ನಾವು ಕೇವಲ ಸಾರುವವರಲ್ಲ, ಬೋಧಕರಾಗಿರತಕ್ಕದ್ದು
1 “ಯೆಹೋವನ ಸಾಕ್ಷಿಗಳು ತಮ್ಮ ಸಾಕ್ಷಿಕಾರ್ಯದಿಂದ ಭೂಮಿಯನ್ನು ಅಕ್ಷರಾರ್ಥಕವಾಗಿ ಆವರಿಸಿದ್ದಾರೆ” ಎಂಬುದಾಗಿ ಗಮನಿಸಲಾಗಿದೆ. ಇದು ಹೇಗೆ ಸಾಧ್ಯವಾಗಿದೆ? ಇದು ಮಾನವ ಬಲ ಇಲ್ಲವೆ ಶಕ್ತಿಯಿಂದಲ್ಲ, ಬದಲಿಗೆ ಆತನ ಸೇವಕರ ಮೇಲೆ ಕಾರ್ಯನಡಿಸುತ್ತಿರುವ ದೇವರ ಆತ್ಮದಿಂದ—ಅವರು ತಮ್ಮ ಸಾರುವ ಹಾಗೂ ಕಲಿಸುವ ನಿಯೋಗವನ್ನು ನೆರವೇರಿಸಲು ವಿಭಿನ್ನ ಒದಗಿಸುವಿಕೆಗಳ ಉಪಯೋಗವನ್ನು ಮಾಡಿದಂತೆ—ಸಾಧ್ಯವಾಗಿದೆ.—ಜೆಕ. 4:6; ಅ. ಕೃ. 1:8.
2 ನಮ್ಮ ಸಾರುವ ಕೆಲಸವನ್ನು ಪೂರೈಸಲು, ಮುದ್ರಿತ ಪುಟವು ಒಂದು ಪರಿಣಾಮಕಾರಿಯಾದ ಸಾಧನವಾಗಿದೆ. ರಾಜ್ಯದ ಸುವಾರ್ತೆಯನ್ನು ತಿಳಿಯಪಡಿಸಲು ಸಹಾಯಮಾಡುವಂತೆ, ಅನೇಕ ವರ್ಷಗಳಿಂದ, ಕೋಟ್ಯನುಕೋಟಿ ಪುಸ್ತಕಗಳು, ಪುಸ್ತಿಕೆಗಳು, ಬ್ರೋಷರುಗಳು, ಪತ್ರಿಕೆಗಳು, ಮತ್ತು ಕಿರುಹೊತ್ತಗೆಗಳು ಯೆಹೋವನ ಸಾಕ್ಷಿಗಳಿಂದ ಮುದ್ರಿಸಲ್ಪಟ್ಟು, ವಿತರಿಸಲ್ಪಟ್ಟಿವೆ. ಸಾಹಿತ್ಯದ ಉತ್ಪಾದನೆಯು, ದಾಖಲೆಯ ಮಟ್ಟಗಳನ್ನು ತಲಪಿದೆ ಎಂಬುದನ್ನು 1997 ವರ್ಷಪುಸ್ತಕದಲ್ಲಿನ ವರದಿಗಳು ತೋರಿಸುತ್ತವೆ. ಇಂದಿನ ವರೆಗೆ, ನ್ಯೂ ವರ್ಲ್ಡ್ ಟ್ರಾನ್ಸ್ಲೇಷನ್ನ ಒಂಬತ್ತು ಕೋಟಿಗಳಿಗಿಂತಲೂ ಹೆಚ್ಚಿನ ಪ್ರತಿಗಳು ಮುದ್ರಿಸಲ್ಪಟ್ಟಿವೆ. ಅಮೆರಿಕದಲ್ಲಿ ಮುದ್ರಿಸಲ್ಪಟ್ಟ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಸಂಖ್ಯೆಯು ಒಂದು ವರ್ಷದಲ್ಲಿ 7.1 ಪ್ರತಿಶತ ಅಭಿವೃದ್ಧಿಗೊಂಡಿತು. ಜರ್ಮನಿಯಲ್ಲಿ, ಪತ್ರಿಕೆಯ ಉತ್ಪಾದನೆಯು 35 ಪ್ರತಿಶತ ವೃದ್ಧಿಗೊಂಡಿತು. ಅಲ್ಲಿ ಉತ್ಪಾದಿಸಲ್ಪಟ್ಟ ಪತ್ರಿಕೆಗಳಲ್ಲಿ ಮೂರನೆಯ ಒಂದಂಶವು, ರಷ್ಯನ್ ಕ್ಷೇತ್ರಕ್ಕಾಗಿತ್ತು. ಭಾರತದಲ್ಲಿ, 1997ನೆಯ ಸೇವಾ ವರ್ಷದಲ್ಲಿನ ಪುಸ್ತಕ ಕೊಡಿಕೆಗಳು, 1995ನೆಯ ಸೇವಾ ವರ್ಷದಲ್ಲಿನ ಪುಸ್ತಕ ಕೊಡಿಕೆಗಳಿಗಿಂತ 120 ಪ್ರತಿಶತ ಹೆಚ್ಚಾಗಿತ್ತು!
