“ಯೆಹೋವನನ್ನು ಸಂತೋಷದಿಂದ ಸೇವಿಸಿರಿ”
1. ಯೆಹೋವನ ಸೇವಕರಿಗೆ ಯಾವುದು ಮಹಾ ಸಂತೋಷದ ಮೂಲವಾಗಿರಸಾಧ್ಯವಿದೆ?
1 “ಯಾವಾಗಲೂ ಕರ್ತನಲ್ಲಿ ಸಂತೋಷಿಸಿರಿ; ಸಂತೋಷಪಡಿರಿ ಎಂದು ತಿರಿಗಿ ಹೇಳುತ್ತೇನೆ” ಎಂದು ಅಪೊಸ್ತಲ ಪೌಲನು ಬರೆದನು. (ಫಿಲಿ. 4:4) ಸುವಾರ್ತೆಯನ್ನು ಸಾರುವ ಸುಯೋಗದಲ್ಲಿ ಪಾಲ್ಗೊಳ್ಳುವುದು ಮತ್ತು ಯೆಹೋವನನ್ನು ಆರಾಧಿಸುವಂತೆ ಕುರಿಸದೃಶ ಜನರಿಗೆ ಸಹಾಯಮಾಡುವುದು ಮಹಾ ಸಂತೋಷದ ಮೂಲವಾಗಿದೆ. (ಲೂಕ 10:17; ಅ. ಕೃ. 15:3; 1 ಥೆಸ. 2:19) ಆದರೂ, ಕೆಲವೊಮ್ಮೆ ನಮ್ಮ ಶುಶ್ರೂಷೆಯಲ್ಲಿ ಸಂತೋಷವು ಸಿಗುತ್ತಿಲ್ಲ ಎಂದು ನಮಗನಿಸುವುದಾದರೆ, ನಾವೇನು ಮಾಡಸಾಧ್ಯವಿದೆ?
2. ನಮ್ಮ ನೇಮಕದ ಮೂಲವನ್ನು ಗಮನದಲ್ಲಿಡುವುದು ನಮ್ಮ ಸಂತೋಷಕ್ಕೆ ಹೆಚ್ಚನ್ನು ಹೇಗೆ ಕೂಡಿಸಬಲ್ಲದು?
2 ದೇವನೇಮಿತ ಕೆಲಸ: ನಮ್ಮ ಸಾರುವ ನೇಮಕವು ಯೆಹೋವನಿಂದ ಬರುತ್ತದೆ ಎಂಬುದನ್ನು ನೆನಪಿನಲ್ಲಿಡಿರಿ. ಹೌದು, ರಾಜ್ಯ ಸಂದೇಶವನ್ನು ಘೋಷಿಸುವುದರಲ್ಲಿ ಮತ್ತು ಶಿಷ್ಯರನ್ನಾಗಿ ಮಾಡುವುದರಲ್ಲಿ “ದೇವರ ಜೊತೆಕೆಲಸದವ”ರಾಗಿರುವುದು ಎಷ್ಟು ಗೌರವಾರ್ಹವಾದದ್ದಾಗಿದೆ. (1 ಕೊರಿಂ. 3:9) ಎಂದಿಗೂ ಪುನರಾವರ್ತಿಸಲ್ಪಡದ ಈ ಕೆಲಸದಲ್ಲಿ ಯೇಸು ಕ್ರಿಸ್ತನು ನಮ್ಮ ಜೊತೆ ಇದ್ದಾನೆ. (ಮತ್ತಾ. 28:18-20) ಈಗ ನಡೆಯುತ್ತಿರುವ ಮಹಾ ಆತ್ಮಿಕ ಕೊಯ್ಲಿನ ಕೆಲಸದಲ್ಲಿ ದೇವದೂತರು ಸಹ ನಮ್ಮೊಂದಿಗೆ ಕ್ರಿಯಾಶೀಲರಾಗಿ ಒಳಗೂಡಿ, ಕೆಲಸಮಾಡುತ್ತಾರೆ. (ಅ. ಕೃ. 8:26; ಪ್ರಕ. 14:6) ಶಾಸ್ತ್ರವಚನಗಳು, ಮತ್ತು ಅದರೊಂದಿಗೆ ದೇವಜನರ ಅನುಭವಗಳು, ಯೆಹೋವನು ಈ ಕೆಲಸಕ್ಕೆ ಇಂಬುಕೊಡುತ್ತಿದ್ದಾನೆ ಎಂಬುದಕ್ಕೆ ಅಲ್ಲಗಳೆಯಲಾಗದ ಸಾಕ್ಷ್ಯವನ್ನು ಕೊಡುತ್ತಿವೆ. ಆದುದರಿಂದ, ನಾವು ಸಾರುತ್ತಿರುವಾಗ, “ಕ್ರಿಸ್ತನಲ್ಲಿದ್ದುಕೊಂಡು ದೇವರ ಸನ್ನಿಧಾನದಲ್ಲಿ . . . ದೇವರಿಂದ ಕಳುಹಿಸಲ್ಪಟ್ಟ ಜನರಂತೆ” ಮುಂದುವರಿಯುತ್ತಾ ಹೋಗುತ್ತೇವೆ. (2 ಕೊರಿಂ. 2:17, ಪರಿಶುದ್ಧ ಬೈಬಲ್) ಸಂತೋಷಪಡಲಿಕ್ಕಾಗಿ ಇದೆಂತಹ ಒಂದು ಪ್ರಬಲವಾದ ಕಾರಣ!
