ನೀವು ಪವಿತ್ರ ವಿಷಯಗಳನ್ನು ಗಣ್ಯಮಾಡುತ್ತೀರೊ?
1 ನೀವು ಪವಿತ್ರ ವಿಷಯಗಳನ್ನು ಗಣ್ಯಮಾಡುತ್ತೀರೋ ಎಂದು ಯಾರಾದರೂ ನಮಗೆ ಕೇಳುವಲ್ಲಿ, ನಾವು ಕೂಡಲೇ ‘ಹೌದು’ ಎಂದು ಉತ್ತರ ಕೊಡಬಹುದು. ಆದರೆ ನಾವು ಗಣ್ಯಮಾಡುವ ದೇವರ ಪವಿತ್ರ ಒದಗಿಸುವಿಕೆಗಳಲ್ಲಿ ಕೆಲವು ಯಾವುವು?
2 ನಮ್ಮ ಸ್ವರ್ಗೀಯ ತಂದೆಯು, ನಾವು ಆತನೊಂದಿಗೆ ವೈಯಕ್ತಿಕ ಸಂಬಂಧವನ್ನು ಇಟ್ಟುಕೊಳ್ಳುವ ಅವಕಾಶವನ್ನು ನಮಗೆ ಕೊಟ್ಟಿದ್ದಾನೆ. ಈ ಸಂಬಂಧವು ನಮಗೆಷ್ಟು ಪ್ರಿಯವಾದದ್ದಾಗಿದೆ! ನಾವು ‘ಆತನ ಸಮೀಪಕ್ಕೆ ಬಂದರೆ, ಆತನು ನಮ್ಮ ಸಮೀಪಕ್ಕೆ ಬರುವನು’ ಎಂದು ದೇವರು ನಮಗೆ ಆಶ್ವಾಸನೆಯನ್ನು ಕೊಡುತ್ತಾನೆ. (ಯಾಕೋ. 4:8) ಅಷ್ಟುಮಾತ್ರವಲ್ಲದೆ, ಯೇಸು ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞವು ಇಲ್ಲದಿರುತ್ತಿದ್ದಲ್ಲಿ, ನಮ್ಮಲ್ಲಿ ಯಾವ ಮನುಷ್ಯನೂ ನಿತ್ಯ ಜೀವವನ್ನು ಪಡೆಯಲು ಸಾಧ್ಯವಿರುತ್ತಿರಲಿಲ್ಲ. (ಯೋಹಾ. 3:16) ಹೃದಯದಾಳದಿಂದ ಹೊಮ್ಮುವ ಕೃತಜ್ಞತೆಯಿಂದ, ದೇವರ ಈ ಅತ್ಯಮೂಲ್ಯವಾದ ಉಡುಗೊರೆಗಾಗಿ ನಾವು ದಿನಾಲೂ ಪ್ರಾರ್ಥನೆಯಲ್ಲಿ ಆಳವಾದ ಗಣ್ಯತೆಯನ್ನು ವ್ಯಕ್ತಪಡಿಸುತ್ತೇವೆ.
3 ದೇವರ ಪ್ರೇರಿತ ವಾಕ್ಯವಾದ ಬೈಬಲ್ ಪವಿತ್ರವಾಗಿರುವಂತೆಯೇ, ಯೆಹೋವನ ಭೂಸಂಸ್ಥೆಯು ಸಹ ನಮಗೆ ಪವಿತ್ರವಾಗಿದೆ. ಯೆಹೋವನ ಈ ಒದಗಿಸುವಿಕೆಗಳಿಗಾಗಿ ನಾವು ಹೇಗೆ ತಕ್ಕದಾದ ಗಣ್ಯತೆಯನ್ನು ತೋರಿಸಬಹುದು? ಬೈಬಲ್ ತತ್ತ್ವಗಳಿಗನುಸಾರ ಜೀವಿಸುವ ಮೂಲಕ, ಸಹೋದರ ಪ್ರೀತಿಯ ಬಂಧಗಳನ್ನು ಬಲಪಡಿಸುವ ಮೂಲಕ, ದೇವಪ್ರಭುತ್ವ ವ್ಯವಸ್ಥೆಗನುಸಾರ ನಡೆಯುವ ಮೂಲಕ ಮತ್ತು ಮುಂದಾಳತ್ವ ವಹಿಸುವವರೊಂದಿಗೆ ಸಹಕರಿಸುವ ಮೂಲಕವೇ.—1 ಪೇತ್ರ 1:22.
