ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w11 3/15 ಪು. 28-32
  • ಯೆರೆಮೀಯನಂತೆ ಎಚ್ಚರವಾಗಿರ್ರಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆರೆಮೀಯನಂತೆ ಎಚ್ಚರವಾಗಿರ್ರಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ತುರ್ತಾಗಿ ಸಾರಬೇಕಾದ ಸಂದೇಶ
  • ಜನರ ಮೇಲಿನ ಪ್ರೀತಿ
  • ದೇವದತ್ತ ಧೈರ್ಯ
  • ಹೃತ್ಪೂರ್ವಕ ಸಂತೋಷ
  • ನಿಮ್ಮ ನೇಮಕವನ್ನು ಪೂರೈಸಲು ‘ಎಚ್ಚರದಿಂದಿರಿ’
  • ಯೆರೆಮೀಯನಂತೆ ಧೈರ್ಯದಿಂದಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2004
  • ಯೆರೆಮೀಯ ಪುಸ್ತಕದ ಮುಖ್ಯಾಂಶಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2007
  • ಯೆಹೋವನು ಯೆರೆಮೀಯನನ್ನು ಸಾರಲು ಕಳುಹಿಸಿದ
    ಬೈಬಲ್‌ ನಮಗೆ ಕಲಿಸುವ ಪಾಠಗಳು
  • ಯೆರೆಮೀಯ ಯೆಹೋವನ ಬಗ್ಗೆ ಮಾತಾಡುವುದನ್ನು ನಿಲ್ಲಿಸಲಿಲ್ಲ
    ನಿಮ್ಮ ಮುದ್ದು ಮಕ್ಕಳಿಗೆ ಕಲಿಸಿರಿ
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
w11 3/15 ಪು. 28-32

ಯೆರೆಮೀಯನಂತೆ ಎಚ್ಚರವಾಗಿರ್ರಿ

‘ಯೆಹೋವನಾದ ನಾನು ನನ್ನ ಮಾತನ್ನು ನೆರವೇರಿಸುವದಕ್ಕೆ ಎಚ್ಚರಗೊಂಡಿದ್ದೇನೆ.’ —ಯೆರೆ. 1:12.

1, 2. ಯೆಹೋವನು ‘ಎಚ್ಚರವಾಗಿರುವುದನ್ನು’ ಬಾದಾಮಿ ಮರಕ್ಕೆ ಏಕೆ ಹೋಲಿಸಲಾಗಿದೆ?

ಲೆಬನೋನ್‌ ಗುಡ್ಡಗಳಲ್ಲಿ ಹಾಗೂ ಇಸ್ರಾಯೇಲಿನಲ್ಲಿ ಮೊಟ್ಟಮೊದಲು ಹೂಬಿಡುವ ಮರವೆಂದರೆ ಬಾದಾಮಿ ಮರ. ಜನವರಿಯ ಕೊನೆಯಲ್ಲಿ ಅಥವಾ ಫೆಬ್ರವರಿಯ ಪ್ರಾರಂಭದಲ್ಲೇ ಆ ಮರದಲ್ಲಿ ಬಿಳಿ ಇಲ್ಲವೆ ಗುಲಾಬಿ ಬಣ್ಣದ ಹೂಗಳು ಕಾಣಿಸಿಕೊಳ್ಳುತ್ತವೆ. ಈ ಮರಕ್ಕೆ ಹೀಬ್ರುವಿನಲ್ಲಿರುವ ಹೆಸರಿನ ಅಕ್ಷರಾರ್ಥ “ಎಚ್ಚರಗೊಳ್ಳು” ಎಂದು.

2 ಯೆಹೋವನು ಯೆರೆಮೀಯನನ್ನು ತನ್ನ ಪ್ರವಾದಿಯಾಗಿ ನೇಮಿಸುವಾಗ ಬಾದಾಮಿ ಮರದ ಈ ವೈಶಿಷ್ಟ್ಯವನ್ನು ಉಪಯೋಗಿಸಿ ಪ್ರಾಮುಖ್ಯ ಸತ್ಯವೊಂದನ್ನು ದೃಷ್ಟಾಂತಿಸಿದನು. ಆ ಪ್ರವಾದಿಗೆ ಶುಶ್ರೂಷೆಯ ಪ್ರಾರಂಭದಲ್ಲಿ ಈ ಮರದ ರೆಂಬೆಯನ್ನು ದರ್ಶನದಲ್ಲಿ ತೋರಿಸಲಾಯಿತು. ಅದರ ಅರ್ಥವೇನಾಗಿತ್ತು? “ನನ್ನ ಮಾತನ್ನು ನೆರವೇರಿಸುವದಕ್ಕೆ ಎಚ್ಚರಗೊಂಡಿದ್ದೇನೆ” ಎಂದು ಯೆಹೋವನು ವಿವರಿಸಿದನು. (ಯೆರೆ. 1:11, 12) ಬಾದಾಮಿ ಮರ ಹೇಗೆ ಸಮಯಕ್ಕೆ ಮುಂಚೆಯೇ ‘ಎಚ್ಚರವಾಗುತ್ತಿತ್ತೋ’ ಹಾಗೆಯೇ ಅವಿಧೇಯತೆಯ ಫಲಿತಾಂಶಗಳ ಬಗ್ಗೆ ತನ್ನ ಜನರಿಗೆ ಎಚ್ಚರಿಕೆ ನೀಡಲಿಕ್ಕಾಗಿ ಯೆಹೋವನು ತನ್ನ ಪ್ರವಾದಿಗಳನ್ನು ಕಳುಹಿಸಲು ಸಾಂಕೇತಿಕವಾಗಿ ‘ಮುಂಜಾನೆ ಏಳುತ್ತಿದ್ದನು.’ (ಯೆರೆ. 7:25, ಪಾದಟಿಪ್ಪಣಿ) ಮಾತ್ರವಲ್ಲ ತನ್ನ ಪ್ರವಾದನಾ ವಾಕ್ಯ ನೆರವೇರುವ ತನಕ ಯೆಹೋವನು ವಿಶ್ರಮಿಸುತ್ತಿರಲಿಲ್ಲ, ‘ಎಚ್ಚರವಾಗಿರುತ್ತಿದ್ದನು.’ ನೇಮಿತ ಸಮಯದಲ್ಲೇ ಅಂದರೆ ಕ್ರಿ.ಪೂ. 607ರಲ್ಲಿ ಧರ್ಮಭ್ರಷ್ಟ ಯೆಹೂದ ಜನಾಂಗದ ಮೇಲೆ ಯೆಹೋವನ ನ್ಯಾಯತೀರ್ಪು ಜಾರಿಗೊಳಿಸಲ್ಪಟ್ಟಿತು.

3. ಯೆಹೋವನ ವಿಷಯದಲ್ಲಿ ನಾವು ಯಾವ ಖಾತ್ರಿಯಿಂದಿರಬಲ್ಲೆವು?

