“ನೀವು ಮಾಡುವದನ್ನೆಲ್ಲಾ ಪ್ರೀತಿಯಿಂದ ಮಾಡಿರಿ”
1 ಅಮೆರಿಕದ ಒಂದು ನಗರದಲ್ಲಿ ನಮ್ಮ ಜಿಲ್ಲಾ ಅಧಿವೇಶನವು ನಡೆಯಿತು. ಅಲ್ಲಿನ ಅಧಿವೇಶನ ಮತ್ತು ಸಂದರ್ಶಕರ ವಿಭಾಗವು ಹೇಳಿದ್ದು: “ನಿಮ್ಮ ಸದಸ್ಯರನ್ನು ನೋಡುವಾಗ ನಮಗೆ ನಿಜವಾಗಿಯೂ ಆನಂದವಾಗುತ್ತದೆ. ಅವರು ತುಂಬ ಸೌಜನ್ಯದಿಂದ ಮತ್ತು ಮರ್ಯಾದೆಯಿಂದ ನಡೆದುಕೊಳ್ಳುತ್ತಾರೆ.” ನಾವು ಸಾರ್ವಜನಿಕ ಸ್ಥಳಗಳಲ್ಲಿ ನಡೆದುಕೊಳ್ಳುವ ರೀತಿಗೆ ಇಂತಹ ಪ್ರಶಂಸೆ ಸಿಗುವಾಗ ನಮಗೆ ನಿಜವಾಗಿಯೂ ಸಂತೋಷವಾಗುತ್ತದೆ. ಒಂದು ಗುಂಪಿನೋಪಾದಿ ‘ನಾವು ಮಾಡುವುದನ್ನೆಲ್ಲಾ ಪ್ರೀತಿಯಿಂದ ಮಾಡುತ್ತಿದ್ದೇವೆ’ ಎಂಬುದನ್ನು ಇದು ತೋರಿಸುತ್ತದೆ. (1 ಕೊರಿಂ. 16:14) ಆದರೆ ಅದೇ ಸಮಯದಲ್ಲಿ, ಚಿಂತೆಯನ್ನುಂಟುಮಾಡುವ ಕೆಲವು ಸಂಗತಿಗಳಿವೆ. ಇವುಗಳಿಗೆ ನಾವು ಗಮನಕೊಟ್ಟು ಸರಿಪಡಿಸದಿದ್ದಲ್ಲಿ, ಅವು ದೇವರ ಜನರಿಗಿರುವ ಕೀರ್ತಿಗೆ ಧಕ್ಕೆಯನ್ನುಂಟುಮಾಡಬಲ್ಲವು.
2 ರೂಮ್ ರೆಸರ್ವೇಷನ್ ಸಂಬಂಧಿತ ಸಮಸ್ಯೆಗಳು: ಅಧಿವೇಶನವು ನಡೆಯುವ ಪ್ರತಿಯೊಂದು ನಗರದಲ್ಲಿ ಒಂದು ರೂಮಿಂಗ್ ಇಲಾಖೆ ಇರುತ್ತದೆ. ಎಲ್ಲರೂ ಅಧಿವೇಶನಕ್ಕೆ ಹಾಜರಾಗಲು ಸಾಧ್ಯವಾಗುವಂತೆ ಈ ಇಲಾಖೆಯವರು ಹೋಟೆಲಿನವರೊಂದಿಗೆ ಮಾತುಕತೆ ನಡೆಸಿ, ರೂಮ್ಗಳಿಗಾಗಿ ನ್ಯಾಯವಾದ ಬೆಲೆಗಳನ್ನು ನಿಗದಿಪಡಿಸುವಂತೆ ವಿನಂತಿಸಿಕೊಳ್ಳುತ್ತಾರೆ. ಇದನ್ನು ಮಾಡಲಿಕ್ಕಾಗಿ ನಮ್ಮ ಸಹೋದರರು ನಮ್ಮ ಪರವಾಗಿ ತುಂಬ ಸಮಯವನ್ನು ವ್ಯಯಿಸುತ್ತಾರೆ ಹಾಗೂ ತುಂಬ ಪ್ರಯತ್ನವನ್ನು ಮಾಡುತ್ತಾರೆ. ಕೆಲವೊಂದು ಹೋಟೆಲುಗಳ ಮ್ಯಾನೇಜರರು ಆರಂಭದಲ್ಲಿ ರೂಮುಗಳನ್ನು