಿಲ್ಲದವನೂ” ಆಗಿರಬೇಕು. “ತಪ್ಪು ಕಂಡುಹಿಡಿಯಲು ಅವಕಾಶ ಕೊಡದ, ಆಕ್ಷೇಪಿಸಲಾಗದ, ಖಂಡಿಸಲಾಗದ” ಎಂಬರ್ಥಗಳುಳ್ಳ ಗ್ರೀಕ್ ಪದದ ಭಾಷಾಂತರವು ಇದಾಗಿದೆ. ಇದು, “ಆ ಮನುಷ್ಯನಿಗೆ ಸತ್ಕೀರ್ತಿಯಿದೆ ಎಂಬುದನ್ನು ಮಾತ್ರವಲ್ಲ, ಅವನು ಅದಕ್ಕೆ ಅರ್ಹನಾಗಿದ್ದಾನೆಂಬುದನ್ನು ಸಹ ಸೂಚಿಸುತ್ತದೆ.” (ಗ್ರೀಕ್ ಹೊಸ ಒಡಂಬಡಿಕೆಗೆ ಭಾಷಾ ಸಂಬಂಧ ಕೀಲಿಕೈ, ಇಂಗ್ಲಿಷ್) ಒಬ್ಬ ಮೇಲ್ವಿಚಾರಕನು ದೋಷಾರೋಪಣೆಯಿಲ್ಲದವನೂ ಆಗಿರಬೇಕಾದದ್ದರಿಂದ, ಅವನು ಕೊಡುವ ಮಾತುಗಳು ಯಾವಾಗಲೂ ಭರವಸಾರ್ಹವಾಗಿರಬೇಕು.
ನಾವು ಕೊಟ್ಟ ಮಾತುಗಳನ್ನು ಪಾಲಿಸುವ ಇತರ ವಿಧಗಳು
ಜೊತೆ ಕ್ರೈಸ್ತರಲ್ಲದವರಿಗೆ ನಾವು ಕೊಡುವ ಮಾತುಗಳನ್ನು ಹೇಗೆ ವೀಕ್ಷಿಸಬೇಕು? “ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ. ಹೀಗಾದರೆ ಅವರು ನಿಮ್ಮ ಒಳ್ಳೇ ಕ್ರಿಯೆಗಳನ್ನು ನೋಡಿ ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡುವರು” ಎಂದು ಯೇಸು ಹೇಳಿದನು. (ಮತ್ತಾಯ 5:16) ನಾವು ನಮ್ಮ ಮಾತನ್ನು ಪಾಲಿಸುತ್ತೇವೆಂದು ತೋರಿಸುವ ಮೂಲಕ, ನಾವು ಇತರರನ್ನು ನಮ್ಮ ಕ್ರೈಸ್ತ ಸಂದೇಶದ ಕಡೆಗೆ ಆಕರ್ಷಿಸಬಹುದು. ಪ್ರಾಮಾಣಿಕತೆಯ ಮಟ್ಟಗಳು ಲೋಕವ್ಯಾಪಕವಾಗಿ ಕುಸಿಯುತ್ತಿವೆಯಾದರೂ, ಹೆಚ್ಚಿನ ಜನರು ಈಗಲೂ ಅದನ್ನು ಅಮೂಲ್ಯವೆಂದೆಣಿಸುತ್ತಾರೆ. ದೇವರಿಗಾಗಿ ಮತ್ತು ನೆರೆಯವನಿಗಾಗಿ ಪ್ರೀತಿಯನ್ನು ತೋರಿಸುವ ಹಾಗೂ ನೀತಿಯನ್ನು ಪ್ರೀತಿಸುವವರನ್ನು ಆಕರ್ಷಿಸುವ ಒಂದು ವಿಧವು, ನಮ್ಮ ಮಾತುಗಳನ್ನು ಪಾಲಿಸುವುದೇ ಆಗಿದೆ.—ಮತ್ತಾಯ 22:36-39; ರೋಮಾಪುರ 15:2.
