ರಾಜ್ಯ ವಾರ್ತೆಯಲ್ಲಿನ ಆಸಕ್ತಿಯನ್ನು ಪುನಃಸಂಪರ್ಕಿಸಿರಿ
1 ಕಳೆದ ಕೆಲವೊಂದು ವಾರಗಳ ಅವಧಿಯಲ್ಲಿ, “ಜನರೆಲ್ಲರು ಎಂದಾದರೂ ಒಬ್ಬರನ್ನೊಬ್ಬರು ಪ್ರೀತಿಸುವರೊ?” ಎಂಬ ಶೀರ್ಷಿಕೆಯುಳ್ಳ ರಾಜ್ಯ ವಾರ್ತೆ ನಂ. 35ನ್ನು ವಿತರಿಸುವ ಸುಯೋಗದಲ್ಲಿ ನಾವು ಆನಂದಿಸುತ್ತಿದ್ದೇವೆ. ರಾಜ್ಯ ವಾರ್ತೆಯ ಈ ಸಂಚಿಕೆಯೊಂದಿಗೆ ಆದಷ್ಟು ಅನೇಕ ಅರ್ಹ ವ್ಯಕ್ತಿಗಳನ್ನು ತಲಪಲು ಎಲ್ಲ ಕಡೆಯಲ್ಲಿರುವ ಪ್ರಚಾರಕರು ಶ್ರಮಿಸುತ್ತಿದ್ದಾರೆ. (ಮತ್ತಾ. 10:11) ಕಾರ್ಯಾಚರಣೆಯು ಆದಿತ್ಯವಾರ, ನವೆಂಬರ್ 16ರಂದು ಅಂತ್ಯಗೊಳ್ಳಲು ನಿಗದಿಪಡಿಸಲ್ಪಟ್ಟಿರುವುದಾದರೂ, ಸಭೆಯ ಸರಬರಾಯಿಯು ಇರುವಷ್ಟರ ವರೆಗೆ ನೀವು ರಾಜ್ಯ ವಾರ್ತೆ ನಂ. 35ನ್ನು ವಿತರಿಸುತ್ತಾ ಇರುವಂತೆ ಹಿರಿಯರು ಕೇಳಿಕೊಳ್ಳಬಹುದು.
2 ರಾಜ್ಯ ವಾರ್ತೆಯ ಈ ಸಂಚಿಕೆಯು ಅನೇಕ ಜನರ ಆಸಕ್ತಿಯನ್ನು ಕೆರಳಿಸಿದೆ. ಜನಸಾಮಾನ್ಯರು ತಮ್ಮ ಸಹಜ ವಾತ್ಸಲ್ಯವನ್ನು ಕಳೆದುಕೊಂಡಿದ್ದಾರೆ ಎಂಬುದನ್ನು ಅವರು ನೋಡುತ್ತಾರೆ ಮತ್ತು ಹೀಗಿರುವುದರಿಂದ ಭವಿಷ್ಯತ್ತಿನಲ್ಲಿ ಏನು ಕಾದಿದೆ ಎಂಬುದರ ಬಗ್ಗೆ ಕುತೂಹಲಪಡುತ್ತಾರೆ. (2 ತಿಮೊ. 3:3) ಹುಟ್ಟಿಸಲ್ಪಟ್ಟಿರುವ ಆಸಕ್ತಿಯನ್ನು ನಾವು ಪುನಃಸಂಪರ್ಕಿಸಲು ಬಯಸುತ್ತೇವೆ.
