ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w13 3/15 ಪು. 30-32
  • ಯಾವತ್ತೂ ನಂಬಿಕೆ ಕಳಕೊಳ್ಳಬೇಡಿ!

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯಾವತ್ತೂ ನಂಬಿಕೆ ಕಳಕೊಳ್ಳಬೇಡಿ!
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2013
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಏನೇ ಆಗಲಿ ಸತ್ಯದಲ್ಲಿ ಪಟ್ಟುಹಿಡಿಯಿರಿ
  • ಹೊಸ ವ್ಯಕ್ತಿತ್ವಕ್ಕಿರುವ ಮೌಲ್ಯ
  • ಸತ್ಯದ ಬೀಜ ಅನೇಕ ವರ್ಷಗಳ ನಂತರ ಫಲಕೊಟ್ಟಿತು!
  • ‘ನಿನಗೆ ಕಿವಿಗೊಡುವವರು’ ಸದಾಕಾಲ ಬದುಕುವರು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2019
  • ಯೆಹೋವನ ಮಾರ್ಗದಲ್ಲಿ ಮುಂದುವರಿಯುವುದೇ ನಮಗೆ ಬಲ ಹಾಗೂ ಸಂತೋಷವನ್ನು ನೀಡುತ್ತದೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
  • “ದುಡಿಯಿರಿ; ಕೆಟ್ಟುಹೋಗುವ ಆಹಾರಕ್ಕಾಗಿ ದುಡಿಯಬೇಡಿರಿ”
    ಕಾವಲಿನಬುರುಜು—1996
  • ಪ್ರೀತಿ ದ್ವೇಷವನ್ನು ಗೆಲ್ಲುತ್ತೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2021
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2013
w13 3/15 ಪು. 30-32

ಯಾವತ್ತೂ ನಂಬಿಕೆ ಕಳಕೊಳ್ಳಬೇಡಿ!

ನೀವು ಅನೇಕ ವರ್ಷಗಳಿಂದ ಯೆಹೋವನ ಸಾಕ್ಷಿಯಾಗಿದ್ದು ನಿಮ್ಮ ಸಂಗಾತಿಯೂ ಸತ್ಯ ಸ್ವೀಕರಿಸಬೇಕೆಂದು ಹಾತೊರೆಯುತ್ತಿದ್ದೀರಾ?

ಒಳ್ಳೇ ಪ್ರಗತಿಮಾಡುತ್ತಾರೆಂದು ನೀವು ನಿರೀಕ್ಷೆಯಿಟ್ಟುಕೊಂಡಿದ್ದ ಬೈಬಲ್‌ ವಿದ್ಯಾರ್ಥಿ ಬೈಬಲ್‌ ಕಲಿಯುವುದನ್ನು ನಿಲ್ಲಿಸಿಬಿಟ್ಟದ್ದರಿಂದ ನಿರಾಶರಾಗಿದ್ದೀರಾ?

ಹಾಗಿದ್ದಲ್ಲಿ ಬ್ರಿಟನ್‌ ದೇಶದ ಕೆಲವು ಅನುಭವಗಳು ನಿಮ್ಮಲ್ಲಿ ಆಶಾಭಾವ ಮೂಡಿಸುತ್ತವೆ. ಮಾತ್ರವಲ್ಲ ಸತ್ಯ ಸ್ವೀಕರಿಸಲು ಮನಸ್ಸು ಮಾಡಿರದವರಿಗೆ ನೆರವಾಗಲು ಸಾಂಕೇತಿಕವಾಗಿ ‘ನಿಮ್ಮ ಆಹಾರವನ್ನು ನೀರಿನ ಮೇಲೆ ಚೆಲ್ಲುವುದು’ ಹೇಗೆಂದು ತಿಳಿಸಿಕೊಡುತ್ತವೆ.—ಪ್ರಸಂ. 11:1.

