“ನನ್ನ ಬಳಿಗೆ ಬನ್ನಿರಿ, . . . ನಾನು ನಿಮಗೆ ಚೈತನ್ಯ ನೀಡುವೆನು”
‘ವಾಕ್ಯವನ್ನು ಸಾರುವುದು’ ಚೈತನ್ಯವನ್ನು ತರುತ್ತದೆ
ಅವನು ಒಂದು ಪ್ರಮುಖ ಕಾರ್ಯಾಚರಣೆಯನ್ನು ನಡೆಸಲಿಕ್ಕಾಗಿ ಬಂದ ಪರಿಪೂರ್ಣ ಮನುಷ್ಯನಾಗಿದ್ದನು. ಅವನ ಬೋಧನಾ ವಿಧಾನಗಳು ಎಷ್ಟು ಪರಿಣಾಮಕಾರಿಯಾಗಿದ್ದವೆಂದರೆ, “ಜನರ ಗುಂಪುಗಳು ಆತನ ಉಪದೇಶಕ್ಕೆ ಆತ್ಯಾಶ್ಚರ್ಯಪಟ್ಟವು.” (ಮತ್ತಾಯ 7:28) ಅವನು ಬೇಸರಿಸದೇ ಸತತವಾಗಿ ಸಾರಿದ ಸೌವಾರ್ತಿಕನಾಗಿದ್ದನು. ಅವನ ಸಮಯ, ಶಕ್ತಿ ಹಾಗೂ ಸಂಪನ್ಮೂಲಗಳು ಮೊದಲಾಗಿ ದೇವರ ರಾಜ್ಯದ ಕುರಿತು ಸಾರುವ ಕೆಲಸಕ್ಕಾಗಿ ಉಪಯೋಗಿಸಲ್ಪಟ್ಟವು. ವಾಸ್ತವದಲ್ಲಿ, ಒಬ್ಬ ಅನುಪಮ ಸೌವಾರ್ತಿಕನು ಹಾಗೂ ಬೋಧಕನೋಪಾದಿ, ಯೇಸು ತನ್ನ ಸ್ವದೇಶದಾದ್ಯಂತ ಪ್ರಯಾಣಿಸಿದನು.—ಮತ್ತಾಯ 9:35.
ಯೇಸುವಿನ ತುರ್ತಿನ ಕಾರ್ಯಾಚರಣೆಯು, ತನ್ನ ಸಮಕಾಲೀನರಿಗೆ “ಪರಲೋಕ ರಾಜ್ಯದ ಈ ಸುವಾರ್ತೆ”ಯನ್ನು ಸಾರುವುದು ಹಾಗೂ ಭೂವ್ಯಾಪಕ ಮಟ್ಟದಲ್ಲಿ ಅದೇ ಕೆಲಸವನ್ನು ಮಾಡಲಿಕ್ಕಾಗಿ ತನ್ನ ಶಿಷ್ಯರಿಗೆ ತರಬೇತಿಯನ್ನು ನೀಡುವುದೇ ಆಗಿತ್ತು. (ಮತ್ತಾಯ 4:23; 24:14; 28:19, 20) ಅವರ ಸಾರುವ ನೇಮಕದ ಭಾರವಾದ ಜವಾಬ್ದಾರಿ ಮತ್ತು ಆ ಕೆಲಸದ ಜರೂರಿ ಹಾಗೂ ಅಂತಹ ಚಟುವಟಿಕೆಯ ವಿಸ್ತಾರ್ಯವು ತಾನೇ, ಇತಿಮಿತಿಗಳಿದ್ದ ಅವನ ಅಪರಿಪೂರ್ಣ ಹಿಂಬಾಲಕರ ಮನಗುಂದಿಸಿತೋ?
