ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w15 10/15 ಪು. 30-32
  • “ಮೂಢನು ಯಾವ ಮಾತನ್ನಾದರೂ ನಂಬುವನು”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ಮೂಢನು ಯಾವ ಮಾತನ್ನಾದರೂ ನಂಬುವನು”
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2015
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಬಂದ ಈ-ಮೇಲ್‌ಗಳನ್ನೆಲ್ಲಾ ಬೇರೆಯವರಿಗೆ ಕಳುಹಿಸುತ್ತಾ ಇರುತ್ತೀರಾ?
  • ಇತರರನ್ನು ಗೌರವಿಸಿ
  • ಇಂಟರ್‌ನೆಟ್‌ ಅಂಗೈಯಲ್ಲಿ ಪ್ರಪಂಚ ಆದರೆ ಎಚ್ಚರ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
  • ಇಂಟರ್‌ನೆಟ್‌ನ ಉಪಯೋಗ—ಅಪಾಯಗಳ ಕುರಿತು ಎಚ್ಚರಿಕೆ!
    1999 ನಮ್ಮ ರಾಜ್ಯದ ಸೇವೆ
  • ‘ವ್ಯರ್ಥ ಕಾರ್ಯಗಳನ್ನು’ ಬೆನ್ನಟ್ಟದಿರಿ
    2002 ನಮ್ಮ ರಾಜ್ಯದ ಸೇವೆ
  • ಸತ್ಯ ಏನೆಂದು ನಿಮಗೆ ಗೊತ್ತಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2015
w15 10/15 ಪು. 30-32
ಒಬ್ಬ ವ್ಯಕ್ತಿ ತನ್ನ ಕಂಪ್ಯೂಟರ್‌ ಪರದೆಯನ್ನು ನೋಡುತ್ತಾ ತುಂಬ ಆಳವಾಗಿ ಯೋಚಿಸುತ್ತಿದ್ದಾನೆ

“ಮೂಢನು ಯಾವ ಮಾತನ್ನಾದರೂ ನಂಬುವನು”

“ವಾರ್ತಾಪತ್ರಿಕೆಯನ್ನು ಓದದ ಮನುಷ್ಯ ಮೂರ್ಖ; ಆದರೆ ಅದರಲ್ಲಿ ಓದಿದ್ದನ್ನೆಲ್ಲಾ ನಂಬುವ ಮನುಷ್ಯ ಅವನಿಗಿಂತಲೂ ದೊಡ್ಡ ಮೂರ್ಖ.” —ಆಗಸ್ಟ್‌ ಫಾನ್‌ ಶ್ಲಾಟ್ಸಾ. ಜರ್ಮನಿಯ ಇತಿಹಾಸಗಾರ ಮತ್ತು ಬರಹಗಾರ (1735-1809).