3 ಅದೇ ರೀತಿಯಲ್ಲಿ ಇಂದು ಸಹ ಯೆಹೋವನು ತನ್ನ ಚಿತ್ತವನ್ನು ನೆರವೇರಿಸಲು ಎಚ್ಚರವಾಗಿದ್ದಾನೆ. ಯೆಹೋವನು ತನ್ನ ವಾಕ್ಯದ ನೆರವೇರಿಕೆಯನ್ನು ಅಲಕ್ಷಿಸುವ ಸಾಧ್ಯತೆಯೇ ಇಲ್ಲ. ಯೆಹೋವನು ಎಚ್ಚರವಾಗಿರುವ ಸಂಗತಿಯು ನಿಮ್ಮ ಮೇಲೆ ಯಾವ ಪ್ರಭಾವಬೀರುತ್ತದೆ? 2011ರ ಈ ವರ್ಷದಲ್ಲೂ ತನ್ನ ವಾಗ್ದಾನಗಳನ್ನು ನೆರವೇರಿಸುವ ವಿಷಯದಲ್ಲಿ ಯೆಹೋವನು ‘ಎಚ್ಚರವಾಗಿದ್ದಾನೆ’ ಎಂಬುದನ್ನು ನೀವು ನಂಬುತ್ತೀರೋ? ಯೆಹೋವನ ನಿಶ್ಚಿತ ವಾಗ್ದಾನಗಳ ಸಂಬಂಧದಲ್ಲಿ ನಮಗೆ ಯಾವುದೇ ಸಂಶಯಗಳಿರುವಲ್ಲಿ ಆಧ್ಯಾತ್ಮಿಕ ಮಂಪರಿನಿಂದ ಎಚ್ಚೆತ್ತುಕೊಳ್ಳಬೇಕಾದ ಸಮಯ ಇದೇ ಆಗಿದೆ. (ರೋಮ. 13:11) ಯೆಹೋವನ ಪ್ರವಾದಿಯಾದ ಯೆರೆಮೀಯನು ಎಚ್ಚರವಾಗಿದ್ದನು. ದೇವದತ್ತ ನೇಮಕದ ವಿಷಯದಲ್ಲಿ ಯೆರೆಮೀಯನು ಏಕೆ ಎಚ್ಚರವಾಗಿದ್ದನು? ಹೇಗೆ ಎಚ್ಚರವಾಗಿದ್ದನು? ಇವನ್ನು ಪರಿಶೀಲಿಸುವಲ್ಲಿ ಯೆಹೋವನು ನಮಗೆ ಕೊಟ್ಟಿರುವ ಕೆಲಸವನ್ನು ಪಟ್ಟುಬಿಡದೆ ಮಾಡುವುದು ಹೇಗೆಂದು ನಾವು ತಿಳಿಯಬಲ್ಲೆವು.

ತುರ್ತಾಗಿ ಸಾರಬೇಕಾದ ಸಂದೇಶ

4. ದೇವರ ಸಂದೇಶವನ್ನು ಸಾರಲು ಯೆರೆಮೀಯನು ಯಾವೆಲ್ಲ ಸವಾಲುಗಳನ್ನು ಎದುರಿಸಿದನು? ಅದೇಕೆ ತುರ್ತಿನದ್ದಾಗಿತ್ತು?

4 ಯೆರೆಮೀಯನು ಯೆಹೋವನಿಂದ ಕಾವಲುಗಾರನ ನೇಮಕವನ್ನು ಪಡೆದಾಗ ಅವನ ಪ್ರಾಯ ಸುಮಾರು 25 ಆಗಿದ್ದಿರಬಹುದು. (ಯೆರೆ. 1:1, 2) ಆದರೂ ಅವನು ತಾನಿನ್ನೂ ಬಾಲಕನು, ಅಧಿಕಾರದಲ್ಲಿರುವ ಮತ್ತು ವಯೋವೃದ್ಧರಾಗಿರುವ ಹಿರೀಪುರುಷರೊಂದಿಗೆ ಮಾತಾಡುವ ಸಾಮರ್ಥ್ಯ ತನಗಿಲ್ಲ ಎಂದು ನೆನಸಿದನು. (ಯೆರೆ. 1:6) ಅವನು ಉಗ್ರವಾದ ಖಂಡನೆಯನ್ನು ಮತ್ತು ಭಯಾನಕ ನ್ಯಾಯತೀರ್ಪುಗಳನ್ನು ಘೋಷಿಸಬೇಕಾಗಿತ್ತು. ಮುಖ್ಯವಾಗಿ ಯಾಜಕರಿಗೆ, ಸುಳ್ಳು ಪ್ರವಾದಿಗಳಿಗೆ, ಅರಸರಿಗೆ ಹಾಗೂ ‘ಮೋಸವನ್ನು ಪಟ್ಟಾಗಿ ಹಿಡಿದು ತಮ್ಮದೇ ಮಾರ್ಗದಲ್ಲಿ’ ನಡೆಯುತ್ತಿದ್ದ ಜನರಿಗೆ ಅವನದನ್ನು ತಿಳಿಸಬೇಕಿತ್ತು. (ಯೆರೆ. 6:13; 8:5, 6) ಸುಮಾರು ನಾಲ್ಕು ಶತಮಾನಗಳ ತನಕ ಸತ್ಯಾರಾಧನೆಯ ಕೇಂದ್ರವಾಗಿದ್ದ ಸೊಲೊಮೋನನ ಭವ್ಯ ದೇವಾಲಯವು ಧ್ವಂಸಗೊಳಿಸಲ್ಪಡಲಿಕ್ಕಿತ್ತು. ಯೆರೂಸಲೇಮ್‌ ಹಾಗೂ ಯೆಹೂದದ ಜನರು ಸೆರೆಗೊಯ್ಯಲ್ಪಡಲಿದ್ದರು, ಆ ದೇಶಗಳು ನಿರ್ಜನವಾಗಲಿದ್ದವು. ಹೌದು, ಸಾರುವಂತೆ ಯೆರೆಮೀಯನಿಗೆ ಆಜ್ಞಾಪಿಸಲಾದ ಸಂದೇಶವು ತುರ್ತಿನದ್ದಾಗಿತ್ತು!

5, 6. (ಎ) ಯೆಹೋವನು ಇಂದು ಯೆರೆಮೀಯ ವರ್ಗವನ್ನು ಹೇಗೆ ಉಪಯೋಗಿಸುತ್ತಿದ್ದಾನೆ? (ಬಿ) ನಾವು ಈ ಅಧ್ಯಯನದಲ್ಲಿ ಏನನ್ನು ಪರಿಗಣಿಸಲಿದ್ದೇವೆ?

