ಯಾರಿಗೆಲ್ಲ ಪುನರುತ್ಥಾನವಾಗುವುದು?
“ಅದಕ್ಕೆ ಆಶ್ಚರ್ಯಪಡಬೇಡಿರಿ; ಸಮಾಧಿಗಳಲ್ಲಿರುವವರೆಲ್ಲರು ಆತನ ಧ್ವನಿಯನ್ನು ಕೇಳಿ ಎದ್ದು ಹೊರಗೆ ಬರುವ ಕಾಲ ಬರುತ್ತದೆ.”—ಯೋಹಾನ 5:28, 29.
1. ಉರಿಯುತ್ತಿರುವ ಮುಳ್ಳಿನ ಪೊದೆಯ ಬಳಿ ಮೋಶೆಯು ಯಾವ ಪ್ರಮುಖ ಘೋಷಣೆಯನ್ನು ಕೇಳಿಸಿಕೊಂಡನು, ಮತ್ತು ಸಮಯಾನಂತರ ಯಾರು ಈ ಮಾತುಗಳನ್ನು ನೆನಪು ಮಾಡಿಕೊಂಡರು?
ಸುಮಾರು 3,500 ವರ್ಷಗಳ ಹಿಂದೆ ಒಂದು ಅಸಾಮಾನ್ಯ ಘಟನೆಯು ನಡೆಯಿತು. ಮೋಶೆಯು ತನ್ನ ಪೂರ್ವಜನಾದ ಇತ್ರೋನನ ಕುರಿ ಮಂದೆಯನ್ನು ಮೇಯಿಸುತ್ತಿದ್ದನು. ಹೋರೇಬ್ ಎಂಬ ಬೆಟ್ಟದ ಬಳಿ, ಮುಳ್ಳಿನ ಪೊದೆಯೊಳಗೆ ಉರಿಯುವ ಬೆಂಕಿಯಲ್ಲಿ ಯೆಹೋವನ ದೂತನು ಮೋಶೆಗೆ ಕಾಣಿಸಿಕೊಂಡನು. “ಅವನು ಒಂದು ಮುಳ್ಳಿನ ಪೊದೆಯನ್ನು ಕಂಡನು. ಆ ಪೊದೆಯು ಬೆಂಕಿಯಿಂದ ಉರಿಯುತ್ತಿದ್ದರೂ ಅದು ಸುಟ್ಟುಹೋಗದೆ ಇತ್ತು” ಎಂದು ವಿಮೋಚನಕಾಂಡ ಪುಸ್ತಕದ ವೃತ್ತಾಂತವು ತಿಳಿಸುತ್ತದೆ. ತದನಂತರ ಆ ಮುಳ್ಳಿನ ಪೊದೆಯಿಂದ ಒಂದು ಸ್ವರವು ಅವನನ್ನು ಕರೆಯಿತು. “ನಾನು ನಿನ್ನ ತಂದೆಯ ದೇವರು, ಅಬ್ರಹಾಮನ ದೇವರು, ಇಸಾಕನ ದೇವರು, ಯಾಕೋಬನ ದೇವರು” ಎಂದು ಆ ಸ್ವರವು ಘೋಷಿಸಿತು. (ವಿಮೋಚನಕಾಂಡ 3:1-6) ಸಮಯಾನಂತರ, ಸಾ.ಶ. ಒಂದನೇ ಶತಮಾನದಲ್ಲಿ ದೇವರ ಸ್ವಂತ ಪುತ್ರನಾದ ಯೇಸುವು ಈ ಮಾತುಗಳನ್ನು ನೆನಪು ಮಾಡಿಕೊಂಡನು.
2, 3. (ಎ) ಅಬ್ರಹಾಮ, ಇಸಾಕ ಮತ್ತು ಯಾಕೋಬರಿಗೆ ಯಾವ ಪ್ರತೀಕ್ಷೆ ಕಾದಿದೆ? (ಬಿ) ಯಾವ ಪ್ರಶ್ನೆಗಳು ಏಳುತ್ತವೆ?
2 ಯಾರು ಪುನರುತ್ಥಾನವನ್ನು ನಂಬುತ್ತಿರಲಿಲ್ಲವೋ ಆ ಸದ್ದುಕಾಯರಲ್ಲಿ ಕೆಲವರೊಂದಿಗೆ ಯೇಸು ಚರ್ಚೆಯನ್ನು ನಡೆಸುತ್ತಿದ್ದನು. ಅವನು ಹೇಳಿದ್ದು: “ಸತ್ತವರು ಬದುಕಿ ಏಳುತ್ತಾರೆಂಬದನ್ನು ಮೋಶೆಯೂ ಸೂಚಿಸಿದ್ದಾನೆ. ಅವನು ಪೊದೆಯ ಸಂಗತಿಯಿರುವ ಅಧ್ಯಾಯದಲ್ಲಿ ಕರ್ತನನ್ನು [“ಯೆಹೋವನನ್ನು,” NW] ಅಬ್ರಹಾಮನ ದೇವರು ಇಸಾಕನ ದೇವರು ಯಾಕೋಬನ ದೇವರು ಎಂದು ಹೇಳಿದ್ದಾನೆ. ದೇವರು ಜೀವಿತರಿಗೆ ದೇವರಾಗಿದ್ದಾನೆ ಹೊರತು ಜೀವವಿಲ್ಲದವರಿಗೆ ಅಲ್ಲ. ಆತನಿಗೆ ಎಲ್ಲರೂ ಜೀವಿಸುವವರೇ.” (ಲೂಕ 20:27, 37, 38) ಯೇಸು ಈ ಮಾತುಗಳನ್ನು ಹೇಳುವ ಮೂಲಕ, ದೀರ್ಘಕಾಲಕ್ಕೆ ಮುಂಚೆಯೇ ಮೃತಪಟ್ಟಿರುವ ಅಬ್ರಹಾಮ, ಇಸಾಕ ಮತ್ತು ಯಾಕೋಬರು ದೇವರ ದೃಷ್ಟಿಯಲ್ಲಿ, ಆತನ ಸ್ಮರಣೆಯಲ್ಲಿ ಇನ್ನೂ ಬದುಕಿದ್ದರು ಎಂಬುದನ್ನು ದೃಢಪಡಿಸಿದನು. ಯೋಬನಂತೆಯೇ ಅವರು ತಮ್ಮ ‘ವಾಯಿದೆಯ ದಿನಗಳಿಗಾಗಿ’ ಅಂದರೆ ಅವರ ಮರಣನಿದ್ರೆಯು ಕೊನೆಗೊಳ್ಳುವ ದಿನಕ್ಕಾಗಿ ಕಾಯುತ್ತಿದ್ದಾರೆ. (ಯೋಬ 14:14) ದೇವರ ನೂತನ ಲೋಕದಲ್ಲಿ ಅವರು ಪುನರುತ್ಥಾನಗೊಳಿಸಲ್ಪಡುವರು.
3 ಆದರೆ, ಮಾನವ ಇತಿಹಾಸದಾದ್ಯಂತ ಮೃತಪಟ್ಟಿರುವ ಇತರ ನೂರಾರು ಕೋಟಿ ಜನರ ಕುರಿತಾಗಿ ಏನು? ಅವರು ಸಹ ಪುನರುತ್ಥಾನಗೊಳಿಸಲ್ಪಡುವರೊ? ಈ ಪ್ರಶ್ನೆಗೆ ಸಂತೃಪ್ತಿಕರವಾದ ಉತ್ತರವನ್ನು ಪಡೆದುಕೊಳ್ಳುವ ಮುಂಚೆ, ಜನರು ಸಾಯುವಾಗ ಅವರು ಎಲ್ಲಿಗೆ ಹೋಗುತ್ತಾರೆ ಎಂಬುದನ್ನು ನಾವು ದೇವರ ವಾಕ್ಯದಿಂದ ಕಂಡುಕೊಳ್ಳೋಣ.
