ಸಾರುವಿಕೆಯಲ್ಲಿ ನಿಮ್ಮ ಆನಂದವನ್ನು ಹೆಚ್ಚಿಸಿರಿ
1 ಸುವಾರ್ತೆಯನ್ನು ಹಂಚಿಕೊಳ್ಳುವುದರಿಂದ ಸಿಗುವ ಆನಂದವನ್ನು ನೀವು ನಿಮ್ಮ ಶುಶ್ರೂಷೆಯಲ್ಲಿ ಅನುಭವಿಸುತ್ತಿದ್ದೀರೊ? ನಾವು ಜಾಗರೂಕರಾಗಿರದಿದ್ದಲ್ಲಿ, ನಮ್ಮ ಸುತ್ತಲಿರುವ ದುಷ್ಟ ಲೋಕವು ಸಾರುವುದರ ವಿಷಯದಲ್ಲಿ ನಮ್ಮನ್ನು ಪುಕ್ಕಲರನ್ನಾಗಿ ಮಾಡುತ್ತಾ, ನಮ್ಮ ಆನಂದವನ್ನು ನಾವು ಕಳೆದುಕೊಳ್ಳುವಂತೆ ಮಾಡಬಲ್ಲದು. ಯಾವುದೇ ಪ್ರತಿಕ್ರಿಯೆಯಿಲ್ಲದ ಟೆರಿಟೊರಿಯಲ್ಲಿ ಕೆಲಸಮಾಡುವುದು ಸಹ ನಮ್ಮನ್ನು ನಿರುತ್ತೇಜಿಸಬಹುದು. ಸಾರುವಿಕೆಯಲ್ಲಿ ನಮ್ಮ ಆನಂದವನ್ನು ಹೆಚ್ಚಿಸಲು ನಾವು ಯಾವ ವ್ಯಾವಹಾರಿಕ ಕ್ರಮಗಳನ್ನು ತೆಗೆದುಕೊಳ್ಳಬಲ್ಲೆವು?
2 ಸಕಾರಾತ್ಮಕರಾಗಿರಿ: ಸಕಾರಾತ್ಮಕ ಮನೋಭಾವವನ್ನು ಕಾಪಾಡಿಕೊಳ್ಳುವುದು ತುಂಬ ಸಹಾಯಕಾರಿಯಾಗಿದೆ. ಇದನ್ನು ಮಾಡುವ ಒಂದು ವಿಧಾನವು, “ದೇವರ ಜೊತೆಕೆಲಸದವರು” ಆಗಿರುವ ನಮ್ಮ ಅಪೂರ್ವ ಸುಯೋಗದ ಕುರಿತಾಗಿ ಮನನ ಮಾಡುವುದೇ ಆಗಿದೆ. (1 ಕೊರಿಂ. 3:9) ಈ ಕೆಲಸವನ್ನು ಪೂರೈಸುವುದರಲ್ಲಿ ಯೇಸು ಸಹ ನಮ್ಮೊಂದಿಗಿದ್ದಾನೆ. (ಮತ್ತಾ. 28:20) ಮತ್ತು ದೇವದೂತರ ಒಂದು ಸೈನ್ಯದೊಂದಿಗೆ ಅವನು ನಮ್ಮನ್ನು ಬೆಂಬಲಿಸುತ್ತಾನೆ. (ಮತ್ತಾ. 13:41, 49) ಹೀಗಿರುವುದರಿಂದ, ನಮ್ಮ ಪ್ರಯತ್ನಗಳು ದೇವರಿಂದ ನಿರ್ದೇಶಿಸಲ್ಪಟ್ಟಿವೆ ಎಂಬ ಆಶ್ವಾಸನೆ ನಮಗಿರಬಲ್ಲದು. (ಪ್ರಕ. 14:6, 7) ಆದುದರಿಂದ, ಕೆಲವು ಮನುಷ್ಯರು ನಮ್ಮ ಕೆಲಸದ ಕಡೆಗೆ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ತೋರಿಸಲಿ, ಆದರೆ ಸ್ವರ್ಗದಲ್ಲಿನ ಪ್ರತಿಕ್ರಿಯೆಯು ಮಾತ್ರ ಮಹದಾನಂದದ್ದಾಗಿದೆ!
