ಹೆಚ್ಚಾಗಿ ಬಿತ್ತುವುದು ಹೆಚ್ಚಿನ ಆಶೀರ್ವಾದಗಳನ್ನು ತರುತ್ತದೆ
1 ದೇವರ ವಾಕ್ಯದಲ್ಲಿ ಅಡಕವಾಗಿರುವ ಮಹತ್ತಾದ ವಾಗ್ದಾನಗಳ ನೆರವೇರಿಕೆಯನ್ನು ನಾವೆಲ್ಲರೂ ಮುನ್ನೋಡುತ್ತಿದ್ದೇವೆ. ಆದರೆ ಈಗಲೂ ನಮ್ಮ ಜೀವಿತಕ್ಕೆ ಆನಂದವನ್ನು ಕೂಡಿಸುವಂಥ ಅನೇಕ ಆಶೀರ್ವಾದಗಳನ್ನು ಯೆಹೋವನು ಸಾಧ್ಯಮಾಡುತ್ತಿದ್ದಾನೆ. ಹೀಗಿದ್ದರೂ, ನಾವು ಎಷ್ಟರ ಮಟ್ಟಿಗೆ ಆ ಆಶೀರ್ವಾದಗಳ ವೈಯಕ್ತಿಕ ಪ್ರಯೋಜನವನ್ನು ಪಡೆಯುವೆವು ಎಂಬುದು ನಾವು ಮಾಡುವ ಕಡುಪ್ರಯಾಸದ ಮೇಲೆ ಬಹಳಷ್ಟು ಅವಲಂಬಿಸಿದೆ. ಅಪೊಸ್ತಲ ಪೌಲನು ತಿಳಿಸಿದಂತೆ, “ಹೆಚ್ಚಾಗಿ ಬಿತ್ತುವವನು ಹೆಚ್ಚಾಗಿ ಕೊಯ್ಯುವನು.” (2 ಕೊರಿಂ. 9:6) ಈ ಮೂಲತತ್ತ್ವವು ಅನ್ವಯವಾಗುವ ಎರಡು ಕ್ಷೇತ್ರಗಳನ್ನು ಪರಿಗಣಿಸಿರಿ.
2 ನಮ್ಮ ವೈಯಕ್ತಿಕ ಶುಶ್ರೂಷೆ: ಸಾಕ್ಷಿಯನ್ನು ಕೊಡಲು ನಮ್ಮಿಂದ ಸಾಧ್ಯವಿರುವಾಗೆಲ್ಲ ಸುವಾರ್ತೆಯನ್ನು ಜನರೊಂದಿಗೆ ಹಂಚಿಕೊಳ್ಳುವುದು ಹೇರಳವಾದ ಪ್ರತಿಫಲಗಳನ್ನು ತರುತ್ತದೆ. (ಜ್ಞಾನೋ. 3:27, 28) ಪ್ರಶಂಸನೀಯವಾಗಿ, ಆಕ್ಸಿಲಿಯರಿ ಅಥವಾ ರೆಗ್ಯುಲರ್ ಪಯನೀಯರರನ್ನೂ ಸೇರಿಸಿ, ಇನ್ನೂ ಅನೇಕರು ಶುಶ್ರೂಷೆಯಲ್ಲಿ ತಮ್ಮ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಮೂಲಕ ಹೆಚ್ಚಾಗಿ ಬಿತ್ತುತ್ತಿದ್ದಾರೆ. ಕಂಡುಹಿಡಿಯಲ್ಪಟ್ಟ ಪ್ರತಿಯೊಂದು ಆಸಕ್ತಿಯನ್ನು ಬೆಳೆಸಲು ನಿಷ್ಠೆಯಿಂದ ಪುನರ್ಭೇಟಿಯನ್ನು ಮಾಡುವ ಮೂಲಕ ಮತ್ತು ಸಂದರ್ಭ ಸಿಕ್ಕಿದಾಗೆಲ್ಲಾ ಬೈಬಲ್ ಅಧ್ಯಯನವನ್ನು ನೀಡುವ ಮೂಲಕ ನಾವೆಲ್ಲರೂ ಹೆಚ್ಚಾಗಿ ಬಿತ್ತಸಾಧ್ಯವಿದೆ. (ರೋಮಾ. 12:11) ಈ ರೀತಿಗಳಲ್ಲಿ ನಮ್ಮನ್ನು ದುಡಿಸಿಕೊಳ್ಳುವುದು ಉತ್ತೇಜನದಾಯಕ ಅನುಭವಗಳನ್ನು ಹಾಗೂ ನಮ್ಮ ಶುಶ್ರೂಷೆಯಲ್ಲಿ ಅಧಿಕ ಸಂತೋಷವನ್ನು ಫಲಿಸುತ್ತದೆ.