ಯೆಹೋವನ ಸಾಕ್ಷಿಗಳು ತಮ್ಮ 1998ರ ಸೇವಾ ವರ್ಷದಲ್ಲಿ, ದೇವರ ರಾಜ್ಯದ ಸುವಾರ್ತೆಯನ್ನು ಘೋಷಿಸುತ್ತಾ, 100 ಕೋಟಿ ತಾಸುಗಳನ್ನು ಕಳೆದರು. (ಮತ್ತಾಯ 24:14) ಹೀಗೆ ಸಾರುತ್ತಿರುವಾಗ, ವ್ಯಾಪಾರದ ವಹಿವಾಟುಗಳು ಅಥವಾ ಇತರ ವಿಷಯಗಳ ಸಂಬಂಧದಲ್ಲಿ ನಾವು ಕೊಟ್ಟಿರುವ ಮಾತನ್ನು ನಾವು ಪಾಲಿಸದೆ ಹೋಗಿರುವಲ್ಲಿ ಕೆಲವರು ಈ ಸುವಾರ್ತೆಯನ್ನು ಅಲಕ್ಷಿಸಿದ್ದಿರಬಹುದು. ಸತ್ಯವನ್ನಾಡುವ ದೇವರನ್ನು ನಾವು ಪ್ರತಿನಿಧಿಸುವವರಾಗಿರುವುದರಿಂದ, ನಾವು ಪ್ರಾಮಾಣಿಕತೆಯಿಂದ ವ್ಯವಹರಿಸುವಂತೆ ಜನರು ನಮ್ಮಿಂದ ನಿರೀಕ್ಷಿಸುವುದು ಯೋಗ್ಯವೇ. ಭರವಸಾರ್ಹರೂ, ಪ್ರಾಮಾಣಿಕರೂ ಆಗಿರುವ ಮೂಲಕ ನಾವು “ನಮ್ಮ ರಕ್ಷಕನಾದ ದೇವರ ಉಪದೇಶಕ್ಕೆ ಎಲ್ಲಾ ವಿಷಯಗಳಲ್ಲಿ ಅಲಂಕಾರ”ವಾಗಿರುತ್ತೇವೆ.—ತೀತ 2:10.
ನಮ್ಮ ಶುಶ್ರೂಷೆಯಲ್ಲಿ, ರಾಜ್ಯದ ಸಂದೇಶದಲ್ಲಿ ಆಸಕ್ತಿಯನ್ನು ತೋರಿಸುವವರಿಗೆ ಭೇಟಿನೀಡಲು ಪುನಃ ಹೋಗುವ ಮೂಲಕ, ನಾವು ಕೊಟ್ಟಿರುವ ಮಾತುಗಳನ್ನು ಪಾಲಿಸಲು ನಮಗೆ ಸಂದರ್ಭಗಳು ಸಿಗುತ್ತವೆ. ಪುನಃ ಒಮ್ಮೆ ಬರುವೆವೆಂದು ಹೇಳಿರುವಲ್ಲಿ, ನಾವು ಹೋಗಲೇಬೇಕು. ನಾವು ಮಾತುಕೊಟ್ಟಿರುವ ಪ್ರಕಾರ ಹಿಂದಿರುಗಿ ಹೋಗುವುದು, ‘ಉಪಕಾರಮಾಡುವದಕ್ಕೆ ಕೈಲಾದಾಗ ಹೊಂದತಕ್ಕವರಿಗೆ ಅದನ್ನು ತಪ್ಪಿಸದಿರುವ’ ಒಂದು ವಿಧವಾಗಿದೆ. (ಜ್ಞಾನೋಕ್ತಿ 3:27) ಒಬ್ಬ ಸಹೋದರಿಯು ಈ ವಿಷಯವನ್ನು ಹೀಗೆ ವಿವರಿಸಿದರು: “ಒಬ್ಬ ಸಾಕ್ಷಿಯು ತಾನು ಹಿಂದಿರುಗಿ ಬರುವೆನೆಂದು ಮಾತುಕೊಟ್ಟು, ಪುನಃ ಎಂದೂ ಬರಲಿಲ್ಲವೆಂದು ಹೇಳುವ ಆಸಕ್ತ ವ್ಯಕ್ತಿಗಳನ್ನು ನಾನು ಹಲವಾರು ಸಂದರ್ಭಗಳಲ್ಲಿ ಭೇಟಿಯಾಗಿದ್ದೇನೆ. ಮನೆಯವರು ಮನೆಯಲ್ಲಿಲ್ಲದೆ ಇದ್ದಿರಬಹುದು ಅಥವಾ ಕೆಲವೊಂದು ಪರಿಸ್ಥಿತಿಗಳಿಂದಾಗಿ ಆ ಸಾಕ್ಷಿಯು ಹಿಂದಿರುಗಿ ಹೋಗಲು ಸಾಧ್ಯವಾಗದೆ ಹೋಗಿರಬಹುದು ನಿಜ. ಆದರೆ ಯಾರೂ ನನ್ನ ಕುರಿತಾಗಿ ಹಾಗೆ ಹೇಳುವಂತೆ ನಾನು ಬಯಸುವುದಿಲ್ಲ, ಆದುದರಿಂದ ಒಬ್ಬ ಆಸಕ್ತ ವ್ಯಕ್ತಿಯನ್ನು ಪುನಃ ಒಮ್ಮೆ ಮನೆಯಲ್ಲಿ ಭೇಟಿಯಾಗಲು ನನ್ನಿಂದ ಸಾಧ್ಯವಾದಷ್ಟು ಎಲ್ಲ ಪ್ರಯತ್ನವನ್ನು ಮಾಡುತ್ತೇನೆ. ನಾನು ಯಾವುದೇ ವ್ಯಕ್ತಿಯನ್ನು ನಿರಾಶೆಗೊಳಿಸುವಲ್ಲಿ, ಅದು ಯೆಹೋವನನ್ನು ಮತ್ತು ನನ್ನ ಸಹೋದರರನ್ನು ಅಪಕೀರ್ತಿಗೆ ಗುರಿಮಾಡುವುದೆಂದು ನನಗನಿಸುತ್ತದೆ.”