ಏನೇ ಆಗಲಿ ಸತ್ಯದಲ್ಲಿ ಪಟ್ಟುಹಿಡಿಯಿರಿ

ಪಟ್ಟುಹಿಡಿಯುವುದು ತುಂಬ ಪ್ರಾಮುಖ್ಯ. ಏನೇ ಆದರೂ ಸತ್ಯಕ್ಕೆ ಅಂಟಿಕೊಂಡಿರಬೇಕು. ಯೆಹೋವನಿಂದ ದೂರಹೋಗಬಾರದು. (ಧರ್ಮೋ. 10:20) ಅದನ್ನೇ ಸಹೋದರಿ ಕೆಯಾರ್ಕೀನಾ ಮಾಡಿದರು. 1970ರಲ್ಲಿ ಅವರು ಬೈಬಲ್‌ ಅಧ್ಯಯನ ಮಾಡತೊಡಗಿದಾಗ ಪತಿ ಕೀರ್ಯಾಕಾಸ್‌ಗೆ ಸಿಟ್ಟು ನೆತ್ತಿಗೇರಿತು. ಹೆಂಡತಿಯ ಅಧ್ಯಯನ ನಿಲ್ಲಿಸಲು ಪ್ರಯತ್ನಿಸಿದರು. ಸಾಕ್ಷಿಗಳನ್ನು ಮನೆಯೊಳಗೆ ಬಿಡುತ್ತಿರಲಿಲ್ಲ. ಯಾವುದೇ ಸಾಹಿತ್ಯ ಕಣ್ಣಿಗೆ ಬಿದ್ದರೂ ಅಲ್ಲಿಂದ ನಾಪತ್ತೆ.

ಸಹೋದರಿ ಕೆಯಾರ್ಕೀನಾ ಕೂಟಗಳಿಗೆ ಹಾಜರಾಗಲು ಆರಂಭಿಸಿದಾಗಲಂತೂ ಪತಿ ಕೋಪೋದ್ರಿಕ್ತರಾದರು. ಒಂದು ದಿನ ರಾಜ್ಯ ಸಭಾಗೃಹಕ್ಕೆ ಬಂದು ವಾಗ್ವಾದಕ್ಕಿಳಿದರು. ಅವರಿಗೆ ಇಂಗ್ಲಿಷ್‌ಗಿಂತ ಗ್ರೀಕ್‌ ಭಾಷೆ ಚೆನ್ನಾಗಿ ಬರುತ್ತಿತ್ತು. ಆದ್ದರಿಂದ ಸಭೆಯಲ್ಲಿನ ಒಬ್ಬ ಸಹೋದರಿ ನೆರೆಯ ಗ್ರೀಕ್‌ ಸಭೆಯ ಸಹೋದರನೊಬ್ಬನಿಗೆ ಫೋನಾಯಿಸಿ ಸಹಾಯಕ್ಕೆ ಬರುವಂತೆ ಕೇಳಿಕೊಂಡರು. ಆ ಸಹೋದರ ಬಂದು ಪ್ರೀತಿ, ಸಮಾಧಾನದಿಂದ ಮಾತಾಡಿದಾಗ ಕೀರ್ಯಾಕಾಸ್‌ ತಣ್ಣಗಾದರು. ಅಷ್ಟೇ ಅಲ್ಲ ನಂತರ ಪತ್ನಿಯೊಂದಿಗೆ ಅಧ್ಯಯನಕ್ಕೂ ಕುಳಿತರು. ಆದರೆ ಸಮಯಸಂದಂತೆ ಅಧ್ಯಯನ ನಿಲ್ಲಿಸಿದರು.

ಮೂರು ವರ್ಷಗಳ ಕಾಲ ಕೆಯಾರ್ಕೀನಾ ಗಂಡನ ವಿರೋಧ ತಾಳಿಕೊಂಡರು. ‘ದೀಕ್ಷಾಸ್ನಾನ ಪಡಕೊಂಡರೆ ನಿನ್ನನ್ನು ಬಿಟ್ಟುಹೋಗ್ತೇನೆ’ ಎಂದು ಪತಿ ಹೆದರಿಸಿದರು. ದೀಕ್ಷಾಸ್ನಾನದ ದಿನ ಬಂದೇಬಿಟ್ಟಿತು. ‘ಅವರು ನನ್ನನ್ನು ಬಿಟ್ಟುಹೋಗದಂತೆ ಮಾಡು’ ಎಂದು ಕೆಯಾರ್ಕೀನಾ ದೇವರಲ್ಲಿ ಮನಃಪೂರ್ವಕವಾಗಿ ಪ್ರಾರ್ಥಿಸಿದಳು. ಸಾಕ್ಷಿಗಳು ಕೆಯಾರ್ಕೀನಾಳನ್ನು ಸಮ್ಮೇಳನಕ್ಕೆ ಕರಕೊಂಡು ಹೋಗಲಿಕ್ಕಾಗಿ ಮನೆಗೆ ಬಂದಾಗ ಪತಿ ಏನಂದನು ಗೊತ್ತೆ? “ನೀವು ಮುಂದೆ ಹೋಗಿ. ನಾವಿಬ್ಬರು ಕಾರಲ್ಲಿ ನಿಮ್ಮನ್ನು ಹಿಂಬಾಲಿಸುತ್ತೇವೆ.” ಹೇಳಿದಂತೆ ಪತಿ ಸಮ್ಮೇಳನಕ್ಕೆ ಬಂದರು. ಬೆಳಗ್ಗಿನ ಕಾರ್ಯಕ್ರಮಕ್ಕೆ ಹಾಜರಿದ್ದು ಪತ್ನಿ ದೀಕ್ಷಾಸ್ನಾನ ಪಡೆಯುವುದನ್ನು ಕಣ್ಣಾರೆ ಕಂಡರು!