ಜನರು 200ಕ್ಕಿಂತಲೂ ಹೆಚ್ಚು ವರ್ಷಗಳ ಹಿಂದೆ ವಾರ್ತಾಪತ್ರಿಕೆಯಲ್ಲಿ ಬರುವುದನ್ನೆಲ್ಲಾ ನಂಬುತ್ತಿರಲಿಲ್ಲ. ಇಂದು ಇಂಟರ್‌ನೆಟ್‌ನಲ್ಲಿ ನಾವು ನೋಡುವ, ಓದುವ ಎಲ್ಲಾ ವಿಷಯಗಳನ್ನು ನಂಬಲಾಗುವುದಿಲ್ಲ. ಇಂಟರ್‌ನೆಟ್‌ನಲ್ಲಿ ಮಾಹಿತಿಗಳಿಗೇನು ಬರ ಇಲ್ಲ. ಆಧುನಿಕ ತಂತ್ರಜ್ಞಾನದಿಂದಾಗಿ ನಮಗೆ ಅದು ಸುಲಭವಾಗಿ ಕೈಗೆ ಸಿಗುತ್ತದೆ. ಬಹಳಷ್ಟು ಮಾಹಿತಿ ನಿಜವಾದದ್ದು, ಉಪಯೋಗಕ್ಕೆ ಬರುವಂಥದ್ದು ಆಗಿರುತ್ತದೆ. ಆದರೆ ಇನ್ನಷ್ಟು ಮಾಹಿತಿ ತಪ್ಪಾದದ್ದು, ಪ್ರಯೋಜನಕ್ಕೆ ಬಾರದ್ದು, ಆಪಾಯಕಾರಿಯೂ ಆಗಿರುತ್ತದೆ. ಆದ್ದರಿಂದ ನಾವು ಯಾವುದನ್ನು ಓದಬೇಕು, ಓದಬಾರದು ಎನ್ನುವುದರ ಬಗ್ಗೆ ಜಾಗ್ರತೆಯಿಂದ ಆಯ್ಕೆ ಮಾಡಬೇಕು. ಇಂಟರ್‌ನೆಟ್ಟನ್ನು ಹೊಸದಾಗಿ ಬಳಸಲು ಆರಂಭಿಸಿರುವವರು, ಒಂದು ವಾರ್ತಾ ವರದಿ ಇಂಟರ್‌ನೆಟ್‌ನಲ್ಲಿದೆ ಎಂದಮಾತ್ರಕ್ಕೆ ಅಥವಾ ಸ್ನೇಹಿತರೊಬ್ಬರು ಈ-ಮೇಲ್‌ ಮೂಲಕ ಅದನ್ನು ಕಳುಹಿಸಿದರು ಎಂದಮಾತ್ರಕ್ಕೆ ಅದು ನಿಜ ಎಂದು ನಂಬಬಹುದು. ವಿಚಿತ್ರವಾಗಿ ಅನಿಸುವ ವಿಷಯವನ್ನೂ ನಂಬಿಬಿಡಬಹುದು. ಆದ್ದರಿಂದ ಬೈಬಲ್‌ ಹೀಗೆ ಎಚ್ಚರಿಸುತ್ತದೆ: “ಮೂಢನು ಯಾವ ಮಾತನ್ನಾದರೂ ನಂಬುವನು; ಜಾಣನು ತನ್ನ ನಡತೆಯನ್ನು ಚೆನ್ನಾಗಿ ಗಮನಿಸುವನು.”—ಜ್ಞಾನೋ. 14:15.