ಕಡಿಮೆ ಬೆಲೆಗೆ ನೀಡಲು ಸ್ವಲ್ಪ ಹಿಂದೆಮುಂದೆ ನೋಡಿದ್ದಾರೆ. ಈ ಹಿಂದೆ ಅವರಿಗೆ ಬೇರೆ ಧರ್ಮದ ಗುಂಪುಗಳೊಂದಿಗೆ ಆದ ಕಹಿ ಅನುಭವಗಳೇ ಅದಕ್ಕೆ ಕಾರಣವಾಗಿದ್ದವು. ಆದರೆ ನಮ್ಮ ಅಭ್ಯರ್ಥಿಗಳು ಹೋಟೆಲಿನವರೊಂದಿಗೆ ಸಹಕರಿಸುವರೆಂದು ನಮ್ಮ ರೂಮಿಂಗ್ ಇಲಾಖೆಯು ಭರವಸೆ ಕೊಟ್ಟ ನಂತರ, ಅವರು ನಮಗೋಸ್ಕರ ರೂಮುಗಳನ್ನು ಕೊಡಲು ಸಂತೋಷದಿಂದ ಒಪ್ಪಿಕೊಂಡಿದ್ದಾರೆ.
3 ಕಳೆದ ವರ್ಷ ಮಾತ್ರವೇ ಅನೇಕ ಹೋಟೆಲಿನವರು ನಮಗೆ ದೂರು ಸಲ್ಲಿಸಿದ್ದಾರೆ. ಅದೇನೆಂದರೆ, ತುಂಬ ಮಂದಿ ತಮ್ಮ ರೂಮುಗಳ ಬುಕಿಂಗ್ ಅನ್ನು ಕೊನೆ ಗಳಿಗೆಯಲ್ಲಿ ರದ್ದುಗೊಳಿಸಿದ್ದರು. ಯಾಕೆ? ಯಾಕೆಂದರೆ ಕೆಲವು ಅಭ್ಯರ್ಥಿಗಳು ಎರಡೆರಡು ಹೋಟೆಲುಗಳಲ್ಲಿ ರೂಮುಗಳನ್ನು ಬುಕ್ ಮಾಡಿ, ಮೊದಲನೆಯ ಹೋಟೆಲಿನವರಿಗೆ ಡೆಪಾಸಿಟ್ ಹಣವನ್ನು ಕಳುಹಿಸಿರಲಿಲ್ಲ ಅಥವಾ ತಾವು ಎರಡನೇ ಹೋಟೆಲನ್ನು ಆಯ್ಕೆಮಾಡಿರುವುದರಿಂದ ಮೊದಲನೇ ಹೋಟೆಲಿನಲ್ಲಿ ತಮ್ಮ ರೆಸರ್ವೇಶನ್ ಅನ್ನು ರದ್ದುಗೊಳಿಸುತ್ತಿದ್ದೇವೆಂದು ಅವರಿಗೆ ಮುಂಚಿತವಾಗಿಯೇ ಸುದ್ದಿಕೊಟ್ಟಿರಲಿಲ್ಲ. ಇನ್ನೂ ಕೆಲವರು, ತಮ್ಮೊಂದಿಗೆ ಪ್ರಯಾಣಿಸುತ್ತಿರುವವರಿಗಾಗಿ ಸಹಾಯಮಾಡೋಣವೆಂದು ನೆನಸುತ್ತಾ, ಒಂದು ಹೋಟೆಲಿನಲ್ಲಿ ಒಂದಕ್ಕಿಂತಲೂ ಹೆಚ್ಚು ರೂಮುಗಳನ್ನು ಬುಕ್ ಮಾಡಿಟ್ಟಿದ್ದರು. ಆದರೆ ಅವರು ಹೋಟೆಲಿಗೆ ಬಂದು ತಲಪಿದಾಗ, ಕೇವಲ ಒಂದು ರೂಮನ್ನು ತೆಗೆದುಕೊಂಡು, ಉಳಿದ ರೂಮುಗಳ ಬುಕಿಂಗ್ ಅನ್ನು ರದ್ದುಗೊಳಿಸಿದ್ದರು. ವಾಚ್ಟವರ್ ಪ್ರತಿನಿಧಿಗಳು ಹಿಂದೆಂದೂ ಹೀಗೆ ಮಾಡಿರಲಿಲ್ಲವೆಂದು ಆ ಹೋಟೆಲಿನವರು ಹೇಳಿದರು.