ಕೆಲವೊಂದು ಸಂದರ್ಭಗಳಲ್ಲಿ, ಒಬ್ಬ ವ್ಯಕ್ತಿಯು ನಿಜವಾಗಿ ಆಸಕ್ತನಾಗಿಲ್ಲವೆಂದು ನಾವು ತೀರ್ಮಾನಿಸುವುದರಿಂದ ನಮಗೆ ಪುನಃ ಹೋಗಲು ಮನಸ್ಸಾಗಲಿಕ್ಕಿಲ್ಲ. ಅದೇ ಸಹೋದರಿಯು ವಿವರಿಸುವುದು: “ಎಷ್ಟು ಆಸಕ್ತಿಯು ತೋರಿಸಲ್ಪಟ್ಟಿತ್ತೆಂಬುದನ್ನು ನಾನು ನಿರ್ಧರಿಸಲು ಪ್ರಯತ್ನಿಸುವುದಿಲ್ಲ. ಪ್ರಥಮ ಅಭಿಪ್ರಾಯಗಳು ಅನೇಕವೇಳೆ ತಪ್ಪಾಗಿರುತ್ತವೆಂದು ನಾನು ನನ್ನ ಸ್ವಂತ ಅನುಭವದಿಂದ ಕಲಿತುಕೊಂಡಿದ್ದೇನೆ. ಆದುದರಿಂದ ನಾನು ಪ್ರತಿಯೊಬ್ಬ ವ್ಯಕ್ತಿಯನ್ನು ಒಬ್ಬ ಭಾವೀ ಸಹೋದರ ಅಥವಾ ಸಹೋದರಿ ಆಗಿ ವೀಕ್ಷಿಸುತ್ತಾ, ಯಾವಾಗಲೂ ಸಕಾರಾತ್ಮಕ ಮನೋಭಾವವನ್ನು ಇಟ್ಟುಕೊಳ್ಳುತ್ತೇನೆ.”
ಕ್ರೈಸ್ತ ಶುಶ್ರೂಷೆಯಲ್ಲಿ ಮತ್ತು ಇತರ ಅನೇಕ ಕ್ಷೇತ್ರಗಳಲ್ಲಿ, ನಾವು ಕೊಟ್ಟ ಮಾತನ್ನು ಇತರರು ನಂಬಸಾಧ್ಯವಿದೆಯೆಂದು ನಾವು ತೋರಿಸಬೇಕಾಗಿದೆ. ಕೆಲವು ಸಂಗತಿಗಳನ್ನು ಮಾಡುವುದಕ್ಕಿಂತಲೂ ಹೇಳುವುದು ತುಂಬ ಸುಲಭವೆಂಬುದು ನಿಜ. ವಿವೇಕಿ ಪುರುಷನು ಗಮನಿಸಿದ್ದು: “ಸ್ನೇಹಿತರೆಂದು ಹೇಳಿಕೊಳ್ಳುವವರು ಬಹು ಮಂದಿ; ನಂಬಿಗಸ್ತನಾದ ಸ್ನೇಹಿತನು ಎಲ್ಲಿ ಸಿಕ್ಕುವನು?” (ಜ್ಞಾನೋಕ್ತಿ 20:6) ದೃಢಸಂಕಲ್ಪದೊಂದಿಗೆ ನಾವು ನಂಬಿಗಸ್ತರೂ ನಮ್ಮ ಮಾತನ್ನು ಪಾಲಿಸುವವರೂ ಆಗಿ ಪರಿಣಮಿಸಸಾಧ್ಯವಿದೆ.