5 ಆಧುನಿಕ ಕಾಲದಲ್ಲಿ, ಈ ಲೋಕಕ್ಕಾಗುವ ನ್ಯಾಯತೀರ್ಪಿನ ಬಗ್ಗೆ ಮಾನವಕುಲಕ್ಕೆ ಎಚ್ಚರಿಕೆ ಕೊಡಲು ಯೆಹೋವನು ಪ್ರೀತಿಯಿಂದ ಅಭಿಷಿಕ್ತ ಕ್ರೈಸ್ತರನ್ನು ಒದಗಿಸಿದ್ದಾನೆ. ಇವರು ಸಾಂಕೇತಿಕವಾಗಿ ಕಾವಲುಗಾರರಂತೆ ಕೆಲಸಮಾಡುತ್ತಾರೆ. ನಾವು ಜೀವಿಸುತ್ತಿರುವ ಕಾಲದೆಡೆಗೆ ಗಮನಹರಿಸುವಂತೆ ಈ ಯೆರೆಮೀಯ ವರ್ಗದವರು ದಶಕಗಳಿಂದ ಜನರನ್ನು ಪ್ರಚೋದಿಸುತ್ತಿದ್ದಾರೆ. (ಯೆರೆ. 6:17) ಮಹಾ ಸಮಯಪಾಲಕನಾದ ಯೆಹೋವನು ಎಂದೂ ತಡಮಾಡುವುದಿಲ್ಲವೆಂದು ಬೈಬಲ್‌ ಒತ್ತಿಹೇಳುತ್ತದೆ. ಆತನ ದಿನವು ಸರಿಯಾದ ಸಮಯಕ್ಕೆ, ಮನುಷ್ಯರು ನೆನಸದ ಗಳಿಗೆಯಲ್ಲಿ ಬಂದೇ ಬರುತ್ತದೆ.—ಚೆಫ. 3:8; ಮಾರ್ಕ 13:33; 2 ಪೇತ್ರ 3:9, 10.

6 ಯೆಹೋವನು ಎಚ್ಚರದಿಂದಿದ್ದಾನೆ ಹಾಗೂ ತನ್ನ ನೀತಿಯುತ ಹೊಸ ಲೋಕವನ್ನು ಸರಿಯಾದ ಸಮಯಕ್ಕೆ ತರುವನು ಎಂಬುದನ್ನು ಮನಸ್ಸಿನಲ್ಲಿಡಿರಿ. ಇದು, ತಮ್ಮಲ್ಲಿರುವ ಸಂದೇಶವನ್ನು ಇನ್ನಷ್ಟು ತುರ್ತಿನಿಂದ ಸಾರುವಂತೆ ಯೆರೆಮೀಯ ವರ್ಗದವರನ್ನೂ ಅವರ ಸಮರ್ಪಿತ ಜೊತೆಗಾರರನ್ನೂ ಪ್ರಚೋದಿಸಬೇಕು. ಇದು ನಿಮ್ಮ ಮೇಲೆ ಯಾವ ಪರಿಣಾಮ ಬೀರುತ್ತದೆ? ಇನ್ನಷ್ಟು ತುರ್ತಿನಿಂದ ಸಾರುವಂತೆ ಇದು ನಿಮ್ಮನ್ನು ಪ್ರಚೋದಿಸುವುದಿಲ್ಲವೇ? ಹೀಗೆ ಮಾಡುವಲ್ಲಿ ಯೇಸು ಹೇಳಿದಂತೆ ತಾವು ಯೆಹೋವನಿಗೆ ಸೇವೆಮಾಡುವೆವೋ ಇಲ್ಲವೋ ಎಂಬ ನಿರ್ಣಯಮಾಡುವ ಸದವಕಾಶ ಪ್ರತಿಯೊಬ್ಬರಿಗೂ ಸಿಗುತ್ತದೆ. ತನ್ನ ನೇಮಕವನ್ನು ಪೂರೈಸಲಿಕ್ಕಾಗಿ ಎಚ್ಚರದಿಂದಿರುವಂತೆ ಯೆರೆಮೀಯನಿಗೆ ಮೂರು ಗುಣಗಳು ಸಹಾಯಮಾಡಿದವು. ಎಚ್ಚರದಿಂದಿರಲು ನಮಗೂ ಸಹಾಯಮಾಡಬಲ್ಲ ಆ ಗುಣಗಳನ್ನು ನಾವೀಗ ಪರಿಗಣಿಸೋಣ.

ಜನರ ಮೇಲಿನ ಪ್ರೀತಿ

7. ಕಷ್ಟಕರ ಸನ್ನಿವೇಶಗಳಲ್ಲೂ ಸಾರುತ್ತಾ ಇರುವಂತೆ ಯೆರೆಮೀಯನಿಗೆ ಪ್ರೀತಿಯು ಹೇಗೆ ಪ್ರಚೋದಿಸಿತೆಂಬುದನ್ನು ವಿವರಿಸಿ.

7 ಅಷ್ಟೊಂದು ಸವಾಲುಗಳ ಮಧ್ಯೆಯೂ ಸಾರುತ್ತಿರುವಂತೆ ಯೆರೆಮೀಯನನ್ನು ಯಾವುದು ಪ್ರಚೋದಿಸಿತು? ಜನರ ಮೇಲಿದ್ದ ಪ್ರೀತಿಯೇ. ಜನರು ಎದುರಿಸುತ್ತಿದ್ದ ಹೆಚ್ಚಿನ ತೊಂದರೆಗಳಿಗೆ ಸುಳ್ಳು ಕುರುಬರೇ ಕಾರಣರು ಎಂಬುದು ಯೆರೆಮೀಯನಿಗೆ ತಿಳಿದಿತ್ತು. (ಯೆರೆ. 23:1, 2) ಈ ಅರಿವು ತಾನೇ ತನ್ನ ಕೆಲಸವನ್ನು ಪ್ರೀತಿ ಹಾಗೂ ಕನಿಕರದಿಂದ ಮಾಡುವಂತೆ ಯೆರೆಮೀಯನನ್ನು ಪ್ರಚೋದಿಸಿತು. ತನ್ನ ದೇಶದ ಜನರು ದೇವರ ಮಾತುಗಳನ್ನು ಕೇಳಿ ಜೀವ ಉಳಿಸಿಕೊಳ್ಳಬೇಕೆಂದು ಯೆರೆಮೀಯನು ಬಯಸಿದನು. ಅವನು ಎಷ್ಟರ ಮಟ್ಟಿಗೆ ಚಿಂತಿತನಾಗಿದ್ದನೆಂದರೆ ಜನರ ಮೇಲೆ ಬಂದೆರಗಲಿದ್ದ ಆಪತ್ತನ್ನು ನೆನಸಿ ಕಣ್ಣೀರು ಸುರಿಸಿದನು. (ಯೆರೆಮೀಯ 8:21; 9:1 ಓದಿ.) ಯೆಹೋವನ ನಾಮದ ಮೇಲೆ ಹಾಗೂ ಆತನ ಜನರ ಮೇಲೆ ಯೆರೆಮೀಯನಿಗಿದ್ದ ಆಳವಾದ ಪ್ರೀತಿ ಮತ್ತು ಚಿಂತೆಯನ್ನು ಪ್ರಲಾಪಗಳು ಪುಸ್ತಕವು ಸ್ಪಷ್ಟವಾಗಿ ಚಿತ್ರಿಸುತ್ತದೆ. (ಪ್ರಲಾ. 4:6, 9) ಇಂದು ಜನರು ‘ಕುರುಬನಿಲ್ಲದ ಕುರಿಗಳ ಹಾಗೆ ಸುಲಿಯಲ್ಪಟ್ಟು ಚದುರಿಸಲ್ಪಟ್ಟಿರುವುದನ್ನು’ ನೋಡುವಾಗ ದೇವರ ರಾಜ್ಯದ ಸಾಂತ್ವನದಾಯಕ ಸಂದೇಶವನ್ನು ಅವರಿಗೆ ತಿಳಿಸಲು ನಿಮಗೂ ಮನಸ್ಸಾಗುತ್ತದಲ್ಲವೇ?—ಮತ್ತಾ. 9:36.