ಖಂಡಿತವಾಗಿಯೂ ಇಲ್ಲ! ಹೆಚ್ಚಿನ ಕೆಲಸಗಾರರನ್ನು ಕಳುಹಿಸುವಂತೆ “ಬೆಳೆಯ ಯಜಮಾನ”ನಾಗಿರುವ ಯೆಹೋವ ದೇವರಿಗೆ ಪ್ರಾರ್ಥಿಸುವಂತೆ ತನ್ನ ಶಿಷ್ಯರಿಗೆ ಉಪದೇಶ ನೀಡಿದ ಬಳಿಕ, ಯೇಸು ಅವರನ್ನು ಜನರಿಗೆ ಶಿಕ್ಷಣ ನೀಡಲಿಕ್ಕಾಗಿ ಕಳುಹಿಸಿದನು. (ಮತ್ತಾಯ 9:38; 10:1) ತದನಂತರ, ಸಾರುವ ನೇಮಕವನ್ನೂ ಸೇರಿಸಿ ತನ್ನ ಹಿಂಬಾಲಕರಾಗಿರುವ ಜವಾಬ್ದಾರಿಯು, ಅವರಿಗೆ ನಿಜವಾದ ಉಪಶಮನ ಹಾಗೂ ಸಾಂತ್ವನವನ್ನು ತರುವುದೆಂಬ ಆಶ್ವಾಸನೆಯನ್ನೂ ಅವರಿಗೆ ಕೊಟ್ಟನು. ಯೇಸು ಹೇಳಿದ್ದು: “ನನ್ನ ಬಳಿಗೆ ಬನ್ನಿರಿ, . . . ನಾನು ನಿಮಗೆ ಚೈತನ್ಯ ನೀಡುವೆನು.”—ಮತ್ತಾಯ 11:28, NW.
ಆನಂದದ ಒಂದು ಮೂಲ
ಆ ಆಮಂತ್ರಣವು ಎಷ್ಟು ಸಹಾನುಭೂತಿ, ಪ್ರೀತಿ ಹಾಗೂ ಕರುಣೆಯುಳ್ಳದ್ದಾಗಿದೆ! ಇದು ತನ್ನ ಹಿಂಬಾಲಕರ ಕಡೆಗೆ ಯೇಸುವಿಗಿದ್ದ ಅಪಾರ ಕಾಳಜಿಯನ್ನು ವ್ಯಕ್ತಪಡಿಸುತ್ತದೆ. ದೇವರ ರಾಜ್ಯದ “ಸುವಾರ್ತೆ”ಯನ್ನು ಸಾರುವ ತಮ್ಮ ಜವಾಬ್ದಾರಿಯನ್ನು ಪೂರೈಸುವುದರಲ್ಲಿ ಅವನ ಶಿಷ್ಯರು ಚೈತನ್ಯವನ್ನು ಕಂಡುಕೊಳ್ಳುತ್ತಾರೆ. ಇದು ಅವರಿಗೆ ನಿಜವಾದ ಆನಂದ ಮತ್ತು ಸಂತೃಪ್ತಿಯನ್ನು ನೀಡುತ್ತದೆ.—ಯೋಹಾನ 4:36.
ಯೇಸು ಈ ಭೂಮಿಯಲ್ಲಿ ಜೀವಿಸುತ್ತಿದ್ದುದಕ್ಕಿಂತಲೂ ದೀರ್ಘ ಸಮಯದ ಹಿಂದೆ, ಆನಂದವು ದೇವರಿಗೆ ಸಲ್ಲಿಸುವ ಪವಿತ್ರ ಸೇವೆಯ ಒಂದು ವೈಶಿಷ್ಟ್ಯವಾಗಿರಬೇಕು ಎಂದು ಶಾಸ್ತ್ರವಚನಗಳು ಒತ್ತಿಹೇಳಿದ್ದವು. “ಸಮಸ್ತಭೂನಿವಾಸಿಗಳೇ, ಯೆಹೋವನಿಗೆ ಜಯಘೋಷಮಾಡಿರಿ. ಯೆಹೋವನನ್ನು ಸಂತೋಷದಿಂದ ಸೇವಿಸಿರಿ; ಉತ್ಸಾಹಧ್ವನಿಮಾಡುತ್ತಾ ಆತನ ಸನ್ನಿಧಿಗೆ ಬನ್ನಿರಿ” ಎಂದು ಕೀರ್ತನೆಗಾರನು ಹಾಡಿದಾಗ ಇದು ಸ್ಪಷ್ಟಪಡಿಸಲ್ಪಟ್ಟಿತು. (ಕೀರ್ತನೆ 100:1, 2) ಇಂದು, ಎಲ್ಲ ಜನಾಂಗಗಳಿಂದ ಬಂದಿರುವ ಜನರು ಯೆಹೋವನಲ್ಲಿ ಅತ್ಯಾನಂದಪಡುತ್ತಾರೆ, ಮತ್ತು ಅವರ ಸ್ತುತಿಯ ಅಭಿವ್ಯಕ್ತಿಗಳು, ಒಂದು ವಿಜಯಿ ಸೈನ್ಯದಿಂದ ಮಾಡಲ್ಪಡುವ ಜಯಘೋಷದಂತಿವೆ. ಯಾರು ನಿಜವಾಗಿಯೂ ದೇವರಿಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೋ ಅವರು “ಉತ್ಸಾಹಧ್ವನಿಮಾಡುತ್ತಾ” ಆತನ ಸನ್ನಿಧಿಗೆ ಬರುತ್ತಾರೆ. ಮತ್ತು ಅದು ಖಂಡಿತವಾಗಿಯೂ ಸೂಕ್ತವಾದದ್ದಾಗಿದೆ, ಏಕೆಂದರೆ ಯೆಹೋವನು “ಸಂತೋಷಭರಿತ ದೇವ”ರಾಗಿದ್ದು, ತನ್ನ ಸೇವಕರು ತಾವು ಮಾಡಿಕೊಂಡಿರುವ ಸಮರ್ಪಣೆಯನ್ನು ಪೂರೈಸುವುದರಲ್ಲಿ ಆನಂದವನ್ನು ಕಂಡುಕೊಳ್ಳುವಂತೆ ಆತನು ಬಯಸುತ್ತಾನೆ.—1 ತಿಮೊಥೆಯ 1:11, NW.
ಚೈತನ್ಯ ಪಡೆದಿರುವ ಶುಶ್ರೂಷಕರು
ಕ್ಷೇತ್ರ ಸೇವೆಯಲ್ಲಿ ಮಾಡುವ ಶ್ರಮದ ಕೆಲಸವು ನಮ್ಮನ್ನು ಬಳಲಿಸುವುದಿಲ್ಲ, ಬದಲಾಗಿ ಚೈತನ್ಯವನ್ನು ಉಂಟುಮಾಡುತ್ತದೆ. ಅದು ಹೇಗೆ ಸಾಧ್ಯ? ಯೆಹೋವನ ಕೆಲಸವನ್ನು ಮಾಡುವುದು ಯೇಸುವಿಗೆ ಬಲವನ್ನು ನೀಡುವ ಆಹಾರದಂತಿತ್ತು. ಅವನು ಹೇಳಿದ್ದು: “ನನ್ನನ್ನು ಕಳುಹಿಸಿದಾತನ ಚಿತ್ತದಂತೆ ಮಾಡಿ ಆತನ ಕೆಲಸವನ್ನು ಪೂರೈಸುವದೇ ನನ್ನ ಆಹಾರವು.”—ಯೋಹಾನ 4:34.
ತದ್ರೀತಿಯಲ್ಲಿ, ಹುರುಪುಳ್ಳ ಇಂದಿನ ಕ್ರೈಸ್ತ ಸೌವಾರ್ತಿಕರು ‘ವಾಕ್ಯವನ್ನು ಸಾರುವಾಗ’ ಆನಂದವನ್ನು ಕಂಡುಕೊಳ್ಳುತ್ತಾರೆ. (2 ತಿಮೊಥೆಯ 4:2) ಸಾರುವ ಕೆಲಸದಲ್ಲಿ ಒಂದು ತಿಂಗಳಿಗೆ 70ಕ್ಕಿಂತಲೂ ಹೆಚ್ಚು ತಾಸುಗಳನ್ನು ವ್ಯಯಿಸುವಂಥ ಮಧ್ಯ ವಯಸ್ಸಿನ ಕ್ರೈಸ್ತ ಸ್ತ್ರೀಯಾದ ಕಾನೀ ಹೇಳುವುದು: “ಶುಶ್ರೂಷೆಯಲ್ಲಿ ಪಾಲ್ಗೊಂಡ ನಂತರ, ದಿನದ ಅಂತ್ಯದಲ್ಲಿ ನಾನು ಆಯಾಸಗೊಂಡಿದ್ದರೂ, ನನಗೆ ಸಂತೃಪ್ತಿಯ ಹಾಗೂ ಆನಂದದ ಅನಿಸಿಕೆಯಾಗುತ್ತದೆ.”