ಮೃತರು ಎಲ್ಲಿದ್ದಾರೆ?
4. (ಎ) ಜನರು ಮರಣಪಟ್ಟಾಗ ಎಲ್ಲಿಗೆ ಹೋಗುತ್ತಾರೆ? (ಬಿ) ಷೀಯೋಲ್ ಎಂದರೇನು?
4 ಮೃತರಿಗೆ “ಯಾವ ತಿಳುವಳಿಕೆಯೂ ಇಲ್ಲ” ಎಂದು ಬೈಬಲ್ ತಿಳಿಸುತ್ತದೆ. ಮರಣದಲ್ಲಿ ನರಕಾಗ್ನಿಯ ಯಾವುದೇ ಚಿತ್ರಹಿಂಸೆ ಇರುವುದಿಲ್ಲ, ಲಿಂಬೊದಲ್ಲಿ ಯಾವುದೇ ಯಾತನಾಮಯ ಕಾಯುವಿಕೆ ಇರುವುದಿಲ್ಲ, ಬದಲಾಗಿ ಅದು ಕೇವಲ ಮಣ್ಣಿಗೆ ಹಿಂದಿರುಗುವಂಥ ಒಂದು ಕ್ರಿಯೆಯಾಗಿದೆ. ಆದುದರಿಂದಲೇ ದೇವರ ವಾಕ್ಯವು ಬದುಕಿರುವವರಿಗೆ ಹೀಗೆ ಬುದ್ಧಿಹೇಳುತ್ತದೆ: “ನಿನ್ನ ಕೈಗೆ ಸಿಕ್ಕಿದ ಕೆಲಸವನ್ನೆಲ್ಲಾ ನಿನ್ನ ಪೂರ್ಣ ಶಕ್ತಿಯಿಂದ ಮಾಡು; ನೀನು ಸೇರಬೇಕಾದ ಪಾತಾಳದಲ್ಲಿ [“ಷೀಯೋಲ್ನಲ್ಲಿ,” NW] ಯಾವ ಕೆಲಸವೂ ಯುಕ್ತಿಯೂ ತಿಳುವಳಿಕೆಯೂ ಜ್ಞಾನವೂ ಇರುವದಿಲ್ಲ.” (ಪ್ರಸಂಗಿ 9:5, 10; ಆದಿಕಾಂಡ 3:19) “ಷೀಯೋಲ್” ಎಂಬುದು ಅನೇಕರಿಗೆ ಅಪರಿಚಿತ ಪದವಾಗಿದೆ.a ಇದು ಅನಿಶ್ಚಿತ ಮೂಲದಿಂದ ಬಂದಿರುವ ಒಂದು ಹೀಬ್ರು ಪದವಾಗಿದೆ. ಅನೇಕ ಧರ್ಮಗಳು, ಮೃತರು ಸತ್ತ ನಂತರವೂ ಬದುಕನ್ನು ಮುಂದುವರಿಸುತ್ತಾರೆ ಎಂದು ಕಲಿಸುತ್ತವಾದರೂ, ದೇವರ ಪ್ರೇರಿತ ವಾಕ್ಯವು ತೋರಿಸುವಂತೆ, ಷೀಯೋಲ್ನಲ್ಲಿರುವವರು ಮೃತಪಟ್ಟಿದ್ದಾರೆ ಮತ್ತು ಯಾವುದೇ ಪ್ರಜ್ಞೆಯಿಲ್ಲದವರಾಗಿದ್ದಾರೆ. ಷೀಯೋಲ್ ಎಂಬುದು ಮಾನವಕುಲದ ಸಾಮಾನ್ಯ ಸಮಾಧಿಯಾಗಿದೆ.
5, 6. ಯಾಕೋಬನು ತೀರಿಕೊಂಡಾಗ ಎಲ್ಲಿಗೆ ಹೋದನು, ಮತ್ತು ಅಲ್ಲಿ ಯಾರನ್ನು ಜೊತೆಗೂಡಿದನು?
5 ಬೈಬಲಿನ ಮೂಲ ಭಾಷೆಯಲ್ಲಿ, ಆದಿಕಾಂಡ 37:35ರಲ್ಲಿ ಪ್ರಥಮ ಬಾರಿ ನಾವು “ಷೀಯೋಲ್” ಎಂಬ ಪದವನ್ನು ಕಂಡುಕೊಳ್ಳುತ್ತೇವೆ. ತನ್ನ ಅಚ್ಚುಮೆಚ್ಚಿನ ಮಗನಾದ ಯೋಸೇಫನು ಮೃತಪಟ್ಟಿದ್ದಾನೆಂಬ ಸುದ್ದಿಯನ್ನು ಕೇಳಿಸಿಕೊಂಡಾಗ ಪೂರ್ವಜನಾದ ಯಾಕೋಬನು ಸಮಾಧಾನ ಹೊಂದಲೊಲ್ಲದೆ ಇದ್ದನು. ಆ ಸಮಯದಲ್ಲಿ ಅವನು ಹೇಳಿದ್ದು: “ನಾನು ಹೀಗೆ ಹಂಬಲಿಸುತ್ತಾ ನನ್ನ ಮಗನಿರುವ ಪಾತಾಳವನ್ನು [“ಷೀಯೋಲನ್ನು,” NW] ಸೇರುವೆನು.” ತನ್ನ ಮಗನು ಮೃತಪಟ್ಟಿದ್ದಾನೆಂದು ನಂಬಿದ್ದ ಯಾಕೋಬನು, ತಾನೂ ಸಾಯಲು ಮತ್ತು ಷೀಯೋಲ್ನಲ್ಲಿರಲು ಬಯಸಿದನು. ಸಮಯಾನಂತರ, ಕ್ಷಾಮದಿಂದ ಪರಿಹಾರವನ್ನು ಕಂಡುಕೊಳ್ಳಲಿಕ್ಕಾಗಿ, ಯಾಕೋಬನ ಒಂಬತ್ತು ಮಂದಿ ಹಿರಿಯ ಮಕ್ಕಳು ಅವರೊಂದಿಗೆ ಅವನ ಕಿರಿಯ ಮಗನಾದ ಬೆನ್ಯಾಮೀನನನ್ನು ಐಗುಪ್ತ ದೇಶಕ್ಕೆ ಕರೆದೊಯ್ಯಲು ಬಯಸಿದರು. ಆದರೆ ಇದನ್ನು ನಿರಾಕರಿಸುತ್ತಾ ಯಾಕೋಬನು ಹೇಳಿದ್ದು: “ನನ್ನ ಮಗನು ನಿಮ್ಮ ಸಂಗಡ ಹೋಗಬಾರದು; ಇವನ ಒಡಹುಟ್ಟಿದವನು ಸತ್ತುಹೋದನು; ಇವನೊಬ್ಬನೇ ಉಳಿದಿದ್ದಾನೆ; ಮಾರ್ಗದಲ್ಲಿ ಇವನಿಗೇನಾದರೂ ಕೇಡಾದರೆ ಈ ಮುದಿತಲೆ ದುಃಖದಿಂದಲೇ ಪಾತಾಳಕ್ಕೆ [“ಷೀಯೋಲ್ಗೆ,” NW] ಸೇರಲು ನೀವು ಕಾರಣವಾಗುವಿರಿ.” (ಆದಿಕಾಂಡ 42:36, 38) ಈ ಎರಡು ಉಲ್ಲೇಖಗಳು ಷೀಯೋಲನ್ನು ಮರಣದೊಂದಿಗೆ ಸಂಬಂಧಿಸುತ್ತವೇ ಹೊರತು ಯಾವುದೇ ರೀತಿಯ ಮರಣಾನಂತರದ ಜೀವನಕ್ಕಲ್ಲ.
