ಕೂಟಗಳಿಂದ ಹೆಚ್ಚು ಪ್ರಯೋಜನ ಪಡೆಯಲು ಮಕ್ಕಳಿಗೆ ನೆರವಾಗಿರಿ
1 ನಿಮ್ಮ ಮಕ್ಕಳು ಕೂಟಗಳಿಗೆ ಹಾಜರಾಗುವಾಗ ಅವರು, ನಿಜವಾಗಿ ಕಿವಿಗೊಡುತ್ತಾರೋ? ಪ್ರತಿಕೂಟದಿಂದ ತಾವು ಕಲಿತ ವಿಷಯಗಳನ್ನು ಆ ಬಳಿಕ ಅವರು ನಿಮಗೆ ತಿಳಿಸಬಲ್ಲರೋ? ನಿಕಟ ಲಕ್ಷ್ಯಕೊಡುವಂತೆ ಮತ್ತು ಜಾಗ್ರತೆಯ ಅವಲೋಕನೆಯಿಂದ ಪಡೆದ ಜ್ಞಾನವನ್ನು ಕಾರ್ಯರೂಪಕ್ಕೆ ಹಾಕುವಂತೆ ನೀವು ಅವರನ್ನು ಉತ್ತೇಜಿಸಿರುವಿರೋ? ಕೂಟಗಳಲ್ಲಿ ನಿಮ್ಮ ಉತ್ತರಗಳ ಮೂಲಕ ಒಂದು ಕ್ರಿಯಾಶೀಲ ಮಾದರಿಯನ್ನು, ಅವರು ನೋಡಬಲ್ಲ, ಕೇಳಬಲ್ಲ ಮತ್ತು ಅನುಕರಿಸಬಲ್ಲ ಮಾದರಿಯನ್ನು, ನೀವು ಇಡುತ್ತೀರೋ? ನಿಮ್ಮ ಮಕ್ಕಳು ನಿಮ್ಮ ನಂಬಿಕೆಯನ್ನು ಅನುಕರಿಸುತ್ತಾರೋ? ದೇವರ ಮೀಸಲಾದ ಸೇವಕರಾಗಿ ಮಕ್ಕಳು ಬೆಳೆಯ ಬೇಕಾದರೆ ಈ ಪ್ರಶ್ನೆಗಳಿಗೆ ಸಕಾರಾತ್ಮಕ ಉತ್ತರಗಳು ಅತ್ಯಾವಶ್ಯಕವು.
ಕೂಟದ ಹಾಜರಿಯ ಮಹತ್ವವನ್ನು ಮನಸ್ಸಿಗೊತ್ತಿರಿ
2 ಮಗುವಿಗೆ ನಿತ್ಯಜೀವವು ಸಿಗಬೇಕಾದರೆ ಅದಕ್ಕೆ ಬೈಬಲಿನ ಉಪದೇಶವು ಅಗತ್ಯಬೇಕು. (ಯೋಹಾ. 17:3) ಆತ್ಮಿಕ ವಿಷಯಗಳನ್ನು ಮಗುವು ಗಣ್ಯಮಾಡಬೇಕಾದರೆ ಕೂಟದ ಹಾಜರಿ ಅತ್ಯಾವಶ್ಯಕ. ಮಕ್ಕಳು ಬೇರೆಯವರಿಗೆ ಉಪದ್ರ ಮಾಡುತ್ತಾರೆಂಬ ಭಯದಿಂದಾಗಿ ಕೆಲವು ಸಾರಿ ಹೆತ್ತವರು ಮಕ್ಕಳನ್ನು ಕೂಟಗಳಿಗೆ ತರುವುದಿಲ್ಲ. ಕೆಲವರು ಶಾಲಾ ಮನೆಗೆಲಸವನ್ನು ಮಾಡುವಂತೆ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಬರುತ್ತಾರೆ. ಸುಜ್ಞ ಹೆತ್ತವರಾದರೋ, ತಮ್ಮ ಮಕ್ಕಳನ್ನು ಕೂಟಕ್ಕೆ ತರುತ್ತಾರೆ.—ಧರ್ಮೋ. 31:12