ಮೂಢರಾಗಿರುವುದು ಅಥವಾ ಕೇಳಿದ್ದನ್ನೆಲ್ಲಾ ನಂಬುವ ಬದಲು ನಾವು ಜಾಣರಾಗಿರಬೇಕು. ಆಗ ನಾವು ಹುಷಾರಾಗಿದ್ದು, ಯಾವುದು ನಿಜವೆಂದು ನಮಗೆ ತಿಳಿದಿದೆಯೊ ಅದನ್ನು ಮಾತ್ರ ನಂಬುತ್ತೇವೆ. ಯಾರಿಗೂ ನಮ್ಮ ತಲೆ ಮೇಲೆ ಗೂಬೆ ಕೂರಿಸಲಿಕ್ಕೆ ಆಗುವುದಿಲ್ಲ. ಎಷ್ಟೇ ಜನಪ್ರಿಯವಾದ ವಿಷಯವಾಗಿರಲಿ ಅದು ತಪ್ಪು ಎಂದು ಗೊತ್ತಾದ ಮೇಲೆ ಅದನ್ನು ನಾವು ನಂಬುವುದಿಲ್ಲ. ಹಾಗಾದರೆ ಜಾಣರಾಗಿರಲು ನಿಮಗೆ ಯಾವುದು ಸಹಾಯಮಾಡುತ್ತದೆ? ಮೊದಲು ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ: ‘ಈ ವಿಷಯ ನಂಬಬಹುದಾದ ಅಧಿಕೃತ ವೆಬ್‌ಸೈಟಿನಿಂದ ಬಂದಿದೆಯಾ? ಅಥವಾ ಯಾರು ಬೇಕಾದರೂ ತಮ್ಮ ಅಭಿಪ್ರಾಯವನ್ನು ಬರೆಯುವ ವೆಬ್‌ಸೈಟ್‌ನಿಂದ ಬಂದಿದೆಯಾ? ನಿಮಗೆ ತಿಳಿಯದೆ ಇರುವ ಮೂಲದಿಂದ ಬಂದಿದೆಯಾ? ನಂಬಬಹುದಾದ ವೆಬ್‌ಸೈಟ್‌ ಈ ವಿಷಯವನ್ನು ತಪ್ಪು ಎಂದು ಈಗಾಗಲೇ ತೋರಿಸಿದೆಯಾ?’a (ಪಾದಟಿಪ್ಪಣಿ ನೋಡಿ.) ನಂತರ, ‘ಸರಿ ಮತ್ತು ತಪ್ಪಿನ ಭೇದವನ್ನು ತಿಳಿಯುವ’ ನಿಮ್ಮ ಸಾಮರ್ಥ್ಯವನ್ನು ಬಳಸಿ. (ಇಬ್ರಿ. 5:14) ಒಂದು ವಿಷಯ ನಂಬಲು ಕಷ್ಟ ಎಂದು ಅನಿಸಿದರೆ ಅದರಲ್ಲಿ ಏನೋ ಹುಳುಕು ಇದೆ ಎಂದರ್ಥ. ಜೊತೆಗೆ ನೀವು ಬೇರೆಯವರ ಬಗ್ಗೆ ನಕಾರಾತ್ಮಕ ವಿಷಯಗಳನ್ನು ಓದಿದಾಗ ಈ ವಿಷಯಗಳು ಹಬ್ಬುವುದರಿಂದ ಯಾರಿಗೆ ಪ್ರಯೋಜನವಾಗುತ್ತದೆ, ಯಾಕೆ ಹಬ್ಬಿಸುತ್ತಿದ್ದಾರೆಂಬ ಕಾರಣದ ಬಗ್ಗೆ ಯೋಚಿಸಿ.

ಬಂದ ಈ-ಮೇಲ್‌ಗಳನ್ನೆಲ್ಲಾ ಬೇರೆಯವರಿಗೆ ಕಳುಹಿಸುತ್ತಾ ಇರುತ್ತೀರಾ?

ತಮಗೆ ಬಂದ ಸುದ್ದಿಯನ್ನು ಕೆಲವರು ತಮ್ಮ ಕಾಂಟಾಕ್ಟ್ಸ್‌ನಲ್ಲಿರುವ ಎಲ್ಲರಿಗೂ ಕಳುಹಿಸುತ್ತಾರೆ. ‘ಈ ವಿಷಯ ನಿಜನಾ? ಇದನ್ನು ಬೇರೆಯವರಿಗೆ ಕಳುಹಿಸಿದ ಮೇಲೆ ಏನಾಗಬಹುದು?’ ಎಂದು ಅರೆಕ್ಷಣವೂ ಯೋಚಿಸುವುದಿಲ್ಲ. ಜನರು ತಮ್ಮನ್ನು ಗಮನಿಸಬೇಕು, ಮೆಚ್ಚಬೇಕು ಮತ್ತು ಎಲ್ಲರಿಗೆ ತನ್ನಿಂದಲೇ ಮೊದಲು ಸುದ್ದಿ ಸಿಗಬೇಕು ಎಂಬ ಆಸೆ ಇರುವುದರಿಂದ ಅವರು ಹೀಗೆ ಮಾಡಬಹುದು. (2 ಸಮು. 13:28-33) ಆದರೆ ಒಂದು ಸುದ್ದಿಯನ್ನು ಹಬ್ಬಿಸಿದರೆ ಏನೆಲ್ಲ ಹಾನಿ ಆಗಬಹುದೆಂದು ಜಾಣನಾದ ವ್ಯಕ್ತಿ ಯೋಚಿಸುತ್ತಾನೆ. ಉದಾಹರಣೆಗೆ, ಒಬ್ಬ ವ್ಯಕ್ತಿಯ ಅಥವಾ ಒಂದು ಸಂಘಟನೆಯ ಮರ್ಯಾದೆ ಮಣ್ಣುಪಾಲಾಗಬಹುದು.