6 ಆದಿಕಾಂಡ ಪುಸ್ತಕದ ವೃತ್ತಾಂತವು, ಯೋಸೇಫನು ಐಗುಪ್ತದಲ್ಲಿ ಆಹಾರಮಂತ್ರಿಯಾಗಿದ್ದನೆಂದು ತಿಳಿಸುತ್ತದೆ. ಪರಿಣಾಮವಾಗಿ, ಯಾಕೋಬನು ಅಲ್ಲಿಗೆ ಪ್ರಯಾಣಿಸಿ ಯೋಸೇಫನೊಂದಿಗೆ ಹರ್ಷದಿಂದ ಪುನರ್ಮಿಲನವಾಗಲು ಸಾಧ್ಯವಾಯಿತು. ಆ ಬಳಿಕ ಯಾಕೋಬನು ಅದೇ ದೇಶದಲ್ಲಿ ನಿವಾಸಿಸತೊಡಗಿದನು ಮತ್ತು 147ರ ಮುದಿಪ್ರಾಯದಲ್ಲಿ ತೀರಿಕೊಂಡನು. ಅವನ ಕೊನೆಯ ಆಸೆಯಂತೆ, ಅವನ ಗಂಡುಮಕ್ಕಳು ಅವನ ಶವವನ್ನು ಕಾನಾನ್ ದೇಶಕ್ಕೆ ಹೊತ್ತುಕೊಂಡುಹೋಗಿ ಮಕ್ಪೇಲ ಎಂಬ ಬೈಲಿನಲ್ಲಿರುವ ಗವಿಯೊಳಗೆ ಸಮಾಧಿಮಾಡಿದರು. (ಆದಿಕಾಂಡ 47:28; 49:29-31; 50:12, 13) ಹೀಗೆ ಯಾಕೋಬನು ತನ್ನ ತಂದೆಯಾದ ಇಸಾಕನನ್ನು ಮತ್ತು ಅಜ್ಜನಾದ ಅಬ್ರಹಾಮನನ್ನು ಜೊತೆಗೂಡಿದನು.
‘ಪಿತೃಗಳ ಬಳಿಗೆ ಸೇರಿದರು’
7, 8. (ಎ) ಅಬ್ರಹಾಮನು ಮರಣಪಟ್ಟಾಗ ಎಲ್ಲಿಗೆ ಹೋದನು? ವಿವರಿಸಿರಿ. (ಬಿ) ಬೇರೆಯವರೂ ಮರಣಪಟ್ಟಾಗ ಷೀಯೋಲ್ಗೇ ಹೋದರು ಎಂಬುದನ್ನು ಯಾವುದು ತೋರಿಸುತ್ತದೆ?
7 ಈ ಮುಂಚೆ ಯೆಹೋವನು ಅಬ್ರಹಾಮನೊಂದಿಗಿನ ತನ್ನ ಒಡಂಬಡಿಕೆಯನ್ನು ದೃಢಪಡಿಸಿ, ಅವನ ಸಂತತಿಯು ಬಹಳವಾಗಿ ಹೆಚ್ಚುವುದು ಎಂದು ವಾಗ್ದಾನಿಸಿದಾಗ, ಅಬ್ರಹಾಮನಿಗೆ ಏನಾಗುವುದು ಎಂಬುದನ್ನು ಆತನು ಸೂಚಿಸಿದನು. “ನೀನಂತೂ ಸಮಾಧಾನದೊಡನೆ ಪಿತೃಗಳ ಬಳಿಗೆ ಸೇರುವಿ; ತುಂಬಾ ವೃದ್ಧನಾಗಿ ಉತ್ತರಕ್ರಿಯೆಯನ್ನು ಹೊಂದುವಿ” ಎಂದು ಯೆಹೋವನು ಹೇಳಿದನು. (ಆದಿಕಾಂಡ 15:15) ಮತ್ತು ಸಮಯಾನಂತರ ಸರಿಯಾಗಿ ಇದೇ ಸಂಭವಿಸಿತು. ಆದಿಕಾಂಡ 25:8 ಹೇಳುವುದು: “ಅವನು ಪೂರ್ಣಾಯುಷ್ಯದಿಂದ ದಿನತುಂಬಿದ ಮುದುಕನಾಗಿ ಪ್ರಾಣಬಿಟ್ಟು ತನ್ನ ಪಿತೃಗಳ ಬಳಿಗೆ ಸೇರಿದನು.” ಈ ಪಿತೃಗಳು ಯಾರಾಗಿದ್ದರು? ಆದಿಕಾಂಡ 11:10-26 ನೋಹನ ಮಗನಾಗಿದ್ದ ಶೇಮನಷ್ಟು ಹಿಂದಿನ ಅಬ್ರಹಾಮನ ಪೂರ್ವಜರನ್ನು ಪಟ್ಟಿಮಾಡುತ್ತದೆ. ಆದುದರಿಂದ, ಅಬ್ರಹಾಮನು ಮರಣಪಟ್ಟಾಗ ಷೀಯೋಲ್ನಲ್ಲಿ ಈಗಾಗಲೇ ನಿದ್ರಿಸುತ್ತಿದ್ದಂಥ ಇತರರ ಬಳಿಗೆ ಸೇರಿದನು.
8 “ತನ್ನ ಪಿತೃಗಳ ಬಳಿಗೆ ಸೇರಿದನು” ಎಂಬ ಅಭಿವ್ಯಕ್ತಿಯು, ಹೀಬ್ರು ಶಾಸ್ತ್ರವಚನಗಳಲ್ಲಿ ಅನೇಕಬಾರಿ ಕಂಡುಬರುತ್ತದೆ. ಈ ಕಾರಣದಿಂದ, ಅಬ್ರಹಾಮನ ಮಗನಾದ ಇಷ್ಮಾಯೇಲ್ ಮತ್ತು ಮೋಶೆಯ ಅಣ್ಣನಾದ ಆರೋನ್ ಇಬ್ಬರೂ ಮರಣಪಟ್ಟಾಗ ಷೀಯೋಲ್ಗೇ ಹೋದರು ಮತ್ತು ಅಲ್ಲಿ ಒಂದು ಪುನರುತ್ಥಾನಕ್ಕಾಗಿ ಕಾಯುತ್ತಿದ್ದಾರೆ ಎಂದು ತೀರ್ಮಾನಿಸುವುದು ತರ್ಕಬದ್ಧವಾದುದಾಗಿದೆ. (ಆದಿಕಾಂಡ 25:17; ಅರಣ್ಯಕಾಂಡ 20:23-29) ಅದೇ ರೀತಿಯಲ್ಲಿ ಮೋಶೆಯು ಸಹ ಷೀಯೋಲ್ಗೆ ಹೋದನು; ಆದರೆ ಅವನ ಸಮಾಧಿ ಎಲ್ಲಿದೆ ಎಂಬುದು ಯಾರಿಗೂ ತಿಳಿದಿರಲಿಲ್ಲ. (ಅರಣ್ಯಕಾಂಡ 27:13; ಧರ್ಮೋಪದೇಶಕಾಂಡ 34:5, 6) ತದ್ರೀತಿಯಲ್ಲಿ, ಇಸ್ರಾಯೇಲ್ಯರ ನಾಯಕನಾಗಿದ್ದ ಮೋಶೆಯ ಉತ್ತರಾಧಿಕಾರಿಯಾದ ಯೆಹೋಶುವನು ಮತ್ತು ಅವನ ಕಾಲದವರೆಲ್ಲರು ಮೃತಪಟ್ಟಾಗ ಷೀಯೋಲ್ಗೇ ಹೋದರು.—ನ್ಯಾಯಸ್ಥಾಪಕರು 2:8-10.
9. (ಎ) “ಷೀಯೋಲ್” ಎಂಬ ಹೀಬ್ರು ಪದ ಮತ್ತು “ಹೇಡೀಸ್” ಎಂಬ ಗ್ರೀಕ್ ಪದವು ಒಂದೇ ಸ್ಥಳಕ್ಕೆ ಸೂಚಿಸುತ್ತದೆ ಎಂಬುದನ್ನು ಬೈಬಲ್ ಹೇಗೆ ತೋರಿಸುತ್ತದೆ? (ಬಿ) ಷೀಯೋಲ್ ಅಥವಾ ಹೇಡೀಸ್ನಲ್ಲಿರುವವರಿಗೆ ಯಾವ ಪ್ರತೀಕ್ಷೆಯಿದೆ?