3 ರಾಜ್ಯಾಭಿರುಚಿಗಳನ್ನು ಬೆಂಬಲಿಸುವುದು: ಆರ್ಥಿಕವಾಗಿ ಕೊಡುವುದರ ಸಂಬಂಧದಲ್ಲಿ ಪೌಲನು ‘ಹೆಚ್ಚಾಗಿ ಬಿತ್ತುವುದು’ ಎಂಬ ತನ್ನ ಹೇಳಿಕೆಯನ್ನು ಮಾಡಿದನು. (2 ಕೊರಿಂ. 9:6, 7, 11, 13) ಇಂದು, ರಾಜ್ಯಾಭಿರುಚಿಗಳನ್ನು ಬೆಂಬಲಿಸಲು ಶಾರೀರಿಕ ಹಾಗೂ ಆರ್ಥಿಕವಾದ ರೀತಿಯಲ್ಲಿ ನಾವು ಮಾಡಸಾಧ್ಯವಿರುವಂಥ ಬಹಳಷ್ಟು ವಿಷಯಗಳಿವೆ. ರಾಜ್ಯ ಸಭಾಗೃಹಗಳನ್ನು ಕಟ್ಟುವ ಕೆಲಸದಲ್ಲಿ ನಾವು ನೆರವು ನೀಡಸಾಧ್ಯವಿದೆ ಮತ್ತು ಸತ್ಯ ಆರಾಧನೆಗಾಗಿರುವ ಈ ಸ್ಥಳಗಳನ್ನು ಸ್ವಚ್ಛಗೊಳಿಸುವ ಹಾಗೂ ದುರಸ್ತಿ ಮಾಡುವಂತಹ ಕೆಲಸಗಳಲ್ಲಿ ನಾವು ಸ್ವಯಂಸೇವಕರಾಗಿ ಕೆಲಸಮಾಡಸಾಧ್ಯವಿದೆ. ಇದಕ್ಕೆ ಕೂಡಿಸಿ, ಸ್ಥಳಿಕ ಸಭೆಯ ಖರ್ಚುವೆಚ್ಚಗಳಿಗಾಗಿ ಮತ್ತು ಲೋಕವ್ಯಾಪಕ ರಾಜ್ಯ ಸಾರುವಿಕೆ ಹಾಗೂ ಶಿಷ್ಯರನ್ನಾಗಿ ಮಾಡುವ ಕೆಲಸಕ್ಕಾಗಿ ನಾವು ಹಣಕಾಸಿನ ನೆರವನ್ನು ಕೊಡಸಾಧ್ಯವಿದೆ. ನಾವೆಲ್ಲರೂ ನಮ್ಮ ಭಾಗವನ್ನು ಮಾಡುವಾಗ, ಈ ದೇವನಿಯಮಿತ ಕೆಲಸದ ಮೇಲೆ ಯೆಹೋವನ ಹೇರಳವಾದ ಆಶೀರ್ವಾದವನ್ನು ನೋಡಲು ನಾವು ಎಷ್ಟೊಂದು ಹರ್ಷಿಸುತ್ತೇವೆ!—ಮಲಾ. 3:10; ಲೂಕ 6:38.
4 “ಒಳ್ಳೇದನ್ನು ಮಾಡುವವರೂ ಸತ್ಕಾರ್ಯಗಳಲ್ಲಿ ಐಶ್ವರ್ಯವಂತರೂ ದಾನಧರ್ಮಗಳನ್ನು ಮಾಡುವವರೂ ಪರೋಪಕಾರಮಾಡುವವರೂ” ಆಗಿರುವಂತೆ ದೇವರ ವಾಕ್ಯವು ನಮ್ಮನ್ನು ಪ್ರೇರೇಪಿಸುತ್ತದೆ. ಆ ಬುದ್ಧಿವಾದವನ್ನು ನಾವು ಪಾಲಿಸುತ್ತಿರುವಾಗ, ಈಗಲೂ ನಾವು ಹೇರಳವಾದ ಆಶೀರ್ವಾದಗಳಲ್ಲಿ ಆನಂದಿಸುತ್ತೇವೆ. ಅದೇ ಸಮಯದಲ್ಲಿ, ನಾವು ಬರಲಿರುವ “ವಾಸ್ತವವಾದ ಜೀವವನ್ನು [ಮತ್ತು] ಮುಂದಿನ ಕಾಲಕ್ಕೆ ಒಳ್ಳೇ ಅಸ್ತಿವಾರವಾಗುವಂಥವುಗಳನ್ನು [ನಮಗೆ] ಕೂಡಿಸಿಟ್ಟು”ಕೊಳ್ಳುತ್ತೇವೆ.—1 ತಿಮೊ. 6:18, 19.