ಅನಂತರ ಪತಿ ವಿರೋಧ ಕಡಿಮೆಮಾಡಿದರು. ಮೆಲ್ಲಮೆಲ್ಲನೆ ಜೀವನದಲ್ಲಿ ದೊಡ್ಡ ಬದಲಾವಣೆಗಳನ್ನೂ ಮಾಡಿಕೊಂಡರು. ಸಾಕ್ಷಿಗಳನ್ನು ಭೇಟಿಯಾಗಿ 40 ವರ್ಷಗಳಾದ ಮೇಲೆ ಕೆಯಾರ್ಕೀನಾ ತನ್ನ ಪತಿ ದೀಕ್ಷಾಸ್ನಾನ ಪಡೆಯುವುದನ್ನು ಕಣ್ತುಂಬಿಕೊಂಡರು! ಈ ಹೆಜ್ಜೆ ತಕ್ಕೊಳ್ಳಲು ಕೀರ್ಯಾಕಾಸ್‌ಗೆ ಯಾವುದು ನೆರವಾಯಿತು? “ಕೆಯಾರ್ಕೀನಾಳ ದೃಢತೆಯನ್ನು ತುಂಬ ಮೆಚ್ಚಿದೆ” ಅನ್ನುತ್ತಾರೆ ಅವರು. ಪತ್ನಿ ಏನನ್ನುತ್ತಾರೆ? “ನನ್ನ ಪತಿ ವಿರೋಧಿಸಿದರೂ ನಾನು ನನ್ನ ದೇವರನ್ನು ಆರಾಧಿಸುವುದನ್ನು ನಿಲ್ಲಿಸಲು ಸಿದ್ಧಳಿರಲಿಲ್ಲ. ಯೆಹೋವನಲ್ಲಿ ಪ್ರಾರ್ಥಿಸುತ್ತಾ ಇದ್ದೆ. ಒಂದಲ್ಲ ಒಂದು ದಿನ ಅವರು ಸತ್ಯಕ್ಕೆ ಬರುತ್ತಾರೆಂಬ ನಂಬಿಕೆ ಇತ್ತು. ಯಾವತ್ತೂ ಆ ನಂಬಿಕೆ ಕಳಕೊಳ್ಳಲಿಲ್ಲ.”

ಹೊಸ ವ್ಯಕ್ತಿತ್ವಕ್ಕಿರುವ ಮೌಲ್ಯ

ಸತ್ಯದಲ್ಲಿಲ್ಲದ ಸಂಗಾತಿಗೆ ಸಹಾಯಮಾಡುವ ಇನ್ನೊಂದು ವಿಧ ಸಾಕ್ಷಿ ಸಂಗಾತಿಯು ಕ್ರೈಸ್ತ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವುದೇ ಆಗಿದೆ. ಅಪೊಸ್ತಲ ಪೇತ್ರ ಕ್ರೈಸ್ತ ಪತ್ನಿಯರಿಗೆ ಏನಂದನು ಗಮನಿಸಿ: “ನೀವು ನಿಮ್ಮನಿಮ್ಮ ಗಂಡಂದಿರಿಗೆ ಅಧೀನರಾಗಿರಿ; ಹೀಗೆ ಮಾಡುವಲ್ಲಿ, ಅವರಲ್ಲಿ ಯಾರಾದರೂ ವಾಕ್ಯಕ್ಕೆ ವಿಧೇಯರಾಗದಿರುವಲ್ಲಿ ಅವರು ತಮ್ಮ ಹೆಂಡತಿಯರ ನಡತೆ[ಯ] . . . ಮೂಲಕ ವಾಕ್ಯೋಪದೇಶವಿಲ್ಲದೆ ಜಯಿಸಲ್ಪಟ್ಟಾರು.” (1 ಪೇತ್ರ 3:1, 2) ಈ ಸಲಹೆ ಅನ್ವಯಿಸಿಕೊಂಡವರಲ್ಲಿ ಒಬ್ಬರು ಸಹೋದರಿ ಕ್ರಿಸ್ಟೀನ್‌. ಆಕೆ ಸತ್ಯಕ್ಕೆ ಬಂದು ಅನೇಕ ವರ್ಷಗಳ ನಂತರ ಪತಿ ಸತ್ಯಕ್ಕೆ ಬಂದರು. 20ಕ್ಕೂ ಹೆಚ್ಚು ವರ್ಷಗಳ ಹಿಂದೆ ಈ ಸಹೋದರಿ ಸಾಕ್ಷಿಯಾದರು. ಆದರೆ ಪತಿ ಜಾನ್‌ ದೇವರನ್ನು ನಂಬುತ್ತಿರಲಿಲ್ಲ. ಧರ್ಮದ ಬಗ್ಗೆ ಜಾನ್‌ಗೆ ಆಸಕ್ತಿಯೇ ಇಲ್ಲದಿದ್ದರೂ ಕ್ರಿಸ್ಟೀನ್‌ ಹೊಸ ಧರ್ಮಕ್ಕೆ ಎಷ್ಟು ಪ್ರಾಮುಖ್ಯತೆ ಕೊಡುತ್ತಿದ್ದಾಳೆಂಬುದು ಅವನಿಗೆ ಕಾಣುತ್ತಿತ್ತು. ಜಾನ್‌ ಹೀಗನ್ನುತ್ತಾರೆ: “ಅವಳು ಸೇರಿದ ಧರ್ಮದಲ್ಲಿ ಸಂತೋಷ ಕಂಡುಕೊಂಡಿದ್ದಾಳೆ ಎಂಬುದು ನನಗೆ ತೋರಿಬಂತು. ಮೊದಲಿಗಿಂತ ಹೆಚ್ಚು ಮನೋಸ್ಥೈರ್ಯ ಬೆಳೆಸಿಕೊಂಡಿದ್ದಳು. ಅವಳ ಈ ಗುಣ ನಾನು ಅನೇಕ ಬಾರಿ ಕಷ್ಟದಲ್ಲಿದ್ದಾಗ ಸಹಾಯಮಾಡಿತು.”