9 ಶತಮಾನಗಳ ಬಳಿಕ ದಾವೀದನು ಇಸ್ರಾಯೇಲಿನ 12 ಕುಲಗಳ ಅರಸನಾದನು. ಅವನು ಮೃತಪಟ್ಟಾಗ, ತನ್ನ “ಪಿತೃಗಳ ಬಳಿಗೆ ಸೇರಿದನು.” (1 ಅರಸುಗಳು 2:10) ಅವನೂ ಷೀಯೋಲ್ನಲ್ಲೇ ಇದ್ದನೊ? ಆಸಕ್ತಿಕರವಾಗಿಯೇ, ಸಾ.ಶ. 33ರ ಪಂಚಾಶತ್ತಮ ದಿನದಂದು ಅಪೊಸ್ತಲ ಪೇತ್ರನು ದಾವೀದನ ಮರಣಕ್ಕೆ ಸೂಚಿಸಿ ಕೀರ್ತನೆ 16:10ನ್ನು ಉಲ್ಲೇಖಿಸಿದನು. ಅದು ಹೀಗನ್ನುತ್ತದೆ: “ನೀನು ನನ್ನ ಜೀವಾತ್ಮವನ್ನು ಪಾತಾಳದಲ್ಲಿ [“ಪ್ರಾಣವನ್ನು ಷೀಯೋಲ್ನಲ್ಲಿ,” NW] ಬಿಡುವದಿಲ್ಲ.” ದಾವೀದನು ಇನ್ನೂ ಸಮಾಧಿಯಲ್ಲಿದ್ದಾನೆ ಎಂದು ತಿಳಿಸಿದ ಬಳಿಕ ಪೇತ್ರನು ಆ ಮಾತುಗಳನ್ನು ಯೇಸುವಿಗೆ ಅನ್ವಯಿಸಿದನು ಮತ್ತು ದಾವೀದನು “ಮುಂದಾಗುವದನ್ನು ಕಂಡು ಕ್ರಿಸ್ತನ ಪುನರುತ್ಥಾನವನ್ನೇ ಕುರಿತು—ಆತನು ಪಾತಾಳದಲ್ಲಿ [“ಹೇಡೀಸ್ನಲ್ಲಿ,” NW] ಬಿಡಲ್ಪಡಲಿಲ್ಲವೆಂತಲೂ ಆತನ ಶರೀರವು ಕೊಳೆಯುವ ಅವಸ್ಥೆಯನ್ನನುಭವಿಸುವದಿಲ್ಲವೆಂತಲೂ ಹೇಳಿದನು. ಈ ಯೇಸುವನ್ನೇ ದೇವರು ಎಬ್ಬಿಸಿದನು; ಇದಕ್ಕೆ ನಾವೆಲ್ಲರು ಸಾಕ್ಷಿಗಳಾಗಿದ್ದೇವೆ” ಎಂದು ಸೂಚಿಸಿದನು. (ಅ. ಕೃತ್ಯಗಳು 2:29-32) ಪೇತ್ರನು ಇಲ್ಲಿ “ಹೇಡೀಸ್” ಎಂಬ ಪದವನ್ನು ಉಪಯೋಗಿಸಿದನು. ಇದು “ಷೀಯೋಲ್” ಎಂಬ ಹೀಬ್ರು ಪದಕ್ಕೆ ಸಮಾನವಾದ ಅರ್ಥವುಳ್ಳ ಗ್ರೀಕ್ ಪದವಾಗಿದೆ. ಹೀಗೆ, ಹೇಡೀಸ್ನಲ್ಲಿರುವವರು ಎಂದು ಯಾರ ಬಗ್ಗೆ ಹೇಳಲಾಗುತ್ತದೋ ಅವರ ಸ್ಥಿತಿ ಮತ್ತು ಷೀಯೋಲ್ನಲ್ಲಿರುವವರು ಎಂದು ಯಾರ ಬಗ್ಗೆ ಹೇಳಲಾಗುತ್ತದೋ ಅವರ ಸ್ಥಿತಿ ಒಂದೇ ಆಗಿದೆ. ಅವರು ನಿದ್ರಿಸುತ್ತಿದ್ದಾರೆ, ಒಂದು ಪುನರುತ್ಥಾನಕ್ಕಾಗಿ ಕಾಯುತ್ತಿದ್ದಾರೆ.
ಷೀಯೋಲ್ನಲ್ಲಿ ಅನೀತಿವಂತರು ಇದ್ದಾರೊ?
10, 11. ಕೆಲವು ಅನೀತಿವಂತರು ಮರಣಪಟ್ಟಾಗ ಅವರು ಷೀಯೋಲ್ಗೆ ಅಥವಾ ಹೇಡೀಸ್ಗೆ ಹೋಗುತ್ತಾರೆಂದು ನಾವೇಕೆ ಹೇಳಸಾಧ್ಯವಿದೆ?
10 ಮೋಶೆಯು ಇಸ್ರಾಯೇಲ್ ಜನಾಂಗವನ್ನು ಐಗುಪ್ತ ದೇಶದಿಂದ ಹೊರತಂದ ಬಳಿಕ, ಅರಣ್ಯದಲ್ಲಿ ಕೆಲವರು ದಂಗೆಯೆದ್ದರು. ಆಗ ಮೋಶೆಯು ಜನರಿಗೆ, ಆ ದಂಗೆಯ ಮುಖಂಡರಾಗಿದ್ದ ಕೋರಹ, ದಾತಾನ್ ಮತ್ತು ಅಬೀರಾಮ್ರಿಂದ ತಮ್ಮನ್ನು ಪ್ರತ್ಯೇಕಿಸಿಕೊಳ್ಳುವಂತೆ ಅಪ್ಪಣೆಯಿತ್ತನು. ಅವರು ಇನ್ನೇನು ಘೋರ ಮರಣವನ್ನು ಅನುಭವಿಸಲಿದ್ದರು. ಮೋಶೆಯು ವಿವರಿಸಿದ್ದು: “ಎಲ್ಲರೂ ಸಾಯುವ ರೀತಿಯಲ್ಲೇ ಇವರು ಸತ್ತರೆ ಇಲ್ಲವೆ ಎಲ್ಲರಿಗೂ ಸಂಭವಿಸುವ ಗತಿ ಇವರಿಗುಂಟಾದರೆ ಯೆಹೋವನು ನನ್ನನ್ನು ಕಳುಹಿಸಲಿಲ್ಲವೆಂದು ತಿಳುಕೊಳ್ಳಬೇಕು. ಆದರೆ ಯೆಹೋವನು ಇವರಿಗೋಸ್ಕರ ಅಪೂರ್ವವಾದ ಶಿಕ್ಷೆಯನ್ನು ಕಲ್ಪಿಸಿದರೆ ಅಂದರೆ ಭೂಮಿಯು ಬಾಯ್ದೆರೆದು ಇವರನ್ನೂ ಇವರ ಸರ್ವಸ್ವವನ್ನೂ ನುಂಗುವದರಿಂದ ಇವರೆಲ್ಲರೂ ಸಜೀವಿಗಳಾಗಿ ಪಾತಾಳಕ್ಕೆ [“ಷೀಯೋಲ್ಗೆ,” NW] ಹೋಗಿಬಿಟ್ಟರೆ ಇವರು ಯೆಹೋವನನ್ನು ಉಲಂಘಿಸಿದವರೆಂದು ನೀವು ತಿಳಿದುಕೊಳ್ಳಬೇಕು.” (ಅರಣ್ಯಕಾಂಡ 16:29, 30) ಹೀಗೆ, ಕೋರಹ ಮತ್ತು ಅವನ ಪಕ್ಷವಹಿಸಿದ 250 ಮಂದಿ ಲೇವಿಯರ ವಿಷಯದಲ್ಲಿ ಸಂಭವಿಸಿದಂತೆ ಭೂಮಿಯು ಬಾಯ್ದೆರೆದು ನುಂಗಿದ್ದರ ಅಥವಾ ಬೆಂಕಿಯಿಂದ ದಹಿಸಲ್ಪಟ್ಟದ್ದರ ಪರಿಣಾಮವಾಗಿ, ಆ ಎಲ್ಲ ದಂಗೆಕೋರರು ಷೀಯೋಲನ್ನು ಅಥವಾ ಹೇಡೀಸನ್ನು ತಲಪಿದರು.—ಅರಣ್ಯಕಾಂಡ 26:10.
