‘ವ್ಯರ್ಥ ಕಾರ್ಯಗಳನ್ನು’ ಬೆನ್ನಟ್ಟದಿರಿ
1 ಇಂದು ಸಂವಾದಮಾಡುವ ಜನಪ್ರಿಯ ಮಾಧ್ಯಮಗಳಲ್ಲಿ ಒಂದು, ಇ-ಮೇಲ್ ಆಗಿದೆ. ಈ ಮಾಧ್ಯಮದ ಮೂಲಕ ವೈಯಕ್ತಿಕ ಅನುಭವಗಳನ್ನು ಹಾಗೂ ವಿಚಾರಗಳನ್ನು ಕುಟುಂಬ ಹಾಗೂ ಸ್ನೇಹಿತರ ನಡುವೆ ಹಂಚಿಕೊಳ್ಳುವುದು ಸೂಕ್ತವಾಗಿರುವುದಾದರೂ, ಇ-ಮೇಲ್ನ ಅನಿರ್ಬಂಧಿತ ಉಪಯೋಗದೊಂದಿಗೆ ಯಾವ ‘ವ್ಯರ್ಥ ಕಾರ್ಯಗಳನ್ನು’ ಜೊತೆಗೂಡಿಸಸಾಧ್ಯವಿದೆ?—ಜ್ಞಾನೋ. 12:11.
2 ಇ-ಮೇಲ್ ವಿಷಯದಲ್ಲಿ ಮುನ್ನೆಚ್ಚರಿಕೆಗಳು: ಯಾವುದನ್ನು ಕೆಲವರು ಇ-ಮೇಲ್ನ ಮೂಲಕ ಸಿಗುವ ಹೊಸ ಮಾಹಿತಿ ಎಂದು ಪರಿಗಣಿಸುತ್ತಾರೋ ಅದನ್ನು ಅವರು ಪಡೆದುಕೊಳ್ಳುವಾಗ, ಯೆಹೋವನ ಸಂಸ್ಥೆಯೊಂದಿಗೆ ತಾವು ಉತ್ತಮ ರೀತಿಯಲ್ಲಿ ಸಂಪರ್ಕದಲ್ಲಿದ್ದೇವೆ ಎಂದು ಅವರಿಗನಿಸುತ್ತದೆ. ಇವುಗಳಲ್ಲಿ ಅನುಭವಗಳು, ಬೆತೆಲ್ನಲ್ಲಿ ನಡೆಯುವ ಘಟನೆಗಳ ಕುರಿತಾದ ಟಿಪ್ಪಣಿಗಳು, ವಿಪತ್ತುಗಳು ಅಥವಾ ಹಿಂಸೆಯ ಕುರಿತಾದ ವರದಿಗಳು, ಮತ್ತು ರಾಜ್ಯ ಶುಶ್ರೂಷಾ ಶಾಲೆಗಳಲ್ಲಿ ಪ್ರಕಟಿಸಲ್ಪಟ್ಟ ಗೋಪ್ಯ ಮಾಹಿತಿಯು ಸಹ ಒಳಗೂಡಿರಬಹುದು. ತಮ್ಮ ಸ್ನೇಹಿತರಿಗೆ ಮಾಹಿತಿಯನ್ನು ತಿಳಿಯಪಡಿಸುವುದರಲ್ಲಿ ತಾವೇ ಮೊದಲಿಗರಾಗಿರಬೇಕು ಎಂಬ ಆಸೆಯಿಂದ ಇತರರು ಅಂಥ ಸಂದೇಶಗಳನ್ನು ಕಳುಹಿಸಲು ವಿಪರೀತ ಆತುರರಾಗಿರುವಂತೆ ತೋರುತ್ತದೆ.
3 ಕೆಲವೊಮ್ಮೆ, ಮಾಹಿತಿ ಹಾಗೂ ಅನುಭವಗಳು ವಿಕೃತಗೊಳಿಸಲ್ಪಟ್ಟಿವೆ ಅಥವಾ ಅತಿಶಯಿಸಿ ತಿಳಿಸಲ್ಪಟ್ಟಿವೆ. ಇಲ್ಲವೆ ಇವುಗಳನ್ನು ಹೆಚ್ಚು ಭಾವೋದ್ರೇಕಕಾರಿಯಾಗಿ ಮಾಡಲು ಪ್ರಯತ್ನಿಸಿದ್ದರಿಂದ, ಕೆಲವರು ಸುಳ್ಳು ಅಭಿಪ್ರಾಯವನ್ನು ನೀಡಿದ್ದಾರೆ. ಇಂಥ ವಿಷಯಗಳನ್ನು ಎಲ್ಲರಿಗೆ ತಿಳಿಸಲು ಆತುರಪಡುವವರ ಬಳಿ ಅನೇಕವೇಳೆ ಎಲ್ಲ ನಿಜಾಂಶಗಳು ಇರುವುದಿಲ್ಲ. (ಜ್ಞಾನೋ. 29:20) ಕೆಲವು ಸಂದರ್ಭಗಳಲ್ಲಿ, ಒಂದು ಕಥೆಯು ನಂಬಲಸಾಧ್ಯವಾಗಿರುವಾಗಲೂ, ಅದನ್ನು ಒಂದು ಸ್ವಾರಸ್ಯಕರ ಸಂಗತಿಯೋಪಾದಿ ಇತರರಿಗೆ ದಾಟಿಸಲಾಗುತ್ತದೆ. ಅಂಥ ಅನಿಷ್ಕೃಷ್ಟವಾದ ಅಥವಾ ತಪ್ಪು ದಾರಿಗೆ ನಡೆಸುವ ವರದಿಗಳು “ಅಜ್ಜೀಕಥೆ”ಗಳಿಗೆ ಸಮಾನವಾಗಿದ್ದು, ಇವು ನಿಜವಾದ ದೈವಿಕ ಭಕ್ತಿಯನ್ನು ಉತ್ತೇಜಿಸುವುದಿಲ್ಲ.—1 ತಿಮೊ. 4:6, 7.
