ನೀವು ಸಮೃದ್ಧವಾಗಿ ಬಿತ್ತುತ್ತಿದ್ದೀರೊ?
1 “ನೀವು ಯಾವುದಕ್ಕಾದರು ಎಷ್ಟು ಹೆಚ್ಚು ಪ್ರಯತ್ನವನ್ನು ಹಾಕುತ್ತೀರೊ, ಅಷ್ಟು ಹೆಚ್ಚು ಪ್ರಯೋಜನಗಳು ನಿಮ್ಮದಾಗುತ್ತವೆ” ಎಂಬ ನಾಣ್ಣುಡಿಯೊಂದಿದೆ. ನಮ್ಮ ಆರಾಧನೆಯಲ್ಲಿ ಇದು ವಿಶೇಷವಾಗಿ ಸತ್ಯವಾಗಿದೆ. ಕೂಟಗಳಿಗಾಗಿ ತಯಾರಿಸುವುದರಲ್ಲಿ, ರಾಜ್ಯ ಸಂದೇಶವನ್ನು ಸಾರುವುದರಲ್ಲಿ, ಮತ್ತು ನಮ್ಮ ಸಹೋದರರಿಗಾಗಿ ಪ್ರೀತಿಯನ್ನು ತೋರಿಸುವುದರಲ್ಲಿ ನಾವು ಕಳೆಯುವ ಅಧಿಕ ಸಮಯ ಮತ್ತು ಪ್ರಯತ್ನದಿಂದಾಗಿ, ಆತ್ಮಿಕ ಬೆಳವಣಿಗೆಯನ್ನು ನಾವು ಹೆಚ್ಚಾಗಿ ಪಡೆಯುವೆವು. ಇದಕ್ಕೆ ವಿರುದ್ಧವಾದದ್ದೂ ಸಹ ಸತ್ಯವಾಗಿದೆ. ನಾವು ಮಾಡುವ ಕೆಲಸದಲ್ಲಿ ನಮ್ಮನ್ನು ಉಪಯೋಗಿಸಿಕೊಳ್ಳಲು ಇಷ್ಟವಿಲ್ಲದವರಾಗಿರುವುದಾದರೆ ಅಥವಾ ಅರೆಹೃದಯದವರಾಗಿರುವುದಾದರೆ, ಸಂತೃಪ್ತಿದಾಯಕ ಫಲಿತಾಂಶಗಳನ್ನು ನಾವು ನಿಜವಾಗಿಯೂ ನಿರೀಕ್ಷಿಸಬಲ್ಲೆವೊ?
2 ಅಪೊಸ್ತಲ ಪೌಲನು 2 ಕೊರಿಂಥ 9:6 ರಲ್ಲಿ ಆ ಸೂತ್ರವನ್ನು ಚೆನ್ನಾಗಿ ನಮೂದಿಸಿದನು: “ಸ್ವಲ್ಪವಾಗಿ ಬಿತ್ತುವವನು ಪೈರನ್ನು ಸ್ವಲ್ಪವಾಗಿ ಕೊಯ್ಯುವನು; ಹೆಚ್ಚಾಗಿ ಬಿತ್ತುವವನು ಹೆಚ್ಚಾಗಿ ಕೊಯ್ಯುವನು.” ನೀವು ಸಮೃದ್ಧವಾಗಿ ಬಿತ್ತುತ್ತಿದ್ದೀರೊ?
3 ವೈಯಕ್ತಿಕ ಬೈಬಲ್ ಅಭ್ಯಾಸ: ಫಲಭರಿತ ಶುಶ್ರೂಷಕರಾಗಿರಲು, ನಾವು ಪ್ರಥಮವಾಗಿ ನಮ್ಮ ವೈಯಕ್ತಿಕ ಅಭ್ಯಾಸದಲ್ಲಿ ಸಮೃದ್ಧವಾಗಿ ಬಿತ್ತಬೇಕು. ಒಂದು ತೀವ್ರವಾದ ಆತ್ಮಿಕ ಹಸಿವು ನಮಗಿರಬೇಕು. (ಕೀರ್ತ. 119:97, 105; ಮತ್ತಾ. 5:3) ನಮ್ಮ ಮೇಲೆ ಒತ್ತಡವನ್ನು ಹಾಕುತ್ತಿರುವ ದೈನಂದಿನ ಜೀವಿತದ ಎಲ್ಲಾ ಆವಶ್ಯಕತೆಗಳೊಂದಿಗೆ, ನಮ್ಮ ಆತ್ಮಿಕ ಅಗತ್ಯತೆಯ ಕುರಿತಾದ ಒಂದು ನೈಜ ಪರಿಜ್ಞಾನವನ್ನು ಬೆಳೆಸಿಕೊಳ್ಳಲು ಪ್ರಜ್ಞಾಪೂರ್ವಕ ಪ್ರಯತ್ನವು ಬೇಕಾಗುತ್ತದೆ. ನಮ್ಮಲ್ಲಿ ಹೆಚ್ಚಿನವರಿಗೆ, “ಕಾಲವನ್ನು ಬೆಲೆಯುಳ್ಳದ್ದಾಗಿ ಕೊಂಡುಕೊಳ್ಳು” ವುದನ್ನು ಅದು ಅಗತ್ಯಪಡಿಸುತ್ತದೆ. (ಎಫೆ. 5:16, NW) ಕೆಲವರು ವೈಯಕ್ತಿಕ ಅಭ್ಯಾಸವನ್ನು ಮಾಡಲಿಕ್ಕಾಗಿ ನಿಶ್ಚಿತ ದಿನಗಳಲ್ಲಿ ಬೇಗನೆ ಏಳಲಿಕ್ಕಾಗಿ ಏರ್ಪಾಡುಗಳನ್ನು ಮಾಡುತ್ತಾರೆ. ಇತರರು ಆ ಉದ್ದೇಶಕ್ಕಾಗಿ ಕೆಲವು ಸಂಜೆಗಳನ್ನು ಬದಿಗಿರಿಸಿದ್ದಾರೆ. ಯಾವ ವಿಧದಲ್ಲಿ ನಾವು ಸಮೃದ್ಧವಾಗಿ ಕೊಯ್ಯುತ್ತೇವೆ? ಹೆಚ್ಚು ಬಲವಾದ ನಂಬಿಕೆಯನ್ನು, ಒಂದು ಉಜ್ವಲವಾದ ನಿರೀಕ್ಷೆಯನ್ನು, ಮತ್ತು ಹೆಚ್ಚು ಸಂತೋಷದ ಮತ್ತು ಹೆಚ್ಚು ಸಕಾರಾತ್ಮಕವಾದ ಮನಸ್ಸಿನ ಸ್ಥಿತಿಯನ್ನು ನಾವು ಸಂಪಾದಿಸುತ್ತೇವೆ.—ರೋಮಾ. 10:17; 15:4; 1 ಪೇತ್ರ 1:13.
4 ಸಭಾ ಕೂಟಗಳು: ಕೀರ್ತನೆ 122:1 ರಲ್ಲಿ ದಾವೀದನಂದದ್ದು: “ಯೆಹೋವನ ಮಂದಿರಕ್ಕೆ ಹೋಗೋಣ, ಬಾ ಎಂದು ಜನರು ನನ್ನನ್ನು ಕರೆದಾಗ ನನಗೆ ಸಂತೋಷವಾಯಿತು.” ನಿಮಗೂ ಹಾಗೆಯೇ ಅನಿಸುತ್ತದೊ? ಸಮೃದ್ಧವಾಗಿ ಬಿತ್ತುವುದು ಅಂದರೆ ವಾರದ ನಮ್ಮ ಐದು ಕೂಟಗಳಿಗೆ ಕ್ರಮವಾಗಿ ಹಾಜರಾಗುವುದೇ. ಅಹಿತಕರವಾದ ವಾತಾವರಣವು ಅಡ್ಡೈಸುವಂತೆ ನೀವು ಅನುಮತಿಸುವುದಿಲ್ಲವೆಂಬ ನಿರ್ಧಾರ ಮಾಡಿರಿ. ಸಾಮಾನ್ಯವಾಗಿ, ನಾವು ಹೆಚ್ಚು ಅಡಚಣೆಗಳನ್ನು ಜಯಿಸಿದಷ್ಟು, ಹೆಚ್ಚು ಆಶೀರ್ವಾದಗಳು ನಮ್ಮದಾಗುತ್ತವೆ.
5 ಮುಂಚಿತವಾಗಿ ಆಗಮಿಸಿ ಮತ್ತು ತದನಂತರ ನಿಮ್ಮ ಸಹೋದರರೊಂದಿಗೆ ಭಕ್ತಿವೃದ್ಧಿಯನ್ನುಂಟುಮಾಡುವ ಸಂಭಾಷಣೆಗಳಲ್ಲಿ ಭಾಗವಹಿಸಲಿಕ್ಕಾಗಿ ಸಾವಕಾಶವಾಗಿ ಹೊರಡಿರಿ. ನಿಮ್ಮಿಂದಾಗುವಷ್ಟು ಬೇರೆ ಬೇರೆ ಜನರನ್ನು ಒಳಗೂಡಿಸಲು ನಿಮ್ಮ ಸಹವಾಸಗಳನ್ನು ವಿಸ್ತರಿಸಿರಿ. ಕಾವಲಿನಬುರುಜು ಮತ್ತು ಇತರ ಕೂಟಗಳಿಗಾಗಿ ಚೆನ್ನಾಗಿ ತಯಾರಿಸಿರಿ, ಇದರಿಂದಾಗಿ ನಿಮಗೆ ಅವಕಾಶವಿರುವಾಗ ಹೇಳಿಕೆ ನೀಡುವ ಮೂಲಕ ನೀವು ಸಮೃದ್ಧವಾಗಿ ಬಿತ್ತಬಲ್ಲಿರಿ. ಕೂಟಗಳಲ್ಲಿ ಇತರರಿಗೆ “ಉದಾರವಾಗಿ ನೀರು ಹಾಯಿಸುವ” ಮೂಲಕ, ನೀವು ಸಹ “ಉದಾರವಾಗಿ ನೀರು ಹಾಯಿಸ” ಲ್ಪಡುವಿರಿ.—ಜ್ಞಾನೋ. 11:25.
