“ಲೋಕದ ಕಟ್ಟಕಡೆಯ ವರೆಗೆ” ಬೆಳಕನ್ನು ಹಬ್ಬಿಸಲು ಅವರು ಸಹಾಯಮಾಡಿದರು
ಆತ್ಮಿಕ ಬೆಳಕನ್ನು “ಲೋಕದ ಕಟ್ಟಕಡೆಯ ವರೆಗೆ” ಹಬ್ಬಿಸಲು ಅಪೊಸ್ತಲ ಪೌಲನನ್ನು ಉಪಯೋಗಿಸಲಾಯಿತು. ಇದರ ಫಲಿತಾಂಶವಾಗಿ, “ನಿತ್ಯಜೀವಕ್ಕಾಗಿ ಯೋಗ್ಯ ಪ್ರವೃತ್ತಿಯುಳ್ಳ” ಅನೇಕರು ವಿಶ್ವಾಸಿಗಳಾದರು.—ಅ. ಕೃತ್ಯಗಳು 13:47, 48, NW; ಯೆಶಾಯ 49:6.
ಆತ್ಮಿಕ ಬೆಳಕನ್ನು ಹಬ್ಬಿಸುವ ಬಲವಾದ ಆಕಾಂಕ್ಷೆಯು, ಯೆಹೋವನ ಸಾಕ್ಷಿಗಳ ಆಡಳಿತ ಮಂಡಳಿಯ ಒಬ್ಬ ಸದಸ್ಯರಾಗಿದ್ದ ವಿಲ್ಯಮ್ ಲೈಡ್ ಬ್ಯಾರಿಯ ಸಮರ್ಪಿತ ಜೀವಿತದಲ್ಲಿ ಮತ್ತು ಅವರು ದಣಿಯದೆ ಮಾಡುತ್ತಿದ್ದ ಕ್ರೈಸ್ತ ಚಟುವಟಿಕೆಗಳಲ್ಲಿ ಸಹ ವ್ಯಕ್ತವಾಗುತ್ತಿತ್ತು. ಸಹೋದರ ಬ್ಯಾರಿ ಜುಲೈ 2, 1999ರಂದು ಹವಾಯಿ ಜಿಲ್ಲಾ ಅಧಿವೇಶನವೊಂದರಲ್ಲಿ ಭಾಷಣವನ್ನು ಕೊಡುತ್ತಿರುವಾಗಲೇ ಮೃತಪಟ್ಟರು.
ಲೈಡ್ ಬ್ಯಾರಿ, ಡಿಸೆಂಬರ್ 20, 1916ರಂದು ನ್ಯೂ ಸೀಲೆಂಡ್ನಲ್ಲಿ ಹುಟ್ಟಿದರು. ಅವರ ತಂದೆತಾಯಿ, ಸಿ. ಟಿ. ರಸಲರ ಪ್ರಕಾಶನಗಳಲ್ಲಿ ಸಾದರಪಡಿಸಲಾಗುತ್ತಿದ್ದ ಬೈಬಲ್ ಸತ್ಯಗಳಲ್ಲಿ ಈ ಮೊದಲೇ ಸಕ್ರಿಯವಾದ ಆಸಕ್ತಿಯನ್ನು ತೆಗೆದುಕೊಂಡಿದ್ದರು. ಈ ಪ್ರಕಾಶನಗಳು ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ವಿತರಿಸಲ್ಪಡುತ್ತಿದ್ದವು. ಹೀಗೆ, ಸಹೋದರ ಬ್ಯಾರಿ ಸಮರ್ಪಿತ ಕ್ರೈಸ್ತ ಕುಟುಂಬವೊಂದರಲ್ಲಿ ಬೆಳೆದು ದೊಡ್ಡವರಾದರು.