ಮೇಲ್‌ ಅನ್ನು ಕಳುಹಿಸುವ ವ್ಯಕ್ತಿ ತಾನು ಕಳುಹಿಸುತ್ತಿರುವ ಮಾಹಿತಿ ನಿಜನಾ ಎಂದು ಪರೀಕ್ಷಿಸಲು ಹೋಗುವುದಿಲ್ಲ. ಯಾಕೆಂದರೆ ಅದಕ್ಕೆ ಸಮಯ ಮತ್ತು ಪ್ರಯತ್ನ ವ್ಯಯಿಸಬೇಕಾಗುತ್ತದೆ. ಯಾರಿಗೆ ಮೇಲ್‌ ಕಳುಹಿಸುತ್ತಿದ್ದಾನೊ ಅವರು ಬೇಕಾದರೆ ಅದನ್ನು ಪರೀಕ್ಷಿಸಲಿ ಎಂದು ಅವನು ನೆನಸಬಹುದು. ಆದರೆ ಬೇರೆಯವರ ಸಮಯವೂ ಅಮೂಲ್ಯ ತಾನೇ? (ಎಫೆ. 5:15, 16) ಹಾಗಾಗಿ ನಮಗೆ ನಿಶ್ಚಯವಾಗಿ ಗೊತ್ತಿಲ್ಲದ ವಿಷಯವಿರುವ ಮೇಲ್‌ ಅನ್ನು ಇನ್ನೊಬ್ಬರಿಗೆ ಕಳುಹಿಸುವ ಬದಲು ಅದನ್ನು ಅಳಿಸಿಹಾಕುವುದೇ ಒಳ್ಳೇದು.

ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ: ‘ನನಗೆ ಬಂದ ಈ-ಮೇಲ್‌ಗಳನ್ನು ಯಾವಾಗಲೂ ಬೇರೆಯವರಿಗೆ ಕಳುಹಿಸುತ್ತಾ ಇರುತ್ತೇನಾ? ತಪ್ಪಾದ ಅಥವಾ ಸುಳ್ಳು ಮಾಹಿತಿಯಿರುವ ಮೇಲ್‌ ಅನ್ನು ನನ್ನ ಕಾಂಟಾಕ್ಟ್ಸ್‌ನಲ್ಲಿ ಇರುವವರಿಗೆ ಕಳುಹಿಸಿದ್ದಕ್ಕೆ ನಾನು ಯಾವತ್ತಾದರೂ ಕ್ಷಮೆಕೇಳಬೇಕಾಗಿ ಬಂದಿದೆಯಾ? “ನಿಮಗೆ ಬಂದ ಮೇಲ್‌ಗಳನ್ನು ನನಗೆ ಕಳುಹಿಸಬೇಡಿ” ಎಂದು ಯಾರಾದರೂ ನನಗೆ ಹೇಳಿದ್ದಾರಾ?’ ನಿಮ್ಮ ಸ್ನೇಹಿತರು ಈ-ಮೇಲ್‌ ಬಳಸುತ್ತಿರುವಲ್ಲಿ ಅವರು ಇಂಟರ್‌ನೆಟ್‌ ಬಳಸುತ್ತಾರೆಂದಾಯಿತು. ಹಾಗಾಗಿ ಅವರಿಗೆ ಆಸಕ್ತಿಯೆನಿಸುವ ವಿಷಯಗಳಿಗಾಗಿ ಅವರೇ ಇಂಟರ್‌ನೆಟ್‌ನಲ್ಲಿ ಹುಡುಕಬಹುದು. ನಿಮ್ಮ ಸಹಾಯದ ಅಗತ್ಯ ಅವರಿಗಿಲ್ಲ. ನಗೆಬರಿಸುವ ಕಥೆಗಳ, ವಿಡಿಯೋಗಳ, ಚಿತ್ರಗಳ ರಾಶಿರಾಶಿ ಈ-ಮೇಲ್‌ಗಳೂ ಅವರಿಗೆ ಬೇಕಾಗಿಲ್ಲ. ಬೈಬಲ್‌ ಆಧರಿತ ಭಾಷಣಗಳ ರೆಕಾರ್ಡಿಂಗ್‌ಗಳನ್ನು ಅಥವಾ ಸವಿವರ ಟಿಪ್ಪಣಿಗಳನ್ನು ಕಳುಹಿಸುವುದು ಸಹ ಅವಿವೇಕತನ.b (ಪಾದಟಿಪ್ಪಣಿ ನೋಡಿ.) ನೆನಪಿಡಿ, ನೀವು ಸಂಶೋಧನೆ ಮಾಡಿ ಸಂಗ್ರಹಿಸಿದ ಮಾಹಿತಿಯನ್ನು, ಬೈಬಲ್‌ ವಚನಗಳನ್ನು, ಕೂಟಗಳಿಗೆ ಉತ್ತರಗಳನ್ನು ತಯಾರಿಸಿ ಈ-ಮೇಲ್‌ನಲ್ಲಿ ಕಳುಹಿಸಿ ಕೊಡುವುದಕ್ಕಿಂತ ಆ ವ್ಯಕ್ತಿ ಸ್ವತಃ ಇವನ್ನೆಲ್ಲಾ ಮಾಡಿದರೆ ಹೆಚ್ಚು ಪ್ರಯೋಜನವಾಗುತ್ತದೆ.

