ಆ್ಯಥೋಸ್ ಪರ್ವತ—ಒಂದು “ಪರಿಶುದ್ಧಪರ್ವತ”ವೋ?
ಆರ್ತೊಡಾಕ್ಸ್ ಚರ್ಚಿನ 22 ಕೋಟಿಗಿಂತಲೂ ಹೆಚ್ಚಿನ ಸದಸ್ಯರಿಗೆ, ಉತ್ತರ ಗ್ರೀಸ್ನಲ್ಲಿರುವ ಅಂಕುಡೊಂಕಾದ ಭೂಶಿರವಾದ ಆ್ಯಥೋಸ್ ಪರ್ವತವು, “ಆರ್ತೊಡಾಕ್ಸ್ ಕ್ರೈಸ್ತ ಲೋಕದ ಅತ್ಯಂತ ಪರಿಶುದ್ಧಪರ್ವತ”ವಾಗಿದೆ. ಅವರಲ್ಲಿ ಅನೇಕರಿಗೆ, ಆ್ಯಥೋಸ್ “ಪರಿಶುದ್ಧಪರ್ವತ”ದ ತೀರ್ಥಯಾತ್ರೆಯು ಒಂದು ಮಹತ್ವಾಕಾಂಕ್ಷೆಯಾಗಿದೆ. ಈ ‘ಪರಿಶುದ್ಧಪರ್ವತವು’ ಏನಾಗಿದೆ? ಇದಕ್ಕೆ ಇಷ್ಟೊಂದು ಪ್ರಾಧಾನ್ಯವು ಹೇಗೆ ಲಭಿಸಿತು? ಮತ್ತು ದೇವರಿಗೆ ಭಯಪಡುವಂತಹವರು ಆತ್ಮಿಕ ಮಾರ್ಗದರ್ಶನ ಹಾಗೂ ಸತ್ಯಾರಾಧನೆಗಾಗಿ ಎದುರುನೋಡಬೇಕಾದ ‘ಪರ್ವತವು’ ಇದೇ ಆಗಿದೆಯೊ?
ಬೈಬಲಿನಲ್ಲಿ “ಪರಿಶುದ್ಧಪರ್ವತ” ಎಂಬ ಅಭಿವ್ಯಕ್ತಿಯು ಕಂಡುಬರುತ್ತದೆ. ಅದನ್ನು ಸತ್ಯ ದೇವರಾದ ಯೆಹೋವನ ಪರಿಶುದ್ಧ, ನಿರ್ಮಲ, ಹಾಗೂ ಉನ್ನತ ಮಟ್ಟದ ಆರಾಧನೆಯೊಂದಿಗೆ ಸಂಬಂಧಿಸಲಾಗಿದೆ. ಪುರಾತನ ಯೆರೂಸಲೇಮಿನ ಚೀಯೋನ್ ಪರ್ವತಕ್ಕೆ ರಾಜ ದಾವೀದನು ಮಂಜೂಷವನ್ನು ತಂದಾಗ, ಅದು “ಪರಿಶುದ್ಧಪರ್ವತ”ವಾಯಿತು. (ಕೀರ್ತನೆ 15:1; 43:3; 2 ಸಮುವೇಲ 6:12, 17) ಸೊಲೊಮೋನನ ಮಂದಿರವನ್ನು ಮೊರೀಯ ಪರ್ವತದ ಮೇಲೆ ಕಟ್ಟಿದ ನಂತರ, ‘ಚೀಯೋನ್’ ಕ್ಷೇತ್ರದಲ್ಲಿ ದೇವಾಲಯದ ನಿವೇಶನವು ಸಹ ಸೇರಿಸಲ್ಪಟ್ಟಿತು, ಮತ್ತು ಹೀಗೆ ಚೀಯೋನ್ ದೇವರ “ಪರಿಶುದ್ಧಪರ್ವತ”ವಾಗಿಯೇ ಉಳಿಯಿತು. (ಕೀರ್ತನೆ 2:6; ಯೋವೇಲ 3:17) ದೇವರ ಆಲಯವು ಯೆರೂಸಲೇಮಿನಲ್ಲಿದ್ದ ಕಾರಣ, ಕೆಲವೊಮ್ಮೆ ಆ ನಗರವನ್ನು ಸಹ ದೇವರ “ಪರಿಶುದ್ಧಪರ್ವತ”ವೆಂದು ಕರೆಯಲಾಯಿತು.—ಯೆಶಾಯ 66:20; ದಾನಿಯೇಲ 9:16, 20.