11 ರಾಜ ದಾವೀದನನ್ನು ಬಹು ಕ್ರೂರವಾಗಿ ಶಪಿಸಿದಂಥ ಶಿಮ್ಮಿಯು, ದಾವೀದನ ಉತ್ತರಾಧಿಕಾರಿಯಾದ ಸೊಲೊಮೋನನಿಂದ ಶಿಕ್ಷಿಸಲ್ಪಟ್ಟನು. ದಾವೀದನು ಅವನಿಗೆ ಆಜ್ಞಾಪಿಸಿದ್ದು: “ನೀನಾದರೋ ಅವನನ್ನು ಶಿಕ್ಷಿಸದೆ ಬಿಡಬೇಡ; ನೀನು ಬುದ್ಧಿವಂತನಲ್ಲವೋ! ಅವನ ಮುದಿತಲೆಯು ರಕ್ತಮಯವಾಗಿ ಸಮಾಧಿ [ಷೀಯೋಲ್] ಸೇರುವಂತೆ ಏನು ಮಾಡಬೇಕೆಂಬದು ನಿನಗೆ ಗೊತ್ತಿರುವದು.” ಸೊಲೊಮೋನನು, ಶಿಮ್ಮಿಯನ್ನು ಸಂಹರಿಸಲಿಕ್ಕಾಗಿ ಬೆನಾಯನನ್ನು ಉಪಯೋಗಿಸಿಕೊಂಡನು. (1 ಅರಸುಗಳು 2:8, 9, 44-46) ಬೆನಾಯನ ಖಡ್ಗಕ್ಕೆ ಗುರಿಯಾದ ಇನ್ನೊಬ್ಬ ವ್ಯಕ್ತಿಯು, ಇಸ್ರಾಯೇಲ್ನ ಮಾಜಿ ಸೇನಾಪತಿಯಾಗಿದ್ದ ಯೋವಾಬನೇ ಆಗಿದ್ದನು. ಅವನ ಮುದಿತಲೆಯು ‘ಸಮಾಧಿಯನ್ನು [ಷೀಯೋಲನ್ನು] ಸಮಾಧಾನದಿಂದ ಸೇರಲಿಲ್ಲ.’ (1 ಅರಸುಗಳು 2:5, 6, 28-34) ಈ ಎರಡೂ ಉದಾಹರಣೆಗಳು, “ದುಷ್ಟರು ಅಂದರೆ ದೇವರನ್ನು ಅಲಕ್ಷ್ಯಮಾಡುವ ಜನಾಂಗಗಳವರೆಲ್ಲಾ ಪಾತಾಳಕ್ಕೆ [“ಷೀಯೋಲ್ಗೆ,” NW] ಇಳಿದುಹೋಗುವರು” ಎಂಬ ದಾವೀದನ ಪ್ರೇರಿತ ಕೀರ್ತನೆಯ ಸತ್ಯತೆಯನ್ನು ರುಜುಪಡಿಸುತ್ತವೆ.—ಕೀರ್ತನೆ 9:17.
12. ಅಹೀತೋಫೆಲನು ಯಾರಾಗಿದ್ದನು, ಮತ್ತು ಅವನು ಮೃತಪಟ್ಟಾಗ ಎಲ್ಲಿಗೆ ಹೋದನು?
12 ಅಹೀತೋಫೆಲನು ದಾವೀದನ ಖಾಸಗಿ ಸಲಹೆಗಾರನಾಗಿದ್ದನು. ಅವನ ಸಲಹೆಯು ಸ್ವತಃ ಯೆಹೋವನಿಂದಲೇ ಬಂದದ್ದಾಗಿದೆಯೋ ಎಂಬಂತೆ ಅಮೂಲ್ಯವಾಗಿ ಪರಿಗಣಿಸಲ್ಪಡುತ್ತಿತ್ತು. (2 ಸಮುವೇಲ 16:23) ದುಃಖಕರವಾಗಿಯೇ, ಈ ಭರವಸಾರ್ಹ ಸೇವಕನು ದ್ರೋಹಿಯಾದನು ಮತ್ತು ದಾವೀದನ ಮಗನಾದ ಅಬ್ಷಾಲೋಮನಿಂದ ಎಬ್ಬಿಸಲ್ಪಟ್ಟ ದಂಗೆಯಲ್ಲಿ ಅವನೊಂದಿಗೆ ಜೊತೆಗೂಡಿದನು. ದಾವೀದನು ಇದೇ ದ್ರೋಹಕ್ಕೆ ಸೂಚಿಸಿ ಹೀಗೆ ಬರೆದನೆಂಬುದು ಸುವ್ಯಕ್ತ: “ನನ್ನನ್ನು ದೂಷಿಸುವವನು ವೈರಿಯಾಗಿದ್ದರೆ ತಾಳಿಕೊಂಡೇನು; ನನ್ನನ್ನು ತಿರಸ್ಕರಿಸಿ ಉಬ್ಬಿಕೊಳ್ಳುವವನು ದ್ವೇಷಿಯಾಗಿದ್ದರೆ ಅಡಗಿಕೊಂಡೇನು.” ತದನಂತರ ದಾವೀದನು ಮುಂದುವರಿಸಿದ್ದು: “ಆ ದುಷ್ಟರಿಗೆ ಮರಣವು ತಟ್ಟನೆ ಬರಲಿ; ಸಜೀವರಾಗಿಯೇ ಪಾತಾಳಕ್ಕೆ [“ಷೀಯೋಲ್ಗೆ,” NW] ಇಳಿದುಹೋಗಲಿ. ಅವರ ಮನೆಯಲ್ಲಿಯೂ ಮನಸ್ಸಿನಲ್ಲಿಯೂ ಕೆಟ್ಟತನವೇ.” (ಕೀರ್ತನೆ 55:12-15) ಅಹೀತೋಫೆಲನು ಮತ್ತು ಅವನ ಸಂಗಡಿಗರು ಮೃತಪಟ್ಟ ಬಳಿಕ ಷೀಯೋಲ್ಗೆ ಹೋದರು.
ಗಿಹೆನದಲ್ಲಿ ಯಾರಿದ್ದಾರೆ?
13. ಯೂದನನ್ನು ‘ನಾಶಕ್ಕೆ ಗುರಿಯಾದ ಮನುಷ್ಯ’ ಎಂದು ಏಕೆ ಕರೆಯಲಾಗಿದೆ?