ಸಾಕ್ಷಿಯಾಗುವಂತೆ ಜಾನ್‌ರನ್ನು ಕ್ರಿಸ್ಟೀನ್‌ ಬಲವಂತಮಾಡಲಿಲ್ಲ. ಇದನ್ನು ಒಪ್ಪಿಕೊಳ್ಳುತ್ತಾ ಜಾನ್‌ ಹೇಳುವುದು: “ಸತ್ಯವನ್ನು ನಾನಾಗಿಯೇ ಅರ್ಥಮಾಡಿಕೊಳ್ಳುವಂತೆ ಬಿಡೋದೇ ಒಳ್ಳೇದೆಂದು ಕ್ರಿಸ್ಟೀನ್‌ ಅರಿತುಕೊಂಡಳು. ಸಾಕಷ್ಟು ಸಮಯ ತಕ್ಕೊಂಡು ನನ್ನದೇ ವಿಧದಲ್ಲಿ ವಿಷಯಗಳನ್ನು ಅರ್ಥಮಾಡಿಕೊಳ್ಳುವಂತೆ ತಾಳ್ಮೆಯಿಂದ ಅನುವು ಮಾಡಿಕೊಟ್ಟಳು.” ಕಾವಲಿನಬುರುಜು ಹಾಗೂ ಎಚ್ಚರ! ಪತ್ರಿಕೆಗಳಲ್ಲಿ ಪತಿಗೆ ಇಷ್ಟವಾಗುವ ವಿಜ್ಞಾನ ಅಥವಾ ಪ್ರಕೃತಿಯ ಬಗ್ಗೆ ಲೇಖನಗಳು ಬರುವಲ್ಲಿ ಅವರಿಗೆ ತೋರಿಸುತ್ತಾ “ಈ ಲೇಖನ ನಿಮಗೆ ತುಂಬ ಇಷ್ಟವಾಗುತ್ತೆ” ಎಂದು ಹೇಳಿ ಓದಲು ಕೊಡುತ್ತಿದ್ದಳು.