3 ರಾಜ್ಯ ವಾರ್ತೆಯು ಫಲಿತಾಂಶಗಳನ್ನು ಪಡೆದುಕೊಳ್ಳುತ್ತದೆ: ರಾಜ್ಯ ವಾರ್ತೆಯ 1995ರ ಕಾರ್ಯಾಚರಣೆಯಲ್ಲಿ, ಒಂದು ಪ್ರತಿಯನ್ನು ಪಡೆದ ಮಹಿಳೆಯೊಬ್ಬಳು ರಾಜ್ಯ ಸಭಾಗೃಹದಲ್ಲಿ ನಡೆಸಲ್ಪಡುವ ಕೂಟಕ್ಕೆ ಬಂದಳು, ಏಕೆಂದರೆ ಯೆಹೋವನ ಸಾಕ್ಷಿಗಳು ಏನನ್ನು ನಂಬುತ್ತಾರೋ ಅದರ ಬಗ್ಗೆ ಹೆಚ್ಚನ್ನು ಕಲಿಯಲು ಅವಳು ಬಯಸಿದಳು. ಆ ಕೂಟದಲ್ಲಿ ಅವಳು ಸಿದ್ಧಮನಸ್ಸಿನಿಂದ ಒಂದು ಬೈಬಲ್ ಅಭ್ಯಾಸವನ್ನು ಸ್ವೀಕರಿಸಿದಳು ಹಾಗೂ ಅದರ ನಂತರ ಅವಳು ಕೂಟವನ್ನು ತಪ್ಪಿಸಿಕೊಂಡದ್ದೇ ಅಪರೂಪ. ಸ್ವಲ್ಪ ಸಮಯದಲ್ಲೇ, ಅವಳು ತನ್ನ ಹಿಂದಿನ ಚರ್ಚಿಗೆ ಪತ್ರವನ್ನು ಬರೆದು, ತನ್ನ ಸದಸ್ಯತ್ವವನ್ನು ಅಂತ್ಯಗೊಳಿಸಿದಳು!
4 ಈಗಾಗಲೇ, ಟೆರಿಟೊರಿಯಲ್ಲಿರುವ ನೂರಾರು ಜನರು ರಾಜ್ಯ ವಾರ್ತೆ ನಂ. 35ರಲ್ಲಿರುವ ಸಂದೇಶವನ್ನು ಓದಿದ್ದಾರೆ. ಆದರೆ ಅದಕ್ಕೆ ಅವರ ಪ್ರತಿಕ್ರಿಯೆ ಏನಾಗಿತ್ತು? ಅವರು ಓದಿದ ವಿಷಯದಿಂದ ಅನುಕೂಲಕರವಾಗಿ ಪ್ರಭಾವಿಸಲ್ಪಟ್ಟಿರುವುದಾದರೂ, ಯೆಹೋವನ ಸಾಕ್ಷಿಗಳಲ್ಲಿ ಒಬ್ಬರು ಪುನಃ ಅವರನ್ನು ಭೇಟಿಮಾಡುವ ತನಕ ಹೆಚ್ಚಿನವರು ಕ್ರಿಯೆಗೈಯಲಾರರು. ಹಿಂದಿರುಗಿ ಹೋಗಲು ನೀವು ಯೋಜನೆಗಳನ್ನು ಮಾಡುತ್ತಿದ್ದೀರೋ? ನಮ್ಮ ಜೊತೆಮಾನವರಿಗಾಗಿರುವ ಪ್ರೀತಿಪರ ಆಸ್ಥೆಯು ಹಾಗೆ ಮಾಡುವಂತೆ ನಮ್ಮನ್ನು ಪ್ರಚೋದಿಸಬೇಕು. ರಾಜ್ಯ ವಾರ್ತೆಯಲ್ಲಿ ಆಸಕ್ತಿಯನ್ನು ತೋರಿಸಿರುವ ಜನರೆಲ್ಲರೂ ಪುನಃ ಭೇಟಿಮಾಡಲ್ಪಡಬೇಕು.