8. ಕಷ್ಟಗಳನ್ನು ಅನುಭವಿಸುತ್ತಿದ್ದರೂ ಯೆರೆಮೀಯನು ನೊಂದುಕೊಳ್ಳಲಿಲ್ಲವೆಂದು ಯಾವುದು ತೋರಿಸುತ್ತದೆ?

8 ಯೆರೆಮೀಯನು ಯಾರಿಗೆ ಸಹಾಯಮಾಡಲು ಬಯಸಿದನೋ ಅವರಿಂದಲೇ ಕಷ್ಟವನ್ನು ಅನುಭವಿಸಿದನು. ಹಾಗಿದ್ದರೂ ಅವನು ಸೇಡುತೀರಿಸಲು ಹೋಗಲಿಲ್ಲ ಅಥವಾ ನೊಂದುಕೊಳ್ಳಲಿಲ್ಲ. ಅವನು ದುಷ್ಟ ರಾಜನಾದ ಚಿದ್ಕೀಯನ ಕಡೆಗೂ ದೀರ್ಘಶಾಂತಿ, ದಯೆಯನ್ನು ತೋರಿಸಿದನು. ಚಿದ್ಕೀಯನು ಅವನ ಮರಣದಂಡನೆಗೆ ಸಮ್ಮತಿ ಸೂಚಿಸಿದ ಮೇಲೂ ಯೆರೆಮೀಯನು ರಾಜನಿಗೆ ದೇವರ ಮಾತನ್ನು ಕೇಳಿ ವಿಧೇಯತೆ ತೋರಿಸುವಂತೆ ಬೇಡಿಕೊಂಡನು. (ಯೆರೆ. 38:4, 5, 19, 20) ಜನರ ಮೇಲೆ ಯೆರೆಮೀಯನಿಗಿದ್ದಷ್ಟು ಆಳವಾದ ಪ್ರೀತಿ ನಮಗೂ ಇದೆಯೇ?

ದೇವದತ್ತ ಧೈರ್ಯ

9. ಯೆರೆಮೀಯನು ದೇವರಿಂದಲೇ ಧೈರ್ಯ ಪಡೆದುಕೊಂಡನೆಂದು ಹೇಗೆ ಹೇಳಬಲ್ಲೆವು?

9 ಯೆರೆಮೀಯನಿಗೆ ಪ್ರಥಮವಾಗಿ ನೇಮಕ ಸಿಕ್ಕಿದಾಗ ಅದು ತನ್ನಿಂದಾಗದೆಂದು ಅವನು ಯೆಹೋವನಲ್ಲಿ ಬೇಡಿಕೊಂಡನು. ಹಾಗಾದರೆ ಯೆರೆಮೀಯನು ತದನಂತರ ತೋರಿಸಿದ ಆ ದೃಢತೆ ಹಾಗೂ ಅಚಲತೆ ಅವನಿಗೆ ಹುಟ್ಟಿನಿಂದಲೇ ಬಂದದ್ದಲ್ಲವೆಂಬುದು ಸ್ಪಷ್ಟ. ಪ್ರವಾದಿಯಾಗಿ ಅವನು ತನ್ನ ನೇಮಕದಾದ್ಯಂತ ತೋರಿಸಿದ ಆ ಅಸಾಮಾನ್ಯ ಧೈರ್ಯವು ವಾಸ್ತವದಲ್ಲಿ ಅವನಿಗೆ ದೊರಕಿದ್ದು ದೇವರ ಮೇಲೆ ಪೂರ್ತಿ ಆತುಕೊಂಡದ್ದರಿಂದಲೇ. ಹೌದು ಯೆಹೋವನು “ಭಯಂಕರಶೂರನಾಗಿ” ಪ್ರವಾದಿಯ ಸಂಗಡ ಇದ್ದನು. ಹೀಗೆ ಯೆರೆಮೀಯನನ್ನು ಬೆಂಬಲಿಸುತ್ತಾ ನೇಮಕವನ್ನು ಪೂರೈಸಲು ಬೇಕಾದ ಬಲವನ್ನು ಕೊಟ್ಟನು. (ಯೆರೆ. 20:11) ಯೆರೆಮೀಯನು ತೋರಿಸಿದ ಧೈರ್ಯ ಎಷ್ಟು ಪ್ರಸಿದ್ಧವಾಗಿತ್ತೆಂದರೆ, ಯೇಸುವಿನ ಭೂಶುಶ್ರೂಷೆಯ ಸಮಯದಲ್ಲಿ ಕೆಲವರು ಅವನನ್ನು ಕಂಡು ಯೆರೆಮೀಯನೇ ಜೀವಿತನಾಗಿ ಬಂದಿದ್ದಾನೆಂದು ನೆನಸಿದರು.—ಮತ್ತಾ. 16:13, 14.

10. ಅಭಿಷಿಕ್ತ ಉಳಿಕೆಯವರು “ಜನಾಂಗಗಳ ಮೇಲೂ ರಾಜ್ಯಗಳ ಮೇಲೂ” ನೇಮಿಸಲ್ಪಟ್ಟಿದ್ದಾರೆ ಹೇಗೆ?