6 ಕ್ಷೇತ್ರ ಶುಶ್ರೂಷೆ: ಬಹುಶಃ ಕ್ಷೇತ್ರ ಶುಶ್ರೂಷೆಯಲ್ಲಲ್ಲದೆ ಬೇರೆಲಿಯ್ಲೂ ಈ ಸಮೃದ್ಧವಾಗಿ ಬಿತ್ತುವ ಮೂಲಸೂತ್ರವು ಹೆಚ್ಚು ಸತ್ಯದ್ದಾಗಿರುವುದಿಲ್ಲ. ಅದಕ್ಕಾಗಿ ನಾವು ಹೆಚ್ಚು ಸಮಯವನ್ನು ಮೀಸಲಾಗಿಡುವಷ್ಟು, ನಾವು ಆಸಕ್ತಿಭರಿತ ಅನುಭವಗಳನ್ನು, ಫಲಕಾರಿ ಪುನಃ ಸಂದರ್ಶನಗಳನ್ನು, ಮತ್ತು ಉತ್ಪನ್ನಕಾರಿ ಬೈಬಲ್ ಅಭ್ಯಾಸಗಳನ್ನು ಹೆಚ್ಚು ಕೊಯ್ಯುವುದು ಸಂಭವನೀಯ.
7 ಕ್ಷೇತ್ರ ಸೇವೆಯಲ್ಲಿ ಸಮೃದ್ಧವಾಗಿ ಬಿತ್ತುವುದು ಗುಣಮಟ್ಟವನ್ನು ಮತ್ತು ಹಾಗೆಯೆ ಪರಿಮಾಣವನ್ನೂ ಒಳಗೊಳ್ಳುತ್ತದೆ. ನಮ್ಮ ಶುಶ್ರೂಷೆಯ ಗುಣಮಟ್ಟವನ್ನು ಪ್ರಗತಿಗೊಳಿಸಲು ಒಂದು ಅತ್ಯುತ್ತಮವಾದ ಸಹಾಯಕ ಸಾಧನವು ರೀಸನಿಂಗ್ ಪುಸ್ತಕವಾಗಿದೆ. ಬಾಗಿಲುಗಳಲ್ಲಿ ಆಸಕ್ತಿಯನ್ನು ಎಬ್ಬಿಸುವಂತೆ ಸಹಾಯಮಾಡಲು ಪುಟಗಳು 9-15 ರಲ್ಲಿ 18 ವಿಷಯವಸ್ತುಗಳನ್ನು ಆವರಿಸುವ 40ಕ್ಕೂ ಹೆಚ್ಚಿನ ಪೀಠಿಕೆಗಳನ್ನು ಪಟ್ಟಿಮಾಡುತ್ತವೆ. ನೀವು ಆಸಕ್ತಿಯನ್ನು ಕಂಡುಕೊಳ್ಳುವುದಾದರೆ, ನೀವು ಹಿಂದಿರುಗಲು ಸಾಧ್ಯವಾಗುವಂತೆ ಮತ್ತು ನಿಮ್ಮ ಬಿತ್ತುವಿಕೆಯ ಫಲವನ್ನು ಕೊಯ್ಯಲು ಸಾಧ್ಯವಾಗುವಂತೆ ಅವುಗಳನ್ನು ಗಮನಿಸಲು ಖಚಿತಪಡಿಸಿಕೊಳ್ಳಿರಿ. ಆಶಾಜನಕವಾಗಿಯೆ ನಿಮ್ಮ ಪ್ರಯತ್ನಗಳು ಬೈಬಲ್ ಅಧ್ಯಯನವೊಂದಕ್ಕೆ ನಡಿಸುವುವು ಮತ್ತು ಬೇರೊಬ್ಬರಿಗೆ ಹೇಗೆ ಸಮೃದ್ಧವಾಗಿ ಬಿತ್ತುವುದೆಂಬುದರ ಕುರಿತು ನೀವು ಕಲಿಸಬಲ್ಲಿರಿ.
8 ನಾವು ಸಮೃದ್ಧವಾಗಿ ಬಿತ್ತುವುದಾದರೆ, ಯೆಹೋವನಿಂದ ಮಹತ್ತಾದ ಆಶೀರ್ವಾದಗಳನ್ನು ನಿರೀಕ್ಷಿಸಬಲ್ಲೆವು.—ಮಲಾ. 3:10.