4 ನಂಬಿಗಸ್ತನೂ ವಿವೇಕಿಯೂ ಆದ ಆಳು ವರ್ಗದ ಮೂಲಕ, ನಮಗೆ ಹೇರಳವಾದ ಆತ್ಮಿಕ ಆಹಾರವು ಸಿಗುತ್ತದೆ. ಮತ್ತು ಈ ವರ್ಷದ “ದೇವರ ವಾಕ್ಯದ ಪ್ರಕಾರ ನಡೆಯುವವರು” ಎಂಬ ಜಿಲ್ಲಾ ಅಧಿವೇಶನದಲ್ಲೂ ಇದು ಸಿಗುವುದು. ಈ ಅಧಿವೇಶನದಲ್ಲಿ ನಮಗೆ ಅತ್ಯಾವಶ್ಯಕವಾಗಿರುವ ಉಪದೇಶವು ಸಿಗುವುದು ಮತ್ತು ಇಂದು ನಮಗೆ ತುಂಬ ಅಗತ್ಯವಾಗಿರುವ ಪ್ರೀತಿಯ ಸಾಹಚರ್ಯದಲ್ಲಿ ಆನಂದಿಸಲು ಸಾಧ್ಯವಾಗುವುದು. ಈ ಪವಿತ್ರವಾದ ಒದಗಿಸುವಿಕೆಗಾಗಿ ನಾವು ನಮ್ಮ ಹೃತ್ಪೂರ್ವಕ ಗಣ್ಯತೆಯನ್ನು ಹೇಗೆ ತೋರಿಸಬಹುದು?
5 ಯೆಹೋವನ ಆಲಯವನ್ನು ಅಲಕ್ಷ್ಯಮಾಡಬೇಡಿ: ಯೆರೂಸಲೇಮಿನ ಗೋಡೆಗಳನ್ನು ಕಟ್ಟಲಿಕ್ಕಾಗಿ ಹಗಲೂರಾತ್ರಿ ಕಷ್ಟಪಟ್ಟು ದುಡಿದವರಿಗೆ ನೆಹಮೀಯನು, ‘ದೇವರ ಆಲಯವನ್ನು ಅಲಕ್ಷ್ಯಮಾಡಬೇಡಿ’ ಎಂದು ಉತ್ತೇಜಿಸಿದನು. (ನೆಹೆ. 10:39) ಇಂದು ಯೆಹೋವನ ‘ಆಲಯವು’, ಆರಾಧನೆಗಾಗಿರುವ ಆತನ ಏರ್ಪಾಡಾಗಿದೆ. ನಮ್ಮ ಜಿಲ್ಲಾ ಅಧಿವೇಶನಗಳು ಆ ಏರ್ಪಾಡಿನ ಒಂದು ಭಾಗವಾಗಿವೆ. ಮತ್ತು ನಾವು ಆ ಏರ್ಪಾಡನ್ನು ಅಲಕ್ಷ್ಯಮಾಡದೇ ಇರಬೇಕಾದರೆ, ಅಲ್ಲಿ ನಾವು ಹಾಜರಿರಲೇಬೇಕು ಮತ್ತು ಚೆನ್ನಾಗಿ ಕಿವಿಗೊಡಬೇಕು. ಹೀಗೆ ಮಾಡುವ ಮೂಲಕ, ನಾವು ಯೆಹೋವನ ಏರ್ಪಾಡುಗಳನ್ನು ತುಂಬ ಗಣ್ಯಮಾಡುತ್ತೇವೆಂದು ತೋರಿಸಬಹುದು. (ಇಬ್ರಿ. 10:24, 25) ಈ ಪವಿತ್ರವಾದ ಸಂದರ್ಭವನ್ನು ಗಣ್ಯಮಾಡುತ್ತೇವೆಂದು ತೋರಿಸಲಿಕ್ಕಾಗಿ ನಾವು ಈಗಲೇ ಯಾವ ಯೋಜನೆಗಳನ್ನು ಮಾಡಬೇಕು?