ಕ್ರೀಡೆ ಮತ್ತು ಶಿಕ್ಷಣದಲ್ಲಿ ಆಸಕ್ತಿಯುಳ್ಳವರಾಗಿದ್ದು, ವಿಜ್ಞಾನದಲ್ಲಿ ಅವರು ಪದವಿಯನ್ನು ಪಡೆದುಕೊಂಡಿದ್ದರೂ, ಸಹೋದರ ಬ್ಯಾರಿ ಆತ್ಮಿಕ ವಿಷಯಗಳಿಗೆ ಹೆಚ್ಚಿನ ಗಮನವನ್ನು ಕೊಡುವುದನ್ನು ಮುಂದುವರಿಸಿಕೊಂಡು ಹೋದರು. ಹೀಗಿರುವುದರಿಂದ ಅವರು ಜನವರಿ 1, 1939ರಂದು ಪೂರ್ಣ ಸಮಯದ ಶುಶ್ರೂಷೆಯನ್ನು ಆರಂಭಿಸಿ, ಆಸ್ಟ್ರೇಲಿಯದಲ್ಲಿರುವ ಸೊಸೈಟಿಯ ಆಫೀಸಿನಲ್ಲಿ ಬೆತೆಲ್ ಕುಟುಂಬದ ಒಬ್ಬ ಸದಸ್ಯರಾದರು. ಸರಕಾರವು 1941ರಲ್ಲಿ ಸೊಸೈಟಿಯ ಮೇಲೆ ನಿಷೇಧವನ್ನು ಹೇರಿದ ಮೇಲೆ, ಸಹೋದರ ಬ್ಯಾರಿ ಆಫೀಸು ಕೆಲಸದಲ್ಲಿ ಕಾರ್ಯಮಗ್ನರಾಗಿದ್ದರು. ಜೊತೆ ವಿಶ್ವಾಸಿಗಳ ಉತ್ತೇಜನಕ್ಕಾಗಿ ಲೇಖನಗಳನ್ನು ಬರೆಯುವಂತೆ ಕೆಲವೊಮ್ಮೆ ಅವರಿಗೆ ನೇಮಕವನ್ನು ನೀಡಲಾಗುತ್ತಿತ್ತು. ಅವರು ಸಾರ್ವಜನಿಕ ಶುಶ್ರೂಷೆಯಲ್ಲಿ ಆದರ್ಶಪ್ರಾಯ ಮುಂದಾಳುತ್ವವನ್ನು ಸಹ ತೆಗೆದುಕೊಂಡರು.
ಫೆಬ್ರವರಿ 1942ರಂದು, ಸಹೋದರ ಬ್ಯಾರಿ ಇನ್ನೊಬ್ಬ ಪೂರ್ಣ ಸಮಯದ ಸೇವಕಿಯನ್ನು ಮದುವೆಯಾದರು. ಅವರ ಪ್ರೀತಿಯ ಹೆಂಡತಿ ಮೆಲ್ಬ, ಈ ಎಲ್ಲ ವರ್ಷಗಳಲ್ಲಿ ಲೋಕದ ಅನೇಕ ಕಡೆಗಳಲ್ಲಿ ಅವರೊಂದಿಗೆ ಜೊತೆಯಾಗಿ ನಂಬಿಗಸ್ತಿಕೆಯಿಂದ ಸೇವೆಸಲ್ಲಿಸುತ್ತಾ ಬಂದಿದ್ದಾರೆ. ಅವರಿಬ್ಬರು ಅಮೆರಿಕದಲ್ಲಿರುವ ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್ನ 11ನೇ ತರಗತಿಗೆ ಹಾಜರಾಗುವ ಮೂಲಕ ವಿದೇಶಿ ಕ್ಷೇತ್ರಗಳಲ್ಲಿ ಸೇವೆಮಾಡುವುದಕ್ಕಾಗಿ ಒಂದು ದೊಡ್ಡ ಹೆಜ್ಜೆಯನ್ನು ತೆಗೆದುಕೊಂಡರು. “ಲೋಕದ ಕಟ್ಟಕಡೆ” ಎಂದು ಅನೇಕರು ನೆನಸಬಹುದಾದ ಜಪಾನ್ ದೇಶಕ್ಕೆ ಅವರು ನೇಮಿಸಲ್ಪಟ್ಟರು. ನವೆಂಬರ್ 1949ರಂದು ಅವರು ಅಲ್ಲಿಗೆ ತಲಪಿದಾಗ, ಕೋಬೀಯ ರೇವು ಪಟ್ಟಣದಲ್ಲಿ ಅವರು ಮಿಷನೆರಿಗಳಾಗಿ ಸೇವೆಸಲ್ಲಿಸಲು ಆರಂಭಿಸಿದರು. ಆ ಸಮಯದಲ್ಲಿ, ಕೇವಲ 12 ಮಂದಿ ಮಾತ್ರ ಜಪಾನಿನಲ್ಲಿ ಸುವಾರ್ತೆಯನ್ನು ಸಾರುತ್ತಿದ್ದರು. ಸಹೋದರ ಬ್ಯಾರಿ ಅಲ್ಲಿನ ಭಾಷೆಯನ್ನು ಮತ್ತು ತಮ್ಮ ಹೊಸ ನಾಡಿನ ರೀತಿನೀತಿಗಳನ್ನು ಕಲಿತುಕೊಂಡರು ಮತ್ತು ಜಪಾನಿನ ಜನರಿಗಾಗಿ ಆಳವಾದ ಮಮತೆಯನ್ನು ಬೆಳೆಸಿಕೊಂಡರು. ಮುಂದಿನ 25 ವರ್ಷಗಳ ವರೆಗೆ ಅವರು ಇಲ್ಲಿಯೇ ಸೇವೆ ಸಲ್ಲಿಸಿದರು. “ನಿತ್ಯಜೀವಕ್ಕಾಗಿ ಯೋಗ್ಯ ಪ್ರವೃತ್ತಿಯುಳ್ಳ”ವರೆಲ್ಲರ ಕಡೆಗೆ ಅವರಿಗಿದ್ದ ಪ್ರೀತಿಯು, ಜಪಾನಿನಲ್ಲಿ ಅಭಿವೃದ್ಧಿಹೊಂದುತ್ತಿದ್ದ ಕ್ರೈಸ್ತ ಸಹೋದರತ್ವಕ್ಕೆ ಸ್ಪಷ್ಟವಾಗಿ ತೋರುತ್ತಿತ್ತು ಮತ್ತು ಇದು ಅನೇಕ ದಶಕಗಳ ವರೆಗೆ ಅವರು ಬ್ರಾಂಚಿನ ಮೇಲ್ವಿಚಾರಣೆಯನ್ನು ಮಾಡಿಕೊಳ್ಳುವುದರಲ್ಲಿ ಪರಿಣಾಮಕಾರಿಯಾಗಿರಲು ಸಹಾಯವನ್ನು ನೀಡಿತು.