ಸಮಯಾನಂತರ ಕೆಲಸದಿಂದ ನಿವೃತ್ತರಾದ ಜಾನ್‌ ತೋಟಗಾರಿಕೆ ಮಾಡತೊಡಗಿದರು. ಈಗ ಹೆಚ್ಚು ಸಮಯವಿದ್ದದರಿಂದ ಕೆಲವೊಂದು ಪ್ರಾಮುಖ್ಯ ವಿಷಯಗಳ ಕುರಿತು ಯೋಚಿಸಲಾರಂಭಿಸಿದರು. ಅಂದರೆ ‘ಯಾವುದೋ ಘಟನೆಗಳ ಫಲಿತಾಂಶವಾಗಿ ನಾವು ಭೂಮಿಯಲ್ಲಿದ್ದೇವಾ? ಅಥವಾ ಒಂದು ಉದ್ದೇಶಕ್ಕಾಗಿ ಸೃಷ್ಟಿಸಲಾಯಿತಾ?’ ಎಂಬ ಪ್ರಶ್ನೆಗಳು ಅವರ ಮನಃಪಟಲದಲ್ಲಿ ಸುಳಿಯತೊಡಗಿದವು. ಒಮ್ಮೆ ಒಬ್ಬ ಸಹೋದರನು ಅವರೊಂದಿಗೆ ಹಾಗೇ ಮಾತಾಡುತ್ತಾ “ನೀವು ಬೈಬಲ್‌ ಅಧ್ಯಯನ ಮಾಡಬಹುದಲ್ಲಾ?” ಎಂದು ಕೇಳಿದರು. “ಆ ಸಮಯದಷ್ಟಕ್ಕೆ ನಾನು ದೇವರನ್ನು ನಂಬಲು ಶುರುಮಾಡಿದ್ದರಿಂದ ಅಧ್ಯಯನಕ್ಕೆ ಒಪ್ಪಿಕೊಂಡೆ” ಎಂದೆನ್ನುತ್ತಾರೆ ಜಾನ್‌.

ಭರವಸೆ ಕಳೆದುಕೊಳ್ಳದೆ ಇದ್ದದ್ದಕ್ಕೆ ಸಹೋದರಿ ಕ್ರಿಸ್ಟೀನ್‌ಗೆ ಎಂಥ ಪ್ರತಿಫಲ! ಸತ್ಯವನ್ನು ಸ್ವೀಕರಿಸುವಂತೆ ಪತಿಗೆ ಸಹಾಯಮಾಡು ಎಂದು ಒಂದೆರಡು ಸಲವಲ್ಲ, 20 ವರ್ಷ ಕಾಲ ಪ್ರಾರ್ಥಿಸಿದ್ದಾರೆ ಕ್ರಿಸ್ಟೀನ್‌. ಈಗ ಪತಿ ದೀಕ್ಷಾಸ್ನಾನ ಪಡೆದುಕೊಂಡಿದ್ದಾರೆ. ಇಬ್ಬರೂ ಒಟ್ಟಾಗಿ ಹುರುಪಿನಿಂದ ಸೇವೆ ಮಾಡುತ್ತಿದ್ದಾರೆ. ಜಾನ್‌ ಹೀಗನ್ನುತ್ತಾರೆ: “ಮುಖ್ಯವಾಗಿ ಎರಡು ವಿಷಯಗಳು ನನ್ನ ಮನಸ್ಸನ್ನು ಗೆದ್ದವು. ಒಂದು ಯೆಹೋವನ ಸಾಕ್ಷಿಗಳು ತೋರುವ ಪ್ರೀತಿ ಹಾಗೂ ಸ್ನೇಹಪರತೆ. ಇನ್ನೊಂದು, ಕ್ರಿಸ್ಟೀನ್‌ಳ ಗುಣಗಳು. ಆಕೆ ನಿಷ್ಠಾವಂತ, ಭರವಸಾರ್ಹ, ಸ್ವತ್ಯಾಗ ಮನೋಭಾವದ ಸಂಗಾತಿ.” ಹೌದು, ಕ್ರಿಸ್ಟೀನ್‌ 1 ಪೇತ್ರ 3:1, 2ರಲ್ಲಿರುವ ಸಲಹೆಯನ್ನು ಜೀವನದಲ್ಲಿ ಅನ್ವಯಿಸಿಕೊಂಡರು. ಅದು ಒಳ್ಳೇ ಫಲ ತಂದಿತು!

ಸತ್ಯದ ಬೀಜ ಅನೇಕ ವರ್ಷಗಳ ನಂತರ ಫಲಕೊಟ್ಟಿತು!

ಬೈಬಲ್‌ ಅಧ್ಯಯನ ತಕ್ಕೊಳ್ಳುತ್ತಿದ್ದವರು ಕೆಲವೊಮ್ಮೆ ಯಾವುದೋ ಕಾರಣದಿಂದಾಗಿ ಅಧ್ಯಯನ ನಿಲ್ಲಿಸುವುದುಂಟು. ಅವರ ಕುರಿತೇನು? “ಮುಂಜಾನೆ ಬೀಜಬಿತ್ತು, ಸಂಜೆಯ ತನಕ ಕೈದೆಗೆಯಬೇಡ” ಎಂದಿದ್ದಾನೆ ಸೊಲೊಮೋನ. ಏಕೆಂದರೆ “ಇದು ಸಫಲವೋ, ಅದು ಸಫಲವೋ, ಒಂದು ವೇಳೆ ಎರಡೂ ಚೆನ್ನಾಗುವವೋ ನಿನಗೆ ತಿಳಿಯದು.” (ಪ್ರಸಂ. 11:6) ಕೆಲವೊಮ್ಮೆ ಸತ್ಯದ ಬೀಜ ಒಬ್ಬ ವ್ಯಕ್ತಿಯ ಹೃದಯದಲ್ಲಿ ಬೇಗನೆ ಬೆಳೆಯಲಿಕ್ಕಿಲ್ಲ. ಆದರೂ ಯೆಹೋವ ದೇವರೊಂದಿಗೆ ಸುಸಂಬಂಧ ಬೆಳೆಸಿಕೊಳ್ಳುವುದರ ಪ್ರಮುಖತೆ ಸಮಯಾನಂತರ ಅವರಿಗೆ ಮನವರಿಕೆಯಾಗಬಹುದು. (ಯಾಕೋ. 4:8) ಯಾರಿಗೆ ಗೊತ್ತು, ಒಂದು ದಿನ ನಿಮಗೆ ಆಶ್ಚರ್ಯ ಕಾದಿರಬಹುದು!