3 ಇಷ್ಟೊಂದು ಸಾಹಿತ್ಯವು ಏಕೆ ಬೇಕಾಗಿದೆ? ಜನರು ಕಂಡುಕೊಳ್ಳಲ್ಪಡುವಲ್ಲೆಲ್ಲ ಸಾಕ್ಷಿನೀಡುವಂತೆ ನಮಗೆ ಕೊಡಲಾದ ಉತ್ತೇಜನಕ್ಕೆ, ಲೋಕವ್ಯಾಪಕವಾಗಿ ಮಹತ್ತರವಾದ ಪ್ರತಿಕ್ರಿಯೆ ತೋರಿಸಲ್ಪಟ್ಟಿದೆ. ನಮ್ಮಲ್ಲಿ ಹೆಚ್ಚಿನವರು ನಮ್ಮ ಸಾಕ್ಷಿಕಾರ್ಯವನ್ನು ಸಾರ್ವಜನಿಕ ಸ್ಥಳಗಳು, ಬೀದಿಗಳು, ಮತ್ತು ವ್ಯಾಪಾರ ಟೆರಿಟೊರಿಗಳಿಗೆ ವಿಸ್ತರಿಸಿರುವುದರಿಂದ, ಒಂದಿಷ್ಟು ಆಸಕ್ತಿಯನ್ನು ತೋರಿಸುವ ಜನರಲ್ಲಿ ಬಹಳಷ್ಟು ಪ್ರಮಾಣದ ಸಾಹಿತ್ಯವು ನೀಡಲಾಗುತ್ತಿದೆ. ಇವರಲ್ಲಿ ಅನೇಕರಿಗೆ ರಾಜ್ಯದ ಸಂದೇಶವನ್ನು ಈ ಹಿಂದೆ ಕೇಳುವ ಅವಕಾಶ ಇದ್ದಿರಲಿಲ್ಲ. ಈ ಅಗತ್ಯವನ್ನು ಪೂರೈಸಲಿಕ್ಕಾಗಿ, ಶುಶ್ರೂಷೆಯ ಎಲ್ಲ ವೈಶಿಷ್ಟ್ಯಗಳಲ್ಲಿ ಉಪಯೋಗಿಸುವಂತೆ ವಿವಿಧ ಪ್ರಕಾಶನಗಳು ಸಭೆಗಳಲ್ಲಿ ಲಭ್ಯವಾಗಿವೆ.
4 ಸಾಹಿತ್ಯವನ್ನು ವಿತರಿಸುವುದರಲ್ಲಿನ ನಮ್ಮ ಗುರಿಯು ಏನಾಗಿದೆ? ನಮ್ಮ ಗುರಿಯು ಕೇವಲ ಸಾಹಿತ್ಯವನ್ನು ನೀಡುವುದಾಗಿರುವುದಿಲ್ಲ. ಶಿಷ್ಯರನ್ನಾಗಿಮಾಡುವ ಆ ನಿಯೋಗವು ಎರಡು ಅಂಶಗಳನ್ನು ಒಳಗೊಳ್ಳುತ್ತದೆ—ಸಾರುವಿಕೆ ಮತ್ತು ಕಲಿಸುವಿಕೆ. ಪ್ರಥಮವಾಗಿ, ರಾಜ್ಯವು ಮಾನವಕುಲಕ್ಕಿರುವ ಏಕಮಾತ್ರ ನಿರೀಕ್ಷೆಯೆಂಬುದನ್ನು ಜನರು ಅರಿತುಕೊಳ್ಳುವಂತೆ ಮಾಡುತ್ತಾ, ರಾಜ್ಯದ ಸುವಾರ್ತೆಯನ್ನು ಸಾರುವ ಸುಯೋಗ ನಮಗಿದೆ. (ಮತ್ತಾ. 10:7; 24:14) ಇತರರಲ್ಲಿ ಆಸಕ್ತಿಯನ್ನು ಕೆರಳಿಸುವ ಮತ್ತು ರಾಜ್ಯದ ಕುರಿತಾದ ಜ್ಞಾನವನ್ನು ನೀಡುವರೆ, ನಮ್ಮ ಬೈಬಲಾಧಾರಿತ ಸಾಹಿತ್ಯವು ದೀರ್ಘ ಸಮಯದಿಂದ ಪರೀಕ್ಷಿಸಲ್ಪಟ್ಟ ಹಾಗೂ ಪರಿಣಾಮಕಾರಿಯಾದ ಸಾಧನವಾಗಿದೆ.
5 ಎರಡನೆಯದಾಗಿ, ನಾವು ಶಿಷ್ಯರನ್ನು ಮಾಡಬೇಕಾದರೆ, ಯೇಸು ಆಜ್ಞಾಪಿಸಿದ ಎಲ್ಲ ವಿಷಯಗಳನ್ನು ನಾವು ಕಲಿಸಬೇಕು. (ಮತ್ತಾ. 11:1; 28:19, 20) ವಿದ್ಯಾರ್ಥಿಗಳು ಶಿಷ್ಯರಾಗುವಂತೆ ಅವರಿಗೆ ಸಹಾಯಮಾಡುತ್ತಾ, ಸತ್ಯವು ಅವರ ಹೃದಯಕ್ಕೆ ನಾಟುವಂತೆ ಬೋಧಿಸುವುದರಲ್ಲಿಯೂ ಸಾಹಿತ್ಯವು ಒಂದು ಪ್ರಾಮುಖ್ಯ ಪಾತ್ರವನ್ನು ವಹಿಸುತ್ತದೆ.
6 ಸಾಹಿತ್ಯವನ್ನು ಸ್ವೀಕರಿಸುವವರು ‘ವಾಕ್ಯವನ್ನು ಕೇಳುವವರು’ ಆಗಿರಬಹುದು, ಆದರೆ ಅವರಿಗೆ ಯಾರೂ ಸಹಾಯಮಾಡದಿದ್ದಲ್ಲಿ ಅವರು ವಾಕ್ಯದ ಪ್ರಕಾರ ಮಾಡುವವರಾಗುವುದು ಅಸಂಭವ. (ಯಾಕೋ. 1:22-25) ಯಾರ ಮಾರ್ಗದರ್ಶನವೂ ಇಲ್ಲದೆ ಶಿಷ್ಯರಾಗುವವರು ಕೆಲವರೇ ಸರಿ. (ಅ. ಕೃ. 8:30, 31) ಶಾಸ್ತ್ರಗಳಲ್ಲಿ ಕಂಡುಕೊಳ್ಳಲ್ಪಡುವ ಸತ್ಯವನ್ನು ತಮಗೆ ರುಜುಪಡಿಸಲು ಸಹಾಯಮಾಡುವಂತೆ ಅವರಿಗೆ ಒಬ್ಬ ಬೋಧಕನ ಅಗತ್ಯವಿದೆ. (ಅ. ಕೃ. 17:2, 3) ಅವರು ಸಮರ್ಪಣೆ ಮತ್ತು ದೀಕ್ಷಾಸ್ನಾನದ ಹಂತದ ವರೆಗೆ ಪ್ರಗತಿಮಾಡುವಂತೆ ಸಹಾಯಮಾಡುವುದು ಮತ್ತು ಇತರರಿಗೆ ಕಲಿಸಲು ಅವರು ಸಾಕಷ್ಟು ಅರ್ಹರಾಗುವಂತೆ ಅವರಿಗೆ ತರಬೇತು ನೀಡುವುದು ನಮ್ಮ ಗುರಿಯಾಗಿದೆ.—2 ತಿಮೊ. 2:2.
7 ಹೆಚ್ಚಿನ ಬೋಧಕರ ಅತ್ಯಧಿಕ ಅಗತ್ಯವಿದೆ: ನಾವು ಸಾರುವಾಗ, ಸುವಾರ್ತೆಯನ್ನು ಬಹಿರಂಗವಾಗಿ ಪ್ರಕಟಪಡಿಸುತ್ತೇವೆ. ಕಲಿಸುವಿಕೆಯಾದರೊ, ಯಾರಾದರೊಬ್ಬರಿಗೆ ಪ್ರಗತಿಪರವಾಗಿ ಉಪದೇಶಿಸುವುದನ್ನು ಒಳಗೊಳ್ಳುತ್ತದೆ. ಸಾರುವಿಕೆಯು ಇತರರು ರಾಜ್ಯದ ಸಂದೇಶವನ್ನು ಅರಿತುಕೊಳ್ಳುವಂತೆ ಮಾಡುವಾಗ, ಕಲಿಸುವಿಕೆಯು ಜನರು ಸುವಾರ್ತೆಯನ್ನು ಸ್ವೀಕರಿಸಿ, ಅದಕ್ಕನುಗುಣವಾಗಿ ಕಾರ್ಯಮಾಡುವಂತೆ ಸಹಾಯಮಾಡುತ್ತದೆ. (ಲೂಕ 8:15) ಬೋಧಕನೊಬ್ಬನು ಘೋಷಿಸುವುದಕ್ಕಿಂತಲೂ ಹೆಚ್ಚಿನದ್ದನ್ನು ಮಾಡುತ್ತಾನೆ; ಅವನು ವಿವರಿಸುತ್ತಾನೆ, ಒಳ್ಳೆಯ ವಾದಸರಣಿಯಿಂದ ವಿವೇಚಿಸುತ್ತಾನೆ, ಪುರಾವೆಗಳನ್ನು ನೀಡುತ್ತಾನೆ ಮತ್ತು ಮನಗಾಣಿಸುತ್ತಾನೆ.
8 ನಮ್ಮಲ್ಲಿ ಸಾಧ್ಯವಾದಷ್ಟು ಹೆಚ್ಚು ಜನರು, ಕೇವಲ ಸಾರುವವರಲ್ಲ, ಬೋಧಕರಾಗಿರತಕ್ಕದ್ದು. (ಇಬ್ರಿ. 5:12ಎ) ಸಾಹಿತ್ಯವನ್ನು ವಿತರಿಸುವುದು ನಮ್ಮ ಕೆಲಸದ ಅತ್ಯಾವಶ್ಯಕ ಭಾಗವಾಗಿದೆ, ಆದರೆ ನಮ್ಮ ಶುಶ್ರೂಷೆಯ ಎರಡನೆಯ ಹೇತುವನ್ನು ಸಾಧಿಸುವುದು, ಕಟ್ಟಕಡೆಗೆ ನಾವು ಬೋಧಕರೋಪಾದಿ ಏನನ್ನು ಮಾಡುತ್ತೇವೊ ಅದರ ಮೇಲೆ ಅವಲಂಬಿಸುತ್ತದೆ. ನಾವು ಸಾಹಿತ್ಯವನ್ನು ನೀಡಲು ಶಕ್ತರಾದಾಗ ಸಂತೋಷಪಡಸಾಧ್ಯವಿದೆಯಾದರೂ, ನಮ್ಮ ಶುಶ್ರೂಷೆಯನ್ನು ಸಂಪೂರ್ಣವಾಗಿ ನೆರವೇರಿಸಲು, ಕೊಡಿಕೆಯೊಂದನ್ನು ನಮ್ಮ ಅಂತಿಮ ಗುರಿಯಾಗಿ ನಾವು ವೀಕ್ಷಿಸಬಾರದು. (2 ತಿಮೊ. 4:5) ಕೊಡಿಕೆಗಳು, ಇತರರಿಗೆ ಸತ್ಯವನ್ನು ಕಲಿಸುವರೆ ಅವಕಾಶಗಳ ಬಾಗಿಲನ್ನು ತೆರೆಯುವ ಒಂದು ಪರಿಣಾಮಕಾರಿ ಮಾಧ್ಯಮವಾಗಿದೆ.
9 ಬೈಬಲ್ ಅಧ್ಯಯನಗಳನ್ನು ಆರಂಭಿಸಲು ಪುನರ್ಭೇಟಿಗಳನ್ನು ಮಾಡಿರಿ: ಪುನರ್ಭೇಟಿಗಳ ಒಂದು ಪಟ್ಟಿಯನ್ನು ಸಂಕಲಿಸುತ್ತಾ, ನಮ್ಮಲ್ಲಿ ಎಲ್ಲರೂ ಬಹುಶಃ ಬಹಳಷ್ಟು ಪುಸ್ತಕಗಳು, ಬ್ರೋಷರುಗಳು, ಮತ್ತು ಪತ್ರಿಕೆಗಳನ್ನು ನೀಡಿದ್ದೇವೆ. ಆಸಕ್ತಿಯನ್ನು ಕೆರಳಿಸಲು ಹಿಂದಿರುಗಿಹೋಗುವಂತೆ ನಾವು ಒಂದು ನಿಗದಿತ ಸಮಯವನ್ನು ಶೆಡ್ಯೂಲ್ ಮಾಡಬೇಕು. ಹಿಂದಿರುಗಿ ಹೋಗುವುದರಲ್ಲಿನ ನಮ್ಮ ಮುಖ್ಯ ಉದ್ದೇಶವು, ಕೇವಲ ಹೆಚ್ಚಿನ ಸಾಹಿತ್ಯವನ್ನು ನೀಡುವುದಾಗಿರುವುದಿಲ್ಲ, ಬದಲಿಗೆ ಜನರು ಓದುವಂತೆ ಮತ್ತು ಅವರಲ್ಲಿ ಈಗಾಗಲೇ ಇರುವಂತಹ ವಿಷಯದಿಂದ ಪ್ರಯೋಜನಪಡೆದುಕೊಳ್ಳುವಂತೆ ಉತ್ತೇಜಿಸುವುದಾಗಿದೆ. ನಾವು ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳುವಂತೆ ನಮಗೆ ಸಹಾಯಮಾಡಲು ಯಾರಾದರೊಬ್ಬರು ಸತತವಾಗಿ ಹಿಂದಿರುಗಿ ಬರದಿರುತ್ತಿದ್ದರೆ, ನಾವು ಸ್ವತಃ ಎಷ್ಟೊಂದು ಆತ್ಮಿಕ ಪ್ರಗತಿಯನ್ನು ಮಾಡಿದ್ದಿರುತ್ತಿದ್ದೆವು?—ಯೋಹಾ. 17:3.