‘ಈ ಕುತೂಹಲಕಾರಿ ಈ-ಮೇಲನ್ನು ನನ್ನ ಸ್ನೇಹಿತರಿಗೆ ಕಳುಹಿಸಿದರೆ ಅವರ ಪ್ರತಿಕ್ರಿಯೆ ಹೇಗಿರಬಹುದು?’ ಎಂದು ಒಬ್ಬ ವ್ಯಕ್ತಿ ತನ್ನ ಕಂಪ್ಯೂಟರ್‌ ಮುಂದೆ ಕುಳಿತು ಯೋಚಿಸುತ್ತಿದ್ದಾನೆ

ನನಗೆ ಬಂದಿರುವ ಈ-ಮೇಲ್‌ ಅನ್ನು . . . ಬೇರೆಯವರಿಗೆ ಕಳುಹಿಸಬೇಕಾ?

ಯೆಹೋವನ ಸಂಘಟನೆಯ ಬಗ್ಗೆ ಇಲ್ಲಸಲ್ಲದ ವಿಷಯಗಳನ್ನು ನೀವು ಇಂಟರ್‌ನೆಟ್‌ನಲ್ಲಿ ನೋಡಿದರೆ ಏನು ಮಾಡುತ್ತೀರಾ? ತಕ್ಷಣ ಅವನ್ನು ತ್ಯಜಿಸಿ. ಅವನ್ನು ನಂಬಬೇಡಿ. ನೀವು ಓದಿದ್ದನ್ನು ಇನ್ನೊಬ್ಬರಿಗೆ ಹೇಳಬೇಡಿ ಅಥವಾ ಅದರ ಬಗ್ಗೆ ಅವರ ಅಭಿಪ್ರಾಯ ಕೇಳಬೇಡಿ. ಹೀಗೆ ಮಾಡಿದರೆ ಹಾನಿಕಾರಕ ಮಾಹಿತಿ ಇನ್ನಷ್ಟು ಹಬ್ಬುತ್ತದೆ ಅಷ್ಟೇ. ಇಂಟರ್‌ನೆಟ್‌ನಲ್ಲಿ ನೋಡಿದ ಯಾವುದೊ ಒಂದು ವಿಷಯ ನಿಮ್ಮ ಮನಸ್ಸಲ್ಲಿ ಕೊರೆಯುತ್ತಾ ಇರುವುದಾದರೆ ವಿವೇಕಕ್ಕಾಗಿ ಯೆಹೋವನಲ್ಲಿ ಬೇಡಿಕೊಳ್ಳಿ. ಪ್ರೌಢ ಸಹೋದರರ ಜೊತೆ ಮಾತಾಡಿ. (ಯಾಕೋ. 1:5, 6; ಯೂದ 22, 23) ಜನರು ನಮ್ಮ ಬಗ್ಗೆ ಸುಳ್ಳುಗಳನ್ನು ಹೇಳಿದಾಗ ನಮಗೇನು ಆಶ್ಚರ್ಯ ಆಗುವುದಿಲ್ಲ. ಜನರು ಯೇಸುವನ್ನೇ ಬಿಡಲಿಲ್ಲ. ಅವನು ತನ್ನ ಶಿಷ್ಯರಿಗೆ ಜನರು ನಿಮ್ಮನ್ನು ಹಿಂಸಿಸುತ್ತಾರೆ, ನಿಮ್ಮ “ವಿರುದ್ಧ ಪ್ರತಿಯೊಂದು ರೀತಿಯ ಕೆಟ್ಟ ವಿಷಯವನ್ನು ಸುಳ್ಳಾಗಿ ಹೇಳು”ತ್ತಾರೆಂದು ಎಚ್ಚರಿಸಿದನು. (ಮತ್ತಾ. 5:11; 11:19; ಯೋಹಾ. 