ಸ್ವಚ್ಛತೆಯು ದೇವರನ್ನು ಗೌರವಿಸುತ್ತದೆ
1 ಮೋಶೆಯ ಧರ್ಮಶಾಸ್ತ್ರದಲ್ಲಿ, ಸ್ವಚ್ಛತೆಯನ್ನು ಕಾಪಾಡಿಕೊಳ್ಳಲಿಕ್ಕಾಗಿ ಕಟ್ಟುನಿಟ್ಟಿನ ಆವಶ್ಯಕತೆಗಳು ಒಳಗೂಡಿದ್ದವು. ಅವು, ಶಾರೀರಿಕವಾಗಿ ಮತ್ತು ಆತ್ಮಿಕವಾಗಿ ತಮ್ಮನ್ನು ಸ್ವಚ್ಛವಾಗಿರಿಸಿಕೊಳ್ಳಬೇಕಾಗಿದ್ದ ಜನಾಂಗವಾಗಿ ಇಸ್ರಾಯೇಲನ್ನು ಪ್ರತ್ಯೇಕಿಸಿದವು. (ಯಾಜ. 11:35, 36; 15:1-11; ಯೆಶಾ. 52:11) ಈ ಶುದ್ಧ ಸ್ಥಿತಿಯು ದೇವರಿಗೆ ಗೌರವವನ್ನು ತಂದು, ಇಡೀ ರಾಷ್ಟ್ರದ ಆರೋಗ್ಯಕ್ಕೆ ನೆರವನ್ನಿತ್ತಿತು.
2 ಇಂದು ಕೂಡ, ಸ್ವಚ್ಛತೆಯು ಯೆಹೋವನ ಜನರ ಒಂದು ಗುರುತು ಚಿಹ್ನೆಯಾಗಿದೆ. ಇದು ಯೆಹೋವನ ಜನರನ್ನು ಒಂದು ಗುಂಪಿನೋಪಾದಿ ಗುರುತಿಸುವುದಾದರೂ, ಅದು ವೈಯಕ್ತಿಕವಾಗಿ ನಮ್ಮಲ್ಲಿ ಪ್ರತಿಯೊಬ್ಬರ ವಿಷಯದಲ್ಲೂ ಸತ್ಯವಾಗಿದೆಯೊ? ಅಚ್ಚುಕಟ್ಟುತನ ಮತ್ತು ವೈಯಕ್ತಿಕ ಸ್ವಚ್ಛತೆಯ ಕುರಿತು ನಾವು ಎಷ್ಟರ ಮಟ್ಟಿಗೆ ಚಿಂತಿತರಾಗಿದ್ದೇವೊ ಅದು, ನಾವು ಯೆಹೋವನ ಆವಶ್ಯಕತೆಗಳನ್ನು ಎಷ್ಟು ಗಣ್ಯಮಾಡುತ್ತೇವೆ ಎಂಬುದನ್ನು ಪ್ರತಿಬಿಂಬಿಸುತ್ತದೆ.
3 ನಮ್ಮ ಮನೆಯ ತೋರಿಕೆಯ ಕುರಿತೇನು? ನಾವು ಒಯ್ಯುವ ರಾಜ್ಯ ಸಂದೇಶದ ಮೌಲ್ಯವನ್ನು ಅದು ತಗ್ಗಿಸುತ್ತದೊ? ನಮ್ಮ ಸ್ವಂತ ಮನೆಯು ಕೊಳಕಾಗಿದ್ದು, ಮಿತಿಮೀರಿ ಬೆಳೆದಿದ್ದು, ಕತ್ತರಿಸದೇ ಬಿಡಲ್ಪಟ್ಟಿರುವ ಹುಲ್ಲು ಯಾ ಕಳೆಗಳಿಂದ ಅಂಗಳವು ತುಂಬಿರುವಾಗ, ನಾವು ಭೂಮಿಯನ್ನು ಒಂದು ಪರದೈಸವಾಗಿ ಮಾರ್ಪಡಿಸುವುದರ ಕುರಿತು ಮಾತಾಡುತ್ತಿರುವುದಾದರೆ, ಕೆಲವರು ನಮ್ಮ ಪ್ರಾಮಾಣಿಕತೆಯನ್ನು ಶಂಕಿಸುವ ಸಾಧ್ಯತೆ ಇದೆಯೊ? ನಮ್ಮ ಮನೆಯ ತೋರಿಕೆಯು ಅಸ್ತವ್ಯಸ್ತವಾಗಿರುವುದಾದರೆ ಅಥವಾ ನೈರ್ಮಲ್ಯವಿಲ್ಲದ ಅಭ್ಯಾಸಗಳಿಂದಾಗಿ ಕೆಟ್ಟ ವಾಸನೆಗಳು ಬರುತ್ತಿರುವುದಾದರೆ, ‘ದೇವರ ರಾಜ್ಯದ ಕೆಳಗೆ ನೂತನ ವ್ಯವಸ್ಥೆಗೆ ಹೊಂದಿಕೊಂಡಿರುವ ಸ್ವಚ್ಛತೆಯ ನಮೂನೆಗಳನ್ನು’ ನಾವು ವಿಕಸಿಸಿಕೊಂಡಿದ್ದೇವೆ ಎಂದು ಹೇಳಸಾಧ್ಯವಿದೆಯೊ?—ನಮ್ಮ ಶುಶ್ರೂಷೆ ಪು. 130-1.
