ನಾವು ಹಿಂದೆಂದೂ ಆತ್ಮಿಕವಾಗಿ ಇಷ್ಟೊಂದು ಪುಷ್ಕಳತೆಯನ್ನು ಪಡೆದಿರಲಿಲ್ಲ!
1 “ನಾವು ಹಿಂದೆಂದೂ ಇಷ್ಟೊಂದು ಪುಷ್ಕಳತೆಯನ್ನು ಪಡೆದಿರಲಿಲ್ಲ!” ಎಂದು ತಾವು ಹೇಳಸಾಧ್ಯವಿರುವ ದಿನಕ್ಕಾಗಿ ಹೆಚ್ಚಿನ ಜನರು ಹಾತೊರೆಯುತ್ತಾರೆ. ಅವರ ಮನಸ್ಸಿನಲ್ಲಿ, ಅವರನ್ನು ‘ವಿಶ್ರಮಿಸಲು, ಊಟಮಾಡಲು, ಕುಡಿಯಲು, ಮತ್ತು ಸುಖಪಡಲು’ ಅನುಮತಿಸುವ ಭೌತಿಕ ವಿಷಯಗಳ ಪುಷ್ಕಳತೆಯನ್ನು ಪಡೆಯುವಾಗ ಆ ದಿನವು ಬರುವುದು. (ಲೂಕ 12:19) ವ್ಯತಿರಿಕ್ತವಾಗಿ, ಒಂದು ಆತ್ಮಿಕ ಅರ್ಥದಲ್ಲಿ ನಾವು ಯಾವುದೇ ವಿಷಯದಲ್ಲಿ ಕೊರತೆಯುಳ್ಳವರಾಗಿಲ್ಲವೆಂದು ಈಗ ನಾವು ಹೇಳಶಕ್ತರು. (ಕೀರ್ತ. 34:10) ಅದು ಹೇಗೆ ಸಾಧ್ಯ?
2 “ಯೆಹೋವನ ಆಶೀರ್ವಾದವು—ಸಂಪದ್ಭರಿತರನ್ನಾ ಗಿಸುವುದು ಅದೇ” ಎಂದು ಜ್ಞಾನೋಕ್ತಿ 10:22 (NW) ಪ್ರಕಟಿಸುತ್ತದೆ. ಅಂಥ ದೈವಿಕ ಅನುಗ್ರಹವನ್ನು ಅನುಭವಿಸುವ ನಾವು, ದೇವರು “ನಮ್ಮ ಸಂತೋಷಕ್ಕಾಗಿ ಎಲ್ಲವನ್ನೂ ಹೇರಳವಾಗಿ ದಯಪಾಲಿಸುತ್ತಾನೆ” ಎಂದು ನಿಜವಾಗಿಯೂ ಹೇಳಬಲ್ಲೆವು. (1 ತಿಮೊ. 6:17, NW) ಇದು ನಮ್ಮನ್ನು ಭೂಮಿಯಲ್ಲೇ ಅತ್ಯಂತ ಸಂಪದ್ಭರಿತ ಜನರಾಗಿರುವಂತೆ ಮಾಡುತ್ತದೆ!
3 ನಮ್ಮ ಆಶೀರ್ವಾದಗಳನ್ನು ಗಣನೆಗೆ ತೆಗೆದುಕೊಳ್ಳುವುದು: ನಮ್ಮಲ್ಲಿ ಕೆಲವೇ ಮಂದಿಗೆ ಭೌತಿಕ ವಿಷಯಗಳ ಪುಷ್ಕಳತೆಯಿದೆ. ಆದರೂ, ನಾವು ಆಶೀರ್ವದಿತರಾಗಿದ್ದೇವೆ, ಏಕೆಂದರೆ ನಾವು ನಮ್ಮ ದೈನಂದಿನ ಆವಶ್ಯಕತೆಗಳ ಕುರಿತು ಅತಿರೇಕವಾಗಿ ಚಿಂತಿತರಾಗಿಲ್ಲ. ನಮಗೆ ಯಾವ ವಿಷಯಗಳು ಬೇಕಾಗಿವೆ ಎಂಬುದನ್ನು ಯೆಹೋವನು ತಿಳಿದಿದ್ದಾನೆ ಮತ್ತು ಅವುಗಳನ್ನು ಒದಗಿಸುವೆನೆಂದು ಆತನು ವಾಗ್ದಾನಿಸುತ್ತಾನೆ. (ಮತ್ತಾ. 6:31-33) ಆತನ ಆಶ್ವಾಸನೆಯು ನಿಜವಾಗಿಯೂ ಬೆಲೆಕಟ್ಟಲಾರದ ಮನಶ್ಶಾಂತಿಯನ್ನು ನಮಗೆ ನೀಡುತ್ತದೆ.