4 ಹೀಗೆ ಮಾಡುವುದರಿಂದ ಹೋಟೆಲಿನವರಿಗೆ ಮಾತ್ರವಲ್ಲ, ನಮ್ಮ ಅಧಿವೇಶನ ಸಂಘಟನೆಗೂ ತುಂಬ ಸಮಸ್ಯೆಗಳುಂಟಾಗುತ್ತವೆ. ಹೋಟೆಲಿನವರು ನಮ್ಮ ಅಭ್ಯರ್ಥಿಗಳಿಗಾಗಿ ಇಂತಿಷ್ಟು ಸಂಖ್ಯೆಯ ರೂಮುಗಳನ್ನು ಕಾದಿರಿಸುತ್ತಾರೆ ಮತ್ತು ಇವೆಲ್ಲವೂ ಉಪಯೋಗಿಸಲ್ಪಡುವವೆಂದು ಅವರು ನೆನಸುತ್ತಾರೆ. ಆದರೆ ಅಧಿವೇಶನದ ಸಮಯದಲ್ಲಿ, ಹಲವಾರು ರೂಮುಗಳು ಖಾಲಿಯಾಗಿಯೇ ಉಳಿದಿರುತ್ತವೆ. ಈ ಸಮಸ್ಯೆಯು ಹೀಗೇ ಮುಂದುವರಿಯುವಲ್ಲಿ, ಮುಂದಿನ ಅಧಿವೇಶನಗಳಿಗಾಗಿ ಸಹೋದರರು ಮಾತುಕತೆ ನಡೆಸಲು ಹೋಗುವಾಗ, ಈ ಹೋಟೆಲುಗಳವರು ಈ ವಿಷಯವನ್ನು ಹಿಡಿದು ಜಗಳಮಾಡಬಹುದು. ಇದನ್ನು ತಪ್ಪಿಸಲಿಕ್ಕಾಗಿ ನೀವು ಸಹಾಯಮಾಡಬಹುದು. ಹೇಗೆ? ನೀವು ಖಂಡಿತವಾಗಿಯೂ ಉಪಯೋಗಿಸಲಿರುವ ಹೋಟೆಲ್ ರೂಮುಗಳಿಗಾಗಿ ಮಾತ್ರ ರೆಸರ್ವೇಷನ್ಗಳನ್ನು ಮಾಡುವ ಮೂಲಕವೇ.
5 ಕೆಲವೊಂದು ಹೋಟೆಲುಗಳು ಕೊಡುಗೆಯ ರೂಪದಲ್ಲಿ ಉಚಿತವಾಗಿ ಬೆಳಗ್ಗಿನ ಉಪಾಹಾರವನ್ನು ಕೊಡುತ್ತಾರೆ. ಆದರೆ ನಮ್ಮ ಕೆಲವು ಸಹೋದರರು ಈ ಏರ್ಪಾಡನ್ನು ದುರುಪಯೋಗಿಸುತ್ತಿದ್ದಾರೆಂದು ಅವರು ದೂರು ಸಲ್ಲಿಸಿದರು. ಈ ಸಹೋದರರು ಹೋಟೆಲಿನಲ್ಲಿ ತಿಂದ ಬಳಿಕವೂ, ಬಹಳಷ್ಟು ಆಹಾರವನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗುತ್ತಿದ್ದರು. ಒಂದು ಹೋಟೆಲು ಬೆಳಗ್ಗಿನ ಸಮಯದಲ್ಲಿ ತನ್ನ ಅತಿಥಿಗಳಿಗೋಸ್ಕರ ಉಪಾಹಾರವನ್ನು ಕೊಡುವಾಗ, ಅದು ಅಲ್ಲಿ ತಂಗಿರುವವರಿಗಾಗಿ ಮಾತ್ರ ಕೊಡುಗೆಯ ರೂಪದಲ್ಲಿ ಉಚಿತವಾಗಿ ಕೊಡುವ ಬೆಳಗ್ಗಿನ ಉಪಾಹಾರವಾಗಿದೆ ಎಂದು ನಾವು ಎಣಿಸಬೇಕು. ಈ ಆಹಾರವನ್ನು ನಾವು ತದನಂತರ ತಿನ್ನಲಿಕ್ಕಾಗಿಯೋ ಅಥವಾ ಅಧಿವೇಶನಕ್ಕೆ ಬರುವ ನಮ್ಮ ಸ್ನೇಹಿತರಿಗೋಸ್ಕರ ತೆಗೆದುಕೊಂಡುಹೋಗಲಿಕ್ಕಾಗಿಯೋ ಕೊಡಲಾಗುವುದಿಲ್ಲ. ಈ ಏರ್ಪಾಡನ್ನು ನಾವು ಹೀಗೆಯೇ ದುರುಪಯೋಗಿಸುವುದಾದರೆ, ಹೋಟೆಲಿನವರು ಈ ಸೌಲಭ್ಯವನ್ನು ರದ್ದುಪಡಿಸಬಹುದು, ರೂಮುಗಳಿಗಾಗಿ ಹೆಚ್ಚು ಬೆಲೆಯನ್ನು ಕೇಳಬಹುದು ಅಥವಾ ಮುಂದೆ ನಮ್ಮೊಂದಿಗೆ ಯಾವುದೇ ರೀತಿಯ ಮಾತುಕತೆಯನ್ನು ನಡೆಸಲು ನಿರಾಕರಿಸಬಹುದು.
6 ಎಲ್ಲರಿಗೂ ಒಳ್ಳೇದನ್ನು ಮಾಡೋಣ: ಯೆಹೋವನಿಗಾಗಿ ಮತ್ತು ನೆರೆಹೊರೆಯವರಿಗಾಗಿ ನಮ್ಮಲ್ಲಿ ಪ್ರೀತಿಯಿರುವಲ್ಲಿ, ನಾವು ಶಿಷ್ಟಾಚಾರಗಳನ್ನು ಮತ್ತು ಉತ್ತಮ ನಡತೆಯನ್ನು ತೋರಿಸುವಂತೆ ಪ್ರಚೋದಿಸಲ್ಪಡುವೆವು. (ಮತ್ತಾ. 22:37-39; ಯಾಕೋ. 3:13) ನಾವು ಎಲ್ಲರಿಗಾಗಿಯೂ ಪ್ರೀತಿ ಮತ್ತು ಗಣನೆಯನ್ನು ತೋರಿಸುವಂತೆ ಬೈಬಲ್ ಉತ್ತೇಜಿಸುತ್ತದೆ. (ಗಲಾ. 6:10) ಖಂಡಿತವಾಗಿಯೂ ಈ ತತ್ತ್ವವು ನಾವು ಹೋಟೆಲುಗಳಲ್ಲಿ ತಂಗುವಾಗಲೂ ಅನ್ವಯವಾಗುತ್ತದೆ. ನಾವು ಹೋಟೆಲಿನವರೊಂದಿಗೆ ಸಹಕರಿಸದಿದ್ದರೆ, ಅದು ನಮ್ಮ ಒಳ್ಳೇ ಹೆಸರಿಗೆ ಕಳಂಕ ತರುತ್ತದೆ, ಕಡಿಮೆ ದರಗಳಲ್ಲಿ ರೂಮುಗಳನ್ನು ಪಡೆಯುವ ಅವಕಾಶವನ್ನು ಕಡಿಮೆಗೊಳಿಸುತ್ತದೆ, ಮತ್ತು ಸಹೋದರರ ನಡುವೆ ವೈಮನಸ್ಸನ್ನು ಉಂಟುಮಾಡುತ್ತದೆ. ಒಂದುವೇಳೆ ಒಂದು ಹೋಟೆಲು ಕಡಿಮೆ ದರಗಳಲ್ಲಿ ರೂಮುಗಳನ್ನು ಕೊಡುವುದಿಲ್ಲವೆಂಬ ನಿರ್ಣಯವನ್ನು ಮಾಡಿದರೆ, ಅಧಿವೇಶನಕ್ಕಾಗಿ ಆ ನಗರಕ್ಕೆ ಬರುವ ಇತರರಿಗೆ ಇದರಿಂದ ತುಂಬ ತೊಂದರೆಯಾಗಬಹುದು. ವಿಶೇಷವಾಗಿ, ರೂಮಿಗಾಗಿ ಯಾರು ಹೆಚ್ಚು ಹಣವನ್ನು ಕೊಡಲು ಶಕ್ತರಾಗಿರುವುದಿಲ್ಲವೊ ಅವರಿಗಂತೂ ಇದರಿಂದ ತುಂಬ ಕಷ್ಟವಾಗಬಹುದು.