10 ‘ಜನಾಂಗಗಳ ಅರಸನಾದ’ ಯೆಹೋವನು ಬರಲಿದ್ದ ನ್ಯಾಯತೀರ್ಪಿನ ಸಂದೇಶವನ್ನು ಜನಾಂಗಗಳಿಗೂ ರಾಜ್ಯಗಳಿಗೂ ತಿಳಿಸುವಂತೆ ಯೆರೆಮೀಯನಿಗೆ ಆಜ್ಞಾಪಿಸಿದನು. (ಯೆರೆ. 10:6, 7) ಆದರೆ ಅಭಿಷಿಕ್ತ ಉಳಿಕೆಯವರು ಯಾವ ಅರ್ಥದಲ್ಲಿ “ಜನಾಂಗಗಳ ಮೇಲೂ ರಾಜ್ಯಗಳ ಮೇಲೂ” ನೇಮಿಸಲ್ಪಟ್ಟಿದ್ದಾರೆ? (ಯೆರೆ. 1:10) ಹಿಂದೆ ಆ ಪ್ರವಾದಿಗೆ ಕೊಟ್ಟಂತೆಯೇ ಇಂದು ಸಹ ಯೆರೆಮೀಯ ವರ್ಗದವರಿಗೆ ನೇಮಕವನ್ನು ಕೊಟ್ಟಿರುವುದು ವಿಶ್ವದ ಪರಮಾಧಿಕಾರಿಯೇ. ಆದ್ದರಿಂದಲೇ, ಜನಾಂಗಗಳ ಹಾಗೂ ರಾಜ್ಯಗಳ ವಿರುದ್ಧ ಸಂದೇಶವನ್ನು ಘೋಷಿಸಲು ದೇವರ ಅಭಿಷಿಕ್ತ ಸೇವಕರಿಗೆ ಪೂರ್ಣ ಅಧಿಕಾರವಿದೆ. ಸರ್ವೋನ್ನತ ದೇವರಿಂದ ಅಧಿಕಾರವನ್ನು ಪಡೆದ ಯೆರೆಮೀಯ ವರ್ಗದವರು ಆತನ ಪ್ರೇರಿತ ವಾಕ್ಯದಲ್ಲಿರುವ ಸ್ಪಷ್ಟ ಸಂದೇಶವನ್ನು ಉಪಯೋಗಿಸುತ್ತಾ ದೇವರು ತನ್ನ ನೇಮಿತ ಸಮಯದಲ್ಲಿ ಉದ್ದೇಶಿಸಿದ ರೀತಿಯಲ್ಲೇ ಇಂದಿರುವ ಜನಾಂಗಗಳನ್ನೂ ರಾಜ್ಯಗಳನ್ನೂ ಸಂಪೂರ್ಣವಾಗಿ ನಾಶಮಾಡುವನೆಂದು ಪ್ರಕಟಪಡಿಸುತ್ತಾರೆ. (ಯೆರೆ. 18:7-10; ಪ್ರಕ. 11:18) ಯೆಹೋವನ ನ್ಯಾಯತೀರ್ಪಿನ ಸಂದೇಶವನ್ನು ಲೋಕವ್ಯಾಪಕವಾಗಿ ಸಾರಬೇಕೆಂಬ ದೇವದತ್ತ ಆಜ್ಞೆಯನ್ನು ತಿಳಿಸುವುದರಲ್ಲಿ ಎಂದೂ ಪಟ್ಟುಸಡಿಲಿಸದಿರಲು ಯೆರೆಮೀಯ ವರ್ಗದವರು ದೃಢತೀರ್ಮಾನ ಮಾಡಿದ್ದಾರೆ.

11. ಕಷ್ಟಕರ ಸನ್ನಿವೇಶಗಳ ಮಧ್ಯೆಯೂ ಎಡೆಬಿಡದೆ ಸಾರಲು ನಮಗೆ ಯಾವುದು ಸಹಾಯಮಾಡುತ್ತದೆ?

11 ಹಿಂಸೆ, ನಿರಾಸಕ್ತಿ ಅಥವಾ ಕಷ್ಟಕರ ಸನ್ನಿವೇಶ ಎದುರಾಗುವಾಗ ನಾವು ನಿರುತ್ಸಾಹಗೊಳ್ಳುವುದು ಸಹಜ. (2 ಕೊರಿಂ. 1:8) ಆದರೆ ಯೆರೆಮೀಯನಂತೆ ಮುಂದೆ ಸಾಗುತ್ತಲೇ ಇರೋಣ. ಎದೆಗುಂದದಿರೋಣ. ಯೆಹೋವನಿಗೆ ಪ್ರಾರ್ಥಿಸುತ್ತಿರೋಣ, ಆತನ ಮೇಲೆ ಆತುಕೊಳ್ಳೋಣ ಹಾಗೂ ಆತನಲ್ಲಿ ಸಹಾಯ ಕೋರುವ ಮೂಲಕ ‘ಧೈರ್ಯವನ್ನು ಪಡೆದುಕೊಳ್ಳೋಣ.’ (1 ಥೆಸ. 2:2) ಸತ್ಯಾರಾಧಕರಾದ ನಾವು ದೇವದತ್ತ ಜವಾಬ್ದಾರಿಗಳ ವಿಷಯದಲ್ಲಿ ಸದಾ ಎಚ್ಚರದಿಂದಿರಬೇಕು. ಅಪನಂಬಿಗಸ್ತ ಯೆರೂಸಲೇಮಿನಿಂದ ಮುನ್‌ಚಿತ್ರಿಸಲ್ಪಟ್ಟ ಕ್ರೈಸ್ತಪ್ರಪಂಚದ ನಾಶನದ ಬಗ್ಗೆ ಎಡೆಬಿಡದೆ ಸಾರುತ್ತಾ ಇರುವ ದೃಢತೀರ್ಮಾನವನ್ನು ನಾವು ಮಾಡಬೇಕು. ಯೆರೆಮೀಯ ವರ್ಗದವರು ಬರೀ ‘ಯೆಹೋವನು ನೇಮಿಸಿರುವ ಶುಭವರುಷದ’ ಬಗ್ಗೆ ಮಾತ್ರವಲ್ಲ, ‘ದೇವರು ಮುಯ್ಯಿತೀರಿಸುವ ದಿನದ’ ಬಗ್ಗೆಯೂ ಧೈರ್ಯದಿಂದ ಪ್ರಕಟಿಸುತ್ತಾರೆ.—ಯೆಶಾ. 61:1, 2; 2 ಕೊರಿಂ. 6:2.

ಹೃತ್ಪೂರ್ವಕ ಸಂತೋಷ

12. ಯೆರೆಮೀಯನು ತನ್ನ ಸಂತೋಷವನ್ನು ಕಾಪಾಡಿಕೊಂಡನೆಂದು ಹೇಗೆ ಹೇಳಸಾಧ್ಯ? ಹೀಗೆ ಮಾಡಲು ಅವನಿಗೆ ಸಹಾಯಮಾಡಿದ ಪ್ರಮುಖ ಅಂಶ ಯಾವುದು?

12 ಯೆರೆಮೀಯನು ತನ್ನ ಕೆಲಸದಲ್ಲಿ ಸಂತೋಷವನ್ನು ಕಂಡುಕೊಂಡನು. ಅವನು ಯೆಹೋವನಿಗೆ ಅಂದದ್ದು: “ನನಗೆ ದೊರೆತ ನಿನ್ನ ಮಾತುಗಳನ್ನು ಆಹಾರಮಾಡಿಕೊಂಡೆನು, ನಿನ್ನ ನುಡಿಗಳು ನನಗೆ ಹರ್ಷವೂ ಹೃದಯಾನಂದವೂ ಆದವು; ಸೇನಾಧೀಶ್ವರನಾದ ದೇವರೇ, ಯೆಹೋವನೇ, ನಾನು ನಿನ್ನ ಹೆಸರಿನವನಲ್ಲವೆ!” (ಯೆರೆ. 15:16) ಸತ್ಯದೇವರನ್ನು ಪ್ರತಿನಿಧಿಸುವುದನ್ನು ಹಾಗೂ ಆತನ ವಾಕ್ಯವನ್ನು ಸಾರುವುದನ್ನು ಯೆರೆಮೀಯನು ತನಗೆ ಸಂದ ವಿಶೇಷಗೌರವವೆಂದೆಣಿಸಿದನು. ಕೆಲವೊಮ್ಮೆ ಯೆರೆಮೀಯನು ತನ್ನ ಸಂತೋಷವನ್ನು ಕಳೆದುಕೊಂಡದ್ದು ನಿಜ. ಏಕೆಂದರೆ ಅವನು ತನ್ನನ್ನು ಅಪಹಾಸ್ಯಮಾಡುತ್ತಿದ್ದ ಜನರ ಮೇಲೆ ಗಮನ ಕೇಂದ್ರೀಕರಿಸಿದ್ದನು. ಆದರೆ ಯಾವಾಗ ಅವನು ಸಾರುತ್ತಿದ್ದ ಸಂದೇಶದ ವಿಶೇಷತೆ ಹಾಗೂ ಪ್ರಮುಖತೆಯ ಮೇಲೆ ಗಮನ ಕ್ರೇಂದ್ರೀಕರಿಸಿದನೋ ಆಗ ತನ್ನ ಸಂತೋಷವನ್ನು ಮರಳಿಪಡೆದನು.—ಯೆರೆ. 20:8, 9.