4 ಅನಿಷ್ಕೃಷ್ಟವಾದದ್ದೆಂದು ನಿಮಗೆ ಆಮೇಲೆ ತಿಳಿದುಬರುವ ಮಾಹಿತಿಯನ್ನು ನೀವು ಇತರರಿಗೆ ಕಳುಹಿಸುವಲ್ಲಿ, ಇದು ಉಂಟುಮಾಡಸಾಧ್ಯವಿರುವ ದುಃಖ ಅಥವಾ ಗಲಿಬಿಲಿಗೆ ಸ್ವಲ್ಪ ಮಟ್ಟಿಗೆ ನೀವೇ ಜವಾಬ್ದಾರರಾಗಿರುತ್ತೀರಿ. ತನ್ನ ಎಲ್ಲ ಪುತ್ರರೂ ಕೊಲ್ಲಲ್ಪಟ್ಟಿದ್ದಾರೆ ಎಂಬ ವರದಿಯು ದಾವೀದನಿಗೆ ಮುಟ್ಟಿದಾಗ, ಅವನು ಕಡುಸಂಕಟದಿಂದ “ತನ್ನ ಬಟ್ಟೆಗಳನ್ನು ಹರಿದುಕೊಂಡ”ನು. ಆದರೆ, ವಾಸ್ತವದಲ್ಲಿ ಕೊಲ್ಲಲ್ಪಟ್ಟಿದ್ದವನು ಅವನ ಪುತ್ರರಲ್ಲಿ ಒಬ್ಬನು ಮಾತ್ರ. ಅದೇ ಸಾಕಷ್ಟು ಸಂಕಟಕರವಾದ ಸುದ್ದಿಯಾಗಿತ್ತಾದರೂ, ಅತಿಶಯಿಸಿ ಹೇಳಲ್ಪಟ್ಟಿದ್ದ ಸಂಗತಿಯು ದಾವೀದನಿಗೆ ಹೆಚ್ಚಿನ ಬೇಗುದಿಯನ್ನು ಉಂಟುಮಾಡಿತು. (2 ಸಮು. 13:30-33) ನಮ್ಮ ಸಹೋದರರಲ್ಲಿ ಯಾರೊಬ್ಬರನ್ನೂ ತಪ್ಪು ದಾರಿಗೆ ನಡೆಸುವಂಥ ಅಥವಾ ಅವರನ್ನು ನಿರುತ್ತೇಜಿಸುವಂಥ ಯಾವುದೇ ಕೆಲಸವನ್ನು ನಾವು ಖಂಡಿತವಾಗಿಯೂ ಮಾಡಲು ಬಯಸುವುದಿಲ್ಲ.
5 ದೇವರ ನೇಮಿತ ಮಾಧ್ಯಮ: ನಮ್ಮ ಸ್ವರ್ಗೀಯ ತಂದೆಗೆ, ಸಂವಾದಮಾಡುವ ಒಂದು ನೇಮಿತ ಮಾಧ್ಯಮ, ಅಂದರೆ “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಇದೆ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳಿರಿ. ನಂಬಿಗಸ್ತ ಮನೆವಾರ್ತೆಯವರಿಗೆ ಯಾವ ಮಾಹಿತಿಯನ್ನು ಲಭ್ಯಗೊಳಿಸಬೇಕು ಹಾಗೂ ಅದನ್ನು ಅವರಿಗೆ ತಿಳಿಯಪಡಿಸಲು ಯಾವುದು ಸರಿಯಾದ ‘ಹೊತ್ತಾಗಿದೆ’ ಎಂಬುದನ್ನು ನಿರ್ಧರಿಸುವ ಜವಾಬ್ದಾರಿ ಆ ‘ಆಳಿಗೆ’ ಇದೆ. ಈ ಆತ್ಮಿಕ ಆಹಾರವು ದೇವಪ್ರಭುತ್ವಾತ್ಮಕ ಸಂಸ್ಥೆಯ ಮೂಲಕ ಮಾತ್ರವೇ ಲಭ್ಯವಿದೆ. ಆದುದರಿಂದ, ವಿಶ್ವಾಸಾರ್ಹ ಮಾಹಿತಿಗಾಗಿ ನಾವು ಇಂಟರ್ನೆಟ್ ಉಪಯೋಗಿಸುವವರ ನೆಟ್ವರ್ಕ್ನ ಕಡೆಗಲ್ಲ, ಬದಲಾಗಿ ಯಾವಾಗಲೂ ದೇವರ ನೇಮಿತ ಮಾಧ್ಯಮದ ಕಡೆಗೆ ನೋಡಬೇಕು.—ಮತ್ತಾ. 24:45.