5 ನೀವು ಹಿಂದಿರುಗಿ ಹೋದಾಗ ಏನು ಹೇಳುವಿರಿ? ರಾಜ್ಯ ವಾರ್ತೆಯಲ್ಲಿರುವ ಸಂದೇಶದ ಕಾಲೋಚಿತತೆಯ ಬಗ್ಗೆ ನೀವು ಕೆಲವೊಂದು ಹೇಳಿಕೆಗಳನ್ನು ನೀಡಿ, ಅನಂತರ ಆಲೋಚನೆಯನ್ನು ಕೆರಳಿಸುವ ಪ್ರಶ್ನೆಯೊಂದನ್ನು ಕೇಳಬಹುದು. ಮನೆಯವನು ಸ್ವತಃ ಅನಿಸಿಕೆಗಳನ್ನು ಹೇಳುವಾಗ ಜಾಗರೂಕತೆಯಿಂದ ಆಲಿಸಿರಿ. ಹೀಗೆ ಅವನ ಮನಸ್ಸಿನಲ್ಲಿ ಏನಿದೆಯೆಂಬುದನ್ನು ನೀವು ತಿಳಿದುಕೊಳ್ಳಬಲ್ಲಿರಿ. ಅನಂತರ ರಾಜ್ಯ ವಾರ್ತೆಯಲ್ಲಿ ವೈಶಿಷ್ಟ್ಯಗೊಳಿಸಲ್ಪಟ್ಟ, ಅಪೇಕ್ಷಿಸು ಬ್ರೋಷರಿನಲ್ಲಿರುವ ಸೂಕ್ತವಾದ ಅಂಶವೊಂದಕ್ಕೆ ಗಮನವನ್ನು ಸೆಳೆಯಿರಿ. ನಿಮಗೆ ಒಂದು ಅನುಕೂಲಕರವಾದ ಪ್ರತಿಕ್ರಿಯೆಯು ಸಿಗುವಲ್ಲಿ, ಆ ಕೂಡಲೇ ಬೈಬಲ್ ಅಭ್ಯಾಸವೊಂದನ್ನು ಪ್ರಾರಂಭಿಸಲು ಪ್ರಯತ್ನಿಸಿರಿ.
6 “ರಾಜ್ಯ ವಾರ್ತೆ” ನಂ. 35ರಲ್ಲಿ ಆಸಕ್ತಿ ತೋರಿಸಿದವರನ್ನು ಪುನಃಸಂಪರ್ಕಿಸಿದಾಗ ನೀವು ಪ್ರಯತ್ನಿಸಸಾಧ್ಯವಿರುವ ಕೆಲವು ಸೂಚಿತ ನಿರೂಪಣೆಗಳು ಇಲ್ಲಿವೆ:
◼ “ಇತ್ತೀಚೆಗೆ ನಿಮ್ಮಲ್ಲಿ ನಾನು ಬಿಟ್ಟುಹೋದ ಮುದ್ರಿತ ಮಾಹಿತಿಯ ಕುರಿತು ನಿಮಗೆ ಜ್ಞಾಪಕವಿರಬಹುದು. ಅದರ ಸಂದೇಶವು ಇಂದು ಮಾನವಕುಲವನ್ನು ಅನೈಕ್ಯಗೊಳಿಸುವ ಒಂದು ಮಹತ್ತ್ವದ ವಿವಾದಾಂಶವನ್ನು—ಇತರರ ಕಡೆಗಿನ ಪ್ರೀತಿಯ ಕೊರತೆಯನ್ನು—ಸೋಕುತ್ತದೆ.” ರಾಜ್ಯ ವಾರ್ತೆಯ 2ನೆಯ ಪುಟದಲ್ಲಿ “ನೆರೆಯವರ ಪ್ರೀತಿ ತಣ್ಣಗಾಗಿಹೋಗಿದೆ” ಎಂಬ ಶೀರ್ಷಿಕೆಯ ಕೆಳಗೆ ಕೊಡಲ್ಪಟ್ಟಿರುವ ಪುರಾವೆಯ ಕಡೆಗೆ ಗಮನವನ್ನು ಸೆಳೆಯಿರಿ. ಅನಂತರ “ಮಾನವಕುಲವು ಈ ರೀತಿಯಲ್ಲಿ ಜೀವಿಸಬೇಕೆಂಬುದು ದೇವರ ಉದ್ದೇಶವಾಗಿದೆ ಎಂದು ನೀವು ನೆನಸುತ್ತೀರೋ?” ಎಂದು ಕೇಳಿರಿ. ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಅಪೇಕ್ಷಿಸು ಬ್ರೋಷರಿನಲ್ಲಿರುವ ಪಾಠ 5ಕ್ಕೆ ತಿರುಗಿಸಿ, ಒಂದು ಬೈಬಲ್ ಅಭ್ಯಾಸವನ್ನು ಪ್ರಾರಂಭಿಸಲು ಪ್ರಯತ್ನಿಸಿರಿ.