1975ರ ಮಧ್ಯ ಭಾಗದಲ್ಲಿ, ಬ್ಯಾರಿ ದಂಪತಿಗಳು ನ್ಯೂಯಾರ್ಕ್ನ ಬ್ರೂಕ್ಲಿನ್ಗೆ ಸ್ಥಳಾಂತರಿಸಲ್ಪಟ್ಟರು. ಆಗ ಜಪಾನಿನಲ್ಲಿ ಸುಮಾರು 30,000 ಸಾಕ್ಷಿಗಳು ಇದ್ದರು. ಒಬ್ಬ ಆತ್ಮಾಭಿಷಿಕ್ತ ಕ್ರೈಸ್ತರೋಪಾದಿ, ಸಹೋದರ ಬ್ಯಾರಿ ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಸದಸ್ಯರಾಗಿ ಸೇವೆಸಲ್ಲಿಸಲು ಆಮಂತ್ರಿಸಲ್ಪಟ್ಟರು. (ರೋಮಾಪುರ 8:16, 17) ಬರವಣಿಗೆಯಲ್ಲಿ ಅವರಿಗಿದ್ದ ಅನುಭವವು ರೈಟಿಂಗ್ ಡಿಪಾರ್ಟ್ಮೆಂಟ್ನಲ್ಲಿನ ಅವರ ಹೊಸ ಪಾತ್ರದಲ್ಲಿ ತುಂಬ ಪ್ರಯೋಜನಕಾರಿಯಾಯಿತು. ಅಷ್ಟುಮಾತ್ರವಲ್ಲದೆ, ಬ್ರಾಂಚ್ ಆಫೀಸು ಮತ್ತು ಅಂತಾರಾಷ್ಟ್ರೀಯ ಅಫೀಸುಗಳಲ್ಲಿ ಕೆಲಸಮಾಡುವುದರಿಂದ ಅವರಿಗೆ ದೊರಕಿದ ವಿಸ್ತಾರವಾದ ಅನುಭವವು, ಆಡಳಿತ ಮಂಡಲಿಯ ಪಬ್ಲಿಷಿಂಗ್ ಕಮಿಟಿಯ ಸದಸ್ಯರಾಗಿ ಸೇವೆಸಲ್ಲಿಸುವ ಅಮೂಲ್ಯ ಪಾತ್ರವನ್ನು ವಹಿಸಿಕೊಳ್ಳಲು ಅವರನ್ನು ಸನ್ನದ್ಧಗೊಳಿಸಿತು.