10:19-21) ಆದ್ದರಿಂದ ನೀವು ವಿವೇಕಿಗಳಾಗಿದ್ದು ಜಾಗ್ರತೆಯಿಂದ ಯೋಚಿಸಿದರೆ, ಯಾರಾದರೂ ಸುಳ್ಳುಗಳನ್ನು ಹೇಳುವಾಗ ಮತ್ತು ನಿಮ್ಮನ್ನು ಮೋಸಮಾಡಲು ಪ್ರಯತ್ನಿಸುವಾಗ ತಕ್ಷಣ ಕಂಡುಹಿಡಿಯುತ್ತೀರಿ.—ಜ್ಞಾನೋ. 2:10-16.

ಇತರರನ್ನು ಗೌರವಿಸಿ

ನಮ್ಮ ಸಹೋದರರ ಕುರಿತ ಯಾವುದೇ ಸುದ್ದಿ ಅಥವಾ ನಾವು ಕೇಳಿದ ಅನುಭವಗಳನ್ನು ಹಂಚಿಕೊಳ್ಳುವ ಬಗ್ಗೆಯೂ ನಾವು ಜಾಗ್ರತೆವಹಿಸಬೇಕು. ಅದು ನಿಜವಾದ ವಿಷಯವಾಗಿದ್ದರೂ ಅದನ್ನು ಹಂಚಿಕೊಳ್ಳುವುದು ಕೆಲವೊಮ್ಮೆ ಸರಿ ಆಗಿರುವುದಿಲ್ಲ ಇಲ್ಲವೇ ಆ ವ್ಯಕ್ತಿ ಮೇಲೆ ಪ್ರೀತಿ ತೋರಿಸಿದಂತಾಗುವುದಿಲ್ಲ. (ಮತ್ತಾ. 7:12) ಉದಾಹರಣೆಗೆ, ಯಾರಾದರೊಬ್ಬರ ಬಗ್ಗೆ ನಿಮಗೆ ನಕಾರಾತ್ಮಕ ವಿಷಯಗಳ ಈ-ಮೇಲ್‌ ಬಂದಿರುವಲ್ಲಿ ಅದನ್ನು ಇನ್ನೊಬ್ಬರಿಗೆ ಕಳುಹಿಸುವುದು ಪ್ರೋತ್ಸಾಹಕರವೂ ಅಲ್ಲ, ಪ್ರೀತಿಪರವೂ ಅಲ್ಲ. (2 ಥೆಸ. 3:11; 1 ತಿಮೊ. 5:13) ಗೋಪ್ಯವಾಗಿ ಇಡಬೇಕಾದಂಥ ಕೆಲವು ವಿಷಯಗಳಿರುತ್ತವೆ. ಇಂಥ ಮಾಹಿತಿಯನ್ನು ಒಬ್ಬ ವ್ಯಕ್ತಿ ಸ್ವಲ್ಪ ಸಮಯದ ಬಳಿಕ ಅಥವಾ ನಿರ್ದಿಷ್ಟ ರೀತಿಯಲ್ಲಿ ತಿಳಿಸಲು ಬಯಸಬಹುದು. ಅದನ್ನು ಯಾವಾಗ ಮತ್ತು ಹೇಗೆ ತಿಳಿಯಪಡಿಸಬೇಕೆಂದು ನಿರ್ಣಯಿಸುವ ಹಕ್ಕು ಅವನಿಗಿದೆ. ಆ ಹಕ್ಕನ್ನು ನಾವು ಗೌರವಿಸಬೇಕು. ಸರಿಯಾದ ಸಮಯಕ್ಕಿಂತ ಮುಂಚೆ ನಾವು ಆ ವಿಷಯವನ್ನು ಇತರರಿಗೆ ಹೇಳಿಬಿಟ್ಟರೆ ನಮ್ಮಿಂದ ತುಂಬ ಹಾನಿಯಾಗುವ ಸಾಧ್ಯತೆಯಿದೆ.