◼ “ನಾವು ಮೊದಲ ಬಾರಿಗೆ ಭೇಟಿಯಾದಾಗ, ‘ಜನರೆಲ್ಲರು ಎಂದಾದರೂ ಒಬ್ಬರನ್ನೊಬ್ಬರು ಪ್ರೀತಿಸುವರೊ?’ ಎಂಬ ವಿಷಯದ ಕುರಿತ ಸ್ವಲ್ಪ ಮಾಹಿತಿಯನ್ನು ನಿಮ್ಮಲ್ಲಿ ಬಿಟ್ಟುಹೋದೆ. ಅಂಥ ಒಂದು ಲೋಕವು ಶಕ್ಯವೆಂದು ನೀವು ನೆನಸುತ್ತೀರೋ?” ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಅಪೇಕ್ಷಿಸು ಬ್ರೋಷರಿನಲ್ಲಿರುವ ಪಾಠ 6ಕ್ಕೆ ತಿರುಗಿಸಿರಿ ಹಾಗೂ ಪ್ಯಾರಗ್ರಾಫ್ 6ನ್ನು ಓದಿರಿ. ಅನಂತರ ಮೀಕ 4:3, 4ರಲ್ಲಿರುವ ದೇವರ ವಾಗ್ದಾನವನ್ನು ಓದಿರಿ. ಮನೆಯವನಿಗೆ ಆಸಕ್ತಿಯಿರುವಂತೆ ತೋರುವಲ್ಲಿ, ಬ್ರೋಷರನ್ನು ಹಾಗೂ ಒಂದು ಅಭ್ಯಾಸವನ್ನು ನೀಡಿರಿ.
◼ “ನಾನು ಕಳೆದ ಬಾರಿ ನಿಮ್ಮನ್ನು ಭೇಟಿಯಾದಾಗ, ‘ಜನರೆಲ್ಲರು ಎಂದಾದರೂ ಒಬ್ಬರನ್ನೊಬ್ಬರು ಪ್ರೀತಿಸುವರೊ?’ ಎಂಬ ಶೀರ್ಷಿಕೆಯುಳ್ಳ ವಿಷಯವನ್ನು ನಾನು ನಿಮ್ಮಲ್ಲಿ ಬಿಟ್ಟುಹೋದೆ. ಅದು ಒಂದು ಉಚಿತ ಗೃಹ ಬೈಬಲ್ ಅಭ್ಯಾಸಕ್ಕಾಗಿ ನೀಡುವಿಕೆಯನ್ನು ಒಳಗೊಂಡಿತ್ತು. ನಾವು ಉಪಯೋಗಿಸುವ ಅಭ್ಯಾಸ ನೆರವಿಯನ್ನು ನಿಮಗೆ ತೋರಿಸಲು ನಾನು ಹಿಂದಿರುಗಿ ಬಂದೆ. [ಜ್ಞಾನ ಪುಸ್ತಕವನ್ನು ತೋರಿಸಿರಿ.] ಜನರೆಲ್ಲರೂ ಒಬ್ಬರನ್ನೊಬ್ಬರು ಪ್ರೀತಿಸುವ ಸಮಯದ ಕುರಿತು ಈ ಪುಸ್ತಕವು ಸ್ಫುಟವಾಗಿ ವಿವರಿಸುತ್ತದೆ. ನಾವು ವೃದ್ಧರಾಗುವುದೂ ಸಾಯುವುದೂ ಏಕೆ? ದೇವರು ಕಷ್ಟಾನುಭವವನ್ನು ಏಕೆ ಅನುಮತಿಸುತ್ತಾನೆ? ಮೃತರಾದ ನಮ್ಮ ಪ್ರಿಯರಿಗೆ ಏನು ಸಂಭವಿಸುತ್ತದೆ? ಎಂಬುದರ ಕುರಿತಾಗಿ ನೀವು ಕುತೂಹಲಪಡಬಹುದಾದ ಇತರ ಪ್ರಶ್ನೆಗಳನ್ನು ಅದು ಉತ್ತರಿಸುತ್ತದೆ.” ನಂತರ ಹೀಗೆ ಕೇಳಿರಿ “ನಾನು ಅಭ್ಯಾಸ ಕ್ರಮವನ್ನು ಪ್ರತ್ಯಕ್ಷಾಭಿನಯಿಸಲೇ?” ನಿಮ್ಮ ನೀಡುವಿಕೆಯನ್ನು ಮನೆಯವನು ನಿರಾಕರಿಸುವಲ್ಲಿ, ಅವನು ತನ್ನಷ್ಟಕ್ಕೇ ಪುಸ್ತಕವನ್ನು ಓದಲು ಇಷ್ಟಪಡುವನೋ ಎಂದು ಅವನನ್ನು ಕೇಳಿರಿ. ಒಂದು ಪ್ರತಿಯನ್ನು ನೀಡಿರಿ. ಪುನಃ ಹಿಂದಿರುಗಲು ಯೋಜಿಸಿರಿ.
7 ರಾಜ್ಯ ವಾರ್ತೆ ನಂ. 35ರ ಸರಬರಾಯಿಯು ಮುಗಿದ ಮೆಲೆ, ತಿಂಗಳ ಉಳಿದ ಅವಧಿಯಲ್ಲಿ ನಾವು ಜ್ಞಾನ ಪುಸ್ತಕವನ್ನು ನೀಡಬಹುದು. ಮಾರ್ಚ್, ಜೂನ್ ಹಾಗೂ ನವೆಂಬರ್ 1996 ಹಾಗೂ ಜೂನ್ 1997ರ ನಮ್ಮ ರಾಜ್ಯದ ಸೇವೆಯ ಹಿಂದಿನ ಪುಟದಲ್ಲಿ ಈ ಪುಸ್ತಕಕ್ಕಾಗಿ ಸೂಚಿತ ನಿರೂಪಣೆಗಳ ಒಂದು ಸಮೃದ್ಧ ಆಯ್ಕೆಯನ್ನು ಕಂಡುಕೊಳ್ಳಸಾಧ್ಯವಿದೆ.
8 ರಾಜ್ಯ ವಾರ್ತೆಯ ಈ ವಿಶೇಷ ವಿತರಣೆಯು ಪ್ರಚಾರದ ಕಾರ್ಯದಲ್ಲಿ ನಮ್ಮ ಪ್ರಯತ್ನಗಳನ್ನು ತೀವ್ರಗೊಳಿಸುವಂತೆ ನಮ್ಮೆಲ್ಲರನ್ನು ಪ್ರಚೋದಿಸಬೇಕು. ಪರಸ್ಪರ ಪ್ರೀತಿಸಲು ಸಕಲ ಮಾನವಕುಲಕ್ಕಾಗಿರುವ ದೇವರ ಉದ್ದೇಶವನ್ನು ಕಾಣುವಂತೆ ಜನರಿಗೆ ಸಹಾಯಮಾಡುತ್ತಾ, ಈ ಕಾರ್ಯಾಚರಣೆಯು ಯೆಹೋವನ ಸಹಾಯದಿಂದ ಸಫಲಗೊಳ್ಳುವುದೆಂದು ನಾವು ನಂಬಸಾಧ್ಯವಿದೆ. ರಾಜ್ಯ ವಾರ್ತೆಯಲ್ಲಿನ ಆಸಕ್ತಿಯನ್ನು ನಾವು ಪುನಃಸಂಪರ್ಕಿಸಿದಂತೆ ನಮ್ಮ ಶ್ರದ್ಧಾಪೂರ್ವಕ ಪ್ರಯತ್ನಗಳನ್ನು ಆಶೀರ್ವದಿಸುವುದನ್ನು ಯೆಹೋವನು ಮುಂದುವರಿಸಲಿ.