4 ಕ್ಷೇತ್ರ ಸೇವೆಗಾಗಿ ನಾವು ಉಪಯೋಗಿಸುವ ವಾಹನದ ಕುರಿತಾಗಿ ಏನು? ಅದರ ತೋರಿಕೆಯು ನಮ್ಮ ಕೆಲಸದ ಮಹತ್ವವನ್ನು ಕುಗ್ಗಿಸದಂತೆ ಅದು ಸಾಕಷ್ಟು ಮಟ್ಟಿಗೆ ಸ್ವಚ್ಛವಾಗಿದೆಯೊ? ನಮ್ಮ ಬಟ್ಟೆಬರೆ, ಸೇವೆಯ ಬ್ಯಾಗ್ ಮತ್ತು ಕೂದಲಿನ ಕುರಿತಾಗಿ ಏನು? ತಪ್ಪು ತಿಳಿಯಲಿಕ್ಕಾಗಿ ಯಾವುದೇ ಆಸ್ಪದ ಕೊಡದೆ, ಅವು ನೀಟಾಗಿಯೂ ನೋಡಲು ಚೆನ್ನಾಗಿಯೂ ಇವೆಯೊ? ಕ್ರಮವಾಗಿ ಸ್ನಾನಮಾಡುವ ಮೂಲಕ ಮತ್ತು ಬಟ್ಟೆಗಳನ್ನು ಒಗೆಯುವ ಮೂಲಕ, ನಮ್ಮನ್ನು ಮತ್ತು ನಮ್ಮ ಉಡುಪುಗಳನ್ನು ಸ್ವಚ್ಛವಾಗಿಡುವುದು ವಿವೇಚನೆಯ ಸಂಗತಿಯಾಗಿದೆ.
5 ಒಬ್ಬ ಸಹೋದರನು, ತನ್ನ ವೈಯಕ್ತಿಕ ನೈರ್ಮಲ್ಯ ಇಲ್ಲವೆ ಪರಿಸರವು ಸಭೆಗೆ ನಿಂದೆಯನ್ನು ತರುವಷ್ಟರ ಮಟ್ಟಿಗೆ ಅಜಾಗರೂಕನಾಗಿರುವುದಾದರೆ ಆಗೇನು? ವಯಸ್ಸು ಇಲ್ಲವೆ ದುರ್ಬಲತೆಯಿಂದಾಗಿ ಅವನಿಗೆ ಸ್ವಲ್ಪ ಪ್ರೀತಿಪರ ನೆರವಿನ ಅಗತ್ಯವಿರಬಹುದು. ಹಾಗಿರುವಲ್ಲಿ, ಅವನಿಗೆ ಸಹಾಯಮಾಡುವುದು ದಯಾಪರ ಕೃತ್ಯವಾಗಿರುವುದು. ಕೆಲವರಿಗೆ ಆ ಸಮಸ್ಯೆ ಇರಬಹುದಾದರೂ, ಅವರಿಗೆ ಅದರ ಬಗ್ಗೆ ಅರಿವಿರಲಿಕ್ಕಿಲ್ಲ. ದಯಾಪರವಾದ ಬುದ್ಧಿವಾದವನ್ನು ಕೊಡುವುದರಿಂದ ಅವರು ಆ ಸನ್ನಿವೇಶವನ್ನು ಸರಿಪಡಿಸಲು ಪ್ರಚೋದಿಸಲ್ಪಡಬಹುದು. ಈ ವಿಷಯದಲ್ಲಿ ನಿರಂತರವಾಗಿ ಒಂದು ನ್ಯೂನ ಮಾದರಿಯನ್ನಿಡುವ ವ್ಯಕ್ತಿಗಳು, ಸಭೆಯಲ್ಲಿ ಮಹತ್ವದ ಸುಯೋಗಗಳಿಗೆ ಅರ್ಹರಾಗಲಾರರು. ಮತ್ತು ಖಂಡಿತವಾಗಿಯೂ ಹಿರಿಯರು ತಮ್ಮ ಸ್ವಂತ ವೈಯಕ್ತಿಕ ಮಟ್ಟಗಳನ್ನು ಇಲ್ಲವೆ ಇಷ್ಟಗಳನ್ನು ಇತರರ ಮೇಲೆ ಹೇರುವುದರ ವಿರುದ್ಧ ಜಾಗ್ರತೆ ವಹಿಸಬೇಕು.