13 ದಾವೀದನ ಸನ್ನಿವೇಶವನ್ನು ಮಹಾ ದಾವೀದನಾದ ಯೇಸುವು ಅನುಭವಿಸಿದ ಸನ್ನಿವೇಶಕ್ಕೆ ಹೋಲಿಸಿರಿ. ಕ್ರಿಸ್ತನ 12 ಮಂದಿ ಅಪೊಸ್ತಲರಲ್ಲಿ ಒಬ್ಬನಾಗಿದ್ದ ಇಸ್ಕರಿಯೋತ ಯೂದನು ಅಹೀತೋಫೆಲನಂತೆ ದ್ರೋಹಿಯಾಗಿ ಪರಿಣಮಿಸಿದನು. ಯೂದನ ವಂಚನಾತ್ಮಕ ಕೃತ್ಯವು ಅಹೀತೋಫೆಲನ ದ್ರೋಹಕ್ಕಿಂತ ಎಷ್ಟೋ ಹೆಚ್ಚು ಗಂಭೀರವಾದದ್ದಾಗಿತ್ತು. ಯೂದನು ದೇವರ ಏಕಜಾತ ಪುತ್ರನ ವಿರುದ್ಧ ದ್ರೋಹವೆಸಗಿದ್ದನು. ದೇವಕುಮಾರನು ತನ್ನ ಭೂಶುಶ್ರೂಷೆಯ ಕೊನೆಯಲ್ಲಿ ಮಾಡಿದ ಒಂದು ಪ್ರಾರ್ಥನೆಯಲ್ಲಿ ತನ್ನ ಹಿಂಬಾಲಕರ ಕುರಿತು ಹೀಗೆ ತಿಳಿಸಿದನು: “ನಾನು ಇವರ ಸಂಗಡ ಇದ್ದಾಗ ನೀನು ನನಗೆ ಕೊಟ್ಟಿರುವ ನಿನ್ನ ಹೆಸರಿನಲ್ಲಿ ಇವರನ್ನು ಕಾಯುತ್ತಾ ಬಂದೆನು, ಇವರನ್ನು ಕಾಪಾಡಿದೆನು; ಶಾಸ್ತ್ರದ ಮಾತು ನೆರವೇರುವಂತೆ ನಾಶಕ್ಕೆ ಗುರಿಯಾದ ಆ ಮನುಷ್ಯನೇ ಹೊರತು ಇವರಲ್ಲಿ ಮತ್ತಾರೂ ನಾಶವಾಗಲಿಲ್ಲ.” (ಯೋಹಾನ 17:12) ಇಲ್ಲಿ ಯೂದನನ್ನು ‘ನಾಶಕ್ಕೆ ಗುರಿಯಾದ ಮನುಷ್ಯ’ ಎಂದು ಸಂಬೋಧಿಸುವ ಮೂಲಕ, ಯೂದನ ಮರಣದ ಬಳಿಕ ಅವನಿಗೆ ಪುನರುತ್ಥಾನದ ನಿರೀಕ್ಷೆಯೇ ಇಲ್ಲ ಎಂದು ಯೇಸು ಸೂಚಿಸಿದನು. ಅವನು ದೇವರ ಸ್ಮರಣೆಯಲ್ಲಿ ಉಳಿಯಲಿಲ್ಲ. ಅವನು ಷೀಯೋಲ್ಗೆ ಹೋಗಲಿಲ್ಲ, ಬದಲಾಗಿ ಗಿಹೆನಕ್ಕೆ ಹೋದನು. ಹಾಗಾದರೆ ಗಿಹೆನ ಅಂದರೇನು?
14. ಗಿಹೆನವು ಏನನ್ನು ಪ್ರತಿನಿಧಿಸುತ್ತದೆ?
14 ತನ್ನ ದಿನಗಳ ಧಾರ್ಮಿಕ ಮುಖಂಡರನ್ನು ಯೇಸು ಖಂಡಿಸಿದನು, ಏಕೆಂದರೆ ಅವರು ತಮ್ಮ ಹಿಂಬಾಲಕರಲ್ಲಿ ಪ್ರತಿಯೊಬ್ಬರನ್ನೂ ‘ಗಿಹೆನಕ್ಕೆ ಪಾತ್ರರಾಗಿ’ ಮಾಡುತ್ತಿದ್ದರು.b (ಮತ್ತಾಯ 23:15, NW) ಹಿಂದೆ ಆ ಕಾಲದಲ್ಲಿದ್ದ ಜನರಿಗೆ ಹಿನ್ನೋಮ್ ಕಣಿವೆಯು ಪರಿಚಿತ ಸ್ಥಳವಾಗಿತ್ತು. ಇದು ಕಸದಕೊಂಪೆಯಾಗಿ ಉಪಯೋಗಿಸಲ್ಪಡುತ್ತಿದ್ದ ಒಂದು ಸ್ಥಳವಾಗಿದ್ದು, ಯಾರ ದೇಹಗಳು ಸೂಕ್ತವಾದ ಶವಸಂಸ್ಕಾರಕ್ಕೆ ಅಯೋಗ್ಯವೆಂದು ಪರಿಗಣಿಸಲ್ಪಡುತ್ತಿದ್ದವೋ ಆ ವಧಿಸಲ್ಪಟ್ಟ ಅಪರಾಧಿಗಳ ದೇಹಗಳನ್ನು ಇಲ್ಲಿ ಎಸೆಯಲಾಗುತ್ತಿತ್ತು. ಇದಕ್ಕೂ ಮುಂಚೆ ಯೇಸು ತನ್ನ ಪರ್ವತ ಪ್ರಸಂಗದಲ್ಲಿ ಗಿಹೆನದ ಕುರಿತು ಮಾತಾಡಿದ್ದನು. (ಮತ್ತಾಯ 5:29, 30) ಅವನ ಕೇಳುಗರಿಗೆ ಇದರ ಸಾಂಕೇತಿಕ ಅರ್ಥವು ಸ್ಪಷ್ಟವಾಗಿ ತಿಳಿದಿತ್ತು. ಗಿಹೆನವು ಪುನರುತ್ಥಾನದ ನಿರೀಕ್ಷೆಯೇ ಇಲ್ಲದ ಸಂಪೂರ್ಣ ನಾಶನವನ್ನು ಪ್ರತಿನಿಧಿಸುತ್ತದೆ. ಹಾಗಾದರೆ, ಯೇಸುವಿನ ದಿನದ ಇಸ್ಕರಿಯೋತ ಯೂದನಲ್ಲದೆ ಬೇರೆ ಯಾರಾದರೂ ಷೀಯೋಲ್ ಅಥವಾ ಹೇಡೀಸ್ಗೆ ಹೋಗದೆ ಗಿಹೆನಕ್ಕೆ ಹೋಗಿದ್ದಾರೊ?
15, 16. ಮೃತಪಟ್ಟ ಬಳಿಕ ಯಾರು ಗಿಹೆನಕ್ಕೆ ಹೋದರು, ಮತ್ತು ಅವರು ಏಕೆ ಅಲ್ಲಿಗೆ ಹೋದರು?
15 ಪ್ರಥಮ ಮಾನವರಾದ ಆದಾಮಹವ್ವರು ಪರಿಪೂರ್ಣರಾಗಿ ಸೃಷ್ಟಿಸಲ್ಪಟ್ಟರು. ಅವರು ಉದ್ದೇಶಪೂರ್ವಕವಾಗಿ ಪಾಪಮಾಡಿದರು. ಅವರ ಮುಂದೆ ನಿತ್ಯಜೀವ ಅಥವಾ ಮರಣದ ಆಯ್ಕೆಯು ಇಡಲ್ಪಟ್ಟಿತ್ತು. ಅವರು ದೇವರಿಗೆ ಅವಿಧೇಯರಾಗಿ ಸೈತಾನನ ಪಕ್ಷವಹಿಸಿದರು. ಅವರು ಸತ್ತಾಗ, ಕ್ರಿಸ್ತನ ವಿಮೋಚನಾ ಮೌಲ್ಯದ ಯಜ್ಞದಿಂದ ಪ್ರಯೋಜನವನ್ನು ಪಡೆಯುವ ಯಾವುದೇ ಪ್ರತೀಕ್ಷೆಯು ಅವರಿಗಿರಲಿಲ್ಲ. ಅದಕ್ಕೆ ಬದಲಾಗಿ ಅವರು ಗಿಹೆನಕ್ಕೆ ಹೋದರು.