3 ಚೆನ್ನಾಗಿ ತಯಾರಿಸಿರಿ: ಒಳ್ಳೆಯ ತಯಾರಿಯು ಕೂಡ ನಮ್ಮ ಆನಂದಕ್ಕೆ ಹೆಚ್ಚನ್ನು ಕೂಡಿಸಬಲ್ಲದು. ಶುಶ್ರೂಷೆಗಾಗಿ ತಯಾರಾಗುವುದು ಒಂದು ದೊಡ್ಡ ಕೆಲಸವೇನಲ್ಲ. ಸದ್ಯದ ಪತ್ರಿಕೆಗಳಿಂದ ಇಲ್ಲವೆ ಈ ತಿಂಗಳ ಸಾಹಿತ್ಯ ನೀಡುವಿಕೆಯಿಂದ, ಮಾತಾಡಲಿಕ್ಕಾಗಿ ಒಂದು ಅಂಶವನ್ನು ಪರಿಗಣಿಸುವುದಕ್ಕೆ ಕೇವಲ ಕೆಲವೇ ನಿಮಿಷಗಳು ಹಿಡಿಯುತ್ತವೆ. ನಮ್ಮ ರಾಜ್ಯದ ಸೇವೆಯಲ್ಲಿರುವ “ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?” ಎಂಬ ಲೇಖನದಿಂದ ಒಂದು ನಿರೂಪಣೆಯನ್ನು ಆಯ್ಕೆಮಾಡಿರಿ. 2002ನೇ ಇಸವಿಯ ಜನವರಿ ತಿಂಗಳಿನ “ಕ್ಷೇತ್ರ ಸೇವೆಗಾಗಿ ಸೂಚಿಸಲ್ಪಟ್ಟ ನಿರೂಪಣೆಗಳು” ಎಂಬ ಪುರವಣಿಯನ್ನು, ಇಲ್ಲದಿದ್ದಲ್ಲಿ ಒಂದು ಪರಿಣಾಮಕಾರಿ ಪೀಠಿಕೆಗಾಗಿ ರೀಸನಿಂಗ್ ಪುಸ್ತಕವನ್ನು ನೋಡಿರಿ. ಮನೆಯವರು ಸಾಮಾನ್ಯವಾಗಿ ಎಬ್ಬಿಸುವ ಆಕ್ಷೇಪಣೆಯು ನಿಮಗೆ ಎದುರಾಗುವಲ್ಲಿ, ಅವರ ಹೇಳಿಕೆಗಾಗಿ ಉಪಕಾರ ಹೇಳಿ, ಆಸಕ್ತಿಯನ್ನು ಕೆರಳಿಸುವಂಥ ಒಂದು ವಿಷಯದತ್ತ ಗಮನವನ್ನು ನಿರ್ದೇಶಿಸುವ ಒಂದು ಉತ್ತರವನ್ನು ತಯಾರಿಸಿರಿ. ಇದನ್ನು ಮಾಡುವುದರಲ್ಲಿ ರೀಸನಿಂಗ್ ಪುಸ್ತಕವು ತುಂಬ ಸಹಾಯಕಾರಿಯಾಗಿದೆ. ಈ ಸಹಾಯಕಗಳನ್ನು ಉಪಯೋಗಿಸುವುದು, ನಾವು ಆನಂದದಿಂದ ಸಾರಲು ಅಗತ್ಯವಿರುವ ಭರವಸೆಯನ್ನು ಕೊಡುವದು.