ರಾಜ್ಯದ ಸಂದೇಶವು ಸಕಾರಾತ್ಮಕವಾಗಿ ಸ್ವೀಕರಿಸಲ್ಪಡದಿರುವಲ್ಲಿ ಆಗೇನು? ಕಾನೀ ಮುಂದುವರಿಸುವುದು: “ಜನರ ಪ್ರತಿಕ್ರಿಯೆಯು ಹೇಗೇ ಇರಲಿ, ಶುಶ್ರೂಷೆಯಲ್ಲಿ ಪಾಲ್ಗೊಂಡದ್ದಕ್ಕಾಗಿ ನಾನೆಂದೂ ವಿಷಾದಪಟ್ಟಿಲ್ಲ. ಯೆಹೋವನಿಗೆ ಸಂತೋಷವನ್ನು ಉಂಟುಮಾಡುವ ಕೆಲಸವನ್ನು ನಾನು ಮಾಡುತ್ತಿದ್ದೇನೆ ಎಂಬುದು ನನಗೆ ಗೊತ್ತಿದೆ, ಮಾತ್ರವಲ್ಲ ಸತ್ಯದ ಕುರಿತು ಮಾತಾಡುವುದನ್ನು ನಾನೊಂದು ಸುಯೋಗವಾಗಿ ಎಣಿಸುತ್ತೇನೆ. ಏಕೆಂದರೆ ಹಾಗೆ ಮಾತಾಡುವಾಗ, ಬೈಬಲಿನ ಅದ್ಭುತಕರ ನಿರೀಕ್ಷೆಯು ನನ್ನ ಹೃದಯದಲ್ಲಿ ಇನ್ನಷ್ಟು ಬಲಗೊಳ್ಳುತ್ತದೆ.”
ದೇವರ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳುವಂತೆ ಜನರಿಗೆ ಸಹಾಯಮಾಡುವುದು, ತಮ್ಮ ಸ್ವಂತ ಜೀವಿತಕ್ಕೆ ಅರ್ಥವನ್ನು ಕೊಡುತ್ತದೆ ಎಂಬುದು ಇನ್ನಿತರರ ಅಭಿಪ್ರಾಯವಾಗಿದೆ. ಸಾರುವ ಕೆಲಸದಲ್ಲಿ ತಿಂಗಳಿಗೆ 50ಕ್ಕಿಂತಲೂ ಹೆಚ್ಚು ತಾಸುಗಳನ್ನು ಕ್ರಮವಾಗಿ ವ್ಯಯಿಸುವಂಥ ಯುವತಿಯಾದ ಮೆಲೊನಿ ಹೇಳುವುದು: “ಶುಶ್ರೂಷೆಯು ಚೈತನ್ಯದಾಯಕವಾಗಿರಲು ಕಾರಣವೇನೆಂದರೆ, ಇದು ನನ್ನ ಜೀವಿತಕ್ಕೆ ಮಾರ್ಗದರ್ಶನ ಹಾಗೂ ಉದ್ದೇಶವನ್ನು ನೀಡುತ್ತದೆ. ಸೇವೆಯಲ್ಲಿ ಪಾಲ್ಗೊಳ್ಳುವಾಗ, ವೈಯಕ್ತಿಕ ಸಮಸ್ಯೆಗಳು ಹಾಗೂ ದೈನಂದಿನ ಒತ್ತಡಗಳು ತೀರ ಕ್ಷುಲ್ಲಕ ವಿಷಯಗಳಾಗಿ ಕಂಡುಬರುತ್ತವೆ.”