10 ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಎಂಬ ಬ್ರೋಷರಿಂದಾಗಲಿ ಇಲ್ಲವೆ ನಿತ್ಯಜೀವಕ್ಕೆ ನಡೆಸುವ ಜ್ಞಾನ ಎಂಬ ಪುಸ್ತಕದಿಂದಾಗಲಿ ಒಂದು ಬೈಬಲ್ ಅಧ್ಯಯನವನ್ನು ಆರಂಭಿಸುವ ದೃಷ್ಟಿಕೋನದಿಂದ ಎಲ್ಲ ಆಸಕ್ತಿಯನ್ನು ಮುಂದುವರಿಸಿಕೊಂಡು ಹೋಗಿರಿ. ಈ ಎರಡು ಪ್ರಕಾಶನಗಳು, ಸರಳವಾಗಿ ಅರ್ಥಮಾಡಿಕೊಳ್ಳುವಂತಹ ವಿಧದಲ್ಲಿ ರಾಜ್ಯದ ಸಂದೇಶವನ್ನು ಪ್ರಸ್ತುತಪಡಿಸುತ್ತವೆ. ಬೈಬಲಿನ ಮೂಲಭೂತ ಬೋಧನೆಗಳನ್ನು ಆವರಿಸುತ್ತಾ, ಅಪೇಕ್ಷಿಸು ಬ್ರೋಷರ್ ಸಂಪೂರ್ಣವಾದ ಅಧ್ಯಯನ ಕ್ರಮವನ್ನು ಪಡೆದಿರುತ್ತದೆ. ಸತ್ಯವನ್ನು ಹೆಚ್ಚು ಸವಿಸ್ತಾರವಾಗಿ—ಆದರೂ ಸರಳತೆ, ಸ್ಪಷ್ಟತೆ, ಮತ್ತು ಸಂಕ್ಷಿಪ್ತತೆಯಿಂದ—ಕಲಿಸಲು ಜ್ಞಾನ ಪುಸ್ತಕವು ಒಬ್ಬನನ್ನು ಶಕ್ತಗೊಳಿಸುತ್ತದೆ.
11 ಜೂನ್ 1996ರ ನಮ್ಮ ರಾಜ್ಯದ ಸೇವೆಯ ಪುರವಣಿಯಲ್ಲಿ ವಿವರಿಸಲ್ಪಟ್ಟಂತೆ, ಸರಳೀಕರಿಸಲ್ಪಟ್ಟ ಕಲಿಸುವ ಕಾರ್ಯಕ್ರಮವು ಉಪದೇಶಿಸಲಿಕ್ಕಾಗಿ ಬೋಧಕನಿಗೆ ಮತ್ತು ಕಲಿಯಲಿಕ್ಕಾಗಿ ವಿದ್ಯಾರ್ಥಿಗೆ ಸುಲಭವನ್ನಾಗಿ ಮಾಡುತ್ತದೆ. ಪರಿಣಾಮಕಾರಿಯಾಗಿ ರುಜುವಾಗಿರುವ ಕಲಿಸುವ ವಿಧಾನಗಳು ಹಾಗೂ ತಂತ್ರಗಳನ್ನು ಪುನರ್ವಿಮರ್ಶಿಸಲಿಕ್ಕಾಗಿ ಸುಲಭವಾಗಿ ದೊರೆಯುವಂತೆ ಆ ಪುರವಣಿಯ ಒಂದು ಪ್ರತಿಯನ್ನು ಇಟ್ಟುಕೊಳ್ಳಿರಿ. ಅದು ನೀಡುವ ಸೂಚನೆಗಳಲ್ಲಿ ಕೆಲವು, ವಿದ್ಯಾರ್ಥಿಯಲ್ಲಿ ಯಥಾರ್ಥವಾದ ವೈಯಕ್ತಿಕ ಆಸಕ್ತಿಯನ್ನು ಹೇಗೆ ತೆಗೆದುಕೊಳ್ಳುವುದು, ಒಂದು ಅಧ್ಯಯನಾವಧಿಯಲ್ಲಿ ಎಷ್ಟು ವಿಷಯವನ್ನು ಆವರಿಸಬೇಕು, ವಿಷಯಕ್ಕೆ ಸಂಬಂಧಿಸದ ಪ್ರಶ್ನೆಗಳನ್ನು ಹೇಗೆ ನಿರ್ವಹಿಸಬೇಕು, ಅಧ್ಯಯನಕ್ಕಾಗಿ ಬೋಧಕನೂ ವಿದ್ಯಾರ್ಥಿಯೂ ಹೇಗೆ ಮುಂಚಿತವಾಗಿ ತಯಾರಿಸಬೇಕು, ಮತ್ತು ವಿದ್ಯಾರ್ಥಿಯನ್ನು ಯೆಹೋವನ ಸಂಸ್ಥೆಗೆ ಹೇಗೆ ನಿರ್ದೇಶಿಸುವುದೆಂಬ ವಿಷಯಗಳು ಒಳಗೊಂಡಿವೆ. ಆ ಸೂಚನೆಗಳನ್ನು ಅನುಸರಿಸುವ ಮೂಲಕ, ನಮ್ಮಲ್ಲಿ ಹೆಚ್ಚಿನವರು, ಹೊಸಬರನ್ನು ಸೇರಿಸಿ, ಪ್ರಗತಿಪರ ಅಧ್ಯಯನಗಳನ್ನು ನಡೆಸಲು ಶಕ್ತರಾಗಿರುವೆವು.