16 ಆದಾಮನ ಚೊಚ್ಚಲ ಮಗನಾದ ಕಾಯಿನನು ತನ್ನ ತಮ್ಮನಾದ ಹೇಬೆಲನನ್ನು ಕೊಂದು, ಆ ಬಳಿಕ ದೇಶಭ್ರಷ್ಟನಾಗಿ ಜೀವಿಸುತ್ತಿದ್ದನು. ಅಪೊಸ್ತಲ ಯೋಹಾನನು ಕಾಯಿನನನ್ನು ‘ಕೆಡುಕನಿಂದ ಹುಟ್ಟಿದವನು’ ಎಂದು ವರ್ಣಿಸಿದನು. (1 ಯೋಹಾನ 3:12) ಆದುದರಿಂದ, ಇವನು ಮೃತಪಟ್ಟಾಗ ತನ್ನ ಹೆತ್ತವರಂತೆಯೇ ಗಿಹೆನಕ್ಕೆ ಹೋದನು ಎಂದು ತೀರ್ಮಾನಿಸುವುದು ನ್ಯಾಯಸಮ್ಮತವಾಗಿದೆ. (ಮತ್ತಾಯ 23:33, 35) ಇದು ನೀತಿವಂತನಾದ ಹೇಬೆಲನ ಸನ್ನಿವೇಶಕ್ಕೆ ಎಷ್ಟು ತದ್ವಿರುದ್ಧವಾದದ್ದಾಗಿದೆ! ಈ ವಿಷಯದಲ್ಲಿ ಅಪೊಸ್ತಲ ಪೌಲನು ವಿವರಿಸಿದ್ದು: “ನಂಬಿಕೆಯಿಂದಲೇ ಹೇಬೆಲನು ಕಾಯಿನನ ಯಜ್ಞಕ್ಕಿಂತ ಶ್ರೇಷ್ಠವಾದ ಯಜ್ಞವನ್ನು ದೇವರಿಗೆ ಸಮರ್ಪಿಸಿದನು. ಅದರ ಮೂಲಕ ತಾನು ನೀತಿವಂತನೆಂದು ಸಾಕ್ಷಿಹೊಂದಿದನು; ದೇವರು ಅವನ ಕಾಣಿಕೆಗಳನ್ನು ಅಂಗೀಕಾರಮಾಡಿದ್ದೇ ಆ ಸಾಕ್ಷಿ. ಅವನು ಸತ್ತಿದ್ದರೂ ಅವನ ನಂಬಿಕೆಯ ಮೂಲಕ ಇನ್ನೂ ಮಾತಾಡುತ್ತಾನೆ.” (ಇಬ್ರಿಯ 11:4) ಹೌದು, ಸದ್ಯಕ್ಕೆ ಹೇಬೆಲನು ಷೀಯೋಲ್ನಲ್ಲಿ ಇದ್ದುಕೊಂಡು ಪುನರುತ್ಥಾನಕ್ಕಾಗಿ ಕಾಯುತ್ತಿದ್ದಾನೆ.
ಒಂದು “ಪ್ರಥಮ” ಮತ್ತು ಒಂದು “ಶ್ರೇಷ್ಠ” ಪುನರುತ್ಥಾನ
17. (ಎ) ಈ “ಅಂತ್ಯಕಾಲ”ದಲ್ಲಿ ಯಾರು ಷೀಯೋಲ್ಗೆ ಹೋಗುವರು? (ಬಿ) ಷೀಯೋಲ್ನಲ್ಲಿ ಇರುವವರಿಗೆ ಯಾವ ಪ್ರತೀಕ್ಷೆಯಿದೆ ಮತ್ತು ಗಿಹೆನದಲ್ಲಿ ಇರುವವರಿಗೆ ಏನು ಸಂಭವಿಸುವುದು?
17 ಈ ಮಾಹಿತಿಯನ್ನು ಓದುವಂಥ ಅನೇಕರು, ಈ “ಅಂತ್ಯಕಾಲ”ದಲ್ಲಿ ಮರಣಪಡುವಂಥವರ ಸನ್ನಿವೇಶದ ಕುರಿತು ಆಲೋಚಿಸುವರು. (ದಾನಿಯೇಲ 8:19) ಪ್ರಕಟನೆ ಪುಸ್ತಕದ 6ನೇ ಅಧ್ಯಾಯವು, ಆ ಕಾಲಾವಧಿಯಲ್ಲಿ ನಾಲ್ಕು ಮಂದಿ ಕುದುರೆಸವಾರರ ಸವಾರಿಯನ್ನು ವರ್ಣಿಸುತ್ತದೆ. ಆಸಕ್ತಿಕರವಾಗಿಯೇ, ಇವುಗಳಲ್ಲಿ ಕೊನೆಯ ಕುದುರೆಸವಾರನ ಹೆಸರು ಮೃತ್ಯು ಎಂದಾಗಿದ್ದು, ಅವನ ಹಿಂದೆ ಹೇಡೀಸ್ ಎಂಬುವವನು ಬರುತ್ತಾನೆ. ಹೀಗೆ, ಮುಂಚಿನ ಕುದುರೆಸವಾರರ ಚಟುವಟಿಕೆಯಿಂದಾಗಿ ಅಕಾಲಮರಣಕ್ಕೆ ತುತ್ತಾಗುವಂಥ ಅನೇಕರು ಹೇಡೀಸ್ಗೆ ಹೋಗುವರು ಮತ್ತು ದೇವರ ನೂತನ ಲೋಕದಲ್ಲಿನ ಒಂದು ಪುನರುತ್ಥಾನಕ್ಕಾಗಿ ಕಾಯುವರು. (ಪ್ರಕಟನೆ 6:8) ಹಾಗಾದರೆ, ಷೀಯೋಲ್ (ಹೇಡೀಸ್)ನಲ್ಲಿ ಇರುವವರಿಗೆ ಯಾವ ಪ್ರತೀಕ್ಷೆಯಿದೆ ಮತ್ತು ಗಿಹೆನದಲ್ಲಿ ಇರುವವರಿಗೆ ಏನು ಸಂಭವಿಸುವುದು? ಸರಳವಾಗಿ ಹೇಳುವುದಾದರೆ, ಷೀಯೋಲ್ನಲ್ಲಿ ಇರುವವರಿಗೆ ಪುನರುತ್ಥಾನವಾಗುವುದು; ಗಿಹೆನದಲ್ಲಿ ಇರುವವರಿಗೆ ನಿತ್ಯನಾಶನವೇ ಗತಿ, ಅಂದರೆ ಅವರು ಅಸ್ತಿತ್ವದಲ್ಲಿಲ್ಲದೇ ಹೋಗುವರು.
18. ‘ಪ್ರಥಮ ಪುನರುತ್ಥಾನವು’ ಯಾವ ಪ್ರತೀಕ್ಷೆಯನ್ನು ನೀಡುತ್ತದೆ?
18 ಅಪೊಸ್ತಲ ಯೋಹಾನನು ಹೀಗೆ ಬರೆದನು: “ಪ್ರಥಮ ಪುನರುತ್ಥಾನದಲ್ಲಿ ಸೇರಿರುವವನು ಧನ್ಯನೂ ಪರಿಶುದ್ಧನೂ ಆಗಿದ್ದಾನೆ. ಇಂಥವರ ಮೇಲೆ ಎರಡನೆಯ ಮರಣಕ್ಕೆ ಅಧಿಕಾರವಿಲ್ಲ; ಆದರೆ ಅವರು ದೇವರಿಗೂ ಕ್ರಿಸ್ತನಿಗೂ ಯಾಜಕರಾಗಿ ಕ್ರಿಸ್ತನೊಂದಿಗೆ ಆ ಸಾವಿರ ವರುಷ ಆಳುವರು.” ಕ್ರಿಸ್ತನೊಂದಿಗೆ ಜೊತೆ ರಾಜರಾಗಿ ಕಾರ್ಯನಡಿಸುವವರು “ಪ್ರಥಮ ಪುನರುತ್ಥಾನ”ವನ್ನು ಪಡೆದುಕೊಳ್ಳುವರು. ಆದರೆ ಮಾನವಕುಲದಲ್ಲಿ ಉಳಿದವರಿಗೆ ಯಾವ ನಿರೀಕ್ಷೆಯಿದೆ?—ಪ್ರಕಟನೆ 20:6.