ಮಿಲಸಂಟ್ ಎಂಬುವವಳು ಯೆಹೋವನ ಸಾಕ್ಷಿಗಳ ಇನ್ನೊಬ್ಬ ಹುರುಪಿನ ಶುಶ್ರೂಷಕಿಯಾಗಿದ್ದಾಳೆ. ಅವಳು ಹೇಳುವುದು: “ಶುಶ್ರೂಷೆಯು, ಮಾನವಕುಲಕ್ಕಾಗಿರುವ ದೇವರ ಉದ್ದೇಶದ ಕುರಿತು ನಾನು ಇತರರೊಂದಿಗೆ ಮಾತಾಡುವುದರಲ್ಲಿ ಹಾಗೂ ಭೂಮಿಯ ಮೇಲೆ ಪರದೈಸವು ಹೇಗೆ ಪುನಸ್ಸ್ಥಾಪಿಸಲ್ಪಡುವುದು ಎಂಬುದರ ಕುರಿತು ವಿವರಿಸುವುದರಲ್ಲಿ ನಾನು ವ್ಯಯಿಸುವ ಪ್ರತಿಯೊಂದು ದಿನಕ್ಕೆ ಮೌಲ್ಯವನ್ನು ನೀಡುತ್ತದೆ. ದಿನದಿಂದ ದಿನಕ್ಕೆ ಯೆಹೋವನು ನನಗೆ ನೈಜ ವ್ಯಕ್ತಿಯಾಗಿ ಪರಿಣಮಿಸುತ್ತಿದ್ದಾನೆ ಮತ್ತು ಇದು ಶಾಂತಿಯನ್ನೂ ಸ್ವಲ್ಪ ಮಟ್ಟಿಗಿನ ಆಂತರಿಕ ಸಂತೋಷವನ್ನೂ ನೀಡುತ್ತದೆ. ಇದನ್ನು ಇನ್ನಾವುದೇ ಮೂಲದಿಂದ ಪಡೆದುಕೊಳ್ಳಲು ಸಾಧ್ಯವಿಲ್ಲ.”
ಚೈತನ್ಯವನ್ನು ಪಡೆದುಕೊಳ್ಳುವವರು
ರಾಜ್ಯ ಪ್ರಚಾರಕರು ಕ್ರೈಸ್ತ ಶುಶ್ರೂಷೆಯಿಂದ ಖಂಡಿತವಾಗಿಯೂ ಚೈತನ್ಯವನ್ನು ಪಡೆದುಕೊಳ್ಳುತ್ತಾರೆ, ಮತ್ತು ಈ ಜೀವದಾಯಕ ಸಂದೇಶವನ್ನು ಸ್ವೀಕರಿಸುವವರು ಅದರಿಂದ ಸಂತೈಸಲ್ಪಡುತ್ತಾರೆ. ಪೋರ್ಚುಗಲ್ನ ಒಬ್ಬ ಶಾಲಾ ಶಿಕ್ಷಕಿಯು, ನನ್ಗಳು ಹಾಗೂ ಪಾದ್ರಿಗಳಿಂದ ತರಬೇತಿಯನ್ನು ಪಡೆದುಕೊಂಡಿದ್ದಳಾದರೂ, ತನ್ನ ಚರ್ಚಿನಿಂದ ತನ್ನ ಆತ್ಮಿಕ ಆವಶ್ಯಕತೆಗಳು ಪೂರೈಸಲ್ಪಡುತ್ತಿಲ್ಲ ಎಂಬ ಅನಿಸಿಕೆ ಅವಳಿಗಾಯಿತು. ಅವಳ ಬೈಬಲ್ ಪ್ರಶ್ನೆಗಳಿಗೆ ಉತ್ತರವೇ ಸಿಕ್ಕಿರಲಿಲ್ಲ. ಯೆಹೋವನ ಸಾಕ್ಷಿಗಳಲ್ಲಿ ಒಬ್ಬರಿಂದ ನಡೆಸಲ್ಪಟ್ಟ ಒಂದು ಕ್ರಮವಾದ ಬೈಬಲ್ ಅಧ್ಯಯನವು, ಪ್ರಗತಿಪರವಾಗಿ ಅವಳಿಗೆ ಶಾಸ್ತ್ರೀಯ ತಿಳಿವಳಿಕೆಯನ್ನು ನೀಡತೊಡಗಿತು. ಇದರಿಂದ ಆ ಶಾಲಾ ಶಿಕ್ಷಕಿಯು ತುಂಬ ಪುಳಕಗೊಂಡಳು. ಅವಳು ಹೇಳಿದ್ದು: “ಪ್ರತಿ ಬುಧವಾರ ನಾನು ನನ್ನ ಅಧ್ಯಯನಕ್ಕಾಗಿ ಕಾತುರಳಾಗಿ ಕಾಯುತ್ತಿದ್ದೆ. ಏಕೆಂದರೆ ಮನದಟ್ಟಾಗುವಂಥ ಬೈಬಲ್ ಪುರಾವೆಯಿಂದ ನನ್ನ ಪ್ರಶ್ನೆಗಳು ಒಂದೊಂದಾಗಿ ಉತ್ತರಿಸಲ್ಪಟ್ಟವು.” ಇಂದು, ಈ ಸ್ತ್ರೀಯು ಯೆಹೋವನ ಸಮರ್ಪಿತ ಸೇವಕಳಾಗಿದ್ದಾಳೆ ಮತ್ತು ಇವಳೂ ಬೈಬಲ್ ಸತ್ಯದ ಸಹಾಯದಿಂದ ಇತರರಿಗೆ ಚೈತನ್ಯ ನೀಡುತ್ತಿದ್ದಾಳೆ.