6 ಇಂಟರ್ನೆಟ್ ವೆಬ್ ಸೈಟ್ಗಳು: ನಮಗೆ ಒಂದು ಅಧಿಕೃತ ಇಂಟರ್ನೆಟ್ ವೆಬ್ಸೈಟ್ ಇದೆ: www.watchtower.org. ಸಾರ್ವಜನಿಕರಿಗೆ ಮಾಹಿತಿಯನ್ನು ಲಭ್ಯಗೊಳಿಸಲು ಈ ಸೈಟ್ ಸಾಕು. ಆದುದರಿಂದ, ಯಾವುದೇ ಒಬ್ಬ ವ್ಯಕ್ತಿ, ಕಮಿಟಿ, ಅಥವಾ ಸಭೆಯು, ಯೆಹೋವನ ಸಾಕ್ಷಿಗಳ ಕುರಿತು ಒಂದು ವೆಬ್ ಪೇಜನ್ನು ಸಿದ್ಧಪಡಿಸುವ ಅಗತ್ಯವಿಲ್ಲ. ಕೆಲವರು ನಮ್ಮ ಪ್ರಕಾಶನಗಳ ಒಳವಿಷಯಗಳನ್ನು, ಪೂರ್ಣ ರೀತಿಯಲ್ಲಿ ಕೊಡಲ್ಪಟ್ಟ ಎಲ್ಲ ಶಾಸ್ತ್ರವಚನಗಳು ಹಾಗೂ ರೆಫರೆನ್ಸ್ಗಳೊಂದಿಗೆ ಪೋಸ್ಟ್ಮಾಡಿದ್ದಾರೆ ಮತ್ತು ಅಧಿವೇಶನ ವಸ್ತುವಿಷಯದ ಪ್ರತಿಗಳನ್ನು ಒಂದು ಕಾಣಿಕೆಯ ಆಧಾರದ ಮೇಲೆ ಕೊಡುವ ನೀಡಿಕೆಯನ್ನೂ ಮಾಡಿದ್ದಾರೆ. ಇದರಲ್ಲಿ ಲಾಭವು ಒಳಗೂಡಿರಲಿ ಇಲ್ಲದಿರಲಿ, ಇಲೆಕ್ಟ್ರಾನಿಕ್ ಡಾಕ್ಯುಮೆಂಟ್ನಲ್ಲಿ ಯೆಹೋವನ ಸಾಕ್ಷಿಗಳ ಪ್ರಕಾಶನಗಳನ್ನು ಯಥಾವತ್ತಾಗಿ ನಕಲುಮಾಡುವುದು ಮತ್ತು ವಿತರಿಸುವುದು, ಕಾಪಿರೈಟ್ ನಿಯಮಗಳ ಉಲ್ಲಂಘನೆಯಾಗಿದೆ. ಇದನ್ನು ಸಹೋದರರ ಬಳಗಕ್ಕೆ ಮಾಡುವ ಸೇವೆಯೆಂದು ಕೆಲವರು ನೆನಸಬಹುದಾದರೂ, ಇದಕ್ಕೆ ಒಪ್ಪಿಗೆಯಿಲ್ಲ ಹಾಗೂ ಇದನ್ನು ನಿಲ್ಲಿಸಿಬಿಡಬೇಕು.
7 ಇಲೆಕ್ಟ್ರಾನಿಕ್ ಸಂವಾದ ಮಾಧ್ಯಮವನ್ನು ಉಪಯೋಗಿಸುವಾಗ ವಿಮರ್ಶನಶಕ್ತಿಯನ್ನು ಹಾಗೂ ಸ್ವಸ್ಥಚಿತ್ತವನ್ನು ಉಪಯೋಗಿಸುವುದು, ನಮ್ಮ ಮನಸ್ಸುಗಳು ‘ಅಮೂಲ್ಯವಾದ ಎಲ್ಲಾ ಇಷ್ಟ ಸಂಪತ್ತಿನಿಂದ’ ತುಂಬಿವೆ ಎಂಬುದನ್ನು ಖಾತ್ರಿಪಡಿಸುವುದು.—ಜ್ಞಾನೋ. 24:4.