4 ನಮ್ಮ ಆತ್ಮಿಕ ಆಶೀರ್ವಾದಗಳಾದರೋ, ಇನ್ನೂ ಹೆಚ್ಚು ಮಹತ್ತರವಾಗಿವೆ. ನಮ್ಮ ಜೀವಿತಗಳು ಯೆಹೋವನಿಂದ ಬರುವ ಆತ್ಮಿಕ ಆಹಾರದ ಮೇಲೆ ಅವಲಂಬಿಸಿವೆ. (ಮತ್ತಾ. 4:4) ನಾವು ಆತ್ಮಿಕ ಆಹಾರವನ್ನು ಸಂತೃಪ್ತವಾಗಿ ತಿನ್ನುತ್ತಾ, ಕುಡಿಯುತ್ತಾ ಇರುವಾಗ, ಆತ್ಮಿಕ ಪೋಷಣೆಗಾಗಿ ಲೌಕಿಕ ಮೂಲಗಳನ್ನು ಹುಡುಕುವವರಾದರೋ ಹಸಿವಿನಿಂದಿರುತ್ತಾರೆ. (ಯೆಶಾ. 65:13) ನಿತ್ಯಜೀವಕ್ಕೆ ನಡೆಸುವ ಜ್ಞಾನದ ಅಕ್ಷಯವಾದ ಸರಬರಾಯಿಗೆ ಮಾರ್ಗವನ್ನು ನಮಗೆ ‘ನಂಬಿಗಸ್ತ ಆಳು’ ನೀಡುತ್ತಾನೆ.—ಮತ್ತಾ. 24:45; ಯೋಹಾ. 17:3.
5 ನಮ್ಮ ಅಮೂಲ್ಯವಾದ ಲೋಕವ್ಯಾಪಕ ಭ್ರಾತೃ
ತ್ವವು, ಭೂಮಿಯ ಪ್ರತಿಯೊಂದು ಭಾಗದಲ್ಲಿ ಜೀವಿಸುತ್ತಿರುವ ಪ್ರೀತಿಪೂರ್ವಕ ಸಹೋದರ ಸಹೋದರಿಯರ ನಲುಮೆಯ ಸಖ್ಯವನ್ನು ನಮಗೆ ಒದಗಿಸುತ್ತದೆ. (ಯೋಹಾ. 13:35) ಸ್ಥಳಿಕ ಸಭೆಯು ಶಾಂತಿಯ ಒಂದು ಸ್ಥಾನವಾಗಿದೆ; ಅಲ್ಲಿ ನಾವು ಸಾಂತ್ವನವನ್ನೂ ಚೈತನ್ಯವನ್ನೂ ಕಂಡುಕೊಳ್ಳಬಲ್ಲೆವು. ಅನೇಕ ವಿಧಗಳ ಸಮಸ್ಯೆಗಳೊಂದಿಗೆ ನಿಭಾಯಿಸಲು ನಮಗೆ ಸಹಾಯವನ್ನೀಯುತ್ತಾ, ನಮ್ಮ ಪ್ರಾಣಗಳ ಮೇಲೆ ಹಿರಿಯರು ಎಚ್ಚರಿಕೆಯನ್ನು ವಹಿಸುತ್ತಿದ್ದಾರೆ. (ಇಬ್ರಿ. 13:17) ನಮ್ಮ ಸಹೋದರರಿಗೆ ನಾವು ನಿಕಟರಾಗುವುದು, ಪಟ್ಟುಹಿಡಿಯುವಂತೆ ನಮ್ಮನ್ನು ಬಲಪಡಿಸುತ್ತಾ, ಪ್ರೋತ್ಸಾಹದ ಒಂದು ಪರಸ್ಪರ ವಿನಿಮಯದಲ್ಲಿ ಫಲಿಸುತ್ತದೆ.—ರೋಮಾ. 1:11, 12.
6 ನಮ್ಮ ಕೆಲಸವೂ ಒಂದು ಆಶೀರ್ವಾದವಾಗಿದೆ. ಅನೇಕ ಐಹಿಕ ಉದ್ಯೋಗಗಳು ಬೇಸರಗೊಳಿಸುವಂಥವೂ ಈಡೇರಿಸಲಾರದವುಗಳೂ ಆಗಿವೆ. ಸುವಾರ್ತೆಯನ್ನು ಹಂಚಿಕೊಳ್ಳುವುದು ಇತರರಿಗೆ ಹರ್ಷವನ್ನು ಮತ್ತು ನಮಗೆ ಸಂತೋಷವನ್ನು ತರುತ್ತದೆ. (ಅ. ಕೃ. 20:35) ನಮ್ಮೆಲ್ಲಾ ಕಠಿಣ ಪರಿಶ್ರಮಕ್ಕಾಗಿ ಪುಷ್ಕಳತೆಯನ್ನು ನಾವು ನಿಜವಾಗಿಯೂ ನೋಡಶಕ್ತರಾಗಿದ್ದೇವೆ.—ಪ್ರಸಂ. 2:24.