ನಮ್ಮ ದಿನಗಳ ಕುರಿತೇನು? ದೇವರನ್ನು ಸ್ವೀಕಾರಯೋಗ್ಯವಾಗಿ ಆರಾಧಿಸಲು ಜನರು ಪ್ರವಾಹವಾಗಿ ಹರಿಯಬೇಕಾದ “ಪರಿಶುದ್ಧಪರ್ವತ”ವು, ಆ್ಯಥೋಸ್ ಪರ್ವತವಾಗಿದೆಯೊ ಅಥವಾ ಬೇರೆ ಯಾವುದಾದರೊಂದು ಶಿಖರವಾಗಿದೆಯೊ?
ಸಂನ್ಯಾಸಿಗಳ “ಪರಿಶುದ್ಧಪರ್ವತ”
ಆ್ಯಥೋಸ್ ಪರ್ವತವು, ಆಧುನಿಕ ದಿನದ ಥೆಸಲನೀಕೀಯದ ಪೂರ್ವದಿಕ್ಕಿನಲ್ಲಿ ಇಜೀಯನ್ ಸಮುದ್ರದೊಳಕ್ಕೆ ಚಾಚಿಕೊಂಡಿರುವ ಇಕ್ಕಟ್ಟಾದ ಭೂಭಾಗದ ತುದಿಯಲ್ಲಿರುವ ಕ್ಯಾಲ್ಸಿಡಸಿ ದ್ವೀಪಕಲ್ಪದ ಮೂಡಲ ದಿಕ್ಕಿನಲ್ಲಿದೆ. ಇದೊಂದು ಮೈನವಿರೇಳಿಸುವ, ಅಮೃತ ಶಿಲೆಯಂತಹ ಶಿಖರವಾಗಿದ್ದು, ಸಮುದ್ರಮಟ್ಟದಿಂದ 6,667 ಅಡಿಗಳಷ್ಟು ಎತ್ತರದಲ್ಲಿದೆ.
ಆ್ಯಥೋಸ್ ಬಹಳ ಕಾಲದಿಂದಲೂ ಒಂದು ಪವಿತ್ರಸ್ಥಾನವಾಗಿ ಪರಿಗಣಿಸಲ್ಪಟ್ಟಿದೆ. ಗ್ರೀಕ್ ಪುರಾಣಗಳಿಗನುಸಾರ, ಒಲಿಂಪಸ್ ಪರ್ವತವು ದೇವದೇವತೆಯರ ಬೀಡಾಗುವ ಮೊದಲು ಆ್ಯಥೋಸ್ ಪರ್ವತವು ಅವರ ವಾಸಸ್ಥಾನವಾಗಿತ್ತು. ಮಹಾ ಕಾನ್ಸ್ಟೆಂಟೀನ್ (ಸಾ.ಶ. ನಾಲ್ಕನೆಯ ಶತಮಾನ)ನ ಸಮಯಾವಧಿಯ ಬಳಿಕ, ಇದು ಕ್ರೈಸ್ತ ಚರ್ಚುಗಳಿಗೂ ಒಂದು ಪವಿತ್ರಸ್ಥಾನವಾಗಿ ಪರಿಣಮಿಸಿತು. ಒಂದು ಐತಿಹ್ಯಕ್ಕನುಸಾರ, “ಕನ್ಯೆಯಾದ” ಮರಿಯಳು ಸೌವಾರ್ತಿಕನಾದ ಯೋಹಾನನನ್ನು ಕರೆದುಕೊಂಡು, ಸೈಪ್ರಸ್ನಲ್ಲಿದ್ದ ಲಾಜರನನ್ನು ಸಂದರ್ಶಿಸಲು ಹೋಗುತ್ತಿದ್ದಾಗ, ಪ್ರಚಂಡವಾದ ಬಿರುಗಾಳಿಯ ಕಾರಣ ಆ್ಯಥೋಸ್ನಲ್ಲಿ ತಂಗಬೇಕಾಯಿತು. ಆ ಪರ್ವತದ ಸೌಂದರ್ಯಕ್ಕೆ ಮನಸೋತ ಮರಿಯಳು, ಅದನ್ನು ತನಗೆ ಕೊಡುವಂತೆ ಯೇಸುವನ್ನು ಕೇಳಿಕೊಂಡಳು. ಆದುದರಿಂದಲೇ, ಆ್ಯಥೋಸ್ “ಪರಿಶುದ್ಧ ಕನ್ಯೆಯ ತೋಟ” ಎಂಬುದಾಗಿಯೂ ಪ್ರಸಿದ್ಧವಾಯಿತು. ಬೈಸಂಟೀನ್ ಕಾಲಾವಧಿಯ ಮಧ್ಯಭಾಗದೊಳಗಾಗಿ, ಬಂಡೆಗಳಿಂದ ಆವೃತವಾದ ಆ ಇಡೀ ಕ್ಷೇತ್ರವು ಪರಿಶುದ್ಧ ಪರ್ವತವೆಂದು ಜ್ಞಾತವಾಯಿತು. ಈ ಹೆಸರು ಅಧಿಕೃತವಾಗಿ 11ನೆಯ ಶತಮಾನದ ಮಧ್ಯಭಾಗದಲ್ಲಿ ಸಾಮ್ರಾಟ ಕಾನ್ಸ್ಟೆಂಟೀನ್ IX ಮೋನಾಮಕಸ್ ಅವನ ಕಟ್ಟಳೆಗನುಸಾರ ಸ್ವೀಕರಿಸಲ್ಪಟ್ಟಿತು ಮತ್ತು ದೃಢೀಕರಿಸಲ್ಪಟ್ಟಿತು.
ಅದರ ಅಂಕುಡೊಂಕಾದ ಸ್ವರೂಪ ಹಾಗೂ ಪ್ರತ್ಯೇಕವಾದ ನೆಲೆಯ ಕಾರಣ, ಆ್ಯಥೋಸ್ ತನ್ನನ್ನು ಸಂನ್ಯಾಸಿ ಜೀವಿತಕ್ಕೆ ಯೋಗ್ಯವಾದ ಬೀಡಾಗಿ ನೀಡಿಕೊಂಡಿದೆ. ಶತಮಾನಗಳ ಉದ್ದಕ್ಕೂ, ಅದು ಆರ್ತೊಡಾಕ್ಸ್ ಪ್ರಪಂಚದ ಎಲ್ಲೆಡೆಯಿಂದಲೂ ಧಾರ್ಮಿಕ ಪುರುಷರನ್ನು ತನ್ನೆಡೆ ಸೆಳೆದುಕೊಂಡಿದೆ. ಇವರಲ್ಲಿ ಗ್ರೀಕರು, ಸರ್ಬಿಯನರು, ರೊಮೇನಿಯನರು, ಬಲ್ಗೇರಿಯನರು, ರಷ್ಯನರು, ಮತ್ತು ಇತರರು ಸೇರಿದ್ದು, ತಮ್ಮ ಚರ್ಚುಗಳು ಹಾಗೂ ಸಮುದಾಯಗಳನ್ನು ಒಳಗೊಂಡ ಹಲವಾರು ಸಂನ್ಯಾಸಿಮಠಗಳನ್ನು ಕಟ್ಟಿಕೊಂಡಿದ್ದಾರೆ. ಅವುಗಳಲ್ಲಿ ಸುಮಾರು 20 ಸಂನ್ಯಾಸಿ ಮಠಗಳು ಅಸ್ತಿತ್ವದಲ್ಲಿವೆ.
ಇಂದು ಆ್ಯಥೋಸ್ ಪರ್ವತ
ಇಂದು ಆ್ಯಥೋಸ್, 1926ರಲ್ಲಿ ಕಾಯಂ ಮಾಡಲ್ಪಟ್ಟ ಒಂದು ಶಾಸನವಿರುವ ಸ್ವಾಧಿಕಾರದ ಪ್ರಾಂತವಾಗಿದೆ. ಅಲ್ಲಿ ವಾಸಿಸುವ ಸಂನ್ಯಾಸಿಗಳ ಸಂಖ್ಯೆಯು ಈ ಹಿಂದೆ ಕಡಿಮೆಯಾಗಿತ್ತಾದರೂ, ಈಗ 2,000ಕ್ಕಿಂತಲೂ ಹೆಚ್ಚಾಗಿದೆ.