ಈಗಿನ ಕಾಲದಲ್ಲಿ ಹೇಗೆಂದರೆ ಒಂದು ಸುದ್ದಿ ನಿಜ ಇರಲಿ ಸುಳ್ಳು ಇರಲಿ, ಅದರಿಂದ ಪ್ರಯೋಜನ ಇರಲಿ ಇಲ್ಲದಿರಲಿ, ಅಪಾಯಕಾರಿ ಆಗಿರಲಿ ಇಲ್ಲದಿರಲಿ, ಅದು ಕಾಡ್ಗಿಚ್ಚಿನಂತೆ ಹರಡುತ್ತದೆ. ಒಬ್ಬರಿಗೆ ಒಂದು ಮೆಸೆಜ್‌ ಕಳುಹಿಸಿದರೆ ಸಾಕು ಆ ವ್ಯಕ್ತಿ ಅದನ್ನು ಒಂದೇ ಕ್ಷಣದಲ್ಲಿ ಲೋಕದ ಬೇರೆಬೇರೆ ಕಡೆಗಳಲ್ಲಿರುವ ಜನರಿಗೆ ಕಳುಹಿಸಬಹುದು. ಹಾಗಾಗಿ ‘ನನಗೆ ಬಂದಿರುವ ಈ ಮಾಹಿತಿಯನ್ನು ಈ ಕ್ಷಣವೇ, ನನಗೆ ಗೊತ್ತಿರುವ ಎಲ್ಲರಿಗೂ ಕಳುಹಿಸಬೇಕು’ ಎಂಬ ಮನಸ್ಸಿನ ತವಕವನ್ನು ನಿಗ್ರಹಿಸಿ. “ಪ್ರೀತಿ ಎಲ್ಲವನ್ನೂ ನಂಬುತ್ತದೆ,” ಯಾವುದರ ಬಗ್ಗೆಯೂ ಸಂಶಯಪಡುವುದಿಲ್ಲ ನಿಜ. ಹಾಗಿದ್ದರೂ ನಮ್ಮ ಕಿವಿಗೆ ಬೀಳುವ ಎಲ್ಲ ಹೊಸ, ರೋಮಾಂಚಕ ವಿಷಯಗಳನ್ನು ಮೂರ್ಖರಂತೆ ನಂಬಬಾರದು. (1 ಕೊರಿಂ. 13:7) ನಾವು ಯೆಹೋವನ ಸಂಘಟನೆಯನ್ನು ಮತ್ತು ನಮ್ಮ ಸಹೋದರರನ್ನು ಪ್ರೀತಿಸುತ್ತೇವೆ. ಆದ್ದರಿಂದ ಅವರ ಬಗ್ಗೆ ಹೇಳಲಾಗುವ ಸುಳ್ಳುಗಳನ್ನು, ಹಗೆಭರಿತ ವಿಷಯಗಳನ್ನು ನಾವು ನಂಬುವುದಿಲ್ಲ. ಇಂಥ ಸುಳ್ಳುಗಳನ್ನು ಶುರುಮಾಡುವವರು ಮತ್ತು ಹಬ್ಬಿಸುವವರು ‘ಸುಳ್ಳಿಗೆ ತಂದೆಯಾದ’ ಪಿಶಾಚನಾದ ಸೈತಾನನನ್ನು ಮೆಚ್ಚಿಸುತ್ತಿದ್ದಾರೆ. (ಯೋಹಾ. 8:44) ಹಾಗಾಗಿ ನಾವು ಜಾಣರಾಗಿದ್ದು, ಪ್ರತಿದಿನ ಪ್ರವಾಹದಂತೆ ನಮಗೆ ಲಭ್ಯವಿರುವ ಮಾಹಿತಿಯನ್ನು ಹೇಗೆ ಬಳಸುತ್ತೇವೆಂದು ಜಾಗ್ರತೆಯಿಂದ ಯೋಚಿಸೋಣ. “ಮೂರ್ಖರಿಗೆ ಮೂರ್ಖತನವೇ ಸ್ವಾಸ್ತ್ಯ; ಜಾಣರಿಗೆ ಜ್ಞಾನವೇ ಮುಕುಟ” ಎನ್ನುತ್ತದೆ ಬೈಬಲ್‌.—ಜ್ಞಾನೋ. 14:18.