3. ದೇವರ ಸೇವೆಯಲ್ಲಿ ನಮ್ಮ ಸಂತೋಷವನ್ನು ಕಾಪಾಡಿಕೊಳ್ಳುವುದರಲ್ಲಿ ಪ್ರಾರ್ಥನೆಯು ಯಾವ ಪಾತ್ರವನ್ನು ವಹಿಸುತ್ತದೆ?
3 ದೇವರ ಸೇವೆಯಲ್ಲಿ ನಮ್ಮ ಸಂತೋಷವನ್ನು ಕಾಪಾಡಿಕೊಳ್ಳಲು ಪ್ರಾರ್ಥನೆಯು ಆವಶ್ಯಕವಾಗಿದೆ. (ಗಲಾ. 5:22) ನಾವು ದೇವರ ಕೆಲಸವನ್ನು ಆತನ ಶಕ್ತಿಯಿಂದ ಮಾತ್ರವೇ ಮಾಡಲು ಸಾಧ್ಯವಿರುವುದರಿಂದ, ಆತನ ಆತ್ಮಕ್ಕಾಗಿ ಬೇಡಿಕೊಳ್ಳಬೇಕಾಗಿದೆ, ಮತ್ತು ಹೀಗೆ ಬೇಡಿಕೊಳ್ಳುವವರಿಗೆ ದೇವರು ತನ್ನ ಆತ್ಮವನ್ನು ಉದಾರವಾಗಿ ಕೊಡುವನು. (ಲೂಕ 11:13; 2 ಕೊರಿಂ. 4:1, 7; ಎಫೆ. 6:18-20) ನಮ್ಮ ಶುಶ್ರೂಷೆಯ ಕುರಿತು ಪ್ರಾರ್ಥಿಸುವುದು, ನಾವು ನಕಾರಾತ್ಮಕ ಪ್ರತಿಕ್ರಿಯೆಗಳನ್ನು ಎದುರಿಸುವಾಗ ಯೋಗ್ಯ ದೃಷ್ಟಿಕೋನವನ್ನು ಕಾಪಾಡಿಕೊಳ್ಳುವಂತೆ ನಮಗೆ ಸಹಾಯಮಾಡುವುದು. ನಾವು ಧೈರ್ಯದಿಂದ ಮತ್ತು ಹರ್ಷಾನಂದದಿಂದ ಸಾರುವಿಕೆಯಲ್ಲಿ ಮುಂದುವರಿಯುವಂತೆ ಇದು ನಮ್ಮನ್ನು ಶಕ್ತಗೊಳಿಸುವುದು.—ಅ. ಕೃ. 4:29-31; 5:40-42; 13:50-52.
4. ಸಾರುವಿಕೆಯಲ್ಲಿ ನಮ್ಮ ಸಂತೋಷವನ್ನು ಹೆಚ್ಚಿಸಲು ಒಳ್ಳೇ ತಯಾರಿಯು ಹೇಗೆ ಸಹಾಯಮಾಡುತ್ತದೆ, ಮತ್ತು ನಾವು ತಯಾರಿಯನ್ನು ಮಾಡಬಲ್ಲ ಕೆಲವು ಪ್ರಾಯೋಗಿಕ ವಿಧಗಳು ಯಾವುವು?
4 ಚೆನ್ನಾಗಿ ತಯಾರಿಮಾಡಿರಿ: ಒಳ್ಳೆಯ ತಯಾರಿಯನ್ನು ಮಾಡುವುದು, ನಾವು ಶುಶ್ರೂಷೆಯಲ್ಲಿ ತೊಡಗಿರುವಾಗ ನಮ್ಮ ಸಂತೋಷವನ್ನು ಹೆಚ್ಚಿಸಲಿಕ್ಕಾಗಿರುವ ಒಂದು ಪ್ರಾಯೋಗಿಕ ವಿಧಾನವಾಗಿದೆ. (1 ಪೇತ್ರ 3:15) ಈ ತಯಾರಿಯನ್ನು ಮಾಡಲು ಹೆಚ್ಚು ಸಮಯವನ್ನು ವ್ಯಯಿಸಬೇಕಾಗಿರುವುದಿಲ್ಲ. ಪ್ರಸ್ತುತ ಪತ್ರಿಕೆಗಳಿಗಾಗಿ ಸೂಚಿಸಲ್ಪಟ್ಟಿರುವ ನಿರೂಪಣೆಗಳನ್ನು ಅಥವಾ ನೀವು ನೀಡಲು ಯೋಜಿಸುವ ಒಂದು ಸಾಹಿತ್ಯಕ್ಕಾಗಿ ಸೂಕ್ತವಾದ ನಿರೂಪಣೆಯನ್ನು ಪುನರ್ವಿಮರ್ಶಿಸುವುದರಲ್ಲಿ ಕೇವಲ ಕೆಲವೇ ನಿಮಿಷಗಳು ತಗಲುತ್ತವೆ. ಒಂದು ಯೋಗ್ಯವಾದ ಪೀಠಿಕೆಗಾಗಿ, ನೀವು ರೀಸನಿಂಗ್ ಪುಸ್ತಕವನ್ನು ಅಥವಾ ನಮ್ಮ ರಾಜ್ಯದ ಸೇವೆಯ ಹಿಂದಿನ ಸಂಚಿಕೆಗಳನ್ನು ನೋಡಬಹುದು. ಕೆಲವು ರಾಜ್ಯ ಪ್ರಚಾರಕರು ಒಂದು ಚುಟುಕಾದ ನಿರೂಪಣೆಯನ್ನು ಒಂದು ಸಣ್ಣ ಕಾಗದದ ಮೇಲೆ ಬರೆದುಕೊಳ್ಳುವುದು ಸಹಾಯಕರವಾಗಿದೆಯೆಂದು ಕಂಡುಕೊಂಡಿದ್ದಾರೆ. ಆಗಿಂದಾಗ್ಗೆ, ತಮ್ಮ ಜ್ಞಾಪಕಕ್ಕೆ ತಂದುಕೊಳ್ಳಲು ಅವರು ಈ ಕಾಗದದ ಮೇಲೆ ಕಣ್ಣೋಡಿಸುತ್ತಾರೆ. ಇದು ಅವರು ಹೆದರಿಕೆಯನ್ನು ಜಯಿಸಲು ಸಹಾಯಮಾಡುತ್ತದೆ ಮತ್ತು ಧೈರ್ಯದಿಂದ ಸಾರಲು ದೃಢಭರವಸೆಯನ್ನು ಕೊಡುತ್ತದೆ.
5. ಸಂತೋಷವು ನಮಗೆ ಮತ್ತು ಇತರರಿಗೆ ಹೇಗೆ ಪ್ರಯೋಜನಗಳನ್ನು ತರುತ್ತದೆ?
5 ಸಂತೋಷದೊಂದಿಗೆ ಅನೇಕ ಪ್ರಯೋಜನಗಳೂ ಬರುತ್ತವೆ. ಸಂತೋಷಭರಿತ ಮನಸ್ಸಿನಿಂದ ಹೊರಡುವ ಮಾತುಗಳು ನಮ್ಮ ಸಂದೇಶದ ಆಕರ್ಷಣೆಯನ್ನು ಹೆಚ್ಚಿಸುತ್ತವೆ. ಸಂತೋಷವು ನಾವು ತಾಳಿಕೊಳ್ಳುವಂತೆ ಸಹಾಯಮಾಡುತ್ತದೆ. (ನೆಹೆ. 8:10; ಇಬ್ರಿ. 12:2) ಎಲ್ಲಕ್ಕಿಂತಲೂ ಮಿಗಿಲಾಗಿ, ನಮ್ಮ ಸಂತೋಷಭರಿತ ಸೇವೆಯು ಯೆಹೋವನನ್ನು ಘನಪಡಿಸುತ್ತದೆ. ಆದುದರಿಂದ, ನಾವು “ಯೆಹೋವನನ್ನು ಸಂತೋಷದಿಂದ ಸೇವಿ”ಸೋಣ.—ಕೀರ್ತ. 100:2.