ಪ್ರತಿಯೊಂದು ಮಠಕ್ಕೆ ತನ್ನದೇ ಆದ ಹೊಲಗದ್ದೆಗಳ, ಆರಾಧನ ಗೃಹಗಳ, ಮತ್ತು ವಾಸಸ್ಥಾನಗಳ ಶಾಖೋಪಶಾಖೆಗಳಿವೆ. ಈ ಸಂನ್ಯಾಸಿಗಳ ಮೂಲಭೂತ ಪೂಜ್ಯಸ್ಥಾನವು, ಆ್ಯಥೋಸ್ ಪರ್ವತದ ತುದಿಯಲ್ಲಿ ಕಡಿದಾದ ಪ್ರಪಾತದ ಮೇಲಿರುವ ಕಾರೂಲ್ಯ ವಸಾಹತಿನಲ್ಲಿದೆ. ಇಲ್ಲಿರುವ ಕೆಲವು ಗುಡಿಸಿಲುಗಳನ್ನು, ತೊಡಕಾದ ಕಾಲುಹಾದಿಗಳು, ಕಲ್ಲಿನ ಮೆಟ್ಟಲುಗಳು ಮತ್ತು ಸರಪಣಿಗಳ ಸಹಾಯದಿಂದ ಮಾತ್ರ ತಲಪಸಾಧ್ಯವಿದೆ. ಆ್ಯಥೋಸ್ ಪರ್ವತದಲ್ಲಿರುವ ಸಂನ್ಯಾಸಿಗಳು ಪ್ರಭುಭೋಜನ ಸಂಸ್ಕಾರಗಳನ್ನು ದಿನನಿತ್ಯವೂ ಆಚರಿಸುತ್ತಾರಲ್ಲದೆ, (ದಿನವು ಸೂರ್ಯಾಸ್ತಮಾನದೊಂದಿಗೆ ಆರಂಭಿಸುವಂತಹ) ಬೈಸಂಟೀನ್ ಗಡಿಯಾರವನ್ನು ಮತ್ತು (ಜಾರ್ಜಿಯನ್ ಕ್ಯಾಲೆಂಡರ್ಗಿಂತಲೂ 13 ದಿನಗಳು ಹಿಂದಿರುವ) ಜೂಲಿಯನ್ ಕ್ಯಾಲೆಂಡರನ್ನು ಉಪಯೋಗಿಸುತ್ತಾರೆ.
ಈ ಧಾರ್ಮಿಕ ಕ್ಷೇತ್ರದ “ಪರಿಶುದ್ಧತೆಗೆ” ಒಬ್ಬ ಸ್ತ್ರೀಯು ಕಾರಣಳಾಗಿದ್ದರೂ, 1,000 ವರ್ಷಗಳಿಂದ ಅದರ ಸಂನ್ಯಾಸಿಗಳು ಮತ್ತು ಯೋಗಿಗಳು ಆ ಇಡೀ ದೀಪಕಲ್ಪವನ್ನು, ಯಾವುದೇ ನಪುಂಸಕರು ಅಥವಾ ಗಡ್ಡವಿಲ್ಲದ ವ್ಯಕ್ತಿಗಳನ್ನು ಸೇರಿಸಿ ಎಲ್ಲ ಸ್ತ್ರೀಜಾತಿಗೆ—ಮಾನವರು ಮತ್ತು ಪ್ರಾಣಿಗಳು—ನಿಷಿದ್ಧವಾದ ಕ್ಷೇತ್ರವೆಂದು ಘೋಷಿಸಿದ್ದಾರೆ. ಇತ್ತೀಚೆಗೆ, ಗಡ್ಡವಿಲ್ಲದವರ ಹಾಗೂ ಕೆಲವು ಹೆಣ್ಣುಜಾತಿಯ ಪ್ರಾಣಿಗಳ ಸಂಬಂಧದಲ್ಲಿದ್ದ ವಿಧಿಗಳು ಒಂದಿಷ್ಟು ಸಡಿಲಗೊಳಿಸಲ್ಪಟ್ಟಿರುವುದಾದರೂ, ಆ್ಯಥೋಸ್ ದಡದ 550 ಗಜಗಳ [500 ಮೀಟರುಗಳ] ಕ್ಷೇತ್ರದೊಳಗೆ ಸ್ತ್ರೀಯರು ಪ್ರವೇಶಿಸುವಂತೆಯೇ ಇಲ್ಲ.