19. ಒಂದು “ಶ್ರೇಷ್ಠಪುನರುತ್ಥಾನ”ದಿಂದ ಕೆಲವರು ಹೇಗೆ ಪ್ರಯೋಜನಹೊಂದುವರು?
19 ದೇವರ ಸೇವಕರಾಗಿದ್ದ ಎಲೀಯ ಮತ್ತು ಎಲೀಷರ ಕಾಲದಿಂದಲೂ, ಪುನರುತ್ಥಾನದ ಅದ್ಭುತಕೃತ್ಯವು ಜನರನ್ನು ಪುನಃ ಜೀವಿತರಾಗುವಂತೆ ಮಾಡಿದೆ. ಪೌಲನು ಹೇಳಿದ್ದು: “ಸ್ತ್ರೀಯರು ಸತ್ತುಹೋಗಿದ್ದ ತಮ್ಮವರನ್ನು ಪುನರುತ್ಥಾನದಿಂದ ತಿರಿಗಿ ಹೊಂದಿದರು. ಕೆಲವರು ತಾವು ಯಾತನೆಯ ಯಂತ್ರಕ್ಕೆ ಕಟ್ಟಲ್ಪಟ್ಟಾಗ ಶ್ರೇಷ್ಠಪುನರುತ್ಥಾನವನ್ನು ಹೊಂದುವದಕ್ಕೋಸ್ಕರ ಬಿಡುಗಡೆ ಬೇಡವೆಂದು ಹೇಳಿ ಮುರಿಸಿಕೊಂಡು ಸತ್ತರು.” ಹೌದು, ಈ ನಂಬಿಗಸ್ತ ಸಮಗ್ರತೆಪಾಲಕರು, ಇನ್ನೂ ಕೆಲವು ವರ್ಷ ಜೀವಿಸಿ ತದನಂತರ ಮರಣಪಡುವ ಪ್ರತೀಕ್ಷೆಯನ್ನಲ್ಲ ಬದಲಾಗಿ ತಮಗೆ ನಿತ್ಯಜೀವದ ಪ್ರತೀಕ್ಷೆಯನ್ನು ನೀಡುವಂಥ ಒಂದು ಪುನರುತ್ಥಾನಕ್ಕಾಗಿ ಎದುರುನೋಡಿದರು! ಇದು ನಿಶ್ಚಯವಾಗಿಯೂ ಒಂದು “ಶ್ರೇಷ್ಠಪುನರುತ್ಥಾನ”ವಾಗಿರುವುದು.—ಇಬ್ರಿಯ 11:35.
20. ಮುಂದಿನ ಲೇಖನವು ಏನನ್ನು ಪರಿಗಣಿಸುವುದು?
20 ಯೆಹೋವನು ಈ ದುಷ್ಟ ವ್ಯವಸ್ಥೆಗೆ ಅಂತ್ಯವನ್ನು ತರುವುದಕ್ಕೆ ಮುಂಚೆ ನಾವು ನಂಬಿಗಸ್ತರಾಗಿ ಸಾಯುವಲ್ಲಿ, ನಮಗೆ ಒಂದು ‘ಶ್ರೇಷ್ಠಪುನರುತ್ಥಾನದ’ ನಿಶ್ಚಿತ ನಿರೀಕ್ಷೆಯಿದೆ. ಇದು ಯಾವ ಅರ್ಥದಲ್ಲಿ ಶ್ರೇಷ್ಠವಾಗಿದೆ ಎಂದರೆ, ಇದಕ್ಕೆ ನಿತ್ಯಜೀವದ ನಿರೀಕ್ಷೆಯಿದೆ. ಯೇಸು ವಾಗ್ದಾನಿಸಿದ್ದು: “ಅದಕ್ಕೆ ಆಶ್ಚರ್ಯಪಡಬೇಡಿರಿ; ಸಮಾಧಿಗಳಲ್ಲಿರುವವರೆಲ್ಲರು ಆತನ ಧ್ವನಿಯನ್ನು ಕೇಳಿ ಎದ್ದು ಹೊರಗೆ ಬರುವ ಕಾಲ ಬರುತ್ತದೆ.” (ಯೋಹಾನ 5:28, 29) ನಮ್ಮ ಮುಂದಿನ ಲೇಖನವು ಪುನರುತ್ಥಾನದ ಉದ್ದೇಶವನ್ನು ಇನ್ನಷ್ಟು ಪರಿಗಣಿಸುತ್ತದೆ. ಅದು, ಪುನರುತ್ಥಾನದ ನಿರೀಕ್ಷೆಯು ನಾವು ಸಮಗ್ರತೆಪಾಲಕರಾಗಿರಲು ಹೇಗೆ ಬಲಪಡಿಸುತ್ತದೆ ಮತ್ತು ಸ್ವತ್ಯಾಗದ ಮನೋಭಾವವನ್ನು ಬೆಳೆಸಿಕೊಳ್ಳುವಂತೆ ನಮಗೆ ಹೇಗೆ ಸಹಾಯಮಾಡುತ್ತದೆ ಎಂಬುದನ್ನು ತೋರಿಸುವುದು.
[ಪಾದಟಿಪ್ಪಣಿಗಳು]
a ‘ಷೀಯೋಲ್’ ಎಂಬ ಹೀಬ್ರು ಪದ ಅಥವಾ ‘ಹೇಡೀಸ್’ ಎಂಬ ಗ್ರೀಕ್ ಪದಕ್ಕೆ ಕನ್ನಡ ಬೈಬಲಿನಲ್ಲಿ ‘ಪಾತಾಳ’ ಎಂಬ ಪದವನ್ನು ಉಪಯೋಗಿಸಲಾಗಿದೆ.
b ಕನ್ನಡ ಬೈಬಲಿನಲ್ಲಿ, “ಗಿಹೆನ” ಎಂಬ ಗ್ರೀಕ್ ಪದವನ್ನು “ನರಕ” ಎಂದು ಭಾಷಾಂತರಿಸಲಾಗಿದೆ.
ನಿಮಗೆ ನೆನಪಿದೆಯೊ?
• ಯೆಹೋವನನ್ನು ‘ಜೀವಿತರ’ ದೇವರು ಎಂದು ಏಕೆ ವರ್ಣಿಸಲಾಗಿದೆ?
• ಷೀಯೋಲ್ನಲ್ಲಿ ಇರುವವರು ಯಾವ ಸ್ಥಿತಿಯಲ್ಲಿದ್ದಾರೆ?
• ಗಿಹೆನದಲ್ಲಿ ಇರುವವರಿಗೆ ಏನು ಸಂಭವಿಸುವುದು?
• ಒಂದು “ಶ್ರೇಷ್ಠಪುನರುತ್ಥಾನ”ದಿಂದ ಕೆಲವರು ಹೇಗೆ ಪ್ರಯೋಜನ ಪಡೆಯುವರು?
[ಪುಟ 15ರಲ್ಲಿರುವ ಚಿತ್ರ]
ಅಬ್ರಹಾಮನಂತೆಯೇ, ಯಾರು ಷೀಯೋಲ್ಗೆ ಹೋಗುತ್ತಾರೋ ಅವರು ಪುನರುತ್ಥಾನವನ್ನು ಹೊಂದುವವರ ಸಾಲಿನಲ್ಲಿದ್ದಾರೆ
[ಪುಟ 16ರಲ್ಲಿರುವ ಚಿತ್ರಗಳು]
ಆದಾಮ, ಹವ್ವ, ಕಾಯಿನ ಮತ್ತು ಇಸ್ಕರಿಯೋತ ಯೂದರು ಏಕೆ ಗಿಹೆನಕ್ಕೆ ಹೋದರು?