ಈ ಅನುಭವ ಗಮನಿಸಿ. ಆ್ಯಲಿಸ್‌ ಎಂಬ ಸ್ತ್ರೀ ಭಾರತದಿಂದ ಇಂಗ್ಲೆಂಡ್‌ಗೆ ಹೋದರು. ಅಲ್ಲಿ 1974ರಲ್ಲಿ ಅವರು ಬೈಬಲ್‌ ಅಧ್ಯಯನ ಮಾಡತೊಡಗಿದರು. ಹಿಂದಿ ಮಾತಾಡುತ್ತಿದ್ದ ಅವರಿಗೆ ಇಂಗ್ಲಿಷನ್ನು ಸರಾಗವಾಗಿ ಮಾತಾಡಲು ಕಲಿಯಬೇಕೆಂಬ ಆಸೆಯಿತ್ತು. ಕೆಲವು ವರ್ಷಗಳ ವರೆಗೆ ಅಧ್ಯಯನ ಮುಂದುವರಿಸಿದರು. ಇಂಗ್ಲಿಷ್‌ ಸಭೆಯಲ್ಲಿ ಕೆಲವು ಕೂಟಗಳಿಗೂ ಹಾಜರಾಗಿದ್ದರು. ತಾನು ಕಲಿಯುತ್ತಿರುವುದು ಸತ್ಯ ಎಂದು ಆಕೆಗೆ ಮನವರಿಕೆಯಾಗಿತ್ತಾದರೂ ಅದರ ಪ್ರಮುಖತೆಯನ್ನು ಅರಿತಿರಲಿಲ್ಲ. ಅದೂ ಅಲ್ಲದೆ ಆ್ಯಲಿಸ್‌ಗೆ ಹಣ ಮಾಡುವುದು, ಪಾರ್ಟಿಗೆ ಹೋಗುವುದೆಂದರೆ ಇಷ್ಟ. ಕೊನೆಗೊಂದು ದಿನ ಅಧ್ಯಯನ ನಿಲ್ಲಿಸಿಬಿಟ್ಟರು.

ಆ್ಯಲಿಸ್‌ರೊಂದಿಗೆ ಅಧ್ಯಯನ ಮಾಡುತ್ತಿದ್ದ ಸಹೋದರಿ ಹೆಸರು ಸ್ಟೆಲ. ಅಧ್ಯಯನ ನಿಲ್ಲಿಸಿ 30 ವರ್ಷಗಳ ನಂತರ ಅವರಿಗೆ ಆ್ಯಲಿಸ್‌ರಿಂದ ಒಂದು ಪತ್ರ ಬಂತು. ಅದರಲ್ಲಿ ಹೀಗೆ ಬರೆದಿದ್ದು: “ನಾನು ಹೇಳುವ ವಿಷಯ ಕೇಳಿ ನೀವು ರೋಮಾಂಚಿತರಾಗುತ್ತೀರ. 1974ರಲ್ಲಿ ನೀವು ಯಾರೊಂದಿಗೆ ಬೈಬಲ್‌ ಅಧ್ಯಯನ ಮಾಡುತ್ತಿದ್ದಿರೋ ಆ ವ್ಯಕ್ತಿ ಇತ್ತೀಚೆಗೆ ನಡೆದ ಅಧಿವೇಶನದಲ್ಲಿ ದೀಕ್ಷಾಸ್ನಾನ ಪಡೆದರು. ಅದು ನಾನೇ! ನೀವು ನನ್ನ ಜೀವನದಲ್ಲಿ ತುಂಬ ಪ್ರಮುಖ ಪಾತ್ರ ವಹಿಸಿದ್ದೀರಿ. ಸತ್ಯದ ಬೀಜ ನನ್ನಲ್ಲಿ ಬಿತ್ತಿದಿರಿ. ಆಗ ನಾನು ಸಮರ್ಪಣೆ ಮಾಡಿಕೊಳ್ಳಲು ಸಿದ್ಧಳಿರಲಿಲ್ಲವಾದರೂ ಆ ಸತ್ಯದ ಬೀಜ ನನ್ನ ಹೃದಮನದಲ್ಲಿ ಉಳಿದಿತ್ತು.”