4 ಕಟ್ಟಕ್ಕರೆಯಿಂದ ಪ್ರಾರ್ಥಿಸಿರಿ: ಬಾಳುವ ಆನಂದಕ್ಕಾಗಿ ಪ್ರಾರ್ಥನೆಯು ಅತ್ಯಾವಶ್ಯಕ. ನಾವು ಮಾಡುತ್ತಿರುವ ಕೆಲಸವು ಯೆಹೋವನದ್ದಾಗಿರುವುದರಿಂದ, ನಾವು ಆತನ ಆತ್ಮಕ್ಕಾಗಿ ಬೇಡಿಕೊಳ್ಳಬೇಕು. ಮತ್ತು ಅದರ ಒಂದು ಫಲವು ಸಂತೋಷವಾಗಿದೆ. (ಗಲಾ. 5:22) ಸಾರುತ್ತಾ ಇರಲು ಬೇಕಾಗುವ ಬಲವನ್ನು ಯೆಹೋವನು ನಮಗೆ ಕೊಡುವನು. (ಫಿಲಿ. 4:13) ನಮ್ಮ ಶುಶ್ರೂಷೆಯ ಬಗ್ಗೆ ಪ್ರಾರ್ಥಿಸುವುದು, ನಮಗೆ ನಕಾರಾತ್ಮಕವಾದ ಅನುಭವಗಳಾಗುವಾಗ ವಿಷಯಗಳನ್ನು ಸರಿಯಾದ ರೀತಿಯಲ್ಲಿ ದೃಷ್ಟಿಸುವಂತೆ ಸಹಾಯಮಾಡಬಲ್ಲದು. (ಅ. ಕೃ. 13:52; 1 ಪೇತ್ರ 4:13, 14) ನಮಗೆ ಹೆದರಿಕೆಯಾಗುತ್ತಿರುವಲ್ಲಿ, ಪ್ರಾರ್ಥನೆಯು ನಮಗೆ ಧೈರ್ಯದಿಂದ ಹಾಗೂ ಉಲ್ಲಾಸದಿಂದ ಪಟ್ಟುಹಿಡಿಯಲು ಸಹಾಯಮಾಡಬಲ್ಲದು.—ಅ. ಕೃ. 4:31.
5 ಅವಕಾಶಗಳನ್ನು ಸೃಷ್ಟಿಸಿರಿ: ನಾವು ಜನರನ್ನು ಭೇಟಿಯಾಗಿ, ಅವರಿಗೆ ಸಾಕ್ಷಿಯನ್ನು ಕೊಡಲು ಶಕ್ತರಾಗುವಾಗಲೇ ನಮ್ಮ ಶುಶ್ರೂಷೆಯು ಹೆಚ್ಚು ಆನಂದದಾಯಕವಾಗುತ್ತದೆಂಬುದು ನಿಜ. ಬೇರೊಂದು ಸಮಯದಲ್ಲಿ, ಅಂದರೆ ಪ್ರಾಯಶಃ ಮಧ್ಯಾಹ್ನ ತಡವಾಗಿ ಇಲ್ಲವೇ ಸಾಯಂಕಾಲದ ಆರಂಭದಲ್ಲಿ ಮನೆಯಿಂದ ಮನೆಗೆ ಹೋಗಲಿಕ್ಕಾಗಿ ನಿಮ್ಮ ಶೆಡ್ಯೂಲ್ನಲ್ಲಿ ಬದಲಾವಣೆಯನ್ನು ಮಾಡುವುದರಿಂದ ನಿಮಗೆ ಹೆಚ್ಚು ಸಾಫಲ್ಯವು ದೊರಕಬಹುದು. ನೀವು ಬೀದಿಯಲ್ಲಿ ನಡೆಯುತ್ತಿರುವಾಗ, ಶಾಪಿಂಗ್ಗೆ ಹೋಗುವಾಗ, ಒಂದು ಬಸ್ನಲ್ಲಿ ಪ್ರಯಾಣಿಸುತ್ತಿರುವಾಗ ಇಲ್ಲವೇ ಉದ್ಯಾನವನದಲ್ಲಿ ಅಡ್ಡಾಡುತ್ತಿರುವಾಗ ಖಂಡಿತವಾಗಿಯೂ ಪ್ರತಿ ಸಾರಿ ಜನರನ್ನು ಎದುರಾಗುತ್ತೀರಿ. ಸಂಭಾಷಣೆಯನ್ನು ಆರಂಭಿಸುವ ಒಂದು ಸಂಕ್ಷಿಪ್ತ ನಿರೂಪಣೆಯನ್ನು ತಯಾರಿಸಿ, ಸ್ನೇಹಪರರಂತೆ ತೋರುವವರ ಬಳಿ ಹೋಗಿ ಮಾತಾಡಲು ನೀವೇಕೆ ಮೊದಲ ಹೆಜ್ಜೆಯನ್ನು ತೆಗೆದುಕೊಳ್ಳಬಾರದು? ಇಲ್ಲವೇ ನೀವು ಒಂದು ಐಹಿಕ ಉದ್ಯೋಗಕ್ಕೆ ಹೋಗುತ್ತಿರಬಹುದು ಅಥವಾ ಶಾಲೆಗೆ ಹೋಗುತ್ತಿರಬಹುದು ಮತ್ತು ಅಲ್ಲಿ ನೀವು ದಿನಾಲೂ ಇತರರೊಂದಿಗೆ ಸಂಭಾಷಿಸುತ್ತೀರಿ. ಸ್ವಲ್ಪ ಆಸಕ್ತಿಯನ್ನು ಕೆರಳಿಸುವಂಥ ಒಂದು ಶಾಸ್ತ್ರೀಯ ವಿಷಯವನ್ನು ಕೇವಲ ಪ್ರಸ್ತಾಪಿಸುವ ಮೂಲಕ ನಿಮಗೆ ಒಂದು ಸಾಕ್ಷಿಯನ್ನು ಕೊಡುವ ಅವಕಾಶ ಸಿಗಬಹುದು. ಜನವರಿ 2002ರ ನಮ್ಮ ರಾಜ್ಯದ ಸೇವೆಯ ಪುರವಣಿಯ ಮೊದಲನೆಯ ಪುಟದಲ್ಲಿ ಒಳ್ಳೆಯ ಸಲಹೆಗಳಿವೆ. ಇವುಗಳಲ್ಲಿ ಯಾವುದೇ ಒಂದು ವಿಷಯವನ್ನು ಮಾಡಲು ಪ್ರಯತ್ನಿಸುವುದು ಸಹ, ಸಾರುವಿಕೆಯಲ್ಲಿ ಒಬ್ಬನ ಆನಂದದ ಮಟ್ಟವನ್ನು ಬಹಳಷ್ಟು ಹೆಚ್ಚಿಸಬಲ್ಲದು.
6 ಆನಂದವು ನಾವು ತಾಳಿಕೊಳ್ಳುವಂತೆ ನಮಗೆ ಸಹಾಯಮಾಡುವುದರಿಂದ, ಅದನ್ನು ಕಾಪಾಡಿಕೊಳ್ಳುವುದು ಎಷ್ಟು ಅತ್ಯಾವಶ್ಯಕ! ಹೀಗೆ ಮಾಡುವುದರಿಂದ, ಇನ್ನೆಂದಿಗೂ ಪುನರಾವರ್ತಿಸಲ್ಪಡದಂಥ ಈ ಕೆಲಸವು ಮುಕ್ತಾಯಗೊಳ್ಳುವಾಗ ನಾವು ಒಂದು ದೊಡ್ಡ ಬಹುಮಾನವನ್ನು ಪಡೆದುಕೊಳ್ಳುವೆವು. ಆ ಪ್ರತೀಕ್ಷೆಯು ತಾನೇ, ಸಾರುವಿಕೆಯಲ್ಲಿ ನಮ್ಮ ಆನಂದವನ್ನು ಹೆಚ್ಚಿಸಬಲ್ಲದು.—ಮತ್ತಾ. 25:21.