ದೇವರಿಂದ ಸಮೃದ್ಧ ಆಶೀರ್ವಾದಗಳು
ಉದ್ದೇಶಪೂರ್ವಕವಾಗಿ ಪೊಳ್ಳು ಮಾತನ್ನು ಕೊಡುವುದು ಅಪ್ರಾಮಾಣಿಕತೆಯಾಗಿದೆ. ಇದನ್ನು, ಬ್ಯಾಂಕಿನಲ್ಲಿ ಹಣವಿರದಿದ್ದರೂ ಒಂದು ಚೆಕ್ ಅನ್ನು ಬರೆದುಕೊಡುವುದಕ್ಕೆ ಹೋಲಿಸಬಹುದು. ಆದರೆ ನಾವು ನಮ್ಮ ಮಾತುಗಳನ್ನು ಪಾಲಿಸುವಾಗ ಎಷ್ಟೊಂದು ಬಹುಮಾನಗಳು ಮತ್ತು ಆಶೀರ್ವಾದಗಳನ್ನು ಪಡೆದುಕೊಳ್ಳುತ್ತೇವೆ! ಭರವಸಾರ್ಹರಾಗಿರುವುದರಿಂದ ಬರುವ ಒಂದು ಆಶೀರ್ವಾದವು, ಒಂದು ಒಳ್ಳೇ ಮನಸ್ಸಾಕ್ಷಿಯಾಗಿದೆ. (ಅ. ಕೃತ್ಯಗಳು 24:16ನ್ನು ಹೋಲಿಸಿರಿ.) ವಿಷಾದದ ಅನಿಸಿಕೆಗಳು ನಮ್ಮನ್ನು ಕಾಡುತ್ತಾ ಇರುವ ಬದಲಿಗೆ ನಾವು ತೃಪ್ತರೂ, ನೆಮ್ಮದಿಯುಳ್ಳವರೂ ಆಗಿರುವೆವು. ಅಷ್ಟುಮಾತ್ರವಲ್ಲದೆ, ನಮ್ಮ ಮಾತನ್ನು ಪಾಲಿಸುವ ಮೂಲಕ, ಪರಸ್ಪರ ಭರವಸೆಯ ಮೇಲೆ ಅವಲಂಬಿಸಿರುವ ಸಭೆಯ ಐಕ್ಯಕ್ಕೆ ನಾವು ನೆರವನ್ನು ನೀಡುತ್ತೇವೆ. ನಮ್ಮ “ಸತ್ಯವಾಕ್ಯ”ವು, ನಾವು ಸತ್ಯದ ದೇವರ ಶುಶ್ರೂಷಕರಾಗಿದ್ದೇವೆಂಬುದನ್ನು ಸಹ ಸೂಚಿಸುತ್ತದೆ.—2 ಕೊರಿಂಥ 6:3, 4, 7.
ಯೆಹೋವನು ತನ್ನ ಮಾತನ್ನು ಪೂರೈಸುತ್ತಾನೆ, ಮತ್ತು “ಸುಳ್ಳಿನ ನಾಲಿಗೆ”ಯನ್ನು ದ್ವೇಷಿಸುತ್ತಾನೆ. (ಜ್ಞಾನೋಕ್ತಿ 6:16, 17) ನಮ್ಮ ಸ್ವರ್ಗೀಯ ತಂದೆಯನ್ನು ಅನುಕರಿಸುವ ಮೂಲಕ ನಾವು ಆತನಿಗೆ ನಿಕಟವಾಗುತ್ತೇವೆ. ಆದುದರಿಂದಲೇ, ನಮ್ಮ ಮಾತುಗಳನ್ನು ಪಾಲಿಸಲು ನಮಗೆ ನಿಶ್ಚಯವಾಗಿಯೂ ಸಕಾರಣವಿದೆ.
[ಅಧ್ಯಯನ ಪ್ರಶ್ನೆಗಳು]
a 1983, ಫೆಬ್ರವರಿ 8ರ ಅವೇಕ್! ಪತ್ರಿಕೆಯಲ್ಲಿ “ಅದನ್ನು ಬರವಣಿಗೆಯಲ್ಲಿ ದಾಖಲಿಸಿರಿ!” ಎಂಬ ಲೇಖನದ 13-15ನೆಯ ಪುಟಗಳನ್ನು ನೋಡಿರಿ.
[ಪುಟ 10 ರಲ್ಲಿರುವ ಚಿತ್ರಗಳು]
ಕೊಟ್ಟ ಮಾತನ್ನು ಪಾಲಿಸುವುದು ಯೆಫ್ತಾಹನಿಗೆ ದುಃಖವನ್ನುಂಟುಮಾಡಿದ್ದರೂ ಅವನು ಅದನ್ನು ಮಾಡಿದನು
[ಪುಟ 11 ರಲ್ಲಿರುವ ಚಿತ್ರಗಳು]
ನೀವು ಹಿಂದಿರುಗಿ ಬರುವಿರೆಂದು ಮಾತು ಕೊಟ್ಟಿರುವಲ್ಲಿ, ಚೆನ್ನಾಗಿ ತಯಾರಿಮಾಡಿಕೊಂಡು ಹೋಗಿರಿ