ಸಕಲರಿಗಾಗಿರುವ ಒಂದು “ಪರಿಶುದ್ಧಪರ್ವತ”
ದೇವರಿಗೆ ಭಯಪಡುವ ಕ್ರೈಸ್ತರು ಆರಾಧನೆಗಾಗಿ ಕೂಡಿಬರುವ ‘ಪರಿಶುದ್ಧಪರ್ವತವು’ ಆ್ಯಥೋಸ್ ಆಗಿದೆಯೊ? ದೇವರನ್ನು ಗೆರಿಜಿಮ್ ಪರ್ವತದ ಮೇಲೆ ಆರಾಧಿಸಬೇಕೆಂದು ನಂಬಿದ್ದ ಒಬ್ಬ ಸಮಾರ್ಯದ ಸ್ತ್ರೀಯೊಂದಿಗೆ ಮಾತಾಡುತ್ತಾ, ದೇವರ ಆರಾಧನೆಗಾಗಿ ಯಾವುದೇ ಅಕ್ಷರಾರ್ಥ ಪರ್ವತವನ್ನು ಇನ್ನು ಮುಂದೆ ನಿಯಮಿಸಲಾಗುವುದಿಲ್ಲವೆಂದು ಯೇಸು ಸ್ಪಷ್ಟವಾಗಿ ತಿಳಿಸಿದನು. “ಒಂದು ಕಾಲ ಬರುತ್ತದೆ, ಆ ಕಾಲದಲ್ಲಿ ನೀವು ತಂದೆಯನ್ನು ಆರಾಧಿಸಬೇಕಾದರೆ ಈ [ಗೆರಿಜಿಮ್] ಬೆಟ್ಟಕ್ಕೂ ಹೋಗುವದಿಲ್ಲ, ಯೆರೂಸಲೇಮಿಗೂ ಹೋಗುವದಿಲ್ಲ” ಎಂದು ಯೇಸು ಹೇಳಿದನು. ಏಕೆ? ಏಕೆಂದರೆ “ದೇವರು ಆತ್ಮಸ್ವರೂಪನು; ಆತನನ್ನು ಆರಾಧಿಸುವವರು ಆತ್ಮ ಮತ್ತು ಸತ್ಯದೊಂದಿಗೆ ಆರಾಧಿಸಬೇಕು.”—ಯೋಹಾನ 4:21, 24, NW.
ನಮ್ಮ ಸಮಯವನ್ನು ಸೂಚಿಸುತ್ತಾ, ಒಂದು ಸಾಂಕೇತಿಕ “ಯೆಹೋವನ ಮಂದಿರದ ಬೆಟ್ಟವು ಗುಡ್ಡಬೆಟ್ಟಗಳಿಗಿಂತ ಉನ್ನತೋನ್ನತವಾಗಿ ಬೆಳೆದು ನೆಲೆಗೊಳ್ಳುವದು” ಮತ್ತು “ಸಕಲದೇಶಗಳವರು ಅದರ ಕಡೆಗೆ ಪ್ರವಾಹಗಳಂತೆ ಬರುವರು” ಎಂಬುದಾಗಿ ಪ್ರವಾದಿಯಾದ ಯೆಶಾಯನು ಮುಂತಿಳಿಸಿದನು.—ಯೆಶಾಯ 2:2, 3.
ದೇವರೊಂದಿಗೆ ಒಂದು ಒಳ್ಳೆಯ ಸಂಬಂಧವನ್ನು ಹೊಂದಿರಲು ಬಯಸುವ ಪುರುಷರು ಮತ್ತು ಸ್ತ್ರೀಯರು, ಯೆಹೋವನನ್ನು “ಆತ್ಮ ಮತ್ತು ಸತ್ಯದೊಂದಿಗೆ” ಆರಾಧಿಸುವಂತೆ ಆಮಂತ್ರಿಸಲ್ಪಡುತ್ತಾರೆ. ಲೋಕದಾದ್ಯಂತವಿರುವ ಲಕ್ಷಾಂತರ ಜನರು, ‘ಯೆಹೋವನ ಪರ್ವತಕ್ಕೆ’ ನಡೆಸುವ ದಾರಿಯನ್ನು ಕಂಡುಕೊಂಡಿದ್ದಾರೆ. ಇತರರೊಂದಿಗೆ ಜೊತೆಗೂಡಿ ಅವರು, ಒಬ್ಬ ಗ್ರೀಕ್ ವಕೀಲರ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಅವರು ಆ್ಯಥೋಸ್ನ ಬಗ್ಗೆ ಹೇಳಿದ್ದು: “ನಾಲ್ಕು ಗೋಡೆಗಳ ಮಧ್ಯೆ ಇಲ್ಲವೆ ಸಂನ್ಯಾಸಿಮಠಗಳಲ್ಲಿ ಮಾತ್ರ ಆತ್ಮಿಕತೆಯನ್ನು ಕಂಡುಕೊಳ್ಳಸಾಧ್ಯವಿದೆ ಎಂಬುದು ಎಷ್ಟು ಸತ್ಯಾಸತ್ಯವೊ ನಾನರಿಯೆ.”—ಹೋಲಿಸಿ ಅ. ಕೃತ್ಯಗಳು 17:24.