6 ಆತ್ಮಿಕ ಔತಣಗಳಲ್ಲಿ ಆನಂದಿಸಲಿಕ್ಕಾಗಿ ಹೊಸ ಆಸಕ್ತ ವ್ಯಕ್ತಿಗಳು ನಮ್ಮ ರಾಜ್ಯ ಸಭಾಗೃಹಕ್ಕೆ ಆಮಂತ್ರಿಸಲ್ಪಡುತ್ತಾರೆ. ಸಾಮಾನ್ಯವಾಗಿ, ಆಮಂತ್ರಣವೊಂದನ್ನು ನೀಡಲು ನಾವು ಆತುರವುಳ್ಳವರಾಗಿರುತ್ತೇವೆ, ಯಾಕೆಂದರೆ ಸಭಾಗೃಹವು ತುಂಬ ಆಕರ್ಷಕವೂ ಅಚ್ಚುಕಟ್ಟಾದದ್ದೂ ಆಗಿರುತ್ತದೆ. ಆದರೆ ಅದನ್ನು ಆ ರೀತಿಯಾಗಿ ಇಡಲು ಕೆಲಸಮಾಡಬೇಕಾಗುತ್ತದೆ. ನಿಮ್ಮ ಸಭಾಗೃಹದ ಸುತ್ತಲೂ ಕಣ್ಣೋಡಿಸಿರಿ. ಕುರ್ಚಿಗಳು, ನೆಲ ಮತ್ತು ಗೋಡೆಗಳು ಸ್ವಚ್ಛವಾಗಿವೆಯೊ? ಶೌಚಾಲಯಗಳು ಕ್ರಮವಾಗಿ ಉಜ್ಜಲ್ಪಡುತ್ತವೊ? ಗಲೀಜಾಗಿರುವ ಪರದೆಗಳು ಇಲ್ಲವೆ ಬಣ್ಣ ಕಿತ್ತುಹೋಗುತ್ತಿರುವ ಗೋಡೆಗಳನ್ನು ನಾವು ನೋಡಿ ನೋಡಿ ಅದಕ್ಕೆ ಒಗ್ಗಿಹೋಗಿ, ಅದನ್ನೇ ಸ್ವೀಕಾರಾರ್ಹವಾಗಿ ದೃಷ್ಟಿಸಲು ನಮಗೆ ಹೆಚ್ಚು ಸಮಯ ಹಿಡಿಯಲಿಕ್ಕಿಲ್ಲ. ಆದರೆ ಮೊದಲ ಬಾರಿ ಸಂದರ್ಶಿಸುತ್ತಿರುವ ಹೊಸಬರ ಮನಸ್ಸಿನಲ್ಲಿ ಅದು ಒಂದು ಕೆಟ್ಟ ಅಭಿಪ್ರಾಯವನ್ನು ಮೂಡಿಸಬಲ್ಲದು. ಸ್ವಚ್ಛಗೊಳಿಸುವ ಇಲ್ಲವೆ ನವೀಕರಿಸುವ ಸಮಯ ಬರುವಾಗ ನಾವು ಅದರಲ್ಲಿ ಪಾಲ್ಗೊಳ್ಳುತ್ತಾ, ಮನಸ್ಸಿಗೆ ಮುದನೀಡುವ ಹಾಗೂ ಆಕರ್ಷಕವಾದ ಸಭಾಗೃಹವನ್ನು ಕಾಪಾಡಿಕೊಳ್ಳಲಿಕ್ಕಾಗಿ ನಾವು ನಮ್ಮಿಂದಾದುದೆಲ್ಲವನ್ನೂ ಮಾಡಬೇಕು.
7 ಒಂದೇ ಒಂದು ಮಾತನ್ನು ಆಡದೆ, ನಾವು ದೇವರನ್ನು ನಮ್ಮ ವೈಯಕ್ತಿಕ ತೋರಿಕೆ ಮತ್ತು ನಮ್ಮ ಮನೆಗಳು, ವಾಹನಗಳು ಮತ್ತು ರಾಜ್ಯ ಸಭಾಗೃಹಗಳ ಅಚ್ಚುಕಟ್ಟುತನದ ಮೂಲಕ ಗೌರವಿಸಬಲ್ಲೆವು. ನಮ್ಮ ಒಳ್ಳೆಯ ಮಾದರಿಯು ಯಾರಿಗೂ ಎಡವಲು ಆಸ್ಪದವನ್ನು ಕೊಡದೆ, ನಮ್ಮ ಆರಾಧನೆಯು ಶುದ್ಧವೂ ಯಥಾರ್ಥವೂ ಆಗಿದೆಯೆಂಬುದಕ್ಕೆ ಸಾಕ್ಷ್ಯವನ್ನು ಕೊಡುವುದು.—1 ಕೊರಿಂ. 10:31, 32; ಯಾಕೋ. 1:27.