7 ಎಲ್ಲಕ್ಕಿಂತಲೂ ಮಿಗಿಲಾಗಿ, ನಮ್ಮಲ್ಲಿ ಭವಿಷ್ಯತ್ತಿಗಾಗಿ ಒಂದು ಅದ್ಭುತವಾದ ನಿರೀಕ್ಷೆಯಿದೆ. (ರೋಮಾ. 12:12) ನಾವು ಎಲ್ಲಿ ನಮ್ಮ ಪ್ರೀತಿಪಾತ್ರರೊಂದಿಗೆ ಸಂತೋಷ ಮತ್ತು ಸದಾಕಾಲಕ್ಕೂ ಶಾಂತಿಯಲ್ಲಿ ಜೀವಿಸುವೆವೋ, ಆ ನೀತಿಯ ಒಂದು ಪರಿಪೂರ್ಣ ನೂತನ ಲೋಕವನ್ನು ನಾವು ಎದುರುನೋಡುತ್ತೇವೆ! ಈ ನಿರೀಕ್ಷೆಯು, ಈ ಲೋಕವು ನೀಡುವಂಥ ಯಾವುದೇ ವಿಷಯಕ್ಕಿಂತಲೂ ಹೆಚ್ಚು ಬೆಲೆಯುಳ್ಳ ಒಂದು ನಿಧಿಯಾಗಿದೆ.—1 ತಿಮೊ. 6:19.
8 ನಾವು ನಮ್ಮ ಗಣ್ಯತೆಯನ್ನು ಹೇಗೆ ತೋರಿಸಬಲ್ಲೆವು? ನಮಗಾಗಿ ಯೆಹೋವನು ಏನು ಮಾಡಿದ್ದಾನೋ ಅದಕ್ಕಾಗಿ, ಆತನಿಗೆ ನಾವೆಂದೂ ಪ್ರತಿಯಾಗಿ ಕೊಡಲಾರೆವು. ನಾವು ನಮ್ಮ ಗಣ್ಯತೆಯನ್ನು (1) ಆತನ ಅಪಾತ್ರ ದಯೆಗಾಗಿ ಆತನಿಗೆ ಪ್ರತಿ ದಿನ ಉಪಕಾರವನ್ನು ಹೇಳುತ್ತಾ (ಎಫೆ. 5:20), (2) ವಿಧೇಯರಾಗಿರುವ ಮೂಲಕ ನಮ್ಮ ಪ್ರೀತಿಯನ್ನು ಪ್ರದರ್ಶಿಸುತ್ತಾ (1 ಯೋಹಾ. 5:3), (3) ಸುವಾರ್ತೆಯನ್ನು ಸಾರುವ ಮೂಲಕ ಆತನ ನಾಮವನ್ನು ಪವಿತ್ರೀಕರಿಸುತ್ತಾ (ಕೀರ್ತ. 83:18), ಮತ್ತು (4) ನಮ್ಮ ಮನಃಪೂರ್ವಕ ಸಹಕಾರದ ಮೂಲಕ ಕ್ರೈಸ್ತ ಸಭೆಯನ್ನು ಬೆಂಬಲಿಸುತ್ತಾ ಇರುವ ಮೂಲಕ ಮಾತ್ರ ವ್ಯಕ್ತಪಡಿಸಬಲ್ಲೆವು.—1 ತಿಮೊ. 3:15.
9 ಭೂಮಿಯಲ್ಲೇ ಅತ್ಯಂತ ಸಂತೋಷವುಳ್ಳ ಜನರಾಗಿರಲು ನಾವು ಸಂಪೂರ್ಣ ಕಾರಣವನ್ನು ಹೊಂದಿದ್ದೇವೆ. (ಕೀರ್ತ. 144:15ಬಿ) ನಮ್ಮ ಮನೋಭಾವ, ನಡತೆ, ಮತ್ತು ಸೇವೆಯು, ನಮ್ಮ ಆತ್ಮಿಕ ಪ್ರಮೋದವನದಲ್ಲಿ ನಮಗೆ ಅನಿಸುವ ಹರ್ಷವನ್ನು ಪ್ರತಿಬಿಂಬಿಸಲಿ. ನಾವು ಹಿಂದೆಂದೂ ಇಷ್ಟೊಂದು ಪುಷ್ಕಳತೆಯನ್ನು ಪಡೆದಿರಲಿಲ್ಲ!