[ಪುಟ 31ರಲ್ಲಿರುವ ಚೌಕ]
ದೀರ್ಘ ಸಮಯದಿಂದ ಅಡಗಿಸಿಡಲ್ಪಟ್ಟಿದ್ದ ಗುಪ್ತ ನಿಧಿ
ಅನೇಕ ಶತಮಾನಗಳಿಂದ, ಆ್ಯಥೋಸ್ನಲ್ಲಿರುವ ಸಂನ್ಯಾಸಿಗಳು, ಒಂದು ಗುಪ್ತ ನಿಧಿಯನ್ನು ಶೇಖರಿಸಿಟ್ಟಿದ್ದಾರೆ. ಇದರಲ್ಲಿ, ನಾಲ್ಕನೆಯ ಶತಮಾನದ್ದೆಂದು ಕೆಲವರು ಹೇಳುವ, 15,000ದಷ್ಟು ಹಸ್ತಪ್ರತಿಗಳಿವೆ. ಇದು ಲೋಕದ ಅತ್ಯಂತ ಅಮೂಲ್ಯವಾದ ನಿಕ್ಷೇಪಗಳಲ್ಲಿ ಒಂದಾಗಿದೆ. ಅದರಲ್ಲಿ ಸುರುಳಿಗಳು, ಸುವಾರ್ತೆಗಳ ಸಂಪೂರ್ಣ ಸಂಪುಟಗಳು ಮತ್ತು ಕೆಲವು ಭಾಗಗಳು, ಕೀರ್ತನೆಗಳು ಮತ್ತು ಸ್ತೋತ್ರಗೀತೆಗಳ ಜೊತೆಗೆ, ಪುರಾತನ ಕಾಲದ ಬಣ್ಣದ ಚಿತ್ರಗಳು, ಪ್ರತಿಮೆಗಳು, ಶಿಲೆಗಳು, ಮತ್ತು ಲೋಹದಿಂದ ಮಾಡಲ್ಪಟ್ಟ ವಸ್ತುಗಳಿವೆ. ಇಡೀ ಲೋಕದಲ್ಲಿರುವ ಗ್ರೀಕ್ ಹಸ್ತಪ್ರತಿಗಳಲ್ಲಿ ನಾಲ್ಕನೆಯ ಒಂದು ಭಾಗದಷ್ಟು ಹಸ್ತಪ್ರತಿಗಳು ಆ್ಯಥೋಸ್ ಪರ್ವತದಲ್ಲಿವೆ ಎಂಬುದಾಗಿ ಅಂದಾಜುಮಾಡಲಾಗಿದೆ. ಇವುಗಳಲ್ಲಿ ಹೆಚ್ಚಿನವುಗಳನ್ನು ಇನ್ನೂ ಸರಿಯಾಗಿ ವರ್ಗೀಕರಿಸಬೇಕಾಗಿದೆ. 1997ರಲ್ಲಿ ಪ್ರಥಮ ಬಾರಿ, ಸಂನ್ಯಾಸಿಗಳು ತಮ್ಮ ನಿಕ್ಷೇಪದಲ್ಲಿ ಕೆಲವನ್ನು ಥೆಸಲನೀಕೀಯಲ್ಲಿ ಪ್ರದರ್ಶನಕ್ಕಿಡಲು ಸಮ್ಮತಿಸಿದರು.
[ಪುಟ 31ರಲ್ಲಿರುವ ಚಿತ್ರ ಕೃಪೆ]
Telis/Greek National Tourist Organization