12 ಕ್ಷೇತ್ರದಿಂದ ಬಂದ ಉತ್ತಮ ಫಲಿತಾಂಶದ ವರದಿಗಳು: ಶಿಷ್ಯರನ್ನಾಗಿ ಮಾಡುವ ಪ್ರಕ್ರಿಯೆಯನ್ನು ವೇಗಗೊಳಿಸುವುದರಲ್ಲಿ ಅಪೇಕ್ಷಿಸು ಬ್ರೋಷರ್ ಮತ್ತು ಜ್ಞಾನ ಪುಸ್ತಕವು ಅಮೂಲ್ಯವಾದ ಸಹಾಯಕಗಳಾಗಿ ಪರಿಣಮಿಸಿವೆ. ಅಪೇಕ್ಷಿಸು ಬ್ರೋಷರನ್ನು ಪಡೆದ ತಕ್ಷಣ ಬೊಲಿವಿಯದಲ್ಲಿನ ಒಬ್ಬ ಸಹೋದರನು, ಒಬ್ಬ ವ್ಯಕ್ತಿಯೊಂದಿಗೆ ಅಧ್ಯಯನವೊಂದನ್ನು ಆರಂಭಿಸಲು ಅದನ್ನು ತತ್ಕ್ಷಣ ಉಪಯೋಗಿಸಿದನು. ನಾಲ್ಕು ತಿಂಗಳುಗಳ ಬಳಿಕ ಈ ವಿದ್ಯಾರ್ಥಿಯು, ಜಿಲ್ಲಾ ಅಧಿವೇಶನದಲ್ಲಿ ದೀಕ್ಷಾಸ್ನಾನಕ್ಕಾಗಿ ನೆರೆದುಬಂದಿದ್ದ ಆನಂದಿತ ಅಭ್ಯರ್ಥಿಗಳಲ್ಲಿ ಒಬ್ಬನಾಗಿದ್ದನು!
13 ಜ್ಞಾನ ಪುಸ್ತಕದಲ್ಲಿನ ತಮ್ಮ ಅಧ್ಯಯನವನ್ನು ಮುಗಿಸಿದ ಬಳಿಕ, ಅನೇಕರು ತಮ್ಮ ಜೀವಿತಗಳನ್ನು ಯೆಹೋವನಿಗೆ ಸಮರ್ಪಿಸಿಕೊಳ್ಳುವಂತೆ ಪ್ರಚೋದಿಸಲ್ಪಟ್ಟಿದ್ದಾರೆ. ಅಂಗೋಲದಲ್ಲಿನ ಒಂದು ಸಭೆಯಲ್ಲಿ, ಪ್ರಚಾರಕರಿಂದ ನಡೆಸಲ್ಪಡುವ ಬೈಬಲ್ ಅಧ್ಯಯನಗಳ ಸಂಖ್ಯೆಯು 190ರಿಂದ 260ಕ್ಕೆ ಏರಿತು ಮತ್ತು ಆ ಕ್ಷೇತ್ರದಲ್ಲಿ ಜ್ಞಾನ ಪುಸ್ತಕವನ್ನು ಉಪಯೋಗಿಸಲು ಆರಂಭಮಾಡಿದ ನಾಲ್ಕು ತಿಂಗಳುಗಳಲ್ಲಿಯೇ, ಕೂಟದ ಹಾಜರಿಯು 180ರಿಂದ 360ಕ್ಕೆ ಇಮ್ಮಡಿಗೊಂಡಿತು. ಇದಾದ ಸ್ವಲ್ಪದರಲ್ಲೇ, ಮತ್ತೊಂದು ಸಭೆಯನ್ನು ರಚಿಸುವುದು ಅನಿವಾರ್ಯವಾಯಿತು.