6 ಮೂರು ದಿನಗಳೂ ಹಾಜರಾಗಿ: ನಮ್ಮಲ್ಲಿ ಪ್ರತಿಯೊಬ್ಬರೂ, ಅಧಿವೇಶನದ ಮೂರೂ ದಿನ ಹಾಜರಿರಲು ಏರ್ಪಾಡು ಮಾಡಬೇಕು. ಪ್ರತಿ ದಿನ ಸ್ವಲ್ಪ ಬೇಗನೆ ಬಂದು, ಭಾನುವಾರದ ಮುಕ್ತಾಯದ ಪ್ರಾರ್ಥನೆಯ ವರೆಗೆ ಇಡೀ ಕಾರ್ಯಕ್ರಮಕ್ಕಾಗಿ ಹಾಜರಿರಲು ನೀವು ಯೋಜನೆಗಳನ್ನು ಮಾಡುತ್ತಿದ್ದೀರೊ? ನೀವು ಹಾಗೆ ಮಾಡುತ್ತಿರುವಲ್ಲಿ, ಹೇರಳವಾದ ಆಶೀರ್ವಾದಗಳು ನಿಮ್ಮದಾಗುವವು. ಒಂದು ಅಧಿವೇಶನಕ್ಕೆ ಹಾಜರಾಗುವುದು ಯಾವಾಗಲೂ ಸುಲಭವಾದ ಕೆಲಸವಾಗಿರಲಿಕ್ಕಿಲ್ಲ. ನೀವು ನಿಮ್ಮ ಕೆಲಸದಿಂದ ರಜೆಯನ್ನು ತೆಗೆದುಕೊಳ್ಳುವುದಕ್ಕಾಗಿ ಒಂದು ದೃಢವಾದ ನಿಲುವನ್ನು ತೆಗೆದುಕೊಳ್ಳಬೇಕಾಗಬಹುದು. ವಾಹನಸೌಕರ್ಯವು ಅನುಕೂಲಕರ ಅಥವಾ ಆರಾಮಕರವಾಗಿರಲಿಕ್ಕಿಲ್ಲ. ಹೀಗಿದ್ದರೂ, ಈ ಎಲ್ಲ ಕಾರಣಗಳು ನೀವು ಅಧಿವೇಶನಕ್ಕೆ ಹಾಜರಾಗುವುದರಿಂದ ನಿಮ್ಮನ್ನು ನಿರುತ್ತೇಜಿಸದಿರಲಿ.
7 ಈ ಉತ್ತಮ ಮಾದರಿಯ ಕುರಿತು ಆಲೋಚಿಸಿರಿ: ಆಫ್ರಿಕದ ಒಂದು ದೇಶದಲ್ಲಿ, ಕಳೆದ ವರ್ಷ ಸಹೋದರರ ಒಂದು ಗುಂಪು ಜಿಲ್ಲಾ ಅಧಿವೇಶನಕ್ಕೆ ಹೊರಟಿತ್ತು. ಆ ದೇಶದಲ್ಲಿ ಅಂತರ್ಕಲಹವು ನಡೆಯುತ್ತಾ ಇದೆ. ಆದುದರಿಂದ, ದಾರಿಯಲ್ಲಿ ಒಂದು ಮಿಲಿಟರಿ ಗುಂಪನ್ನು ಎದುರಿಸಬೇಕಾಯಿತು. “ನೀವು ಯಾರು, ಎಲ್ಲಿಗೆ ಹೋಗುತ್ತಿದ್ದೀರಿ?” ಎಂದು ಸಹೋದರರನ್ನು ಕೇಳಲಾಯಿತು. ಸಹೋದರರು ಉತ್ತರಿಸಿದ್ದು: “ನಾವು ಯೆಹೋವನ ಸಾಕ್ಷಿಗಳು. ಜಿಲ್ಲಾ ಅಧಿವೇಶನಕ್ಕೆ ಹೋಗುತ್ತಾ ಇದ್ದೇವೆ.” ಸೈನಿಕರಲ್ಲೊಬ್ಬನು ಹೇಳಿದ್ದು: “ಯೆಹೋವನ ಸಾಕ್ಷಿಗಳಾದ ನೀವು ಯಾವುದಕ್ಕೂ ಭಯಪಡುವುದಿಲ್ಲವಲ್ಲ. ಹೋಗಿ, ನಿಮ್ಮ ಅಧಿವೇಶನವು ಯಾವುದೇ ಅಡ್ಡಿಆತಂಕಗಳಿಲ್ಲದೆ ಜರುಗುವುದು. ಆದರೆ ನೀವು ದಾರಿಯಲ್ಲಿ ಮುಂದೆ ಅನೇಕ ಸೈನಿಕರನ್ನು ಎದುರುಗೊಳ್ಳುವಿರಿ ಎಂಬುದು ತಿಳಿದಿರಲಿ. ಆದುದರಿಂದ ಯಾವಾಗಲೂ ರಸ್ತೆಯ ಮಧ್ಯದಲ್ಲೇ ನಡೆಯಿರಿ! ಎಲ್ಲಿಯಾದರೂ ಜನರು ಗುಂಪುಗೂಡಿರುವುದನ್ನು ನೀವು ನೋಡುವುದಾದರೂ, ರಸ್ತೆ ಮಧ್ಯದಲ್ಲೇ ನಡೆದುಕೊಂಡು ಹೋಗಿ!” ಸೈನಿಕರು ಹೇಳಿದಂತೆ ಅವರು ಮಾಡಿದರು, ಮತ್ತು ಅಧಿವೇಶನದ ಸ್ಥಳವನ್ನು ಸುರಕ್ಷಿತವಾಗಿ ತಲಪಿದರು. ಈ ಸಹೋದರರು ಪವಿತ್ರ ಸಂಗತಿಗಳಿಗಾಗಿ ತಮಗಿರುವ ಗಣ್ಯತೆಯನ್ನು ತೋರಿಸಿದ್ದರಿಂದ ಅವರಿಗೆ ಪ್ರತಿಫಲ ಸಿಕ್ಕಿತು.
8 ಆಫ್ರಿಕದಲ್ಲಿರುವ ನಮ್ಮ ಸಹೋದರರಂತೆ ನಾವು ಸಹ ಅನೇಕ ಕಷ್ಟಗಳನ್ನು ಎದುರಿಸುತ್ತೇವೆ. ಆದರೆ ಅವರಿಗಿದ್ದಂತಹ ನಂಬಿಕೆಯನ್ನು ನಾವು ನಿಸ್ಸಂದೇಹವಾಗಿಯೂ ಅನುಕರಿಸಬಹುದು ಮತ್ತು ನಮ್ಮ ಜಿಲ್ಲಾ ಅಧಿವೇಶನದ ಎಲ್ಲ ಮೂರು ದಿನಗಳ ಕಾರ್ಯಕ್ರಮಕ್ಕೆ ಹಾಜರಾಗುವ ದೃಢಸಂಕಲ್ಪವನ್ನು ಮಾಡಬಹುದು. ಇದಕ್ಕಾಗಿ ಯಾವುದಾದರೂ ಹೊಂದಾಣಿಕೆಗಳನ್ನು ಮಾಡಬೇಕಾಗಿರುವಲ್ಲಿ, ಅದನ್ನು ಮಾಡಿರಿ. ಇಡೀ ಕಾರ್ಯಕ್ರಮಕ್ಕೆ ಹಾಜರಾಗುವ ನಮ್ಮ ಪ್ರಯತ್ನಗಳನ್ನು ಆತನು ಖಂಡಿತವಾಗಿಯೂ ಆಶೀರ್ವದಿಸುವನೆಂಬ ಭರವಸೆಯೊಂದಿಗೆ ಯೆಹೋವನ ಮಾರ್ಗದರ್ಶನಕ್ಕಾಗಿ ಬೇಡಿಕೊಳ್ಳಿರಿ.