ಆ್ಯಲಿಸ್‌ ಪುನಃ ಸತ್ಯದಲ್ಲಿ ಆಸಕ್ತಿ ತೋರುವಂತೆ ಯಾವುದು ಮಾಡಿತು? ‘1997ರಲ್ಲಿ ಪತಿ ತೀರಿಹೋದ ನಂತರ ನಾನು ಖಿನ್ನಳಾದೆ’ ಎನ್ನುತ್ತಾರೆ ಆ್ಯಲಿಸ್‌. ಅವರು ದೇವರಲ್ಲಿ ಪ್ರಾರ್ಥಿಸಿದರು. ಪ್ರಾರ್ಥಿಸಿ ಹತ್ತೇ ನಿಮಿಷದಲ್ಲಿ ಇಬ್ಬರು ಸಾಕ್ಷಿಗಳು ಆಕೆಯ ಮನೆಗೆ ಬಂದರು. ಪಂಜಾಬಿ ಮಾತನಾಡುತ್ತಿದ್ದ ಅವರು, ಸತ್ತ ಪ್ರಿಯ ಜನರಿಗಾಗಿ ನಿರೀಕ್ಷೆ ಏನು? ಎಂಬ ಕರಪತ್ರ ಕೊಟ್ಟುಹೋದರು. ಇದು ತನ್ನ ಪ್ರಾರ್ಥನೆಗೆ ಉತ್ತರ ಅಂದುಕೊಂಡು ಆ್ಯಲಿಸ್‌ ಸಾಕ್ಷಿಗಳನ್ನು ಭೇಟಿಯಾಗಲು ನಿರ್ಧರಿಸಿದರು. ಅವರನ್ನು ಹುಡುಕುವುದಾದರೂ ಹೇಗೆ? ಸಹೋದರಿ ಸ್ಟೆಲ ಆ್ಯಲಿಸ್‌ಗೆ ಈ ಮುಂಚೆ ಪಂಜಾಬಿ ಸಭೆಯ ವಿಳಾಸ ಕೊಟ್ಟಿದ್ದರು. ಅದನ್ನು ಬರೆದಿದ್ದ ಹಳೆಯ ಡೈರಿ ಸಿಕ್ಕಿತು. ಆ್ಯಲಿಸ್‌ ರಾಜ್ಯ ಸಭಾಗೃಹಕ್ಕೆ ಹೋದರು. ಅಲ್ಲಿನ ಸಹೋದರ ಸಹೋದರಿಯರು ಅವರನ್ನು ಆದರದಿಂದ ಬರಮಾಡಿಕೊಂಡರು. “ಅವರು ತೋರಿಸಿದ ಪ್ರೀತಿ ನಾನು ಅಲ್ಲಿಂದ ಬಂದ ಮೇಲೂ ನನ್ನ ಮನದಾಳದಲ್ಲಿ ಉಳಿಯಿತು. ಖಿನ್ನತೆಯಿಂದ ಬೇಗನೆ ಹೊರಬರಲು ಅದು ಸಹಾಯಮಾಡಿತು” ಎನ್ನುತ್ತಾರೆ ಆ್ಯಲಿಸ್‌.

ಅನಂತರ ಅವರು ತಪ್ಪದೆ ಕೂಟಕ್ಕೆ ಹಾಜರಾಗತೊಡಗಿದರು. ಬೈಬಲ್‌ ಅಧ್ಯಯನ ಪುನಃ ಆರಂಭಿಸಿದರು. ಪಂಜಾಬಿ ಭಾಷೆಯನ್ನು ಚೆನ್ನಾಗಿ ಬರೆಯಲು ಮಾತಾಡಲು ಕಲಿತರು. 2003ರಲ್ಲಿ ದೀಕ್ಷಾಸ್ನಾನ ಪಡೆದರು. ಅವರು ಸಹೋದರಿ ಸ್ಟೆಲಗೆ ಬರೆದ ಪತ್ರದ ಕೊನೆಯಲ್ಲಿ ಹೀಗೆ ಹೇಳಿದ್ದರು: “29 ವರ್ಷಗಳ ಹಿಂದೆ ಸತ್ಯದ ಬೀಜವನ್ನು ನನ್ನಲ್ಲಿ ಬಿತ್ತಿದ್ದಕ್ಕಾಗಿ, ನನಗೆ ಉತ್ತಮ ಮಾದರಿಯಾಗಿದ್ದಕ್ಕಾಗಿ ಹೃದಯದಾಳದ ಕೃತಜ್ಞತೆಗಳು.”

“29 ವರ್ಷಗಳ ಹಿಂದೆ ಸತ್ಯದ ಬೀಜವನ್ನು ನನ್ನಲ್ಲಿ ಬಿತ್ತಿದ್ದಕ್ಕಾಗಿ, ನನಗೆ ಉತ್ತಮ ಮಾದರಿಯಾಗಿದ್ದಕ್ಕಾಗಿ ಹೃದಯದಾಳದ ಕೃತಜ್ಞತೆಗಳು.”—ಆ್ಯಲಿಸ್‌

ಈ ಅನುಭವಗಳಿಂದ ನಾವೇನು ಕಲಿಯುತ್ತೇವೆ? ಒಬ್ಬ ವ್ಯಕ್ತಿ ಸತ್ಯ ಸ್ವೀಕರಿಸಲು ಕೆಲವೊಮ್ಮೆ ನಾವು ನೆನಸಿದ್ದಕ್ಕಿಂತ ಹೆಚ್ಚು ಸಮಯ ಹಿಡಿಯಬಹುದು. ಆದರೂ ಆ ವ್ಯಕ್ತಿಯಲ್ಲಿ ಆಧ್ಯಾತ್ಮಿಕ ಹಸಿವಿದ್ದರೆ, ಯಥಾರ್ಥನೂ ದೀನನೂ ಆಗಿದ್ದರೆ ಸತ್ಯದ ಬೀಜ ಹೃದಯದಲ್ಲಿ ಬೆಳೆಯುವಂತೆ ಯೆಹೋವನು ಮಾಡುವನು. ಯೇಸು ಒಂದು ದೃಷ್ಟಾಂತದಲ್ಲಿ ಏನಂದನು ನೆನಪಿದೆಯಾ? “[ಬಿತ್ತಿದವನಿಗೆ] ತಿಳಿಯದ ರೀತಿಯಲ್ಲಿ ಬೀಜವು ಮೊಳೆತು ಎತ್ತರವಾಗಿ ಬೆಳೆಯುತ್ತದೆ. ನೆಲವು ತಾನೇ ಕ್ರಮೇಣವಾಗಿ ಮೊದಲು ಗರಿಕೆ, ಬಳಿಕ ತೆನೆಯನ್ನು ಮತ್ತು ಕೊನೆಗೆ ತೆನೆಯಲ್ಲಿ ತುಂಬ ಕಾಳನ್ನು ಫಲಿಸುತ್ತದೆ.” (ಮಾರ್ಕ 4:27, 28) ಈ ಬೆಳವಣಿಗೆ ನಿಧಾನವಾಗಿ ತನ್ನಿಂದ “ತಾನೇ” ಆಗುತ್ತದೆ. ಇದರರ್ಥ ಈ ಬೆಳವಣಿಗೆ ಹೇಗಾಗುತ್ತಿದೆಯೆಂದು ನಮಗೆ ತಿಳಿಯುವುದಿಲ್ಲ. ಆದ್ದರಿಂದ ಹೆಚ್ಚೆಚ್ಚು ಬೀಜ ಬಿತ್ತಿರಿ. ಹೆಚ್ಚೆಚ್ಚು ಬೆಳೆ ಕೊಯ್ಯಬಲ್ಲಿರಿ.

ಇದೆಲ್ಲದರ ಮಧ್ಯೆ ಪ್ರಾರ್ಥನೆ ಮಾಡುವುದನ್ನು ಮರೆಯದಿರಿ. ಸಹೋದರಿ ಕೆಯಾರ್ಕೀನಾ ಮತ್ತು ಕ್ರಿಸ್ಟೀನ್‌ ಯೆಹೋವನಲ್ಲಿ ಪ್ರಾರ್ಥಿಸುತ್ತಾ ಇದ್ದರು. ಹಾಗೆಯೇ ನಾವು ‘ಪಟ್ಟುಹಿಡಿದು ಪ್ರಾರ್ಥಿಸಿದರೆ,’ ನಂಬಿಕೆ ಕಳೆದುಕೊಳ್ಳದಿದ್ದರೆ ನೀರಿನ ಮೇಲೆ ಚೆಲ್ಲಿದ “ಆಹಾರ” “ಬಹು ದಿನದ” ನಂತರ ನಮಗೆ ಪುನಃ ಸಿಕ್ಕಬಹುದು.—ರೋಮ. 12:12; ಪ್ರಸಂ. 11:1.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