ಆದುದರಿಂದ, ತಮ್ಮ ಸಾರುವ ನೇಮಕದ ಗಂಭೀರತೆಯಿಂದಾಗಿ ಅಥವಾ ತಮ್ಮ ಭೌಗೋಲಿಕ ಟೆರಿಟೊರಿಯ ವಿಸ್ತಾರ್ಯದಿಂದಾಗಿ ಯೆಹೋವನ ಸಾಕ್ಷಿಗಳ ಚಿತ್ತಸ್ಥೈರ್ಯವು ಕುಂದಿರುವುದಿಲ್ಲ ಎಂಬುದಂತೂ ಸ್ಪಷ್ಟ. ಉದಾಸೀನ ಮನೋಭಾವವಾಗಲಿ ವಿರೋಧವಾಗಲಿ ಅವರನ್ನು ನಿರುತ್ಸಾಹಗೊಳಿಸುವುದಿಲ್ಲ. ತಮ್ಮ ರಾಜ್ಯ ಸಾರುವಿಕೆಯ ನೇಮಕವನ್ನು ಪೂರೈಸಲಿಕ್ಕಾಗಿ ಅವರು ತಮ್ಮನ್ನು ಹುರುಪಿನಿಂದ ನೀಡಿಕೊಂಡಿದ್ದಾರೆ. ಜನರು ಕಂಡುಬರುವಲ್ಲೆಲ್ಲಾ ಅವರು ಸುವಾರ್ತೆಯನ್ನು ಸಾರುತ್ತಾರೆ—ಅಮೆರಿಕದಲ್ಲಿರುವ ಒಂದು ಟ್ರಕ್ ನಿಲುಗಡೆ ಸ್ಥಾನದಲ್ಲಿ (1), ಕೊರಿಯದ ವಿಮಾನ ನಿಲ್ದಾಣವೊಂದರಲ್ಲಿ (2), ಆ್ಯಂಡೀಸ್ ಪರ್ವತಗಳಲ್ಲಿ (3), ಅಥವಾ ಲಂಡನ್ನಿನ ಒಂದು ಅಂಗಡಿಯಲ್ಲಿ (4). ಆಧುನಿಕ ದಿನದ ಯೇಸುವಿನ ಹಿಂಬಾಲಕರು, ಲೋಕವ್ಯಾಪಕವಾಗಿರುವ ತಮ್ಮ ಪ್ರತಿಫಲದಾಯಕ ಕೆಲಸವನ್ನು ಆನಂದದಿಂದ ಮುಂದುವರಿಸಿಕೊಂಡುಹೋಗುತ್ತಾರೆ. ತನ್ನ ವಾಗ್ದಾನಕ್ಕನುಸಾರ, ಯೇಸು ಅವರಿಗೆ ಚೈತನ್ಯ ನೀಡಿದ್ದಾನೆ ಮತ್ತು ಇನ್ನೂ ಅನೇಕರನ್ನು ಚೈತನ್ಯಗೊಳಿಸಲಿಕ್ಕಾಗಿ ಅವರನ್ನು ಉಪಯೋಗಿಸಿದ್ದಾನೆ.—ಪ್ರಕಟನೆ 22:17.