9 ಆಶೀರ್ವಾದಗಳನ್ನು ಕೊಯ್ಯಿರಿ: ದೇವರ ವಾಕ್ಯವನ್ನು ಕೇಳಿಸಿಕೊಳ್ಳಲು ನಾವು ಬಯಸುತ್ತೇವೆ. ಯಾಕೆಂದರೆ ಅದರ ಮೂಲಕವೇ ನಾವು ಬೆಳೆಯುತ್ತಾ ರಕ್ಷಣೆಯನ್ನು ಹೊಂದಬಲ್ಲೆವು. (1 ಪೇತ್ರ 2:2) ನಾವು ಜಿಲ್ಲಾ ಅಧಿವೇಶನಕ್ಕೆ ಹಾಜರಾಗಿ, ಕಾರ್ಯಕ್ರಮಕ್ಕೆ ಕಿವಿಗೊಡುವಾಗ, ನಮ್ಮಲ್ಲಿ ಪ್ರತಿಯೊಬ್ಬರೂ ಆ ವಾಕ್ಯದಲ್ಲಿ ಹೆಚ್ಚು ಬಲವಾದ ನಂಬಿಕೆಯನ್ನು ಬೆಳೆಸಿಕೊಳ್ಳಲು ಮತ್ತು ಸೈತಾನನ ದಾಳಿಗಳನ್ನು ಹೆಚ್ಚು ಉತ್ತಮ ರೀತಿಯಲ್ಲಿ ಎದುರಿಸಲು ಶಕ್ತರಾಗಿರುವೆವು. ಹೀಗೆ ಮಾಡುವುದರ ಮೂಲಕ, ನಾವು ಪೂರ್ಣ ರೀತಿಯಲ್ಲಿ ಪವಿತ್ರ ಸಂಗತಿಗಳನ್ನು ಗಣ್ಯಮಾಡುತ್ತೇವೆ ಮತ್ತು “ನಾವಾದರೋ ಹಿಂದೆಗೆಯುವಂತಹ ರೀತಿಯ ಜನರಲ್ಲ . . . ಬದಲಿಗೆ ನಂಬಿಕೆಯುಳ್ಳವರಂತಹ ರೀತಿಯ ಜನರಾಗಿದ್ದೇವೆ” (NW) ಎಂಬುದನ್ನು ಯೆಹೋವನಿಗೆ ಹಾಗೂ ಪ್ರೇಕ್ಷಕರೆಲ್ಲರಿಗೆ ತೋರಿಸುವೆವು.—ಇಬ್ರಿ. 10:39, 12:16; ಜ್ಞಾನೋ. 27:11.
10 ಯೆಹೋವ ದೇವರು ಪರಲೋಕದ ದ್ವಾರಗಳನ್ನು ತೆರೆದು, ನಮ್ಮ ಮೇಲೆ ಆತ್ಮಿಕ ಆಶೀರ್ವಾದಗಳನ್ನು ಧಾರಾಳವಾಗಿ ಸುರಿಸುವುದನ್ನು ಎದುರುನೋಡಬಹುದು. (ಮಲಾ. 3:10) ಆದುದರಿಂದ, ಶುಕ್ರವಾರದ ಬೆಳಗ್ಗಿನ ಕಾರ್ಯಕ್ರಮದ ಆರಂಭದ ಹಾಡಿನಿಂದ ಹಿಡಿದು, ಭಾನುವಾರ ಮಧ್ಯಾಹ್ನದ ಸಮಾಪ್ತಿಯ ಪ್ರಾರ್ಥನೆಗೆ “ಆಮೆನ್” ಎಂದು ಹೇಳುವ ವರೆಗೂ, “ದೇವರ ವಾಕ್ಯದ ಪ್ರಕಾರ ನಡೆಯುವವರು” ಎಂಬ ಜಿಲ್ಲಾ ಅಧಿವೇಶನಕ್ಕೆ ಹಾಜರಿರುವುದನ್ನು ನಿಮ್ಮ ಗುರಿಯನ್ನಾಗಿ ಮಾಡಿಕೊಳ್ಳಿರಿ. ಮತ್ತು ನೀವು ಹಾಗೆ ಮಾಡುವಲ್ಲಿ ಸಂತೋಷವುಳ್ಳವರಾಗುವಿರಿ!