13. ನಮ್ಮ ಸಂತೋಷವನ್ನು ಕಾಪಾಡಿಕೊಳ್ಳಲು ನಾವು ಆಳವಾದ ಆಧ್ಯಾತ್ಮಿಕ ಸತ್ಯಗಳನ್ನು ನಮ್ಮದಾಗಿಸಿಕೊಳ್ಳಬೇಕು ಏಕೆ?

13 ನಮ್ಮೀ ಕಾಲದಲ್ಲಿ ಸಾರುವ ಕೆಲಸದಲ್ಲಿ ಸಂತೋಷವನ್ನು ಕಾಪಾಡಿಕೊಳ್ಳಬೇಕಾದರೆ, “ಗಟ್ಟಿಯಾದ ಆಹಾರ” ಸೇವಿಸಬೇಕು ಅಂದರೆ ದೇವರ ವಾಕ್ಯದಲ್ಲಿರುವ ಗಹನವಾದ ಸತ್ಯಗಳನ್ನು ನಮ್ಮದಾಗಿಸಿಕೊಳ್ಳಬೇಕು. (ಇಬ್ರಿ. 5:14) ಆಳವಾದ ಅಧ್ಯಯನ ನಂಬಿಕೆಯನ್ನು ಬಲಗೊಳಿಸುತ್ತದೆ. (ಕೊಲೊ. 2:6, 7) ಅಲ್ಲದೆ, ನಮ್ಮ ಕ್ರಿಯೆಗಳು ಯೆಹೋವನ ಮೇಲೆ ಹೇಗೆ ಪ್ರಭಾವಬೀರುತ್ತವೆ ಎಂಬುದನ್ನು ನಮ್ಮ ಮನಸ್ಸಿನಲ್ಲಿ ಅಚ್ಚೊತ್ತಿಸುತ್ತದೆ. ಬೈಬಲನ್ನು ಓದಲಿಕ್ಕಾಗಿ ಹಾಗೂ ಅಧ್ಯಯನ ಮಾಡಲಿಕ್ಕಾಗಿ ಸಮಯ ಕಂಡುಕೊಳ್ಳಲು ನಾವು ಹೆಣಗಾಡುತ್ತಿರುವಲ್ಲಿ ನಮ್ಮ ಕಾರ್ಯತಖ್ತೆಯನ್ನು ಪುನಃ ಪರಿಶೀಲಿಸುವುದು ಅಗತ್ಯ. ಪ್ರತಿದಿನ ನಾವು ಅಧ್ಯಯನ ಮತ್ತು ಧ್ಯಾನದಲ್ಲಿ ಕೆಲವು ನಿಮಿಷಗಳನ್ನು ಕಳೆಯುವುದಾದರೂ ಅದು ನಮ್ಮನ್ನು ಯೆಹೋವನ ಸಮೀಪಕ್ಕೆ ಸೆಳೆಯುತ್ತದೆ ಹಾಗೂ ಯೆರೆಮೀಯನ ವಿಷಯದಲ್ಲಿ ಸತ್ಯವಾದಂತೆ ‘ಹರ್ಷವನ್ನೂ ಹೃದಯಾನಂದವನ್ನೂ’ ತರುತ್ತದೆ.

14, 15. (ಎ) ಯೆರೆಮೀಯನು ತನ್ನ ನೇಮಕಕ್ಕೆ ನಂಬಿಗಸ್ತಿಕೆಯಿಂದ ಅಂಟಿಕೊಂಡದ್ದರಿಂದ ಯಾವ ಫಲಿತಾಂಶ ದೊರೆಯಿತು? (ಬಿ) ಸಾರುವ ಕೆಲಸದ ವಿಷಯದಲ್ಲಿ ದೇವಜನರು ಇಂದು ಏನನ್ನು ಅರಿತಿದ್ದಾರೆ?

14 ಯೆರೆಮೀಯನು ದೇವರ ಎಚ್ಚರಿಕೆಗಳನ್ನು ಹಾಗೂ ನ್ಯಾಯತೀರ್ಪಿನ ಸಂದೇಶವನ್ನು ಎಡೆಬಿಡದೆ ಸಾರುತ್ತಿದ್ದನಾದರೂ ‘ಕಟ್ಟುವ ಮತ್ತು ನೆಡುವ’ ನೇಮಕವನ್ನೂ ಮರೆತಿರಲಿಲ್ಲ. (ಯೆರೆ. 1:10) ಕಟ್ಟುವ ಹಾಗೂ ನೆಡುವ ಅವನ ಕೆಲಸ ಫಲಕೊಟ್ಟಿತು. ಕ್ರಿ.ಪೂ. 607ರಲ್ಲಿ ಯೆರೂಸಲೇಮ್‌ ನಾಶಗೊಂಡಾಗ ಕೆಲವು ಯೆಹೂದ್ಯರು ಹಾಗೂ ಇಸ್ರಾಯೇಲ್ಯರಲ್ಲದ ಕೆಲವರು ಪಾರಾದರು. ರೇಕಾಬ್ಯರು, ಎಬೆದ್ಮೆಲೆಕ ಹಾಗೂ ಬಾರೂಕನ ಬಗ್ಗೆ ನಮಗೆ ತಿಳಿದೇ ಇದೆ. (ಯೆರೆ. 35:19; 39:15-18; 43:5-7) ಯೆರೆಮೀಯನ ನಿಷ್ಠಾವಂತ ಹಾಗೂ ದೇವಭೀರು ಮಿತ್ರರಾಗಿದ್ದ ಇವರು ಯೆರೆಮೀಯ ವರ್ಗದ ಜೊತೆ ಕೈಜೋಡಿಸುವ ಭೂನಿರೀಕ್ಷೆಯುಳ್ಳ ಜನರನ್ನು ಚಿತ್ರಿಸುತ್ತಾರೆ. ಈ ‘ಮಹಾ ಸಮೂಹದವರನ್ನು’ ಆಧ್ಯಾತ್ಮಿಕವಾಗಿ ಬೆಳೆಸುವುದರಲ್ಲಿ ಯೆರೆಮೀಯ ವರ್ಗದವರು ತುಂಬ ಸಂತೋಷಿಸುತ್ತಿದ್ದಾರೆ. (ಪ್ರಕ. 7:9) ಅದೇ ರೀತಿಯಲ್ಲಿ ಅಭಿಷಿಕ್ತರ ಈ ನಿಷ್ಠಾವಂತ ಸಂಗಡಿಗರು ಸಹ ಸತ್ಯದ ಜ್ಞಾನವನ್ನು ಪಡೆದುಕೊಳ್ಳುವಂತೆ ಸಹೃದಯಿ ಜನರಿಗೆ ಸಹಾಯಮಾಡುವುದರಲ್ಲಿ ಬಹಳಷ್ಟು ಸಂತೃಪ್ತಿಯನ್ನು ಕಂಡುಕೊಳ್ಳುತ್ತಿದ್ದಾರೆ.