3 ಬಾಲ್ಯದಿಂದಲೇ ಮಗುವು ಕಲಿಯಬೇಕಾದ ಒಂದು ವಿಷಯವು ಯಾವುದೆಂದರೆ ರಾಜ್ಯ ಸಭಾಗೃಹಕ್ಕೆ ತಾನು ಹೋಗುವುದು ಆಲಿಸಲಿಕ್ಕಾಗಿ ಎಂಬದು. ಆದರೆ ಅವನನ್ನು ಮಗ್ನನಾಗಿಡಲು ತಿನಿಸನ್ನೋ ಆಟಿಕೆಯನ್ನೋ ಕೊಟ್ಟಲ್ಲಿ ಅಥವಾ ತನ್ನ ಆಸನದಲ್ಲಿ ಆಡುವಂತೆ ಬಿಡಲ್ಪಟ್ಟಲ್ಲಿ, ಅವನು ಕಿವಿಗೊಡಲು ಕಲಿತಾನೋ ಮತ್ತು ರಾಜ್ಯ ಸಭಾಕೂಟಗಳಿಗೆ ಹಾಜರಾದ ಕಾರಣವನ್ನು ಗಣ್ಯಮಾಡಾನೋ? ಕೆಲವು ಮಕ್ಕಳು ಇತರರಿಗಿಂತ ಹೆಚ್ಚು ಕಿವಿಗೊಡಶಕ್ತರೆಂಬದು ಗ್ರಾಹ್ಯ. ಆದರೂ, ಮಗು ತುಂಟತನ ತೋರಿಸಿದರೆ ಸುಜ್ಞ ಹೆತ್ತವರು ಅದನ್ನು ಶಿಕ್ಷಿಸುವರು ಮತ್ತು ಕಿವಿಗೊಡುವಂತೆ ಪ್ರೀತಿಯಿಂದ ತರಬೇತು ಮಾಡುವರು; ಮಿಠಾಯಿ ಯಾ ಆಟಿಕೆಯನ್ನು ಲಂಚವಾಗಿ ಕೊಟ್ಟಲ್ಲ, ದೇವರ ವಾಕ್ಯದ ಶಿಸ್ತನ್ನು ಅನ್ವಯಿಸುವ ಮೂಲಕವೇ.—ಜ್ಞಾನೋ. 13:24; ಎಫೆ. 6:4.
ಹೆತ್ತವರಾದ ನಿಮ್ಮ ಮಾದರಿ
4 ಜನವರಿ 15, 1982 ರ ವಾಚ್ಟವರ್ ತನ್ನ 17ನೇ ಪುಟದಲ್ಲಿ, ಈ ಪ್ರಶ್ನೆಗಳನ್ನು ಹಾಕಿತ್ತು: “ಬೈಬಲಧ್ಯಯನ ಕೂಟಗಳನ್ನು ನೀವು ಗಂಭೀರವಾಗಿ ತಕ್ಕೊಳ್ಳುತ್ತೀರಿ ಎಂಬದು ನಿಮ್ಮ ಮಕ್ಕಳಿಗೆ ತಿಳಿದಿದೆಯೋ? ಈ ಕೂಟಗಳು ಕೇವಲ ಹಾಜರಾಗುವುದಕ್ಕೆ ಮಾತ್ರವಲ್ಲ ಅದರಲ್ಲಿ ಭಾಗವಹಿಸುವುದಕ್ಕೂ ಅಂದರೆ ವಿನಂತಿಸಲ್ಪಟ್ಟಾಗ ಉತ್ತರ ಕೊಡುವುದಕ್ಕೂ ಸಾಕಷ್ಟು ಮಹತ್ವದ್ದೆಂದು ನೀವು ಎಣಿಸುತ್ತೀರೆಂದು ಅವರು ಕಾಣುತ್ತಾರೋ?” ಕೂಟಗಳಲ್ಲಿ ನೀವು ಅನಾವಶ್ಯಕವಾಗಿ ಮಾತಾಡುವದನ್ನು ಅಥವಾ ನೀವು ಯಾ ಬೇರೆಯವರು ಅವರೊಂದಿಗೆ ಆಡುವುದನ್ನು ನೋಡಿದರೆ, ಅದು ಅವರ ಮೇಲೆ ಯಾವ ಅಚ್ಚೊತ್ತನ್ನು ಮಾಡುವುದು? ಕೂಟಗಳ ಸಮಯವನ್ನು ಅವರು ಹೇಗೆ ವೀಕ್ಷಿಸುವರು? ಮಕ್ಕಳು ಅನುಕರಣೆ ಮಾಡುವದರಲ್ಲಿ ಬುದ್ಧಿವಂತರಾಗಿರುವುದರಿಂದ ನಿಮ್ಮ ಮಾದರಿ ಅವರ ಮೇಲೆ ಅಪಾರ ಪರಿಣಾಮ ಬೀರ ಬಹುದು.