14 ಜ್ಞಾನ ಪುಸ್ತಕದಲ್ಲಿನ ತನ್ನ ಪ್ರಥಮ ಅಧ್ಯಯನವನ್ನು ಆರಂಭಿಸಿದ ಬಳಿಕ, ಒಬ್ಬ ಸಹೋದರನು ಹೇಳಿದ್ದೇನೆಂದರೆ, “ಅಧ್ಯಯನ ನಡೆಸುವವನು ಕೇವಲ ಪ್ರಶ್ನೆಗಳನ್ನು ಕೇಳಿ, ಅನ್ವಯವಾಗುವ ಕೆಲವು ವಚನಗಳನ್ನು ಓದಿ, ವಿದ್ಯಾರ್ಥಿಯು ಅರ್ಥಮಾಡಿಕೊಳ್ಳುತ್ತಾನೆಂಬುದನ್ನು ಖಚಿತಮಾಡಿಕೊಂಡರೆ” ಅದನ್ನು ನಡೆಸುವುದು “ಸರಳ” ಎಂದು ಹೇಳಿದನು. ಬಹಳಷ್ಟು ಅರ್ಹರಾದ ಪ್ರಚಾರಕರು ಮಾತ್ರ ಪ್ರಗತಿಪರ ಬೈಬಲ್ ಅಧ್ಯಯನಗಳನ್ನು ನಡೆಸಸಾಧ್ಯವಿದೆಯೆಂದು ಹಾಗೂ ಅದನ್ನು ತಾನೆಂದಿಗೂ ಮಾಡಸಾಧ್ಯವಿಲ್ಲವೆಂದು ಅವನು ಯಾವಾಗಲೂ ನೆನಸಿದನಾದರೂ, ಅವನಿಗೆ ಅದನ್ನು ಮಾಡಸಾಧ್ಯವೆಂಬುದನ್ನು ಅವನು ಗ್ರಹಿಸಿ, “ನನಗೆ ಮಾಡಸಾಧ್ಯವಾದರೆ, ಯಾರಿಗಾದರೂ ಅದನ್ನು ಮಾಡಸಾಧ್ಯವಿದೆ” ಎಂಬುದಾಗಿ ಹೇಳಿದನು.
15 ನಮ್ಮ ಶುಶ್ರೂಷೆಯ ಭಾಗದೋಪಾದಿ ಬೈಬಲ್ ಅಧ್ಯಯನಗಳನ್ನು ನಡೆಸುವ ಮೂಲಕ ನಾವು ಶಿಷ್ಯರನ್ನಾಗಿ ಮಾಡುವ ಗುರಿಯನ್ನು ಮುಟ್ಟುತ್ತೇವೆ. ಶುಶ್ರೂಷೆಯ ಈ ವಿಧದಲ್ಲಿ ಭಾಗವಹಿಸುವ ಸಾಮರ್ಥ್ಯವನ್ನು ಯಾರು ವಿಕಸಿಸಿಕೊಂಡಿದ್ದಾರೊ ಅವರು ಅದನ್ನು ನಿಜವಾಗಿಯೂ ತೃಪ್ತಿಕರವಾಗಿ ಹಾಗೂ ಪ್ರತಿಫಲದಾಯಕವಾದದ್ದಾಗಿ ಕಂಡುಕೊಳ್ಳುತ್ತಾರೆ. ನಾವು ಕೂಡ “ಯಾವ ಅಡ್ಡಿಯೂ ಇಲ್ಲದೆ ತುಂಬಾ ಧೈರ್ಯದಿಂದ ದೇವರ ರಾಜ್ಯವನ್ನು ಪ್ರಸಿದ್ಧಿಪಡಿಸುತ್ತಾ ಕರ್ತನಾದ ಯೇಸು ಕ್ರಿಸ್ತನ ವಿಷಯವಾಗಿ ಉಪದೇಶಮಾಡುತ್ತಾ” ಇದ್ದೇವೆ ಎಂಬುದಾಗಿ ನಮ್ಮ ವಿಷಯದಲ್ಲಿಯೂ ಹೇಳುವಂತಾಗಲಿ.—ಅ. ಕೃ. 28:31.