15 ಸುವಾರ್ತೆ ಸಾರುವ ಕೆಲಸವು ಸಾರ್ವಜನಿಕ ಸೇವೆಯಷ್ಟೇ ಅಲ್ಲ, ಅದು ದೇವರಿಗೆ ನಾವು ಸಲ್ಲಿಸುವ ಆರಾಧನಾ ಕ್ರಿಯೆಯೂ ಹೌದು ಎಂಬದನ್ನು ದೇವಜನರು ಅರಿತಿದ್ದಾರೆ. ಕೇಳುಗರು ಸಿಗಲಿ ಸಿಗದಿರಲಿ, ಸಾರುವ ಕೆಲಸದ ಮೂಲಕ ನಾವು ಯೆಹೋವನಿಗೆ ಸಲ್ಲಿಸುವ ಪವಿತ್ರ ಸೇವೆಯು ನಮಗೆ ಸಂತೋಷವನ್ನಂತೂ ಖಂಡಿತ ತರುತ್ತದೆ.—ಕೀರ್ತ. 71:23; ರೋಮನ್ನರಿಗೆ 1:9 ಓದಿ.

ನಿಮ್ಮ ನೇಮಕವನ್ನು ಪೂರೈಸಲು ‘ಎಚ್ಚರದಿಂದಿರಿ’

16, 17. ನಾವೀಗ ತುರ್ತಿನ ಸಮಯದಲ್ಲಿ ಜೀವಿಸುತ್ತಿದ್ದೇವೆ ಎಂಬುದನ್ನು ಪ್ರಕಟನೆ 17:10 ಹಾಗೂ ಹಬಕ್ಕೂಕ 2:3 ಹೇಗೆ ತೋರಿಸಿಕೊಡುತ್ತದೆ?

16 ಪ್ರಕಟನೆ 17:10ರಲ್ಲಿರುವ ಪ್ರೇರಿತ ಪ್ರವಾದನೆಯನ್ನು ಪರಿಗಣಿಸುವುದಾದರೆ ನಾವು ಜೀವಿಸುವ ಈ ಕಾಲವು ತುಂಬಾ ತುರ್ತಿನದ್ದಾಗಿದೆ ಎಂಬುದನ್ನು ತಿಳಿಯುತ್ತೇವೆ. ಏಳನೇ ಅರಸನಾದ ಆಂಗ್ಲೋ-ಅಮೆರಿಕನ್‌ ಲೋಕಶಕ್ತಿ ಈಗಾಗಲೇ ಅಸ್ತಿತ್ವದಲ್ಲಿದೆ. ಇದರ ಬಗ್ಗೆ ನಾವು ಹೀಗೆ ಓದುತ್ತೇವೆ: “ಅವನು [ಏಳನೇ ಲೋಕಶಕ್ತಿ] ಬಂದ ಮೇಲೆ ಸ್ವಲ್ಪಕಾಲ ಉಳಿಯಬೇಕು.” ಆದರೆ ಆ “ಸ್ವಲ್ಪಕಾಲ” ಈಗ ಮುಗಿಯುತ್ತಾ ಬರುತ್ತಿದೆ. ಈ ದುಷ್ಟ ಲೋಕದ ಅಂತ್ಯದ ಕುರಿತು ಹಬಕ್ಕೂಕನು ಈ ಆಶ್ವಾಸನೆ ಕೊಡುತ್ತಾನೆ: “ಅದು ಕ್ಲುಪ್ತಕಾಲದಲ್ಲಿ ನೆರವೇರತಕ್ಕದ್ದು, . . . ತಡವಾದರೂ ಅದಕ್ಕೆ ಕಾದಿರು; ಅದು ಬಂದೇ ಬರುವದು, ತಾಮಸವಾಗದು.”—ಹಬ. 2:3.

17 ಹೀಗೆ ಕೇಳಿಕೊಳ್ಳಿ: ‘ನಾವೀಗ ತುರ್ತಿನ ಸಮಯದಲ್ಲಿ ಜೀವಿಸುತ್ತಿದ್ದೇವೆ ಎಂಬುದನ್ನು ನನ್ನ ಜೀವನ ನಿಜವಾಗಿಯೂ ತೋರಿಸಿಕೊಡುತ್ತಿದೆಯೇ? ನಾನು ಅಂತ್ಯ ಬೇಗ ಬರಬೇಕೆಂದು ನಿರೀಕ್ಷಿಸುತ್ತಿದ್ದೇನೆ ಎಂಬದನ್ನು ನನ್ನ ಜೀವನರೀತಿಯು ತೋರಿಸುತ್ತದೋ? ಅಥವಾ ನನ್ನ ನಿರ್ಧಾರಗಳು ಹಾಗೂ ಆದ್ಯತೆಗಳು, ಯಾವುದೇ ಸಮಯದಲ್ಲಿ ಅಂತ್ಯ ಬರಬಹುದೆಂದು ನಾನು ನಿರೀಕ್ಷಿಸುತ್ತಿಲ್ಲ ಇಲ್ಲವೆ ಅಂತ್ಯ ಬರುತ್ತದೆಂಬ ಖಾತ್ರಿಯೇ ನನಗಿಲ್ಲ ಎಂಬಂತಿವೆಯೋ?’

18, 19. ಇದು ನಿಧಾನಿಸುವ ಸಮಯವಲ್ಲವೇಕೆ?