5 ಕೂಟದಲ್ಲಿ ಉಪಯೋಗಿಸುವ ಪುಸ್ತಕಗಳ ಸ್ವಂತ ಪ್ರತಿಗಳನ್ನು ಚಿಕ್ಕ ಮಕ್ಕಳಿಗೂ ಕೊಡುವುದು ಸಹಾಯಕಾರಿಯೆಂದು ಕೆಲವು ಹೆತ್ತವರು ಕಂಡಿದ್ದಾರೆ. ಪ್ರಾಯಶಃ ಕುಟುಂಬ ಅಭ್ಯಾಸದ ವೇಳೆ ಅವರು ತಮ್ಮ ಮಕ್ಕಳಿಗೆ ತಕ್ಕದಾದ ಉತ್ತರವನ್ನು ತಯಾರಿಸಲು ಕಲಿಸಬಹುದು. ಅಲ್ಲದೆ, ಕೂಟಗಳಲ್ಲಿ ಕಲಿತ ವಿಷಯಗಳನ್ನು ಪುನರಾವರ್ತಿಸುವ ಮೂಲಕ ಯಾ ಅವರಿಗಿರುವ ಪ್ರಶ್ನೆಗಳನ್ನು ಉತ್ತರಿಸಲು ಸಮಯ ತಕ್ಕೊಳ್ಳುವ ಮೂಲಕ ಹೆತ್ತವರು ಮಕ್ಕಳನ್ನು ಉತ್ತೇಜಿಸ ಬಹುದು. ಮಕ್ಕಳು ಕೂಟದಲ್ಲಿ ಭಾಗವಹಿಸುವಾಗ ಅವರನ್ನು ಪ್ರಶಂಸಿಸಲು ಕೂಡಾ ಹೆತ್ತವರು ಎಚ್ಚರಿರಬೇಕು.
6 ಈ ತರಬೇತಿನಲ್ಲಿ ಹೆತ್ತವರಿಗೆ ಕಷ್ಟದ ಕೆಲಸ ಒಳಗೂಡಿದೆ ನಿಜ. ಆದರೂ, ದೇವರ ಮಾರ್ಗದಲ್ಲಿ ವಿಷಯಗಳನ್ನು ಮಾಡುವುದರಿಂದ ಒಳ್ಳೇ ಪ್ರತಿಫಲವಿದೆ. ದೇವರ ವಾಕ್ಯವು ಹೇಳುವಂತೆ, “ಸದ್ಧರ್ಮಿಯು ನಿರ್ದೋಷವಾಗಿ ನಡೆಯುವನು. ಅವನು ಗತಿಸಿದ ಮೇಲೂ ಅವನ ಮಕ್ಕಳು ಭಾಗ್ಯವಂತರು.”—ಜ್ಞಾನೋ. 20:7.