7 ಒಂದು ಒಳ್ಳೆಯ ರೂಮನ್ನು ಮುಂಚಿತವಾಗಿಯೇ ಬುಕ್ ಮಾಡಿ, ಅನಂತರ ಕೊನೆ ಗಳಿಗೆಯಲ್ಲಿ ರದ್ದುಗೊಳಿಸಿದರೆ, ರೆಸರ್ವೇಷನ್ ಮಾಡಲು ಪ್ರಯತ್ನಿಸಿದ ಇನ್ನೊಬ್ಬ ಸಹೋದರನಿಗೆ ಆ ರೂಮು ಸಿಗದೆ ಹೋಗಬಹುದು. ಈ ಕಾರಣದಿಂದ ಆ ಸಹೋದರನು ಇನ್ನಷ್ಟು ದೂರದಲ್ಲಿರುವ ಹೋಟೆಲಿಗೆ ಹೋಗಬೇಕಾಗಬಹುದು ಅಥವಾ ಅಷ್ಟೊಂದು ಚೆನ್ನಾಗಿಲ್ಲದಂತಹ ರೂಮಿನಲ್ಲಿ ತಂಗಬೇಕಾಗಬಹುದು. ಇದು ಪ್ರೀತಿ ಮತ್ತು ಗಣನೆಯನ್ನು ತೋರಿಸುತ್ತದೊ? ಅದರ ಬದಲು, ನಮ್ಮ ಸ್ವಂತ ಅಭಿರುಚಿಗಳಿಗಿಂತಲೂ ಹೆಚ್ಚಾಗಿ ಇತರರಿಗೆ ಒಳ್ಳೇದಾಗುವುದರ ಕುರಿತಾಗಿ ಯೋಚಿಸುವ ಮೂಲಕ, ನಾವು ಪ್ರೀತಿಯನ್ನು ತೋರಿಸಿ, ಒಳ್ಳೇದನ್ನು ಮಾಡುವುದು ಎಷ್ಟೋ ಉತ್ತಮ!—ಮತ್ತಾ. 7:12; ಯೋಹಾ. 13:34, 35.
8 “ದೇವರ ವಾಕ್ಯದ ಪ್ರಕಾರ ನಡೆಯುವವರು” ಎಂಬ ಜಿಲ್ಲಾ ಅಧಿವೇಶನಕ್ಕೆ ಹಾಜರಾಗಲು ನಾವೆಲ್ಲರೂ ಉತ್ಸಾಹದಿಂದ ಎದುರುನೋಡುತ್ತಿದ್ದೇವೆ. ಹೋಟೆಲು ರೆಸರ್ವೇಷನ್ ಮತ್ತು ಪ್ರಯಾಣದ ಏರ್ಪಾಡುಗಳೊಂದಿಗೆ ನೀವು ಬೇರೆಲ್ಲ ತಯಾರಿಗಳನ್ನು ಮಾಡಿದ್ದೀರೊ? ಹೋಟೆಲುಗಳಲ್ಲಿ ಮತ್ತು ಅಧಿವೇಶನವು ನಡೆಯುವ ನಗರದಲ್ಲಿ ನಾವು ನಡೆದುಕೊಳ್ಳುವ ರೀತಿಯು, ನಮ್ಮ ಹೃದಯದಲ್ಲಿರುವ ಸತ್ಯವನ್ನು ಮತ್ತು ನಮ್ಮ ಸೃಷ್ಟಿಕರ್ತನಿಗಾಗಿರುವ ನಮ್ಮ ಪ್ರೀತಿಯನ್ನು ಅದು ಯಾವಾಗಲೂ ಪ್ರತಿಬಿಂಬಿಸುವಂತಿರಲಿ.