18 ಕಾವಲುಗಾರ ವರ್ಗದ ಕೆಲಸವು ಇನ್ನೂ ಮುಗಿದಿಲ್ಲ. (ಯೆರೆಮೀಯ 1:17-19 ಓದಿ.) ಅಭಿಷಿಕ್ತ ಉಳಿಕೆಯವರು ‘ಕೋಟೆಕೊತ್ತಲದ ಪಟ್ಟಣದ’ ಹಾಗೆ, ‘ಕಬ್ಬಿಣದ ಕಂಬದ’ ಹಾಗೆ ಅಚಲವಾಗಿ ನಿಂತಿರುವುದನ್ನು ನೋಡುವುದು ಎಷ್ಟೊಂದು ಹರ್ಷಕರ! ಅವರು ತಮ್ಮ ‘ಸೊಂಟವನ್ನು ಸತ್ಯದಿಂದ ಬಿಗಿದುಕೊಂಡಿದ್ದಾರೆ’ ಅಂದರೆ ತಮ್ಮ ನೇಮಿತ ಕೆಲಸವು ಪೂರೈಸಲ್ಪಡುವ ತನಕ ದೇವರ ವಾಕ್ಯ ತಮ್ಮನ್ನು ಬಲಪಡಿಸುವಂತೆ ಬಿಡುತ್ತಾರೆ. (ಎಫೆ. 6:14) ಅದೇ ದೃಢನಿಶ್ಚಯದಿಂದ ಮಹಾ ಸಮೂಹದವರು ದೈವಿಕ ನೇಮಕವನ್ನು ಪೂರೈಸುವುದರಲ್ಲಿ ಯೆರೆಮೀಯ ವರ್ಗಕ್ಕೆ ಸಕ್ರಿಯ ಬೆಂಬಲ ನೀಡುತ್ತಾರೆ.

19 ಇದು ರಾಜ್ಯ ಚಟುವಟಿಕೆಯಲ್ಲಿ ನಿಧಾನಿಸುವ ಸಮಯವಲ್ಲ. ಬದಲಾಗಿ ಯೆರೆಮೀಯ 12:5ರಲ್ಲಿರುವ (ಓದಿ.) ಮಾತುಗಳ ಮಹತ್ವಾರ್ಥವನ್ನು ಅರಿಯಬೇಕಾದ ಸಮಯವಾಗಿದೆ. ನಮಗೆಲ್ಲರಿಗೂ ಕಷ್ಟಪರೀಕ್ಷೆಗಳು ಬಂದೇ ಬರುವವು, ನಾವು ಅವುಗಳನ್ನು ಸಹಿಸಿಕೊಳ್ಳಲೇಬೇಕು. ಈ ನಂಬಿಕೆಯ ಪರೀಕ್ಷೆಗಳನ್ನು ಎದುರಿಸುವುದನ್ನು “ಕಾಲಾಳುಗಳ” ಜೊತೆಗೆ ಓಡುವುದಕ್ಕೆ ಹೋಲಿಸಬಹುದು. ಆದರೆ “ಮಹಾ ಸಂಕಟ” ಹತ್ತಿರ ಬರುವಾಗ ನಾವು ಇದಕ್ಕಿಂತ ಹೆಚ್ಚಿನ ಕಷ್ಟಪರೀಕ್ಷೆಗಳನ್ನು ಎದುರಿಸಬೇಕಾಗುವುದು. (ಮತ್ತಾ. 24:21) ಮುಂದೆ ಬರಲಿರುವ ಕಠಿಣ ಕಷ್ಟಪರೀಕ್ಷೆಗಳನ್ನು ಎದುರಿಸುವುದನ್ನು ‘ಕುದುರೆಗಳೊಂದಿಗೆ ಓಡುವುದಕ್ಕೆ’ ಹೋಲಿಸಬಹುದು. ದೌಡಾಯಿಸುತ್ತಿರುವ ಕುದುರೆಗಳೊಂದಿಗೆ ಸರಿಸಮವಾಗಿ ಒಬ್ಬ ವ್ಯಕ್ತಿ ಓಡಬೇಕಾದರೆ ಅವನಿಗೆ ತುಂಬ ತಾಳ್ಮೆ ಬೇಕು. ಹಾಗಾಗಿ ನಮಗೆ ಈಗ ಎದುರಾಗುವ ಕಷ್ಟಪರೀಕ್ಷೆಗಳನ್ನು ತಾಳಿಕೊಳ್ಳುವುದು ಪ್ರಯೋಜನಕರ. ಇದು ಮುಂಬರಲಿರುವ ಹೆಚ್ಚಿನ ಕಷ್ಟಪರೀಕ್ಷೆಗಳನ್ನು ತಾಳಿಕೊಳ್ಳಲು ನಮ್ಮನ್ನು ಸಿದ್ಧಗೊಳಿಸುತ್ತದೆ.

20. ನಿಮ್ಮ ದೃಢನಿರ್ಧಾರವೇನು?

20 ನಾವೆಲ್ಲರೂ ಯೆರೆಮೀಯನನ್ನು ಅನುಕರಿಸುತ್ತಾ ಸಾರುವ ನಮ್ಮ ನೇಮಕವನ್ನು ಯಶಸ್ವಿಯಾಗಿ ಪೂರೈಸಬಲ್ಲೆವು! ಪ್ರೀತಿ, ಧೈರ್ಯ ಹಾಗೂ ಸಂತೋಷದಂಥ ಗುಣಗಳು ತನ್ನ 67 ವರ್ಷದ ದೀರ್ಘ ಶುಶ್ರೂಷೆಯನ್ನು ನಂಬಿಗಸ್ತಿಕೆಯಿಂದ ಪೂರೈಸಲು ಯೆರೆಮೀಯನಿಗೆ ಸಹಾಯಮಾಡಿದವು. ಮನೋಹರವಾದ ಆ ಬಾದಾಮಿ ಮರದ ಹೂಗಳು ಯೆಹೋವನು ತನ್ನ ವಾಕ್ಯವನ್ನು ನೆರವೇರಿಸುವ ವಿಷಯದಲ್ಲಿ ‘ಎಚ್ಚರದಿಂದಿದ್ದಾನೆ’ ಎಂಬದನ್ನು ನೆನಪುಹುಟ್ಟಿಸುತ್ತವೆ. ಎಚ್ಚರದಿಂದಿರಲು ನಮಗೂ ಸಕಾರಣವಿದೆ. ಯೆರೆಮೀಯನು ‘ಎಚ್ಚರದಿಂದಿದ್ದನು,’ ನಮ್ಮಿಂದಲೂ ಅದು ಸಾಧ್ಯ.

ನಿಮಗೆ ಜ್ಞಾಪಕವಿದೆಯೊ?

• ಯೆರೆಮೀಯನಿಗೆ ತನ್ನ ನೇಮಕದ ವಿಷಯದಲ್ಲಿ ‘ಎಚ್ಚರದಿಂದಿರಲು’ ಪ್ರೀತಿ ಹೇಗೆ ಸಹಾಯಮಾಡಿತು?

• ದೇವದತ್ತ ಧೈರ್ಯ ನಮಗೇಕೆ ಬೇಕು?

• ಯೆರೆಮೀಯನಿಗೆ ತನ್ನ ಸಂತೋಷವನ್ನು ಕಾಪಾಡಿಕೊಳ್ಳಲು ಯಾವುದು ಸಹಾಯಮಾಡಿತು?

• ನೀವೇಕೆ ‘ಎಚ್ಚರದಿಂದಿರಲು’ ಬಯಸುತ್ತೀರಿ?

[ಪುಟ 31ರಲ್ಲಿರುವ ಚಿತ್ರಗಳು]

ವಿರೋಧ ಬಂದರೂ ನೀವು ಸಾರುವುದನ್ನು ಮುಂದುವರಿಸುವಿರೋ?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