a ಹಿಂದೊಮ್ಮೆ ಒಂದು ಸುದ್ದಿ ತಪ್ಪೆಂದು ರುಜುವಾದರೂ ಅದರಲ್ಲಿ ಸತ್ಯಾಂಶ ಇದೆ ಎಂದು ತೋರುವಂತೆ ಮಾಡುವ ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ ಆ ಸುದ್ದಿ ಮತ್ತೆಮತ್ತೆ ಬರುತ್ತಾ ಇರಬಹುದು.

b ಏಪ್ರಿಲ್‌ 2010 ನಮ್ಮ ರಾಜ್ಯ ಸೇವೆ “ಪ್ರಶ್ನಾ ಚೌಕ” ನೋಡಿ.

ಒಂದು ಈ-ಮೇಲ್‌ ಕಳುಹಿಸುವ ಮುಂಚೆ ಈ ಪ್ರಶ್ನೆಗಳನ್ನು ಕೇಳಿಕೊಳ್ಳಿ:

ಒಬ್ಬ ವ್ಯಕ್ತಿಯ ಕೈಯಲ್ಲಿ ಮೊಬೈಲ್‌ ಫೋನ್‌ ಇದೆ
  • ಈ ಮಾಹಿತಿ ನಿಜ ಅಂತ ನನಗೆ ಖಂಡಿತವಾಗಿ ಗೊತ್ತಾ?

  • ಇದು ಗೋಪ್ಯವಾಗಿಡಬೇಕಾದ ಮಾಹಿತಿನಾ?

  • ಈ ಮಾಹಿತಿಯಿಂದ ಇನ್ನೊಬ್ಬರ ಮರ್ಯಾದೆ ಮಣ್ಣುಪಾಲಾಗಬಹುದಾ?

  • “ನಿಮಗೆ ಬಂದ ಈ-ಮೇಲ್‌ಗಳನ್ನು ನನಗೆ ಕಳುಹಿಸಬೇಡಿ” ಎಂದು ಯಾರಾದರೂ ನನಗೆ ಹೇಳಿದ್ದಾರಾ?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