ಈ ಎಲ್ಲ ವರ್ಷಗಳಲ್ಲಿ, ಸಹೋದರ ಬ್ಯಾರಿ ಪೌರ ದೇಶ ಮತ್ತು ಅಲ್ಲಿನ ಜನರಿಗಾಗಿದ್ದ ತಮ್ಮ ಪ್ರೀತಿಯನ್ನು ಉಳಿಸಿಕೊಂಡರು. ಅವರು ತಮ್ಮ ಭಾಷಣಗಳಲ್ಲಿ ಮತ್ತು ಹೇಳಿಕೆಗಳಲ್ಲಿ ಮಿಷನೆರಿ ಕೆಲಸದಲ್ಲಿ ಸೇವೆಸಲ್ಲಿಸಿದ ಅನೇಕರ ಹೃದಯೋಲ್ಲಾಸಕರ ಅನುಭವಗಳನ್ನು ಎತ್ತಿತೋರಿಸುವರೆಂದು ಗಿಲ್ಯಡ್ ಶಾಲೆಯ ವಿದ್ಯಾರ್ಥಿಗಳಿಗೆ ಮಾತ್ರವಲ್ಲ ಬೆತೆಲ್ ಕುಟುಂಬದ ಸದಸ್ಯರಿಗೂ ಖಾತ್ರಿ ಇರುತ್ತಿತ್ತು. ಸಹೋದರ ಬ್ಯಾರಿ ಹುರುಪಿನಿಂದ ತಮ್ಮ ಸ್ವಂತ ಅನುಭವಗಳನ್ನು ತಿಳಿಸುತ್ತಿದ್ದಾಗ, ‘ಲೋಕದ ಕಟ್ಟಕಡೆಗಳಲ್ಲಿ’ ನಡೆದಂತಹ ರಾಜ್ಯ ಸಾರುವಿಕೆಯ ಚಟುವಟಿಕೆಗಳಿಗೆ ಜೀವಕಳೆ ಬರುತ್ತಿತ್ತು. ಇವುಗಳಲ್ಲಿ ಕೆಲವೊಂದು ಅನುಭವಗಳು ಸೆಪ್ಟೆಂಬರ್ 15, 1960ರ ವಾಚ್ಟವರ್ ಪತ್ರಿಕೆಯಲ್ಲಿ ಪ್ರಕಾಶಿಸಲ್ಪಟ್ಟಿರುವ ಅವರ ಸ್ವಂತ ಜೀವನ ಕಥೆಯಲ್ಲಿ ಉಲ್ಲೇಖಿಸಲ್ಪಟ್ಟಿವೆ.
“ನಿತ್ಯ ಜೀವಕ್ಕಾಗಿ ಯೋಗ್ಯ ಪ್ರವೃತ್ತಿಯುಳ್ಳವರ” ಕಡೆಗೆ ಸಹೋದರ ಬ್ಯಾರಿಯವರಿಗಿದ್ದ ಆಸಕ್ತಿಯು, ಅವರು ‘ಕ್ರಿಸ್ತನೊಂದಿಗೆ ಜೊತೆ ಬಾಧ್ಯಸ್ಥ’ರಾಗಿರುವಾಗಲೂ ಮುಂದುವರಿಯುವುದು ಎಂಬ ದೃಢ ವಿಶ್ವಾಸ ನಮಗಿದೆ. ಯೆಹೋವನಿಗೆ ಪೂರ್ಣವಾಗಿ ಸಮರ್ಪಿಸಿಕೊಂಡಿದ್ದ ಮತ್ತು ದೇವಜನರ ಕಡೆಗೆ ಆದರಣೀಯ ವಾತ್ಸಲ್ಯವನ್ನು ತೋರಿಸಿದ ಆತ್ಮಿಕ ಪುರುಷರೆಂದು ಇವರನ್ನು ತಿಳಿದಿದ್ದ ಮತ್ತು ಇವರನ್ನು ಪ್ರೀತಿಸಿದ ಎಲ್ಲರಿಗೂ ಇವರ ಮರಣವು ಖಂಡಿತವಾಗಿಯೂ ದುಃಖವನ್ನುಂಟುಮಾಡುವ ಸಂಗತಿಯಾಗಿದೆ. ಆದರೂ, ಸಹೋದರ ಬ್ಯಾರಿ ತಮ್ಮ ಭೂಜೀವಿತದ ಅಂತ್ಯದ ವರೆಗೂ ನಂಬಿಗಸ್ತಿಕೆಯಿಂದ ತಾಳಿಕೊಂಡದಕ್ಕಾಗಿ ನಾವು ಹರ್ಷಿಸುತ್ತೇವೆ.—ಪ್ರಕಟನೆ 2:10.
[ಪುಟ 16 ರಲ್ಲಿರುವ ಚಿತ್ರ]
ಲೈಡ್ ಬ್ಯಾರಿ ಮತ್ತು ಜಾನ್ ಬಾರ್, 1988ರಲ್ಲಿ “ಶಾಸ್ತ್ರಗಳ ಒಳನೋಟ” (ಇಂಗ್ಲಿಷ್) ಸಂಪುಟಗಳು ಬಿಡುಗಡೆಗೊಳಿಸಲ್ಪಟ್ಟಾಗ
[ಪುಟ 16 ರಲ್ಲಿರುವ ಚಿತ್ರ]
ಗಿಲ್ಯಡ್ನ 11ನೇ ತರಗತಿಯ ಪದವೀಧರರು, 40 ವರ್ಷಗಳ ಬಳಿಕ ಜಪಾನಿನಲ್ಲಿ ಭೇಟಿಯಾಗುತ್ತಿರುವುದು